ಮಾನವ ಕುಲದ ಆಧ್ಯಾತ್ಮಿಕ ಇತಿಹಾಸದಲ್ಲಿ ನಮ್ಮ ಮಹಾಗುರುಗಳ ಜನ್ಮದಿನವು ಅತ್ಯಂತ ಅರ್ಥವತ್ತಾದ ಹಾಗೂ ಮಹತ್ವದ ಒಂದು ದಿನವಾಗಿದೆ. ವಿಶೇಷವಾಗಿ, ದೈವಿಕತೆಯೇ ಇಲ್ಲದ ಹಾಗೂ ಅತಿಯಾದ ಭೌತಿಕತೆಯಿಂದ ತುಂಬಿದ ಇಂದಿನ ದಿನಗಳಲ್ಲಿ, ಈ ಜನ್ಮದಿನವು ಒಂದು ಆಶಾಕಿರಣದಂತೆ ಎದ್ದು ತೋರುತ್ತದೆ.

ಪುರಾತನ ಕಾಲದಲ್ಲಿ ಕೆಲವು ಸಂತರು ಜೀವಿಸಲು ಮತ್ತು ಅಸ್ತಿತ್ವದ ಕುರಿತಾದ ಸಂಘರ್ಷದಲ್ಲಿ ತಾವು ಅಶಕ್ತರು ಎಂದು ಅವರಿಗೆ ಕಂಡುಬಂದಾಗ, ಒಂದು ತರಹದ ಪಲಾಯನವಾದದ ಮೊರೆ ಹೊಕ್ಕರು; ಸಮಾಜದೊಡನೆ ತಮ್ಮ ಸಂಬಂಧಗಳನ್ನು ಕಡಿದುಕೊಂಡು ಏಕಾಂತದ ಜೀವನ ಸಾಗಿಸಿದರು. ಅದನ್ನು ಅವರು ತ್ಯಾಗ (ಸಂನ್ಯಾಸ) ಎಂದು ಕರೆದರು. ಬಲವಂತದ ಬಹಳಷ್ಟು ಪದ್ಧತಿಗಳು ದುರ್ಬಲಗೊಂಡು ವಿಕೃತರೂಪ ತಾಳಿದಂತೆ, ಸಂನ್ಯಾಸವನ್ನು ಸ್ವೀಕರಿಸುವ ಈ ಪದ್ಧತಿಯು ಕೂಡ ವಿಕೃತಗೊಂಡಿತು. ಈಗ, ಸಂನ್ಯಾಸವು, ಅಸ್ತಿತ್ವ ಹಾಗೂ ಉಳಿವುಗಳ ಹೋರಾಟದ ಮತ್ತೊಂದು ಮಾರ್ಗವಾಯಿತು. ಬಹಳಷ್ಟು ಜನರಿಗೆ ಇದೊಂದು ಅತ್ಯಂತ ಲಾಭದಾಯಕ ಉದ್ಯೋಗವೆಂದು ಸಿದ್ಧವಾಗುತ್ತಿದೆ. ಒಬ್ಬ ನಿಜವಾದ ಸತ್ಯಾನ್ವೇಷಿಗೆ ಸನ್ಯಾಸವು ಗೃಹಸ್ಥ ಜೀವನದಷ್ಟೇ ಒಳ್ಳೆಯದು (ಅಥವಾ ಅಷ್ಟೇ ಕೆಟ್ಟದ್ದು). ವಾಸ್ತವವಾಗಿ ಸಂನ್ಯಾಸವು ಹೆಚ್ಚು ಅಪಾಯಗಳುಳ್ಳದ್ದಾಗಿದೆ. ಏಕೆಂದರೆ, ಅದು ಸುಲಭದಲ್ಲಿ ಬೀಳಬಹುದಾದ (ಗರ್ತಗಳಿಂದ) ಪತನ ಸಾಧ್ಯತೆಗಳಿಂದ ತುಂಬಿದೆ.

ಯಾವುದೇ ತರಹದ ಆಧ್ಯಾತ್ಮಿಕ ತಳಹದಿಯಿಲ್ಲದ ಭೌತಿಕ ನಾಗರಿಕತೆಯು ತೀವ್ರ ವ್ಯಾಪ್ತಿಯು ಮಾನವ ಕುಲದ ಗಮನವನ್ನು ಥಳಕು ಬೆಳಕಿನ ಕಡೆಗೆ ತಿರುಗಿಸಿದೆ. ಅದರ ಪರಿಣಾಮವಾಗಿ, ‘ಅಸ್ತಿತ್ವದ ಹೋರಾಟದಲ್ಲಿ ಬಲವಂತನದೇ ಉಳಿವು ಎಂಬ, ಪ್ರಾಣಿ-ಜಗತ್ತಿನ ನಿಯಮದ ಮನೋಧರ್ಮವು ಬೆಳೆದು ಬಂದಿತು. ಇದರ ಪ್ರಕಾರ ಮನುಷ್ಯ ಮತ್ತು ನಾಯಿಯ ನಡುವೆ ಯಾವುದೇ ಮೂಲಭೂತ ವ್ಯತ್ಯಾಸವಿಲ್ಲ. ಫಲವು ಸಾಧನೆಯನ್ನು ಸಮರ್ಥಿಸುವುದು. ಪಾಶವೀ (ಮೃಗೀಯ) ಶಕ್ತಿಯು ಏಕಮಾತ್ರ ಸಾಧನವಾಯಿತು. ಅದರ ಕೊರತೆಯಿರುವವರು ಸುಳ್ಳು, ಬೂಟಾಟಿಕೆ, ಠಕ್ಕು, ಮೋಸಗಾರಿಕೆ ಮುಂತಾದ ಸಾಧನಗಳನ್ನು ಉಪಯೋಗಿಸಲು ವಿವಶರಾಗಿದ್ದಾರೆ. ಸಮಾಜದ ಸೌಧವು ಹಗೆತನ, ದ್ವೇಷ ಹಾಗೂ ಭಯಗಳ ಆಧಾರದ ಮೇಲೆ ನಿರ್ಮಿತವಾಗುತ್ತ ಹೋಗುವುದು. ಪ್ರಾಣಿಗಳ ಸ್ಥಿತಿಯಿಂದ ಮಾನವತೆಯತ್ತಣ ವಿಕಾಸವು (ಜೈವಿಕ ವಿಕಾಸವು) ಬಹುತೇಕ ಪೂರ್ಣಗೊಂಡಿದೆ ಮತ್ತು ಈಗ ಇನ್ನೂ ಮುಂದಿನ ವಿಕಾಸಕ್ಕಾಗಿ ಹಾತೊರೆಯುತ್ತಿದ್ದಾನೆ. ಭಗವಂತನು ನಮ್ಮನ್ನು ಕಾಪಾಡಲಿ.

ಆಧ್ಯಾತ್ಮಿಕವಾಗಿ ಹಿಂದುಳಿದ ದೇಶಗಳಲ್ಲಿ, ಯಾರು ‘ನಾನೇ ದೇವರ ಪುತ್ರ’, ‘ನಾನು ಮತ್ತು ನನ್ನ ತಂದೆ ಒಂದೇ ಆಗಿರುವೆವು, ‘ನಾನೇ ದೇವದೂತ’ ಅಥವಾ ನಾನೇ ‘ಸತ್ಯ’ ಎಂದು ಮುಂತಾಗಿ ಘೋಷಣೆ ಮಾಡಿದರೋ ಅವರು ಬಹಳಷ್ಟು ಕಷ್ಟಗಳಿಗೆ ಗುರಿ ಮಾಡಲ್ಪಟ್ಟರು, ಹಾಗೂ ಕೆಲವರು ಕೊಲ್ಲಲ್ಪಟ್ಟರು ಕೂಡ. ಮತ್ತೆ ಈಗ, ಅವರನ್ನು ಪೂಜಿಸಲಾಗುತ್ತಿದೆ. ಆದರೆ ಅವರನ್ನು ಪೂಜೆ ಮಾಡುವವರು ಕೇವಲ ಹೋರಾಡುವುದಕ್ಕಾಗಿ ಮತ್ತು ಕೊಲ್ಲುವುದಕ್ಕಾಗಿ ಪೂಜೆ ಮಾಡುತ್ತಿರುವಂತೆ ತೋರುತ್ತದೆ. ಮತಧರ್ಮ ಹಾಗೂ ವಿಚಾರಧಾರೆಗಳ ಹೆಸರಿನಲ್ಲಿ ನಡೆದ ಯುದ್ಧಗಳು ಮತ್ತು ಸಾಮೂಹಿಕ ಕೊಲೆಗಳು, ಜಗತ್ತಿನ ಆದ್ಯಂತ ವಿವೇಕಿಗಳ ಹೃದಯದಲ್ಲಿ ಈ ಮತಧರ್ಮ ಹಾಗೂ ಆದರ್ಶಗಳ ಬಗ್ಗೆ ಜುಗುಪ್ಪೆಯನ್ನು ಉಂಟುಮಾಡಿವೆ. ಈಗ ಅವರು ದೈವೀ ಪ್ರಕಾಶಕ್ಕಾಗಿ ಹುಡುಕಾಡುತ್ತಿದ್ದಾರೆ. ನಮಗೆ ಒಂದು ಮಹಾ ಆಧ್ಯಾತ್ಮಿಕ ಬಳುವಳಿಯಿದೆ. ನಾವು ಆಧ್ಯಾತ್ಮಿಕತೆಯಲ್ಲಿ ಬಹಳ ಮುಂದುವರಿದವರಾಗಿರುವೆವೆಂದು ನಮ್ಮಿಂದ ಅಪೇಕ್ಷಿಸಲಾಗುತ್ತಿದೆ. ನಾವು ಈ ಘನ ಸಂಪ್ರದಾಯವನ್ನು ಎತ್ತರಕ್ಕೆ ಎತ್ತಿ ಹಿಡಿಯೋಣ. ನಮ್ಮ ಶ್ರೇಷ್ಠ ಗುರುಗಳ ಸಂದೇಶದ ದೀಪಧಾರಿಗಳಾಗಲು ಕಟಿಬದ್ಧರಾಗೋಣ. ನಮ್ಮನ್ನು ಆ ಸ್ಥಿತಿಗೆ ಕರೆದೊಯ್ಯಲು ನಾವೆಲ್ಲರೂ ಪ್ರಾಮಾಣಿಕವಾಗಿ ಅವರಲ್ಲಿ ಪ್ರಾರ್ಥಿಸಿಕೊಳ್ಳೋಣ.

ನಮ್ಮ ಗುರು ಮಹಾರಾಜರು ನಮಗೆ ಸಹಜಮಾರ್ಗವನ್ನು ನೀಡಿದ್ದಾರೆ ಮತ್ತು ನಾವು ಅವರ ದೈವೀ ಸಂದೇಶವನ್ನು ಪ್ರಸಾರ ‘ಮಾಡುವ ಕಾರ್ಯವನ್ನು ಕೈಗೊಂಡಿದ್ದೇವೆ. ಅವರ ಬೋಧನೆಗಳ ನೈಜ ಸಾರವನ್ನು ಗ್ರಹಿಸುವುದು ಹಾಗೂ ಅಜ್ಞಾತ ಅಪಾಯಗಳಿಂದ ತಪ್ಪಿಸಿಕೊಳ್ಳುವುದು, ನಿಷ್ಠ ಜಿಜ್ಞಾಸುಗಳಾಗಿ ನಮ್ಮ ಕರ್ತವ್ಯವಾಗುತ್ತದೆ. ಜಗತ್ತಿನ ಅಸಂಖ್ಯಾತ ಪಂಥಗಳಂತೆ ಮತ್ತೊಂದು ಅಣಬೆಯಾಗಿ ನಮ್ಮ ಸಂಸ್ಥೆಯು ಅಧಃಪತನಗೊಳ್ಳಲು ನಾವು ಅವಕಾಶ ಕೊಡಬಾರದು. ವಾಸ್ತವದಲ್ಲಿ ನಮ್ಮ ಗುರು ಮಹಾರಾಜರ ಬೋಧನೆಗಳು ಸಾರಭೂತವಾಗಿ ಆಧ್ಯಾತ್ಮಿಕವಾಗಿವೆ, ಮತ್ತು ತಾವಾಗಿಯೇ ಸ್ವತಃ ಅಸಂಸ್ಕೃತ ಪಶುತ್ವಕ್ಕೆ ಅಧಃಪತನಗೊಳ್ಳಲಾರದಂತಹವಾಗಿವೆ. ಅವುಗಳ ತಿರುಳಿನ ಸಾರಸತ್ತ್ವವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಹಾಗೂ ಅವರ ಧೈಯೋದ್ದೇಶವನ್ನು ಈಡೇರಿಸುವುದು ನಮಗೆ ಬಿಟ್ಟದ್ದಾಗಿದೆ.

ಸಹಜಮಾರ್ಗ ಪದ್ಧತಿಯ ಕಾರ್ಯಪಟುತ್ವವೇನೆಂಬುದನ್ನು ನಿಮ್ಮ ಮುಂದಿಡಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ. ನಮ್ಮ ಸಮರ್ಥ ಗುರುಗಳು ‘ಕೇಂದ್ರ ಮಂಡಲ’ವನ್ನು ಅನಾವೃತಗೊಳಿಸಿದರು. ಹಾಗೂ ನಮ್ಮ ಗುರುಗಳು ನಮಗೆ, ಎಲ್ಲ ಚಟುವಟಿಕೆಗಳ ಕಾರ್ಯಕ್ಷೇತ್ರವಾದ ಹೃದಯ ಮಂಡಲವನ್ನು ಕೂಡ ತೋರಿಸಿಕೊಂಡಿದ್ದಾರೆ. ನಮ್ಮ ತಿಳಿವಳಿಕೆಗೋಸ್ಕರ ನಮ್ಮ ಗುರುಗಳು ಇವೆರಡರ ಮಧ್ಯದ ಮನೋಮಂಡಲವನ್ನು ನಮಗೆ ತೋರಿಸಿದರು. ಸಮರ್ಥನಾದ ಗುರುವಿನ ಪರಿಣತ ಮಾರ್ಗದರ್ಶನದಲ್ಲಿ ಅಭ್ಯಾಸವನ್ನು ಕೈಗೊಂಡರೆ, ಹಾಗೂ ಅಂತಿಮ ಸತ್ಯವನ್ನು ತಲುಪಲು ಮತ್ತು ಸಾಕ್ಷಾತ್ಕರಿಸಿಕೊಳ್ಳಲು ಪೂರ್ಣ ಸಿದ್ಧತೆ ಹಾಗೂ ದೃಢ ನಿರ್ಧಾರ ಮಾಡಿದ್ದರೆ, ನಮ್ಮ ಹೃದಯದ ಅಧ್ಯಯನ ಮತ್ತು ಶುದ್ದೀಕರಣವೊಂದೇ ಮನಸ್ಸಿನ ಚಟುವಟಿಕೆಗಳನ್ನು ಮತ್ತು ಕೇಂದ್ರದ ಅಸ್ತಿತ್ವವನ್ನು ನಮಗೆ ಪ್ರತ್ಯಕ್ಷ ಅನುಭವ ಮಾಡಿಕೊಡುವುದು.

ಸಮಗ್ರ ಅಭ್ಯಾಸವು ಸಾರತಃ ಚಿಂತನವೇ ಆಗಿದೆ ಎಂಬುದು ಸರಿಯೆ. ಸಾಮಾನ್ಯವಾಗಿ, ನಮ್ಮ ಚಿತ್ತವು ಯಾವುದಾದರೊಂದು ಸ್ಥೂಲ ವಸ್ತುವೊಂದಕ್ಕೆ ಸಂಬಂಧಿಸಿರುವಾಗ ನಮಗೆ ಅದರ ಅರಿವುಂಟಾಗುತ್ತದೆ. ನಮ್ಮ ಸಾಮಾನ್ಯ ಪ್ರಜ್ಞೆಯು ಚಿಂತನವನ್ನು ಅದೆಂತಿದೆಯೋ ಅಂತೆಯೇ ಯಥಾವತ್ತಾಗಿ ಗ್ರಹಿಸಲಾರದು. ಪ್ರಜ್ಞೆಯ ಈ ಸೀಮಿತತೆಯಿಂದಾಗಿ, ನಮ್ಮ ಚಿಂತನವು ನಮ್ಮ ಗ್ರಹಿಕೆಗೆ ನಿಲುಕುವಂತೆ ಮಾಡಲು ನಾವು ಸಾಮಾನ್ಯವಾಗಿ ಅದನ್ನು (ವಿಚಾರ ಚಿಂತನ) ಘನೀಭೂತಗೊಳಿಸುವೆವು. ಹೀಗೆ ವಿಚಾರವನ್ನು ಹೀಗೆ ಗಟ್ಟಿಗೊಳಿಸುವ ಪ್ರವೃತ್ತಿ ಅಥವಾ ಮಾನಸಿಕ ಪ್ರಕ್ಷೇಪಣವಾದ ಈ ಪ್ರವೃತ್ತಿಯು ನಮ್ಮ ಅಸಂತುಲಿತ ಸ್ಥಿತಿಯ ಮೂಲ ಕಾರಣವಾಗಿದೆ.

ಈ ಪ್ರವೃತ್ತಿಯನ್ನು ಅಳಿಸಿ ಹಾಕದಿರುವವರೆಗೂ ನಾವು ನಮ್ಮ ರೂಢಿಗಳ ದಾಸರಾಗಿಯೇ ಉಳಿಯುವೆವು. ಅದು ಹೃದಯದಲ್ಲಿ ಪ್ರಬಲ ಇಷ್ಟ ಅನಿಷ್ಟಗಳನ್ನು, ತೊಡಕುಗಳನ್ನು ಮತ್ತು ಮಲಿನತೆಗಳನ್ನು ಉಂಟುಮಾಡುತ್ತದೆ. ಈ ರೀತಿಯಾಗಿ ಅದು ನಮ್ಮ ಇಡೀ ಅಸ್ತಿತ್ವವನ್ನು ಸ್ಥೂಲ (ಜಡ) ಗೊಳಿಸುವುದು ಮತ್ತು ಸಂಪೂರ್ಣ ಅಸ್ತಿತ್ವವನ್ನು ಸಂಕುಚಿತಗೊಳಿಸುವುದು; ಹಾಗೂ ನಾವು ಪ್ರಾಣಿಗಳಂತೆ ಐಹಿಕ ಸುಖಗಳನ್ನು ಅರಸುತ್ತ ನಮ್ಮ ಇಚ್ಛೆಗಳನ್ನು, ಬಯಕೆಗಳನ್ನು ಬೆಳೆಸುತ್ತ, ಇಂದ್ರಿಯ ತೃಪ್ತಿಯ ಚಟುವಟಿಕೆಗಳನ್ನು ಸಮರ್ಥಿಸುವ ವಿಚಾರಗಳನ್ನು ನಿಯಂತ್ರಿಸದೆ ಜೀವಿಸತೊಡಗುವೆವು.

ನಮ್ಮಗುರುಮಹಾರಾಜರಿಂದಾಗಿ, ಚಿತ್-ಶಕ್ತಿಯ (ಚಿಂತನದ) ಈ ರಹಸ್ಯವು ಬೆಳಕಿಗೆ ಬಂದಿದೆ. ನಮ್ಮ ಸಂಸ್ಥೆಯಲ್ಲಿ ಈ ರೂಢಿಗಳನ್ನು ಬೆಳೆಸಿಕೊಳ್ಳುವ ಮತ್ತು ಸ್ಥೂಲವಾಗುವ ಪ್ರವೃತ್ತಿಗಳನ್ನು ನಾಶಗೊಳಿಸಲು ಈ ಅದ್ಭುತ ಚಿತ್‌ಶಕ್ತಿಯನ್ನು (ಚಿಂತನ ಶಕ್ತಿಯನ್ನು ಬೆಳೆಸಿಕೊಳ್ಳಲಾಗಿದೆ. ಗುರುಗಳ ಶಕ್ತಿಯು ನೇರವಾಗಿ ಕಾರಣ ಶರೀರದ ಮೇಲೆ ಕೆಲಸ ಮಾಡುವುದು, ಮತ್ತು ಸಂತುಲಿತ ಸ್ಥಿತಿಯ ಬೀಜವನ್ನು ಆರಂಭದಿಂದಲೇ ಬಿತ್ತಲಾಗುವುದು. ಅನೇಕ ಅಭ್ಯಾಸಿಗಳು ತಮಗೆ ಏನೂ ಅನಿಸುವುದೇ ಇಲ್ಲ ಎಂದು ಆಕ್ಷೇಪ ಎತ್ತುತ್ತಾರೆ. ಪ್ರಜ್ಞೆಗಿಂತಲೂ ಸೂಕ್ಷ್ಮತರವಾದ ಶಕ್ತಿಯು ಕೆಲಸ ಮಾಡುತ್ತಿರುವಾಗ ಅವರು ಅದನ್ನು ಹೇಗೆ ಅದನ್ನು ಇಂದ್ರಿಯಗಳಿಂದ ಅನುಭವಪಟ್ಟು ಕಾಣಬಲ್ಲರು ? ಅಭ್ಯಾಸಿಗಳು ಪ್ರೇಮ ಹಾಗೂ ಶ್ರದ್ಧೆಗಳಿಂದ ಸಾಧನೆ ಮಾಡುತ್ತ ಹೋದರೆ, ತಮ್ಮಲ್ಲಿ ಉಂಟಾದ ದೊಡ್ಡ ಬದಲಾವಣೆಯನ್ನು ಅವರು ಅರಿಯಬಲ್ಲರು. ಮನಸ್ಸಿನ ಎಲ್ಲ ಅಧೋಮುಖಿ ಪ್ರವೃತ್ತಿಗಳು ದುರ್ಬಲಗೊಳಿಸಲ್ಪಡುವುದು, ಮತ್ತು ಯೌಗಿಕ ಪ್ರಾಣಾಹುತಿಯ ಮೂಲಕ ದೈವೀ ಪ್ರಚೋದನೆಯನ್ನು ಅಭ್ಯಾಸಿಗೆ ನೀಡಲಾಗುವುದು. ಯೌಗಿಕ ಪ್ರಾಣಾಹುತಿಯು ಅಭ್ಯಾಸಿಗೆ ಅಪಾರ ಸಹಾಯ ಮಾಡುವುದು. ಅವನ ಬಹಳಷ್ಟು ಅನಾವಶ್ಯಕ ಶ್ರಮದ ಉಳಿತಾಯವಾಗುವುದು. ಅತ್ಯಂತ ಸ್ವಾಭಾವಿಕ ರೀತಿಯಲ್ಲಿ ಅವನು ಆಧ್ಯಾತ್ಮಿಕ ಯಾತ್ರೆ ಪ್ರಾರಂಭ ಮಾಡುವನು.

ಇಂತಹ ನೇರವಾದ ಹಾಗೂ ಸುಲಭವಾದ ಪದ್ಧತಿಯನ್ನು ನಾನು ಬೇರೆಲ್ಲೂ ಕಂಡಿಲ್ಲ. ನೀವು ಬೇಡಿದ ಮಾತ್ರಕ್ಕೆ ನಿಮಗೆ ದಯಪಾಲಿಸಲಾಗುವ ಸಿದ್ಧಿಗಳನ್ನು ಬೇರೆಲ್ಲೂ ಕಂಡಿಲ್ಲ. ನಮಗೆ ಸರ್ವಸ್ವವನ್ನೂ ಕೊಡಲೆಂದು ಭಗವಂತನು ನಮ್ಮ ಮಧ್ಯದಲ್ಲಿ ಬಂದಿದ್ದಾನೆ. ಆದರೆ ಆತನನ್ನು ಕಾಣಲು ನಿರಾಕರಿಸಿದರೆ ನಾವೇ ತಪ್ಪುಗಾರರು. ಇಲ್ಲಿ ಭಗವಂತನು ನಮ್ಮೊಳಗೇ ನೆಲೆಸಿದ್ದು ನಮಗೆ ಎಲ್ಲವನ್ನೂ ದಯಪಾಲಿಸುವ ಭರವಸೆ ನೀಡುತ್ತಿದ್ದಾನೆ. ಅವನ ಮೌನ ಕರೆಯನ್ನು ನಾವು ಆಲಿಸೋಣ ಹಾಗೂ ನಮಗೆ ವಹಿಸಲಾದ ಕರ್ತವ್ಯವನ್ನು ನಿರ್ವಹಿಸೋಣ. ನಮಗೆ ಸದಾಕಾಲ ಮಾರ್ಗದರ್ಶನ ನೀಡುತ್ತ ಅವನು ನಮ್ಮ ಹೃದಯದಲ್ಲಿ ನೆಲೆಸಿರಲಿ.

[ಸಹಜಮಾರ್ಗ ಪತ್ರಿಕೆ, ನಂ. 1, ಜನೇವರಿ 1991]