ಪ್ರಿಯ ಬಾಬೂಜಿ, ಸೋದರ, ಸೋದರಿಯರೆ,

ಇಲ್ಲಿ ಪ್ರಭಾವಿಸುತ್ತಿರುವ ಸ್ಥಿತಿಯ ಎಷ್ಟು ಶುದ್ಧವೂ ಶಾಂತವೂ ಹಾಗೂ ಪ್ರಸನ್ನತೆಯುಳ್ಳದ್ದೂ ಆಗಿದೆಯೆಂದರೆ, ಅದು ನನಗೆ ನಮ್ಮ ನಿಜವಾದ ಗುಣ-ಲಕ್ಷಣದ ನೆನಪು ಮಾಡಿಕೊಡುತ್ತದೆ. ಇದು ಅದೆಷ್ಟು ಸೂಕ್ಷ್ಮವೂ, ಲಘುವೂ, ಆಗಿದೆಯೆಂದರೆ ನಾನು ಒಂದು ಅಕ್ಷರವನ್ನು ಉಚ್ಚರಿಸಿದರೂ ಕೂಡ ಅದರಿಂದ ಅದರ ಸರಿಯಾದ ಅನುಭೂತಿಯು ಭಂಗಗೊಂಡೀತು ಎಂಬ ಅಳುಕು ನನಗಿದೆ.

ಅದೇನೇ ಇದ್ದರೂ, ಪ್ರಿಯ ಸೋದರ ಸೋದರಿಯರೆ, ಈ ಪಾವನ ಸಂದರ್ಭದ ಬಗ್ಗೆ ಮಾತನಾಡುವ ಅಥವಾ ನನ್ನದೇ ಅನುಭವದ ಬಗ್ಗೆ ಬಾಲಭಾಷೆಯಲ್ಲಿ ಹಲುಬುವ ಸ್ವಾತಂತ್ರ್ಯ ತೆಗೆದುಕೊಳ್ಳುವ ಸಾಹಸ ಮಾಡುತ್ತೇನೆ. ಯಾರ ಪವಿತ್ರ ಚರಣಗಳಲ್ಲಿ ನಾವು ನಮ್ಮ ಗೌರವ ಸಲ್ಲಿಸುವುದಕ್ಕಾಗಿ, ನಮ್ಮ ಕೃತಜ್ಞತೆಯನ್ನು ವ್ಯಕ್ತಗೊಳಿಸಲು ಹಾಗೂ ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಪ್ರಾರ್ಥಿಸಲು ಇಂದು ಸೇರಿರುವೆವೋ ಆ ಮಹಾ ವ್ಯಕ್ತಿಯಲ್ಲಿ ನನ್ನ ವಿಚಾರವು ಸ್ವಾಭಾವಿಕವಾಗಿ ಕೇಂದ್ರೀಕೃತವಾಗುವುದು.

ಈ ವ್ಯಕ್ತಿತ್ವವು ಹೇಗೆ ನನ್ನ ವಿಚಾರಗಳ ಕೇಂದ್ರವಾಯಿತು ಎಂಬುದು ಇನ್ನೂ ಬಿಡಿಸಲಾರದ ರಹಸ್ಯವಾಗಿದೆ. ಅದು ಅವನ ಆಕರ್ಷಣೆ ಅಥವಾ ಮೋಡಿಗೀಡುಮಾಡುವ ಶಕ್ತಿಯಿಂದಾಗಿಯೋ, ಅಥವಾ ನನ್ನ ಪ್ರೇಮ ಹಾಗೂ ಭಕ್ತಿಯಿಂದಾಗಿಯೋ, ಅಥವಾ ಈಯೆರಡೂ ಕಾರಣಗಳಿಂದಲೋ, ಇಲ್ಲವೆ, ನಮಗೆ ಸ್ವಲ್ಪವೂ ತಿಳಿದಿರದ ರಹಸ್ಯ ಹಾಗೂ ಅಗೋಚರವಾದ ಯಾವುದೋ ಕಾರಣಕ್ಕಾಗಿಯೋ? ಅದು ಅವನ ಆಕರ್ಷಣ ಶಕ್ತಿಯಿಂದಲೋ? ಅಲ್ಲ! ಏಕೆಂದರೆ, ಯಾವುದೇ (ಎಲ್ಲ) ಶಕ್ತಿ, ಆಕರ್ಷಣ ಶಕ್ತಿ, ಮೋಹಕತೆಗಳನ್ನು ಆತನು ಪುನಃ ಪುನಃ ನಿರಾಕರಿಸಿದ್ದಾನೆ. (ಹಾಗಾಗಿ ಇದು ಅದಾವುದೂ ಅಲ್ಲ). ನನ್ನ ಪ್ರೇಮ ಹಾಗೂ ಭಕ್ತಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಏಕೆಂದರೆ, ನಾನು ಬಹಳ ಹಿಂದೆಯೇ ‘ನನ್ನಿಂದಲೇ ದೂರಗೊಳಿಸಿದ್ದೇನೆ, ಅದೇಕೆಂದರೆ………., ಸರಿ, ನಾನು ನನ್ನ ವಿವರವಾದ ಆತ್ಮಕಥನದಲ್ಲಿ ತೊಡಗುವುದಿಲ್ಲ. ಅದಿಲ್ಲದಿದ್ದರೆ, ಬಹುತೇಕವಾಗಿ, “ಅವನು ಅತ್ಯಂತ ಆಕರ್ಷಕ, ಮೋಹಕ ಮತ್ತು ಅತ್ಯಂತ ಶಕ್ತಿವಂತ ವ್ಯಕ್ತಿಯಾಗಿದ್ದಾನೆ” -ಎಂಬ ನನ್ನ ಕಲ್ಪನೆಯಿಂದ ಅದೆಲ್ಲ ಪ್ರಾರಂಭವಾಯಿತು ಮತ್ತು ನಾನು ನನ್ನದೇ ಪ್ರೇಮ ಮತ್ತು ಭಕ್ತಿಗಳುಳ್ಳ ಬಿಂಬರೂಪವನ್ನು ಪ್ರಶಂಸಿಸಲಾರಂಭಿಸಿದೆ. ಆದರೆ ಈ ಒಡೆಯ ತನ್ನ ಕೆಲಸವನ್ನು ಚೆನ್ನಾಗಿ ಬಲ್ಲ. ನಿಜವಾದ ಪ್ರೇಮವು ಒಂದು ಭಾವನಾತ್ಮಕ ಸ್ಫೋಟ ಅಲ್ಲ ಎಂದು ಪ್ರೇಮದ ವಿಷಯವನ್ನು ಸದ್ದಿಲ್ಲದೆಯೇ ತಳ್ಳಿ ಹಾಕಿದನು, ಹಾಗೂ ಮುಖಪ್ರಶಂಸೆಯು ನಿಜವಾದ ಭಕ್ತಿ ಅಲ್ಲ ಎಂದು ಹೇಳುವ ಮೂಲಕ ಭಕ್ತಿಯ ಕಲ್ಪನೆಗೆ ಬಲವಾದ ಆಘಾತ ಕೊಟ್ಟನು; ಹಾಗೂ ಕೊನೆಗೆ, ಪ್ರತಿಬಿಂಬವೇ ನಿಜವಾದ ವಸ್ತು ಅಲ್ಲ ಎಂದು ಹೇಳುವ ಮೂಲಕ ನಾನು ಅಕ್ಕರೆಯಿಂದ ಅಂಟಿಕೊಂಡ ಪ್ರತಿಬಿಂಬವನ್ನೇ ಕರಗಿಸಿಬಿಟ್ಟನು.

ನಾನೊಂದು ಹಳ್ಳಿ-ನಾಯಿಯನ್ನು ಇಲ್ಲಿ ಕಂಡೆ. ಅದು ಬಹಳ ತೃಪ್ತಿ – ಆನಂದಗಳಿಂದ ಇದ್ದಂತೆ ಕಂಡಿತು. ಆದರೆ ಅದು ಒಮ್ಮೆ ಬೀದಿಯಲ್ಲಿ ಹೋದ ಮೇಲೆ ಬೇರೆ ನಾಯಿಗಳೊಂದಿಗೆ ಸೇರಿಕೊಂಡು, ತನ್ನ ಮನೆ, ಹಾಗೂ ಒಡೆಯನನ್ನು ಮರೆಯಿತು, ಹಾಗೂ ಬೀದಿ ನಾಯಿ ಆಯಿತು. ಕೆಲವು ವರ್ಷಗಳ ನಂತರ ಅದು ವೃದ್ಧವಾಯಿತು ಮತ್ತು ಉಪವಾಸದಿಂದ ಬಳಲಿತು. ಅದು ಮತ್ತೆ ಇಲ್ಲಿ ಮನೆಗೆ, ಮರಳಿ ದಯಾಶೀಲ ಒಡೆಯನಲ್ಲಿಗೆ ಬಂದಿತು. ಮತ್ತು ನಿಜವಾಗಿ ಸಂತೋಷಗೊಂಡಿತಲ್ಲದೆ ತೃಪ್ತವೂ ಆಯಿತು. ನನ್ನ ಸ್ಥಿತಿಯೂ ಕೂಡ ಬಹುತೇಕ ಆ ನಾಯಿಯ ಸ್ಥಿತಿಯಂತೆಯೇ ಆಗಿದೆ. ನನ್ನ ವಿಷಯದಲ್ಲಿಯ ಒಂದೇ ವ್ಯತ್ಯಾಸವೆಂದರೆ, ನಾನು ತೆಗೆದುಕೊಂಡ ಹೆಚ್ಚು ದೀರ್ಘ ಸಮಯ ಮತ್ತು ಹೆಚ್ಚು ಕೆಟ್ಟದಾಗುತ್ತಿದ್ದ ಸ್ಥಿತಿ. ಒಡೆಯನ ಮತ್ತು ಮನೆಯ ಬಗ್ಗೆ ಆ ನಾಯಿಗಿದ್ದ ಭಾವನೆಗಳ ಅಲ್ಪ ಪ್ರಮಾಣದ ಅಂಶಗಳು, ಮೂಲ ಮನೆಯವನಾದ ನನ್ನಲ್ಲಿ ನನ್ನ ನಿಜವಾದ ಮನೆ ಮತ್ತು ಒಡೆಯನೆಡೆಗೆ ನಾನು ಹಿಂದಿರುಗುವಂತಾಗಲು, ಆತನ ಕೃಪೆಯಿಂದ, ಇನ್ನೂ ಉಳಿದುಕೊಂಡಿದ್ದುವು.

ನನ್ನ ವಿಚಾರಗಳಿಗೆ ನಾನು ಅದೆಷ್ಟು ಕೇಂದ್ರಗಳನ್ನು ನಿರ್ಮಿಸಿಕೊಂಡಿದ್ದೆ. ಅದೆಷ್ಟು ಸೆರೆಮನೆಗಳಲ್ಲಿ, ಅವುಗಳನ್ನು ನನ್ನ ಮನೆಗಳೆಂದೇ ತಿಳಿಯುತ್ತ ನಾನು ವಾಸ ಮಾಡಿದ್ದೇನೆ. ಇದಕ್ಕೂ ಹೆಚ್ಚಾಗಿ (ಹೇಳಬೇಕೆಂದರೆ) ನನಗೆ ಅದೆಷ್ಟು ಮಂದಿ ಒಡೆಯಂದಿರಿದ್ದರು. ಅದೊಂದು ದೊಡ್ಡ ಭ್ರಾಂತಿಯಾಗಿತ್ತು. ಆದರೆ ಅದು ಇರುವಷ್ಟು ತನಕ ನಾನು ಹುಚ್ಚು ಹಿಡಿದಂತೆ ಕುಣಿಯುತ್ತಿದ್ದೆ. ಅದರಲ್ಲಿ ಸುಖದ ಅನುಭವವಿತ್ತೇನೋ ನಿಜ; ಆದರೆ ಪ್ರತಿಯೊಂದು ಸುಖಾನುಭವವೂ ಜುಗುಪ್ಪೆ ಹುಟ್ಟಿಸುವ ತಲೆನೋವಿನ ಉಳಿಕೆಯನ್ನು ನನ್ನಲ್ಲಿ ಬಿಟ್ಟು ಹೋಗುತ್ತಿತ್ತು. ನೋವಿನ ಚುಚ್ಚುವಿಕೆಗಳು ಅಸಹನೀಯವಾಗಿದ್ದವು. ಸುಖಾನುಭವದ ಎಲ್ಲ ಹೋರಾಟಗಳು ಕೇವಲ ಒದೆತಗಳ ಯಾತನೆಯನ್ನು ಮರೆಯಲು ಮಾಡುವ ಹೋರಾಟವಾಗಿತ್ತು. ಆತ್ಮಪ್ರತಿಷ್ಠೆಯ ಎಲ್ಲ ಅಭಿವ್ಯಕ್ತಿಗಳೂ ರಹಸ್ಯವಾದ, ಆದರೆ ರಭಸದ ನೇರ ಆತ್ಮಾವಲೋಕನದ ನಿರಾಕರಣೆಯೇ ಆಗಿತ್ತೇ ಹೊರತು ಬೇರೇನೂ ಅಲ್ಲ. ವಿಕಾರದಿಂದ ದೂರ ಓಡಿಹೋಗಲು ಭ್ರಾಂತಿಯುಕ್ತ ಆಕರ್ಷಣೆಯಿಂದ ಹೆಚ್ಚು ಹೆಚ್ಚು ಬಯಕೆಗಳನ್ನು ಸೃಷ್ಟಿಸಿಕೊಳ್ಳುತ್ತ, ಬಯಕೆಗಳು ಪೂರ್ತಿಗೊಳ್ಳದಿರುವುದರಿಂದ ಘರ್ಷಣೆ, ಕಾವು ಹಾಗೂ ಕೋಪಗಳನ್ನು ಉಂಟುಮಾಡಿಕೊಳ್ಳುತ್ತ ಕೋಪ-ತಾಪಗಳ ಕಾರಣದಿಂದ ಸರಿ-ತಪ್ಪುಗಳ ವಿವೇಚನೆಯನ್ನು ಕಳೆದುಕೊಳ್ಳುತ್ತ, ನಾನು ಇನ್ನೂ ಹೆಚ್ಚು ಹೆಚ್ಚು ಕುರೂಪಗೊಳ್ಳುತ್ತಿದ್ದೆ. ಹೀಗೆ, ಸುಧಾರಣೆಯ ಯಾವುದೇ ಆಶಾಭಾವನೆಯ ಕೊನೆ ಅದಾಗಿತ್ತು.

ಪ್ರಿಯ ಸೋದರರೆ, ನಾನು ಯೋಗ ಅಥವಾ ಅಧ್ಯಾತ್ಮದ ಬಗ್ಗೆ ಈ ಮೊದಲು ಆಲೋಚಿಸಿರಲಿಲ್ಲವೆಂದು ದಯವಿಟ್ಟು ಭಾವಿಸಬೇಡಿರಿ. ಹೌದು, ನಾನು ಕೆಲವು ಗುರುಗಳನ್ನು ಭೆಟ್ಟಿಯಾಗಿದ್ದೆನೇನೋ ನಿಜ. ಒಬ್ಬಗುರುಗಳು ನನಗೆ ಮಂತ್ರೋಪದೇಶ ಮಾಡಲು ಮುಂದೆ ಬಂದರು; ಮತ್ತೊಬ್ಬರು ಸಾಂಪ್ರದಾಯಿಕ ಮತಧರ್ಮದ ಮೂಲಕ ಸಹಾಯಮಾಡುವ ವಚನವಿತ್ತರು. ಅತಿಮಾನವನ ಆಗಮನದ ಬಗ್ಗೆ, ಹಾಗೂ “ನಾನು ಯಾರು ?” ಇತ್ಯಾದಿಗಳ ಬಗ್ಗೆ ಚಿಂತನೆಯ ಉನ್ನತ ಆದರ್ಶಗಳ ಕುರಿತಾದ ಪ್ರಭಾವೀ ಕೃತಿಗಳನ್ನು ಕೂಡ ನಾನು ಅಧ್ಯಯನ ಮಾಡಿದ್ದೆ, ಆದರೆ ಈಯೆಲ್ಲ ವಿಚಾರಗಳಲ್ಲಿ ಹಾಗೂ ಅವುಗಳ ಬೋಧಕರಲ್ಲಿ ಕೇವಲ ಇನ್ನೊಂದು ತರಹದ ಜಿಗುಟುತನ ಕಂಡು ಬಂದಿತು; ಅದು ನನ್ನ ಮೇಲೆ ಯಾವ ಆಳವಾದ ಪ್ರಭಾವವನ್ನೂ ಉಂಟುಮಾಡಲಿಲ್ಲ. ಅವುಗಳಲ್ಲಿ ಭರವಸೆಗಿಂತಲೂ ಆಗ್ರಹ ಬೇಡಿಕೆಯೇ ಹೆಚ್ಚು ಇರುವುದನ್ನು ನಾನು ಕಂಡೆ.

ನಾನು ವಿಪತ್ತಿನ ಕೊನೆಯ ಅಂಚಿನಲ್ಲಿದ್ದಾಗ ಸಹಜಮಾರ್ಗದ ವಿಚಾರಧಾರೆಯೊಂದಿಗೆ ಗುರುಗಳು ನನ್ನೆಡೆಗೆ ಬಂದರು. ಅವರು ಎಷ್ಟು ಸಹೃದಯಿ, ಸಹಾನುಭೂತಿಪರ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಕೃಪಾಳುವೂ ಆಗಿದ್ದರೆಂದರೆ, ನನ್ನ ಪ್ರಾಮಾಣಿಕ ಆಸಕ್ತಿ, ಸರಳ ನಂಬಿಕೆಯಿಡುವುದನ್ನು ಹೊರತುಪಡಿಸಿ, ನನ್ನಿಂದ ಮತ್ತೇನನ್ನೂ ಅಪೇಕ್ಷಿಸಲಿಲ್ಲ.ಪ್ರಾರಂಭದಲ್ಲಿ ಅವರ ಸರಳತೆ, ನಮ್ರತೆ, ಮೌಲಿಕತೆಗಳೇ ಅವರ ಬಗ್ಗೆ ಯಾವುದೇ ಗಂಭೀರ ಆಸಕ್ತಿ ತೋರಿಸಲು ಅಥವಾ ಅವರಲ್ಲಿ ಯಾವುದೇ ನಂಬಿಕೆ ಇರಿಸಲು ಕೂಡ ನನ್ನ ದಾರಿಗೆ ಅಡ್ಡ ಬರುತ್ತಿದ್ದೆವು. ಆದರೆ ನನ್ನ ಸಂಕಟಗ್ರಸ್ತ ಸ್ಥಿತಿಯನ್ನು ನೋಡಿ, ಗುರುಗಳೇ ಈ ನಿರ್ಭಾಗ್ಯ ಜೀವಿಯ ಮೇಲೆ ಕನಿಕರಪಟ್ಟು, ನನಗೆ ದೈವೀ ಪ್ರೇರಣೆಯ ಪ್ರಾಣಾಹುತಿ ನೀಡಿದರು.

‘ದೈವೀ ಪ್ರೇರಣೆಯ ಪ್ರಾಣಾಹುತಿ’ ಇದು ನನಗೆ ಸಂಪೂರ್ಣ ಹೊಸ ಅನುಭವವಾಗಿತ್ತು. ಜಗತ್ತು ಕ್ಷಣಿಕ, ಜಗತ್ತಿನ ಬಂಧನಗಳಿಗೆ ನಿರಾಸಕ್ತನಾಗಿ ಇರಬೇಕೆಂದು ಪವಿತ್ರ ಶಾಸ್ತ್ರ ಗ್ರಂಥಗಳು ಬೋಧಿಸಿವೆಯೆಂಬುದು ನನಗೆ ಗೊತ್ತಿತ್ತು. ಜಗತ್ತು ಮಾಯೆ, ಹಾಗೂ ಅಹಂ ಬ್ರಹ್ಮಾಸ್ಮಿ (ನಾನು ಬ್ರಹ್ಮ) ಎಂಬ ಶಬ್ದಗಳನ್ನು ಪುನಃ ಪುನಃ ಉಚ್ಚರಿಸಲು ಗುರುಗಳು (ಆಚಾರ್ಯರು) ಬೋಧಿಸಿರುವರು ಎಂಬುದೂ ನನಗೆ ತಿಳಿದಿತ್ತು. ಆದರೆ, ಈ ಸ್ಥಿತಿಗಳನ್ನು ಯಾವುದೇ ಕೃತ್ರಿಮತೆ ಇಲ್ಲದೆ, ಅತ್ಯಂತ ಸ್ವಾಭಾವಿಕ ರೀತಿಯಲ್ಲಿ ಗುರುಗಳ ಪ್ರಾಣಾಹುತಿ ಶಕ್ತಿಯ ಮೂಲಕ ನಿಜ ಜೀವನದಲ್ಲಿ ಪ್ರತ್ಯಕ್ಷವಾಗಿ ಅನುಭವಿಸಬಹುದೆಂದು ನಾನು ಎಂದಿಗೂ ಕಲ್ಪನೆ ಕೂಡ ಮಾಡಿರಲಿಲ್ಲ.

ದೇವರ ಮೇಲೆ ಧ್ಯಾನ ಮಾಡಲು ದೇಹದ ನಿರ್ದಿಷ್ಟ ಆಸನಗಳು (ಭಂಗಿಗಳು) ಹಾಗೂ ಉಸಿರಾಟದ ನಿಯಂತ್ರಣಗಳನ್ನು ಒಳಗೊಂಡಿರುವ ಕಠಿಣ ಹಾಗೂ ಶ್ರಮದಾಯಕ ಅಭ್ಯಾಸಗಳು ಅತಿ ಅವಶ್ಯವೆಂದು ನನಗೆ ತಿಳಿವಳಿಕೆ ನೀಡಲಾಗಿತ್ತು. ಆದರೆ ಸಹಜಮಾರ್ಗದ ಅನುಸಾರವಾಗಿ, ಗುರುವಿನ ಸಹಾಯದಿಂದ ಯೋಗದ ಗುರಿಯನ್ನು ಸುಲಭವಾಗಿ ಹಾಗೂ ಸ್ವಾಭಾವಿಕ ರೀತಿಯಲ್ಲಿ ಸಾಧಿಸಬಹುದೆಂದು ನನಗೆ ಎಂದಿಗೂ ಕಲ್ಪಿಸಲೂ ಆಗಿರಲಿಲ್ಲ. ಊರ್ಧ್ವ ಗತಿಯಲ್ಲಿ ಸಾಗಲು ನಿಮ್ನ ಕೇಂದ್ರಗಳ ಶುದ್ದೀಕರಣದಿಂದ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಲೇ ಬೇಕು ಎಂದು ನನಗೆ ಹೇಳಲಾಗಿತ್ತು. ಆದರೆ ಸಹಜಮಾರ್ಗದ ಕ್ರಾಂತಿಕಾರಕ ಪದ್ಧತಿಯಂತೆ ಹೃದಯದ ಮೇಲಿನ ಧ್ಯಾನವು ಎಲ್ಲ ನಿಮ್ಮ ಕೇಂದ್ರಗಳನ್ನು ಶುದ್ಧಗೊಳಿಸುವುದು ಹಾಗೂ ಕಾಲಕ್ರಮೇಣ ಇವುಗಳು ಉಚ್ಚ, ಕೇಂದ್ರಗಳಿಂದ ತಮ್ಮಿಂದ ತಾವೇ ನಿಯಂತ್ರಿಸಲ್ಪಡುವವು ಎಂಬುದು ಒಂದು ಆಶ್ಚರ್ಯಕರ ಸಂಗತಿಯಾಗಿತ್ತು. ಭಗವತ್‌ ಸಾಕ್ಷಾತ್ಕಾರವು ಅಶುದ್ಧಗೃಹಸ್ಥರಿಗೆ (ಅವರಿಗೆ, ಗೃಹಸ್ಥರು ಯಾವಾಗಲೂ ಅಶುದ್ಧರೇ) ಸುಲಭವಾಗಿ ಸಾಧ್ಯವಲ್ಲ, ಹಾಗೂ ಕಠಿಣ ಪರಿಶ್ರಮ ಮತ್ತು ಅಸಂಖ್ಯಾತ ಜನ್ಮಗಳ ಸಂನ್ಯಾಸಾಶ್ರಮದ ಉಗ್ರ ಬಂಧನಗಳನ್ನು ಒಳಗೊಂಡ ಒಂದು ಅತ್ಯಂತ ಕಠಿಣ ಕಾರ್ಯವೆಂದು ಘೋಷಿಸುವ ಮೂಲಕ ಜಗದ್ಗುರುಗಳೆಂಬವರು ನನ್ನನ್ನು ಸಂಪೂರ್ಣವಾಗಿ ನಿರುತ್ಸಾಹಗೊಳಿಸಿದ್ದರು. ಆದರೆ ಇಲ್ಲಿ, ಅತ್ಯಂತ ಭರವಸೆಯುಳ್ಳ ಹಾಗೂ ಅತ್ಯಂತ ಸುಲಭವಾಗಿ ಅಭ್ಯಾಸ ಮಾಡಬಹುದಾದ ಹಾಗೂ ಲಭ್ಯವಿರುವ ಪದ್ಧತಿಯನ್ನಲ್ಲದೆ ಜೀವಂತ ನಿದರ್ಶನದಂತಿರುವ ನಮ್ಮ ಗುರುಗಳ ಸಂಪರ್ಕದಲ್ಲಿ ನಾನು ಬಂದೆ.

ಭಾರವಾದ ಹೃದಯಗಳ ಅತಿಯಾದ ಭಾರವನ್ನು ಹಗುರಗೊಳಿಸುವವನು ಇಲ್ಲಿದ್ದಾನೆ. ತಮ್ಮದೇ ದುಷ್ಕೃತ್ಯಗಳಿಂದ ಉಂಟುಮಾಡಿಕೊಂಡ ಕ್ಯಾನ್ಸರ್ ರೋಗದಿಂದ ಬಳಲುವ ರೋಗಿಗಳು ಬಯಸುವ ನೋವಿಲ್ಲದ ಶಸ್ತ್ರ ಚಿಕಿತ್ಸೆ ಮಾಡುವ ಶಸ್ತ್ರಚಿಕಿತ್ಸಕನು ಇಲ್ಲಿದ್ದಾನೆ. ಎಲ್ಲ ಕೆಡುಕುಗಳನ್ನು ನಾಶ ಮಾಡುವವನು ಹಾಗೂ ಹೊಸ ಪ್ರಕಾಶಮಯ ಲೋಕದ ಸೃಷ್ಟಿಕರ್ತನು ಇಲ್ಲಿದ್ದಾನೆ. ಮುಕ್ತಿಯ ಅತ್ಯುಚ್ಚ ಆಧ್ಯಾತ್ಮಿಕ ಸ್ಥಿತಿಯ ಮಹಾಪ್ರಭು ಇಲ್ಲಿದ್ದಾನೆ. ಪ್ರಿಯ ಸೋದರರೆ, ಅವನಲ್ಲಿ ಆಶ್ರಯ ಪಡೆಯಿರಿ ಹಾಗೂ ಅವನಲ್ಲಿ ಪೂರ್ಣ ಶ್ರದ್ಧೆ ಮತ್ತು ಆತ್ಮ ವಿಶ್ವಾಸದಿಂದ ಶರಣಾಗಿರಿ ಅವನು ನಿಮ್ಮನ್ನು ಎಲ್ಲ ಪಾಪಗಳಿಂದ ಮುಕ್ತಗೊಳಿಸುವನು.

ಯಾವುದಕ್ಕಾಗಿ ಇಡೀ ವಿಶ್ವವು ಅನೇಕ ಯುಗಗಳಿಂದ ಪರಿತಪಿಸುತ್ತಿತ್ತೋ, ಹಾಗಿದ್ದೂ, ಇಡೀ ವಿಶ್ವವೇ ಯಾವುದರ ಬಗ್ಗೆ ನಗಣ್ಯವೆನಿಸುವಷ್ಟು ಮಾತ್ರ ತಿಳಿದುಕೊಂಡಿದೆಯೋ ಅದಕ್ಕೆಲ್ಲ ಇದೇ ಗೂಢ ಪರಿಹಾರವಾಗಿದೆ. ಇಂತಹ ಒಬ್ಬನು ಸಾವಿರ ವರ್ಷಗಳಲ್ಲಿ ಕ್ವಚಿತ್ತಾಗಿ ಒಮ್ಮೆ ಜನ್ಮತಾಳುವನು, ಮತ್ತು ಅವನ ಮಧ್ಯದಲ್ಲಿದ್ದುದಕ್ಕೆ ನಾವು ಅತ್ಯಂತ ಅದೃಷ್ಟಶಾಲಿಗಳು. ನಮಗೆ ಒಂದು ಸುವರ್ಣಾವಕಾಶ ಲಭ್ಯವಾಗಿದೆ. ನಮ್ಮ ಸಾಮರ್ಥ್ಯದ ಮಟ್ಟಕ್ಕೆ ಅದರ ಪ್ರಯೋಜನ ಪಡೆಯೋಣ, ಸಮರ್ಥ ಗುರುವಿನ ಜನ್ಮದಿನದ ಈ ಶುಭ ಮುಹೂರ್ತದಲ್ಲಿ ಸಹಜಮಾರ್ಗದ ಮಹಾ ಸಂಸ್ಥಾಪಕನಿಗೆ ಸಲ್ಲಿಸಲು ಇದೊಂದೇ ಏಕಮಾತ್ರ ಯೋಗ್ಯ ಕಾಣಿಕೆಯಾಗಬಲ್ಲದು.

ನಮ್ಮ ಹೃದಯಗಳನ್ನು ಎಲ್ಲ ಕಾಲಕ್ಕೂ ಬೆಳಗುತ್ತ ಗುರುಮಹಾರಾಜರು ನಮ್ಮ ಮಧ್ಯದಲ್ಲಿ ಸುದೀರ್ಘಕಾಲ ಜೀವಿಸಿರಲಿ. ತಥಾಸ್ತು !

[ಸಹಜಮಾರ್ಗ ಪತ್ರಿಕೆ, ನಂ. 6, 1963]