‘ತತ್ತ್ವಜ್ಞಾನ’ದ ಅರ್ಥವು ಬೇರೆ ಬೇರೆ ಕಾಲಗಳಲ್ಲಿ ಬೇರೆಬೇರೆ ರೂಪಗಳನ್ನು ತಳೆಯಿತು. ಆದರೆ, ಅದು ಜ್ಞಾನವನ್ನು ಕುರಿತಾದ ಪ್ರೇಮ ಎಂಬುದೇನೋ ನಿಜವೇ. ಆದರೆ, ಜ್ಞಾನ ಎಂಬುದರ ಅರ್ಥ ಏನು? ಈ ಜ್ಞಾನ-ಪ್ರೇಮವು ಕೆಲವೇ ಅದೃಷ್ಟವಂತರ ಗುತ್ತಿಗೆಯಾಗಿದೆಯೆ? ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ‘ಜ್ಞಾನ’ದ ಪ್ರೇಮವಿಲ್ಲವೆ? ಅಥವಾ, ಪ್ರತಿಯೊಬ್ಬನೂ, ಕನಿಷ್ಟಪಕ್ಷ ತಾನು ಜ್ಞಾನದ ಪ್ರೇಮಿ ಎಂದು ಭಾವಿಸುವುದಿಲ್ಲವೆ?

ಕೆಲವು ಅಭಿಜಾತ ಪಂಡಿತರುಗಳು ತತ್ತ್ವಜ್ಞಾನವನ್ನು ಸ್ವಾಯತ್ತೀಕರಿಸಿಕೊಂಡಂತೆ ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ವೈಜ್ಞಾನಿಕ ಹಾಗೂ ತಾಂತ್ರಿಕ ಜ್ಞಾನವು ವರ್ಧಿಸುತ್ತಿದ್ದುದು ಮತ್ತು ಆಶ್ಚರ್ಯಕರ ವೇಗದಿಂದ ಮುಂದುವರಿಯುತ್ತಿರುವುದು ಅವರಿಗೆ ಕಂಡುಬಂದಾಗ, ಹಾಗೂ ಅದಕ್ಕೆ ತಾವು ಹೊಂದಿಕೊಳ್ಳುವುದು ತಮಗೆ ಅಸಾಧ್ಯವೆಂದೆನಿಸಿದಾಗ ಅವರು ತಮ್ಮನ್ನು ತಾವು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತಶಾಸ್ತ್ರ ಮುಂತಾದವುಗಳಿಂದ ಪ್ರತ್ಯೇಕಿಸಿಕೊಳ್ಳತೊಡಗಿದರು; ಮತ್ತು ಅಂತೆಯೇ ತತ್ತ್ವಶಾಸ್ತ್ರಜ್ಞರು ಇತಿಹಾಸ, ಸಮಾಜಶಾಸ್ತ್ರ, ರಾಜನೀತಿ, ಅಷ್ಟೇ ಅಲ್ಲದೆ ಮನಃಶಾಸ್ತ್ರ, ನೀತಿಶಾಸ್ತ್ರ ಹಾಗೂ ಧರ್ಮಶಾಸ್ತ್ರಗಳಿಂದ ಕೂಡ ದೂರ ಓಡಿಹೋಗಲು ಪ್ರಾರಂಭಿಸಿದರು. ಹಾಗೆಂದರೆ, ತತ್ತ್ವಜ್ಞಾನವು (ಶಾಸ್ತ್ರವು) ಇದೂ ಅಲ್ಲ, ಅದೂ ಅಲ್ಲವೆಂದಾದರೆ, ಅದು ಇರುವುದಾದರೂ ಏನು? ಒಂದು ಕಾಲದಲ್ಲಿ ಅದು ಇವೆಲ್ಲವುಗಳನ್ನೂ, ಅಷ್ಟೇ ಅಲ್ಲದೆ ಲಲಿತಕಲೆಗಳನ್ನು ಕೂಡ ಒಳಗೊಂಡಿದ್ದಾಗಿತ್ತು.

ಆದ್ದರಿಂದ, ಈಗ ತತ್ತ್ವಜ್ಞಾನಿಗಳು ಪ್ರಾಂಜಲ ಮನಸ್ಸಿನವರಾಗಲಿ ಹಾಗೂ ತಮ್ಮ ಸೋಲನ್ನು ಒಪ್ಪಿಕೊಳ್ಳಲಿ, ಇಲ್ಲವಾದರೆ, ತಮಗೆ ಏನು ಬೇಕಾಗಿದೆಯೆಂಬುದು ತಮಗೆ ತಿಳಿದಿಲ್ಲವೆಂದು ಅವರು ಘೋಷಿಸಲಿ ಮತ್ತು ತಮ್ಮ ಶೂನ್ಯಾನ್ವೇಷಣೆಯ ಬೌದ್ಧಿಕ ಹಪಹಪಿಕೆಗೆ ವಿದಾಯ ಹೇಳಲಿ. ಒಮ್ಮೆ ಇದನ್ನು ಮಾಡಿದರೆ, ನಾವು ತೆರೆದ ಹೃದಯದಿಂದ ಹೊಸತಾಗಿ ಪ್ರಾರಂಭಿಸಬಹುದು.

ಮೊದಲಿಗೆ, ನಮ್ಮ ಗುರಿಯನ್ನು ನಿರ್ಧರಿಸೋಣ. ನಾವು ದಟ್ಟ ಕತ್ತಲೆಯಲ್ಲಿ ತಡಕಾಡುತ್ತಿದ್ದೇವೆ. ನಾವು ಆಮೂಲಾಗ್ರ ತೃಷಿತರಾಗಿದ್ದೇವೆ. ಸುರಕ್ಷಿತ ನಿಲುವಿನ ಪ್ರಜ್ಞೆಯನ್ನು ಕಳೆದುಕೊಂಡಿದ್ದೇವೆ. ಅದಕ್ಕಾಗಿ ನಮಗೆ ಭದ್ರವಾದ ನೆಲೆ ಮತ್ತು ಬಲವಾದ ಆಲಂಬನ ಬೇಕಾಗಿದೆ. ನಮಗೆ ಶುದ್ಧ ಹೊಸ ನೀರು ಬೇಕು; ಮತ್ತು ದುರ್ವಾಸನೆಯ ಕೆಟ್ಟ ಹವೆಯನ್ನು ತ್ಯಜಿಸಿ ಹೊಸ ಗಾಳಿಯನ್ನು ಪಡೆಯಬೇಕು, ಅಂಧಕಾರವನ್ನು ದೂರಮಾಡಲು ಬೆಳಕನ್ನು ಪಡೆಯಬೇಕು. ಇವು ನಮ್ಮ ಪ್ರಥಮ ಹಾಗೂ ತತ್‌ಕ್ಷಣದ ಆವಶ್ಯಕತೆಗಳಾಗಿವೆ. ನಮ್ಮ ಮುಂದಿನ ಹೆಜ್ಜೆಯೆಂದರೆ ಅಂತಹ ಒಂದು ಸ್ಥಿತಿಯಲ್ಲಿ ನಾವು ಶಾಶ್ವತವಾಗಿ ನೆಲೆಗೊಳ್ಳುವುದಾಗಿದೆ.

ದೊಡ್ಡ ದೊಡ್ಡ ಶಬ್ದಗಳು, ಉಪಮೆ, ರೂಪಕಗಳು, ಇನ್ನಿತರ ತತ್ತ್ವಶಾಸ್ತ್ರದ ಸಂಕೀರ್ಣ ಪಾರಿಭಾಷಿಕ ಶಬ್ದಾವಳಿಗಳನ್ನು ಹುಟ್ಟುಹಾಕಿ, ಅವುಗಳ ಮೂಲಕ, ಭದ್ರನೆಲೆಗಟ್ಟು, ತಾಜಾ ನೀರು, ಹವೆ, ಬೆಳಕು ಮುಂತಾದವುಗಳ ಅರ್ಥ ಮತ್ತು ವ್ಯಾಖ್ಯೆಗಳ ದೋಷರಹಿತ ತರ್ಕಸರಣಿಯನ್ನು ಸ್ಥಾಪಿಸಲು ನಾವು ಚಿಂತೆಪಡಬೇಕಾಗಿಲ್ಲ ಮತ್ತು ಅದರಿಂದಾಗಿ ನಮ್ಮ ಗುರಿಯನ್ನು ದೃಷ್ಟಿಯಿಂದ ಮರೆಯಾಗಲು ಬಿಡದಿರೋಣ. ಪ್ರತಿಯೊಬ್ಬನೂ ತನ್ನ ಆವಶ್ಯಕತೆಯ ಕಾರಣ ಅವು ಏನಿವೆಯೆಂಬುದನ್ನು ತಂತಾನೇ ತನ್ನ ಅನಿಸಿಕೆಯಿಂದಲೇ ಗ್ರಹಿಸುತ್ತಾನೆ. ಆದ್ದರಿಂದ, ಆವಶ್ಯಕತೆಯನ್ನು ಗ್ರಹಿಸಿ, ಮತ್ತು ಗುರಿಯನ್ನು ನಿರ್ಧರಿಸಿಕೊಂಡು, ನಾವು ಕೂಡಲೇ ಆ ಗುರಿಯನ್ನು ಸಾಧಿಸುವ ಮಾರ್ಗ ಮತ್ತು ಸಾಧನಗಳ ಕುರಿತು, ವಿಚಾರ ಮಾಡೋಣ.

ಗುರಿಯು ಅಷ್ಟೊಂದು ಸರಳವಾಗಿದೆಯೆಂಬುದನ್ನು ನಾವು ಕಂಡುಕೊಂಡನಂತರ, ಆ ಗುರಿಯ ಪ್ರಾಪ್ತಿಗಾಗಿ ಇರುವ ಸಾಧನಗಳೂ ಅವಶ್ಯವಾಗಿ ಹಾಗೇ ಇರಬೇಕೆಂಬುದನ್ನು ನಾವು ಅರಿತುಕೊಳ್ಳಬೇಕು. ನಮ್ಮ ಗುರಿಯನ್ನು ನಾವು ನಿಕಟವಾಗಿ ಪರೀಕ್ಷಿಸಿ ನೋಡಿದಾಗ, ಅದು ಕೇವಲ ಒಂದು ಸ್ಥಿತಿ, ಅಥವಾ ನಾವು ಅದನ್ನು ಹೊಂದಿ ಅದರಲ್ಲಿ ನಿರಂತರವಾಗಿ ನೆಲೆಸಬೇಕಾದ ಒಂದು ಅವಸ್ಥೆ ಎಂಬ ನಿರ್ಣಯಕ್ಕೆ ಬರುವೆವು. ಆದ್ದರಿಂದ ನಾವು ಅದನ್ನು ಹೊಂದಲೇಬೇಕೆಂದು ಕೂಡಲೇ ನಿಶ್ಚಯಿಸೋಣ ಹಾಗೂ ನಿರ್ಧಾರ ಮಾಡೋಣ.

ಒಂದು ದೃಢ ಸಂಕಲ್ಪವು ಮೊದಲ ಜಿಗಿತದಲ್ಲಿಯೇ ನಮ್ಮನ್ನು ಅರ್ಧ ದಾರಿಯವರೆಗೆ ಕರೆದೊಯ್ಯುತ್ತದೆ. ಈಗ ನಾವು ನಮ್ಮ ಹೃದಯವನ್ನು ತೆರವುಗೊಳಿಸೋಣ ಹಾಗೂ ಮತ್ತೆ ಮತ್ತೆ ನಮ್ಮ ಗುರಿಯನ್ನು ಕುರಿತು ಮಾತ್ರವೇ ವಿಚಾರ ಮಾಡೋಣ.

ಅತ್ಯಂತ ಚಿಕ್ಕ ಕಣವೂ ಕೂಡ ಅಪಾರ ಶಕ್ತಿಯನ್ನು ಹೊಂದಿದೆ ಎಂಬುದು ತಿಳಿದ ಸಂಗತಿಯಾಗಿದೆ. ಈ ಶಕ್ತಿಯನ್ನು ಬಳಸಲು ಇರುವ ಒಂದೇ ಒಂದು ತೊಂದರೆ ಎಂದರೆ ಅದರ ಯೋಗ್ಯ ನಿಯಂತ್ರಣ ಹಾಗೂ ಅದು ಹರಿಯುವಂತೆ ಮಾಡಲು ಯೋಗ್ಯವಾದ ಒಂದು ನಾಲೆಯನ್ನು ಅಥವಾ ಮಾರ್ಗವನ್ನು ನಿರ್ಮಿಸುವುದು. ನಾವು ನಮ್ಮ ಹೃದಯವನ್ನು ತೆರವುಮಾಡಿ ನಮ್ಮ ಗುರಿಯ ಬಗ್ಗೆ ಯಾವಾಗ ಚಿಂತಿಸುವೆವೋ ಆಗ ಈ ಸುಪ್ತ ಶಕ್ತಿಯು ಕ್ರಿಯಾಶೀಲವಾಗುವುದು. ಹೃದಯದ ಶುದ್ಧತೆಯಿಂದಾಗಿ ಅದರ ಮೇಲೆ ಸರಿಯಾದ ನಿಯಂತ್ರಣವಿರುವುದು ಹಾಗೂ ನಮ್ಮ ವಿಚಾರವು ಗುರಿಯತ್ತ ನಿರ್ದೇಶಿತವಾಗಿರುವುದರಿಂದ, ಅದು ಹರಿಯುವುದಕ್ಕೆ ಒಂದು ಯೋಗ್ಯ ದಾರಿಯೂ ಉಂಟಾಗುವುದು. ವಿಚಾರವು ಊರ್ಧ್ವಮುಖವಾಗಿ ನಿರ್ದೇಶಿಸಿದಾಗ ಶಕ್ತಿಯು ಮೇಲ್ಮುಖವಾಗಿ ಹರಿಯುವುದು, ಹಾಗೂ ಅದನ್ನು ಅಧೋಮುಖವಾಗಿ ನಿರ್ದೇಶಿಸಿದ್ದಾದರೆ ಶಕ್ತಿಯು ಅಧೋಮುಖಿಯಾಗಿ ಹರಿಯುವುದು.

ಈಗ, ಅನುಭಾವ ಮಾರ್ಗ (Mysticism)ಕ್ಕೆ ಸೇರಿದ ತತ್ತ್ವಜ್ಞಾನಿಗಳು ಈ ಮೇಲಿನ ಪದ್ಧತಿಯನ್ನು, ಅದೊಂದು ಸ್ಥೂಲ ಭೌತಿಕ ವಾದ ಎಂದು ದೂಷಿಸಬಹುದು. ಆದರೆ ಇಂತಹ ಅನುಭಾವಿಗಳಿಗೆ ನನ್ನ ವಿನಂತಿ ಏನೆಂದರೆ, ಅವರು ಸಾಧನೆಯನ್ನು ಕೈಗೊಳ್ಳಬೇಕು ಹಾಗೂ ಅದರ ಸತ್ಯತೆಯನ್ನು ಪ್ರಮಾಣೀಕರಿಸಿಕೊಳ್ಳಬೇಕು.

ಸುಪ್ತವಾಗಿರುವ ಈ ಪ್ರಚಂಡ ಶಕ್ತಿಯ ಬಳಕೆಯನ್ನೊಳಗೊಂಡ ಕಾರ್ಯವನ್ನು ಕೈಗೊಳ್ಳುವುದು ಅಪಾಯಕಾರಿ ಎಂಬುದನ್ನು ನನ್ನ ವಿಜ್ಞಾನಿ ಮಿತ್ರರೂ ಕೂಡ ತತ್‌ಕ್ಷಣವೇ ಒಪ್ಪುತ್ತಾರೆ. ಅದಕ್ಕಾಗಿ, ಈ ಕಲೆಯಲ್ಲಿ ನಿಷ್ಣಾತನಾದವನೊಬ್ಬನ ಸಹಾಯವನ್ನು ನಾವು ಅರಸಬೇಕಾಗುತ್ತದೆ ಮತ್ತು ಅವನ ಮಾರ್ಗದರ್ಶನದಲ್ಲಿ ಪ್ರಯೋಗ ಮಾಡಬೇಕು.

ನಮ್ಮ ಗುರಿಯತ್ತ ಮತ್ತೆ ತಿರುಗೋಣ. ನಮಗೆ ಬೆಳಕು, ಗಾಳಿ, ನೀರು, ಹಾಗೂ ನೆಲ ಬೇಕೆಂದು ಹಾಗೂ ಆ ಸ್ಥಿತಿಯಲ್ಲಿ ನಾವು ನೆಲೆಸಬೇಕೆಂದು ಬಯಸುತ್ತೇವೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಸಾಮಾನ್ಯವಾಗಿ ಬಹುರ್ಮುಖಿಗಳಾಗಿರುವ ಮತ್ತು ತಮ್ಮ ತಮ್ಮೊಳಗೆ ಒಂದಕ್ಕೊಂದು ಕಿವುಡ ಮೂಕ ಆಗಿರುವ ನಮ್ಮ ಇಂದ್ರಿಯಗಳ ಆಟ(ಚಟುವಟಿಕೆ)ಗಳಿಂದ ನಮಗೆ ಗೊಂದಲವಾಗದಿರಲಿ. ಹೀಗಿರಲಾಗಿ, ಬೆಳಕು ಬೇಕಾಗಿರುವುದು ನಮ್ಮ ಕಣ್ಣುಗಳಿಗೆ ಮಾತ್ರವಲ್ಲ, ಬದಲಿಗೆ, ನಮ್ಮ ಸಮಗ್ರ ಅಸ್ತಿತ್ವಕ್ಕೆ ಬೇಕಾಗಿದೆ. ಅದಾದರೋ, ದೈವೀಪ್ರಕಾಶ, ಸತ್, ಚಿತ್, ಆನಂದಮಯ ಪ್ರಕಾಶ. ದೈವೀ ಪ್ರಕಾಶವೇ ಗಾಳಿಯಾಗಿದ್ದು ನಾವು ಅದನ್ನು ಉಸಿರಾಡಿಸಬೇಕಾಗಿದೆ. ಅದು ನೀರಾಗಿದ್ದು ಅದರಿಂದ ನಾವು ಜೀವಿಸಬೇಕಾಗಿದೆ. ಅದು ನೆಲವಾಗಿದ್ದು ಅದರ ಮೇಲೆ ನಾವು ನಿಲ್ಲಬೇಕಾಗಿದೆ. ಅದು ಸರ್ವವ್ಯಾಪಿ, ಅದು ಪ್ರಾಣವೇ ಆಗಿದೆ. ಅದೇ ರೀತಿಯಾಗಿ, ಗಾಳಿಯು ಸರ್ವವ್ಯಾಪಿ ಪ್ರಾಣವಾಗಿದೆ ಮತ್ತು ನೀರು ನೆಲಗಳೂ ಕೂಡ ಅದೇ ರೀತಿಯಾಗಿವೆ.

ಆರಂಭದಲ್ಲಿ ನಿಜತತ್ತ್ವವನ್ನು ಗ್ರಹಿಸುವುದು ನಮಗೆ ಅತ್ಯಂತ ಕಠಿಣವಾಗಿರುವುದೇನೋ ನಿಜ. ಆದಾಗ್ಯೂ ಒಂದುವೇಳೆ, ಸಮಗ್ರ ಮಾರ್ಗವನ್ನು ಕ್ರಮಿಸಿದಂತಹ ಹಾಗೂ ಆ ಸ್ಥಿತಿಯಲ್ಲಿ ಶಾಶ್ವತವಾಗಿ ನೆಲೆಸಿರುವ ಒಬ್ಬ ವ್ಯಕ್ತಿಯ ಬಳಿಗೆ ನಾವು ಹೋದರೆ, ಅದರ ಒಂದು ಸುಳಿವು ಸಿಗಬಹುದು. ಇಂತಹ ಒಬ್ಬನನ್ನು ನಾವು ಆಸರೆಯಾಗಿ ತೆಗೆದುಕೊಂಡರೆ ನಮಗೆ ದೈವೀ ಪ್ರಕಾಶವು ತಾನಾಗಿಯೇ ದೊರಕಬಹುದು; ಮತ್ತು ನಾವು ದೈವೀ ವಾತವನ್ನು ಅನುಭವಿಸಬಹುದು, ದೈವೀ ಜಲಪಾನ ಮಾಡಬಹುದು. ಏಕೆಂದರೆ ಅವನೇ (ಗುರುವೇ, ಪರಮಾತ್ಮನೇ) ಇವೆಲ್ಲವೂ ಆಗಿರುವನೆಂಬುದನ್ನು ನಾವು ಮನಗಾಣುವೆವು. ಇದನ್ನು ಸಾಧಿಸಿದಾಗ, ತತ್ತ್ವಜ್ಞಾನವು ತಾನೇ ತೃಪ್ತವಾಗುವುದು. ವಿಜ್ಞಾನವು ತನ್ನದೇ ಅತ್ಯುಚ್ಚ ಸ್ಥಿತಿಯನ್ನು ಪಡೆಯುವುದು. ಧರ್ಮವು ತನ್ನ ಯಥಾರ್ಥ ಸ್ಥಿತಿಯನ್ನು ಹೊಂದುವುದು. ಹಾಗೂ, ರಹಸ್ಯವು ರಹಸ್ಯಮಯ ರೀತಿಯಲ್ಲಿ ಬಯಲಾಗುವದು.