(ಪೂಜ್ಯ ಬಾಬೂಜಿ ಮಹಾರಾಜರವರ ೭೯ ನೇ ಹುಟ್ಟುಹಬ್ಬ ಸಮಾರಂಭ- ಸಂದೇಶ – ಬೆಂಗಳೂರು ೩೦-೪-೧೯೭೮)

ಪ್ರಿಯ ಸೋದರ ಸೋದರಿಯರೆ,

ಸರ್ವಶ್ರೇಷ್ಠರಾದ ನನ್ನ ಗುರುಗಳ ಅನುಗ್ರಹವು ನಾವು ಇಲ್ಲಿ ಮತ್ತೊಮ್ಮೆ ಸಮಾವೇಶಗೊಂಡು, ಅವರ ಅಮರ ಕರುಣಾಪ್ರಭೆಯ ಎಳೆಬಿಸಿಲಿನ ಹಿತಸ್ಪರ್ಶವನ್ನನುಭವಿಸಲು ಅನುವುಮಾಡಿಕೊಟ್ಟಿದೆ. ಅವರ ವರಪ್ರದ ಪ್ರಭೆಯಜ್ವಲಂತ ಜೋತಿಯಾಗಿ, ನಾನು ಇಡೀ ಜಗತ್ತಿಗೇ ಸೇರಿದವನು, ಕೇವಲ ಭಾರತ ದೇಶಕ್ಕೆ ಮಾತ್ರವಲ್ಲ. ಆದಕಾರಣ, ಪರತತ್ವದ ಮೇಲಣ ಪ್ರೇಮದಲ್ಲಿ ಹುದುಗಿದ ಸೌಂದರ್ಯವನ್ನು ಎಲ್ಲರೂ ಸವಿಯಬೇಕೆಂದು ನಾನು ಬಯಸುತ್ತೇನೆ. ಜನರು ಎಲ್ಲೆಲ್ಲೂ ಶ್ರೇಷ್ಠ ತರ ವಾತಾವರಣ ಮತ್ತು ಉತ್ತಮ ಪರಿಸ್ಥಿತಿಗಳನ್ನು ಅರಸುತ್ತಾರೆ. ಆದರೆ, ಭಾರತೀಯರಾಗಿ ನಾವು, ನಮ್ಮಲ್ಲಿ (ಆ ಮೂಲದ) ತದ್ರೂಪ ವಾತಾವರಣವನ್ನು ನಿರ್ಮಿಸಿಕೊಳ್ಳುವುದರಲ್ಲಿ ಆಸ್ಥೆ ವಹಿಸುವುದಲ್ಲದೆ, ಅದರ ತೇಜೋವಿಕಿರಣದಿಂದ ಇತರರು ಪ್ರಯೋಜನ ಪಡೆಯಲೆಂದೂ ಅಪೇಕ್ಷಿಸುತ್ತೇವೆ.

ಅಧ್ಯಾತ್ಮದ ಮಹತ್ವವನ್ನು ಜನರು ತಿಳಿದಿಲ್ಲ. ಏಕೆಂದರೆ ಸಮಾಜವಾಗಲಿ, ತಂದೆತಾಯಿಗಳಾಗಲೀ ಅಂತಹುದನ್ನು ಅವರಲ್ಲಿ ಬಿಂಬಿಸಿಲ್ಲ. ಹಾಗಿದ್ದರೂ, ಪ್ರಸಕ್ತ ಪರಿಸ್ಥಿತಿಗಳು, ಅವರು ಅಧ್ಯಾತ್ಮವನ್ನಾಶ್ರಯಿಸಿ ಬರುವಂತೆ ಅವರನ್ನು ರೂಪಿಸುವುವು. ನಾವು ಅವರಿಗೆ ನಿಜವಾದ ಶಾಂತಿಯನ್ನು ನೀಡಲು ಪ್ರಯತ್ನಿಸಬೇಕು. ಅದು ನಮ್ಮ ಕರ್ತವ್ಯವೂಹೌದು, ಕಾರ್ಯೋದ್ದೇಶವೂ ಹೌದು. ಅವರು ಯೋಗ್ಯ ಮಾರ್ಗವನ್ನು ಅನುಸರಿಸಲು, ಪ್ರಕೃತಿಯೇ ಅವರನ್ನು ನಿರ್ಬಂಧಪಡಿಸುವ ಕಾಲವೂಬರಲಿದೆ. ಅದೂ ಅವರ ಒಳಿತಿಗಾಗಿಯೇ,

ಪ್ರತಿಯೊಂದು ಪುಷ್ಪವೂ ತನ್ನ ಯುಕ್ತ ಪ್ರಮಾಣಕ್ಕೆ ಬೆಳೆದರಳಲೆಂದೇ ದೇವರು ಜಗತ್ತನ್ನು ಸೃಷ್ಟಿಸಿದ್ದಾನೆ. ಆದರೆ ಕಾಲದ ಆಘಾತಗಳು, ಅದು ದೇವರ ಉದ್ದೇಶವನ್ನೇ ಮರೆಯುವಂತೆ ಮಾಡಿವೆ. ಹಾಗಾಗಿ ಕೆಲವರು ಸುಖಾನುಭೋಗವೇ ಜೀವನದ ಉದ್ದೇಶವೆಂದು ಭಾವಿಸಿದರೆ, ಇನ್ನು ಇತರರು ಅದನ್ನು ಬೇಸರ ತರುವ ಏಕತಾನತೆಯೆಂದು ಬಗೆಯುತ್ತಾರೆ. ಇಷ್ಟಾಗಿಯೂ, “ಜೀವನವೆಂದರೇನು ?” ಎಂಬುದೇ (ನಿಜವಾದ) ಪ್ರಶ್ನೆ. ಅದು ಅಸ್ತಿತ್ವದ ಒಂದು ಸ್ಥಿತಿ. – ಅದು ಎಂಥದಿರಬೇಕೆಂದರೆ, ಜೀವನಪೂರ್ತಿ ನಾವು ಆ ಪರಮಾತ್ಮನ ಸಂಪರ್ಕದಲ್ಲಿ ಶಾಶ್ವತವಾಗಿ ನೆಲೆಸಿದ್ದು ಕೊಂಡು, ಆ ಪರಮಸತ್ತೆಯ ಸುಗಂಧವನ್ನು ಪ್ರತಿ ಕ್ಷಣವೂಸವಿಯುತ್ತ ಇರುವಂತಿರಬೇಕು.

ಅಸ್ತಿತ್ವದ ಸೂಕ್ಷ್ಮ ಸ್ಥಿತಿಯು ನಿಮ್ಮ ಅನುಭವಕ್ಕೆ ನಿಲುಕುವುದು, ನೀವೇ ಸ್ವತಃ ಸೂಕ್ಷ್ಮರಾದಾಗ ಮಾತ್ರವೇ. ಅನುಭವವೇನೋ ಉಂಟಾಗುವುದು, ಆದರೆ ಅದನ್ನು ಶಬ್ದಗಳಲ್ಲಿಡುವುದು ಕಷ್ಟ. ಆಧ್ಯಾತ್ಮಿಕತೆಯ ಪ್ರವಾಹವನ್ನೇ ಇಡಿಯಾಗಿ ಆಪೋಷಣೆ ಮಾಡುವ ಆಕಾಂಕ್ಷೆ ಮನುಷ್ಯನಿಗಿರಬೇಕು. ಆಗ, ಅಂತರಂಗ ಬಹಿರಂಗಗಳ ನೈಜ ಸತ್ವವು (ಚೇತನವು) ಉದಯಿಸುವ ದಿನವೊಂದು ಬಂದೇ ಬರುವುದು. ನಾವು ಏನನ್ನು ಹಾರೈಸುತ್ತೇವೆಯೋ ಅದರದೇ ಅನುಭವವಾಗುತ್ತದೆ. ತಳದಲ್ಲಿರುವ ಬೀಜವು ದಗ್ಧವಾಗಿ ಹೋದಾಗ ಅರಿವು ಮೂಡತೊಡಗುತ್ತದೆ.

ಸಂಗತಿಗಳು ಬರುತ್ತವೆ, ಹೋಗುತ್ತವೆ. ಆದರೆ ಅವೆರಡರ ಮಧ್ಯದಲ್ಲಿ ಏನಿರುವುದೋ ಅದೇ ನಮ್ಮ ನಿಜವಾದ ಸ್ಥಿತಿ. ನಮ್ಮ ಈ ನಿರ್ವಿಕಾರ (ಬದಲಾವಣೆಯಿಲ್ಲದ ಸ್ಥಿತಿಯೇ ಸಕಲ ಆಧ್ಯಾತ್ಮಿಕ ಚಟುವಟಿಕೆಗಳ ಕೊನೆ. ‘ಶೂನ್ಯತೆಯೆನ್ನುವುದು ಆ ಸ್ಥಿತಿಗೆ ಇನ್ನೊಂದು ಹೆಸರು. ಕೊನೆಯಲ್ಲಿ ಇಡೀ ಶರೀರ ಮಂಡಲವು ಶೂನ್ಯವಾಗಿ ಬಿಡುತ್ತದೆ(vaccumised) ಮತ್ತು ಆಗ ಮನುಷ್ಯನು ನೈಜ ಮನುಷ್ಯನಾಗುತ್ತಾನೆ. ‘ಮನುಷ್ಯ’ ಶಬ್ದಕ್ಕೆ ವ್ಯಾಖ್ಯೆ ನೀಡುವುದು ಕಷ್ಟಸಾಧ್ಯವೆಂದೆನಿಸಿದೆ. ಆದರೆ, ಅದಕ್ಕೆ ನಾವು “ನೈಜ” ಎಂಬ ಶಬ್ದವನ್ನು ಜೋಡಿಸಿದಾಗ, ಅದು, ಮಾನವನು ಯಾವುದರೊಂದಿಗೆ ಸಂಬಂಧವನ್ನು ಹೊಂದಿರಬೇಕಿದೆಯೋ ಆ ಸೌಂದರ್ಯವನ್ನು ನಿರೂಪಿಸುತ್ತದೆ.

‘ಪರಿವರ್ತನ ರಹಿತ’ (changeless) ಸ್ಥಿತಿಯು ಸದಾ ಇದ್ದೇ ಇದೆ. ಆದರೆ ನಾವು ಪರಿವರ್ತನಶೀಲ ವಸ್ತುಗಳೊಂದಿಗೆ ತಳಕುಹಾಕಿಕೊಂಡಿದ್ದೇವೆ. ಮತ್ತು ಒಂದೋ ನಾವು ಅದರಲ್ಲಿ ಆಸಕ್ತಿ ಹೊಂದಿದ್ದೇವೆ, ಅಥವಾ ಅದನ್ನು ತಿರಸ್ಕರಿಸುತ್ತೇವೆ. ಆದರೆ ಇವೆರಡೂ ಬಂಧನದ ಕೊಂಡಿಗಳೇ, ನಾವು ಸಾರ್ಥಕ ಬದುಕನ್ನು ಬಾಳಬೇಕಾದರೆ ಇವೆರಡನ್ನೂ ಮೀರಿ ಮೇಲೇರಬೇಕು. ನಾವು ಆಸಕ್ತಿಯಿಟ್ಟು ಅಭ್ಯಾಸ ಮಾಡಿದರೆ ನಮ್ಮ ಪದ್ದತಿಯು ಈ ಪರಿಣಾಮವನ್ನು ತರುತ್ತದೆ.

ಪ್ರತಿಯೊಬ್ಬ ಜೀವಿಯು ಸಂತೋಷಮಯ, ಶಾಂತ ಜೀವನವನ್ನು ಬಾಳಬೇಕೆಂಬುದು ಪ್ರಕೃತಿಯ ಒಂದು ಅಂತರ್ನಿಹಿತ ನಿಯಮ. ನಾವದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ, ಆ ಭಗವಂತನ ಜಗತ್ತನ್ನು ಕೆಡಿಸಿದಂತಾಗುತ್ತದೆ. ನಾವೆಲ್ಲ ಸಂಸಾರವಂದಿಗರು. ಆದರೆ ನಾವು ನಮ್ಮೆಲ್ಲ ವ್ಯವಹಾರಗಳಲ್ಲಿಯೂ ಮಿತತ್ವದಿಂದಿರಬೇಕು. ನಮ್ಮ ಜೀವನವು ನೀರಿನೊಳಗಣ ಬಾತುಕೋಳಿ, ಮತ್ತು ಜಲಪಕ್ಷಿಯ ಜೀವನದಂತಿರಬೇಕು. ಅವು ನೀರಿನಿಂದ ಹೊರಬಂದಾಗ, ನೀರಿನಿಂದ ಮುಕ್ತವಾಗಿರುತ್ತವೆ. ಅದೇ ರೀತಿ, ಆಸಕ್ತಿಯಿಂದ ಮಲಿನರಾಗದ ರೀತಿಯಲ್ಲಿ, ಎಲ್ಲರನ್ನೂ ಪ್ರೀತಿಸಬೇಕು. ನಿಜಹೇಳಬೇಕೆಂದರೆ, ಈ ರೀತಿಯಾಗಿ ನಾವು ಅನಾಸಕ್ತ ಪ್ರೀತಿಯನ್ನು ಕಲಿಯುತ್ತೇವೆ.

ಕೌಟುಂಬಿಕ ಜೀವನವು ಹೊಂದಿರಲು ಯೋಗ್ಯವಾದ ಜೀವನ, ಏಕೆಂದರೆ, ಅದರಲ್ಲಿಯೇ ನಾವು ಇತರರನ್ನು ಪ್ರೀತಿಸಲು ಕಲಿಯುತ್ತೇವೆ. ನೈಜ ಜೀವನವನ್ನು ಕಲಿಸುವ ಪಾಠಶಾಲೆ ಅದು. ನೀವು ಭೇದಭಾವ (Brokenness) ವನ್ನು ಹೋಗಲಾಡಿಸಿಕೊಳ್ಳಿರಿ, ಆಗ ಪ್ರೇಮವು ಎಲ್ಲರೆಡೆಗೂ ಸರಿಸಮವಾಗಿ ಹರಿದು ವಿಶ್ವವ್ಯಾಪಿಯಾಗುವುದನ್ನು ಕಾಣುವಿರಿ. ಕೌಟುಂಬಿಕ ಜೀವನವು ತನ್ನ ಜಾಡಿನಲ್ಲಿ, ಕ್ಷೇಶ, ವಿಷಣ್ಣತೆ ಮುಂತಾದವುಗಳನ್ನೂ ತರುತ್ತದೆ. ಚಿಂತೆ’ಯು ಮಾನವಕುಲಕ್ಕಿಟ್ಟ ಮೀಸಲೇ ಹೊರತು ಪ್ರಾಣಿಗಳಿಗಲ್ಲ. ವಾಸ್ತವದಲ್ಲಿ ಅದು ಮಾನವಕುಲಕ್ಕೆ ದೇವರು ಕೊಡಮಾಡಿದ ಮಹಾ ನ್ಯಾಯದಾನ, ಮತ್ತು ಕೃಪೆಯಾಗಿದೆ ; ಹೀಗೇಕೆ ? – ಏಕೆಂದರೆ, ಕ್ಷೇಶವು ಮಾನವನನ್ನು ಉನ್ನತವಲಯಕ್ಕೊಯ್ಯುವ ವಿವೇಕದ ಒಂದು ಘಟಕವೇ ಆಗಿದೆ. ನೇಕಾರನ ಜಾಣೆಯಿಂದ ವಸ್ತ್ರದ ತುಂಡೊಂದು ತಯಾರಾಗಿದೆಯೆನ್ನಿ. ಆಗ ಕಾರ್ಯನಿರತವಾಗಿರುವವು ಅವನ ಕೈಗಳು. ಆದರೆ ಅವನು ತನ್ನ ಕೈಗಳ ಚಲನೆಯ ಮೂಲಕ ದರ್ಶಿಸುತ್ತಿರುವುದು ತನ್ನ ಜಾಣ್ನೆಯನ್ನು. ಜ್ಞಾನಕ್ಕೆ ತನ್ನದೇ ಆದ ಕೇಂದ್ರವಿದೆ. ಆದರೆ ಅವಶ್ಯವಾದಾಗ ಅದು ಅವನ ದೈಹಿಕ ಪ್ರಯತ್ನಗಳನ್ನೂ ನಿರ್ದೇಶಿಸುತ್ತದೆ.

ವಿಷಣ್ಣತೆ (ಅಧೀರತೆ)ಯನ್ನು ನೀವೇ ನಿವಾರಿಸಿಕೊಳ್ಳಬೇಕು. ರಣರಂಗದಲ್ಲಿ ಯೋಧನು ಧೃತಿಗೆಡುವುದೇ ಇಲ್ಲ, ಏಕೆಂದರೆ ಅವನಿಗೆ ಒಂದು ಗುರಿಯಿರುತ್ತದೆ. ಆತ್ಮವಿಶ್ವಾಸವಿದ್ದಲ್ಲಿ ಧೈರ್ಯವು ಒಡಮೂಡುತ್ತದೆ. ಮತ್ತು ನೀವು ಗುರಿಯನ್ನು ಮುಟ್ಟಲು ಸಂಕಲ್ಪ ಮಾಡಿದಾಗ ಆತ್ಮವಿಶ್ವಾಸ ಬಂದೇಬರುತ್ತದೆ. ನಾವು ಭವಿಷ್ಯದ ನಿರ್ಮಾಣಕ್ಕೆ ಶ್ರಮಿಸಬೇಕೇ ಹೊರತು ಗತಕಾಲವನ್ನು ಕುರಿತು ಚಿಂತಿಸುತ್ತ ಸಮಯವನ್ನು ವ್ಯರ್ಥ ಮಾಡಬಾರದು. ನಾವು ಮುಂದೆ ಓಡುವಾಗ ಹಿಂದೆ ನೋಡುವುದಿಲ್ಲ. ಕಷ್ಟಮಯ ಜೀವನದಲ್ಲಿಯೂ, ಸಂತೋಷವನ್ನು ಕಾಣಲು ಕಲಿಯಬೇಕು. ಎಲ್ಲ ಸನ್ನಿವೇಶಗಳಲ್ಲಿಯೂ ಸಂತೋಷದಿಂದಿರುವವನೇ ಅತ್ಯಂತ ಸುಖೀ ಮನುಷ್ಯ. ಹಾಗೆಯೇ ಅದು ‘ಸಂತ’ನ ಧರ್ಮ ಕೂಡ.

ನಾವು ದಿವ್ಯ ಚೇತನದಿಂದ ಹುಟ್ಟಿ ಬಂದಿದ್ದೇವೆ. ಹಾಗೂ, ಅದೇ ನಮ್ಮ ಆಧಾರ ತಳವೂಆಗಿದೆ. ಆದರೆ ಅದು ನಮ್ಮ ದೃಷ್ಟಿಯಿಂದ ಮರೆಯಾಗಿ ಹೋಗಿದೆ. ನಾವು ಸುಸ್ಥಿತಿಯಲ್ಲಿ ಉಳಿಯಬೇಕೆಂದಿದ್ದರೆ, ನಾವು ಅದನ್ನು ಪುನಶ್ಚೇತನಗೊಳಿಸಬೇಕು. ಸತ್ಯದ ಕಡೆಗೆ ಅಂತರಂಗವು ಜಾಗ್ರತವಾಗಲು ಪ್ರೇಮ (ಭಕ್ತಿ)ವೇ ಮಾರ್ಗ. ಈ ಮೂಲ ತತ್ವವನ್ನು ದೃಷ್ಟಿಯಲ್ಲಿಟ್ಟುಕೊಂಡೇ “ಸಹಜಮಾರ್ಗ” ಮುಂದಕ್ಕೆ ಬಂದಿದೆ.

– ಆ ಪರಮ ಪ್ರಭುವಿನ ಅನುಗ್ರಹವು, ನಮ್ಮ ಆರಾಧ್ಯ ಗಂತವ್ಯವನ್ನು ತಲುಪಲು ನಮಗೆ ದಾರಿ ತೋರಲಿ ಮತ್ತು ಮಾನವಕುಲದ ಆಶೋತ್ತರವನ್ನು ಈಡೇರಿಸಲಿ, ತಥಾಸ್ತು.