ಮಿಷನ್ನಿನ ವಾರ್ಷಿಕ ಉತ್ಸವ (ಬಸಂತ ಪಂಚಮಿ) ಒಂದು ಶುಭ ಸಂದರ್ಭವಾಗಿದೆ. ಒಬ್ಬನು ತನ್ನ ಹೃದಯದ ಕಣ್ಣಿನಿಂದ ನೋಡಲು ಶಕ್ತನಾದರೆ, ಇದನ್ನು ಮನಗಾಣಲು ಎಂದಿಗೂ ವಿಫಲನಾಗಲಾರನು. ಈ ಮಹಾ ಸಮ್ಮೇಳನದ ಮಧ್ಯದಲ್ಲಿಯ ಪರಮ ಶಾಂತಿಯು, ಸಂತರು ಅನೇಕ ವರ್ಷಗಳಿಂದ ಯಾವುದಕ್ಕೋಸ್ಕರ ಹೆಣಗಾಡಿದರೋ ಅದಾಗಿದೆ. ಅತ್ಯಂತ ಶುದ್ಧ ಹೃದಯಗಳ ಅತಿ ಸೂಕ್ಷ್ಮ ಕಂಪನಗಳಿಂದ ಆವಿಷ್ಟವಾದ ವಾತಾವರಣವು, ಒಬ್ಬನ ಹೃದಯವು ತಿಳಿದೋ ತಿಳಿಯದೆಯೋ ಯಾವ ಅವನ ನಿಜಧಾಮದತ್ತ ಸದಾಕಾಲವೂ ಅಭಿಮುಖವಾಗಿ ನಿರ್ದೇಶಿತವಾಗಿರುವುದೋ ಅದನ್ನು ಜ್ಞಾಪಿಸುತ್ತದೆ. ಇದು ಹೀಗಿರುವುದೇಕೆ ?
ಇಲ್ಲಿ ಹೃದಯದಿಂದ ಹೃದಯಕ್ಕೆ ಸಂದೇಶವು ಸಂವಹಿಸಲ್ಪಡುತ್ತದೆ. ಉಚ್ಚ ಸ್ವರದ ಹಾಗೂ ಆಲಂಕಾರಿಕ ಭಾಷೆಯ ವ್ಯಾಕರಣ ಹಾಗೂ ಸಂಗೀತಮಯ ಶಬ್ದಗಳ ಮೋಡಿಯು ಜನರಿಗೆ ಚಿತ್ತಾಕರ್ಷಕವಾಗಬಹುದು, ಆದರೆ ಸತ್ಯವನ್ನು ಅವುಗಳ ಮೂಲಕ ತಲುಪಿಸಲಾಗದು. ಪಚ್ಚ ಮತ್ತು ಮಾಣಿಕ್ಯಖಚಿತವಾದ ಸುವರ್ಣ ಸಿಂಹಾಸನವು ಅದರ ಮೇಲೆ ಆಸೀನರಾದ ಗುರುಗಳತ್ತ ಜನರನ್ನು ಸೆಳೆಯಬಹುದು; ಆದರೆ, ಅವರ ಹೃದಯಗಳಿಂದ ಭಗವಂತನು ದೂರ ಉಳಿಯುತ್ತಾನೆ. ಪವಾಡಗಳು ಹಾಗೂ ಡೊಂಬರಾಟದ ಸಾಹಸ ಕೃತ್ಯಗಳು ಜನಸಮೂಹದ ಕುತೂಹಲ ತಣಿಸಬಹುದು; ಆದರೆ, ಜಿಜ್ಞಾಸು ಹೃದಯದ ನಿಜವಾದ ತಳಮಳವು ಅವುಗಳಿಂದ ಎಂದೆಂದಿಗೂ ಅತೃಪ್ತವಾಗಿಯೇ ಉಳಿಯುವುದು.
ಶ್ರೀ ರಾಮಚಂದ್ರ ಮಿಷನ್ ಒಂದು ಅದ್ವಿತೀಯ ಸಂಸ್ಥೆಯಾಗಿದೆ. ಜಗತ್ತಿನಲ್ಲಿ ಇಂದು ಇಂತಹ ಸಂಸ್ಥೆ ಬೇರೊಂದಿಲ್ಲ. ಒಬ್ಬನು ಆಧ್ಯಾತ್ಮಿಕ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಲು ಬಯಸಿದರೆ ಅವನು ಇಲ್ಲಿಗೇ ಬಂದು ಸ್ವತಃ ತಾನೇ ಕಂಡುಕೊಳ್ಳಬೇಕಾಗುವುದು. ಬೇರೆ ಸಂಸ್ಥೆಗಳಲ್ಲಿ ಮಾಡುವಂತೆ ಸದಸ್ಯನಾಗುವುದಕ್ಕೆ ಕರಾರುಗಳ ರೂಪದಲ್ಲಿ ಇಲ್ಲಿ ಯಾವುದೇ ಬಂಧನಗಳನ್ನು ಹೇರಲಾಗುವುದಿಲ್ಲ. ವಾಸ್ತವವಾಗಿ, ಒಬ್ಬನು ಈ (ಅಧ್ಯಾತ್ಮ) ವಿದ್ಯಾ ಸಂಸ್ಥೆಯಲ್ಲಿ ಪ್ರವೇಶಿಸಿದರೆ ಅವನು ಎಲ್ಲ ಬಂಧನಗಳಿಂದ ಮುಕ್ತನಾಗುವನು. ಅದೇನೇ ಇದ್ದರೂ, ಕೆಲವರು ಈ ಅಪ್ಪಟ ಮೃದು ಧೋರಣೆಯನ್ನು ಸ್ವೇಚ್ಛಾ ಸ್ವಾತಂತ್ರ್ಯವೆಂದು ತಪ್ಪಾಗಿ ತಿಳಿಯುವರು; ಹಾಗೂ ಮಾನವೀಯ ಶಿಷ್ಟಾಚಾರಗಳನ್ನು ಮರೆತು ಸ್ವಚ್ಛಂದವಾಗಿರಲು ಯತ್ನಿಸುವರು. ವಾಸ್ತವಿಕವಾಗಿ ಅಂತಹ ವ್ಯಕ್ತಿಗಳು ಬೇಗ ಬಿಟ್ಟು ಹೋಗುವರೆಂಬುದೂ ಸರಿಯೆ. “ದುಷ್ಟರಿಗೆ ಮತ್ತು ಹೇಡಿಗಳಿಗೆ ದೇವರು ಲಭ್ಯನಲ್ಲ” ಎಂಬ ಹೇಳಿಕೆ ಸರಿಯೇ ಇದೆ. ಶ್ರೀ ರಾಮಚಂದ್ರ ಮಿಷನ್ನಿನ ಮೂಲಭೂತ ತತ್ತ್ವವು ದೇವರು ಮತ್ತು ದೇವರು ಮಾತ್ರವೇ ಹೊರತು ಬೇರೇನೂ ಅಲ್ಲ. ಈ ದೈವೀ ತತ್ತ್ವವು ಎಲ್ಲಿಯವರೆಗೆ ಯಾವುದೇ ಸಂಸ್ಥೆಯ ಮೂಲಭೂತ ಆಧಾರವಾಗಿರುವುದೋ ಅಲ್ಲಿಯವರೆಗೂ ಅದು ಬಾಳುತ್ತದೆ, ಮತ್ತು ದೈವೀ ತತ್ತ್ವದ ಹೊರತಾಗಿ ಬೇರೇನಾದರೂ ಹೆಚ್ಚು ಮಹತ್ತ್ವದ್ದಾದ ಕ್ಷಣವೇ ಅದು ವಿಚ್ಛಿನ್ನಗೊಳ್ಳುವುದು. ನಮ್ಮ ಸಂಸ್ಥೆಯ ಸದಸ್ಯನಿಗೆ ಇರಬೇಕಾದ ಏಕೈಕ ಕಡ್ಡಾಯವೆಂದರೆ ಅವನು ಗುರುವಿಗೆ ಭದ್ರವಾಗಿ ಅಂಟಿಕೊಳ್ಳಬೇಕೆಂಬುದೇ ಆಗಿದೆ.
ಆಲಸ್ಯವು ನಮ್ಮ ದೇಶದ ವಿಶೇಷ ಗುಣ-ಲಕ್ಷಣಗಳಲ್ಲಿ ಒಂದು ಆಗಿದೆಯೆಂಬಂತೆ ತೋರುವುದು; ಮತ್ತು ಸಹಜಮಾರ್ಗ ನಮಗೆ ಅತ್ಯಂತ ಒಗ್ಗುತ್ತದೆಯೆಂದು ನಾವು ತಿಳಿಯುತ್ತೇವೆ. ಗುರು ಮಹಾರಾಜರಿಗೆ ಧನ್ಯವಾದಗಳು. ಕೆಲವು ಸಲ ಅದರ ಅತೀವ ಸರಳತೆಯಿಂದಾಗಿ ನನಗೆ ಕಿರಿ ಕಿರಿ ಉಂಟಾಗದಿರಲು ಸಾಧ್ಯವಿಲ್ಲ. ವಸ್ತುತಃ ಅದನ್ನು ಎಷ್ಟು ಸರಳಗೊಳಿಸಲಾಗಿದೆ ಎಂದರೆ ನಾವು ಜಾಗರೂಕತೆ ಹಾಗೂ ಎಚ್ಚರಿಕೆಯಿಂದಿರದಿದ್ದರೆ ಅದನ್ನು ತಪ್ಪಿಸಿಕೊಳ್ಳುವ ಸಂಭವವಿದೆ. ಬ್ರಹ್ಮವಿದ್ಯೆಯು ಕಬ್ಬಿಣದ ಕಡಲೆಯನ್ನು ನುರಿಸುವಷ್ಟು ಕಷ್ಟಕರವಾಗಿದೆಯೆಂದು ಘೋಷಿಸುವ ವೃತ್ತಿಪರ ಗುರುಗಳೊಂದಿಗೆ ನಾನು ವಾದಕ್ಕಿಳಿಯಬಯಸುವುದಿಲ್ಲ. ಹಾಗೆ ಹೇಳಿಕೊಳ್ಳುವದೆಂದರೆ ಒಬ್ಬನು ತನ್ನ ಅಹಂಕಾರ ಮತ್ತು ಗರ್ವಗಳನ್ನು ಹೊರ ತೋರಿದಂತಾಗುವುದು. ನಮ್ಮ ಮಧ್ಯದಲ್ಲಿ ಅಂತಹ ಸಮರ್ಥ ಗುರುವು ದೊರೆತಿರುವಾಗ, ಅದು ಎಂದೆಂದಿಗೂ ಕಷ್ಟಕರವಾಗಲಾರದು. ಆದರೆ ಹಾಗಿದ್ದಾಗಲೂ, ನಾವು ನಮ್ಮ ಕರ್ತವ್ಯಗಳನ್ನು ಮರೆಯಕೂಡದು. ನಾವು ನಮ್ಮ ಗುರುಗಳನ್ನು ಅಷ್ಟೊಂದು ಪ್ರೀತಿಸುತ್ತೇವೆ ಎಂದು ಹೇಳಿಕೊಳ್ಳುವಾಗ, ನಮ್ಮ ಪಾಲಿನ ಕರ್ತವ್ಯವನ್ನು ಅವನು ಮಾಡಲು ಬಿಟ್ಟುಬಿಡುವುದು ಯೋಗ್ಯವೆನಿಸುವುದೇ ?
ಇಲ್ಲಿ ದುಷ್ಟರಿಗೆ ಮತ್ತು ಅಂಜುಬುರುಕರಿಗೆ ಸ್ಥಳವಿಲ್ಲ ಎಂಬುದನ್ನು ಈ ಮೊದಲೇ ಹೇಳಲಾಗಿದೆ. ಅಂಜಿಕೆಯು ಹೇಡಿತನದ ಪರಿಣಾಮವಾಗಿದೆ ಹಾಗೂ ದ್ವೇಷ ಮತ್ತು ದುಷ್ಟತನಗಳು ಸ್ವಾರ್ಥ ಮತ್ತು ಆಲಸ್ಯದ ಪರಿಣಾಮಗಳಾಗಿವೆ. ನಮ್ಮ ಗುರುಗಳ ಸಂದೇಶದ ದೀವಟಿಗೆ ಎತ್ತಿ ಹಿಡಿದಿರುವ ನಾವು ನಮ್ಮ ಹೃದಯಗಳನ್ನು ಸಂಪೂರ್ಣವಾಗಿ ಶುದ್ಧಗೊಳಿಸಿಕೊಳ್ಳಬೇಕು. ಎಲ್ಲ ತರಹದ ಹೆದರಿಕೆ, ದ್ವೇಷ, ಸ್ವಾರ್ಥ ಹಾಗೂ ಆಲಸ್ಯಗಳಿಂದ ನಾವು ನಮ್ಮನ್ನು ಬಿಡುಗಡೆಗೊಳಿಸಿಕೊಳ್ಳಬೇಕು. ಭಗವತ್ಪ್ರೇಮದ ಅಭಾವದಿಂದಾಗಿ ಅಂಜಿಕೆ ಹುಟ್ಟುವುದು. ನಿಜವಾದ ಆತ್ಮನೇ ಆದ ಭಗವಂತನಿಂದ ನಾವು ವಿಮುಖರಾದಾಗ ಸ್ವಾರ್ಥವು ಪಟ್ಟುಬಿಡದೆ ಉಳಿದಿರುತ್ತದೆ. ಆಲಸ್ಯವು ಭಗವಂತನ ಕುರಿತಾದ ನಮ್ಮ ಅನ್ವೇಷಣೆಯ (ತೀವ್ರತೆಯ) ಅಭಾವದ ಪರಿಣಾಮವಾಗಿದೆ. ಶ್ರದ್ಧೆ, ಪ್ರೇಮ, ಆಸಕ್ತಿ ಹಾಗೂ ತಳಮಳಗಳೊಂದಿಗೆ ಗುರುವಿಗೆ ಸರ್ವಸ್ವವನ್ನೂ ಸಮರ್ಪಣ ಮಾಡುವುದೇ ಈ ಎಲ್ಲ ಕ್ಷೇಶಗಳಿಂದ ಮುಕ್ತರಾಗುವ ಏಕೈಕ ಮಾರ್ಗವಾಗಿದೆ.
[ಸಹಜಮಾರ್ಗ ಪತ್ರಿಕೆ ನಂ. 1, 1962]