(೩೦ ನೇ ಏಪ್ರಿಲ್ ೧೯೮೧, ಪೂಜ್ಯ ಬಾಬೂಜಿಯವರ ೮೨ ನೇ ಹುಟ್ಟುಹಬ್ಬದ ಸಮಾರಂಭದಲ್ಲಿ, ಮಲೇಶಿಯಾದಲ್ಲಿ ನೀಡಿದ ಸಂದೇಶ)
ಪ್ರಿಯ ಸೋದರ ಸೋದರಿಯರೆ,
ಸಾಮಾನ್ಯವಾಗಿ ಮಾನವನು ತನಗರಿವಿಲ್ಲದಂತೆಯೇ, ತಾನೇ ನಿರ್ಮಿಸಿಕೊಂಡಿರುವ ಪರಿಸರದ ಮೋಡಿಗೆ ಎಷ್ಟು ಒಳಗಾಗಿದ್ದಾನೆಂದರೆ, ಅವನು ಅದರೊಳಗಿಂದ ಮೇಲೆದ್ದು ಬರುವ ವಿಚಾರವನ್ನೇ ಮಾಡುವುದಿಲ್ಲ. ಆದರೆ ಅದು ಸಾಧ್ಯವಾಗುವಂತೆ ಮಾಡುವ ಬಗೆಯೆಂತು ? – ಇದನ್ನು ಕುರಿತು ಚಿಂತನೆ ಮಾಡಿದಾಗ, ನಾವು ನಮ್ಮೊಳಗೆ ವಿಚಾರಗಳ ಗುಂಪನ್ನೇ ಸೃಷ್ಟಿಸಿ, ಅವಕ್ಕೆ ಪ್ರಚೋದನೆಗಳ ಉಣಿಸನ್ನಿತ್ತು, ನಮ್ಮ ಮಸ್ತಿಷ್ಕದಲ್ಲಿ ಪೋಷಿಸಿ ಬೆಳೆಸುತ್ತಿರುವುದು ಗೊತ್ತಾಗುತ್ತದೆ. ಅಲ್ಲದೆ ಸುತ್ತಮುತ್ತಲಿಂದ ಬರುವಂಥ ಅಭಿಪ್ರಾಯಗಳೂ ಅವನ್ನೇ ನಮ್ಮ ಕಿವಿಗಳಲ್ಲಿ ಅನುರಣಿಸಿ, ಪರಿಸರದಿಂದುಂಟಾದ ಪರಿಣಾಮವನ್ನು ಮತ್ತಷ್ಟು ಗಾಢವಾಗಿಸುತ್ತವೆ. ಮನುಷ್ಯನ ಈ ಅಸಹಾಯಕತೆಯನ್ನೇ ಅವನ ಸ್ಥಿತಿಯ ಸಮರ್ಥನೆಯಾಗಿಯೂ ಗಣಿಸಬಹುದು. ಆದರೆ, ಅವೆಲ್ಲವೂ ನಮ್ಮ ಕೆಡುಕಿಗೆ ಕಾರಕಗಳೆಂಬುದು ಮನದಟ್ಟಾದರೆ, ಅದರರ್ಥ, ನಮ್ಮಲ್ಲಿ ಏನೋ ಬದಲಾವಣೆಯುಂಟಾಗಿದೆಯೆಂದೇ, ಎಂದು ನಾನು ಹೇಳುತ್ತೇನೆ. ಇದನ್ನು ವೈರಾಗ್ಯದ ಸ್ಥಿತಿಯತ್ತಣ ಮೊದಲ ಹೆಜ್ಜೆಯೆನ್ನಬಹುದು. ಮತ್ತು, ಆಗ ನಮ್ಮ ವಿಚಾರಧಾರೆಯು ಹೆಚ್ಚು ಉತ್ತಮವೂ, ಉದಾತ್ತವೂ ಆದುದರ ಕಡೆಗೆ ಹರಿಯತೊಡಗುತ್ತದೆ. ಏನೇ ಆಗಲಿ, ಅದನ್ನು ದೃಢವಾಗಿ ಹಿಡಿದು, ಅದಕ್ಕೇ ಅಂಟಿಕೊಂಡಿರುವುದು ನಮ್ಮ ಕರ್ತವ್ಯ. ಸಹಜಮಾರ್ಗ ಪದ್ಧತಿಯಲ್ಲಿ , ವೈರಾಗ್ಯವು, ತಂತಾನೇ ವೃದ್ಧಿಯಾಗುತ್ತ ಹೋಗುತ್ತದೆ.
>ನಮ್ಮ ಗುರುಗಳ ನೆನಪನ್ನು ನಿರಂತರವಾಗಿಟ್ಟುಕೊಂಡು, ಜೀವನದ ಗುರಿಗೆ ನಿಷ್ಠರಾಗಿ ಇದ್ದರೆ, ಆ ಗುರಿಯನ್ನು ನಾವು ಸುಲಭವಾಗಿ ಮುಟ್ಟಬಹುದು. ಅವರನ್ನು ಸಂತತ ಸ್ಮರಣೆಯಲ್ಲಿಟ್ಟುಕೊಳ್ಳಲು ವಿವಿಧ ರೀತಿಗಳಿವೆ. ಪರತತ್ವದ ಬಗೆಗಿನ ನಮ್ಮ ಭಕ್ತಿಯಿಂದ, ನಮ್ಮ ಮತ್ತು ಚರಮಗುರಿಯ ನಡುವೆ ಒಂದು ಕಾಲುವೆ ಏರ್ಪಟ್ಟು, ಅದು ನಮ್ಮನ್ನು ಅವನಲ್ಲಿಗೆ ಕೊಂಡೊಯ್ಯುವ ಮಾರ್ಗವಾಗಿ ಪರಿಣಮಿಸುತ್ತದೆ. ಮಾರ್ಗದಲ್ಲಿನ ಕೊಳಕು-ಕಲ್ಮಷಗಳನ್ನು ತೆಗೆದು ಹಸನುಗೊಳಿಸಿದರೆ, ಅದರ ಮೇಲೆ ಮುನ್ನಡೆಯಲು ಕಷ್ಟವಾಗದು. ನಮ್ಮ ಭಕ್ತಿಯ ಪ್ರಮಾಣಕ್ಕನುಗುಣವಾಗಿ, ದಾರಿಯು ಅಷ್ಟೇ ನಿಷ್ಕಲ್ಮಷವಾಗಿ, ಪರಿಶುದ್ಧವಾಗುತ್ತದೆ. ನೀವು ಆ ಪರತತ್ವದ ಧ್ಯಾನದಲ್ಲಿರುವಾಗ, ಹೃದಯದಿಂದ ಮುಂದಕ್ಕೆ ತಳ್ಳಿದಂಥ ಅನುಭವವನ್ನು ಪಡೆಯುವಿರಿ. ಅದಾಗುವುದು ನಿಮ್ಮನ್ನು ಮಾರ್ಗದಲ್ಲಿ ಮುನ್ನಡೆಯುವಂತೆ ಮಾಡುವುದಕ್ಕಾಗಿಯೇ. ದಾರಿಯಲ್ಲಿರುವ ಕೊಳಕು-ಕಲ್ಮಷಗಳೆಂದರೆ ನಮ್ಮಲ್ಲಿರುವ ಪರಸ್ಪರ ವಿರೋಧಿ, ಅಸಂಗತ ವಿಚಾರಗಳಲ್ಲದೆ ಬೇರಲ್ಲ. ಧ್ಯಾನದಲ್ಲಿ ನೀವು ಶಾಂತ ಮಗ್ನತೆಯನ್ನು ಅನುಭವಿಸಿದರೆ, ಅದು ತಾತ್ಕಾಲಿಕವಿದ್ದರೂ ಸರಿಯೆ, – ನೀವು ಮಾರ್ಗದಲ್ಲಿ ಮತ್ತೊಂದು ಹೆಜ್ಜೆ ಮುನ್ನಡೆದಿದ್ದೀರಿ ಎಂದರ್ಥ. ನೀವು ಈ ಮಾರ್ಗದಲ್ಲಿ ಮುಂದುವರಿಯುತ್ತಿದ್ದಂತೆ, ನಿಮ್ಮ ಅಸಂಗತ ವಿಚಾರಗಳು ಮಾಯವಾಗುವುದನ್ನು ಕಾಣುವಿರಿ. ನಿಮ್ಮ ಧ್ಯಾನದಲ್ಲಿ ಯಾವಾಗ ಆಂತರ್ಯದ ತೀರ ಒಳಮಜಲನ್ನು ಮುಟ್ಟಿ, ಧ್ಯಾನದ ಸ್ಥಿರಾವಸ್ಥೆಯನ್ನು ಹೊಂದುವಿರೋ, ಆಗ ಪರತತ್ವದ ಅಥವಾ ಭಗವಂತನ ಕಲ್ಪನೆಯು ನಿಮಗೆ ತೀರ ಹತ್ತಿರವಾಗುವುದು.
>ಪರತತ್ವವನ್ನು ತಲುಪುವ ಮಾರ್ಗವನ್ನು ಕುರಿತು ಹೇಳುವಾಗಲೆಲ್ಲಾ, ಸಂತರು ”ನೇತಿ, ನೇತಿ” ಎಂದಿದ್ದಾರೆ. ಹೀಗೆ ಹೇಳುವುದೇನೋ ಸೊಗಸಾಗಿ ಧ್ವನಿಸುತ್ತದೆ. ಆದರೆ ಅದನ್ನು ಪ್ರತ್ಯಕ್ಷ ಸಾಧಿಸಹೊರಟಾಗ ಕಷ್ಟಸಾಧ್ಯವೆನಿಸುತ್ತದೆ. ಏಕೆಂದರೆ, ನಮ್ಮಲ್ಲಿ ಅದನ್ನು ಸಾಧಿಸಲು ಬೇಕಾದ ತಕ್ಕ ಸಿದ್ಧತೆ ಇರುವುದಿಲ್ಲ. ‘ಅಹಂ’ ಪ್ರಜ್ಞೆ ಎತ್ತೆತ್ತಲೂ ಇರುತ್ತದೆ, ಆದರೂ, ನಮ್ಮ ಅಭ್ಯಾಸವನ್ನು ನಿಷ್ಠೆಯಿಂದ ಮಾಡಿದಾಗ ಅದೂ ಮಾಯವಾಗುತ್ತದೆ. ಎಲ್ಲರೂ ಸಾಮಾನ್ಯವಾಗಿ ‘ಅಹಂ’ನ್ನು ತಮ್ಮ ಶತ್ರುವೆಂದು ತಿಳಿಯುತ್ತಾರೆ. ಇದೊಂದು ತಪ್ಪು ಗ್ರಹಿಕೆ, ಅಷ್ಟಲ್ಲದೆ, ಇದು ನಕಾರಾತ್ಮಕ ಸಂಬಂಧ – ಅರ್ಥಾತ್, ದ್ವೇಷ, ಈ ದ್ವೇಷವು ‘ಅಹಂ’ಕಾರವನ್ನು ಮತ್ತಷ್ಟು ಬಲಪಡಿಸುತ್ತದೆ. ನಾವು ಅದರ ಬಗ್ಗೆ ಯೋಚಿಸಿದಾಗ, ನಮ್ಮ ಯೋಚನಾ ಶಕ್ತಿಯಿಂದಲೇ ಅದಕ್ಕೆ ಬಲಬರುತ್ತದೆ. ಅದನ್ನು ಕುರಿತಾದ ನಮ್ಮ ಏಕಾಗ್ರತೆಯೇ ಇದಕ್ಕೆ ಕಾರಣ, ‘ಅಹಂ’ನ್ನು ಮರೆಯಲು ಪ್ರಯತ್ನಿಸಿರಿ, ಅದರಿಂದ ಸಾಕಷ್ಟು ಒಳಿತಾಗುವುದು. ದೈವಿಕತೆಯು ಉದಯಿಸುತ್ತಿರುವಂತೆಯೇ, ಜೀವನದ ನಕಾರಾತ್ಮಕ ಪ್ರವೃತ್ತಿಯೂ ದೂರ ಸರಿಯುತ್ತದೆ. ಗತ ಜೀವನದ ಕರ್ಮಗಳನ್ನು ನಿಶ್ಯೇಷಗೊಳಿಸುವುದೂ ಸಹಜಮಾರ್ಗ’ದಲ್ಲಿ ಒಂದು ಅಧ್ಯಾಯ.
>ನಾವು ಗುರಿಯನ್ನು ಕುರಿತು ವಿಚಾರ ಮಾಡಿದಾಗ, ಅದನ್ನು ಸಾಧಿಸಬೇಕೆಂಬ ನಮ್ಮ ಹೆಬ್ಬಯಕೆಯು, ನಾವು ಕ್ರಮಿಸಬೇಕಾದ ದೂರದ ವ್ಯಾಪ್ತಿಯನ್ನು ನಮ್ಮ ದೃಷ್ಟಿಗೆ ತರುತ್ತದೆ ; ಏಕೆಂದರೆ ನಾವು ಆ ತರದ ಯೋಚನಾಕ್ರಮಕ್ಕೆ ಒಗ್ಗಿ ಹೋಗಿದ್ದೇವೆ. ಆರಂಭದಲ್ಲಿ, ನಾವು ಭೌತಿಕತೆಯ ಹಿಂದಿರುವ ಸ್ವರವನ್ನು ಪ್ರವೇಶಿಸುತ್ತೇವೆ, ಆದರೆ, ನಾವು ಮುಟ್ಟುವುದು ಒಂದು ಸ್ಥೂಲನೆಲೆಯೇ ಹೊರತು, ಸತ್ಯವನ್ನಲ್ಲ. ಶಬ್ದದ ಪ್ರತಿಧ್ವನಿಯು ಹೆಚ್ಚು ದೂರ ಕ್ರಮಿಸಿದಂತೆ ಕ್ಷೀಣವಾಗುತ್ತದೆ, ಕೊನೆಗೆ ಎಲ್ಲೆಡೆಯೂ ನೀರವತೆಯೇ ನೆಲೆಸುತ್ತದೆ. ಎಲ್ಲಿಂದ ನೀರವತೆಯು ಪ್ರಾರಂಭವಾಗುವುದೋ, ಆ ಜೀವನವನ್ನು ನಾವು ಪ್ರವೇಶಿಸಿದರೆ, ನಾವು ಉತ್ತಮ ಸ್ಥಿತಿಯನ್ನು ಪಡೆಯಬಹುದೆಂದು ನೆನಪಿಸಿಕೊಡಲು ಇದೊಂದು ಸುಳುವು ಎಂದು ನಾನು ನಂಬುತ್ತೇನೆ. ಆಳಕ್ಕೆ ಮುಳುಗಿದಾಗ ಮಾತ್ರ ನಾವು ಮುತ್ತುಗಳನ್ನೆತ್ತಿ ತರಲು ಸಾಧ್ಯ. ಅನನುಕೂಲವಾದವುಗಳನ್ನೇ ಅನುಕೂಲಕರವಾಗುವಂತೆ ಮಾರ್ಪಡಿಸಿಕೊಳ್ಳುವುದರಲ್ಲಿ ಮನುಷ್ಯನ ಜಾಣ್ಮ, ವಿವೇಕ ಅಡಗಿದೆ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ನಾವು ಇಡೀ ಭೌತಿಕ ಶಕ್ತಿಯನ್ನು ಆಧ್ಯಾತ್ಮವನ್ನಾಗಿ ಪರಿವರ್ತಿಸುವಲ್ಲಿ ಜಯಶಾಲಿಗಳಾಗಲು ಪ್ರಯತ್ನಿಸಬೇಕು. ನಮಗೆ ಸಮರ್ಥ ಗುರು ದೊರೆತರೆ, ಸಹಜಮಾರ್ಗ ಪದ್ದತಿಯಲ್ಲಿ ಅದು ಹಾಗೆಯೇ ಆಗುವುದು. ನಮ್ಮ ಅಸ್ತಿತ್ವದ ಎಳೆ-ಎಳೆಗಳೆಲ್ಲಾ ಆಧ್ಯಾತ್ಮಮಯವಾಗುವಂತೆ ಪರಿವರ್ತನೆಗೊಂಡು, ಸತ್ಯವು ವಿಕಿರಣಗೊಳ್ಳಲು ಆರಂಭಿಸುತ್ತದೆ. ನನ್ನ ಸೇವೆಯ ಸಂಪೂರ್ಣ ಲಾಭವನ್ನು ಪಡೆಯಲೆಂಬ ಉದ್ದೇಶದಿಂದ, ನಾನು ಅಂತಹ ಜೀವಾತ್ಮರನ್ನು ಸಿದ್ಧಗೊಳಿಸುತ್ತಿದ್ದೇನೆ. ಆ ಬದುಕಿಗೊಂದು ನಿರ್ದಿಷ್ಟ ಅರ್ಥವಿದೆ, ಬರೇ ಬದುಕುವದರಲ್ಲಲ್ಲ; ಪರಮೋಚ್ಚವಾದುದನ್ನು ಸಾಧಿಸುವುದರಲ್ಲಿ ಮಾನವನು ತನ್ನ ಜೀವಿತದಲ್ಲಿರುವಾಗಲೇ ಆತ್ಮದ ಉತ್ಕಟೇಚ್ಛೆಯನ್ನು ಅತ್ಯುತ್ತಮವಾಗಿ ಶಮನಗೊಳಿಸಬಹುದು. (ಆಚೆಯ) ತೀರವು ಯಾರಿಗೂ ತಿಳಿಯದು. ನನ್ನ ಗುರುಗಳ ಆಧ್ಯಾತ್ಮಿಕ ತರಬೇತಿಯ ಸೊಗಸೆಂದರೆ, ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಜೀವನಗಳೆರಡೂ ಸಮಸಮವಾಗಿ, ಉತ್ತರೋತ್ತರ ಪರಿಣಾಮಕಾರೀ ರೀತಿಯಲ್ಲಿ ಸಾಗುತ್ತವೆ. ಅಭ್ಯಾಸಿಯ ಮನಸ್ಸಿನ ನಿಯಂತ್ರಣದ ಹೊಣೆ ಗುರುವಿನದಾಗಿರುವಂಥ ಸಾಧನಾಪದ್ದತಿಗೆ ನೀವು ಅಂಟಿಕೊಳ್ಳಲು ತೀರ್ಮಾನಿಸಿದ್ದಾದರೆ, ದಯವಿಟ್ಟು ಆ ಪದ್ಧತಿಯನ್ನು ಪ್ರಾಮಾಣಿಕವಾಗಿ ಪರೀಕ್ಷಿಸಿ, ಸ್ವಲ್ಪ ಕಾಲಾನಂತರ ನಿಮ್ಮದೇ ಆದ ಅನುಭವವನ್ನು ಪಡೆದುಕೊಳ್ಳಿರಿ. ಆ ಚರಮತತ್ವದ ಸಾಧನೆಗಾಗಿ ನಿಮ್ಮಲ್ಲಿ ಉತ್ಕಟವಾದ ಅಭಿಲಾಷೆ ಮತ್ತು ಶ್ರದ್ಧೆಗಳಿದ್ದರೆ, ಆಧ್ಯಾತ್ಮಿಕ ಸಾಧನೆಯಲ್ಲಿ ಬೀಳೆಂಬುದು ಇರಲು ಸಾಧ್ಯವಿಲ್ಲ. ದೈಹಿಕ ಹಾಗೂ ಮಾನಸಿಕ ತೊಂದರೆಗಳು ಆಧ್ಯಾತ್ಮಿಕ ಸಾಧನೆಯ ಮೇಲೆ ಯಾವ ಪ್ರಭಾವವನ್ನೂ ಉಂಟು ಮಾಡುವುದಿಲ್ಲ. “ಆಧ್ಯಾತ್ಮಿಕ ಪ್ರಗತಿಯು ನನ್ನ ಹೊಣೆ, ಅಂತೆಯೇ, ಅಭ್ಯಾಸ ನಿಮ್ಮ ಹೊಣೆ” – ಇದು ನನ್ನ ಗುರುಗಳ ನಿಸ್ಸಂದಿಗ್ಧ ಘೋಷಣೆ.
>ಮತಧಮ್ಮವು, ನಿಜವಾಗಿ, ಈಶ್ವರ ಸಾಕ್ಷಾತ್ಕಾರದ ಹಾದಿಯಲ್ಲಿ ಒಂದು ಕೈಮರವಷ್ಟೆ ! ಆದರೆ ನಿಮಗೆ ಯೋಗ್ಯವಾದ ದಾರಿಯನ್ನು ನೀವೇ ಕಂಡುಕೊಳ್ಳಬೇಕು. ಇಡೀ ಮಾನವತೆಗೇ ವಿಪರೀತ ಸಮಸ್ಯೆಗಳಿವೆ. ಹೀಗಿರುವಾಗ, ಸಮಸ್ಯೆಗಳಿಗೇ ಗಮನಕೊಡುತ್ತಿರುವವರಿಗೆ, ಅವು ಅಡಚಣೆಗಳಾಗಿ ಪರಿಣಮಿಸುತ್ತವೆ. ನಿರಾಶೆಯು ನಮ್ಮನ್ನು ಅಧೀರರನ್ನಾಗಿ ಮಾಡುತ್ತದೆ. ಹೇಗಾದರೂ ಮಾಡಿ ನಾವು ನಿರಾಶೆ’ಯಲ್ಲಿನ ನಿಃ (ನಿರ್) ಎಂಬುದನ್ನು ತೆಗೆದುಹಾಕಿದರೆ, ‘ಆಶೆ’ ಉಳಿಯುತ್ತದೆ. ಅಂದರೆ, ನಾವು ಯಾವುದೋ ಒಂದನ್ನು ಪಡೆಯುವದಕ್ಕೋಸ್ಕರ ನಾವು ನಿಯುಕ್ತರಾಗಿದ್ದೇವೆ, ಮತ್ತು, ಒಂದು ನಿರ್ದಿಷ್ಟ ಕಾರ್ಯಕ್ಕೆ ನಾವು ನಿಯುಕ್ತರಾಗಿದ್ದೇವೆಂದಮೇಲೆ, ನಾವದನ್ನು ನಿರ್ವಹಿಸಲು ಅಶಕ್ತರೆಂದು ಯೋಚಿಸುವುದೂ ಸಾಧ್ಯವಿಲ್ಲ. ಇದೆಲ್ಲದರ ಅರ್ಥವಿಷ್ಟೆ : ಒಂದು ಬಗೆಯ ‘ಅಲೆ’ಯು ಸುಸೂತ್ರವಾಗಿ ಕೆಲಸ ನಿರ್ವಹಿಸುತ್ತ ಹೋಗುತ್ತಿದೆ ; ನೀವು ಅದರೊಡನೆಯೇ ಸಾಗುತ್ತಿದ್ದೀರಿ.” ವಸ್ತುಸ್ಥಿತಿ ಹೀಗಿರುವಾಗ ಭೂತ ಅಥವಾ ಭವಿಷ್ಯತ್ತಿನ ಕಲ್ಪನೆಯೇ ಅವಾಸ್ತವ. ದೈವೀ ಸಾಮ್ರಾಜ್ಯದಲ್ಲಿ ಹುಲಿಯಂತೆ ಇರಿ. ಅಂದರೆ ಪ್ರಗತಿಯು ಕಟ್ಟಿಟ್ಟ ಬುತ್ತಿ.
>“ಎಲೈ ನಿದ್ರಾಮಗ್ನರೇ ಎಚ್ಚರಗೊಳ್ಳಿರಿ ; ಉಷಃಕಾಲ ಆರಂಭವಾಗಿದೆ” -ಎಂಬ ನಮ್ಮ ಸದ್ಗುರುಗಳ ಸಂದೇಶವನ್ನು ಸಾರುತ್ತ, ಸಹಜಮಾರ್ಗದ ಮೂಲಕ, ಈಗ ಪ್ರಚಲಿತವಿರುವ ಅಧ್ಯಾತ್ಮರಾಹಿತ್ಯ’ದ ಸ್ಥಾನದಲ್ಲಿ, ಆಧ್ಯಾತ್ಮಿಕತೆಯನ್ನು ಸಂಸ್ಥಾಪಿಸುವುದೇ ನಮ್ಮ ಮಿಷನ್ನಿನ ಗುರಿಯಾಗಿದೆ. ಬದಲಾವಣೆಯು ದಿನಬೆಳಗಾಗುವಷ್ಟರಲ್ಲಿ ಬರಲಾರದೆಂಬುದೇನೋ ಸರಿ. ಆದಾಗ್ಯೂ, ನಮ್ಮ ಮಿಷನ್ನಿನ ಸದಸ್ಯರು ಪ್ರೀತಿ, ಸಹನೆ, ಮತ್ತು ಸಹಕಾರದಿಂದ ದುಡಿದರೆ, ಮಿಷನ್ನು ಇಟ್ಟುಕೊಂಡಿರುವ ಗುರಿಯನ್ನು ನಿಸ್ಸಂದೇಹವಾಗಿ ಸಾಧಿಸಬಹುದು. ನಮ್ಮ ಸಂಸ್ಥೆಗೆ ಸೂರ್ಯನಂತೆ ಪ್ರಕಾಶಿಸಿ, ಕಾಂತಿಯನ್ನು ಹೊರಸೂಸುವ ವ್ಯಕ್ತಿಗಳ ಆವಶ್ಯಕತೆ ಇದೆ. ನಮ್ಮ ಪದ್ದತಿಯು ಸರಿಯಾದುದೆಂದು ಗೊತ್ತಾದಾಗ, ಜನರು ತಮಗೆ ತಾವೇ ಆಕರ್ಷಿತರಾಗುತ್ತಾರೆ. ಒಂದು ಸಿಂಹವು ನೂರು ಕುರಿಗಳಿಗಿಂತ ಮೇಲು. ಆದರೆ, ಮಾನವಜೀವಿಗಳಾದ ನಾವು, ಇತರರಿಗೆ ಆಧ್ಯಾತ್ಮಿಕ ಒಳಿತನ್ನು ಮಾಡಲು ಪ್ರಯತ್ನಿಸಬೇಕು. ಗುರು ತೋರಿದ ದಾರಿಯಲ್ಲಿ ಮನಃಪೂರ್ವಕವಾಗಿ ದುಡಿದರೆ, ಎಂದಿಗೂ ವ್ಯರ್ಥವಾಗಲಾರದು. ತಥಾಸ್ತು.
***