(ಪೂಜ್ಯ ಬಾಬೂಜಿಯವರ ೮೧ ನೇ ಹುಟ್ಟುಹಬ್ಬದ ಸಮಾರಂಭದಲ್ಲಿ, ದೆಹಲಿಯಲ್ಲಿ ನೀಡಿದ ಸಂದೇಶ, ೩೦-೪-೧೯೮೦)
ಭಾರತದಲ್ಲಿ, ‘ಯೋಗ’ವೆಂಬುದು ಪ್ರಾಚೀನವಾದುದು. ಆದರೆ ಅದರ ಬೆಳವಣಿಗೆಯು ಕೆಲಕಾಲ ಸ್ಥಗಿತಗೊಂಡಿತು. ಅದಕ್ಕೆ ಕಾರಣವೆಂದರೆ, ಅವರು “ಅಸ್ಥಿಯಿಂದ ರಂಜಕವನ್ನು ಹೊರತೆಗೆಯುವ” (ಅರ್ಥಾತ್ ಅಂತರಂಗದಲ್ಲಿ ಅಂತರ್ಯಾಮಿಯ ಹೊಳಹನ್ನು ಕಂಡುಕೊಳ್ಳುವ) ಕಲೆಯನ್ನು ಮರೆತರು. ಈಗ ಅಂತರ್ಯದಲ್ಲಿ ಭಾರತದೇಶವು ಹಿಂದಿನ ಭಾರತದೇಶವೇ ಆಗಿದೆ ; ಬಾಹ್ಯದಲ್ಲಿಯೂ ಅದೇ ಹೊರಹೊಮ್ಮುತ್ತಿದೆ. ಮತ್ತು ಜನರ ಆತ್ಮಸಾಕ್ಷಿಯು ಮತ್ತೊಮ್ಮೆ ತಿರುವು ಪಡೆದು ಅದು ಹೊರಹೊಮ್ಮುವಂತೆ ಮಾಡಿದೆ. ಮುಂದೆ ಶುಭದಿನಗಳು ಕಾದಿವೆಯಾದ್ದರಿಂದ, ಅವರು ಹಾಗೆ ಮಾಡಲೇಬೇಕಾಗಿದೆ. ವಿಧಿಯ ವ್ಯಂಗ್ಯವೆಂದರೆ, ನಾವು (ಭೌತಿಕ ) ವಸ್ತುಗಳ ಹಿಂದಿನ ‘ನಿಜವಸ್ತು’ವನ್ನು ನೋಡಲಾರೆವೆಂಬುದು. ಅದರಿಂದಾಗಿ, ನಾವು ‘ಪ್ರಜ್ಞೆ’ಯನ್ನು ಬಾಹ್ಯ ಅನುಭವಗಳಿಂದ ಅಳೆಯುತ್ತೇವೆ. ಭಾರತದ ಪ್ರಾಚೀನ ಋಷಿಗಳು ಮಾನವತೆಯ ಒಳಿತಿಗಾಗಿ ಬಹಳಷ್ಟು ಕೆಲಸಮಾಡಿದ್ದಾರೆ, ಆದರೆ, ಅವರಲ್ಲಿ ಬಹಳಷ್ಟು ಮಂದಿ (ತಾವು ಗಳಿಸಿಕೊಂಡ) ‘ಸತ್ಯ’ವನ್ನು ಆಯ್ದ ಕೆಲಮಂದಿಗೆ ಮಾತ್ರವೇ ಮುಡಿಪಾಗಿಟ್ಟರು. ನನ್ನ ಪೂಜ್ಯ ಗುರುಗಳ ಆಣತಿಯ ಮೇರೆಗೆ ನಾನು ಅದನ್ನು ಬಹಿರಂಗಪಡಿಸಿ ಬಹುಮಂದಿಗೆ ದೊರಕಿಸಿಕೊಡಲು ಇಚ್ಛಿಸುತ್ತೇನೆ.
ನಿಸ್ಸಂಶಯವಾಗಿ, ಜಗತ್ತು ನಮ್ಮೊಳಗಿದೆ, ಮತ್ತು ನಾವು ಜಗತ್ತಿನೊಳಗಿದ್ದೇವೆ. ಆದರೆ ನಾವು ಈ ದೃಶ್ಯದ ಹಿಂದಿರುವ ಸೂತ್ರಧಾರಿ ಯಾರೆಂಬುದನ್ನು ಕಂಡುಹಿಡಿಯಬೇಕಾಗಿದೆ. ಧ್ಯಾನ ಇತ್ಯಾದಿ ಎಲ್ಲವೂ ಇರುವುದು ಅದಕ್ಕೋಸ್ಕರವೇ. ‘ಅವನು’ ನಮ್ಮಿಂದ ಮರೆಯಾಗಿ ಅಡಗಿಕೊಂಡಿದ್ದಾನೆಂದು ನಾವು ಭಾವಿಸುತ್ತೇವೆ ; ಆದರೆ ವಸ್ತು ಸ್ಥಿತಿಯಿರುವುದೇ ಬೇರೆ. ಕೆಲವು ಸಲ ನಾವು ನಕ್ಷತ್ರಗಳನ್ನು ಕಾಣುತ್ತೇವೆ, ಆದರೆ, ಕೊಂಚ ಮುನ್ನಡೆ ಸಾಧಿಸಿದ ನಂತರ, ಸೂರ್ಯನ ಪ್ರಭೆಯನ್ನು ಅನುಭವಿಸತೊಡಗುತ್ತೇವೆ. ಮತ್ತೆ, ಸೂರ್ಯನನ್ನೇ ಕಾಣಲು ಶಕ್ತರಾಗುವ ಕಾಲ ಬಂದೇ ಬರುತ್ತದೆ. ಎಲ್ಲಿಯವರೆಗೆ ನಾವು ಸೂರ್ಯನ ಪ್ರಭೆಯನ್ನಷ್ಟೇ ಕುರಿತು ಯೋಚಿಸುತ್ತಿರುವೆವೋ, ಅಲ್ಲಿಯವರೆಗೆ ನಿಜವಾದ ಸೂರ್ಯನು ನಮಗೆ ಮರೆಯಾಗಿಯೇ ಉಳಿಯುವನು. ನಮ್ಮ ಅಸ್ತಿತ್ವಕ್ಕೆ ಕಾರಣವಾದ ಆ ಗುರಿಯನ್ನು ಎಲ್ಲರೂ ಮುಟ್ಟಲೆಂಬುದೇ ನನ್ನ ಕಳಕಳಿಯ ಪ್ರಾರ್ಥನೆ.
“ನಾಸ್ತಿತ್ವಾ ‘ವಸ್ಥೆಯೇ ಇದ್ದಿದ್ದರೆ, ಜಗತ್ತೇ ಇರುತ್ತಿರಲಿಲ್ಲ. ಅದನ್ನೇ ನಾವು ಆಧ್ಯಾತ್ಮಿಕವಾಗಿ ಪರಿಗಣಿಸಿದರೆ, “ಅಸ್ತಿತ್ವ’ ಎಂಬುದರಲ್ಲಿ ‘ಅಹಂ’ ಎಂಬ ಭಾವವಡಗಿದೆ. ನಾವು ನಿರಹಂತೆ” (Non-self) ಯ ಸ್ಥಿತಿಯನ್ನು ಮುಟ್ಟಬೇಕಾದರೆ, ನಾವು ‘ಅಸ್ತಿ’ ಸ್ಥಿತಿಯನ್ನು , (ಅಹಂ-ಸ್ಥಿತಿಯನ್ನು ) ನಮ್ಮ ವಿಚಾರದಿಂದ ಕಿತ್ತೊಗೆಯಬೇಕು. ಆಗ ನಾವು ನಾಸ್ತಿತ್ವ” ಅರ್ಥಾತ್ ‘ನಾಹಂ’ ಸ್ಥಿತಿಯನ್ನು ಅದರ ನಿಜಾರ್ಥದಲ್ಲಿ ಮುಟ್ಟುವೆವು. ಅದರರ್ಥ “ಜೀವನರಹಿತ ಜೀವನ” ಅಂದರೆ “ಅಸ್ತಿತ್ವದಲ್ಲಿಯ ನಾಸ್ತಿತ್ವ” ; “ನಾವಿದ್ದೇವೆ ಆದರೂ ನಾವಿಲ್ಲ” ; ಹಾಗೆಯೇ ”ನಾಸ್ತಿತ್ವದಲ್ಲಿ ಅಸ್ತಿತ್ವ” – ನಾವಿಲ್ಲ ಆದರೂ ನಾವಿದ್ದೇವೆ. ಯಾರು “ತನ್ನಲ್ಲಿಯೇ ತಾನಾಗಿ” (ಕೇವಲ) ನಿರುವನೋ ಅಂತಹವನ ಚಿಂತನೆಯು ನಮ್ಮನ್ನು “ನಮಗೆ ತಿಳಿವಳಿಕೆಯುಂಟಾದಾಗ, ಏನೂ ತಿಳಿದಿಲ್ಲವೆಂಬುದರ ಅರಿವಾಯಿತು” ಎಂಬಂತಹ ಸ್ಥಿತಿಗೊಯ್ಯುತ್ತದೆ. (ಜಾನಾ ತೋ ಯೇ ಜಾನಾ ಕಿನ ಜಾನಾ ಕುಛ ಭೀ)”. ಆ ಹಂತದಲ್ಲಿ ಆಸೆಲಾಲಸೆಗಳ ಅರಣ್ಯವು ನಾಶವಾಗಿ ಪಾಳು ನೆಲವಾಗಿಬಿಡುತ್ತದೆ, ಮತ್ತು ರಂಗುರಂಗಾದ ವ್ಯಕ್ತಿತ್ವ (Individuality ಯ) ದ ಬಟ್ಟಲು ಏನನ್ನೂ ತುಂಬಿಕೊಳ್ಳಲಾರದಂತೆ ಚೂರುಚೂರಾಗುತ್ತದೆ. (ಉಜಡೀ ಹುಯಿ ಬಸ್ತೀ ಹೈ ಟೂಟಾ ಹುವಾ ಪೈಮಾನಾ).
ಅಧ್ಯಾತ್ಮವು ‘ದೈವತ್ವ’ದಲ್ಲಿ ಕೊನೆಗೊಳ್ಳುತ್ತದೆ, ಮತ್ತು ದೈವತ್ವವು ಅದರ ನೈಜಸಾರದಲ್ಲಿ ಅಂತ್ಯಗೊಳ್ಳುತ್ತದೆ. ಮನುಷ್ಯನು ಮುಕ್ತಾವಸ್ಥೆಯ ಅನಂತರ ಪರಮಾತ್ಮನ ಸಾಮೀಪ್ಯವನ್ನು ಹೊಂದುತ್ತಾನೆ, ಹಾಗೂ ಎಲ್ಲಿ ಮೌನವೂ ಮೌನವಾಗುವುದೋ ಆ ವಲಯವನ್ನು ಪ್ರವೇಶಿಸುತ್ತಾನೆ. ಸದೇಹ ಮುಕ್ತಿಯೂ ಅಧ್ಯಾತ್ಮದಲ್ಲಿ ಒಂದು ಅಧ್ಯಾಯವೇ. ಭೌತವಿಜ್ಞಾನವು ಭೌತದ್ರವ್ಯದಿಂದಾಚೆಯದನ್ನು ವಿವರಿಸಲಾರದು. ಅಧ್ಯಾತ್ಮವು ಪರಮಪದವನ್ನು ಕುರಿತಾದ ಒಂದು ಬಗೆಯ ಪ್ರಜ್ಞೆ ಅಥವಾ ಅನುಭವ. ಅಂದರೆ, ಶುದ್ಧವೂ, ಸರಳವೂ, ಉನ್ನತೋನ್ನತವೂ ಅಖಂಡ ಸಮತ್ವವೂ ಆದ ದೈವತ್ವಕ್ಕೆ ಪ್ರವೇಶದ್ವಾರ. ಪರತತ್ವದೊಂದಿಗೆ ಹೋಲಿಸಿದರೆ, ನಾವು ಆ ಸತ್ವಶಕ್ತನ ಮಹಾಸಾಗರದ ಒಂದು ಹನಿಯಷ್ಟೆ ! ಹೇಗಾದರೂ ಮಾಡಿ ಆ ಹನಿ’ಯಿಂದ ‘ಹೊಳೆ’ಯಾಗಲು ನಾವು ಪ್ರಯತ್ನಿಸಬೇಕು.
ನಾನು ಇತರರ ಸೇವೆಗೈಯುವ ಆಸ್ಥೆಯನ್ನು ಬೆಳೆಸಿಕೊಂಡಿದ್ದೇನೆ. ಅದರಿಂದಾಗಿ, ಕ್ಲೇಶ, ಉದ್ವೇಗಗಳನ್ನುಂಟು ಮಾಡುವ ತಮ್ಮ ವಿಚಾರ ಮತ್ತು ಕಾರ್ಯಗಳ ಹೊಡೆತಕ್ಕೆ ಸಿಕ್ಕು ಸೋತವರ ಸೇವೆಗೆ ಬೇಕಾದ ಉತ್ತಮತರದ ಸಾಧನಗಳನ್ನು ಶೋಧಿಸುತ್ತಿರುತ್ತೇನೆ. ವಿಷವಿದ್ದಲ್ಲಿಯೇ ಅಮೃತವೂ ಇರುತ್ತದೆ. ನಾವು ಸೂರ್ಯಾಭಿಮುಖಿಗಳಾದರೆ ಬೆಳಕು ಸಿಗುವುದು, ಅದೇ, ನಾವು ಸೂರ್ಯನಿಗೆ ಬೆನ್ನು ಮಾಡಿ ನಿಂತರೆ ಸಿಗುವುದು ಕತ್ತಲೆಯೇ. ಅಂದರೆ, ನಾವು ನಮ್ಮ ಕೃತ್ಯಗಳಿಂದಲೇ ಕತ್ತಲೆ ಅಥವಾ ಬೆಳಕನ್ನುಂಟುಮಾಡಿಕೊಳ್ಳುತ್ತೇವೆ. ನಾವೇ ಕರ್ತೃವೆಂದು ಭಾವಿಸಿದಾಗಲೇ ಪೇಚಾಟ ಆರಂಭವಾಗುವುದು. ಮುಳ್ಳುಕಂಟಿಗಳೂ ಸಹ ನಯನಮನೋಹರವಾದ, ಹೃದಯಕ್ಕೆ ಆಹ್ವಾದವನ್ನೀಯುವ ಸುಂದರ ಪುಷ್ಪಗಳನ್ನು ಕೊಡುತ್ತವೆ. ಹಾಗೆಯೇ, ದೇವರು ತನ್ನದೇ ಆದ ಮರದ ಹೂವೆಂದುಕೊಂಡರೆ, ನಾವು ದೇವರನ್ನು ಆಸ್ವಾದಿಸುತ್ತೇವೆಯೇ ಹೊರತು, ಆ ಮಟ್ಟಿಗೆ ಮರವನ್ನಲ್ಲ. ಮನೆಯಲ್ಲಿ ಬಚ್ಚಲು-ಗಟಾರಗಳಿರುತ್ತವೆ. ಅವುಗಳನ್ನು ಉಪಯೋಗಿಸುತ್ತೇವೆಯೇ ಹೊರತು ನಿರ್ಮೂಲನ ಮಾಡುವುದಿಲ್ಲ. ನೀವು ಅವುಗಳನ್ನು ಸುಧಾರಿಸಲು, ಆಧುನೀಕರಿಸಲು ಯತ್ನಿಸುವಿರೇ ಹೊರತು ಹಾಳುಗೆಡಹುವುದಿಲ್ಲ. ಇದರಂತೆಯೇ, ಆಧ್ಯಾತ್ಮಿಕತೆಯನ್ನು ಕುರಿತು ಅಷ್ಟಾಗಿ ಚಿಂತಿಸದಿರಬಹುದಾದ, ಆದರೆ, ಒಳ್ಳೆಯವರಾದ ಜನರೂ ಇದ್ದಾರೆ. ಆಧ್ಯಾತ್ಮಿಕ ಪುನಶ್ವೇತನದ ಕಂಪು ಅವರನ್ನು ತಟ್ಟಿದಾಗ, ಶೀಘ್ರದಲ್ಲಿಯೇ ಅವರು ತಮ್ಮ ಪರಿವರ್ತನೆಗೆ ಕಾರ್ಯೋನ್ಮುಖರಾಗುವರು. ಆದರೆ, ಯಾರು ತಮ್ಮಲ್ಲಿ ಅಷ್ಟೊಂದು ಸಜ್ಜನಿಕೆಯಿಲ್ಲದಿದ್ದರೂ, ಸತ್ಯಸಾಕ್ಷಾತ್ಕಾರದ ತೀವ್ರಾಭಿಲಾಷೆಯನ್ನು ಹೊಂದಿದ್ದು, ಸದ್ಗುರುವಿನಲ್ಲಿ (ಪರಮಾತ್ಮನಲ್ಲಿ) ಶರಣಾಗತರಾಗುವ ಮನಃಪ್ರವೃತ್ತಿಯನ್ನು ಬೆಳೆಸಿಕೊಳ್ಳುವರೋ, ಅಂತಹವರ ಭಾಗ್ಯವನ್ನು ಸುಧಾರಿಸಲು ಕೂಡ ನಾವು ಸೂಕ್ತ ಗಮನ ಹರಿಸಬೇಕು. ಮತ್ತು ಪ್ರಯತ್ನಿಸಬೇಕು.
ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ನಾಗರಿಕತೆಗಳಲ್ಲಿರುವ ಭೇದ ಅತ್ಯಲ್ಪ, ಎಂದು ನನ್ನ ಅಭಿಪ್ರಾಯ. ಇಲ್ಲಿ ನಾವು ಅಂತರ್ದಶನಕ್ಕಾಗಿ “ಅಂತರ್ಯದಲ್ಲಿರುವುದನ್ನೇ, (ಅಂತರ್ಯಾಮಿಯನ್ನೆ) ಬಳಸುವೆವು ; ಅಲ್ಲಿ ಅವರು ಅದಕ್ಕಾಗಿ ತಮ್ಮನ್ನೇ ಉಪಯೋಗಿಸುವರು. ಅಧ್ಯಾತ್ಮವು ಭಾರತೀಯರ ಏಕಸ್ವಾಮ್ಯವೇನಲ್ಲ. ಅದು ಎಲ್ಲರ ಜನ್ಮಜಾತ ಹಕ್ಕು. ಪ್ರಪಂಚದ ನಾನಾ ಭಾಗಗಳಲ್ಲಿರುವ ನಮ್ಮ ಸಂಗಾತಿಗಳು ಆಧ್ಯಾತ್ಮಿಕ ಪ್ರಯೋಜನಕ್ಕೋಸ್ಕರ ನಮ್ಮನ್ನು ಅವಲಂಬಿಸಿರಬಾರದೆಂಬುದೇ ನನ್ನ ಬಲವಾದ ಆಕಾಂಕ್ಷೆ, ಅದಕ್ಕೋಸ್ಕರವೇ, ನಾನು “ಗುರುಗಳನ್ನು ತಯಾರಿಸುವೆನೇ ಹೊರತು, ಶಿಷ್ಯರನ್ನಲ್ಲ” – ಎಂದು ಹೇಳುವುದು. ಪ್ರಪಂಚದ ಪ್ರತಿಯೊಂದು ದೇಶವೂ ಆಧ್ಯಾತ್ಮದ ತಮ್ಮ ತಮ್ಮ ಪಾಲನ್ನು ಪಡೆಯಬೇಕೆಂದು, ನನ್ನ ಆಶಯ. ಈಗ ಜಗತ್ತಿನಲ್ಲಿ ಎಲ್ಲೆಡೆ ಆಧ್ಯಾತ್ಮಿಕ ಜಾಗೃತಿಯುಂಟಾಗಿದೆ. ಮುಂಬರುವ ದಿನಗಳಲ್ಲಿ ಕಮ್ಯುನಿಷ್ಟರೂ ಸಹ ಇದೇ ಪದ್ಧತಿಯನ್ನು ಸ್ವೀಕರಿಸುವರು. ನಮ್ಮಲ್ಲಿ ಬಹುತೇಕ ಎಲ್ಲ ಮಂದಿ ಅಧ್ಯಾತ್ಮದ ತಳಹದಿಯೆನಿಸಿದ ‘ಶಾಂತಿ’ಯನ್ನು ತಲುಪಿದ್ದೇವೆ. ಒಮ್ಮೆ ಇದು ಆರಂಭವಾಗಿ, ಜಗತ್ತಿನೆಲ್ಲೆಡೆಗೆ ತಲುಪಿದಾಗ, ಅದು ‘ಶಾಂತಿ‘ಯ ಆಚೆಗಿನ ಸ್ಥಿತಿಗೆ ಕೊಂಡೊಯ್ಯುತ್ತದೆ. ಇದುವರೆಗೆ ‘ಶಾಂತಿ’ಗೆ ಮುಂಚಿನ ಸ್ಥಿತಿ ಏನೆಂಬುದು ಬಹುತೇಕ ನಮಗೆ ಗೊತ್ತು, ಆದರೆ ಶಾಂತಿಯ ಆಚೆಗಿನ ಸ್ಥಿತಿಯೇನೆಂಬುದು ಬೆರಳೆಣಿಕೆಯಷ್ಟು ಜನರಿಗೂ ಗೊತ್ತಿಲ್ಲ. ದಿನಗಳೆದಂತೆ ನನ್ನ ಕೆಲಸ ಅತ್ಯಂತ ಸುಲಭವೆನಿಸುತ್ತಿದೆ ; ಕಾರಣ, ಪ್ರಸ್ತುತ, ದೈವಸಂಕಲ್ಪವೇ ಆ ರೀತಿ ಇದೆ. ಬಹುತೇಕ ಪ್ರತಿಯೋರ್ವನೂ ಶಾಂತಿಯನ್ನು ಬಯಸುತ್ತಾನೆ. ಮತ್ತು, ಆ ಶಾಂತಿಯು ತನ್ನ ಅಂತಿಮ ಹಂತದಲ್ಲಿ “ಸತ್ಯಸ್ಥಿತಿ’ಯಲ್ಲಿ ಪ್ರವೇಶಿಸುತ್ತದೆ. ನಮ್ಮ ಪ್ರಶಿಕ್ಷಕರು (Preceptors) ಜನರ ಸರ್ವತೋಮುಖ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಕೆಲಸಮಾಡಿದರೆ, ಒಂದಿಲ್ಲೊಂದು ದಿನ ಅಧ್ಯಾತ್ಮವು ನಮ್ಮೆಲ್ಲರನ್ನು ಬೆಂಬತ್ತಿ ಬರುವುದೆಂಬುದು ನನ್ನ ಹಾರೈಕೆ. ನಾನಾದರೋ ವಯಸ್ಸಿನ ಭಾರದಿಂದ ಜರ್ಜರಿತನಾಗಿ, ತುಂಬ ಕ್ಷೀಣಬಲನಾಗಿದ್ದೇನೆ. ಆದರೂ ಸಹ ಮಾನವಕೋಟಿಗೆ ನಿಜವಾದ ಶಾಂತಿಯನ್ನು ತಂದುಕೊಡಲು ಯಥಾಸಾಧ್ಯ ದುಡಿಯುತ್ತಿದ್ದೇನೆ. ಯೋಗ್ಯ ವ್ಯಕ್ತಿಗಳು ಮುಂದೆ ಬಂದು, ಮುಂದಿನ ಮಹತ್ಕಾರ್ಯದಲ್ಲಿ ನನಗೆ ನೆರವಾಗಬೇಕೆಂದು ಬಯಸುತ್ತೇನೆ. ಜಗತ್ತು ಸುಖಧಾಮವಾಗುವುದರಲ್ಲಿ ಸಂಶಯವಿಲ್ಲ ; ಆದರೆ ಅದಕ್ಕೆ ನಾವು ಬಹಳಷ್ಟು ದುಡಿಯಬೇಕು. ನಾವು ಮಾಡಬೇಕಾದುದಿಷ್ಟೆ : “ದೈವತ್ವವನ್ನು ಬಲವಾಗಿ ಹಿಡಿದುಕೊಳ್ಳಬೇಕು.” ಈ ದಿಶೆಯಲ್ಲಿ, ನಾನೆಂದೂ ನಿರಾಶನಾಗದೆ ಒಬ್ಬಂಟಿಯಾಗಿಯೇ ದುಡಿದೆ. ಇಂದು ಅದರ ಫಲ ನಮ್ಮೆದುರಿಗಿದೆ. ನನ್ನ ಗುರುಗಳ ಅಭಯಹಸ್ತ ನನ್ನ ಬೆಂಗಾವಲಿಗಿದ್ದು, ನನಗೆ ನನ್ನಲ್ಲಿ ಸಂಪೂರ್ಣ ಆತ್ಮವಿಶ್ವಾಸವಿದೆ. ಅದು ಎಂದೆಂದಿಗೂ ಕಾರ್ಯಸಫಲವಾಗಿದೆ. ಅದನ್ನೇ ನಾನು ನಿಮ್ಮೆಲ್ಲರಿಂದ ಬಯಸುತ್ತೇನೆ.
ಕೊನೆಯದಾಗಿ, ಪ್ರೇಮವು ಎಲ್ಲ ಕಾರ್ಯಗಳನ್ನು ಸುಲಭಗೊಳಿಸಿ, ಅಂತಿಮಗುರಿಯ ಮಾರ್ಗವನ್ನು ಸುಗಮಗೊಳಿಸಲು ಬೇಕಾದ ಸದ್ಗುರುವಿನ ಕೃಪಾವರ್ಷಕ್ಕೆ ದಾರಿ ಮಾಡಿಕೊಡುತ್ತದೆ. ಸಾಕ್ರೆಟಿಸ್‌ನ ಪ್ರಕಾರ, ದೈವೀ ಸೌಂದರ್ಯವನ್ನು ಪಡೆಯಲು ತವಕಿಸುವ ಮಾನವ ಚೇತನದ ಹಸಿವೆಯೇ ಪ್ರೇಮ.” ನನ್ನ ಪ್ರಕಾರ “ಸತ್ಯವನ್ನು ಕುರಿತಾದ ಆಂತರಂಗಿಕ ಜಾಗೃತಿಯೇ ಪ್ರೇಮ.” ಯಾರು ಎಲ್ಲರನ್ನೂ ಪ್ರೀತಿಸುತ್ತಾನೋ ಅವನನ್ನು ಪ್ರೀತಿಸಿರಿ. ಅಂದರೆ, ತಂತಾನೆಯೇ ಅವನ ಮೂಲಕ ಪ್ರತಿಯೊಬ್ಬರನ್ನೂ ಪ್ರೀತಿಸಿದಂತಾಗುತ್ತದೆ. ತಥಾಸ್ತು.