ಮಾನವನ ಹಾಗೂ ಜಗತ್ತಿನ ಸೃಷ್ಟಿಕರ್ತನಾದ ಸರ್ವಶಕ್ತ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಜಗತ್ತಿನ ಎಲ್ಲ ಧರ್ಮಗಳೂ ಪ್ರೋತ್ಸಾಹಿಸುತ್ತವೆ. ಮಾನವನು ಮೂಲಭೂತವಾಗಿ ‘ದಿವ್ಯ’ನಾಗಿರುವನೆಂದೂ ಕೂಡ ಅವು ಹೇಳುತ್ತವೆ; ಆದರೆ ನಾವು ನಮ್ಮ ನೈಜ ಸ್ವರೂಪವನ್ನು ಮರೆತಂತೆ ಕಾಣುತ್ತದೆ. ನಾವು ನಮ್ಮ ಅಸಾಮರ್ಥ್ಯವನ್ನು, ಹತಾಶೆಯನ್ನು ಹಾಗೂ ಎಂದೆಂದಿಗೂ ಕೊನೆಗೊಳ್ಳದ ಅಸಂತುಷ್ಟಿಯನ್ನು ಪ್ರತ್ಯಕ್ಷ ಅನುಭವಿಸುತ್ತೇವೆ. ಸಹಾಯಕ್ಕಾಗಿ ಮಾಡಲಾಗುವ ಮಾನವಕುಲದ ಸುಪ್ತ (ಅರಿವಿರದ) ಆಕ್ರಂದನವು ಅನೇಕ ಧರ್ಮಗಳನ್ನು ಅಸ್ತಿತ್ವದಲ್ಲಿ ತಂದಿದೆ.

ತಮ್ಮ ಪೂಜ್ಯ ಗುರುಗಳಾದ ಫತೇಹಗಡದ (ಉ.ಪ) ಮಹಾತ್ಮಾ ಶ್ರೀ ರಾಮಚಂದ್ರಜಿ ಮಹಾರಾಜರ ಹೆಸರಿನಲ್ಲಿ, ಷಾಹಜಹಾನಪುರದ (ಉ.ಪ) ಶ್ರೀ ರಾಮಚಂದ್ರಜಿಯವರು, ಶ್ರೀ ರಾಮಚಂದ್ರ ಮಿಷನ್‌ನ್ನು 1945 ರಲ್ಲಿ ಸ್ಥಾಪಿಸಿದರು. ಪ್ರಾಮಾಣಿಕ ಸತ್ಯಾನ್ವೇಷಿಗಳಿಗೆ ಒಂದು ವ್ಯವಸ್ಥಿತ ಹಾಗೂ ಸುಸಂಘಟಿತ ರೀತಿಯಲ್ಲಿ ಈ ಸಂಸ್ಥೆಯು ಸಹಾಯ ಮಾಡುತ್ತದೆ. ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ರಾಮಚಂದ್ರಜಿ ‘ಸಹಜಮಾರ್ಗ’ ಎಂದು ಕರೆಯಲ್ಪಡುವ ಆಧ್ಯಾತ್ಮಿಕ ತರಬೇತಿಯ ಒಂದು ಪದ್ಧತಿಯನ್ನು ಅಭಿವೃದ್ಧಿಗೊಳಿಸಿದರು. ಯಾರಾದರೂ ಧ್ಯಾನವನ್ನು ಅಭ್ಯಾಸ ಮಾಡಬೇಕೆಂದು ಬಯಸಿದರೆ, ಅವರು ಅತ್ಯಂತ ಶುದ್ಧ ಚಿಚ್ಛಕ್ತಿಯ ಪ್ರಾಣಾಹುತಿಯ ಮೂಲಕ ನಮಗೆ ಸಹಾಯ ಮಾಡುತ್ತಾರೆ. ಅಂತಹ ಅನೇಕ ಅಭ್ಯಾಸಿಗಳು ಈ ಸಹಜಮಾರ್ಗ’ ಪದ್ದತಿಯಿಂದ ಬಹಳ ಪ್ರಯೋಜನ ಹೊಂದಿದ್ದಾರೆ. ‘ಸಹಜಮಾರ್ಗ’ವು ರಾಜಯೋಗದ ಸುಧಾರಿತ ವಿಧಾನ ಅಥವಾ ಧ್ಯಾನಾಭ್ಯಾಸವಾಗಿದ್ದು ಒಬ್ಬನ ಪ್ರಾಪಂಚಿಕ ಸ್ಥಾನಮಾನ ಏನೇ ಇದ್ದರೂ, ಪ್ರತಿಯೊಬ್ಬ ಮಾನವನ ಆವಶ್ಯಕತೆಗೆ ಹೊಂದುವಂತೆ ಉಂಟು. ಗುರುಗಳು ಅನೇಕ ಜನ ಪ್ರಶಿಕ್ಷಕರನ್ನು ಸಿದ್ಧಗೊಳಿಸಿದ್ದಾರೆ; ಈ ಪ್ರಶಿಕ್ಷಕರು ಪ್ರಾಣಾಹುತಿಯ ಮೂಲಕ ಧ್ಯಾನಾಭ್ಯಾಸದಲ್ಲಿ ಸಹಾಯ ಮಾಡುತ್ತಾರೆ.

ಭಾರತದ ಉ.ಪ್ರ.ದಲ್ಲಿರುವ ಷಾಹಜಹಾನಪುರದಲ್ಲಿ ಕೇಂದ್ರ ಕಾರ್ಯಸ್ಥಳವನ್ನು ಹೊಂದಿದ ಶ್ರೀ ರಾಮಚಂದ್ರ ಮಿಷನ್ ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಅನೇಕ ಕೇಂದ್ರಗಳನ್ನು ಹೊಂದಿದೆ. ಈ ಕೇಂದ್ರಗಳು ತರಬೇತಿ ಹೊಂದಿದ ಪ್ರಶಿಕ್ಷಕರ ಅಧೀನದಲ್ಲಿ ಕಾರ್ಯ ನಿರ್ವಹಿಸುವುವು. ಧ್ಯಾನಾಭ್ಯಾಸ ಮಾಡುತ್ತಿರುವ ಅಭ್ಯಾಸಿಗಳಿಗೆ ಪ್ರಾಣಾಹುತಿಯ ಮೂಲಕ ಪ್ರಶಿಕ್ಷಕರು ಸಹಾಯ ಮಾಡುತ್ತಿದ್ದಾರೆ. ಈ ಕೇಂದ್ರಗಳಿಂದ ಅನೇಕ ಪ್ರಾಮಾಣಿಕ ಜಿಜ್ಞಾಸುಗಳು ಪ್ರಯೋಜನ ಪಡೆಯುತ್ತಿದ್ದಾರೆ. ಮಾನವ ಕುಲವು ತನ್ನ ದೈವೀ ಸ್ವರೂಪವನ್ನು ಸಿದ್ಧಿಸಿಕೊಳ್ಳುವಷ್ಟು ವಿಕಾಸವಾಗುವುದು ಕಟ್ಟಿಟ್ಟದ್ದು.

ಸಹಜಮಾರ್ಗವು ಕ್ರಮಬದ್ಧ ಧ್ಯಾನಾಭ್ಯಾಸಕ್ಕೆ ನಮಗೆ ನಿಮಂತ್ರಣ ನೀಡುವುದು ಹಾಗೂ ಪ್ರಾಣಾಹುತಿಯ ಮೂಲಕ ನಮಗೆ ತರಬೇತಿ ಕೊಡುವ ಆಶ್ವಾಸನೆಯನ್ನೀಯುವುದು, ಸಹಜಮಾರ್ಗವು ನಮಗೆ ಒಂದು ಸರಳ, ಸ್ವಾಭಾವಿಕ ಅಭ್ಯಾಸ ವಿಧಾನವನ್ನೀಯುತ್ತದೆ. ಒತ್ತಾಯದ, ಕಠೋರ ಶಾರೀರಿಕ ಅಭ್ಯಾಸಗಳಿಂದ ಮುಕ್ತವಾಗಿದೆ. ತೀವ್ರತರವಾದ ಕಾಲ್ಪನಿಕ ಅಭ್ಯಾಸವನ್ನಾಗಲಿ ಅಥವಾ ಶಾರೀರಿಕ ಕಠಿಣ ಆಸನಗಳನ್ನು, ಅಂಗ ವಿನ್ಯಾಸಗಳನ್ನು ರೂಢಿಸಿಕೊಳ್ಳುವ ಅಭ್ಯಾಸವನ್ನಾಗಲಿ ಅದು ಪ್ರತಿಪಾದಿಸುವುದಿಲ್ಲ. ಮಾನವನ ಮನಸ್ಸಿನ ಅನಿಯಂತ್ರಿತ ಚಟುವಟಿಕೆಗಳನ್ನು, ಕ್ರಮಬದ್ಧಗೊಳಿಸಲು, ಶುದ್ಧಗೊಳಿಸಲ್ಪಟ್ಟ, ಸಂತುಲಿತ ಸ್ಥಿತಿಯಲ್ಲಿರುವ ಮನಸ್ಸಿನಿಂದ, ಅರ್ಥಾತ್ ದೈವೀ ಮನಸ್ಸಿನಿಂದಾಗುವ ಪ್ರಾಣಾಹುತಿಯ ಸಹಾಯದಿಂದ, ಚಿಂತನ ಅಥವಾ ಧ್ಯಾನಾಭ್ಯಾಸ ಮಾಡುವ ಪದ್ಧತಿ ಇದಾಗಿದೆ. ಈ ಅಭ್ಯಾಸವನ್ನು ಕೈಗೊಂಡ ಅನೇಕ ಜನರು ಅದರಿಂದಾಗುವ ಲಾಭಗಳ ಅನುಭೂತಿ ಪಡೆದಿದ್ದಾರೆ ಹಾಗೂ ತಮ್ಮ ಜೀವನವು ಹಗುರವೂ ಉದಾತ್ತವೂ ಆಗಿ, ಎಲ್ಲ ಬಗೆಯ ಜಡತೆ ಹಾಗೂ ಆಂತರಿಕ ಒತ್ತಡಗಳಿಂದ ತಾವು ಮುಕ್ತರಾಗಿದ್ದೇವೆ ಎಂಬುದನ್ನು ಕಂಡುಕೊಂಡಿದ್ದಾರೆ.

‘ಸಹಜಮಾರ್ಗ’ ಸಾಧನಾಕ್ರಮದಲ್ಲಿ ಧ್ಯಾನದ ವಿಧಾನವು ಬಹಳ ಸರಳವಾಗಿದೆ. ಪ್ರಾರಂಭಿಕ ಅಭ್ಯಾಸಿಗಳಿಗೆ ಮುಂಜಾನೆಯ ಧ್ಯಾನಕ್ಕಾಗಿ ಅರ್ಧ ಗಂಟೆಯ ಅಭ್ಯಾಸ, ಸಾಯಂಕಾಲ ಶುದ್ದೀಕರಣಕ್ಕೆ ಅರ್ಧ ತಾಸು ಹಾಗೂ ಮಲಗುವ ಮುನ್ನ ಪ್ರಾರ್ಥನೆಗಾಗಿ ಕೆಲವು ನಿಮಿಷಗಳ ಅಭ್ಯಾಸದ ಆವಶ್ಯಕತೆಯಿದೆ. ಯಾವುದೇ ಪ್ರಶಿಕ್ಷಕನು ಧ್ಯಾನದ ಪದ್ಧತಿ ಹಾಗೂ ಅದರ ಸರಿಯಾದ ಅಭ್ಯಾಸದ ಬಗ್ಗೆ ವಿವರಿಸಬಲ್ಲನು.

ಈ ಧ್ಯಾನದ ಪದ್ಧತಿಗೆ ‘ಸಹಜಮಾರ್ಗ’ ಎಂದು ಕರೆಯಲಾಗಿದೆ. ಅದು ಅತ್ಯಂತ ಸರಳ ಸೂತ್ರಗಳ ಅನುಸಾರ ನಡೆಯುತ್ತದೆ. ಹೃದಯದಲ್ಲಿ ದೈವೀ ಪ್ರಕಾಶವಿದೆ ಎಂದು ಭಾವಿಸುವ ಒಂದು ಸರಳ ಅಭ್ಯಾಸವನ್ನು ಅದು ಒಳಗೊಂಡಿದೆ. ನಮ್ಮ ಹೃದಯದಲ್ಲಿ ದೈವೀ ಪ್ರಕಾಶವಿರುವುದೆಂಬ ಭಾವನೆಯು ನಮ್ಮ ನೈಜ ‘ಸ್ವ-ಭಾವ’ವನ್ನು ಮನಗಾಣಲು ಸಹಾಯ ಮಾಡುತ್ತದೆ. ಆ ಭಾವನೆಯು ಯಾವುದೇ ಪ್ರಕಾಶದ ದರ್ಶನ ಪಡೆಯುವ ಕಲ್ಪನೆ ಅಥವಾ ಮಾನಸಿಕ ಹೆಣಗಾಟವಿಲ್ಲದಿರಬೇಕು. ಈ ಧ್ಯಾನವು ಸ್ವಾಭಾವಿಕವಾದುದಾಗಿದೆ. ಅದು ಶಾಂತಿ ಹಾಗೂ ಸಮಾಧಾನವನ್ನು ಉಂಟು ಮಾಡುವುದು. ಹೀಗೆ, ಪ್ರಕಾಶವನ್ನು ಕಾಣಲು ಒತ್ತಾಯದ ಪ್ರಯತ್ನ ಮಾಡಬಾರದು. ಇಲ್ಲವಾದರೆ ಧ್ಯಾನವು ಪ್ರಕಾಶದ ಕೃತ್ರಿಮ ದೃಶ್ಯದೊಂದಿಗೆ, ಬಾಹ್ಯ ಸ್ತರದ್ದಾಗಿ ನಾಮ ಮಾತ್ರದ್ದಾಗಿ ಬಿಡುವುದು.

ಮನುಕುಲದಲ್ಲಿ ಮಹಾ ಬೋಧಕರು, ಆಚಾರ್ಯರು ಮತ್ತು ಸಂತರು ಆಗಿ ಹೋಗಿದ್ದಾರೆಂಬುದೇನೋ ನಿಃಸಂದೇಹ. ಆದರೆ ಅವರ ಬೋಧನೆಗಳು ಕ್ರಿಯಾಶೀಲ ಪ್ರೇರಕಗಳಾಗಿ ಉಳಿದಿಲ್ಲ. ಅವರ ಬೋಧನೆಗಳು ನಿಂತ ನೀರಿನಂತಾಗಿ ಸ್ಥಗಿತವಾದವು ಮತ್ತು ಅವರ ಬೋಧನೆಗಳ ಅಂತಃಸತ್ತ್ವದ ಮೇಲೆ ಸ್ಥೂಲತೆಯ ಆವರಣಗಳು ಮುಸುಕಿದವು. ತತ್‌ಪರಿಣಾಮವಾಗಿ, ಇಂದಿನ ಕಾಲದ ಮತಧರ್ಮಗಳು ತಮ್ಮ ನಿಷ್ಠುರ ಮತಾಂಧ ಸಿದ್ಧಾಂತಗಳು, ಕರ್ಮಾಚರಣೆಗಳು ಮತ್ತು ಪೂರ್ವಕಲ್ಪಿತ ದುರಾಗ್ರಹಗಳಿಂದಾಗಿ, ಜನರ ಮನಸ್ಸಿನಲ್ಲಿ ಮತಧರ್ಮಗಳ ಬಗ್ಗೆ ಜುಗುಪ್ಪೆಯನ್ನುಂಟು ಮಾಡಿವೆ. ಬಹುತೇಕ ಎಲ್ಲ ಜನರೂ ಇಂದಿನ ಮತಧರ್ಮಗಳ ಸ್ವರೂಪದಲ್ಲಿ ತಮ್ಮ ಶ್ರದ್ಧೆಯನ್ನು ಕಳೆದುಕೊಂಡಿರುವುದು ಆಶ್ಚರ್ಯವೇನಲ್ಲ.

ಪ್ರತಿಯೊಬ್ಬ ಪ್ರಾಮಾಣಿಕ ಸತ್ಯಾನ್ವೇಷಿಗೆ ದೈವೀ ಚೈತನ್ಯದ ಪ್ರಾಣಾಹುತಿ ಲಭ್ಯವಾಗದಿರುವುದೇ ಮತಧರ್ಮಗಳ ಅಧಃಪತನ ಮತ್ತು ಅವನತಿಗೆ ಕಾರಣವಾಯಿತೆಂಬುದು ನನ್ನ ನಂಬುಗೆ, ಈಗ ಪೂಜ್ಯ ಗುರುಗಳ ಸಂಶೋಧನೆಗಳಿಂದಾಗಿ, ಪ್ರಾಣಾಹುತಿಯು ಬೇಕೆಂದು ಬಯಸುವ ಪ್ರತಿಯೊಬ್ಬರಿಗೂ ಸುಲಭವಾಗಿ ಲಭ್ಯವಾಗಿದೆ.

ಮಾನವನು ಪ್ರಾಣಿಗಳಿಗಿಂತಲೂ ಶ್ರೇಷ್ಠನೆಂದಾಗಿರುವುದು, ಅವನು ಚಿಂತನ ಸಾಮರ್ಥ್ಯ ಹಾಗೂ ಚಿತ್ ಶಕ್ತಿಯನ್ನು ಹೊಂದಿರುವನೆಂಬ ಕಾರಣದಿಂದಲೇ. ಆ ಶ್ರೇಷ್ಠ ಚಿಂತನ ಸಾಮರ್ಥ್ಯವಿಲ್ಲದೆ ಹೋಗಿದ್ದರೆ ಹೋಗಿದ್ದರೆ ಅವನು ಬೇರೆ ಯಾವುದೇ ಪ್ರಾಣಿಯಂತೆಯೇ ಆಗಿರುತ್ತಿದ್ದನು. ಇನ್ನೂ ಶ್ರೇಷ್ಠತರ ಹಾಗೂ ಹೆಚ್ಚು ಉದಾತ್ತ ಸ್ಥಿತಿಗಳಲ್ಲಿ ಬೆಳೆಯಲು ಉಪಯೋಗಿಸುವ ಬದಲಿಗೆ, ನಾವು ನಮ್ಮ ಚಿಂತನ ಶಕ್ತಿಯನ್ನು (ಚಿತ್ ಶಕ್ತಿ ಅರ್ಥಾತ್ ಸಂಕಲ್ಪ ಶಕ್ತಿಯನ್ನು) ನಮ್ಮ ಪಾಶವೀ ಆವಶ್ಯಕತೆಗಳನ್ನು ಉದ್ರೇಕಿಸಲು ಬಳಸುತ್ತೇವೆ ಹಾಗೂ ಇಂದ್ರಿಯ ಸುಖಗಳನ್ನು ತೃಪ್ತಿಪಡಿಸಲು ಇಚ್ಛೆಗಳನ್ನು ಬೆಳೆಸಿಕೊಳ್ಳುತ್ತೇವೆ. ನಮ್ಮ ಇಚ್ಛೆಗಳನ್ನು ತೃಪ್ತಿಗೊಳಿಸಲು ನಾವು ಅಶಕ್ತರೆಂಬುದು ಕಂಡುಬಂದಾಗ, ಕೆಲವು ಭ್ರಾಮಕ ಕಲ್ಪನೆಗಳಲ್ಲಿ ಅಥವಾ ಕನಸಿನ ರಾಜ್ಯದಲ್ಲಿ ವಿಹರಿಸುತ್ತೇವೆ; ಅದಲ್ಲದಿದ್ದರೆ, ನಾವು ಆಕ್ರಮಣಶೀಲರಾಗಿ, ಪರಸ್ಪರ ವಿನಾಶಕಾರಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗುತ್ತೇವೆ. ಇದೆಲ್ಲವೂ ಮನಸ್ಸಿನ ಅನಿಯಂತ್ರಿತ ಹಾಗೂ ಅಡ್ಡಾದಿಡ್ಡಿ ಚಟುವ ಟಿಕೆಗಳಿಂದ ಹಾಗೂ ಚಿ೦ತನ ಶಕ್ತಿಯ ದುರುಪಯೋಗದಿಂದಾಗುವುದು.

ನಮ್ಮ ಇಂದ್ರಿಯಸುಖಗಳತ್ತ ತಿರುಗಿಸಲ್ಪಟ್ಟ ಚಿಂತನಶಕ್ತಿಯ ಉಪಯೋಗದಿಂದ ನಾವು ನಮ್ಮ ಆಂತರಿಕ ಜಗತ್ತನ್ನು ಸೃಷ್ಟಿಸಿ, ನಮ್ಮ ಇಚ್ಛೆಗಳಿಂದ ಬಂಧಿತರಾಗಿ ಅವುಗಳ ಹಿಡಿತದಲ್ಲಿ ಸಿಕ್ಕಿಕೊಂಡಿರುವ ರೀತಿಯಲ್ಲಿಯೇ ಅದೇ ಚಿಂತನ ಶಕ್ತಿಯನ್ನು ಉಪಯೋಗಿಸಿ ನಮ್ಮಆಂತರಿಕ ಬಂಧನಗಳಿಂದ ಹೊಂದಬಹುದು ಹಾಗೂ ನಿಜವಾಗಿಯೂ ಸ್ವತಂತ್ರರಾಗಬಹುದು. ಇಂತಹ ಸ್ವಾತಂತ್ರ್ಯವನ್ನು ಸಾಧಿಸಿದ ಹಾಗೂ ಚಿಂತನಶಕ್ತಿಯ ಮೇಲೆ ಪ್ರಭುತ್ವವನ್ನು ಹೊಂದಿದ ಒಬ್ಬ ವ್ಯಕ್ತಿಯು ಪ್ರಾಣಾಹುತಿಯ ಮೂಲಕ ನಮಗೆ ಸಹಾಯ ಮಾಡಬಲ್ಲನು.

ಗುರುಗಳ ಪ್ರಾಣಾಹುತಿಯು ಹೃದಯದಲ್ಲಿ ದೈವೀ ಕಂಪನಗಳನ್ನು ಉಂಟುಮಾಡುತ್ತದೆ. ಈ ಕಂಪನವು ಕ್ರಮೇಣ ಶರೀರದ ಆದ್ಯಂತ ಪಸರಿಸುತ್ತ ಹೋಗುವುದು ಹಾಗೂ ಅಂತಿಮವಾಗಿ ನಾವು ದೈವೀ ಕಂಪನದೊಂದಿಗೆ ಶ್ರುತಿಗೊಳ್ಳುವೆವು. ಪ್ರಾಣಾಹುತಿಯು ನಮ್ಮ ಆಂತರಿಕ ಬಂಧನಗಳನ್ನು ದುರ್ಬಲಗೊಳಿಸುವುದು; ನಮ್ಮ ಆಂತರಿಕ ತೊಡಕುಗಳನ್ನು ಹಾಗೂ ಸ್ಥೂಲ ತೆಯನ್ನು ದೂರಮಾಡುವುದು ಮತ್ತು ಅಧ್ಯಾತ್ಮ ಲೋಕದ ಊರ್ಧ್ವದತ್ತ ಚಲಿಸುವಂತೆ ಅಥವಾ ಪ್ರಗತಿ ಹೊಂದುವಂತೆ ಮಾಡುವುದು.

ಈ ಪ್ರಕಾರ, ಸಹಜಮಾರ್ಗ ಪದ್ಧತಿಯಲ್ಲಿ ಮಾಡಲಾಗುವ ಧ್ಯಾನವು ಅದ್ವಿತೀಯವಾಗಿದೆ. ಅದನ್ನು ಸರಿಯಾಗಿ ಅನುಸರಿಸಿದರೆ, ಅತ್ಯಂತ ಅಲ್ಪಾವಧಿಯಲ್ಲಿ ಅತ್ಯುಚ್ಚ ಸಿದ್ಧಿಯನ್ನು ಪಡೆಯುವ ಭರವಸೆ ಕೊಡುತ್ತದೆ. ಪ್ರಾಣಾಹುತಿಯ ಪಾತ್ರದಿಂದಾಗಿ ಸಹಜಮಾರ್ಗ ಸಾಧನೆಯು ಸಮಸ್ತ ಮಾನವಕುಲಕ್ಕೆ ಒಂದು ಕ್ರಾಂತಿಕಾರಕ ಆವಿಷ್ಕಾರವಾಗಿದೆ. ಇಂದಿನ ಹಾಗೂ ಮುಂದಿನ ಮಾನವ ಜನಾಂಗ ಕೂಡ ಅದರ ಮೌಲ್ಯವತ್ತೆಯನ್ನು ಗುರುತಿಸುವ ಕಾಲ ದೂರವಿಲ್ಲ.

[ಸಹಜಮಾರ್ಗ ಪತ್ರಿಕೆ, ನಂ. 4, ಅಗಸ್ಟ್ 1989]

ವಾಸ್ತವವಾಗಿ, ಅಸ್ತಿತ್ವದ ಸಮಸ್ಯೆಯನ್ನು ಬಿಡಿಸಬಲ್ಲ ಸಾಧನವೆಂದರೆ ನಿಯಂತ್ರಿತ ಹಾಗೂ ಸಂತುಲಿತ ಸ್ಥಿತಿಯಲ್ಲಿರುವ ಮನಸೊಂದೇ.

– ಶ್ರೀ ಬಾಬೂಜಿ