(ಪ್ಯಾರಿಸ್‌ನಲ್ಲಿ, ಅಗಸ್ಟ್ ೧೯೮೨ ರಲ್ಲಿ ನೀಡಿದ ಸಂದೇಶ)
ನಾವೆಲ್ಲರೂ ಒಂದೇ. ಸಹಜಮಾರ್ಗದ ಉದ್ದೇಶವೇ ಏಕತೆ. ಈ ಪದ್ಧತಿಯ ಸಾಧಕ ಬಾಧಕಗಳನ್ನು ಪರಿಶೀಲಿಸಿದರೆ, ಅನುಶಾಸನದ (ಶಿಸ್ತಿನ) ನಿಜವಾದ ಪರಿಜ್ಞಾನದ ಆವಶ್ಯಕತೆ ಎಷ್ಟಿದೆ ಎಂಬುದು ಗೊತ್ತಾದೀತು. ಇಲ್ಲಿ ಎಲ್ಲವೂ ಸುಸ್ಪಷ್ಟ. ಆದರೂ ಏನೋ ಒಂದು ದೋಷವಿದೆ ಅದನ್ನು ಸುಲಭವಾಗಿ ನಿವಾರಿಸಬಹುದು. ಅದಕ್ಕೆ ಬೇಕಾದುದಿಷ್ಟೆ : ಈ ಮಿಷನ್ನಿಗೆ ನಮ್ಮ ಮನಸ್ಸಿನಲ್ಲಿ ಮಾತ್ರ ಸ್ಥಾನ ಕೊಟ್ಟರೆ ಸಾಲದು, ನಾವದನ್ನು ನಮ್ಮ ಹೃದಯದಲ್ಲಿ ಪ್ರಸ್ಥಾಪಿಸಿಕೊಳ್ಳಬೇಕು.
ಜನರಲ್ಲಿ ಅದಿದೆ. ಇನ್ನುಳಿದದ್ದೆಂದರೆ ಆ ವಿಚಾರವು ಸಾರ್ವತ್ರಿಕವಾಗಿ ಕಣ್ಣೆದುರು ಪ್ರಕಟವಾಗಬೇಕಿದೆ. ಈ ಮಾರ್ಗದಲ್ಲಿ ಅನೇಕ ಅಂಕುಡೊಂಕುಗಳು ಬರುತ್ತವೆ ; ನೀರಿನಲ್ಲಿರುವ ಗುಳ್ಳೆಗಳಂತಿರುವ ಅವುಗಳನ್ನು ಸುಲಭವಾಗಿ ನಿವಾರಿಸಬಹುದು, ಯಾಕೆಂದರೆ, ನಿಮ್ಮ ಬೆಂಗಾವಲಾಗಿ (ದೈವೀ ಶಕ್ತಿಯೊಂದು ಕಾರ್ಯನಿರತವಾಗಿದೆ. – ಅದರ ಅರಿವು ನಿಮಗೆ ಒಂದಿನಿತೂ ಇಲ್ಲ.
ಸಹಕಾರವೇ ಮುಂಬರುವ ಘಟನೆಗಳ ಜೀವಾಳ, ಆದರೆ ಕಾರ್ಯಮಾಡುವವರಲ್ಲಿ ಅಸ್ಥಿರತೆಯಿದ್ದರೆ, ಅವರು ಆ (ದೈವೀ) ಶಕ್ತಿಯನ್ನು ಪೋಲು ಮಾಡಿದಂತೆ.
ಮನುಷ್ಯ ವ್ಯಕ್ತಿಯ, ಮತ್ತು ಇಡೀ ಮಾನವತೆಯ ಒಳಿತನ್ನು ಸುವ್ಯವಸ್ಥೆಯಲ್ಲಿಡುವ ಸಮಾನ ಧೈಯದಿಂದ ನಾವು ಒಂದುಗೂಡಿದ್ದೇವೆ.
ಸೇವಿಸಲ್ಪಡುವದಕ್ಕಿಂತ ಸೇವೆಯೇ ಶ್ರೇಷ್ಠ ಎಂಬ ಆದರ್ಶವನ್ನಿಟ್ಟುಕೊಂಡು, ಶಹಜಹಾನಪುರದ ಶ್ರೀ ರಾಮಚಂದ್ರ ಮಿಷನ್ನು ಮಾನವಕುಲದ ಸೇವೆಗೈಯಲು ಕಂಕಣಬದ್ಧವಾಗಿ ನಿಂತಿದೆ. ಅದರಲ್ಲಿ ನಾವೆಲ್ಲರೂ ಸಮಾನ ವಿನ್ಯಾಸ ಮತ್ತು ಶಿಸ್ತಿನಲ್ಲಿ ಪೋಣಿಸಲ್ಪಡಲಿದ್ದೇವೆ.
***