ನಮ್ಮ ಗುರುಗಳು ಷಾಹಜಹಾನಪುರದ ಈ ಆಶ್ರಮವನ್ನು ಸಹಜಮಾರ್ಗದ ಜನ್ಮಸ್ಥಳವೆಂದು ಕರೆದರು ಹಾಗೂ ತಮ್ಮ ಸಮರ್ಥ ಸದ್ಗುರುವಿನ ಸ್ಮರಣಾರ್ಥ ಅದನ್ನು ಅವರಿಗೆ ಅರ್ಪಿಸಿದರು. ಈಗ, ಇದು ನಮ್ಮ ಗುರುಗಳ ಶಾಶ್ವತ ವಿಶ್ರಾಂತಿಸ್ಥಾನವೂ ಆಗಿದೆ.
ಈ ಸ್ಥಾನವನ್ನು ಆಧ್ಯಾತ್ಮಿಕ ಶಕ್ತಿಯಿಂದ ತುಂಬಲಾಗಿದೆ, ಹಾಗೂ ಅದು ಸಾವಿರಾರು ವರ್ಷಗಳ ಕಾಲ ಹಾಗೆಯೇ ಉಳಿಯುವುದೆಂದು ನಮ್ಮಲ್ಲಿ ಅನೇಕರಿಗೆ ಗುರುಗಳು ಹೇಳಿದ್ದಾರೆ. ಅದೇ ಗುರುಗಳ ಜೀವಿತ ಕಾಲದಲ್ಲಿ ತಾವು ಅವರಿಗೆ ಬಹಳ ಸಮೀಪದವರಾಗಿದ್ದೇವೆಂದು ಹೇಳಿಕೊಳ್ಳುವ ನಮ್ಮಲ್ಲಿಯ ಕೆಲವರು, “ಕಟ್ಟಡಗಳು, ಆಶ್ರಮ ಇವೆಲ್ಲ ಬರಿಯ ಇಟ್ಟಿಗೆ-ಗಾರೆಗಳೆಂದು ಹಾಗೂ ಈ ಪವಿತ್ರ ಸ್ಥಳ ಮತ್ತು ನಮ್ಮ ಗುರುಗಳ ಮರಣ ಹಾಗೂ ಅವಶೇಷಗಳು ಇತ್ಯಾದಿಗಳಿಗೆ ಯಾವುದೇ ಮಹತ್ವವಿಲ್ಲ”, ಎಂದೆನ್ನುವ ವಕ್ರ ಬುದ್ಧಿಯ ವಿಚಾರಗಳ ಪ್ರಚಾರ ಮಾಡುತ್ತ ಅಧ್ಯಾತ್ಮದ ಪ್ರಾಮಾಣಿಕ ಜಿಜ್ಞಾಸುಗಳಿಗೆ ದಾರಿ ತಪ್ಪಿಸಲು ಪ್ರಯತ್ನಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಇಂತಹ ಪ್ರಚಾರವು ಅವರ ಸ್ವಪ್ರಾಧಾನ್ಯ ಮತ್ತು ಸ್ವಾರ್ಥವನ್ನು ಆಧರಿಸಿವೆ ಎಂಬುದು ಸ್ಪಷ್ಟ. ನಿಜವಾಗಿ ಸತ್ಯವು ಬಹಳ ಕಾಲ ವಿರೂಪಗೊಂಡದ್ದಾಗಿ ಇರಲಾರದು. ಜನರು ಇದನ್ನು ತಮ್ಮ ಕಣ್ಣುಗಳಿಂದಲೇ ಕಾಣಬಯಸುತ್ತಾರೆ.
ಹೀಗೆ ತಪ್ಪು ಮಾರ್ಗದರ್ಶನಕ್ಕೊಳಗಾದ ಜನರಿಗೆ ನಮ್ಮ ಗುರುಗಳ ಮಾರ್ಗವನ್ನು ಅನುಸರಿಸಲು ಹಾಗೂ ಸಹಜಮಾರ್ಗದ ಹತ್ತು ನಿಯಮಗಳಿಗೆ ಅನುಸಾರವಾಗಿ ತಮ್ಮ ವಿಚಾರ, ಮಾತು ಮತ್ತು ಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಹಾಗೂ ನಿಯಮಿತಗೊಳಿಸಿಕೊಳ್ಳುವ ಮೂಲಕ ಸತ್ಯವನ್ನು ಶೀಘ್ರವಾಗಿ ಕಾಣಲು ಸಹಾಯ ಮಾಡುವುದು ಈಗ ನಮ್ಮ ಕರ್ತವ್ಯವಾಗಿದೆ.
ಈ ಆಶ್ರಮದಿಂದ ಗರಿಷ್ಠ ಮಟ್ಟದ ಆಧ್ಯಾತ್ಮಿಕ ಲಾಭ ಹೊಂದಲು ಹಾಗೂ ಅವರ ತತ್ತ್ವ ಪ್ರಣಾಲಿಯನ್ನು ಕಾರ್ಯಗತಗೊಳಿಸಲು ನಮ್ಮಲ್ಲಿ * ಪ್ರತಿಯೊಬ್ಬನೂ ಈ ಕೆಳಗಿನವುಗಳನ್ನು ಅನುಸರಿಸಬೇಕೆಂದು ನಾನು ನಂಬುತ್ತೇನೆ.
1. ನಮ್ಮ ಪೂಜ್ಯ ಗುರು ಮಹಾರಾಜರು ಹಾಕಿಕೊಟ್ಟಂತಹ ಹಾಗೂ ವ್ಯವಸ್ಥಾಪಕ ಮಂಡಲಿಯು ಅದಕ್ಕೆ ನೀಡಿದ ಅರ್ಥವಿವರಣೆಗೆ ಅನುಸಾರವಾಗಿ ಆಶ್ರಮದ ನಿಯಮಗಳನ್ನು ಪಾಲಿಸಿರಿ; ಮತ್ತು ಗುರುವಿನ ಏಕಮಾತ್ರ ವಿಚಾರದಲ್ಲಿ ಮುಳುಗಿ ಬಿಡಲು ಪ್ರಯತ್ನಿಸಿರಿ.
2. ಅವರ ಸಮಾಧಿಯ ಮುಂದೆ ಕುಳಿತು ಧ್ಯಾನ ಮಾಡುವ ಮೂಲಕ ಪೂಜ್ಯ ಬಾಬೂಜಿ ಮಹಾರಾಜರಿಗೆ ಶಾಂತಿಭಂಗ ಮಾಡಬೇಡಿರಿ. ಆದರೂ ಈ ಅತ್ಯಂತ ಪವಿತ್ರ ಸ್ಥಳದಲ್ಲಿ ನಿಮಗೆ ಬೇಕಾದಲ್ಲಿ ಕುಳಿತು ಧ್ಯಾನ ಮಾಡಲು ನೀವು ಮುಕ್ತರಿದ್ದೀರಿ ಎಂಬುದು ಸರಿಯೆ. ನಿಮ್ಮ ಮನಸ್ಸಿಗೆ ಬಂದಂತೆ ಅತಿಯಾಗಿ ಧ್ಯಾನ ಮಾಡಬೇಡಿರಿ, ಆದರೆ ಪ್ರಶಿಕ್ಷಕರ ಮಾರ್ಗದರ್ಶನ ಪಡೆಯಿರಿ.
3. ಗುರುಗಳ ಸಮಾಧಿಗೆ ಹೋಗಿ ಭೇಟಿ ಕೊಡುವ ಇಚ್ಛೆಯನ್ನು ಪೂರ್ತಿಗೊಳಿಸುವುದಕ್ಕೋಸ್ಕರ, ಹೃದಯದಿಂದ ಎಲ್ಲ ಇಚ್ಛೆಗಳನ್ನು ಕಿತ್ತೊಗೆಯಬೇಕೆಂದು ಉಪದೇಶಿಸಲಾಗಿದೆ; ಹಾಗೂ ಆ ಸ್ಥಳಕ್ಕೆ ತಲುಪಿದ ನಂತರ ಸಹಜಮಾರ್ಗದ ಪ್ರಾರ್ಥನೆಯನ್ನು ಒಂದೆರಡು ಸಲ ಪುನರುಚ್ಚರಿಸಿ, ಗುರುಗಳ ಈ ಸಂಸ್ಥೆಯನ್ನು ಮಹಾ ಯಶಸ್ಸು ಮತ್ತು ಭವ್ಯತೆಗಳೊಂದಿಗೆ ಮುನ್ನಡೆಸುವ ದೃಢ ನಿರ್ಧಾರ ಮಾಡಿರಿ; ಹಾಗೂ ಗುರುಗಳು ನಿಮ್ಮನ್ನು ಸ್ವೀಕರಿಸಿದ್ದಾರೆ ಎಂಬ ಭಾವನೆಯಿಂದ ಮುಂದೆ ಸಾಗಿರಿ.
ನಮ್ಮೆಲ್ಲರನ್ನೂ ಗುರುಗಳು ಆಶೀರ್ವದಿಸಲಿ.
[ಸಹಜಮಾರ್ಗ ಪತ್ರಿಕೆ, ನಂ. 2, ಎಪ್ರಿಲ್ 1989]