ಪ್ರಿಯ ಸೋದರ ಸೋದರಿಯರೆ,
ಸದ್ಗುರುವಿನ ಕೃಪೆಯಿಂದ ರಾಯಚೂರು ಕೇಂದ್ರದಲ್ಲಿ ಸಂಸ್ಥಾಪಕರ ದಿನವನ್ನು (ವಾರ್ಷಿಕ) ಆಚರಿಸಲು ನಾವೆಲ್ಲರೂ ಸೇರಿದ್ದೇವೆ, ನಾವೆಲ್ಲರೂ ಇಲ್ಲಿ ಸೇರಿರುವ ಸಂಗತಿಯು ನಮ್ಮ ಸದ್ಗುರುಗಳ ಜಾಗ್ರತ ಸಾನ್ನಿಧ್ಯಕ್ಕೆ ನಿಃಸಂದೇಹವಾಗಿ ಪ್ರತ್ಯಕ್ಷ ಪ್ರಮಾಣವಾಗಿದೆ.
ಯಾರ ಅಸ್ತಿತ್ವದ ಪ್ರತಿಯೊಂದು ಕಣವೂ ಪರಮ ತತ್ತ್ವದಲ್ಲಿ ಲಯಗೊಂಡಿದೆಯೋ ಅಂತಹ, ಸಹಜ ಮಾರ್ಗದ ಸಂಸ್ಥಾಪಕರು, ಸಹಜಮಾರ್ಗದ ಮೂಲ ಆಧಾರತಳವಾಗಿದ್ದಾರೆ. ಆದುದರಿಂದ, ಸಹಜಮಾರ್ಗ ಪದ್ಧತಿಯ ಮಾನವ ವಿಕಾಸಕ್ಕಾಗಿ ಇರುವ ಅತ್ಯಂತ ವಿಶುದ್ಧ ಮಾರ್ಗವಾಗಿದೆ. ಹಾಗೂ, ಮಾನವ ಹೃದಯದ ಶುದ್ದೀಕರಣಕ್ಕಾಗಿ ಇರುವ ಅತ್ಯಂತ ನಿಶ್ಚಿತವಾದ ಮಾರ್ಗವೂ ಆಗಿದೆ.
ಈ ಮಾರ್ಗದ ಅನುಯಾಯಿಗಳಲ್ಲಿ ತೋರಿಕೆಯಲ್ಲಿ ದೋಷಗಳು ಇದ್ದಾಗ್ಯೂ, ಸಹಜಮಾರ್ಗದ ಕಾರ್ಯಕ್ಷಮತೆಯನ್ನು ಕುರಿತು ಜನರು ಚಕಿತರಾಗುತ್ತಾರೆ. ಆದರೆ, ಅದರ ಕಾರ್ಯಕ್ಷಮತೆಯು ಎಲ್ಲ ಅಭ್ಯಾಸಿಗಳ ದಿನ ನಿತ್ಯದ ಅನುಭವವಾಗಿದೆ. ನಮ್ಮ ಸದ್ಯದ ಸಭೆಯು ಎದ್ದು ಕಾಣುವ ವೈವಿಧ್ಯದಲ್ಲಿಯೂ ಅತ್ಯಂತ ಸೂಕ್ಷ್ಮವಾದ ಏಕತೆಯ ನಿರ್ವಿವಾದ ಪ್ರಮಾಣವಾಗಿದೆ. ಇಲ್ಲಿ ಸರ್ವವ್ಯಾಪಕವಾದ, ಅತಿ ಸೂಕ್ಷ್ಮವೂ ಪ್ರಬಲವೂ ಆದ ಏಕೀಕರಿಸುವಂತಹ ತತ್ತ್ವವನ್ನು ಯಾವುದೇ ಸಂವೇದನಾಶೀಲ ದೃಷ್ಟಿಯು ಪ್ರತ್ಯಕ್ಷ ಕಾಣಬಲ್ಲುದು.
ನಮ್ಮಲ್ಲಿಯ ಪ್ರತಿಯೊಬ್ಬರ ಮೇಲೆ ನಮ್ಮ ಗುರುಗಳು ಕೆಲಸ ಮಾಡುತ್ತಿರುವರು ಮತ್ತು ನಮ್ಮಿಂದ ಕೆಲಸ ಮಾಡಿಸಲು ಯತ್ನಿಸುತ್ತಿದ್ದಾರೆ. ನಮ್ಮನ್ನು ನಾವು ಒಂದು ಸ್ವಾಭಾವಿಕ ರೀತಿಯಲ್ಲಿ ಅವರ ವಶಕ್ಕೆ ಒಪ್ಪಿಸಿಕೊಳ್ಳುವುದು, ಗುರುಗಳ ಕೆಲಸದಲ್ಲಿ ನಾವು ಮಾಡಬೇಕಾದ ಕರ್ತವ್ಯವಾಗಿದೆ. ನಮ್ಮ ಇಚ್ಛೆಗೆ ದಾಸರಾಗಿ ಉಳಿಯುವ ಬದಲಾಗಿ, ಅವರ ಆದೇಶಗಳನ್ನು ಅನುಸರಿಸಲು ಪ್ರಯತ್ನಿಸುವ ಮೂಲಕ ನಿಜವಾದ ಪ್ರಭುವನ್ನು ಸಾಕ್ಷಾತ್ಕರಿಸಿಕೊಳ್ಳಬೇಕು. ಆಗ ಮಾತ್ರವೇ ನಮ್ಮ ಜೀವನವು ಭಾರರಹಿತವೂ, ಉದಾತ್ತವೂ ಹಾಗೂ ಎಲ್ಲ ಜಟಿಲತೆಗಳಿಂದ ಮುಕ್ತವೂ ಆಗುವುದು, ಹಾಗೂ ಶುದ್ಧವೂ, ಸರಳವೂ ಆಗಿ ಎಲ್ಲವನ್ನೂ ಸ್ವೀಕರಿಸಲು ವಿಸ್ತಾರಗೊಳ್ಳುವುದು.
ಮಾನವ ಕುಲವು ಭಯ ಮತ್ತು ವಾಂಛಗಳಿಂದ ಮುಕ್ತವಾಗಲು ಗೋಗರೆಯುತ್ತಿರುವುದು. ಎಲ್ಲರಲ್ಲಿಯೂ ಆತ್ಮವನ್ನು ಕಂಡಾಗ ಭಯವು ಅಳಿದು ಹೋಗುವುದು, ಮತ್ತು ಒಬ್ಬನು ಎಲ್ಲದರ ಆತ್ಯಂತಿಕ ಮೂಲವನ್ನು ಸಾಕ್ಷಾತ್ಕರಿಸಿಕೊಂಡಾಗ ಯಾವ ಅಪೇಕ್ಷೆಯೂ ಉಳಿಯದು. ಪ್ರಾಣಾಹುತಿಯೊಂದೇ ಇಂತಹ ಫಲವನ್ನು ನೀಡಲಬಲ್ಲುದು. ಶ್ರದ್ಧೆಯೊಂದೇ ಪ್ರಾಣಾಹುತಿಯನ್ನು ಸ್ವೀಕರಿಸಬಲ್ಲುದು.
ಮಾನವನ ಆಧ್ಯಾತ್ಮಿಕ ವಿಕಾಸದಲ್ಲಿ ವಿವಿಧ ಘಟ್ಟಗಳುಂಟು. ನಮ್ಮ ಗುರುಗಳಿಂದ ರಚಿತವಾದ ‘ಸತ್ಯೋದಯ’ ‘ಸಹಜಮಾರ್ಗದ ಬೆಳಕಿನಲ್ಲಿ ರಾಜಯೋಗದ ಪ್ರಭಾವ’, ‘ಸಹಜ ಮಾರ್ಗದ ಹತ್ತು ನಿಯಮಗಳ ವ್ಯಾಖ್ಯಾನ’, ಹಾಗೂ ‘ಅನಂತದೆಡೆಗೆ’ – ಈ ಗ್ರಂಥಗಳು ಅವರ ಸ್ವಂತ ಅನುಭವದ ಆಧಾರದ ಮೇಲೆ, ಅಧ್ಯಾತ್ಮಮಾರ್ಗದ ಬಗ್ಗೆ ಅತಿ ಸರಳವಾದ ಮೌಲಿಕ ಶೈಲಿಯಲ್ಲಿ ವರ್ಣಿಸುತ್ತವೆ. ಪೂಜ್ಯ ಗುರುಗಳಿಂದ ಬರೆಯಲ್ಪಟ್ಟ ‘ಋತವಾಣಿ’, ‘ರಾಮಚಂದ್ರನ ಆತ್ಮ ಕಥೆ’, ‘ಸಹಜಮಾರ್ಗದರ್ಶನ’ ಮುಂತಾದ ಇತರ ಗ್ರಂಥಗಳೂ ಇವೆ. ಅವು ಯೋಗದ ಅಭ್ಯಾಸಿಗಳಿಗೆ ಬಹಳ ಉಪಯುಕ್ತ ಸೂಚನೆಗಳನ್ನು ಹಾಗೂ ಮಾರ್ಗದರ್ಶನ ನೀಡುತ್ತವೆ.
ಸಹಜಮಾರ್ಗದ ಸಾಕಷ್ಟು ಅನುಭವಿ ಅಭ್ಯಾಸಿಗಳಿಂದ ರಚಿತವಾದ ಇನ್ನೂ ಅನೇಕ ಗ್ರಂಥಗಳು, ಶ್ರೀರಾಮಚಂದ್ರಮಿಷನ್‌ನಿಂದ ಪ್ರಕಟವಾಗಿವೆ ಮತ್ತು ಫತೇಜ್‌ಗಡದ (ಉ.ಪ್ರ) ಸಮರ್ಥ ಗುರುಗಳ ಒಂದು ಗ್ರಂಥ ಕೂಡ. ಗುರುಗಳು ಅವರ ಸಂಸ್ಥೆಯ ಬಗ್ಗೆ ಹಾಗೂ ಅವರ ಪದ್ಧತಿಯ ಬಗ್ಗೆ ಗಮನ ಸೆಳೆಯುತ್ತದೆ ಮತ್ತು ನಿಜವಾದ ಜಿಜ್ಞಾಸುಗಳಿಗೆ ಬಹಳ ಉಪಯುಕ್ತವಾಗಿದೆ. ಈ ಮೇಲೆ ತಿಳಿಸಿದ ಗ್ರಂಥಗಳಲ್ಲಿ ಕೆಲವು ಕನ್ನಡದಲ್ಲಿ ಹಾಗೂ ಕೆಲವು ಇತರ ಭಾರತೀಯ ಮತ್ತು ವಿದೇಶೀಯ ಭಾಷೆಗಳಿಗೆ ಅನುವಾದಗೊಂಡಿವೆ. ಆಧ್ಯಾತ್ಮಿಕ ಅಭಿರುಚಿಯ ವಿಷಯಗಳ ಬಗ್ಗೆ ಅಭ್ಯಾಸಿಗಳ ಹಿಂದಿ ಹಾಗೂ ಇಂಗ್ಲಿಷ್ ಲೇಖನಗಳನ್ನೊಳಗೊಂಡ ‘ಸಹಜಮಾರ್ಗ’ ಎಂಬ ದ್ವೈಮಾಸಿಕ ಪತ್ರಿಕೆಯನ್ನು ಕೂಡ ಈ ಸಂಸ್ಥೆಯು ಪ್ರಕಟಿಸುತ್ತಿರುವುದು.
ನಮ್ಮ ಗುರುಗಳಾದ ಮಹಾತ್ಮಾ ಶ್ರೀ ರಾಮಚಂದ್ರಜಿ ಮಹಾರಾಜರು ಷಾಹಜಹಾನಪುರ(ಉ.ಪ)ದಲ್ಲಿ 30 ಎಪ್ರಿಲ್ 1899 ರಂದು, ಒಂದು ಶ್ರೇಷ್ಠ ಜಮೀನುದಾರ ಕುಟುಂಬದಲ್ಲಿ ಜನಿಸಿದರು. ತಮ್ಮ 22ನೆಯ ವಯಸ್ಸಿನಲ್ಲಿ ಅವರು ಫತೇಹಗಡದ ಸಮರ್ಥ ಗುರು ಶ್ರೀ ರಾಮಚಂದ್ರಜಿ ಮಹಾರಾಜರ ಸಂಪರ್ಕದಲ್ಲಿ ಬಂದರು ಮತ್ತು ತತ್‌ಕ್ಷಣವೇ ಅವರ ಶಿಷ್ಯರಾದರು. 1945 ರಲ್ಲಿ ಸಮರ್ಥ ಸದ್ಗುರುವಿನ ಸ್ಮರಣಾರ್ಥ “ಶ್ರೀ ರಾಮಚಂದ್ರ ಮಿಷನ್, ಷಾಹಜಹಾನಪುರ” – ಈ ಸಂಸ್ಥೆಯನ್ನು ಸಂಸ್ಥಾಪಿಸಿದರು. ಮತ್ತು ಅಂದಿನಿಂದ ಮಾನವ ಕುಲದ ಆಧ್ಯಾತ್ಮಿಕ ಸೇವೆಯನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಮಾಡುತ್ತಿದ್ದಾರೆ. ಅಧ್ಯಾತ್ಮ ಮತ್ತು ಯೋಗದ ತರಬೇತಿಯ ಕ್ಷೇತ್ರದಲ್ಲಿ ಅವರು ಬಹಳಷ್ಟು ಸಂಶೋಧನಾಕಾರ್ಯ ಮಾಡಿದ್ದಾರೆ. ತಮಗೆ ವಹಿಸಲಾದ ಕಾರ್ಯವನ್ನು ನಿರ್ವಹಿಸಲು ತಾವು ಕರ್ತವ್ಯಬದ್ಧರೆಂಬ ಭಾವನೆ ಹೊಂದಿದ ಹಾಗೂ ಯೋಗ್ಯ ತರಬೇತಿ ಪಡೆದ ಅನೇಕ ಶಿಷ್ಯರನ್ನು ತಮ್ಮ ಹಿಂದೆ ಬಿಟ್ಟು ಅವರು ಎಪ್ರಿಲ್ 19, 1983 ರಂದು ಭೌತಿಕ ಶರೀರವನ್ನು ತ್ಯಜಿಸಿದರು.
ಮಾನವ ಕುಲದ ಇತಿಹಾಸದಲ್ಲಿ ಶ್ರೀರಾಮಚಂದ್ರ ಮಿಷನ್ ಒಂದು ಅದ್ವಿತೀಯ ಸಂಸ್ಥೆಯಾಗಿದೆ. ಈ ಸಂಸ್ಥೆಯು ನಿಸರ್ಗದ (ಪ್ರಕೃತಿಯ) ನಿಯಮಗಳಿಗೆ ಅನುಗುಣವಾಗಿ ಬೆಳೆಯುತ್ತಿದೆ. ಅದರಲ್ಲಿ ಸಂಭವಿಸುತ್ತಿರುವ ಎಲ್ಲ ಪರಿವರ್ತನೆಗಳು ಅತ್ಯಂತ ಸ್ವಾಭಾವಿಕವೂ, ಕ್ರಿಯಾಶೀಲವೂ ಹಾಗೂ ಅಭಿವೃದ್ಧಿಪರವೂ ಆಗಿವೆ. ಆಧ್ಯಾತ್ಮಿಕ ತರಬೇತಿಯನ್ನು ಒಂದು ಸುವ್ಯವಸ್ಥಿತ ಹಾಗೂ ಸುಸಂಘಟಿತ ರೀತಿಯಲ್ಲಿ ನೀಡುತ್ತಿರುವ ಗುರುಗಳ ಅಗೋಚರ ಪಾತ್ರವನ್ನೂ ಜಗದಾದ್ಯಂತ ಎಲ್ಲ ಅಭ್ಯಾಸಿಗಳು ಅನುಭವ ಪಡುತ್ತಿದ್ದಾರೆ.
ಯಾವುದೇ ಶುಲ್ಕವನ್ನು ಬಯಸದೆ ಜಿಜ್ಞಾಸುಗಳಿಗೆ ಆಧ್ಯಾತ್ಮಿಕ ತರಬೇತಿ ನೀಡಲು ನಮ್ಮ ಗುರುಗಳು ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಮಿಷನ್ನಿನ ಅನೇಕ ಕೇಂದ್ರಗಳನ್ನು ಸ್ಥಾಪಿಸಿದರು. ಮಾನವ-ಪ್ರೇಮಿಗಳ ಹಾಗೂ ಉದಾರ ಮನಸ್ಸಿನ ಸಾರ್ವಜನಿಕರಿಂದ ದೇಣಿಗೆ-ದಾನಗಳನ್ನು ಸ್ವಾಗತಿಸಲಾಗಿದೆಯೆಂಬುದೇನೋ ಸರಿಯೆ, ರಾಯಚೂರು, ಬೆಂಗಳೂರು, ಚೆನ್ನಪಟ್ಟಣ, ತಿರುಪತಿ, ಹೈದರಾಬಾದ್, ಪಲವಂಚ, ಅನಂತಪುರ ಹಾಗೂ ತಿನ್ನುಕಿಯಾ (ಆಸಾಮ) ಮುಂತಾದ ಕೇಂದ್ರಗಳಲ್ಲಿ ಆಶ್ರಮಗಳನ್ನು ನಿರ್ಮಿಸಲಾಗಿದೆ ಹಾಗೂ ತಾಡಪತ್ರಿ, ವಿಜಯವಾಡ ಮತ್ತು ಅಮಲಾಪುರಗಳಲ್ಲಿ ಆಶ್ರಮಗಳನ್ನು ನಿರ್ಮಿಸಲಾಗುತ್ತಿದೆ. ತಿರುಪತಿಯಲ್ಲಿ “ಸಹಜಮಾರ್ಗ ಸಂಶೋಧನ ಸಂಸ್ಥೆ” ಕೂಡ ಕೆಲಸ ಮಾಡುತ್ತಿದೆ.
ಗೃಹಸ್ಥ ಜೀವನವು ಸಾಧನೆಯ ಯಾವುದೇ ಪ್ರಾಯೋಗಿಕ ವಿಧಾನದಿಂದಲೂ ದೈವೀ ಜ್ಞಾನವನ್ನು ಪ್ರಾಪ್ತ ಮಾಡಿಕೊಳ್ಳಲು ಪ್ರಶಸ್ತವಾಗಿ ಸೂಕ್ತವಾಗಿದೆಯೆಂದು ‘ಸಹಜಮಾರ್ಗ’ ಪದ್ಧತಿಯು ಪರಿಗಣಿಸುತ್ತದೆ. ಗೃಹಸ್ಥ ಜೀವನವು ಏರಿಳಿತಗಳಿಂದ, ಕಾಳಜಿ ಹಾಗೂ ಕ್ಲೇಶಗಳಿಂದ ತುಂಬಿರುವುದು. ಆದುದರಿಂದ ಅಹಂಕಾರ ಮತ್ತು ಗರ್ವಗಳಿಂದ ಮುಕ್ತವಾದ ಆಧ್ಯಾತ್ಮಿಕ ವ್ಯಕ್ತಿತ್ವಗಳನ್ನು ಹಾಗೂ ಸಹನೆ ಮತ್ತು ತಾಳ್ಮೆಗಳನ್ನು ಬೆಳೆಸಿಕೊಳ್ಳಲು ಯೋಗ್ಯವಾದ ತರಬೇತಿಯ ಸ್ಥಳವಾಗಿದೆ.
ನಮ್ಮ ಕಾಲದಲ್ಲಿಯೇ ಪರಿಪೂರ್ಣ ಗೃಹಸ್ಥರಾಗಿ ಪೂರ್ಣ ಜೀವನವನ್ನು ನಡೆಸಿದ ನಮ್ಮ ಗುರುಗಳು ‘ಧರ್ಮ (ಅಧ್ಯಾತ್ಮ) ಪ್ರಚಾರದ ಕಾರ್ಯಕ್ಕೆ ಗೃಹಸ್ಥ ಜೀವನವು ತಕ್ಕುದಲ್ಲ ಎಂಬುದು ಅಸಂಸ್ಕೃತವಾದ ತಪ್ಪು ಕಲ್ಪನೆ ಎಂಬುದನ್ನು ಪ್ರತ್ಯಕ್ಷ ಸಿದ್ಧ ಮಾಡಿ ತೋರಿಸಿದ್ದಾರೆ.
ಈಗ, ಏಕತೆ, ಒಗ್ಗಟ್ಟು (ಸಂಬದ್ಧತೆ) ಹಾಗೂ ಸಂಸ್ಥೆಯ ವಿಚಾರಧಾರೆಗಳನ್ನು ಕಾಯ್ದುಕೊಂಡು ಹೋಗುವ ಮತ್ತು ವೃದ್ಧಿಗೊಳಿಸುವ ದೊಡ್ಡ ಹೊಣೆಗಾರಿಕೆಯು ಈ ಸಂಸ್ಥೆಯ ಕಾರ್ಯಕಾರೀ ಸಮಿತಿಯ ಮೇಲಿದೆ. ಗುರುಗಳು ಅವರಿಗೆ ಮತ್ತು ನಮ್ಮೆಲ್ಲರಿಗೆ ಸರಿಯಾದ ದಿಶೆಯಲ್ಲಿ ಮಾರ್ಗದರ್ಶನ ನೀಡುತ್ತಿರುವರೆಂಬ ಭರವಸೆ ನನಗಿದೆ. ಸಂಸ್ಥೆಯಲ್ಲಿ ಆಗುವ ಬೆಳವಣಿಗೆಗಳ ಬಗ್ಗೆ ನಮ್ಮ ಮಾಹಿತಿಗೆ ಹಾಗೂ ಮಾರ್ಗದರ್ಶನಕ್ಕೋಸ್ಕರ ಸಂಸ್ಥೆಯ ಸದ್ಯದ ಕಾರ್ಯದರ್ಶಿಗಳಾದ ಶ್ರೀ ಎಸ್. ಎ. ಸರ್ನಾಡ್, ಗುಲಬರ್ಗಾ ಇವರು ಕಾಲ-ಕಾಲಕ್ಕೆ ನಮಗೆ ಎಲ್ಲ ಆವಶ್ಯಕ ಸಮಾಚಾರ ನೀಡುತ್ತಲಿದ್ದಾರೆ.
ಸಹಜಮಾರ್ಗ ಪದ್ಧತಿ ಹಾಗೂ ಶ್ರೀ ರಾಮಚಂದ್ರ ಮಿಷನ್ನಿನ ಸಂಸ್ಥಾಪಕರಿಂದ ಈ ಕ್ಷೇತ್ರದಲ್ಲಿರುವ ಎಲ್ಲ ಕಾರ್ಯಕರ್ತರು ಹಾಗೂ ಜಿಜ್ಞಾಸುಗಳು ಆಧ್ಯಾತ್ಮಿಕ ಲಾಭಪಡೆಯಲಿ. ಇಂತಹುದೇ ಸಮಾವೇಶಗಳು ಮತ್ತೆ ಮತ್ತೆ ಜರುಗುತ್ತಿರಲಿ ಹಾಗೂ ನಮ್ಮ ಗುರುಗಳ ಪ್ರೇಮ ಮತ್ತು ಬೆಳಕನ್ನು ಜಗತ್ತಿನಲ್ಲಿ ಹರಡಲಿ,
ಇಂದಿನ ಕಾರ್ಯಕ್ರಮದ ಅಧ್ಯಕ್ಷರಾದ, ಮದ್ರಾಸ ಕೇಂದ್ರದ ಸೋದರ ಪಾರ್ಥಸಾರಥಿ ರಾಜಗೋಪಾಲಾಚಾರಿಯವರಿಗೆ, ನಮ್ಮ ಆಮಂತ್ರಣವನ್ನು ಒಪ್ಪಿಕೊಂಡು ತಮ್ಮ ಒತ್ತಡದ ಆಫೀಸಿನ ಕೆಲಸಗಳ ಹೊರತಾಗಿಯೂ, ತಮ್ಮ ಧರ್ಮಪತ್ನಿ ಹಾಗೂ ಮದ್ರಾಸಿನ ಇತರ ಬಂಧುಗಳೊಂದಿಗೆ ಇಲ್ಲಿಗೆ ಆಗಮಿಸಿದುದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಪ್ರಿಯ ಬಂಧು-ಭಗಿನಿಯರೆ, ನಮ್ಮ ವಿನಮ್ರ ಆಮಂತ್ರಣಕ್ಕೆ ಮನ್ನಣೆಯಿತ್ತು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ ನಿಮಗೆಲ್ಲರಿಗೂ ಧನ್ಯವಾದಗಳು.
[ಅಕ್ಟೋಬರ್ 8, 1983 ರಂದು ರಾಯಚೂರು ಕೇಂದ್ರದ ಸಂಸ್ಥಾಪಕ ದಿನಾಚರಣೆ ಸಂದರ್ಭದಲ್ಲಿ ಮಾಡಿದ ಭಾಷಣ]