ತಮ್ಮ ಮಮತೆಯ ಮಗನ ಮರಣದ ಸಮಯ ಭವಿಷ್ಯವಾಣಿಯ ಪ್ರಕಾರ ಸನ್ನಿಹಿತವಾಗುತ್ತಿರುವುದರ ಕಾರಣ, ಮಾರ್ಕಂಡೇಯನ ತಂದೆ-ತಾಯಿಗಳು ದುಃಖಕ್ಕೀಡಾಗಿದ್ದರು. ಮಗನು ಅದಾಗಲೇ ಪರಮ ಪ್ರಭುವಿನ ಪೂಜೆಗೆ ಹೋಗಿದ್ದನು. ಮೃತ್ಯು ದೇವನು ಆ ಬಾಲಕನಿದ್ದಲ್ಲಿಗೆ ಹೋಗಿದ್ದ, ಆದರೂ ಪರಮಾತ್ಮನ ಕೃಪಾರ ಕ್ಷೆಯಲ್ಲಿದ್ದ ಅವನನ್ನು ಮುಟ್ಟಲಾಗಲಿಲ್ಲ. ಮೃತ್ಯುದೇವತೆ ಬರಿಗೈಯಿಂದ ಹಿಂದಿರುಗಿ ಬರಬೇಕಾಯಿತು.
ಮೃತ್ಯು ದೇವತೆ ಸತ್ಯವಾನನ ಜೀವವನ್ನು (ಪ್ರಾಣವನ್ನು) ಅಪಹರಿಸಿತ್ತು. ಧರ್ಮನಿಷ್ಠಳಾದ ಅವನ ಪತ್ನಿ ಸಾವಿತ್ರಿಯು ತನ್ನ ಪತಿಯನ್ನು ಮರಳಿ ಪಡೆಯುವುದಕ್ಕಾಗಿ ಮೃತ್ಯು ದೇವತೆಯನ್ನು ಹಿಂಬಾಲಿಸಿದಳು. ದಾರಿಯಲ್ಲಿ ಎಲ್ಲ ಅಪಾಯಗಳನ್ನೂ ತೊಂದರೆಗಳನ್ನೂ ದಿಟ್ಟತನದಿಂದ ಎದುರಿಸುತ್ತ, ಮೃತ್ಯು ದೇವತೆಯನ್ನು ಹಿಂಬಾಲಿಸುವುದನ್ನು ಮುಂದುವರಿಸಿದಳು. ಮೃತ್ಯು ದೇವನು, ಅವಳನ್ನು ಹಾಗೆ ಮಾಡದಿರಲು ಅನೇಕ ಬಾರಿ ಮನವೊಲಿಸಿದರೂ, ಅವಳು ಅದಕ್ಕೆ ಕಿವಿಗೊಡುವವಳಾಗಿರಲಿಲ್ಲ. ಕೊನೆಯಲ್ಲಿ, ಅವಳು ಬಯಸಿದ ಯಾವುದೇ ವರವನ್ನು ದಯಪಾಲಿಸಲು ಮೃತ್ಯುದೇವ ಒಪ್ಪಿದನು; ತನಗೆ ಮಕ್ಕಳನ್ನೂ, ಮೊಮ್ಮಕ್ಕಳನ್ನೂ ಪಡೆಯುವ ವರವನ್ನು ದಯಪಾಲಿಸಲು ಆಕೆಯು ಮೃತ್ಯು ದೇವನನ್ನು ಚಾತುರ್ಯದಿಂದ ಒಪ್ಪುವಂತೆ ಮಾಡಿದಳು. ಅವಳು ದೈವಭಕ್ತನ ಪತ್ನಿಯಾಗಿದ್ದುದರಿಂದ, ಅವಳ ಪತಿಯ ಜೀವವು ಮರಳಿ ಪಾರ್ಥಿವ ಜೀವನದಲ್ಲಿ ಪುನಃ ಸ್ಥಾಪಿಸಲ್ಪಟ್ಟಿತು.
ಬಾಲಕ ನಚಿಕೇತ ಮೃತ್ಯುದೇವತೆಯಿರುವಲ್ಲಿಗೆ ಹೋಗಿ, ಮೂರು ದಿನಗಳ ಕಾಲ, ಆಹಾರ ಸ್ವೀಕರಿಸದೆ ಅವನಿಗಾಗಿ ಪ್ರತೀಕ್ಷೆ ಮಾಡಿದ. ಆ ದೇವನು ಈ ಬಾಲಕನ ಬಗ್ಗೆ ಸಂತುಷ್ಟನಾಗಿ, ಮೂರು ವರಗಳನ್ನು ದಯಪಾಲಿಸುವ ವಚನವಿತ್ತನು. ಬಹಳ ಸೂಕ್ಷ್ಮ ಬುದ್ಧಿಯವನೂ, ಚತುರನೂ ಆದ ಬಾಲಕ, ಯಾವ ಪ್ರಲೋಭನೆಗೆ ಈಡಾಗುವನಾಗಿರಲಿಲ್ಲ. ಅವನು ತನ್ನ ಅಂತಿಮ ವರವಾಗಿ, ಅಸ್ತಿತ್ವದ ರಹಸ್ಯವನ್ನು ಅರಿಯಲು ಬಯಸಿ, ತನಗೆ ಈ ಜ್ಞಾನವನ್ನು ಉಪದೇಶಿಸಲು ಬೇಡಿಕೊಂಡನಲ್ಲದೆ ಮೃತ್ಯುದೇವನಿಗಿಂತ ಇನ್ನಾರು ಅರ್ಹರಾಗಲು ಸಾಧ್ಯ ಎಂದೂ ಅರಿಕೆ ಮಾಡಿಕೊಂಡನು. ಹೀಗೆ ನಚಿಕೇತನು ಮೃತ್ಯುವಿನ ಹೊಸ್ತಿಲನ್ನು ದಾಟಿದನಲ್ಲದೆ, ಭಗವತ್ ಕೃಪೆಯಿಂದ ಆತ್ಮ ಸಾಕ್ಷಾತ್ಕಾರದ ಮೂಲಕ ಅಮೃತತ್ವವನ್ನು ಸಾಧಿಸಿದನು.
ಮೇಲೆ ಪ್ರಸ್ತಾವಿಸಲಾದ ಕಥಾನಕಗಳಿಂದ ಭಾರತದ ತಾತ್ವಿಕ ಚಿಂತನವು ಬಹಳ ಶ್ರೀಮಂತಗೊಂಡಿದೆ. ಉನ್ನತ ಮಟ್ಟದ ರೂಪಕಾತ್ಮಕ ಪ್ರಸಂಗ, ಮನೋಜ್ಞ ಉತ್ಕೃಷ್ಟ ಪ್ರೇಮ ಮತ್ತು ಅತ್ಯುನ್ನತ ತಾತ್ವಿಕ ಚಿಂತನೆಗಳು ಭಾರತೀಯ ಸಂಸ್ಕೃತಿ ಹಾಗೂ ನಾಗರಿಕತೆಗಳ ಪ್ರತಿಯೊಂದು ಮುಖವನ್ನೂ ಪ್ರಭಾವಿತಗೊಳಿಸಿವೆ. ಕಲೆ, ಸಾಹಿತ್ಯ ಕಾವ್ಯ, ಹಾಗೂ ತತ್ತ್ವಶಾಸ್ತ್ರಗಳು ಇವುಗಳಿಂದ ಮೌಲಿಕ ವಸ್ತುವನ್ನು ಪಡೆದಿವೆ. ಮಾರ್ಕಂಡೇಯ, ಸಾವಿತ್ರಿ ಅಥವಾ ನಚಿಕೇತರ ಹೆಸರು ಹೇಳಿದ ಮಾತ್ರದಿಂದಲೇ ಅನುಭಾವಿಗಳು ಆನಂದ ಪರವಶರಾಗುತ್ತಾರೆ.
ಪ್ರಾಣದ ಮೇಲಿನ ಪ್ರೇಮವು ಪ್ರತಿಯೊಬ್ಬ ಮಾನವ ಜೀವಿಯ ಮೌಲಿಕ ಗುಣವಾಗಿದೆ. ನಿಜವಾದ ಜೀವದೊಂದಿಗೆ ಒಂದು ವಿಶಿಷ್ಟ ರೂಪವನ್ನು ಕಾಯ್ದಿಟ್ಟುಕೊಳ್ಳುವ ಗೊಂದಲದಿಂದ ಜೀವಿಯಲ್ಲಿ ಮರಣ ಭಯ ಸೇರಿಕೊಳ್ಳುತ್ತದೆ. ನಿರ್ಜೀವವೆಂದೆನ್ನಲಾಗುವ ಭೌತ ವಸ್ತು ರೂಪಗಳಲ್ಲಿಯೂ ಈ ಗೊಂದಲವನ್ನು ಕಾಣಬಹುದು. ತತ್ಪರಿಣಾಮವಾಗಿ ರೂಪಗಳು ಭಗ್ನಗೊಂಡಾಗ ಅವುಗಳೆಲ್ಲ ಬಂಧಿತವಾಗಿದ್ದ ಶಕ್ತಿಯನ್ನು ಅವು ಕ್ರಿಯಾರೂಪದಲ್ಲಿ ಪ್ರಕಟಗೊಳಿಸುವವು. ಒಂದು ವೇಳೆ, ಹೇಗಾದರೂ ಮಾಡಿ, ವ್ಯಷ್ಟಿ ರೂಪದ ಮೇಲಿರಿಸಿದ ಮಹತ್ತ್ವವನ್ನು ಅಸ್ತಿತ್ವದ ಏಕತೆಯ ಕಡೆಗೆ ಸ್ಥಾನಾಂತರಗೊಳಿಸುವ ಮೂಲಕ ಈ ಜೀವದ ಮೇಲಿನ ಪ್ರೇಮವನ್ನು ನೈಜ ಜೀವನದ ಕಡೆಗೆ ಸರಿಯಾಗಿ ನಿರ್ದೇಶಿಸಿದರೆ, ಮೃತ್ಯು ಭಯವು ಒಬ್ಬ ಜೀವಿಯಲ್ಲಿ ಮುಂದೆಂದಿಗೂ ಉಳಿಯಲಾರದು. ವ್ಯಕ್ತಿಗತ ರೂಪಕ್ಕಿರುವ ಎಲ್ಲ ಭಯಗಳೂ ತಮ್ಮ ಅರ್ಥ ಮತ್ತು ಮಹತ್ತ್ವಗಳನ್ನು ಕಳೆದುಕೊಳ್ಳುವುವು. ಒಬ್ಬ ವ್ಯಕ್ತಿಯು ತನ್ನ ವ್ಯಕ್ತಿತ್ವಕ್ಕೆ (ವ್ಯಕ್ತಿಗತ ರೂಪಕ್ಕೆ) ಅಷ್ಟೇಕೆ ಅಂಟಿಕೊಳ್ಳುತ್ತಾನೆ ? ಪ್ರಾಚೀನ ಋಷಿಗಳು ಚೈತನ್ಯದ ವಿವಿಧ ಶಕ್ತಿಗಳನ್ನು ದರ್ಶಿಸಿದರು ಹಾಗೂ ಅವುಗಳಿಗೆ ದೇವತೆಗಳೆಂದು ಕರೆದರು. ಆ ಶಕ್ತಿಗಳ ಸಫಲತೆಗಾಗಿ, ಅಥವಾ ಆ ಶಕ್ತಿಗಳನ್ನು ಕಾಯ್ದುಕೊಳ್ಳಲು ಕೂಡ ಅವರು ಮಾನವರಿಗೆ ಅವರಿದ್ದಂತೆಯೇ ಇರಲು ನೆರವಾಗಲು ಪ್ರಯತ್ನಿಸುತ್ತಾರೆ. ಮಾನವರು ದೇವತೆಗಳಿಗೆ ಆಹಾರ ಒದಗಿಸಿದರು ಮತ್ತು ದೇವತೆಗಳು ಮಾನವರಿಗೆ ಆಹಾರ ಒದಗಿಸಿದರು. ಹೀಗೆ ಸ್ವರ್ಗ ಮತ್ತು ಭೂಮಿಗಳ ಸಮಾಗಮವಾಗಿತ್ತು.
ಮಾನವರಿಗೆ ಸಹಾಯ ಮಾಡಲು ದೇವತೆಗಳು ಇರುವಂತೆ, ರಾಕ್ಷಸರೂ ಇದ್ದಾರೆ; ಅವರು ಪ್ರಜ್ಞೆಯ (ಚೈತನ್ಯದ) ಅಂಧಕಾರಮಯ ಹಾಗೂ ನಿಮ್ಮ ಸ್ತರದ ಶಕ್ತಿಗಳ ಮೇಲೆ ಜೀವಿಸುತ್ತಾರೆ ಮತ್ತು ಮಾನವರು ನೀಡುವ ತಮ್ಮ ಪಾಲಿನ ಆಹಾರವನ್ನು ಅವರು ನಿರಂತರವಾಗಿ ಬೇಡುತ್ತಿರುತ್ತಾರೆ. ದೇವತೆಗಳು ಮತ್ತು ದಾನವರು (ರಾಕ್ಷಸರು) ನಿಜವಾಗಿಯೂ ರಕ್ತ ಸಂಬಂಧಿಗಳಾದ ಬಂಧುಗಳು ಹಾಗೂ ಒಂದೇ ಚೈತನ್ಯದ ಪರಸ್ಪರ ವಿರುದ್ಧ ಬಗೆಯ ಶಕ್ತಿಗಳಾಗಿವೆ.
ದೇವತೆಗಳು ಹಾಗೂ ದಾನವರು ಕೂಡ ಭಯ- ಮುಕ್ತರಲ್ಲವೆಂಬುದನ್ನು ಕೂಡ ಪ್ರಾಚೀನ ಋಷಿಗಳು ಕಂಡುಕೊಂಡಿದ್ದರು. ಮನುಷ್ಯರು ತಮ್ಮ ಪಾರ್ಥಿವ (ಭೂಮಿಯ ಮೇಲಿನ) ಅಸ್ತಿತ್ವದ ಅವಧಿಯನ್ನು ಪೂರ್ತಿಗೊಳಿಸಿದ ನಂತರ ದೇವತೆಗಳ ಲೋಕದಲ್ಲಾಗಲಿ, ಅಥವಾ ದಾನವರ ಲೋಕದಲ್ಲಾಗಲಿ ಪ್ರವೇಶಿಸುತ್ತಾರೆ. ಮನುಷ್ಯರು ದೇವಲೋಕವನ್ನು ಬಯಸುವುದು ಸ್ವಾಭಾವಿಕವೇ ಆಗಿದೆ. ದೇವಲೋಕವು ಅಂತಿಮ ನೆಲೆ ಅಲ್ಲವೆಂಬುದು ಗಾಢ ಚಿಂತನೆ ಮಾಡುವ ಪ್ರಾಚೀನ ಋಷಿಗಳಿಗೆ ಸ್ಪಷ್ಟವಾಗಿ ತಿಳಿದಿತ್ತು; ಹಾಗೂ ಆ ಕಾರಣವೇ ಅವರು ಅಸ್ತಿತ್ವದ ಇನ್ನೂ ಉನ್ನತ ವಲಯಗಳತ್ತ ಬೆರಳಿಟ್ಟು ತೋರಿಸಿದರು ಮತ್ತು ಪ್ರಕಾಶಮಯ ಲೋಕಗಳ ಮೂಲಕ ಹಾದು ಅಂತಿಮ ಮುಕ್ತಿಯನ್ನು ಪಡೆಯುವ ವಿಧಾನಗಳನ್ನು ಸೂಚಿಸಿದರು. ಅದರ ಪ್ರಾಪ್ತಿಗಾಗಿ ತೀವ್ರ ಹಂಬಲವನ್ನು ಹೊಂದಿರುವುದು ಮತ್ತು ಪ್ರತಿಯೊಂದು ಪ್ರಕಾರದ ಪ್ರಲೋಭನೆ ಹಾಗೂ ಮೋಹಾಕರ್ಷಣೆಗಳಿಂದ ಮುಕ್ತವಾಗುವುದು, ಪ್ರಪ್ರಥಮ ನಿಬಂಧನೆಯಾಗಿದೆ.
ಒಬ್ಬನು ಅಸುರೀ ಜಗತ್ತನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಅದನ್ನು ನಿಗ್ರಹಿಸಲೇ ಬೇಕು ಎಂಬುದು ನಿಃಸಂದೇಹ, ಏಕೆಂದರೆ ಧ್ರುವೀಕರಣವು ಕೇವಲ ಒಂದು ಹೆಚ್ಚು ಪ್ರಕಾಶಮಯ ಚಿಹ್ನೆಯದಷ್ಟೇ ಆಗಿರಲು ಸಾಧ್ಯವಿಲ್ಲ. ಏನೆಲ್ಲ ಪ್ರಕಾಶಮಯ ಹಾಗೂ ಒಳಿತಾಗಿರುವುದೋ ಅದನ್ನು ಆಕ್ರಮಿಸಿ, ನಾಶಗೊಳಿಸುವ -ಸ್ವಭಾವದವರಾದ ಈ ಅಂಧಕಾರಮಯ ಲೋಕದ ಜೀವಿಗಳು ಸಾಧಕರನ್ನು ಭಯಪಡಿಸುವವರೂ, ಅವರಿಗೆ ಬೆದರಿಕೆ ಒಡ್ಡುವವರೂ, ಅಷ್ಟಲ್ಲದೆ, ಆಕ್ರಮಣ ಮಾಡುವವರೂ ಆಗಿರುತ್ತಾರೆ. ತಮ್ಮ ಅಂತಿಮ ಗುರಿಯನ್ನು ತಲುಪಿದ್ದರೂ, ಆದರೆ ತಮ್ಮ ಪ್ರೀತಿಪಾತ್ರರಿಗೆ, ಸಹಚರರಿಗೆ ಸಹಾಯ ಮಾಡಲೋಸುಗ ಭೌತಿಕ ರೂಪವನ್ನು ಇನ್ನೂ ಇಟ್ಟುಕೊಂಡಿರುವವರನ್ನು ಆಕ್ರಮಿಸಲು ಕೂಡ ಅವರು ಹಿಂಜರಿಯುವುದಿಲ್ಲ. ಆದರೆ ಅಂತಹ ಪ್ರಸಂಗಗಳಲ್ಲಿ ಆ ಅಸುರರು ಸಂಪೂರ್ಣ ವಿನಾಶ ಹೊಂದುವರು. ಹಾಗಿದ್ದರೂ ಶರೀರಕ್ಕೆ ಒಂದಿಷ್ಟು ತೊಂದರೆ ಆಗುವುದು; ಕೇವಲ ತೀವ್ರ ಪ್ರೇಮ ಹಾಗೂ ಪ್ರಾರ್ಥನೆಯ ಶಕ್ತಿಯಿಂದ ಅದಕ್ಕೆ ಚಿಕಿತ್ಸೆ ಮಾಡಬಹುದು.
ಈ ಭೌತಿಕ ಶರೀರವು ಚಿರಂತನವಾಗಿ ಬದುಕಿ ಉಳಿಯುವಂತೆ ಮಾಡಲು ಪ್ರಯತ್ನಿಸುವುದು ಭಾರತೀಯ ಜ್ಞಾನ ಪರಂಪರೆಗೆ ಪರಕೀಯವಾದುದು; ಅದು ಹೇಗೋ ನಮ್ಮಲ್ಲಿಯೂ ನುಸುಳಿ ಬಂದಿದ್ದು, ಕೆಲವು ಒಳ್ಳೆಯ ಯೋಗಿಗಳನ್ನು ಕೂಡ ದಾರಿ ತಪ್ಪಿಸಿದೆ. ಜೀವನ ಮತ್ತು ಸಮಸ್ತ ವಿಶ್ವವು, ಯಾವುದೊಂದು ವಿಶಿಷ್ಟ ರೂಪವು ಸ್ಥಿರವಾಗಿ ಸ್ಥಗಿತಗೊಳ್ಳಲು ಅವಕಾಶವಿರದ ಒಂದು ಕ್ರಿಯಾಶೀಲ ಸಮಗ್ರ ಸತ್ತೆಯಾಗಿದೆಯೆಂಬುದು, ಪ್ರಾಚೀನ ಭಾರತೀಯ ತತ್ತ್ವಜ್ಞರ ಮೂಲಭೂತ ನಿಶ್ಚಿತಾಭಿಪ್ರಾಯವಾಗಿತ್ತು ಮತ್ತು ಪ್ರಾಚೀನ ಋಷಿಗಳ ಅನುಭವಸಿದ್ಧ ಸಂಗತಿಯಾಗಿತ್ತು ಎಂಬುದನ್ನು ಭಾರತೀಯ ಜೀವನ ಪದ್ಧತಿಯಿಂದಲೇ ಪ್ರಮಾಣೀಕರಿಸಿಕೊಳ್ಳಬಹುದು. ತ್ಯಾಗ ಮನೋಭಾವ, ಪಾರ್ಥಿವವಷ್ಟೇ ಅಲ್ಲ ಸ್ವರ್ಗೀಯ ರೂಪಗಳ ಬಗ್ಗೆ ಆಂತರಿಕ ಅನಾಸಕ್ತಿ ಇವು ಭಾರತೀಯ ಸಂಸ್ಕೃತಿಯ ಪ್ರಧಾನ ಧೋರಣೆಗಳಾಗಿದ್ದವು. ನಮ್ಮ ಶಾಸ್ತ್ರ ಗ್ರಂಥಗಳಲ್ಲಿ ಅಷ್ಟೊಂದು ಉಚ್ಚ ಕಂಠದಿಂದ ಉದ್ಧತವಾದ ‘ಅಮರತ್ವವು ಆತ್ಮಸಾಕ್ಷಾತ್ಕಾರ ಹೊಂದುವ ಮೂಲಕ ಪುನಃ ಪ್ರಾಪ್ತಗೊಳಿಸಿಕೊಳ್ಳಬಹುದಾದ ಸಂಪೂರ್ಣ ಬಂಧನಮುಕ್ತವಾದ ಸ್ವಾತಂತ್ರ್ಯವೇ ಆಗಿದೆ; ಅದನ್ನು ದೈವೀ ಕೃಪೆಯ ಪ್ರಾಣಾಹುತಿಯ ಮೂಲಕ ಮಾತ್ರವೇ ಪಡೆಯಲು ಸಾಧ್ಯ
ಈ ಪ್ರಾಣಾಹುತಿಯು ಸಾಧಕನು ಅರಸಲೇ ಬೇಕಾದ ಮತ್ತೊಂದು ಮಹತ್ತ್ವಪೂರ್ಣ ವಿಷಯ ಎಂದು ಪ್ರಾಚೀನ ಋಷಿಗಳು ಒತ್ತಿ ಹೇಳಿದ್ದಾರೆ. ಮಹಾ ಯೋಗಿಗಳು ತಮ್ಮ ಏಕಾಂತದಲ್ಲಿ ಇದನ್ನು ಅನುಷ್ಠಾನದಲ್ಲಿ ತರುತ್ತಿದ್ದರೆಂದು ತೋರುತ್ತದೆ. ಸಹಜಮಾರ್ಗ ಪದ್ಧತಿಯಲ್ಲಿ ಮಾತ್ರವೇ ಇದನ್ನು (ಈ ಪ್ರಾಣಾಹುತಿಯ ತಂತ್ರವನ್ನು) ಬೆಳಕಿಗೆ ತರಲಾಗಿದ್ದು, ಪ್ರತಿಯೊಬ್ಬ ಪ್ರಾಮಾಣಿಕ ಸಾಧಕನಿಗೆ ಲಭ್ಯಗೊಳಿಸಲಾಗಿದೆ. ಈಗ, ಸಾವಿತ್ರಿಯ ಅಂತಶ್ವೇತನ ಅಥವಾ ನಚಿಕೇತ ಅಥವಾ ಮಾರ್ಕಂಡೇಯರ ಸ್ಥಿತಿಯನ್ನು ಸಾಕ್ಷಾತ್ಕರಿಸಿಕೊಳ್ಳಲು ಬಯಸುವ ಯಾರು ಬೇಕಾದರೂ, ಈ ಯೌಗಿಕ ಪ್ರಾಣಾಹುತಿಯ ಕಲೆಯಲ್ಲಿ ಪರಿಣತನಾದವನ ಸಾನ್ನಿಧ್ಯ ಪಡೆದು ತಮ್ಮ ಅಭೀಷ್ಟೆಯನ್ನು ಈಡೇರಿಸಿಕೊಳ್ಳಬಹುದು.
[ಸಹಜಮಾರ್ಗ ಪತ್ರಿಕೆ, ಜುಲೈ -1970)