ಋಜುವಾದ ಜ್ಞಾನದ ಅನ್ವೇಷಣೆಯು ಕೆಲವು ಮಹರ್ಷಿಗಳನ್ನು, ನೈಜ ಚಿಂತನವನ್ನು ಬೆಳೆಸಿಕೊಳ್ಳಲು ಬೇಕಾದ ಕೆಲವು ವಿಧಾನಗಳ ಅನುಷ್ಠಾನಗಳನ್ನು ಕಂಡು ಹಿಡಿಯುವತ್ತ ಕರೆದೊಯ್ದಿತು. ಋಜು-ಜ್ಞಾನದ ಅನ್ವೇಷಣೆಯು ಮಾನವನ ಆತ್ಮದ ಸಹಜ ಗುಣಧರ್ಮವೋ ಅಥವಾ ಪರಿಪೂರ್ಣತೆಗಾಗಿ, ವಿಶುದ್ಧ ಆನಂದಕ್ಕಾಗಿ, ಅಥವಾ ಆತ್ಮದ ಸಾಕ್ಷಾತ್ಕಾರಕ್ಕಾಗಿ ಮಾನವನಲ್ಲಿರುವ ಆಳವಾದ ಪ್ರೇರೇಪಣೆಯ ಪರಿಣಾಮವೋ, ಎಂಬುದು ಅದನ್ನು (ಅನ್ವೇಷಣೆಯನ್ನು ಒಂದು ನೈಜ ಸಂಗತಿಯೆಂದು ಸ್ವೀಕರಿಸುವುದಕ್ಕೆ ಅಡ್ಡಿಯಾಗಬೇಕಿಲ್ಲ. ಈ ಶೋಧ ಅಥವಾ ಅನ್ವೇಷಣೆಯು ಒಂದಾನೊಂದು ಹಂತದಲ್ಲಿ ಅದೊಂದು ಕೇವಲ ಭ್ರಾಂತಿ ಎಂದು ಕಂಡುಬಂದು ಭ್ರಮನಿರಸನಕ್ಕೆ ಈಡಾಗಬಹುದಾದರೂ, ಎಲ್ಲಿಯವರೆಗೆ ಆತ್ಮ ಪಕ್ಷಿಯು ಭೌತ ಪಂಜರದಲ್ಲಿ ಸಿಕ್ಕು ಹಾಕಿಕೊಂಡಿರುವುದೋ ಅಲ್ಲಿಯವರೆಗೆ ಅದು ಚಡಪಡಿಸಲೇ ಬೇಕು.
ಪ್ಲೇಟೋನ ಸುಂದರವಾದ ಗುಹೆಯ ದೃಷ್ಟಾಂತ ಸ್ಮರಣೆಗೆ ಬರುತ್ತದೆ “ಅಗೋ ನೋಡಿ, ನೆಲದಾಳದ ಗುಹೆಯಲ್ಲಿ ವಾಸಿಸುತ್ತಿದ್ದ ಮಾನವರನ್ನು ಗಮನಿಸಿರಿ. ಆ ಗುಹೆಯ ಮುಖವು ಪ್ರಕಾಶದ ಕಡೆಗೆ ತೆರೆದುಕೊಂಡಿದೆ ಹಾಗೂ ಈ ಪ್ರಕಾಶವು ಗುಹೆಯ ಉದ್ದಕ್ಕೂ ಹರಡಿದೆ. ಇಲ್ಲಿ ಅವರು ತಮ್ಮ ಬಾಲ್ಯಕಾಲದಿಂದಲೂ ಇದ್ದಾರೆ. ಅವರ ಕಾಲುಗಳನ್ನು ಮತ್ತು ಕುತ್ತಿಗೆಗಳನ್ನು ಚಲಿಸಲಾಗದಂತೆ ಹಾಗೂ ತಮ್ಮ ತಲೆಯನ್ನು ಅತ್ತಿತ್ತ ತಿರುಗಿಸಲು ಬಾರದೆ ಕೇವಲ ಮುಂದುಗಡೆಗೆ ನೋಡಲು ಸಾಧ್ಯವಾಗುವಂತೆ ಸರಪಳಿಯಿಂದ ಬಿಗಿದಿದ್ದಾರೆ. ಅವರ ಮೇಲುಗಡೆ ಹಾಗೂ ಹಿಂದುಗಡೆ ಒಂದು ಬೆಂಕಿ ಉರಿಯುತ್ತಿದೆ. ಬೆಂಕಿ ಹಾಗೂ ಸೆರೆಯಾಳುಗಳ ಮಧ್ಯೆ ಅಲ್ಲೊಂದು ಏರು-ದಾರಿಯಿದೆ. ಆ ದಾರಿಗುಂಟ ನೀವು ನೋಡಿದರೆ ದಾರಿಗುಂಟ ಒಂದು ಕುಳ್ಳ ಗೋಡೆಯಿರುವುದನ್ನು ಕಾಣುತ್ತೀರಿ. ಈ ಗೋಡೆಯು, ಸೂತ್ರದ ಗೊಂಬೆಗಳನ್ನು ಆಡಿಸುವ ಆಟದವನ ಮುಂದಿನ ಪರದೆಯಂತೆ ಕಾಣುವುದು.
ಮತ್ತೆ, ಜನರು ಕಟ್ಟಿಗೆ, ಕಲ್ಲು ಮತ್ತು ಬಗೆ ಬಗೆಯ ಪದಾರ್ಥಗಳಿಂದ ಮಾಡಿದ ಎಲ್ಲ ಬಗೆಯ ಪಾತ್ರೆಗಳು, ಮೂರ್ತಿಗಳು ಹಾಗೂ ಪ್ರಾಣಿಗಳನ್ನು, ಆಕೃತಿಗಳನ್ನು ಹೊತ್ತುಕೊಂಡು ಗವಿಯ ಗೋಡೆಗುಂಟ ನಡೆಯುತ್ತಿರುವುದನ್ನು ಮೇಲಿನಿಂದ ಕಾಣಬಹುದು …….. ಅವರಲ್ಲಿ ಕೆಲವರು ಮಾತನಾಡುತ್ತಿರುವಂತೆ ಕೆಲವರು ಮೌನವಾಗಿರುವಂತೆ ಕಾಣುವರು.
ನಮ್ಮ ಹಾಗೆಯೇ, ಅವರು ಎದುರಿನ ಗೋಡೆಯ ಮೇಲೆ ಬೆಂಕಿಯು ಮೂಡಿಸುತ್ತಿರುವ ತಮ್ಮದೇ ನೆರಳುಗಳನ್ನು ನೋಡುವರು ಅಥವಾ ಒಬ್ಬರು ಇನ್ನೊಬ್ಬರ ನೆರಳು ನೋಡುವರು ಹಾಗೂ ಅವರು ಹೊತ್ತುಕೊಂಡು ಹೋಗುತ್ತಿರುವ ಸಾಮಾನುಗಳ ನೆರಳುಗಳನ್ನು ಮಾತ್ರವೇ ಅದೇ ರೀತಿಯಲ್ಲಿ ಅವರು ಕಾಣಬಹುದಾಗಿದೆ. ಅವರ ಮಟ್ಟಿಗೆ ಸತ್ಯ ಎಂದರೆ ಅಕ್ಷರಶಃ ಆ ರೂಪಗಳ ನೆರಳುಗಳಲ್ಲದೆ ಬೇರೇನೂ ಆಗಿರಲಿಕ್ಕಿಲ್ಲ.”
ಸಮಸ್ಯೆಯ ಪರಿಹಾರವು ಇನ್ನೂ ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ ಅದು ಸಮಸ್ಯೆಯನ್ನು ಯೋಗ್ಯ ಯಥಾದೃಶ್ಯದಲ್ಲಿ ವಿಶದೀಕರಿಸುವುದು. ಸರಿಯಾದ (ಋಜು) ಜ್ಞಾನಕ್ಕೆ ಸರಿಯಾದ ಚಿಂತನವು ಮೂಲಭೂತ ಆವಶ್ಯಕತೆಯಾಗಿದೆ. ಸರಿಯಾದ ಚಿಂತನವನ್ನು ಬೆಳೆಸಿಕೊಳ್ಳುವುದು ಹೇಗೆಂಬುದೇ ಸದ್ಯದ ಪ್ರಶ್ನೆ. ತತ್ತ್ವಶಾಸ್ತ್ರಜ್ಞರು ಹಾಗೂ ಮನಃಶಾಸ್ತ್ರಜ್ಞರು ವಿಚಾರ ಪ್ರಕ್ರಿಯೆಯ ಕಾರ್ಯವಿಧಾನ ಹಾಗೂ ಸ್ವರೂಪದ ಬಗ್ಗೆ ವಿವರವಾದ ಮಾಹಿತಿ ಮತ್ತು ಅತ್ಯಂತ ಕ್ಲಿಷ್ಟವಾದ ಹಾಗೂ ಗೊಂದಲವನ್ನುಂಟುಮಾಡುವ ಪರಸ್ಪರ ವಿರೋಧಿ ಅಭಿಪ್ರಾಯಗಳನ್ನು ನಮಗೆ ನೀಡಿದ್ದಾರೆ. ಇವು ಮನೋರಂಜನೆ ಮತ್ತು ಮೋಜನ್ನು ನೀಡುವ ಅಧ್ಯಯನವಾಗಬಹುದಾದರೂ ಒಬ್ಬನು ತನ್ನಷ್ಟಕ್ಕೆ ತಾನೇ ಕಂಡುಹಿಡಿಯುವವರೆಗೆ ಆತನಿಗೆ ನೇರವಾದ ಹಾಗೂ ನಿಕಟ ಅನುಭವವು ದೊರಕಲಾರದು.
ಸಾಮಾನ್ಯವಾಗಿ, ನಮ್ಮ ವಿಚಾರ (ಚಿಂತನ) ಕ್ರಿಯೆಯು ನಮ್ಮ ಗ್ರಹಿಕೆಗಳ ಮೇಲೆ ಅವಲಂಬಿಸಿರುತ್ತದೆ. ಅವುಗಳಲ್ಲಿ ಐಂದ್ರಿಯಕ ಗ್ರಹಿಕೆಗಳಷ್ಟೇ ಅಲ್ಲದೆ, ಊಹನೆಗಳು (ಅನುಮಾನ ಪ್ರಮಾಣದ ಮೂಲಕ ಬರುವ ಜ್ಞಾನ/ಗ್ರಹಿಕೆ), ನಂಬುಗೆಗಳು ಸ್ಮೃತಿಗಳು, ಮತ್ತು ಇತರ ಪ್ರಾಣಿಕ (ಪ್ರಾಣ ಸಂಬಂಧಿತ) ಚಟುವಟಿಕೆಗಳು ಕೂಡ ಒಳಗೊಂಡಿರುತ್ತವೆ. ನಮ್ಮ ಅನಿಯಂತ್ರಿತ ಹಾಗೂ ನಿಯಂತ್ರಣ ಸಾಧ್ಯವಲ್ಲದ ಚಿಂತನೆಯ ರೂಢಿಗಳಿಂದಾಗಿ ನಮ್ಮ ವಿಚಾರಗಳು ಬಹುಮಟ್ಟಿಗೆ ಭ್ರಮಾತ್ಮಕವಾಗಿರುತ್ತವೆ ಮತ್ತು ‘ಸತ್ಯ’ದಿಂದ ದೂರವಾಗಿರುವುದನ್ನು ನಾವು ಕಾಣುತ್ತೇವೆ. ನಮ್ಮ ಚಿಂತನೆ ಹೆಚ್ಚು ಪಕ್ಷ ನಮ್ಮ ಆಶೆಗಳಿಂದ ಪ್ರೇರಿತವಾದ ಚಿಂತನೆಯಾಗಿಬಿಡುತ್ತದೆ ಮತ್ತು ಯಾವಾಗ ಉಗ್ರ ವಿರೋಧಾಭಾಸಗಳುಂಟಾಗುವುವೋ ಆಗ ನಾವು ಮಾನಸಿಕ ಹಾಗೂ ದೈಹಿಕ ರೋಗಗಳ ಅವಾಂಛಿತ ಪರಿಣಾಮಗಳ ಕಾರಣ ಮಾನಸಿಕ ಹಿನ್ನೆಡೆಯನ್ನು ಅನುಭವಿಸುತ್ತೇವೆ. ಮನಸ್ಸಿನ ಅನಿಯಮಿತ ರೂಢಿಗಳ ಅತ್ಯಂತ ಹೆಚ್ಚಿನ ಅಪಾಯಕರ ಪರಿಣಾಮವೆಂದರೆ, ಅದು ಅನಿಯಂತ್ರತೆಯನ್ನು ಇನ್ನೂ ಹೆಚ್ಚಿಸುತ್ತದೆ, ಮತ್ತು ಅದು ಮೊತ್ತಗೂಡುತ್ತ ಬರುವುದಾಗಿದ್ದು, ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಅಧಃಪತನದ ಮೂಲ ಕಾರಣವಾಗಿದೆ.
ಇದೇ ಕಾರಣಕ್ಕಾಗಿ, ಋಷಿ ಮುನಿಗಳ ಮನಸ್ಸಿನ ನಿಯಮನದ ಆವಶ್ಯಕತೆಯನ್ನು ಒತ್ತಿ ಹೇಳುತ್ತಾರೆ. ಆದರೆ ಇಲ್ಲಿ ಕೂಡ ಮನಸ್ಸಿನ ಹಂಬಲಗಳನ್ನು, ಹಾತೊರೆಯುವಿಕೆಗಳನ್ನು ಹತ್ತಿಕ್ಕುವ ತಮ್ಮ ಅತ್ಯುತ್ಸಾಹದಲ್ಲಿ ಕೆಲವು ಸ್ವಾಮಿಗಳು ಮನಸ್ಸಿನ ವಿರುದ್ಧ ಯುದ್ಧವನ್ನೇ ಘೋಷಿಸಿದರು, ಮತ್ತು ಮನಸ್ಸನ್ನು ಉಸಿರುಗಟ್ಟಿಸುವ ಹಾಗೂ ಅದರ ಕತ್ತು ಹಿಚುಕುವ ವಿಧಾನಗಳನ್ನು ಬೋಧಿಸಿದರು. ಅವರು ಮನಸ್ಸನ್ನು ಜರಿಯುತ್ತಾರೆ ಮತ್ತು ಕೀಳು ಶಬ್ದಗಳಿಂದ ಹೆಸರಿಸುತ್ತಾರೆ. ಅಲ್ಲದೆ, ಮನಸ್ಸು ಮಾನವನ ಅತ್ಯಂತ ಅಪಾಯಕಾರಿ ವೈರಿ; ಆದ್ದರಿಂದ ಅದರ ಎಲ್ಲ ಚಟುವಟಿಕೆಗಳನ್ನು ಹತ್ತಿಕ್ಕುವುದು ಮತ್ತು ಒತ್ತಾಯಪೂರ್ವಕ ನಿಷ್ಕ್ರಿಯ ಸ್ಥಿತಿಗೆ ತರುವುದು ಅತ್ಯಗತ್ಯವೆಂದು ಬೋಧಿಸುತ್ತಾರೆ. ನಿಜಕ್ಕೂ ಅವರು ಮನಸ್ಸನ್ನು ನಶೆಗೀಡುಮಾಡುವರು ಮತ್ತು ದೇಹ- ಮನಸ್ಸುಗಳನ್ನು ಹಿಂಸೆಗೊಳಪಡಿಸುವ ಇಂಥ ವಿಚಾರಗಳಿಂದ ಜನರ ಮನಸ್ಸನ್ನು ವಿಷವಿಕ್ಕಿ ಹಾಳುಮಾಡಿದರು. ದೀರ್ಘ ಮತ್ತು ಕ್ಲಿಷ್ಟ ‘ವಿಧಾನಗಳ ಮೂರ್ತಿಗಳನ್ನು ಪೂಜಿಸುವ ಕರ್ಮಾನುಷ್ಠಾನಗಳನ್ನು, ಕೆಲವು ಮಂತ್ರಗಳನ್ನು ನಿರಂತರವಾಗಿ ವರ್ಷಗಟ್ಟಲೆ ಜಪಿಸುವುದನ್ನು, ಅತ್ಯಂತ ತೊಡಕಾದ ಮತ್ತು ಹಾನಿಕಾರಕವಾದ ಶಾರೀರಿಕ ಆಸನ ಮುಂತಾದ ಯಾಂತ್ರಿಕ ಅನುಷ್ಠಾನಗಳನ್ನು ಕಲಿಸಿದರು. ಕೆಲವರಂತೂ ಮನಸ್ಸನ್ನು ಔಷಧಗಳಿಂದ ಶಾಂತಗೊಳಿಸುವ ಮಾದಕ ಪದಾರ್ಥಗಳನ್ನು ಶಿಫಾರಸು ಮಾಡುವ ಮಟ್ಟಕ್ಕೂ ಇಳಿದರು.
ಈ ಮೇಲೆ ಉಲ್ಲೇಖಿಸಲಾದ ಎಲ್ಲ ಅಭ್ಯಾಸಗಳಲ್ಲಿ ಆ ಎಲ್ಲ ಉತ್ಪತ್ತಿಗೆ ಮನಸ್ಸೇ ಕಾರಣವಾಗಿರುವ ಮೂಲಭೂತ ವಿಷಯವನ್ನು ಮರೆಯಲಾಗಿದೆ. ಪ್ರಜ್ಞೆಯ ಉನ್ನತ ಮಟ್ಟವನ್ನು ತಲುಪಲು ಮತ್ತು ಅಂತಿಮವಾಗಿ ಭಗವಂತನನ್ನು ತಲುಪಲು ನಮಗೆ ಮನಸ್ಸಿನ ಸಹಾಯವನ್ನೇ ತೆಗೆದುಕೊಳ್ಳಬೇಕಾಗುವುದು. ನಾವು ಮನಸ್ಸನ್ನು ಕತ್ತು ಹಿಸುಕಿದರೆ, ಅದಕ್ಕೆ ಅಮಲು ಬರಿಸಿದರೆ, ನಾವು ಮುಂದುವರಿಯುವುದಾದರೂ ಹೇಗೆ ? ಚಿಂತನದ ಪ್ರಕ್ರಿಯೆಯನ್ನೇ ನಾವು ಬಲಪೂರ್ವಕ ತಡೆ ಹಿಡಿದರೆ, ನಾವು ಸರಿಯಾದ ಚಿಂತನವನ್ನು ಬೆಳೆಸಿಕೊಳ್ಳುವುದಾದರೂ ಹೇಗೆ ? ಮನಸ್ಸೆಂಬುದು, ಏನೇ ಹೇಳಿದರೂ ಒಂದು ಉಪಕರಣವಾಗಿದೆ. ಅದು ನಮ್ಮ ಶತ್ರುವಾಗುವುದು ಹೇಗೆ ? ಇದು, ನಮ್ಮ ತಪ್ಪು ಬಳಕೆಯಿಂದ ನಮ್ಮ ದೇಹಕ್ಕೆ ಗಾಯ ಉಂಟುಮಾಡುವ ಒಂದು ಬಿಚ್ಚು ಗತ್ತಿಯನ್ನು ನಮ್ಮ ವೈರಿಯೆಂದು ಕರೆದಂತಾಗುವುದು.
ಆದುದರಿಂದ, ನಮ್ಮ ಪ್ರಥಮ ಆವಶ್ಯಕತೆಯೆಂದರೆ ಮನಸ್ಸಿನ ಸರೋವರಲ್ಲಿ ಉದ್ಭವಿಸುವ ವಿಚಾರಗಳು ಸರಿಯಾದುವೂ ಹಾಗೂ ಶುದ್ಧವೂ ಆಗಿರುವಂತೆ ನಮ್ಮ ಮನಸ್ಸಿನ ಕಾರ್ಯವಿಧಾನವನ್ನು ನಿಯಮನಗೊಳಿಸುವುದಾಗಿದೆ. ನಾವು ಕೈಗೊಳ್ಳುವ ಪದ್ಧತಿ ಹೇಗಿರಬೇಕೆಂದರೆ, ಅದು ಈಗಾಗಲೇ ಇರುವ ಜಡತೆ ಮತ್ತು ಸ್ಥೂಲತೆಗಳನ್ನು ಹೆಚ್ಚಿಸಬಾರದು, ಬದಲಿಗೆ, ಅವುಗಳನ್ನು ಹೊರಕ್ಕೆಸೆದು ಮನಃಸರೋವರವನ್ನು ಶುದ್ಧಗೊಳಿಸುವಂತಹದಿರಬೇಕು; ಅದರಿಂದ, ನಾವು ನಮ್ಮ ಮುಂದಿನ ಪ್ರಯಾಣಕ್ಕಾಗಿ, ಆತ್ಮದ ಸ್ವಾಭಾವಿಕ ಲಕ್ಷಣವಾದ ಶಾಂತಿಯನ್ನು ಮರಳಿ ಪಡೆಯಬಹುದು.
ಮನಸ್ಸಿನ ಚಟುವಟಿಕೆಗಳ ಕ್ಷೇತ್ರವು ಹೃದಯವೇ ಆಗಿದೆ ಎಂಬುದನ್ನು ಈಗಾಗಲೇ ಸೂಚಿಸಲಾಗಿದೆ. ನಮ್ಮ ಪ್ರಾಣದ ಎಲ್ಲ ಚಟುವಟಿಕೆಗಳು ಇಚ್ಛೆಗಳು ಸಂಕಲ್ಪಗಳು ಹೃದಯದಿಂದ ಉಗಮವಾಗುವುದೆಂಬುದನ್ನು ನಾವು ಜಾಡು ಹಿಡಿದು ಗುರುತಿಸಬಹುದು. ವ್ಯಕ್ತವಾದ ಹಾಗೂ ಬೀಜ ರೂಪದಲ್ಲಿರುವ ನಮ್ಮ ಅನಿಸಿಕೆಗಳು ಮತ್ತು ಭಾವನೆಗಳಿಗೆ, ಹೃದಯವೇ ಹಾಗೆನ್ನಬಹುದಾದರೆ ಒಂದು ಭಂಡಾರವಾಗಿದೆ ಎಂದೆನ್ನಬಹುದು. ಹೃದಯವನ್ನು ಮನಸ್ಸಿನ ಚಟುವಟಿಕೆಗಳ ಕ್ಷೇತ್ರವೆಂದು ಕರೆಯುವುದು ಸೂಕ್ತವೇ ಇದೆ. ಈಗ, ನಮಗೆ ಬೇಡವಾದ ಘಟಕಾಂಶಗಳನ್ನು ಮತ್ತು ಅವಾಂಛಿತ ಬೆಳವಣಿಗೆಗಳನ್ನು ತೆಗೆದುಹಾಕಿ ಹೃದಯ ಕ್ಷೇತ್ರವನ್ನು ಶುದ್ಧಗೊಳಿಸಿದರೆ, ನಾವು ಇಡೀ ಹೃದಯ ಕ್ಷೇತ್ರವನ್ನು ವ್ಯಾಪಿಸಿದ, ನೈಜ ಚಿತ್-ಶಕ್ತಿಯನ್ನು ಗ್ರಹಿಸಬಹುದು. ನಾವು ಹೃದಯದಲ್ಲಿ ಯಾವುದೇ ಬೀಜಗಳನ್ನು ಬಿತ್ತಿದರೆ, ಅವು ಈ ವ್ಯಾಪಕ ಚಿತ್- ಶಕ್ತಿಯಿಂದ ಪೋಷಣೆ ಪಡೆಯುವುವು ಮತ್ತು ಆ ಕ್ಷೇತ್ರದಲ್ಲಿ ಬಲಿಷ್ಠ ವೃಕ್ಷಗಳಾಗಿ ಹೊಮ್ಮಿ ಬರುವುವು. ಆದರೆ ಈ ಕ್ಷೇತ್ರದಲ್ಲಿಂದ ಪರಾವಲಂಬೀ ಮಲಿನತೆಗಳನ್ನು ಕಿತ್ತೆಸೆಯುವುದಕ್ಕೆ ಮೊದಲು ಹೊಸ ಬೀಜಗಳನ್ನು ಬಿತ್ತುವ ಪ್ರಯೋಗ ಕೈಗೊಳ್ಳದಿರೋಣ.
ಹೃದಯ ಕ್ಷೇತ್ರವನ್ನು ಕುರಿತಾದ ನಮ್ಮ ಗುರುಗಳ ಅದ್ಭುತ ಸಂಶೋಧನೆಗಳು ಅನೇಕ ರಹಸ್ಯಗಳನ್ನು ಬೆಳಕಿಗೆ ತಂದಿವೆ. ಹೃದಯ ಮಂಡಲದ ಅನೇಕ ಬಿಂದು ಹಾಗೂ ಉಪಬಿಂದುಗಳ ಕುರಿತಾದ ಅವರ ವಿವರಣೆಗಳು ಮನಸೆಳೆಯುವಂಥವೂ, ಅನುಭವಪ್ರಮಾಣಿತವೂ ಆಗಿವೆ. ಈ ವಾಸ್ತವ ಸಂಗತಿಗಳನ್ನು ದೃಢೀಕರಿಸಿಕೊಳ್ಳಲು ಹಾಗೂ ನಮ್ಮ ಮತ್ತು ಮಾನವ ಕುಲದ ಒಳಿತಿಗಾಗಿ ಹೆಚ್ಚಿನ ಸಂಶೋಧನೆ ಮಾಡಲು, ನಾವು ಒಬ್ಬ ಸಮರ್ಥ ಹಾಗೂ ಯೋಗ್ಯಮಾರ್ಗದರ್ಶಿಯ ಅಡಿಯಲ್ಲಿ ಪ್ರಯೋಗವನ್ನು ಮಾತ್ರಕೈಗೊಳ್ಳಬೇಕಾಗಿದೆ. ಹೃದಯವನ್ನು ಶುದ್ಧಗೊಳಿಸಲು ಅತಿ ಸುಲಭವಾದ ಹಾಗೂ ಅತ್ಯಂತ ಪರಿಣಾಮಕಾರಿಯಾದ ಕೆಲವು ಅಭ್ಯಾಸಗಳಿವೆ. ಶಕ್ತಿಯ ಹಾಗೂ ಚೈತನ್ಯದ ಕೇಂದ್ರಗಳಾದ ಕೆಲವು ಬಿಂದುಗಳಿದ್ದು, ಅವು ನಮ್ಮ ಜೀವನದ ರೀತಿ ಹಾಗೂ ಆಲೋಚನೆಗಳನ್ನು ನಿಯಂತ್ರಿಸುತ್ತವೆ. ಇವುಗಳನ್ನು ಏಕತ್ರಿತ ಚಿಚ್ಛಕ್ತಿಯಿಂದ ಶುದ್ಧಗೊಳಿಸಿದರೆ ಮತ್ತು ಸರಿಪಡಿಸಿದರೆ ನಮ್ಮ ಸಮಗ್ರ ವ್ಯಕ್ತಿತ್ವದ ಕ್ರಾಂತಿಯನ್ನುಂಟುಮಾಡುವೆವು. ಅದೆಷ್ಟು ಆಶ್ಚರ್ಯಕರವೆನಿಸುವಷ್ಟು ಅಲ್ಪ ಸಮಯದಲ್ಲಿ ಈ ಕ್ಷೇತ್ರವನ್ನು ಈ ಸ್ಥೂಲತೆ, ಜಡತೆಗಳನ್ನು ನಿವಾರಿಸಿ ಶುದ್ಧಗೊಳಿಸಬಹುದೆಂದರೆ, ಈ ಪ್ರಕ್ರಿಯೆಯಲ್ಲಿಯೇ ಶುದ್ಧಗೊಂಡ ಮನೋಮಂಡಲದಲ್ಲಿ ಮನುಷ್ಯನು ಪ್ರವೇಶಿಸಲು ಪ್ರಾರಂಭಿಸುವನು.
ಹೃದಯ ಮಂಡಲವನ್ನು ದಾಟುವುದರಿಂದ ನಮ್ಮ ಜೀವನದ ಸಮಸ್ಯೆಯು ಸಂಪೂರ್ಣ ಪರಿಹಾರವಾಗದಿದ್ದರೂ,ನಾವು ಇಹಲೋಕದ ಒಲವುಗಳಿಂದ ಬಿಡುಗಡೆ ಹೊಂದುವೆವು ಮತ್ತು ನಾವು ಮೋಕ್ಷದ ಸ್ಥಿತಿಯನ್ನು ಮುಟ್ಟಬಹುದಾಗಿದೆ. ಮುಕ್ತಿಯೂ ಕೂಡ ಬಹುದೂರದ ಸಂಗತಿಯಾಗದು. ಅಲ್ಲದೆ, ಕ್ಷೇತ್ರವು ಶುದ್ಧಗೊಂಡಿರುವುದರಿಂದ ಮತ್ತು ಸರ್ವವ್ಯಾಪೀ ಶಕ್ತಿಯ ಮೂಲಕ ನಾವು ಪ್ರಯಾಣ ಮಾಡಿದ್ದರಿಂದ ಹಾಗೂ ಆತ್ಮದ ಶಾಂತಿಯನ್ನು ನಾವು ಅನುಭವಿಸಿರುವುದರಿಂದ ಈಗ ನಮ್ಮ ಮನಃಸರೋವರವು ಶಾಂತತೆ ಮತ್ತು ಸ್ಥಿರತೆಯನ್ನು ಹೊಂದಿರುವುದು. ಈಗ ಮನಃಸರೋವರದಲ್ಲಿ ಉದಯಿಸುವ ವಿಚಾರಗಳು ಸರಿಯಾದ ದಿಶೆಯಲ್ಲಿರುತ್ತವೆ ಮತ್ತು ಮಾತು ಹಾಗೂ ಇತರ ಚಟುವಟಿಕೆಗಳು ನಮ್ಮ ನೈಜ ಸ್ವಭಾವದೊಂದಿಗೆ ಅನುರೂಪವಾಗಿರುವವು. ಈಗ ನಾವು ‘ಸತ್ಯ’ದ ನಿಜವಾದ ಜ್ಞಾನವನ್ನು ಪಡೆಯಲು ಸಿದ್ಧರಾಗಿದ್ದೇವೆ. ನಮ್ಮ ಅನ್ವೇಷಣೆ ಇನ್ನೂ ನಿಲ್ಲದಿದ್ದರೂ, ಮತ್ತು ಈ ಹಂತದಲ್ಲಿ ನಿಲ್ಲಬಾರದಾಗಿದ್ದರೂ ನಮ್ಮ ಜೀವನವು ಆನಂದ ಹಾಗೂ ಆತ್ಮಾನಂದದ ಆಧಾರತಲದ ಮೇಲಿದೆ.
ಈ ಸ್ಥಿತಿಗಳು ಪ್ರತಿಯೊಬ್ಬ ಮಾನವನ ಜನ್ಮಸಿದ್ಧ ಹಕ್ಕು. ಭೌತಿಕತೆಗೆ ಬಂಧಿತರಾದ ಜನರಿಗೆ ಇವುಗಳ ಒಂದು ಕ್ಷಣಿಕ ನೋಟವೂ ಸಿಗಲಾರದು.ನಮ್ಮ ಪುರಾತನ ಅನಿರ್ಬಂಧಿತ ಭಾಷೆಯ ಮೂಲಕವೇ ಬೋಧಿಸುವ ನಮ್ಮ ಮಾನ್ಯ ಬೋಧಕರು ಅನೇಕ ತಪ್ಪಾದ ಮತ್ತು ಅಸತ್ಯವಾದ ಅಂಧಶ್ರದ್ಧೆ ಮತ್ತು ನಂಬಿಕೆಗಳೊಳಗೆ ದಾರಿತಪ್ಪಿಸಿ ಕರೆದೊಯ್ದರು. ನಮ್ಮ ಬೋಧಕರು ಸರಿಯಾದ ಮಾರ್ಗದಲ್ಲಿ ಅಭ್ಯಾಸ ಮಾಡಿದ್ದಿದ್ದರೆ, ಅಥವಾ ಕನಿಷ್ಠಪಕ್ಷ ಸಂಶೋಧನೆಗಳನ್ನು ಕೈಗೊಳ್ಳಲು ಸಿದ್ಧರಾಗಿದ್ದರೆ, ಅಧ್ಯಾತ್ಮ ಹಾಗೂ ಯೋಗವನ್ನು ಕುರಿತ ನಮ್ಮ ಸಾಮಾನ್ಯ ಕಲ್ಪನೆಗಳು ಬೇರೆಯೇ ಆಗಿರುತ್ತಿದ್ದವು. ಆದರೆ ಈ ಮಾನ್ಯ ಬೋಧಕರು ತಮ್ಮನ್ನು ತಾವೇ ಸರ್ವಜ್ಞರು ಹಾಗೂ ಜಗದ್ಗುರುಗಳೆಂದು ಪರಿಗಣಿಸುತ್ತಾರೆ, ನಾವು ಕೂಡ ಅವರನ್ನು ದೇವತೆಗಳೆಂದು ಬಗೆಯುತ್ತ ಮತ್ತು ಅವರ ಮೂರ್ಖತನ, ಮೋಸ ಹಾಗೂ ಗೊಂದಲದ ಸ್ಥಿತಿಯನ್ನು ಪ್ರೋತ್ಸಾಹಿಸುತ್ತೇವೆ. ಸ್ವಲ್ಪದರಲ್ಲಿ ಹೇಳಬೇಕೆಂದರೆ, ನಾವು ಅವರನ್ನು ಕೆಡಿಸುತ್ತಿದ್ದೇವೆ ಹಾಗೂ ಅವರು ನಮ್ಮದಾರಿ ತಪ್ಪಿಸುತ್ತಿದ್ದಾರೆ. ಈ ಶೋಚನೀಯ ಪರಿಸ್ಥಿತಿಯು ಅಂತ್ಯಗೊಳ್ಳಲೇಬೇಕು. ನಾವು ಪ್ರತಿಯೊಬ್ಬರೂ ಶೀಘ್ರವಾಗಿ ಬದಲಾಗುತ್ತಿರುವ ಕಾಲದ ಆವಶ್ಯಕತೆಗಳಿಗೆ ಜಾಗ್ರತರಾಗಲೇ ಬೇಕು. ನಮ್ಮ ಜನ್ಮಸಿದ್ದ ಹಕ್ಕು ಆದ ಸಂಪೂರ್ಣ ಸ್ವಾತಂತ್ರ್ಯ ಮತ್ತು ಮುಕ್ತಿಯನ್ನು ಪಡೆಯಲು ಪ್ರಾಮಾಣಿಕವಾಗಿ ಶ್ರಮಿಸಬೇಕು. ಮತ್ತೆ, ಭಗವಂತನು ನಮಗೆ ಸಹಾಯ ಮಾಡುವುದು ನಿಶ್ಚಿತ.
[ಸಹಜಮಾರ್ಗ ಪತ್ರಿಕೆ, ನಂ. 3, 1963]
ವಿಶ್ವದ ಸೃಷ್ಟಿಯಾಗುವ ಪೂರ್ವದ ಸ್ಥಿತಿಯೇ ನಿಜವಾಗಿಯೂ ವೇದವಾಗಿದೆ, ಭಗವಂತನು ನಿಮಗೆ ಆ ಸ್ಥಿತಿಯ ಆನಂದವನ್ನು ಅನುಗ್ರಹಿಸಲಿ, ನೀವೂ ಅದನ್ನು ಹೊಂದಲೇಬೇಕು. ಆದುದರಿಂದ, ವೇದವು ವಿಶ್ವ-ಸೃಷ್ಟಿಯ ಸಮಯದಲ್ಲಿ ಅಸ್ತಿತ್ವಕ್ಕೆ ಬಂದಿತು ಎಂಬುದು ಅತ್ಯಂತ ಸತ್ಯವೇ ಆಗಿದೆ.
– ಶ್ರೀ ಬಾಬೂಜಿ