ಮಹಾ ವ್ಯಕ್ತಿಗಳ ಜನ್ಮ ದಿನಗಳು ಅರ್ಥಪೂರ್ಣ ದಿನಗಳಾಗಿರುತ್ತವೆ. ನಮ್ಮ ಗುರುಗಳಿಗೆ ಇರುವಂತಹ ಮಹತ್ತ್ವವು ವಿಶಿಷ್ಟವಾಗಿ ಸಹಜಮಾರ್ಗ ಪದ್ಧತಿಯ ವಿಚಾರಧಾರೆ, ತತ್ತ್ವದರ್ಶನ ಅಥವಾ ಯೋಗ-ಅಭ್ಯಾಸ ಇವುಗಳಿಂದ ಬಂದುದು. ಷಾಹಜಹಾನಪುರವು ಸಹಜಮಾರ್ಗದ ಹಾಗೂ ಅದರ ಮೂಲಪುರುಷರಾದ ಶ್ರೀ ಬಾಬೂಜಿ ಮಹಾರಾಜರ ಜನ್ಮಸ್ಥಳವಾಗಿದೆ.

ಷಾಹಜಹಾನಪುರದಲ್ಲಿಯ ಗುರುಗಳ ಜನ್ಮ ದಿನಾಚರಣೆಯಲ್ಲಿ ಭಾಗವಹಿಸುವ ಮೂಲಕ ಸಹಜಮಾರ್ಗದ ಅಭ್ಯಾಸಿಗಳು ಅಪಾರ ಆಧ್ಯಾತ್ಮಿಕ ಲಾಭ ಪಡೆಯಲು ಸಾಧ್ಯ. ಗುರುವಿನೊಂದಿಗೆ ನಮ್ಮ ಚಿಂತನೆಯ ಜೋಡಣೆ, ಆಚರಣದ ಅವಧಿಯಲ್ಲಿ ಹಾಗೂ ಅನಂತರವೂ ಬಹುಕಾಲದವರೆಗೆ ಮುಂದುವರಿಯಲು, ಧ್ಯಾನದ ಬೈಠಕ್‌ಗಳು ಗುರುವಿನ ಬಗ್ಗೆ ಭಾಷಣಗಳು ಮತ್ತು ಗುರುವಿನ ಸೇವೆಗಾಗಿರುವ ಕೆಲಸಗಳು ಇರುತ್ತವೆ.

ನಮ್ಮ ಚಿಂತನದ ಜೋಡಣೆಯ ಮೂಲಕ ನಾವು ಗುರುಗಳ ಪ್ರಾಣಾಹುತಿಯನ್ನು ಪಡೆಯುತ್ತೇವೆ. ಆದುದರಿಂದಲೇ ಯೋಗ ಪದ್ಧತಿಯಲ್ಲಿ ನಿರಂತರ ಸ್ಮರಣೆಯ ಅಭ್ಯಾಸವನ್ನು ವಿಧಿಸಲಾಗಿದೆ. ಗುರುವಿನ ಮಾಹಾತ್ಮದ ಮುದ್ರೆಯನ್ನು (ಪ್ರಭಾವದ ಸಂಸ್ಕಾರವನ್ನು ಹೃದಯವು ಸ್ವೀಕರಿಸಿದರೆ ಹಾಗೂ ಅವರ ಬಗ್ಗೆ ಪ್ರೇಮವನ್ನು ಬೆಳೆಸಿಕೊಂಡರೆ, ಇಂತಹ ಅಭ್ಯಾಸವು ಸುಲಭವಾಗುವುದು.

“ಓ ನಾಥ ! ನೀನೇ ಮಾನವ ಜೀವನದ ನಿಜವಾದ ಗುರಿ………..” ಅದಕ್ಕಾಗಿ ಒಬ್ಬ ಅಭ್ಯಾಸಿಯು ನಮ್ಮ ಗುರುಗಳೊಂದಿಗೆ ತನ್ನದೇ ನಿಜವಾದ ಗುರಿಯನ್ನು ಏಕೀಭೂತಗೊಳಿಸಿ ಅವರನ್ನು ‘ಗುರು’ ಎಂದು ಸ್ವೀಕರಿಸುವುದು ಆವಶ್ಯಕವಾಗಿದೆ. ‘ಗುರು’ವನ್ನು ತನ್ನ ಗುರಿಯಾಗಿ ತೆಗೆದುಕೊಳ್ಳದೆ, ಬದಲಿಗೆ, ತನ್ನ ಇಚ್ಛೆಗಳನ್ನು ಪೂರ್ತಿಗೊಳಿಸುವ ಸಾಧನವನ್ನಾಗಿ ತೆಗೆದುಕೊಂಡರೆ, ಪರಿಣಾಮವು ಮುಕ್ತಿ ಅಥವಾ ಸಾಕ್ಷಾತ್ಕಾರವಾಗುವ ಬದಲು ತೊಡಕುಗಳ ‘ಹೆಚ್ಚಳವಾಗುತ್ತದೆ.

ಆದುದರಿಂದ, “ನಾವು ನಮ್ಮ ಇಚ್ಛೆಗಳ ಗುಲಾಮರಾಗಿದ್ದು, ನಮ್ಮ ಪ್ರಗತಿಗೆ ಬಾಧಕಗಳನ್ನೊಡ್ಡುತ್ತಿದ್ದೇವೆ……” ಎಂಬುದನ್ನು ನೆನಪಿಗೆ ತಂದುಕೊಳ್ಳಬೇಕಿದೆ. ನಮ್ಮ ಇಚ್ಛೆಗಳಿಗೆ ನಮ್ಮ ದಾಸ್ಯವು ಎಷ್ಟು ಮಟ್ಟಿಗೆ ಬೆಳೆಯುವುದೆಂದರೆ, ನಮ್ಮ ಅಹಂಕಾರಕ್ಕೆ ಮಣಿಯದವರೆಲ್ಲರನ್ನೂ ನಮ್ಮ ವೈರಿಗಳೆಂದು ಭಾವಿಸಲು ಆರಂಭಿಸುತ್ತೇವೆ. ನಾವು ಹೇಗೆ ವಿಚಾರ ಮಾಡುವತ್ತ ಒಲಿಯುತ್ತೇವೆಂದರೆ, “ನಮಗೆ ಯಾವ ಮುಂದಿನ ಪ್ರಗತಿಯೂ ಬೇಕಿಲ್ಲ, ಏಕೆಂದರೆ ನಾವು ನಮ್ಮ ಗುರಿಯನ್ನು ಮುಟ್ಟಿದ್ದೇವೆ, ಹಾಗೂ ಸಾಧಿಸಲು ಉಳಿದಿರುವ ಒಂದೇ ಒಂದು ಎಂದರೆ, ನಮ್ಮ ಇಚ್ಛೆಗಳಿಗೆ ಒದಗಿಬರಲು ಅನ್ಯರಿಗೆ ಒತ್ತಾಯಪಡಿಸುವುದು ಮಾತ್ರ ಸ್ವತಃ ಗುರುಗಳು ಕೂಡ ನಮ್ಮ ಇಚ್ಚೆಗಳನ್ನು ಪೂರ್ತಿಗೊಳಿಸಲೇ ಬೇಕು. ಅದಿಲ್ಲವಾದರೆ ನಾವು ಅವರನ್ನು ತ್ಯಜಿಸಿಬಿಡುವೆವು; ಏಕೆಂದರೆ ನಮಗೆ ಅವರು ಬೇಕಾಗಿಲ್ಲ !”

ಇಂತಹ ವೈಪರೀತ್ಯದ ಬೆಳವಣಿಗೆ ಆಗಗೊಡದಿರಲು ಹಾಗೂ ಸಹಾಯಕ್ಕಾಗಿ ಅಲ್ಲಿ-ಇಲ್ಲಿ ಅಲೆಯುವುದನ್ನು ತಪ್ಪಿಸಲು ನಾವು ನಮ್ರತೆ, ಹಾಗೂ ವಿನೀತ ಭಾವವನ್ನು ರೂಢಿಸಿಕೊಂಡು “ನಿನ್ನ ವರೆಗೆ ತಲುಪಲು ಸಾಧ್ಯಗೊಳಿಸುವ ಏಕಮಾತ್ರ ಸ್ವಾಮಿ ಹಾಗೂ ಇಷ್ಟದೈವ ನೀನೇ” – ಎಂದು ಪ್ರಾರ್ಥಿಸಬೇಕು.

ಷಾಹಜಹಾನಪುರದಂತಹ ಮಹತ್ತ್ವಪೂರ್ಣ ಸ್ಥಳದಲ್ಲಿ ಎಪ್ರಿಲ್ 30 ರಂದು (ಎಪ್ರಿಲ್ 29 ರಿಂದ ಮೇ 1 ರ ವರೆಗೆ) ಅಭ್ಯಾಸಿಗಳು ಒಂದುಗೂಡುವುದರಿಂದ ನಿರ್ಮಿತವಾಗುವ ವಾತಾವರಣವು ಕೇವಲ ಇಲ್ಲಿ ಸೇರಿರುವವರನ್ನು ಮಾತ್ರವಲ್ಲದೆ ಸಂಪೂರ್ಣ ಜಗತ್ತನ್ನೂ, ಗುರುಗಳ ಸಂಕಲ್ಪಕ್ಕೆ ಅನುಸಾರವಾಗಿ ಪ್ರಗತಿ ಹೊಂದಲು ಪ್ರಭಾವಿತಗೊಳಿಸುವುದು. ವಾಸ್ತವವಾಗಿ, ಗುರುಗಳು ಇಂತಹ ಸಂದರ್ಭಗಳಲ್ಲಿ ವಿಶೇಷ ಪ್ರಾಣಾಹುತಿ ನೀಡುತ್ತಾರೆ ಮತ್ತು ಹಾಗೆ ಯಾರಿಗೆ ಬೇಕಿದೆಯೋ ಅವರು ಇದರ ಅನುಭವ ಹೊಂದಬಹುದು.

ಆದುದರಿಂದ, ಇಂತಹ ಅತ್ಯಂತ ಪವಿತ್ರ ಸಂದರ್ಭದಲ್ಲಿ ಅವರ ಸ್ಮರಣೆಯಲ್ಲಿ ನಾವು ತಲ್ಲೀನರಾಗೋಣ ಹಾಗೂ ಪ್ರಿಯ ಬಾಬೂಜಿ ಮಹಾರಾಜರ, ಭವ್ಯ ಜೀವನದ ಸ್ಮರಣೆ ಮಾಡುತ್ತ ನಮ್ಮ ಜೀವನಗಳನ್ನು ಉದಾತ್ತಗೊಳಿಸಿಕೊಳ್ಳೋಣ ! ಪೂಜ್ಯ ಗುರುಗಳು ನಮ್ಮೆಲ್ಲರಿಗೂ ಆಶೀರ್ವದಿಸಲಿ.

[ಸಹಜಮಾರ್ಗ ಪತ್ರಿಕೆ, ನಂ. 3, ಜೂನ್ 1990]