ನಾನು ಶ್ರೀರಾಮಚಂದ್ರ ಮಿಷನ್ ಸೇರಿದ ಸ್ವಲ್ಪ ಸಮಯದ ನಂತರ ಸಮಾಜದ ನನ್ನ ಚಿಕ್ಕ ವಲಯದಲ್ಲಿ ನಾನೊಂದು ವಿಚಿತ್ರ ಸನ್ನಿವೇಶವನ್ನು ಎದುರಿಸಬೇಕಾಯಿತು. ನನ್ನ ಎಲ್ಲ ಸಂಗಡಿಗರಲ್ಲಿ ನಾನು ಒಂದು ಆಧ್ಯಾತ್ಮಿಕ ಸಂಸ್ಥೆಯನ್ನು ಸೇರಿದುದನ್ನು ಅರಿತ ನನ್ನ ಮಿತ್ರರಲ್ಲಿ ಕೆಲವರು ಆಶ್ಚರ್ಯಚಕಿತರಾಗಿದ್ದರು. ಒಂದಿಲ್ಲೊಂದು ದಿನ ನಾನು ಇಂತಹ ದುಡುಕಿನ ಕೆಲಸ ಮಾಡುವವನೆಂದು ಯೋಚಿಸುತ್ತಿದ್ದ ಇನ್ನು ಕೆಲವರು ಅದರ ಬಗ್ಗೆ ಗುಸುಗುಸು ಮಾತನಾಡಿಕೊಂಡರು. ಅವರಲ್ಲಿ ಬಹುತೇಕ ಮಂದಿ ಧರ್ಮದ ಬಗ್ಗೆ ಕೇವಲ ವ್ಯಂಗ್ಯ ಅಥವಾ ತಿರಸ್ಕಾರ, ಮತ್ತೆ ನನ್ನ ಬಗ್ಗೆ ಅನುಕಂಪ ಹೊಂದಿದ್ದರು. ನನ್ನ ಎಲ್ಲ ಮಿತ್ರರೂ ಕಲೆ, ವಿಜ್ಞಾನ, ತಾಂತ್ರಿಕ ಅಥವಾ ಕಾನೂನು ವಿಷಯಗಳಲ್ಲಿ ವಿಶ್ವವಿದ್ಯಾಲಯದ ಪದವೀಧರರಾಗಿದ್ದರೇನೋ ನಿಜ. ಕೆಲವರು ಉದ್ಯೋಗದಲ್ಲಿದ್ದರು . ಮತ್ತು ಇನ್ನು ಕೆಲವರು ಉತ್ತಮ ಉದ್ಯೋಗಾವಕಾಶದ ಹುಡುಕಾಟದಲ್ಲಿದ್ದರು. ನಾನು ತಾಂತ್ರಿಕ ವಿಜ್ಞಾನದಲ್ಲಿ ಶಿಕ್ಷಕನಾಗಿ ಸೇರಿದ್ದ.
ವರುಷಗಳು ಉರುಳಿದವು. ಅಧ್ಯಾತ್ಮದಲ್ಲಿ ನನ್ನ ವಿಧ್ಯುಕ್ತವಾದ ತರಬೇತಿ ಬಹುತೇಕ ಮುಗಿಯಿತೆಂದು ನನ್ನ ಗುರುಗಳು ಘೋಷಿಸಿದರು. ‘ಪೂಜೆ’ ಎನ್ನುವುದು ಕಳಚಿ (ಬಿದ್ದು) ಹೋಯಿತು; ಅದು ನನ್ನ ತಿರಸ್ಕಾರ ಅಥವಾ ತಾತ್ಸಾರದಿಂದ ಆಗಿರದೆ, ಕೇವಲ ಉದಾತ್ತೀಕರಣದಿಂದಾಗಿತ್ತು, (ಉನ್ನತೀಕರಣದಿಂದಾಗಿತ್ತು). ಆಗಾಗ್ಗೆ ನನ್ನ ಹಳೆಯ ಗೆಳೆಯರನ್ನು ಕಾಣುವ ಸಂದರ್ಭ ನನಗೆ ಒದಗಿ ಬರುತ್ತಿತ್ತು. ಈಗ ಅವರು ಮೊದಲಿನ ನಿಶ್ಚಿಂತರಾದ, ಮುಕ್ತ ಚಿಂತನೆಯುಳ್ಳ ಪದವೀಧರರಾಗಿ ಉಳಿದಿರಲಿಲ್ಲ. ಅವರ ಈಗಿನ ಧರ್ಮಪರಾಯಣತೆಯನ್ನು, ತಿರಸ್ಕಾರ, ತಾತ್ಸಾರ ಅಥವಾ ಕರುಣಾ ಭಾವದಿಂದಲ್ಲದಿದ್ದರೂ, ಕೇವಲ ಅವರ ಆಧ್ಯಾತ್ಮಿಕ ಕ್ಷೇಮದ ಕುರಿತಾದ ಕಾಳಜಿಯಿಂದ, ಅವರನ್ನು ಟೀಕಿಸುವುದು ಈಗ ನನ್ನ ಸರದಿಯಾಗಿತ್ತು.
ಇದೆಲ್ಲ ಆದುದಾದರೂ ಹೇಗೆ ? ಅದೆಷ್ಟು ತೀವ್ರ ಗತಿಯಿಂದ ಈ ಎಲ್ಲ ಪರಿವರ್ತನೆ ಉಂಟಾಯಿತು ? ನನ್ನ ಜೀವನದ ಪ್ರವಾಹ ಗತಿಯನ್ನು ಅವರದರೊಡನೆ ನಾನು ಹೋಲಿಸಲೇ ? ನಾನು ಅವರಿಗಿಂತ ಒಂದು ಇಂಚು ಹೆಚ್ಚು ಎತ್ತರದವನಾದೆನೆಂಬುದನು ಅದು ಸೂಚಿಸಿದಂತಾಗುವುದೇ ? ಇಲ್ಲ. ಖಂಡಿತ ಎಂದಿಗೂ ಇಲ್ಲ. ನಾನು ಅವರನ್ನು ಈ ಮೊದಲು ಪ್ರೀತಿಸಿದ್ದಕ್ಕಿಂತಲೂ ಹೆಚ್ಚು ಪ್ರಾಮಾಣಿಕವಾಗಿ ಈಗಲೂ ಪ್ರೀತಿಸುತ್ತಿದ್ದೆ. ತಾವು ಆರಾಧಿಸುವ ದೇವತೆಗಳ ಬಗ್ಗೆ ಈ ದೇವತೆಗಳ ಅನುಗ್ರಹದಿಂದಾದ ತಮ್ಮ ಇಚ್ಛಾಪೂರ್ತಿಗಳ ಬಗ್ಗೆ, ತಮ್ಮ ಆಶೋತ್ತರಗಳು ಮತ್ತು ಭಯಗಳ ಬಗ್ಗೆ ನನ್ನ ಮಿತ್ರರು ನನಗೆ ಹೇಳಿಕೊಂಡಾಗ ನಾನು ಸಹಾನುಭೂತಿಯಿಂದ ಆಲಿಸುತ್ತೇನೆ. ದೇವತೆಗಳು, ಮತ, ಧರ್ಮಗಳು, ಜಪ, ಭಜನೆಗಳು, ಗುರುಗಳು ಮತ್ತು ಭಗವಾನರ ಬಗ್ಗೆ ಅವರು ಕೇಳಿದ ಚಿಕಿತ್ಸಕ ಪ್ರಶ್ನೆಗಳಿಗೆ ತೀರಾ ಮುಕ್ತ ಮನಸ್ಸಿನಿಂದ, ಪ್ರಾಂಜಲವಾಗಿ, ಪ್ರತ್ಯುತ್ತರ ಕೊಟ್ಟಾಗ ಅವರು ಮತ್ತೆ ಆಶ್ಚರ್ಯಪಡುತ್ತಾರೆ. ಇಂಥ ಪರಿಸ್ಥಿತಿಯು ಸಂಭವಿಸಿದುದಾರೂ ಏನು ?
ಮತಧರ್ಮ ಮತ್ತು ಧಾರ್ಮಿಕ ಕ್ರಮ ವಿಧಾನಗಳಲ್ಲಿ ಬುದ್ಧಿವಂತ ಮತ್ತು ಪ್ರಜ್ಞಾವಂತ ಜನರ ಶ್ರದ್ಧೆಯನ್ನು ಆಧುನಿಕ ಶಿಕ್ಷಣವು ಚೆದುರಿಸಿ (ಚೆಲ್ಲಾಪಿಲ್ಲಿ ಮಾಡಿ) ಬಿಟ್ಟಿದೆ, ಆದರೆ ಅದಕ್ಕೆ ಪರ್ಯಾಯವಾಗಿ ಆಧ್ಯಾತ್ಮಿಕತೆಯ, ಉಚ್ಚತರದ ಕಾರ್ಯಶಕ್ತಿಯನ್ನು ಒದಗಿಸಿಕೊಟ್ಟಿಲ್ಲ. ಮನಸ್ಸು ತೀರಾ ಅನಿಯಂತ್ರಿತವಾಗುಳಿದಿದೆ. ಕಾಲಕ್ರಮದಲ್ಲಿ ಇಚ್ಛೆಗಳು, ಆವಶ್ಯಕತೆಗಳು ಹಾಗೂ ನಿಸರ್ಗದ ಒದೆತಗಳು ಅವರನ್ನು ಮುಸುಕಿಬಿಟ್ಟಿವೆ. ಅವರ ಬುದ್ದಿಯು ಮೊಂಡಾಗುತ್ತದೆ ಮತ್ತು ಅಂಧಕಾರವು ಅವರ ಅಸ್ತಿತ್ವದಲ್ಲಿ ಒಳಸೇರಿಕೊಳ್ಳುತ್ತದೆ. ತತ್ಪರಿಣಾಮವಾಗಿ ಕಲಹ ಹಾಗೂ ಹೋರಾಟಗಳು ಅವರನ್ನು ನೆರವಿಗಾಗಿ ದೇವರುಗಳ ಮತ್ತು ಧರ್ಮಗಳ ಮೊರೆಹೋಗಲು ಕೇಂದ್ರಿತಗೊಳ್ಳುವಂತೆ ಮಾಡುತ್ತವೆ. ದೇವರು ಮತ್ತು ಧರ್ಮಗಳ ಉಸ್ತುವಾರಿ ಹೊತ್ತವರು ಅವರ ಸಹಾಯಕ್ಕೆ ಸಿದ್ಧರಾಗಿ ಮುಂದೆ ಬರುತ್ತಾರೆ. ಮೊದೆಗಳ ರಾಶಿ ಬೆಳೆಯಲಾರಂಭಿಸುತ್ತದೆ. ವಿಭಿನ್ನ ರೂಪಗಳಲ್ಲಿ ಶೋಷಣೆ ಮುಂದುವರಿಯುತ್ತದೆ.
ಈಯೆಲ್ಲ ತೊಂದರೆ ಉಂಟಾಗುವುದು ಅನುಚಿತ ವಿಧಾನಗಳಿಂದ, ತಪ್ಪು ಮಾರ್ಗದರ್ಶನದಿಂದ ಹಾಗೂ ತಪ್ಪಾದ ಗುರಿಯಿಟ್ಟುಕೊಳ್ಳುವುದರಿಂದ ಕೂಡ. ನಾನು ಗುರುಮಹಾರಾಜರನ್ನು ಕಂಡ ನಂತರ ಈ ಮೂರನ್ನೂ ಅವುಗಳ ಯಥಾರ್ಥ ರೂಪಗಳಲ್ಲಿ ಸಮಗ್ರವಾಗಿ ಅರ್ಥ ಮಾಡಿಕೊಂಡೆ. ಗುರಿಯನ್ನು ಸರಿಯಾಗಿ ನಿರ್ದೇಶಿಸಲಾಯಿತು. ಪರಿಪೂರ್ಣನಾದ ಗುರುವಿನಿಂದ ‘ಸಹಜಮಾರ್ಗ’ ಎಂಬ ಹೆಸರಿನ ಉತ್ಕೃಷ್ಟ ಹಾಗೂ ಪರಿಣಾಮಕಾರಿಯಾದ ಪದ್ಧತಿಯು ನನಗೆ ದೊರೆಯಿತು. ಪ್ರಾಣಾಹುತಿಯ ವಿಶೇಷ ವಿಧಾನದ ಮೂಲಕ ನನ್ನ ಸಮಗ್ರ ತರಬೇತಿಯು ಪೂರ್ಣಗೊಂಡಿತು. ಅಂಧಕಾರವೆಲ್ಲವೂ ಕರಗಿ, ತೊಳೆದು ಹೋಯಿತು. ಗುರುಮಹಾರಾಜರು ನನ್ನ ಸಮಗ್ರ ಜೀವನವನ್ನು ಉದಾತ್ತಗೊಳಿಸಿದರು.
ಗುರುಕೃಪೆಯಿಂದ ನನ್ನ ಎಲ್ಲ ಮಿತ್ರರೂ ಈ ಅಮೃತವನ್ನು ಸವಿಯಲಿ ಹಾಗೂ ತಮ್ಮ ಮೂಲ ಸ್ಥಿತಿಯನ್ನು ಮರಳಿ ಪಡೆಯಲಿ.
[ಸಹಜಮಾರ್ಗ ಪತ್ರಿಕೆ, ಜನವರಿ, 1970]