(ಪೂಜ್ಯ ಬಾಬೂಜಿಯವರ ೮೩ ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ೩೦-೪-೧೯೮೨ ರಂದು ನೀಡಿದ ಸಂದೇಶ)
ಪ್ರಿಯ ಸೋದರ ಸೋದಯರೆ,
ದೇಹಧಾರಿಗಳಾದ ಜೀವಿಗಳೆಲ್ಲರಿಗೂ ಸುತ್ತಲೆಲ್ಲ ಸಂಕಟಗಳೇ ತುಂಬಿವೆ. ಹೀಗಿದ್ದರೂ, ನಮ್ಮಲ್ಲಿ ಶರೀರ ವ್ಯಾಮೋಹ ಅಂಟಿಕೊಂಡೇ ಇರುತ್ತದೆ ; ಇದು ನಮ್ಮನ್ನು ಕೊನೆಯವರೆಗೂ ಬಿಡುವುದಿಲ್ಲ. ಅಷ್ಟೇ ಅಲ್ಲ, ನಾವು ಪುನರ್ಜನ್ಮ ಪಡೆಯಲೂ ಹಂಬಲಿಸುತ್ತೇವೆ. ಈ ಹಂಬಲವು ಒಂದು ಸಮೃದ್ದ ಕುಟುಂಬದಲ್ಲಿ ಜನ್ಮ ತಳೆಯಲಿಕ್ಕೊ, ಅಥವಾ ರಾಜಮನೆತನದಲ್ಲಿ ಜನ್ಮ ತಳೆಯುವುದಕ್ಕೋ ಎಂಬುದು ಗೌಣ. ಏಕೆಂದರೆ, ಬಂಧುಗಳೆ, ವ್ಯಕ್ತಿಗತ ಅಸ್ತಿತ್ವವೆಂಬುದು ನಾಮ ಮಾತ್ರಕ್ಕಾದರೂ ಯಾವಾಗ ಉದಯಿಸುವುದೋ, ಅದು ಎಷ್ಟೇ ಸೂಕ್ಷ್ಮ ರೂಪದಲ್ಲಿದ್ದರೂ ಸಹ, ಅದರೊಡನೆಯೇ ದುಃಖಗಳೂ ಆರಂಭವಾಗುವುವು.
ಹೀಗಿದ್ದರೂ, ನಮ್ಮ ಸಭೆಯಾದರೋ ತುಸು ಭಿನ್ನ ರೀತಿಯದು. ನಾವು ಯಾವ ವಲಯದಲ್ಲಿರುವೆವೆಂದರೆ, ಅಲ್ಲಿಂದ ಜ್ಞಾನ ರೂಪದಲ್ಲಿ, – ನಮ್ಮನ್ನು ಕುರಿತೂ ಸಹ – ಏನೇನೂ ಬರುವುದಿಲ್ಲ. ಇದರರ್ಥವೆಂದರೆ, ‘ಸಂತುಲಿತ ಸಮತೋಲನದ ಭಾವ’ – ಎಂದು ಕರೆಯಬಹುದಾದ ಸ್ಥಿರತೆಯನ್ನು ನಾವು ಸ್ವಾಭಾವಿಕ ರೀತಿಯಲ್ಲಿ ಪಡೆದಿದ್ದೇವೆ. ಆ ಸ್ಥಿತಿಯ ನಂತರವೇ ಎಲ್ಲದರ ಉಗಮವೂ ಆಗಿದೆ. ಬೇರೆ ರೀತಿ ಹೇಳುವುದಾದರೆ, ಸೃಷ್ಟಿ, ಸ್ಥಿತಿ, ಲಯಕರ್ತರಾದ ಬ್ರಹ್ಮ, ವಿಷ್ಣು, ಮಹೇಶ್ವರರು ಅಸ್ತಿತ್ವಕ್ಕೆ ಬರುವ ಪೂರ್ವದಲ್ಲಿಯೇ ನಾವಿದ್ದೆವು. ಹಾಗಾದರೆ ಅಲ್ಲಿರುವುದಾದರೂ ಏನು ? – ಮಹಾನತೆಯೆ ? – ಅಲ್ಲ ! ನಾವು ಮುಟ್ಟಬೇಕಾದ ಗಂತವ್ಯ ಯಾವುದು ? ಅದನ್ನು “ಅಕಿಂಚನ ಸ್ಥಿತಿ” ಎಂದು ಕರೆಯುವುದೇ ಸೂಕ್ತವಾದೀತು. ನಾವು ಅದಕ್ಕೆ ಹಾಗೆ ಹೆಸರಿಸುವುದಾದಲ್ಲಿ, ಅದು ಎಂಥ “ಅಕಿಂಚನತೆ’ಯೆಂದರೆ, ಅದರ ಬಗ್ಗೆ ನಮಗೇನೂ ತಿಳಿಯದು. ಮತ್ತು ಒಂದು ರೀತಿಯ ಮಹಾನತೆ – ಎಂದರೆ ಅದರ ಸಾದೃಶ್ಯ ಸ್ಥಿತಿ. ಆದರೆ, ಆ ಸಾದೃಶ್ಯದ ಅರಿವೂ ಸಹ ಕಂಡುಬರುವುದಿಲ್ಲ. ಪ್ರಿಯ ಸೋದರರೇ, ಈ ಸ್ಥಿತಿಯೇ ನಿಜವಾದ ಸಾರ ತತ್ವ.
ನಾವು ನಮ್ಮನ್ನು ‘ಮಹಾನ್’ ಎಂದು ಬಗೆದರೆ, ನಾವು ತಲುಪಬೇಕಾದ ಆ ಮಹತ್ತಿಗೆ ಒಂದು ಅಡ್ಡ ಗೋಡೆಯನ್ನು ಹಾಕಿಕೊಂಡಂತಾಗುತ್ತದೆ. ಹಾಗೆನ್ನುವುದಾದರೆ, ನಮ್ಮ ಆಧ್ಯಾತ್ಮಿಕ ಪ್ರಗತಿಯ ಪಥದಲ್ಲಿ ನಾವೇ ಒಂದು ಶೃಂಖಲೆಯನ್ನು ಸೃಷ್ಟಿಸಿಕೊಂಡಂತಾಗುತ್ತದೆ. ಅದರಿಂದಾಗುವ ಕೆಡುಕೇನೆಂದರೆ, ನಾವು ನಮ್ಮನ್ನು ದೊಡ್ಡವರೆಂದು ಭಾವಿಸಿಕೊಂಡಾಗ, ಇತರರನ್ನು ಕೀಳಾಗಿ ಕಾಣಲಾರಂಭಿಸುತ್ತೇವೆ. ಹೀಗಾದಾಗ ನಾವು ಮುನ್ನಡೆಯಬೇಕಾದ ದಾರಿಯು ಮುಚ್ಚಿ ಹೋಗುತ್ತದೆ, ಮತ್ತು ನಾವು ಎಲ್ಲಾ ಆಶಯ ಮತ್ತು ಉದ್ದೇಶಗಳಿಂದ ವಂಚಿತರಾಗುತ್ತೇವೆ. ಯಾರಿಗಾದರೂ, ತಾನು ಯಾವುದೋ ಒಂದು ದಿಸೆಯಲ್ಲಿ ಬೇರೆಯವರಿಗಿಂತ ಮೇಲು ಎಂಬ ಭಾವನೆ ತಲೆಹೊಕ್ಕಿದರೆ, ಅದು ಅನೇಕ ರೂಪ ತಾಳುತ್ತದೆ. ಹೀಗೆ ನಾವು, ಯಾವ ಪ್ರತಿಫಲವೂ ಇಲ್ಲದೆ, ‘ಅಹಂ’ಕಾರವನ್ನು ಬಲಗೊಳಿಸುತ್ತೇವೆ. ನಮ್ಮದೇ ವಿಚಾರಗಳ, ನಮ್ಮ ತುತ್ತೂರಿಯನ್ನು ನಾವೇ ಊದುತ್ತ ಹೋಗುತ್ತೇವೆ. ಈ ಆತ್ಮಶ್ಲಾಘನೆಯಿಂದ ಆಗುವ ನಷ್ಟ ಬಹಳ.
ಗೋಣೆತ್ತಿ ನಡೆಯುವುದು (‘ಅಹಂ’ಭಾವವು) ಒಂದು ಕುಂದು, ಅದು ಹೋದಹೊರತು ಯಾವನೂ ತನ್ನ ‘ಮೂಲ’ದ ಅರಿವನ್ನು ಪಡೆಯಲಾರ. ಈ ದೋಷವು ಸಂಪೂರ್ಣವಾಗಿ ತೊಲಗಿಹೋದಾಗ ಯಾವುದೊಂದು ‘ಸ್ಥಿತಿ’ಯುಂಟಾಗುವುದೋ ಅದನ್ನೇ ನಾನು ‘ಮೂಲ’ವೆಂಬ ಪದದಿಂದ ಅರ್ಥೈಸಲು ಪ್ರಯತ್ನಿಸಿದ್ದೇನೆ. ಆ ಸ್ಥಿತಿಯಲ್ಲಿ ಜೀವಿಸಬೇಕಾದುದು ಮಾನವ ಸಂಸ್ಕೃತಿ, ಆ ಸ್ಥಿತಿಯು ಮತ್ತೂ ಬೆಳೆದು ಸಾಂದ್ರವಾದಾಗ, ಅದು “ವಿನಮ್ರತೆ” ಅಥವಾ “ರಿಕ್ತತೆ’ಯ ಹಂತವನ್ನು ಮುಟ್ಟುತ್ತದೆ. ಅಂತಹ ಅವಸ್ಥೆಯನ್ನು ಪಡೆದಾಗ ‘ಪರತತ್ವ’ದ ನಿಜಾರ್ಥ ನಮಗೆ ಗೋಚರಿಸುತ್ತದೆ. ಅದನ್ನು ಪಡೆಯಲು ನೂರಾರು ಸಲ ಪ್ರಾಣಾಹುತಿ, ಮತ್ತು ಪ್ರಾರ್ಥನೆಗಳನ್ನು ವಿಧಿಸಲಾಗಿದೆ. ಮನುಷ್ಯನು ಎಂದಿಗೂ ತನ್ನ ಈ ಸ್ಥಿತಿಯಿಂದ ದೂರ ಸರಿಯಲೇಬಾರದು. ಈ ‘ಸ್ವಸ್ಥಿತಿ’ಯನ್ನೇ ‘ಅಬೂದಿಯತ್”, “ನಿಗ್ರಹೀತ ಸ್ಥಿತಿ’ ಎಂಬುದಾಗಿ ಕರೆಯಲಾಗಿದೆ. ಈ ಸ್ಥಿತಿಯುಂಟಾಗುವುದು ಪರತತ್ವ ಸಾಕ್ಷಾತ್ಕಾರಕ್ಕೆ ಅತ್ಯಾವಶ್ಯಕ. ನಾನು ಪದೇ ಪದೇ, ಅನೇಕ ಕಡೆಗೆ ಬರೆದಿರುವಂತೆ, ಈ ಸ್ಥಿತಿಯನ್ನು ಹೊಂದಿದಾಗಲೇ ‘ಅಹಂ’ಕಾರದ ಭಾರವು ಇಳಿದು ಬಹುತೇಕ ಹಗುರಾಗುವುದು. ನಮ್ಮ ಉದ್ದೇಶವು ಸಫಲವಾಗುವುದು ಇದಾದ ಅನಂತರವೇ. ಇದಕ್ಕಿಂತ ಉತ್ತಮ ದಾರಿಯೆಂದರೆ, ನೀವು ಏನಿದ್ದೀರೋ ಅದೆಲ್ಲದರೊಂದಿಗೇ, ಚರಮ ಗುರಿಯತ್ತ ಮುನ್ನಡೆಯಿರಿ ;
ಅಂದರೆ ಅದರತ್ತ (ಚರಮ ಗುರಿಯತ್ತ) ಅಭಿಮುಖಿಯಾಗಿರದ ಯಾವುದೂ ಇರಬಾರದು. ಅರ್ಥಾತ್, ಭೌತಿಕವಾದುದಿರಲಿ, ಆಧ್ಯಾತ್ಮಿಕವಾದುದಿರಲಿ, ನಿಮಗೆ ಸೇರಿದುದೆಲ್ಲವನ್ನೂ ಆ ಪರಾತ್ಪರನಿಗೆ ಸಮರ್ಪಣೆ ಮಾಡಿಬಿಡಬೇಕು. ಹೇಗೆಂದರೆ, ಅವನ ಸ್ಮರಣೆಯೊಂದನ್ನುಳಿದು ಬೇರೇನೂ ನಿಮ್ಮಲ್ಲಿ ಉಳಿಯಬಾರದು.
ಈಗ ಏಳುವ ಪ್ರಶ್ನೆಯೆಂದರೆ, ಆ ಅವಸ್ಥೆಯನ್ನು ಹೊಂದುವುದು ಹೇಗೆ ? – ಎಂಬುದು. ಅದು ಸ್ಮರಣೆ’ಯೆಂಬುದೊಂದರಿಂದಲೇ. ಆ ಸ್ಮರಣೆ’ಯೇ ಉಳಿದ ಬೇಕಾದುದೆಲ್ಲವನ್ನು ತನ್ನೊಂದಿಗೇ ಹಿಂಬಾಲಿಸುವಂತೆ ಮಾಡುತ್ತದೆ. “ಸ್ಮರಣೆ’ಯೊಂದಿದ್ದರೆ, ಸ್ಮರಿಸಲ್ಪಟ್ಟವನೂ ನಿಮ್ಮ ಹತ್ತಿರದಲ್ಲಿಯೇ ನಿಸ್ಸಂದೇಹವಾಗಿ ಇರುತ್ತಾನೆ. ಸ್ಮರಣೆಯ ಉತ್ಕರ್ಷದಿಂದುಂಟಾಗುವ ಕಾವಿನಲ್ಲಿ, ‘ಅವನ’ ಸಾಮೀಪ್ಯಾನುಭವವೂ ವರ್ಧಿಸಲಿ – ಆಗ ನೋಡಿ, ಎಂಥ ಆನಂದ ಮತ್ತು ಭಾವೋನ್ಮತ್ತತೆಯುಂಟಾಗುವುದೆಂದು ! ಅಷ್ಟೇ ಅಲ್ಲ, ನೀವು ಎಷ್ಟು ಕ್ಷಿಪ್ರದಲ್ಲಿಯೇ ಗುರಿಯವರೆಗೆ ತಲುಪುವಿರೆಂಬುದನ್ನು ನೀವೇ ನೋಡುವಿರಿ..
ಪರತತ್ವದ ಸ್ಮರಣೆಯು ಒಂದು ಆರಂಭ. ಅದು ತನ್ನ ಪರಾಕಾಷ್ಠೆಯನ್ನು, ಅಂದರೆ ಪರತತ್ವದ ವಲಯ ಅಥವಾ ಸ್ವರವನ್ನು ಮುಟ್ಟಿದರೆ, “ಪ್ರಿಯತಮ’ನ ಮನೆಯ ಕರೆಗಂಟೆಯನ್ನು ಒತ್ತಿದಂತಾಯಿತೆಂಬುದು ನಿಸ್ಸಂದೇಹ. ಯಾವನೋ ಒಬ್ಬ ನಿಜವಾದ ಹಂಬಲವುಳ್ಳ ಪ್ರೇಮಿ (ಭಕ್ತ)ಯು ತನ್ನನ್ನು ಅರಸುತ್ತಿರುವನೆಂಬುದು ಅವನ ಅರಿವಿಗೆ ಬಂದಿತೆಂದರೆ, ಇದುವರೆಗೆ ನೀವು ನಿಮ್ಮ “ಸ್ವಗೃಹ’ವನ್ನು (ನಿಜಧಾಮವನ್ನು) ಪ್ರವೇಶಿಸಲಾರದಂತೆ ತಡೆದ ಅಡ್ಡಗೋಡೆಗಳನ್ನು ಕೆಡವಿಹಾಕಿ, ಆತನೇ ನಿಮ್ಮ ಸಮೀಪಕ್ಕೆ ಬರುವಂಥ ನಿಶ್ಚಿತ ಸ್ಥಿತಿ (ಸಂದರ್ಭ) ಸನ್ನಿಹಿತವಾಗಿದೆಯೆಂದೇ ಅರ್ಥ. ಪ್ರಿಯ ಬಂಧು, ಸ್ವಲ್ಪ ಮುನ್ನಡೆಯಿರಿ. ಆಗ ಇದೆಲ್ಲದರ ಅರ್ಥ ಏನೆಂಬುದು ನಿಮಗೇ ವೇದ್ಯವಾಗುತ್ತದೆ.
ಈ ಅವಸ್ಥೆಯು ಸಿದ್ಧಿಸಿತೆಂದರೆ, ನೀವು ದೈವೀ ಗುಣಗಳನ್ನು ಪಡೆದಿರಿ ಎಂದಾಯಿತು. ಈ ದೈವೀ ಗುಣಧರ್ಮವನ್ನು ಪಡೆದಾಗ, ನೀವು (ಅಧ್ಯಾತ್ಮದ) ಸೂರ್ಯ ಪ್ರಕಾಶದಲ್ಲಿ ಬಂದಿರೆಂದು ಹೇಳಬಹುದು. ಈ ಪ್ರಕಾಶವು, ಆ ಪರತತ್ವವೆಂಬ ಸೂರ್ಯನದು ಎಂಬುದು ಸುಸ್ಪಷ್ಟ. ಇದಕ್ಕೆ ಮುಂಚೆ ನಮಗೆ ನಮ್ಮ ಗುಣಧರ್ಮಗಳ ಅರಿವು ಮಾತ್ರವಿದ್ದಿತು. ಈಗ ಇದರಾಚೆಗಿನ, ಅರ್ಥಾತ್, ದೇವರ ಆಚೆಗಿನ ವಲಯದಲ್ಲಿ ನಿಮ್ಮ ಈಜುವಿಕೆ ಆರಂಭವಾಯಿತು. ಇಲ್ಲಿಯವರೆಗೆ ಬಂದಾದ ಮೇಲೆ, ಇನ್ನೂ ಮುಂದಕ್ಕೆ ಹೋಗುತ್ತಿರುವ ಶುಭಸಮಾಚಾರ ದೊರಕುವುದು. ‘ಸ್ಮರಣೆ’ಯ ಅರಿವೂ ಇಲ್ಲದ ಹಂತಕ್ಕೆ ಸ್ಮರಣೆಯು ಮುಂದುವರಿದಾಗ, ಅದರ ಸ್ವರೂಪವೇ ಬದಲಾಗುತ್ತದೆ. ಇದು ಗೊತ್ತಾಗುವುದು ಈ ಹಂತವನ್ನೂ ದಾಟಿ ಮುಂದೆ ಹೋದಾಗ, (ಅಂದರೆ ಈ ಹಂತದಲ್ಲಿ) ಯಾವಾತನಿಗೆ ಎಷ್ಟು ಅರಿವು (ಎಚ್ಚರ) ಇದೆಯೆಂದರೆ, ಎಷ್ಟರ ಮಟ್ಟಿಗೆ ಅದರ ಮರೆವು’ ಇದೆಯೋ, ಅಷ್ಟೆ ! (ಜಿಸ್ ಕೋ ಜಿತನಾ ಹೋಶ್ ಹೈ, ಉತನಾ ಹೀ ವಹ್ ಬೇಹೋಶ್ ಹೈ) ಈ ಅವಸ್ಥೆಯನ್ನು ಬಹಿರಂಗಗೊಳಿಸಲು ಕಾಲವಿನ್ನೂ ಪಕ್ವವಾಗಿಲ್ಲ. ಯಾರಾದರೂ ಸ್ವತಃ ಸ್ವಾಭಾವಿಕ ರೀತಿಯಲ್ಲಿ ಅದನ್ನು ತಲುಪಲು ಪ್ರಯತ್ನಿಸುವನೋ ಅವನಿಗೆ, ಆ ಸ್ಥಿತಿಯನ್ನು ತಲುಪಿದಮೇಲೆ ಅದರ ಜ್ಞಾನ ಪ್ರಾಪ್ತವಾಗುತ್ತದೆ. ಏನೇ ಇರಲಿ, ಸರಳ ತಥ್ಯಾಂಶವೇನೆಂದರೆ, ಏನೆಲ್ಲ ಇದೆಯೋ, ಅದೆಲ್ಲವನ್ನೂ ಆ ‘ಪರಮ ಪ್ರಭು’ವಿಗೆ ಸಮರ್ಪಿಸಿಬಿಡಬೇಕು.”ಪ್ರಭುವಿನ ಪ್ರಾಪ್ತಿಯಾಗಲು, ನಿಮ್ಮ ತಲೆಯನ್ನೇ ತೆರಬೇಕಾಗಿ ಬಂದರೂ ಸರಿಯೆ, ಅದೂ ನಿಮಗೆ ಬಹಳ ಅಗ್ಗವಾಗಿಯೇ ದೊರಕುವ ವ್ಯವಹಾರವೆಂದು ತಿಳಿಯಿರಿ.” (ಶೀಶ್ ದಿಯೇ ತೋ ಹರಿ ಮಿಲೇ, ತೋ ಭೀ ಸಸ್ತಾ ಜಾನ್.)
ಪ್ರಾಚೀನ ಋಷಿಗಳು, ಆ ಸತ್ಯೇಶ್ವರನ ಸಂಕಲ್ಪವನ್ನೇ ಸ್ವೀಕರಿಸಿ, ಅದರಲ್ಲಿಯೇ ಆನಂದವನ್ನು ಕಾಣುವ ಸ್ಥಿತಿಯನ್ನೇ “ಶರಣಾಗತಿ” (ಸಮರ್ಪಣ) ಎಂದು ಪರಿಗಣಿಸಿದ್ದಾರೆ. ಈಗ ನಾನು ಅದಕ್ಕೆ ಸೂಚಿಸುವ ವಿಧಿಯೆಂದರೆ, – ‘ಅವನ’ನ್ನು – ಅವನೊಬ್ಬನನ್ನೇ ಮುಟ್ಟಲು ಬೇಕಾದ, ಶುದ್ಧ ಹಾಗೂ ಸರಳ ಉತ್ಕಂಠೆ ಆರಂಭದಲ್ಲಿ ಅದು ನೈಜವಾಗಿ ಇಲ್ಲದಿದ್ದರೂ ಸರಿಯೆ, ‘ಇದೆ’ – ಎಂದು ನಟಿಸಿರಿ. ಯಾರಾದರೊಬ್ಬನು ಹುಚ್ಚನನ್ನು ಪದೇ ಪದೇ ಅನುಕರಿಸುತ್ತ ಹೋದರೆ, ಅವನೂ ಹುಚ್ಚನಾಗುವುದು ಖಂಡಿತ. ಹಾಗೆಯೇ, ಮನುಷ್ಯನು ಆ ಪರಮ ಪ್ರಭುವನ್ನು ಮುಟ್ಟುವ ಏಕೈಕ ಹಂಬಲದಿಂದ ಮುಂದುವರಿದರೆ, ‘ಸಾಕ್ಷಾತ್ಕಾರ’ವು ಅವನಿಗೆ ಕಟ್ಟಿಟ್ಟ ಬುತ್ತಿ. ತಥಾಸ್ತು.