ಯೋಗದ ಬಗ್ಗೆ ಬಹಳಷ್ಟು ತಪ್ಪುಗ್ರಹಿಕೆ ಹಾಗೂ ಗೊಂದಲ ಉಂಟು. ಸಾಮಾನ್ಯವಾಗಿ ಅಗಲುವಿಕೆಗೆ ವಿರುದ್ಧವಾದುದು ಸಂಯೋಗ, ವಿಯೋಗಕ್ಕೆ ವಿರುದ್ಧವಾದುದು ಯೋಗ, ಎಂದು ಇದನ್ನು ಕಲ್ಪಿಸಲಾಗುತ್ತದೆ. ಇದೊಂದು ಮೇಲು ಮೇಲಣ (ಆಳವಿಲ್ಲದ) ಹಾಗೂ ದಾರಿತಪ್ಪಿಸುವ ವಿಚಾರದ ಮತ್ತು ಹೃದಯದ ಆಳವಾಗಿ ಬೇರೂರಿದ ಕೇಶಗಳನ್ನು ಗ್ರಹಿಸುವುದರಲ್ಲಿ ಇರುವ ಅಸಫಲತೆಗಳಿಂದುಂಟಾದ ಮೂಲಭೂತ ತಪ್ಪುಕಲ್ಪನೆಯಾಗಿದೆ.

ನಾವು ಹೃದಯದಲ್ಲಿ ಒಂದು ಹೆಜ್ಜೆ ಆಳವಾಗಿ ಇಳಿದರೆ, ಐಕ್ಯ ಮತ್ತು ವಿಯೋಗಗಳ ಚಲನಕ್ರಮದ ಕಿಂಚಿತ್ ದರ್ಶನವಾಗುತ್ತದೆ. ನಮಗೆ ಸಂತೋಷವನ್ನುಂಟುಮಾಡುವ ವಸ್ತುವಿನೊಂದಿಗಿನ ಸಂಯೋಗವೆಂದು ನಾವು ಯಾವುದನ್ನು ತಿಳಿದುಕೊಂಡಿದ್ದೇವೋ ಅದು ನೈಜ ಸಂಯೋಗವಲ್ಲ, ಅದು ಆಲೋಚನೆಯ ಒಂದು ವಿಶಿಷ್ಟ ಸ್ಥಿತಿಯಾಗಿದೆ. ಅದೇ ರೀತಿಯಾಗಿ ವಿಯೋಗದ ತೋರಿಕೆಯ ದುಃಖಮಯ ಕಲ್ಪನೆ ವಿಯೋಗವೇ ಅಲ್ಲ. ಬದಲಿಗೆ, ಆಲೋಚನೆಯ ಚಿತ್ತದ ಒಂದು ಆಸಕ್ತಿ(ಅಂಟಿಕೊಳ್ಳುವಿಕೆ)ಯಾಗಿದೆ; ಕ್ರಿಯಾಶೀಲವಾಗಲೆಳಸುವ ಅದರದೇ ಮತ್ತೊಂದು ಅವಸ್ಥೆಯಾಗಿದೆ.

ಈ ಮೇಲೆ ಹೇಳಿದ, ಚಿತ್ತದ (ಚಿತ್ತವೃತ್ತಿ/ವಿಚಾರದ) ಯಾಂತ್ರಿಕ ರಚನೆಯನ್ನು ಗ್ರಹಿಸಿ ಹಾಗೂ ಆ ಹಂತದಲ್ಲಿ ನೆಲೆಗೊಂಡು, ಚಿಂತನೆಯ ಆಳವಾದ ಬೇರುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಆ ಮೂಲಕ ಅವುಗಳ ಮೇಲೆ ಪ್ರಭುತ್ವ ಪಡೆಯಲು ಮುಂದುವರಿಯಬಹುದು. ವಸ್ತುವು ಆನಂದವನ್ನುಂಟುಮಾಡಬೇಕೆಂದು ಭಾವಿಸುವಂತಹ ‘ವಸ್ತು- ಸಂಯೋಗ’ ಹಾಗೂ ‘ವಿಯೋಗದ ಕಲ್ಪನೆಯನ್ನುಂಟುಮಾಡಿದುದು ನಮ್ಮ ಚಿತ್ತ (ವಿಚಾರ) ಹಾಗೂ ಚಿತ್ತವೇ ಆಗಿತ್ತೆಂಬುದು, ಹಾಗೂ ಎಲ್ಲಾ ಸಮಯದಲ್ಲಿಯೂ ನಿಜಕ್ಕೂ ಆ ವಿಚಾರವೇ ಆ ವಸ್ತುಗಳಲ್ಲಿ ಸಂಯುಕ್ತಗೊಂಡು ಇತ್ತು ಎಂಬುದು ನಮಗೆ ಕಂಡುಬರುವುದು. ಈ ಘಟ್ಟದಲ್ಲಿ ಪ್ರೇಮಿಗಳು ತಮ್ಮ ಪ್ರೀತಿಪಾತ್ರರ ಸ್ಮರಣೆಗೋಸ್ಕರ ಅಳುವರು ಮತ್ತು ಹಂಬಲಿಸುವರು. ಪ್ರೀತಿಪಾತ್ರರು ಅವರಿಗೆ ಸಂಯೋಗ ಮತ್ತು ವಿಯೋಗಗಳ ಎರಡೂ ಸ್ಥಿತಿಗಳಲ್ಲಿಯೂ ಸಂತೋಷಕರವಾಗಿಯೇ ಇರುವರು.

ಸಾಮಾನ್ಯ ಜನರಿಗೆ ಈ ಮೇಲೆ ಹೇಳಿದ ಸ್ಥಿತಿಗಿಂತಲೂ ಹೆಚ್ಚು ಆಳವಾಗಿ ಹೋಗುವುದು ಅತ್ಯಂತ ಕಠಿಣ. ಏಕೆಂದರೆ ಆ ಸ್ಥಿತಿಯು ಉತ್ಕಟವಾದ ಹರ್ಷೋನ್ಮಾದವನ್ನು ಹುಟ್ಟಿಸುವುದು ಮತ್ತು ಮನುಷ್ಯರು ತಾವಾಗಿಯೇ ಅದರಿಂದ ಬೇರ್ಪಡಲು ಎಂದಿಗೂ ಬಯಸುವುದಿಲ್ಲ. ಅದು ಎಷ್ಟೊಂದು ಉನ್ಮಾದಕರ, ರೋಮಾಂಚಕ ಹಾಗೂ ಆನಂದಮಯವಾಗಿರುವುದೆಂದರೆ, ಯಾರಿಗೆ ಅದು ಪ್ರಾಪ್ತವಾಗಿರುವುದೋ ಅವನು ಹುಚ್ಚನಾಗುವನು ಅಥವಾ ಹುಚ್ಚುತನದ ವೇಷಧರಿಸುವನು. ಏಕೆಂದರೆ, ತನ್ನ ನಿರಂತರ ಉನ್ಮಾದಕರ ಸ್ಥಿತಿಗೆ ಹೊರಜಗತ್ತು ಅಡ್ಡಿಯಾಗಿ ಕಾಣುವುದರಿಂದ, ಅವನು ಅದರಿಂದ ತಪ್ಪಿಸಿಕೊಳ್ಳಲು ಬಯಸುತ್ತಾನೆ. ಇದುವೇ ಉತ್ಕಟ ಉನ್ಮಾದದ ಸ್ಥಿತಿಯಾಗಿದೆ. ಜನರು ಇಂತಹ ಸ್ಥಿತಿಯನ್ನು ಯೋಗದಲ್ಲಿ ಪರಿಪೂರ್ಣತೆ ಹೊಂದಿದ ಸ್ಥಿತಿಯೆಂದು ಪರಿಗಣಿಸಬಹುದು; ಅಷ್ಟೇಕೆ, ಪರಿಗಣಿಸುತ್ತಾರೆ ಕೂಡ. ಆದರೆ ಇದು ಸಾಮಾನ್ಯವಾಗಿ ಬಹಿರ್ಮುಖರಾಗಿರುವವರ ಸ್ಥಿತಿಗಿಂತಲೂ ಹೆಚ್ಚು ಮುಂದುವರಿದ ಸ್ಥಿತಿಯೇ ಆಗಿರುವುದಾದರೂ, ಇದೇ ಪರಮ ಸತ್ಯವಲ್ಲ.

ಅತ್ಯುಚ್ಚ ಸಿದ್ಧಿಪಡೆದ ಗುರುವು ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿ ಸಹಾಯ ಮಾಡಿದರೆ ಅವನ ಕೃಪೆಯಿಂದ ಇನ್ನೂ ಆಳಕ್ಕೆ ಹೋಗುವುದು ಸಾಧ್ಯವಾಗುವುದು. ಆಗ ಅತಿಯಾದ ಸಂತೋಷವನ್ನು ಉಂಟುಮಾಡುವ, ಪ್ರಿಯತಮನ ಭಾವನೆಯ ಅನನ್ಯ ಆಸಕ್ತಿಯು ತನ್ನ ಮೂಲ ಸ್ಥಿತಿಯ ಸಾಕ್ಷಾತ್ ಅನುಭವ ಹೊಂದುವುದು. ಈ ಹಂತದಲ್ಲಿ ಚಿತ್ತವು (ವಿಚಾರವು) ನಿರಾವರಣವಾದ (ಶುದ್ಧ) ಸ್ಥಿತಿಯಲ್ಲಿರುವುದು. ಹಾಗಿದ್ದಾಗ್ಯೂ, ಅದರಲ್ಲಿ ಚಟುವಟಿಕೆ ಇದ್ದೇ ಇರುವುದು. ಒಬ್ಬನು ಇಲ್ಲಿ ನೆಲೆಸಿದನೆಂದರೆ, ಅಥವಾ ನಿಖರವಾಗಿ ಹೇಳುವುದಾದರೆ, ಸಾಕಷ್ಟು ಕಾಲ ಈ ಸ್ಥಿತಿಯಲ್ಲಿ ಇರಿಸಲ್ಪಟ್ಟರೆ, ಆಗ ಅವನು ಚಿಂತನಕ್ರಿಯೆಯನ್ನು ಉಂಟುಮಾಡುವ ಮೂಲವನ್ನು ಸ್ಪಷ್ಟವಾಗಿ ಅರಿಯುವನು. ಮೂಲ ಮತ್ತು ಅದರ ಕ್ರಿಯಾಶೀಲತೆಯ ಏಕಾತ್ಮಕತೆಯು ಸಾಕ್ಷಾತ್ ಆಗಿ ಸ್ಪಷ್ಟವಾಗುವುದು, ಗ್ರಹಿಕೆಯಾಗುವುದು, ಇರುವಿಕೆ ಮತ್ತು ಆಗುವಿಕೆಗಳ ಸಮಸ್ಯೆಯು ಪರಿಹಾರವಾಗುವುದು. ಈಗ, ಅಲ್ಲಿ ಯೋಗವೂ ಇಲ್ಲ, ವಿಯೋಗವೂ ಇಲ್ಲ, ಸಂಯೋಗವೂ ಇಲ್ಲ, ಅಗಲುವಿಕೆಯೂ ಇಲ್ಲ. ಈ ಬಿಂದುವಿನಿಂದಾಚೆಗೆ ನಿಜವಾದ ಈ ಯೋಗ ಪ್ರಾರಂಭವಾಗುವುದು.

ಈ ಹಂತದಲ್ಲಿ ಒಬ್ಬ ಯೋಗಿಯು ಯೋಗದಲ್ಲಿ ನಿಜಕ್ಕೂ ಉಚ್ಚ ಸ್ಥಿತಿಯನ್ನು ಪಡೆದವನೆಂದು ಪರಿಗಣಿಸಬಹುದು. ಹಾಗೂ ಅವನು ನಿಸರ್ಗದೊಂದಿಗೆ ಪರಿಪೂರ್ಣ ಸಾಮಂಜಸ್ಯ ಹೊಂದಿರುವನು. ಅವನ ಸಂಕಲ್ಪ ಹಾಗೂ ವಿಚಾರವು ಅವನ ಗುರುವಿನ ವಿಚಾರದಂತೆಯೇ ಆಗುವುದು. ಸಹಜಮಾರ್ಗದ ‘ರಾಜಯೋಗದ ಪ್ರಭಾವ’ ಎಂಬ ಗ್ರಂಥದಲ್ಲಿ ವರ್ಣಿಸಲಾದ ಕೇಂದ್ರಮಂಡಲದ ಅನಂತ ಸಾಗರದಲ್ಲಿ ಯಾತ್ರೆಯನ್ನು ಪ್ರಾರಂಭಿಸುವುದಕ್ಕೆ ಅವನು ನಿಜಕ್ಕೂ ಯೋಗ್ಯನಾಗುವನು.

ಯೋಗದ ಹೆಸರಿನಲ್ಲಿ ಸಾರ್ವಜನಿಕ ವೇದಿಕೆಯಿಂದ ಎಲ್ಲ ಕಳಪೆ ಬೋಧನೆ ಮಾಡಲಾಗುತ್ತಿದ್ದು ನಿಜಕ್ಕೂ ಅದು ಬೇರೇನೂ ಆಗಿರದೆ ಗೊಂದಲಮಯ ಸ್ಥಿತಿಯ ಪ್ರದರ್ಶನ ಅಥವಾ ಹೆಚ್ಚೆಂದರೆ ಬೆಪ್ಪರ ಗಿಳಿಪಾಠವಾಗಿದ್ದರೆ, ಅಂತಿಮ ಸತ್ಯದ ಸಾಕ್ಷಾತ್ಕಾರದ ವಿಷಯದಲ್ಲಿ ಎಳ್ಳಷ್ಟೂ ಪ್ರಾಯೋಗಿಕ ದೃಷ್ಟಿಯಿಲ್ಲದ್ದು ಎಂಬುದನ್ನು ಒಬ್ಬನಿಗೆ ಈ ಮೇಲಿನ ವರ್ಣನೆಯು ಮನವರಿಕೆ ಮಾಡಲು ಸಾಕಷ್ಟಾಗಿದೆ. ಅವು ಹೆಚ್ಚೆಂದರೆ ಮತಧರ್ಮಾಚರಣೆ ಹಾಗೂ ಕರ್ಮಾಚರಣೆಗಳ ಮತ್ತು ಅನ್ಯ ಕುದ್ರ ವಿಷಯಗಳ ಸಂಕುಚಿತ ಭಾವನೆಗಳ ಅಥವಾ ಕಂದಾಚಾರಗಳ, ಸಂಪ್ರದಾಯಬದ್ಧತೆಯ ಹಾಗೂ ಧರ್ಮಾಂಧತೆಯ ಹಳ್ಳಬಿದ್ದ ಜಾಡುಗಳಲ್ಲಿ, ಒಂದು ತರಹದ ಚಿಂತನದ ಯಾಂತ್ರಿಕ ಸಂಯೋಜನೆಗೆ ದಾರಿಮಾಡಿ ಕೊಡಬಹುದು.

ನಿಜವಾದ ಯೋಗದಲ್ಲಿ ಅನಂತ ದೈವಿಕತೆಯ ಪ್ರವಾಹವು ತುಂಬಿ ಹರಿಯುತ್ತಿರುವುದು. ಅಲ್ಲಿ ಯಾವುದೇ ತರಹದ ಸ್ಥಗಿತತೆ ಕೊಂಚವೂ ಇರುವುದಿಲ್ಲ. ಅದು ಸದಾ ಉಲ್ಲಾಸಮಯವೂ, ನಿತ್ಯನೂತನವೂ, ಹಾಗೂ ಸಾರ್ವಕಾಲಿಕವೂ ಆಗಿದೆ. ಅಲ್ಲಿ ಎಲ್ಲ ಇತರ ಮೃತ್ಯುಗಳ ಮೃತ್ಯು ಉಂಟು. ಅದು ಶುದ್ಧತೆಯ ಸ್ಥಿತಿಯಾಗಿದೆ, ಯಾವುದೇ ಚಾಲಕಶಕ್ತಿಯ ಅಗತ್ಯತೆಯಿಲ್ಲ, ಯಾವುದೇ ತರಹದ ಬಂಧನವಿಲ್ಲ. ಎಲ್ಲ ಗ್ರಂಥಿಗಳೂ ವಿಚ್ಛಿನ್ನಗೊಳಿಸಲ್ಪಡುತ್ತವೆ. ಮಾಯೆ ಅಥವಾ ಅಹಂಕಾರದ ಯಾವುದೇ ಸ್ಪರ್ಶ ಉಳಿದಿರುವುದಿಲ್ಲ, ಏಕೆಂದರೆ ಯೋಗಿಯು ಮಾಯೆಯನ್ನು ದಾಟಿ, ಅಥವಾ ಅದಕ್ಕೆ ಅತೀತನಾಗಿ ಹೋಗಿರುತ್ತಾನೆ ಅಥವಾ ಮಾಯೆಯನ್ನು ಪರಿವರ್ತಿಸಿರುತ್ತಾನೆ, ಮತ್ತು ‘ಅಹಂ’ಕಾರದ ಹಿಂದಿರುವ ‘ಸತ್ಯ’ವನ್ನು, ಅಥವಾ ಯಾವುದರಿಂದ ಬೇರ್ಪಡಲು ಸಾಧ್ಯವಿಲ್ಲವೋ ಅದನ್ನು ಸಾಕ್ಷಾತ್ಕರಿಸಿಕೊಂಡಿದ್ದಾನೆ. ಇದುವೇ ಯೋಗದ ಅತ್ಯುನ್ನತ ಸ್ಥಿತಿಯಾಗಿದೆ.

ರಾಜಯೋಗವೊಂದೇ ನಿಮ್ಮನ್ನು ಚರಮಗುರಿಯತ್ತ ಅಥವಾ ಯಾವುದನ್ನು ಮುಟ್ಟಿ ನೀವು ನಿಮ್ಮ ಕೇವಲ ಶುದ್ಧ ಸ್ವರೂಪವನ್ನು ಹೊಂದಿ ನಿಸರ್ಗದೊಂದಿಗೆ ಪೂರ್ಣ ಸಮರಸವಾಗುವಿರೋ ಅಂತಹ, ಮಾನವನ ಅತ್ಯುಚ್ಚ ನೆಲೆಗೆ ಕರೆದೊಯ್ಯಬಲ್ಲುದು. ಇಂತಹ ಪರಿಣಾಮವನ್ನು ಇತರ ಯಾವ ವಿಧಿ-ವಿಧಾನಗಳೂ ತರಲಾರವು.

– ಶ್ರೀ ಬಾಬೂಜಿ

(ಸತ್ಯೋದಯ 37)