ನಮ್ಮ ಮಿಷನ್ನಿನ ವಿಚಾರಧಾರೆಯನ್ನು ನಮ್ಮ ಜೀವನ ರೀತಿಯ ಮೂಲಕ ಪ್ರಸಾರಗೊಳಿಸಬೇಕಾಗಿದೆ. ನಮ್ಮ ಜೀವನವು ಸಹಜ ಮಾರ್ಗದ ‘ಹತ್ತು ನಿಯಮಗಳ ಕ್ರಿಯಾತ್ಮಕ ಮಾದರಿಯಾಗಬೇಕು. ನಾವು ಅದರಲ್ಲಿಯೇ ಸಂಪೂರ್ಣ ತೊಯ್ದು ಹೋಗಿರದಿದ್ದರೆ, ನಮ್ಮ ಶ್ರೇಷ್ಠ ಗುರು ಮಹಾರಾಜರ ಸಂದೇಶವನ್ನು ಪ್ರಸಾರ ಮಾಡಲು ಆಶಿಸಲಾರೆವು. ಅದಕ್ಕಾಗಿ ಆವಶ್ಯಕತೆ ಉಂಟಾದಾಗಲೆಲ್ಲ ಗುರು ಮಹಾರಾಜರು ನಮಗೆ ಅದಕ್ಕೆ ಬೇಕಾದ ಸಾಮರ್ಥ್ಯ ನೀಡುವರೆಂದು ನಾನು ನಂಬುತ್ತೇನೆ. ಅದೊಂದು ಒಳ್ಳೆಯ ನಂಬಿಕೆಯೇನೋ ನಿಃಸಂದೇಹ. ಆದರೆ ನಾವು ಅದನ್ನು ಸ್ವಾಭಾವಿಕವಾಗಿ ಬಂದುದೆಂದು ಭಾವಿಸಬಾರದು. ನಾವು ಉತ್ತಮವಾಗಿ ಸ್ವೀಕರಿಸುವ ಪಾತ್ರರಾಗಿಲ್ಲದಿದ್ದರೆ, ಅದನ್ನು (ಸಂವಹನೆ ಮಾಡುವ) ಪ್ರಶಿಕ್ಷಕರಾಗಲು ಆಶಿಸುವುದಾದರೂ ಹೇಗೆ ? ನಾವು ಉತ್ತಮ ಪಾತ್ರರಾದಾಗ ತಾವಾಗಿಯೇ (ಪ್ರಾಣಾಹುತಿಯ) ಪ್ರಸಾರಕರೂ ಆಗುತ್ತೇವೆ.
ಸಹಜಮಾರ್ಗದಲ್ಲಿ ಒಂದು ಅದ್ಭುತ ಸೌಂದರ್ಯವುಂಟು. ಅದು ನಿತ್ಯನೂತನವಾಗಿರುವುದು. ಈ ಮಾರ್ಗದಗುಂಟ ಸಾಗುವವರಿಗೆ ಸ್ಥಗಿತರಾಗುವ, ಯಾಂತ್ರಿಕರಾಗುವ ಸಾಧ್ಯತೆ ಅಲ್ಪ ಮಾತ್ರವೂ ಇಲ್ಲ. ಪರಕೀಯ ವಿಚಾರಗಳ ಪ್ರತಿಕ್ರಿಯೆಯು ನಮ್ಮನ್ನು ಜಡಗೊಳಿಸಿದೆ. ಸ್ಥೂಲತೆಯುಳ್ಳವರನ್ನಾಗಿ ಮಾಡಿದೆ. ಸಂಕುಚಿತ ಮನಸ್ಕತೆ, ಧರ್ಮಾಂಧತೆ, ಹಾಗೂ ದುರಾಗ್ರಹಗಳ ಕೆಡುಕುಗಳು ನಿಧಾನವಾಗಿ ನಮ್ಮಲ್ಲಿಯೂ ಬರತೊಡಗಿದವು. ಗುರು ಮಹಾರಾಜರಿಗೆ ಧನ್ಯವಾದವಿರಲಿ ! ಅವರ ಕೃಪೆಯಿಂದಾಗಿ ಇನ್ನು ಅಂತಹ ಕೆಡುಕುಗಳು ನಮ್ಮನ್ನು ತೊಂದರೆಗೀಡು ಮಾಡಲಾರವು. ಅವು ಏನಾದರೂ ಕೆಡುಕು ಮಾಡುವ ಮೊದಲೇ ಅವುಗಳನ್ನು ಗ್ರಹಿಸಿ, ಚಿಗುರಿನಲ್ಲಿಯೇ ಚಿವುಟಿ ಹಾಕಲಾಗಿದೆ. ನಿಃಸಂದೇಹವಾಗಿ ನಮಗೆ ಒಬ್ಬ ಮಹಾ ಶ್ರೇಷ್ಠ ಗುರುಗಳು ದೊರೆತಿದ್ದಾರೆ. ಆದರೆ, ನಾವು ಅವಿವೇಕ ಮತ್ತು ಮೋಹಗಳಿಗೆ ಆಸ್ಪದ ನೀಡಿ, ಲೌಕಿಕ ಸುಖಗಳ ಕುರಿತಾಗಿಯೇ ಆಲೋಚಿಸುತ್ತ ಹೋಗಲು, ಇದು ಒಂದು ನೆಪವಾಗಕೂಡದು. ಎಲ್ಲ ಬಗೆಯ ಸುಖಗಳಲ್ಲಿ ಮುಳುಗಿರಲು ಬಯಸಿದರೆ, ನಮ್ಮ ಗುರುಗಳು ನೀಡುವ ಪ್ರಾಣಾಹುತಿ ಶಕ್ತಿಯಿಂದ ಯಾವುದೇ ಪ್ರಯೋಜನ ಪಡೆಯಬಹುದೆಂದು ಆಶಿಸಬಲ್ಲೆವೆ ? ಸಂಪೂರ್ಣ ಸಹಕಾರವಿದ್ದಲ್ಲಿ ಮಾತ್ರವೇ, ಶೀಘ್ರ ಫಲಿತಾಂಶಗಳು ಅನುಸರಿಸಿ ಬರುವವು.
ಪರಿಣಾಮಗಳ ಪರಿವೆಯಿಲ್ಲದೆ, ತನಗೆ ಉಚ್ಚ ಸ್ಥಿತಿಯನ್ನು ಕೂಡಲೇ ಕೊಡಬೇಕೆಂದು ಗುರುಗಳಿಗೆ ಆಹ್ವಾನವನ್ನಿತ್ತ ಒಬ್ಬ ಉದ್ಧಟ ವ್ಯಕ್ತಿಯನ್ನು ನಾನು ಕಂಡಿದ್ದೇನೆ. ಇಂತಹ ಅವಿವೇಕಕ್ಕಾಗಿ ಅವನನ್ನು ಗುರುಗಳೇನೋ ಕ್ಷಮಿಸಿದರೆಂಬುದು ಬೇರೆ ಮಾತು. ಕೆಲವು ವಾರಗಳ ನಂತರ ಗುರುಗಳು ಅವನಿಗೆ ನಿಜಕ್ಕೂ ಸಾಕಷ್ಟು ಶಕ್ತಿ ನೀಡಿದಾಗಲೂ, ಆ ವ್ಯಕ್ತಿಯು ಸ್ಪಷ್ಟವಾಗಿ ಗ್ರಹಿಸದೆ, ಅದನ್ನು ದುರುಪಯೋಗ ಮಾಡಲಾರಂಭಿಸಿದನು. ಯಾರು ಏನನ್ನಾದರೂ ಕೊಡಬಲ್ಲರೋ, ಅವರು ಅದನ್ನು ಹಿಂದಿರುಗಿ ಕೂಡ ಪಡೆಯಬಲ್ಲರು. ಆದರೆ ಅಪರಿಮಿತ ದಯಾಪರರಾದ ನಮ್ಮ ಗುರುಗಳು ಇಂತಹ ವ್ಯವಹಾರಕ್ಕಾಗಿ ಅವನನ್ನು ನರಕಕ್ಕೆ ತಳ್ಳುವ ಬದಲು ಕೇವಲ ಮಿಷನ್ನಿನಿಂದ ಹೊರಹಾಕುವ ಸೌಮ್ಯ ಶಿಕ್ಷೆಯನ್ನು ನೀಡಿದರು.
ಮಿಷನ್ನಿನ ಪ್ರಶಿಕ್ಷಕರಲ್ಲೊಬ್ಬನಾದ ನಾನು ಕೆಲವು ವಿಚಾರಗಳನ್ನು ನಿಮ್ಮೆದುರಿಗಿಡಲು ಕರ್ತವ್ಯ ಬದ್ಧನಾಗಿದ್ದೇನೆ. ನಾನು ಒಂದು ಮಾತನ್ನು ಒತ್ತಿ ಹೇಳಬಯಸುವುದೇನೆಂದರೆ, ನಾವು ಒಮ್ಮೆ ಗುರುವನ್ನು ಆಯ್ಕೆ ಮಾಡಿಕೊಂಡ ಮೇಲೆ, ಮತ್ತು ನಮ್ಮನ್ನು ಉನ್ನತಿಗೊಯ್ಯಲು ಅವನೊಬ್ಬನೇ ಯೋಗ್ಯನೆಂದು ಕಂಡುಕೊಂಡ ಮೇಲೆ, ನಾವು ಅವನೊಂದಿಗೆ ಅಕ್ಷರಶಃ ಸಹಕರಿಸಬೇಕು. ಅನೇಕ ವರ್ಷಗಳ ಅಭ್ಯಾಸದ ನಂತರವೂ ಮಾನಸಿಕ ವಿಕ್ಷೇಪಗಳನ್ನುಂಟು ಮಾಡುವ ನಮ್ಮ ಹಳೆಯ ರೂಢಿಗಳನ್ನು ಇನ್ನು ಮುಂದೆ ಬಿಟ್ಟುಬಿಡಬೇಕು. ಈಗ ಅದು ಇನ್ನೂ ಸಮೃದ್ಧಗೊಳ್ಳುವುದು ಮತ್ತು ಶ್ಲಾಘಿಸಲ್ಪಡುವುದು. ಅಲ್ಲದೆ ಅದರ ಶಿಲ್ಪಿಗಳು ನಾವಾಗುವೆವೆಂದು ಅಭಿಮಾನ ಪಡಬೇಕು. ಗುರುಗಳು ಬೀಜಗಳನ್ನು ಬಿತ್ತಿದ್ದಾರೆ. ನಾವು ಅದರ ಸರಿಯಾದ ಬೆಳವಣಿಗೆಯ ಕಾಳಜಿ ವಹಿಸಬೇಕು. ಇದೊಂದು ಘನವಾದ ಹೊಣೆಗಾರಿಕೆಯಾಗಿದೆ, ಮತ್ತು ನಾವು ಅದನ್ನು ನಿರ್ವಹಿಸಬೇಕೆಂದು ನಿಸರ್ಗವು ಅಪೇಕ್ಷಿಸುತ್ತದೆ. ಈ ಸಮಯಕ್ಕೆ ಸರಿಯಾಗಿ (ಸಮರ್ಥವಾಗಿ) ವರ್ತಿಸುವವರು ಉಳಿದುಕೊಳ್ಳುವರು, ಇತರರು ಅಳಿದು ಹೋಗುವರು.
ನನ್ನ ಸಂಗಾತಿಗಳು ಲೌಕಿಕ ಆಕರ್ಷಣೆಗಳ ಸೆಳೆಯಲ್ಪಡುವುದನ್ನು ನಾನು ಕಂಡಾಗಲೆಲ್ಲ ನನ್ನ ಹೃದಯವು ಅವರ ಬಗ್ಗೆ ಕರುಣೆಯಿಂದ ಕರಗಿ ಹೋಗುವುದು. ಎಷ್ಟೋ ಸಲ ಅವರಿಗೆ ಭ್ರಮನಿರಸನವಾಗುವುದನ್ನು ನಾನು ಕಾಣುತ್ತೇನೆ; ಏಕೆಂದರೆ, ಅವರು ಆಕರ್ಷಣೀಯವೆಂದು ತಿಳಿದ ವಸ್ತುಗಳು ಹತ್ತಿರದಿಂದ ಪರೀಕ್ಷಿಸಿ ನೋಡಿದಾಗ ಜುಗುಪ್ಪೆ ತರುವಂಥವೆಂದು ಸಿದ್ಧವಾದವು. ಅನಾಸಕ್ತಿ ಮತ್ತು ವೈರಾಗ್ಯಗಳನ್ನು ಬೆಳೆಸಿಕೊಳ್ಳುವ ಬದಲು, ಹಾಗೂ, ಇಂತಹ ಕಹಿ ಅನುಭವಗಳಿಂದ ವಿವೇಕ ಮತ್ತು ಸಮರ್ಪಕ ತಿಳಿವಳಿಕೆ ಪಡೆಯುವ ಬದಲು ಅವರ ಜಗತ್ತಿನ ಹೊಸ ಆಕರ್ಷಣೆಗಳ ಮೂಲವನ್ನು ಕುರಿತು ಚಿಂತಿಸುವುದು ಶೋಚನೀಯವಾಗಿ ಕಾಣುತ್ತದೆ. ಇಷ್ಟು ಸಾಲದೆಂಬಂತೆ, “ಒಬ್ಬನು ನೂರು ವರ್ಷ ಬದುಕಲು ಇಚ್ಛಿಸಬೇಕು” ಎಂಬ ಶಾಸ್ತ್ರ ವಚನವನ್ನು ಅವರು ಉಲ್ಲೇಖಿಸುತ್ತಾರೆ. ಎಂತಹ ನಿಕೃಷ್ಟ ಜೀವನವಿದು !
ಸಹಜಮಾರ್ಗವು ವಿವೇಕ ವೈರಾಗ್ಯಗಳನ್ನು ಪ್ರತ್ಯೇಕ ಸಾಧನೆಗಳಾಗಿ ತೆಗೆದುಕೊಳ್ಳುವುದಿಲ್ಲವೇನೋ ನಿಜವೇ. ಆದರೆ ಅದು ಅವುಗಳನ್ನು ಧ್ಯಾನಾಭ್ಯಾಸದ ಫಲಿತಗಳೆಂದು ಪರಿಗಣಿಸುವುದು. ಅಭ್ಯಾಸಿಯ ನಿಮ್ಮ ಪ್ರವೃತ್ತಿಗಳು ಪ್ರಾಣಾಹುತಿಯ ಶಕ್ತಿಯಿಂದಾಗಿ ದುರ್ಬಲಗೊಳ್ಳುವುವೆಂಬುದು ನಿಃಸಂದೇಹ; ಮತ್ತು ಸಾಕಷ್ಟು ಮುಂದುವರಿದ ಮೇಲೆ ಅಭ್ಯಾಸಿಗಳು ತಮ್ಮ ಪ್ರಗತಿಯ ಬಗ್ಗೆ ಗೊಣಗುವರು. ಅಂತಹ ಆಕ್ಷೇಪಗಳು ಕೇವಲ ನಮ್ಮ ಸಂಸ್ಥೆಯಲ್ಲಿ ಕೇಳಿಬರುವುದು ಆಶ್ಚರ್ಯದ ಸಂಗತಿಯಾಗಿದೆ. ಇತರ ಸಂಸ್ಥೆಗಳಲ್ಲಿ ಶಿಷ್ಯರು ಕಣ್ಮುಚ್ಚಿ ಕೇಳುವವರೂ, ದಬ್ಬಿಸಿ ಪಳಗಿಸಲ್ಪಟ್ಟವರೂ ಆಗಿರುತ್ತಾರೆ. ಆಧ್ಯಾತ್ಮಿಕತೆಯ ಹೆಸರೂ ಅವರ ವಿಚಾರದಲ್ಲಿ ಸುಳಿಯುವುದಿಲ್ಲ. ಅವರು ತಮ್ಮ ಗುರುಗಳಿಗೆ ಅತೀವ ವಿಧೇಯರಾಗಿರುತ್ತಾರೆ; ಗುರುಗಳಾದರೋ, ಬೆದರಿಸಿ ದುಡಿಸಿಕೊಳ್ಳುವುದರಲ್ಲಿ ಪರಿಣತರಾಗಿರುತ್ತಾರೆ.
ಏಳು ವರ್ಷಗಳಿಗಿಂತಲೂ ಹೆಚ್ಚು ಕಾಲ ಆಧ್ಯಾತ್ಮಿಕ ಎಂದು ಕರೆಯಲಾದ ಸಂಸ್ಥೆಯೊಂದರ ಸದಸ್ಯನಾಗಿದ್ದ ಸದೃಹಸ್ಥನೊಬ್ಬನು ಅಭ್ಯಾಸಕ್ಕಾಗಿ ನನ್ನಲ್ಲಿಗೆ ಬಂದ. ಸಹಜಮಾರ್ಗ ಅಭ್ಯಾಸವನ್ನು ಕೆಲವೇ ದಿನಗಳವರೆಗೆ ಮಾಡಿದ ನಂತರ ಈ ಪದ್ಧತಿಯಿಂದ ತಾನು ಬಹಳ ಪ್ರಯೋಜನ ಪಡೆದೆನೆಂದು, ತನ್ನ ತೃಪ್ತಿಯನ್ನು ವ್ಯಕ್ತಪಡಿಸಿದ. ಆದರೆ, ಈ ಪದ್ಧತಿಯ ಕಾರ್ಯ ಸಾಮರ್ಥ್ಯವನ್ನು ಮನಗಂಡನಾದರೂ, ತಾನು ತನ್ನ ಹಳೆಯ ಪದ್ಧತಿಯ ಬಂಧನಗಳಿಂದ ಬಿಡುಗಡೆಗೊಳ್ಳಲಾರೆನೆಂದು ಭಾವಿಸುತ್ತಾನೆ. ಇತರರ ಪ್ರಭಾವ ಅಂಥದ್ದಿದೆ. ಅಯ್ಯೋ ! ಇಲ್ಲಿ ನಮ್ಮ ಬಂಧುಗಳು ತಾನು ಗುರುವೆಂದು ಹೇಳಿಕೊಳ್ಳುವ ಪ್ರತಿಯೊಬ್ಬ ಕ್ಷುದ್ರನಿಂದಲೂ ಆಕರ್ಷಿತರಾಗುತ್ತಾರೆ. ಇಲ್ಲಿ ಕಂಡುಬರುವ ಒಂದು ವಿಚಿತ್ರ ಸಂಗತಿ ಏನೆಂದರೆ, ಒಬ್ಬನಿಗೆ ಒಂದು ವಿಶಿಷ್ಟ ಬಣ್ಣದ ಬಟ್ಟೆಯನ್ನು ನೀಡಿದ್ದಾದರೆ, ಅವನು ತಾನು ಸಂಪೂರ್ಣ ಪರಿವರ್ತಿತನಾದೆನೆಂದು ಭಾವಿಸುತ್ತಾನೆ ಮತ್ತು ಒಬ್ಬ ಗುರುವಿನಂತೆ ವರ್ತಿಸಲು ಪ್ರಾರಂಭಿಸುತ್ತಾನೆ. ಆದರೆ ಇಲ್ಲಿ (ನಮ್ಮಲ್ಲಿ ಬಹಳ ಮುಂದುವರಿದ ಸ್ಥಿತಿಗಳಿಗೆ ತಲುಪಿದ ನಂತರವೂ, ಅಭ್ಯಾಸಿಗಳು ತಮ್ಮ ಗುರುಗಳ ಆದೇಶಗಳನ್ನು ಪಾಲಿಸಲು ತಾವು ಇನ್ನೂ ಅಸಮರ್ಥರಾಗಿರುವರೆಂದು ತಿಳಿಯುವರು. ಈ ವಿಷಾದಕರ ಪರಿಸ್ಥಿತಿಯು ಕೊನೆಗಾಣಬೇಕು. ನಾವು ಎಷ್ಟು ಕಾಲ ಶಿಶುವಿಹಾರದಲ್ಲಿ ಉಳಿಯಬೇಕು ? ಇದು, ನಮ್ಮ ಅಭ್ಯಾಸಿಗಳು ಮುಂದುವರಿಯಲು ಹಿಂಜರಿಯುವಂತೆಯೇ ಸರಿ. ತಾನು ಪ್ರಗತಿ ಹೊಂದಿಲ್ಲ ಎಂದು ಹೇಳಿಕೊಳ್ಳುವುದು ತಮ್ಮ ನಮ್ರತೆಯನ್ನು ತೋರಿಸಿದಂತೆ ಎಂದು ನೀವು ತಿಳಿಯಬಹುದು. ನೀವು ಪದವೀಧರರಿರುವರೆಂದು ತಿಳಿಯಿರಿ. ಆಗ, ನೀವು, “ನಾನು ಪದವೀಧರನಲ್ಲ, ಕೇವಲ ಮಾಧ್ಯಮಿಕ ಶಾಲೆ ಮುಗಿಸಿದ ಬಾಲಕ”-ಎಂದು ಹೇಳಿಕೊಳ್ಳುವಿರೇನು ? ಆದ್ದರಿಂದ, ನಮ್ಮ ಪ್ರಗತಿ ಮುಂತಾದವುಗಳ ಬಗ್ಗೆ ಇಂತಹ ದುರ್ಬಲಗೊಳಿಸುವ ವಿಚಾರಗಳನ್ನು ನಾವು ಬಿಟ್ಟುಬಿಡಬೇಕು. ಹಾಗೂ ನಮ್ಮ ಗುರು ಮಹಾರಾಜರ ಮಾತುಗಳಲ್ಲಿ ಅಚಲ ಶ್ರದ್ಧೆ ಹೊಂದಿರಬೇಕು. ಅವರ ಮಾತುಗಳ ಸತ್ಯತೆಯನ್ನು ಸಿದ್ಧ ಮಾಡಿ ತೋರಿಸಲು ನಾವು ನಿರ್ಧರಿಸೋಣ. ಇದುವೇ ನಮ್ಮ ಪ್ರೇಮ ಹಾಗೂ ಶ್ರದ್ಧೆಗಳ ನಿಜವಾದ ಪರೀಕ್ಷೆಯಾಗಿದೆ.
[ಸಹಜಮಾರ್ಗ ಪತ್ರಿಕೆ ನಂ. 2, 1962]
ನಿರಸನದ ಅವಸ್ಥೆಯಲ್ಲಿರುವ ಒಬ್ಬ ಮನುಷ್ಯನು ಇತರರು ದುಃಖದಲ್ಲಿರುವುದನ್ನು ಕಂಡಾಗ ತಂತಾನೇ ದುಃಖಿತನಾಗಬೇಕು ಮತ್ತು ಆನಂದದಲ್ಲಿರುವವರನ್ನು ಕಂಡಾಗ ತಾನೂ ಆನಂದಿತನಾಗಬೇಕು; ಆದರೆ ಇದು ಕೇವಲ ಮೇಲು ಮೇಲಿನ ಸ್ತರದಲ್ಲಿ ಮಾತ್ರ, ಹಾಗೂ ಅನಂತರ ತಾನು ‘ಹೇಗಿದ್ದಾನೋ ಅದೇ’ ಸ್ಥಿತಿಗೆ ಮರಳಬೇಕು.