ಹೃದಯವು ಅನೇಕ ಇಚ್ಛೆಗಳಿಂದ ತುಂಬಿರುವುದು, ಇಚ್ಛೆಗಳ ನಿರಂತರ ಚಲನೆಯು (ಪ್ರೇರಣೆಯು) ಅದನ್ನು ಉಂಟುಮಾಡುವ, ಹೃದಯದಲ್ಲಿ ಕಾರ್ಯಗೈಯುತ್ತಿರುವ, ಗ್ರಹಿಸಲಾಗದಂತಹ (ಸೂಕ್ಷ್ಮ) ಕಂಪನಗಳ ಒಂದು ಕಲ್ಪನೆಯನ್ನು ಕೊಡುವುದು. ಕೆಲವೊಮ್ಮೆ, ಧ್ಯಾನದ ಸಮಯದಲ್ಲಿ ಹೃದಯದ ಚಲನೆಯೇ ಸ್ವತಃ ಕಂಡುಬರುವುದು. ವಾಸ್ತವವಾಗಿ, ಹೃದಯದಲ್ಲಿದೆಯೆಂದು ಊಹಿಸಲಾದ ದೈವೀ ಪ್ರಕಾಶವೇ ಈ ಅಗೋಚರ ಕಂಪನಗಳು ಅಥವಾ ಚಲನೆಗಳಿಗೆ ಕಾರಣವಾಗಿರುವಂತೆ ಕಂಡು ಬರುತ್ತದೆ.

ಧ್ಯಾನದ ಅಭ್ಯಾಸ ಮಾಡುವುದರ ಗುರಿಯು ದೈವೀ ಸಾಕ್ಷಾತ್ಕಾರವೇ ಆಗಿರತಕ್ಕದ್ದು. ಇದರ ಅರ್ಥವೇನು ? ದೈವೀ ಪ್ರಕಾಶದೊಂದಿಗಿನ ಸಂಪರ್ಕದಲ್ಲಿಯೇ ಸ್ಥಿರವಾಗಿ ಉಳಿಯುವುದು ಎಂದು ಇದರ ಅರ್ಥ. ಆದರೆ ದೈವೀ ಪ್ರಕಾಶವು ಸೂಕ್ಷ್ಮ ಚಲನೆಗಳ ಮತ್ತು ಸುಪ್ತ ಕಂಪನಗಳ, ಗ್ರಹಿಕೆಗೆ ನಿಲುಕದಂತಹ ‘ಕಾರಣ’ವಾಗಿದೆ. ನಾವು ಯಾವಾಗಲೂ ಅದರೊಂದಿಗೆ, (ದೈವೀ ಪ್ರಕಾಶದೊಂದಿಗೆ) ಸಂಪರ್ಕ ಹೊಂದಿಯೇ ಇರುತ್ತೇವೆ ಆದರೆ ಅದರ ನೈಜ ದರ್ಶನ (ಸಾಕ್ಷಾತ್ಕಾರ) ತೋರಿಬರುವದಿಲ್ಲ. ಅದು ಹೀಗೇಕೆ ? ಏಕೆಂದರೆ ನಮಗೆ ತೋರಿಬರುವುದೆಲ್ಲವೂ ಅಥವಾ ಗ್ರಹಿಸಲ್ಪಡುವುದೆಲ್ಲವೂ ಎಷ್ಟು ಸ್ಥೂಲವೂ, ಮೋಹಕವೂ ಮತ್ತು ಆಕರ್ಷಕವೂ ಆಗಿರುವುದೆಂದರೆ, ಅದು ನಮ್ಮ ಲಕ್ಷ್ಯವನ್ನು ನಮ್ಮ ಸತ್ತೆಯ (ಅಸ್ತಿತ್ವದ) ಸೂಕ್ಷ್ಮ ಅವಸ್ಥೆಗಳ ಕಡೆಗೆ ಹೊರಳಲು ಬಿಡುವುದಿಲ್ಲ. ಈ ಮೋಡಿ ಮತ್ತು ಆಕರ್ಷಣೆಗಳು ಅದೆಷ್ಟು ಬಂಧನಕಾರಿ ಮತ್ತು ಸ್ಥೂಲವಾಗಿವೆಯೆಂದರೆ, ಅವುಗಳ ಸಂಬಂಧವು ಅತ್ಯಾಶೆ ಹಾಗೂ ತಿರಸ್ಕಾರದ, ಸುಖ, ದುಃಖ ಮುಂತಾದವುಗಳ ಭಾವನೆಗಳನ್ನುಂಟುಮಾಡುವುವು. ಗುರುವಿನ ಕೃಪೆಯಿಂದ ನಾವು ಅವನ ಕಡೆಗೆ ನಮ್ಮ ಲಕ್ಷ್ಯವನ್ನು ತಿರುಗಿಸಲು ಶಕ್ತರಾದರೆ ಎಲ್ಲ ಬಂಧನಗಳೂ ಶಿಥಿಲಗೊಳ್ಳುವವು ಹಾಗೂ ಕೆಲವು ಸಲ ಪ್ರಚಂಡ ಶಕ್ತಿಯು ಬಿಡುಗಡೆಯಾದಂತೆನಿಸುವುದು. ಬಂಧನಗಳಿಂದ ಬಿಡುಗಡೆ ಸಾಧಿಸುವುದಕ್ಕೆ ಮತ್ತು ಅಸ್ತಿತ್ವದ ಸೂಕ್ಷ್ಮ ಅವಸ್ಥೆಗಳನ್ನು ಈ ಶಕ್ತಿಯ ಪ್ರಯೋಜನವನ್ನು ಕೂಡ ಹೊಂದುವುದಕ್ಕೆ ಪಡೆಯಬಹುದು.

ವಾಸ್ತವವಾಗಿ, ಸಾಕ್ಷಾತ್ಕಾರವು ಆಗುವುದು ಮಾನವನ ಚಿತ್- ಶಕ್ತಿಯ ಕಾರಣದಿಂದಲೇ ಆಗಿದೆ. ಹೃದಯವು ವಿಚಾರದ (ಚಿತ್ತದ) ಕಾರ್ಯ ಕ್ಷೇತ್ರವಾಗಿದೆ. ನಿಜವಾಗಿಯೂ ವಿಚಾರ ಪ್ರವಾಹವು ಹೃದಯಕ್ಕೆ ಬಂದು ತಟ್ಟಿದಾಗ ಜ್ಞಾನ-ಗ್ರಹಣವಾಗುವುದು. (ಗ್ರಹಿಕೆಯು ಉಂಟಾಗುವುದು).

ಹೃದಯದಲ್ಲಿ ಅಸಂಖ್ಯಾತ ಬಿಂದುಗಳಿರುವಂತೆ ತೋರುವುದು. ಚಿತ್ತದ ಪ್ರವಾಹವು ಹೃದಯದಲ್ಲಿರುವ ಆಧ್ಯಾತ್ಮಿಕ-ಬಿಂದುವಿನ ಸ್ಥಿತಿಯೊಂದಿಗೆ ಜೋಡಿಸಲ್ಪಡುವುದೋ ಆಗ ಜ್ಞಾನಗ್ರಹಣದ (ಅನುಭವದ) ಗುಣವೇ ಬದಲಾಗುವುದು. ಸಾಧಕನು ಒಂದು ರೀತಿಯ ದೈವೀ ವ್ಯವಸ್ಥೆಯು ಅಥವಾ ವಿಶ್ವದ ಎಲ್ಲ ವಸ್ತುಗಳಲ್ಲಿ ಒಂದು ಅತ್ಯಂತ ಆಕರ್ಷಕ ಏರ್ಪಾಟು ಇರುವುದನ್ನು (ಅನುಭವದಿಂದ) ಗ್ರಹಿಸುವನು. ಬಹುತೇಕ ಎಲ್ಲ ವರ್ಣನಾತ್ಮಕ ಆಧ್ಯಾತ್ಮಿಕ ಸಾಹಿತ್ಯವು ಈ ಪ್ರಾಕೃತಿಕ ಜಗತ್ತನ್ನೆಲ್ಲ ವ್ಯಾಪಿಸಿರುವ ದೈವೀ ಸ್ಥಿತಿಯ ವಿವರಣೆಗಳಿಂದ ತುಂಬಿದೆ. ಭಾಷೆಗಳು, ಪಾರಿಭಾಷಿಕ ಪದಾವಳಿ ಹಾಗೂ ಅಭಿವ್ಯಕ್ತಿಯ ವಿಧಾನಗಳೇನೋ ಬೇರೆ ಬೇರೆಯೆಂದು ಕಾಣುತ್ತವೆ. ಆದಾಗ್ಯೂ, ಒಬ್ಬ ಸೂಕ್ಷ್ಮ ಸಂವೇದನಾಶೀಲ ಓದುಗನು ಇಂತಹ ಸಾಹಿತ್ಯದಲ್ಲಿ ಒಂದು ಆಧ್ಯಾತ್ಮಿಕ ಸೌಂದರ್ಯವನ್ನು ನಿಃಸಂದೇಹವಾಗಿ ಗ್ರಹಿಸುತ್ತಾನೆ. ಈ ಪ್ರಾಥಮಿಕ ಆಧ್ಯಾತ್ಮಿಕ ಸ್ಥಿತಿಯಲ್ಲಿ ಒಬ್ಬ ಸಮರ್ಥ ಗುರುವಿನ ಸಹಾಯವಿಲ್ಲದೆ ಒಬ್ಬನು ದಿಟ್ಟೂಢನಾಗಿ ಸಿಕ್ಕಿಹಾಕಿಕೊಳ್ಳುವ ಅಪಾಯ ಯಾವಾಗಲೂ ಇದ್ದೇ ಇದೆ.

ಹೃದಯವು ಅಧ್ಯಾತ್ಮದ ಸುಪ್ತ ಅವಸ್ಥೆಯು ಪ್ರಕಟಗೊಳ್ಳುವ ಅಂತೆಯೇ, ಜಾಗ್ರತ ಅವಸ್ಥೆಯನ್ನು ಸುಪ್ತ ಹಾಗೂ ಸುಷುಪ್ತ (Semi- conscious ಮತ್ತು Unconscious) ಅವಸ್ಥೆಗಳಲ್ಲಿ ಲಯಗೊಳಿಸುವ ಸ್ಥಳವಾಗಿದೆ. ಸ್ವಪ್ನ, ಸುಷುಪ್ತಿ ಮತ್ತು ಸಮಾಧಿ ಹಾಗೂ ಭಾವನಾ ಮಗ್ನತೆಯ ಅವಸ್ಥೆಗಳು ಅದರಲ್ಲಿವೆ. ದೈವೀ ಕೃಪೆಯ ಪ್ರಾಣಾಹುತಿಯ ಸಹಾಯದಿಂದ ಇವೆಲ್ಲವೂ ಶೀಘ್ರವಾಗಿ ಅನುಭವಕ್ಕೆ ಬರುವವು. ಪ್ರಾಣಾಹುತಿಯ ಬೆಂಬಲದಲ್ಲಿ, ಧ್ಯಾನಾಭ್ಯಾಸ ಮಾಡುವುದರಿಂದ ಈಯೆಲ್ಲ ಅವಸ್ಥೆಗಳೂ ಹೆಚ್ಚು ಹೆಚ್ಚು ಶುದ್ಧಗೊಳ್ಳುವವು ಹಾಗೂ ಅತ್ಯಂತ ಸೂಕ್ಷ್ಮವೂ ಆಗುವವು. ಸತ್ಯದೆಡೆಗೆ ತಲುಪಲು ಹಾಗೂ ಅದನ್ನು ಯಥಾಸ್ಥಿತಿಯಲ್ಲಿ ಗ್ರಹಿಸಲು ಶುದ್ದೀಕರಣವು ಅತ್ಯಂತ ಮಹತ್ತ್ವದ್ದಾಗಿದೆ.

ವಿಚಾರಗಳ ಪ್ರವಾಹ ಎಷ್ಟು ಶೀಘ್ರ ಗತಿಯದಾಗಿರುವುದೆಂದರೆ, ಧ್ಯಾನದ ಅಭ್ಯಾಸವಿಲ್ಲದೆ ಹೋದರೆ, ಒಬ್ಬನು ಇಂದ್ರಿಯಗಳ ಹಾಗೂ ಅವುಗಳ ಅನಿವಾರ್ಯ ಒತ್ತಾಯಗಳಿಂದ ಚಲಾಯಿಸಲ್ಪಡುತ್ತ ಅದರಲ್ಲಿಯೇ ಸೀಮಿತವಾಗಿ ಉಳಿಯುವ ಸಂಭವವಿದೆ. ಆದರೆ, ‘ಸತ್ಯ’ವು ಭೌತಾತೀತವಾದುದು. ಅಲ್ಲಿ ಇಂದ್ರಿಯಗಳ ಉಪಯುಕ್ತತೆ ಕೊನೆಗೊಳ್ಳುವುದು ಹಾಗೂ ಉಚ್ಚತರವಾದ ಶಕ್ತಿಯ ವಿಚಾರ ಮತ್ತು ಇಂದ್ರಿಯಗಳನ್ನು ತನ್ನ ಅಧೀನದಲ್ಲಿ ತಂದುಕೊಳ್ಳುವುದು. ಉಚ್ಚತರ ಶಕ್ತಿಯು ಹಾಗೆ ಕಾರ್ಯಗೈಯ್ಯುವುದಕ್ಕೆ ಅನುವು ಮಾಡಿಕೊಡಲು ಅದಕ್ಕೆ (ವ್ಯಕ್ತಿಯು) ಶರಣಾಗತನಾಗುವ ಸಂಕಲ್ಪವಿರಬೇಕಾದುದು ಅವಶ್ಯವಿದೆಯೆಂಬುದೇನೋ ನಿಜ. ಸಮರ್ಥ ಗುರುವಿನ ಸಹಾಯವಿಲ್ಲದೆ ಹೋದರೆ, ಸಾಧಕನು ತನ್ನದೇ ಆತ್ಮವನ್ನೇ (ತನ್ನನ್ನೇ) ಆತ್ಯಂತಿಕ ಪ್ರಮಾಣ, ಅಥವಾ ಪ್ರವಾದಿ (ದೈವೀ ವಾಣಿಯ ವಾಹಕ) ಎಂದು ತಪ್ಪಾಗಿ ತಿಳಿಯುವ ಅಪಾಯ ಯಾವಾಗಲೂ ಉಂಟು; ಹಾಗೂ, ದೈಹಿಕವಾಗಿಯೇ ತಾನು ದೇವರೆಂದೋ ಅಥವಾ ದೈವೀ ಲೀಲಾಕರ್ತನೆಂದೋ ಆಗುವ ಬಯಕೆಯು ಅವನನ್ನು ಊರ್ಧ್ವ ದಿಶೆಯಲ್ಲಿ ಹೋಗಲು ಬಿಡುವುದಿಲ್ಲ.

ಹೃದಯದಲ್ಲಿ ಸಂಚಯವಾದ ಸಾಂದ್ರತೆ ಮತ್ತು ಸ್ಥೂಲತೆಗಳನ್ನು ಉದಾತ್ತೀಕರಿಸಲು ಹಾಗೂ ಹೃದಯದಲ್ಲಿಯ ಗ್ರಂಥಿಗಳನ್ನು ಬಿಚ್ಚಿದಾಗ ಬಿಡುಗಡೆಗೊಳ್ಳುವ ಶಕ್ತಿಯನ್ನು ಪ್ರಯೋಜನಕ್ಕೆ ತರಲು ಕ್ರಮಬದ್ಧವಾಗಿ ತರಬೇತಿಗೊಳಿಸುವುದು ಮತ್ತು ನಿಯಂತ್ರಿಸುವುದು ಆವಶ್ಯಕವಾಗುತ್ತದೆ. ಒಂದು ನವೀನ ತರಬೇತಿ ಕೊಡುವ ಸಂಸ್ಥೆಯು ‘ಸಹಜಮಾರ್ಗ’ ಅಥವಾ ‘ಭಗವತ್ ಸಾಕ್ಷಾತ್ಕಾರದ ಸ್ವಾಭಾವಿಕ ಮಾರ್ಗ’ ಎಂಬ ಹೆಸರಿನಲ್ಲಿ ಷಾಹಜಹಾನಪುರದಲ್ಲಿ ಉದಯಿಸಿತು. ಇಂದಿನ ಜೀವನದ ಪರಿಸ್ಥಿತಿಗಳಿಗೆ ಹೊಂದಾಣಿಕೆಯಾಗುವ ಹಾಗೂ ರಾಜಯೋಗದ ಸುಧಾರಿತ ಪದ್ಧತಿಯೆಂದು ಪರಿಗಣಿಸಬಹುದಾದ ಈ ಪದ್ಧತಿಯನ್ನು ಅನ್ವೇಷಿಸಿದವರು ಪೂಜ್ಯ ಶ್ರೀ ಬಾಬೂಜಿ ಮಹಾರಾಜರು, ಪೂಜ್ಯ ಬಾಬೂಜಿ ಮಹಾರಾಜರಿಂದ ತರಬೇತಿ ಹೊಂದಿದ ಅನೇಕರು ಅವರ ಕಾರ್ಯಯೋಜನೆಯಂತೆ ಮತ್ತು ಅವರ ಇಚ್ಛೆಗೆ ಅನುಗುಣವಾಗಿ ಮಾತ್ರ ಉಪಯೋಗಿಸಲ್ಪಡುವ ವಿಶೇಷ ಶಕ್ತಿಗಳನ್ನು ಅವರಿಂದ ಪಡೆದಿದ್ದಾರೆ.

ಸಹಜಮಾರ್ಗದ ಒಬ್ಬ ಒಳ್ಳೆಯ ಪ್ರಶಿಕ್ಷಕನು ವಿನಮ್ರನೂ ಮಧುರ ಸ್ವಭಾವವುಳ್ಳವನೂ ಹಾಗೂ ಅದೇ ಹೊತ್ತಿನಲ್ಲಿ ಶಕ್ತಿವಂತನೂ ಆಗಿರುತ್ತಾನೆ. ಅವನೂ ಕೂಡ ತನ್ನನ್ನು ತಾನು ನಿಯಮಿತವಾಗಿ ಶುದ್ಧಗೊಳಿಸಿಕೊಳ್ಳಬೇಕಾಗುವುದು. ಏಕೆಂದರೆ ಅವನು ದೋಷಪೂರಿತ, ಸ್ವಾರ್ಥಮಯ ಹಾಗೂ ಲೋಭಿಯಾದ ಸಮುದಾಯಗಳ ಮಧ್ಯದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅವನು ಗುರುವನ್ನು ನಿರ್ಲಕ್ಷಿಸುವ ಅಥವಾ ಮರೆಯುವುದರ ಕಾರಣ ಸ್ವಾರ್ಥ ಮತ್ತು ಅತ್ಯಾಶೆಗಳನ್ನು ಬೆಳೆಸಿಕೊಂಡರೆ, ನಿಷ್ಪಯೋಜಕನಾಗುತ್ತಾನೆ.

ಗುರುಗಳ ಪ್ರಾಣಾಹುತಿಯ ಮೂಲಕ, ಸಹಜಮಾರ್ಗ ಪದ್ಧತಿಯಿಂದ ಅತಿ ಹೆಚ್ಚಿನ ಕಲ್ಯಾಣವನ್ನು ಎಲ್ಲ ಮುಮುಕ್ಷುಗಳೂ ಹೊಂದಲಿ.

[ಸಹಜಮಾರ್ಗ’ ಪತ್ರಿಕೆ ನಂ. 1 ಮತ್ತು 2, ಜನವರಿ – ಮಾರ್ಚ 1987]