ಶ್ರೀ ಕೃಷ್ಣನ ಶಾಂತಿಸಂಧಾನ ವಿಫಲವಾಯಿತು. ಕೃಷ್ಣ, ಯುಧಿಷ್ಠಿರ, ಭೀಮ, ಅರ್ಜುನ, ನಕುಲ, ಸಹದೇವ ಹಾಗೂ ಪಾಂಚಾಲಿ ಇವರೆಲ್ಲರೂ ಗಂಭೀರರಾಗಿ ಒಂದೆಡೆ ಸೇರಿದ್ದರು. ಭೀಕರ ಯುದ್ಧವನ್ನು ತಪ್ಪಿಸುವುದಕ್ಕಾಗಿ, ಯುಧಿಷ್ಠಿರನು ಶ್ರೀ ಕೃಷ್ಣನಿಗೆ ಬೇರೆ ಬೇರೆ ಮಾರ್ಗಗಳನ್ನು ಕಂಡು ಹಿಡಿಯಲು ಪುಸಲಾಯಿಸುತ್ತಿದ್ದನು. ಭೀಮ, ಅರ್ಜುನ ಹಾಗೂ ಪಾಂಚಾಲಿ ಇವರೆಲ್ಲರೂ ಪಾಂಡವರಲ್ಲಿ ಹಿರಿಯನಾದ ಯುಧಿಷ್ಠಿರನ ಶಾಂತ ಮನೋಭಾವದ ಬಗ್ಗೆ ಬಹಳ ತಾಳ್ಮೆಗೆಟ್ಟಿದ್ದರು. ಕಿರಿಯರಾದ ಇಬ್ಬರೂ (ನಕುಲ, ಸಹದೇವ) ಸುಮ್ಮನೆ ಹಿರಿಯರ ಮುಖ ನೋಡುತ್ತಿದ್ದರು. ಕೊನೆಗೆ ಶ್ರೀಕೃಷ್ಣನು ಅಲ್ಲಿ ಸೇರಿದವರಲ್ಲಿ ಅತ್ಯಂತ ಕಿರಿಯನಾದ ಸಹದೇವನನ್ನು ಉದ್ದೇಶಿಸಿ, “ತಮ್ಮಾ, ನೀನೇಕೆ ಮೌನವಾಗಿದ್ದೀಯೆ ? ಬರಲಿಕ್ಕಿರುವ ದಾಯಾದಿಗಳ ಯುದ್ಧವನ್ನು ತಪ್ಪಿಸಲು ಸಾಧ್ಯವೇ ?” ಎಂದು ಕೇಳಿದನು.

ಸಹದೇವನು ಕೈಮುಗಿಯುತ್ತ ಉತ್ತರಿಸಿದನು : “ಸ್ವಾಮಿ ನಾನು ಏನು ಹೇಳಬಲ್ಲೆ ? ನೀವೇನು ಅಪ್ಪಣೆ ಕೊಡುವಿರೋ ಅದನ್ನು ಪಾಲಿಸಲು ನಾನು ಸಿದ್ಧನಿದ್ದೇನೆ.”

ಶ್ರೀ ಕೃಷ್ಣನು ಅವನನ್ನು ಅಷ್ಟಕ್ಕೇ ಬಿಡಲಿಲ್ಲ. “ಕೆಲವೊಮ್ಮೆ ಕಿರಿಯರಿಗೂ ಉಜ್ವಲ ವಿಚಾರಗಳು ಬರುತ್ತವೆ. ನಾನು ನಿನಗೆ ತೀರ ಮುಕ್ತ ಮನಸ್ಸಿನಿಂದ ಮಾತನಾಡಲು ನಿನಗೆ ಸ್ವಾತಂತ್ರ್ಯ ಕೊಡುತ್ತೇನೆ. ಯುದ್ಧವನ್ನು ತಪ್ಪಿಸಲು ಸಾಧ್ಯವಿದೆಯೆಂದು ನಿನಗೆ ಅನಿಸುವುದೇ ?” ಎಂದು ಕೇಳಿದನು.

“ಹೌದು ಸ್ವಾಮಿ ಸಾಧ್ಯವಿದೆ”

ಎಲ್ಲರ ಕಣ್ಣುಗಳೂ ಅವನತ್ತ ತಿರುಗಿದವು………. “ಹೇಗೆ ?” ಸಹದೇವ ಮತ್ತೆ ಮೌನ ತಾಳಿದ. ಆಗ ಶ್ರೀಕೃಷ್ಣ ಹೇಳಿದ “ನಿನಗೆ ಕೆಲವು ಅದ್ಭುತ ವಿಚಾರಗಳು ಬಂದಿರುವಂತೆ ಕಾಣುತ್ತದೆ.  ಸಂಕೋಚಪಟ್ಟುಕೊಳ್ಳಬೇಡ. ಇದೊಂದು ಬಹಳ ಮಹತ್ತ್ವಪೂರ್ಣ ಸಂದರ್ಭ. ಯಾವುದೇ ಭಯ, ಸಂಕೋಚಗಳಿಲ್ಲದೆ ನಿನ್ನ ಮನಸ್ಸಿನಲ್ಲಿರುವುದನ್ನು ಹೇಳಿಬಿಡು”, ಎಂದು ಹೇಳಿದ. ಅನಂತರ ಸಹದೇವನು ತನ್ನ ಕೈಜೋಡಿಸಿ ಸಭೆಗೆ ನಮಸ್ಕರಿಸಿ ಮತ್ತೆ ಹೇಳಿದ – “ಸ್ವಾಮಿ, ನನ್ನ ನಮ್ರ ಅಭಿಪ್ರಾಯದ ಪ್ರಕಾರ, ಯುದ್ಧದ ಮೂಲಭೂತ ಆವಶ್ಯಕತೆಗಳುಂಟು – ಯುದ್ಧಕ್ಕೆ ಸಿದ್ಧರಾದ ಎರಡು ಪಕ್ಷಗಳು ಹಾಗೂ ಯೋಜನೆ. ಯುಧಿಷ್ಠಿರನಿಗೆ ಯುದ್ಧ ಬೇಕಾಗಿಲ್ಲ. ಆದುದರಿಂದ, ನಾನು ಹೇಳುವ ಈ ಕ್ರಮಗಳನ್ನು ತೆಗೆದುಕೊಂಡರೆ, ಯುದ್ಧವು ನಡೆಯಲಿಕ್ಕಿಲ್ಲ. ಭೀಮನ ಆಯುಧವನ್ನು, ಅರ್ಜುನನ (ಆಯುಧ) ಬಿಲ್ಲನ್ನು ಮುರಿಗು ಹಾಕಿರಿ; ಅಂದರೆ ಅವರು ತಮ್ಮ ಆಯುಧಗಳಲ್ಲಿಯ ಅವರ ದುರಹಂಕಾರಯುಕ್ತ ನಂಬಿಕೆಯನ್ನು ಕಳೆದುಕೊಳ್ಳುವರು. ಕೌರವರ ರಕ್ತ ತನ್ನ ತಲೆಗೂದಲಿಗೆ ಲೇಪಿಸುವ ಪ್ರತೀಕಾರದ ಇಚ್ಛೆಯನ್ನು ಪುನಃ ಉಚ್ಚರಿಸದಂತಾಗಲು ಪಾಂಚಾಲಿಯ ತಲೆ ಬೋಳಿಸಿರಿ ಹಾಗೂ ಅಂತಿಮವಾಗಿ, ಸ್ವಾಮಿ, ನೀನೇ ನಿಜವಾದ ಯೋಜಕನಾಗಿರುವುದರಿಂದ, ನಿನ್ನನ್ನು ಕಟ್ಟಿಹಾಕಬೇಕು.”

ಈ ನಿರ್ದಾಕ್ಷಿಣ್ಯ ಸತ್ಯ ವಚನದಿಂದ, ವಾಸ್ತವವಾದರಿಂದ ಎಲ್ಲರೂ ದಂಗಾದರು. ಶ್ರೀಕೃಷ್ಣ ನಸು ನಕ್ಕು ಹೇಳಿದ “ಸರಿ ! ಸಹದೇವ, ನಿನ್ನ ಯೋಜನೆಯು ದಿಟ್ಟವೂ ಊಹಾಯುಕ್ತವೂ ಆಗಿದೆ; ಅದು ಕಾರ್ಯಗತವಾಗಲೂಬಹುದು. ಆದರೆ ಅದಕ್ಕೆ ಒಂದು ತೊಡಕು ಉಂಟು. ನೀನು ಹಾಗೆ ಮಾಡಲು ಪ್ರೇರೇಪಿಸಲು ಶಕ್ತನಾದರೆ ಮೊದಲಿನ ಎರಡು ಕಾರ್ಯಗಳನ್ನು, ಅಂದರೆ ಸೋದರರಿಬ್ಬರ ಆಯುಧಗಳ ನಾಶಮಾಡುವುದು ಹಾಗೂ ಪಾಂಚಾಲಿಯ ತಲೆ ಬೋಳಿಸುವುದು ಇವುಗಳನ್ನು ನೆರವೇರಿಸಬಹುದು. ಆದರೆ, ಯಾರು ತಾನೆ ನನ್ನನ್ನು ಕಟ್ಟಿಹಾಕಬಲ್ಲರು ? ದುರ್ಯೋಧನನು, ತನ್ನ ಅಧೀನದಲ್ಲಿರುವ ಸಕಲ ಸೈನ್ಯದೊಂದಿಗೆ ಕೂಡ ನನ್ನನ್ನು ಬಂಧಿಸಲು ಸಾಧ್ಯವಾಗಲಿಲ್ಲ.”

ಹೌದು ! ಅದು ಅತ್ಯಂತ ಕಠಿಣವಾದ ಕಾರ್ಯವಾಗಿತ್ತು.

ಆದರೆ  ಸಹದೇವ ಶಾಂತನಾಗಿ – “ಸ್ವಾಮಿ, ನೀನು ಒಪ್ಪುವುದಾದರೆ ನಾನು ಖಂಡಿತ ಮಾಡುವೆ” -ಎಂದು ಉತ್ತರಿಸಿದ.

ಮತ್ತೊಮ್ಮೆ ಅಲ್ಲಿ ಆಶ್ಚರ್ಯದ ಅಲೆಯೊಂದು ವ್ಯಾಪಿಸಿತು. ಶ್ರೀಕೃಷ್ಣ ನಸು ನಕ್ಕು ಹೇಳಿದ – “ಆಗಲಿ, ಹಾಗೇ ಮಾಡು. ನಾನು ನಿನಗೆ ಅನುಮತಿ ಕೊಡುತ್ತೇನೆ. ನೋಡೋಣ”

ಸಹದೇವ ತನ್ನ ಆಸನದಲ್ಲಿ ಕುಳಿತು ಕಣ್ಣು ಮುಚ್ಚಿದ ಹಾಗೂ ತೀವ್ರ ಪ್ರೇಮ ಮತ್ತು ಭಕ್ತಿಯಿಂದ ಪ್ರಭುವಿನ ಆಕಾರದ ಮೇಲೆ ತನ್ನ ಹೃದಯದಲ್ಲಿ ಧ್ಯಾನ ಮಾಡಲಾರಂಭಿಸಿದ. ಇಡೀ ವಾತಾವರಣವೇ ಬದಲಾಗತೊಡಗಿತು. ಯುಧಿಷ್ಠಿರ ಯುದ್ಧವನ್ನು ಮರೆತುಬಿಟ್ಟ. ಭೀಮಸೇನ, ಅರ್ಜುನ ಮತ್ತು ಪಾಂಚಾಲಿ ಎಲ್ಲರೂ ತಮ್ಮ ಶಪಥಗಳನ್ನು ಪ್ರತೀಕಾರದ ಭಾವನೆಗಳನ್ನು ಮರೆತರು. ನಕುಲನು ಆಗಲೇ ಪ್ರಭುವಿನ ಮೋಹಕ ರೂಪವನ್ನು ವೀಕ್ಷಿಸುವುದರಲ್ಲಿ ಮುಳುಗಿ ಹೋಗಿದ್ದ. ಸ್ವತಃ ಕೃಷ್ಣನಿಗೇ ತನ್ನೆಲ್ಲ ದುಷ್ಟಸಂಹಾರದ ಯೋಜನೆಗಳು ತಲೆಕೆಳಗಾಗುವುವೋ ಎಂದೆನಿಸತೊಡಗಿತು. ಸಹದೇವನು ತನ್ನ ಪ್ರೇಮದ ತೀವ್ರಶಕ್ತಿಯಿಂದ ತನ್ನನ್ನು ಕಟ್ಟಿ ಎಳೆಯುತ್ತಿದ್ದ ಅನುಭವ ಶ್ರೀಕೃಷ್ಣನಿಗಾಗತೊಡಗಿತ್ತು. ಅದನ್ನು ಹೆಚ್ಚು ಕಾಲ ಮುಂದುವರಿಸಲು ಬಿಡುವುದು ಕೃಷ್ಣನಿಗಾಗಲಿಲ್ಲ. ಸ್ವಲ್ಪವೇ ಮುಂದುವರಿಸಲು ಬಿಟ್ಟರೂ, ಇಡೀ ವಿಶ್ವವೇ ಯೋಗಿಯ ಹೃದಯದಲ್ಲಿ ಪ್ರವೇಶಿಸಿ ಬಿಡಬಹುದಾಗಿತ್ತೇನೋ !ಹಾಗಿರುವುದರಿಂದ ಶ್ರೀಕೃಷ್ಣ ಹೇಳಿದ : “ದಯವಿಟ್ಟು ನಿನ್ನ ಧ್ಯಾನವನ್ನು ನಿಲ್ಲಿಸು ! ನೀನು ನನ್ನನ್ನು ಅಷ್ಟೊಂದು ಪ್ರೇಮದಿಂದ, ಗೌರವದಿಂದ ಕಾಣುವೆಯಾದ್ದರಿಂದ, ನಾನು ಬೇಡಲಿಚ್ಛಿಸುವುದನ್ನು ಕೊಡುವುದಾಗಿ ನೀನು ವಚನ ಕೊಡುವೆಯಾ ?”

ಸಹದೇವ ಕಣ್ಣೆರೆದು ಹೇಳಿದ – “ನನ್ನ ಪ್ರಭುವೇ ! ನೀನು ಬಯಸಿದಂತೆಯೇ ಆಗಲಿ, ನಿನ್ನ ಆಜ್ಞೆಯನ್ನು ಪಾಲಿಸಲು ನಾನು ಸದಾ ಸಿದ್ಧನಿದ್ದೇನೆ”.

ಆಗ ಕೃಷ್ಣ ಹೇಳಿದ – “ಮುಂಚಿತವಾಗಿ ನನ್ನ ಅನುಮತಿಯನ್ನು ಪಡೆಯದೆ ಇಂತಹ ಧ್ಯಾನವನ್ನು ಮತ್ತೊಮ್ಮೆ ಮಾಡುವುದಿಲ್ಲ ಎಂದು ನನಗೆ ವಚನ ನೀಡು”. ಸಹದೇವ ಹಾಗೆಯೇ ಒಪ್ಪಿ ವಚನ ನೀಡಿದ.

ಹೀಗೆ ಮಹಾಭಾರತ ಯುದ್ಧವು ಪ್ರಾರಂಭವಾಯಿತು. ಹಾಗೂ ಶ್ರೀಕೃಷ್ಣ ತನ್ನ ಇಚ್ಛೆಯನ್ನೇ ನೆರವೇರಿಸಿದ. 

ಪ್ರಿಯ ಓದುಗರೇ ! ಇದೊಂದು ಕಾಲ್ಪನಿಕ ಕತೆ. ಆಧ್ಯಾತ್ಮಿಕ ಪ್ರಗತಿಯ ಒಂದು ನಿರ್ದಿಷ್ಟ ಹಂತದಲ್ಲಿ ಭಕ್ತನಿಗೆ ಪ್ರಭುತ್ವ ದೊರಕುತ್ತದೆ. ಅಂತಹ ವ್ಯಕ್ತಿಗೆ ಯಾವುದೂ ಅಸಾಧ್ಯವಾಗಿ ಉಳಿಯುವುದಿಲ್ಲ. ‘ಪ್ರಿಯಕರನೇ’ ‘ಪ್ರೇಮಿ’ಯಾಗಿ ಮಾರ್ಪಡುವನು. ಕಬೀರರು ಇದನ್ನು ಅದೆಷ್ಟು ಸುಂದರವಾಗಿ ವ್ಯಕ್ತ ಮಾಡಿದ್ದಾರೆ ! “ಪೀಛೇ ಪೀಛೇ ಹರಿ

ಫಿರೇ ಕಹತ ಕಬೀರ ಕಬೀರ” “ಕಬೀರ, ಕಬೀರ ಎನ್ನುತ್ತ ಹರಿಯೇ ಕಬೀರನ ಹಿಂಬಾಲಿಸಿ ಬರುತ್ತಾನೆ”.

ಇನ್ನೊಬ್ಬ ಕವಿಯು ಇದನ್ನು ಹೀಗೆ ಕಲ್ಪಿಸಿದ್ದಾನೆ – “ಖುದಾ ಖುದ್ ಬಂದೇ ಸೇ ಪೂಛೇ ಬತಾ ತೇರಿ ರಾಜ ಕ್ಯಾ ಹೈ”;  – ಭಗವಂತನು ತನ್ನ ಭಕ್ತನನ್ನು ಕೇಳಿದ “ನಿನ್ನ ಗುಟ್ಟು ಏನು ? ನನಗೆ ತಿಳಿಸು.

[ಸಹಜಮಾರ್ಗ ಪತ್ರಿಕಾ, ನಂ. 4, 1963]

   ಪ್ರೀತಿ ಅಥವಾ ಪ್ರೇಮ ಎಂದರೇನು? ಏತಕ್ಕಾಗಿ ಅಥವಾ ಯಾವ ಲಾಭಕ್ಕಾಗಿ ಎಂಬುದನ್ನೇ ಅರಿಯದ ಒಂದು ಅಗಾಧ  ಆಂತರಿಕ  ಸಂಬಂಧ.

– ಶ್ರೀ ಬಾಬೂಜಿ

(ನು,ಮು. 240)