ಸೋದರ ಸೋದರಿಯರೆ,

ಈಗಷ್ಟೇ ಈ ಸಂದರ್ಭದಲ್ಲಿ ಮಾತನಾಡಲು ನನಗೆ ಕೇಳಲಾಗಿದೆ. ನಾನು ಗುರುಮಹಾರಾಜರ ಸಂದೇಶವನ್ನು ಓದುವೆನೆಂದು ನಿಮಗೆ ತಿಳಿಸಲು ಬಯಸುತ್ತೇನೆ. ಈ ಸಂದೇಶದ ಒಂದು ಪ್ರತಿ ನಿಮ್ಮಲ್ಲಿ ಪ್ರತಿಯೊಬ್ಬನ ಬಳಿಯೂ ಇದೆ ಎಂದು ನಾನು ನಂಬುತ್ತೇನೆ. ದಯವಿಟ್ಟು ಲಕ್ಷ್ಯಗೊಟ್ಟು ಪರಾಮರ್ಶಿಸಿರಿ. ಅದರ ಪ್ರತಿಯೊಂದು ಶಬ್ದ ಹಾಗೂ ವಾಕ್ಯವೂ ಆಧ್ಯಾತ್ಮಿಕ ಶಕ್ತಿ ಹಾಗೂ ಗಾಢವಾದ ಅರ್ಥದಿಂದ ತುಂಬಿದೆ. ಅದು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಬಹಳ ಮಹತ್ತ್ವದ್ದಾಗಿದೆ. ನಿಮ್ಮಲ್ಲಿ ಕೆಲವರಿಗೆ ಇಂಗ್ಲೀಷ್ ತಿಳಿಯುವುದಿಲ್ಲವಾದರೆ ನೀವು ಅದರ ಭಾಷಾಂತರ ಮಾಡಿಸಿಕೊಳ್ಳಿರಿ ಹಾಗೂ ದಯವಿಟ್ಟು ಒಂದು ಸಲ, ಎರಡು ಸಲ ಹಾಗೂ ಸಾಧ್ಯವಾದಷ್ಟು ಸಲ ಓದಿರಿ, ಅದನ್ನು ಕುರಿತು ನೀವು ವಿಚಾರ ಮಾಡಿದಾಗ ಪ್ರತಿ ಸಲವೂ ನಿಮಗೆ ಹೊಸ ಸ್ಫೂರ್ತಿ ಹಾಗೂ ಹೊಸ ಶಕ್ತಿ ಲಭ್ಯವಾಗುವುದು.

ಇಲ್ಲಿ ನಮ್ಮದೇ ಆದ ಆಶ್ರಮ ಕಟ್ಟಡ ಹೊಂದಿರುವುದು ಎಲ್ಲರಿಗೂ ಸಂತೋಷವಾಗುವುದು ಸ್ವಾಭಾವಿಕ. ಇದು ನಮ್ಮ ಸಮಾರಂಭಗಳಿಗೆ ಧ್ಯಾನಕ್ಕಾಗಿ ಹಾಗೂ ಆಧ್ಯಾತ್ಮಿಕ ಸಾಧನೆಗಾಗಿ ಒಂದು ಸ್ಥಳವಾಗಿ ಸಹಾಯಕವಾಗುವುದು. ನಮ್ಮ ಯೋಜನೆಯಂತೆ ಹಾಗೂ ಆ ಯೋಜನೆಗೆ ನಾವು ಗುರುಗಳಿಂದ ಒಪ್ಪಿಗೆಯನ್ನು ಪಡೆದ ರೀತಿಯಲ್ಲಿಯೇ ಅದನ್ನು ಅಭಿವೃದ್ಧಿಗೊಳಿಸುವುದು ನಮ್ಮ ಕರ್ತವ್ಯವಾಗಿದೆ.

ಶ್ರೀ ರಾಮಚಂದ್ರ ಮಿಷನ್ 1945 ರಲ್ಲಿ ಸ್ಥಾಪಿತವಾಗಿ, ಸಾವಕಾಶವಾಗಿ ಬೆಳೆಯುತ್ತಿದೆ, ಅಭಿವೃದ್ಧಿ ಹೊಂದುತ್ತಿದೆ ಹಾಗೂ ಪ್ರಾಮಾಣಿಕ ಜಿಜ್ಞಾಸುಗಳ ಲಕ್ಷ್ಯ ಸೆಳೆಯುತ್ತಿದೆ ಮತ್ತು ಅವರು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಅದರ ಕಾರ್ಯಸಾಮರ್ಥ್ಯವನ್ನು ಮನಗಂಡಿರುವವರು, ಹಾಗೂ ಅದರ ಪ್ರಯೋಜನವನ್ನು ಮನಗಂಡಿರುವವರು ತಮ್ಮ ಮಿತ್ರರಿಗೆ, ಪರಿಚಿತರಿಗೆ ತಿಳಿಸುವುದು ಮತ್ತು ತೀವ್ರ ಹಂಬಲ ಹಾಗೂ ಆವಶ್ಯಕತೆಯುಳ್ಳವರು ಗುರುಗಳ ಪ್ರಾಣಾಹುತಿಯ ಪ್ರಯೋಜನ ಪಡೆಯಲು ಸಾಧ್ಯವಾಗುವಂತೆ ಅದನ್ನು ಪ್ರಚಾರ ಮಾಡುವುದು ಅವರೆಲ್ಲರ ಕರ್ತವ್ಯವಾಗಿದೆ.

ನಾವು ಒಂದು ಬೃಹತ್ ಯೋಜನೆಯನ್ನು ಕೈಗೊಂಡಿದ್ದೇವೆ. ಅದಕ್ಕೆ ಸಹಜವಾಗಿ, ಆರ್ಥಿಕ ಸಹಾಯ ಬೇಕು. ಧನ, ಸಾಮಗ್ರಿ, ಕೆಲಸಗಾರರು ಮುಂತಾದವು ಬೇಕಾಗುವುದು. ಮೊದಲನೆಯದಾಗಿ ಇದನ್ನು ಬೆಂಗಳೂರು ಕೇಂದ್ರದ ಅಭ್ಯಾಸಿ ಬಂಧು-ಭಗಿನಿಯರು ಹಾಗೂ ಎರಡನೆಯದಾಗಿ ಮಿಷನ್ನಿನ ಎಲ್ಲ ಅಭ್ಯಾಸಿಗಳು ಕೈಗೊಳ್ಳಬೇಕು. ಇದು ಒಂದು ಮಹತ್ವದ ಸಂಗತಿಯಾಗಿದೆ ಹಾಗೂ ಧನ ಸಂಗ್ರಹ ಆವಶ್ಯಕ. ನಾವು ಆಲೋಚಿಸಬೇಕು ಹಾಗೂ ದಾನಶೀಲರು, ಉದಾರ ಮನಸ್ಸಿನವರು ನಮ್ಮ ಕಾರ್ಯವನ್ನು ನೋಡಿ, ಅದಕ್ಕೆ ಸಹಾಯ ಮಾಡಲು ಅವರನ್ನು ಮನವೊಲಿಸಬೇಕು. ನಾವು ಅಭ್ಯಾಸಿಗಳು ಸಹಜ ಮಾರ್ಗದ ಬೋಧನೆಗೆ ಹಾಗೂ ಹತ್ತು ನಿಯಮಗಳಿಗೆ ಅನುಸಾರವಾಗಿ ಜೀವಿಸಿದರೆ ಮಾತ್ರವೇ ಈ ಉದಾರ ಮನಸ್ಸಿನ ವ್ಯಕ್ತಿಗಳು ಪ್ರಭಾವಿತರಾಗುವರು. ಸರಳ ಹಾಗೂ ಪವಿತ್ರ ಜೀವನವನ್ನು ನಡೆಸುವಂತೆ ವಿಧಿಸುವ, ಅಥವಾ, ನಿಮ್ಮ ಜೀವನದ ಅವಲೋಕನದಿಂದ ಪವಿತ್ರತೆಯ ಸದಾಚಾರದ ಭಾವನೆಗಳು ತಾನಾಗಿಯೇ ಅನ್ಯ ಜನರಲ್ಲಿ ಹುಟ್ಟುವಂತೆ ಮಾಡುವ, ಆ ಹತ್ತು ನೀತಿ ನಿಯಮಗಳು ವಿಶೇಷವಾದವುಗಳಾಗಿವೆ. ನೀವು ಗುರುಮಹಾರಾಜರ ಚೇತನವನ್ನು ಹೊಂದಿದ ಜೀವನವನ್ನು ಬೆಳೆಸಿಕೊಂಡರೆ ನಮ್ಮ ಕಾರ್ಯವು ಕಠಿಣ ಮತ್ತು ಸಮಸ್ಯೆಯುಳ್ಳದ್ದಾಗುವುದಿಲ್ಲ ಮತ್ತು ನಮ್ಮ ಉದ್ದೇಶಗಳು ಸುಲಭವಾಗಿ ಸಾಧಿಸಲ್ಪಡುವವು.

ಹತ್ತು ನಿಯಮಗಳಿಗೆ ಅನುಸಾರವಾಗಿ ಜೀವಿಸುವುದು ಹಾಗೂ ಅದಕ್ಕಾಗಿ ದೃಢ ನಿಶ್ಚಯ ಮಾಡುವುದು ಸಹಜಮಾರ್ಗದ ಪ್ರತಿಯೊಬ್ಬ ಅಭ್ಯಾಸಿಯ ಕರ್ತವ್ಯವಾಗಿದೆ. ಕೆಲವು ತಪ್ಪುಗಳು ಹಾಗೂ ಅಡ್ಡದಾರಿಗೆ ಬೀಳುವುದು ಸಾಧ್ಯವಿದ್ದರೂ, ಅದಕ್ಕಾಗಿ ಮತ್ತೆ ಕೊನೆಯ (ಹತ್ತನೆಯ) ನಿಯಮದ ಸಹಾಯ ಪಡೆಯಬೇಕಾಗುವುದು. ಈ ನಿಯಮದಂತೆ ನೀವು ಮಲಗುವ ಮುನ್ನ ಪ್ರಾರ್ಥನೆ ಮಾಡುವುದು, ಮಾಡಿದ ತಪ್ಪುಗಳಿಗಾಗಿ ಪಶ್ಚಾತ್ತಾಪಪಡುವುದು ಹಾಗೂ ಕ್ಷಮಾಯಾಚನೆ ಮಾಡುವುದು ಮತ್ತು ಅದನ್ನು ಪುನಃ ಮಾಡದಂತೆ ನಿರ್ಧರಿಸುವುದು ಮುಂತಾದವುಗಳನ್ನು ವಿಧಿಸಲಾಗಿದೆ. ನಿಮ್ಮ ನಿರ್ಧಾರವನ್ನು ನೀವು ಕಾರ್ಯಗತಗೊಳಿಸಿದರೆ, ದೇವರು ನಿಶ್ಚಿತವಾಗಿಯೂ ನಿಮಗೆ ಸಹಾಯ ಮಾಡುತ್ತಾನೆ.

ಸಹಜಮಾರ್ಗದ ತರಬೇತಿಯ ಇಡೀ ವ್ಯಾಪ್ತಿಯು ಯೋಗ್ಯ (ಸರಿಯಾದ) ಚಿಂತನೆ ಮತ್ತು ಚಿತ್-ಶಕ್ತಿಯ ಸದುಪಯೋಗವನ್ನು ಆಧರಿಸಿದೆ. ಇದು ರಾಜಯೋಗ. ಇದಕ್ಕಾಗಿ ಹಿಂದಿನ ಕಾಲದಲ್ಲಿ ಯೋಗ್ಯವಂತರಾದ ಅನೇಕ ಜನರು ಅಸಂಖ್ಯಾತ ಪದ್ಧತಿಗಳನ್ನು ವಿಧಿಸಿದರು. ಪ್ರಸ್ತುತ ಕಾಲದ ಪರಿಸ್ಥಿತಿಗಳು ಬದಲಾಗಿವೆ, ಮತ್ತು ಸಾಮಾನ್ಯ ಜೀವನವನ್ನು ನಡೆಸುತ್ತಲೇ ಅಭ್ಯಾಸಕ್ಕಾಗಿ ಸ್ವೀಕರಿಸಬಹುದಾದ ಒಂದು ಸುಲಭ ಮಾರ್ಗ ಇಂದಿನ ಅಗತ್ಯತೆಯಾಗಿದೆ. ಸಂನ್ಯಾಸವನ್ನು ಸ್ವೀಕರಿಸುವುದಕ್ಕೆ ಹಾಗೂ ಮನಸ್ಸು, ದೇಹ ದಂಡನೆಯ ಮೂಲಕ ಉಗ್ರ ವಿರಕ್ತ ಜೀವನದ ಅಭ್ಯಾಸಕ್ಕಾಗಿ ಅಡವಿಗೆ ಹೋಗಲು, ನಮ್ಮ ಸದ್ಯದ ಜೀವನ ಪರಿಸ್ಥಿತಿಗಳ ಅಮೂಲಾಗ್ರ ಬದಲಾವಣೆ ಮಾಡಲು ಈಗ ನಾವು ಶಕ್ತರಿಲ್ಲ. ಹಳೆಯ ಪದ್ಧತಿಗಳಲ್ಲಿ ವಿಧಿಸಿದಂತೆ ಅಪಾಯದ, ಗಂಡಾಂತರಗಳುಳ್ಳ ಕಠಿಣವಾದ ಹಾಗೂ ಶ್ರಮದಾಯಕ ಪದ್ಧತಿಗಳನ್ನು ಅನುಸರಿಸಲು ನಮ್ಮಲ್ಲಿ ಪ್ರತಿಯೊಬ್ಬರಿಗೂ ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬನೂ ದೇವರ ಕೃಪೆ ಹೊಂದಲು ಸಾಧ್ಯವಿದೆ. ಸರಳ ರೀತಿಯಿಂದ ನಿಸರ್ಗದೊಡನೆ ಒಂದಾಗುವಂತೆ ನಮ್ಮ ಜೀವನವನ್ನು ರೂಪಿಸಲು, ಜಟಿಲತೆ ಹಾಗೂ ಸಂಕೀರ್ಣತೆಗಳಿಂದ ಬಿಡುಗಡೆ ಹೊಂದಲು ಹಾಗೂ ಅವನನ್ನು ನಿರಂತರವಾಗಿ ಸ್ಮರಿಸುವ ಮೂಲಕ ಅವನಲ್ಲಿ ನಮ್ಮನ್ನು ನಾವೇ ಲಯಗೊಳಿಸುವುದಕ್ಕಾಗಿ, ಸಹಜಮಾರ್ಗದ ಧ್ಯಾನ ಪದ್ಧತಿಯಲ್ಲಿ ಪ್ರತಿಪಾದಿಸಿದಂತೆ, ಬಹಳ ಸರಳ ವಿಧಾನದಿಂದ ಜೀವಿಸುವುದು ಅದಕ್ಕೆ ಸಹಾಯಕವಾಗುವುದು.

 

ಇದು ನಮ್ಮ ಗುರುಗಳು ನೀಡಿದ ಒಂದು ಸರಳ ಪದ್ಧತಿಯಾಗಿದೆ, ಹಾಗೂ ಪ್ರಾಣಾಹುತಿ ಶಕ್ತಿಯ ಸಹಾಯ ಹೊಂದಿದ್ದು ಅದು ಮಾರ್ಗವನ್ನು ನಿರಾತಂಕಗೊಳಿಸುವುದು. ಆದ್ದರಿಂದ ನಾನು ಎಲ್ಲ ಅಭ್ಯಾಸಿಗಳಿಗೆ ಅವರ ಕರ್ತವ್ಯಗಳ ಬಗ್ಗೆ ನೆನಪು ಮಾಡಿಕೊಡಲು ಬಯಸುತ್ತೇನೆ. ಆಸಕ್ತರಾದ ಎಲ್ಲ ಜನರು ಈ ಪದ್ಧತಿಯನ್ನು ಸ್ವೀಕರಿಸಲು ಹಾಗೂ ಅದರ ಪ್ರಯೋಗ ಮಾಡಲು, ಮತ್ತು ಒಂದು ವೇಳೆ ಅದು ಉಪಯುಕ್ತವೂ ಸಮಾಧಾನಕರವೂ ಆಗಿದೆಯೆಂದು ಕಂಡು ಬಂದರೆ ಆಸಕ್ತಿಯುಳ್ಳ ಬೇರೆ ಜಿಜ್ಞಾಸುಗಳಿಗೆ ಮತ್ತು ಅಭಿಪ್ಸೆಯುಳ್ಳ ಜನರಿಗೆ ಅದನ್ನು ತಲುಪಿಸಲು ಆಮಂತ್ರಿಸುತ್ತೇನೆ. ನಿಮಗೆಲ್ಲ ಧನ್ಯಾದಗಳು.

[1976, ಸೆಪ್ಟೆಂಬರ್ 12 ರಂದು ಬೆಂಗಳೂರು ಆಶ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಭಾಷಣ]

ಸಾಕ್ಷಾತ್ಕಾರವು ಯಾವುದರ ಮೇಲೆ ಪ್ರಾರಂಭವಾಗುವುದೋ ಆ ‘ಅಸ್ತಿತ್ವ’ ಅಥವಾ ಆಧಾರತಲವೆಂದರೆ ‘ಶ್ರದ್ಧೆ’ಯೇ. ‘ಶ್ರದ್ಧೆ’ಯೆನ್ನುವುದು ಎಂತಹ ಸದಾ ಅವಿಚ್ಛಿನ್ನ ಜೋಡಣೆಯ ಕೊಂಡಿಯಾಗಿದೆಯೆಂದರೆ ಅದು ಒಮ್ಮೆ ಸ್ಥಾಪಿತವಾದ ಮೇಲೆ ಎಂದಿಗೂ ಬೇರ್ಪಡಿಸಲಾಗದು. ಶ್ರದ್ಧೆಯನ್ನು ಬೆಳೆಸಿಕೊಳ್ಳಲಾರದ ಅಭ್ಯಾಸಿಯು ಎಂದಿಗೂ ಪ್ರಗತಿ ಹೊಂದಲಾರ.