“ಸಿದ್ಧಿ’ ಶಬ್ದದ ವಾಚ್ಯಾರ್ಥವು ಸಾಧನೆ, ಪೂರ್ಣಗೊಳ್ಳುವಿಕೆ, ಅಥವಾ ಪರಿಪೂರ್ಣತೆ ಆಗುವುದೆಂದು ನಮಗೆ ಹೇಳಲಾಗಿದೆ. ಅದರ ವಿಶಾಲಾರ್ಥದ ಬಗ್ಗೆ ಬರೆಯುವುದರಲ್ಲಿ ಅಷ್ಟೇನೂ ಅರ್ಥವಿಲ್ಲವೆಂದು ತೋರುತ್ತದೆ. ಏಕೆಂದರೆ ಅದು ದೈವೀಕರಣದಿಂದ ಹಿಡಿದು – ಕಿಸೆಗಳ್ಳತನದವರೆಗಿನ ಎಲ್ಲ ಕಲೆಗಳನ್ನು ಒಳಗೊಳ್ಳಬಹುದು. ಆದಕಾರಣ ನಮ್ಮ ಲೇಖನವನ್ನು, ಪತಂಜಲಿಯ ಪ್ರಸಿದ್ಧ ಸೂತ್ರಕ್ಕೆ ಸೀಮಿತಗೊಳಿಸುತ್ತೇವೆ – ಜನ್ಮೌಷಧಿ ಮಂತ್ರ ತಪಃ ಸಮಾಧಿಜಾಃ ಸಿದ್ಧಯಃ (IV-1. ಯೋ.ಸೂ.)
ಮೊಟ್ಟಮೊದಲಿಗೆ, ಸಿದ್ಧಿಗಳ ಬಗ್ಗೆ ಬರೆಯುವ ನಮ್ಮ ಉದ್ದೇಶವನ್ನು ಸ್ಪಷ್ಟಗೊಳಿಸೋಣ : ‘ಸಿದ್ಧಿಗಳು ದೈವೀ ಪ್ರಜ್ಞಾನದ ಆವಶ್ಯಕ ಸೂಚನೆಗಳು ಎಂದು ಸಾಮಾನ್ಯವಾಗಿ ನಂಬಲಾಗಿದೆ, ಹಾಗೂ ಸಿದ್ಧಿಗಳ ಬಗ್ಗೆ ಯೋಚಿಸುವಾಗ ಅಲೌಕಿಕ ಶಕ್ತಿಗಳು, ಗೂಢ ಘಟನೆಗಳು ಅಥವಾ ಅಸ್ವಾಭಾವಿಕ ಮಾನಸಿಕ ಸ್ಥಿತಿಗಳನ್ನು ಕೂಡ ದೃಷ್ಟಿಯಲ್ಲಿರಿಸಲಾಗಿದೆ.
ನಮಗೆ ಧರ್ಮಬೋಧೆ ಮಾಡುವವರೆಂದು ತಿಳಿಯಲಾದ, ಕಾವಿ ಬಣ್ಣದ ಬಟ್ಟೆಗಳನ್ನುಟ್ಟ ನಮ್ಮ ಎಲ್ಲ ಸ್ವಾಮೀಜಿಗಳು, ತಾವು ‘ಸಿದ್ಧರು’ ಅಥವಾ ಸಿದ್ಧಿಗಳನ್ನು ಪಡೆದವರು ಎಂದು ನಮ್ಮನ್ನು ನಂಬಿಸಲು ಬಹಳಷ್ಟು ಕಷ್ಟಪಡುವ ಸಂಗತಿಯು ‘ಸಿದ್ದಿ’ ಎಂಬ ಶಬ್ದವನ್ನು ಮತ್ತಷ್ಟು ಗಹನಗೊಳಿಸಿದೆ. ಅದರ ಪರಿಣಾಮವಾಗಿ ನಮ್ಮಲ್ಲಿ ಕೆಲವರು ನಂಬಿಕೆ ಕಳೆದುಕೊಳ್ಳುವೆವು, ಹಾಗೂ ಅವರನ್ನು ಹಲವು ಸಲ ಮೋಸಗಾರರು, ಹಾಗೂ ವಂಚಕರು ಎಂದು ಕರೆಯುವೆವು, ಅದು ಸರಿಯೇ ಆಗಿದೆ ಕೂಡ. ಅಲ್ಲದೆ, ಇನ್ನೂ ಕೆಲವರು ಸಿದ್ಧಿಗಳ ಗಹನ ಹಾಗೂ ಸಂದಿಗ್ಧ ಸ್ವರೂಪದಿಂದಾಗಿ, ಅವುಗಳು ಅಪರಿಹಾರ್ಯವೆಂದು ತಪ್ಪಾಗಿ ತಿಳಿಯುವ ಮೂಲಕ, ದೈವೀಜ್ಞಾನವನ್ನು ಪಡೆಯುವ ನಮ್ಮ ಸಾಮರ್ಥ್ಯದಲ್ಲಿ ನಂಬಿಕೆಯನ್ನೇ ಕಳೆದುಕೊಂಡು ಅವರ ಬಲೆಯಲ್ಲಿ ಬೀಳುವೆವು. ಆದುದರಿಂದ, ಸಿದ್ದಿಗಳ ಸ್ವರೂಪದ ಬಗ್ಗೆ ಹಾಗೂ ದೈವೀ ಜ್ಞಾನದ ದಾರಿಯಲ್ಲಿ ಅವುಗಳ ಸ್ಥಾನದ ಬಗ್ಗೆ ವಿಚಾರ ಮಾಡುವುದು ಅವಶ್ಯವಾಗಿದೆ”.
ಮೇಲೆ ಉಲ್ಲೇಖಿಸಲಾದ ಸೂತ್ರದ ಬಗ್ಗೆ ಅನೇಕ ವಿವರವಾದ ವಿಮರ್ಶೆಗಳನ್ನು ಬರೆಯಲಾಗಿದೆ. ನಮಗೆ ತಿಳಿದು ಬಂದಂತೆ ಅದರ ಅರ್ಥ ಇಂತಿದೆ : “ಸಿದ್ಧಿಗಳು ವಿಭಿನ್ನ ಪ್ರಕಾರದವುಗಳಿರುವುವು; ಅವು ಯಾವುವೆಂದರೆ : ಜನ್ಮತಃ ಬರುವಂತಹವು, ಔಷಧಗಳಿಂದ ಉಂಟಾಗುವಂತಹವು, ಮಂತ್ರಗಳ ಜಪದಿಂದ ಬರುವಂತಹವು, ಹಾಗೂ ತಪಸ್ಸಿನಿಂದ ಬರುವಂತಹವು. ಸೂತ್ರದಲ್ಲಿ ‘ಸಿದ್ಧಿಗಳು’ ಎಂಬುದರ ಅರ್ಥವು ‘ಅಸ್ವಾಭಾವಿಕ ಶಕ್ತಿಗಳು’ ಎಂದಾದರೆ, ಇಡೀ ಸೂತ್ರವು, ಅಥವಾ ಇಡೀ ಗ್ರಂಥವು ಕೂಡ ಅರ್ಥಹೀನವಾಗುವುದು. ಏಕೆಂದರೆ, ಸೂತ್ರಕಾರ ಪತಂಜಲಿ ಈ ಸೂತ್ರಗಳನ್ನು ಸಂಕಲನ ಮಾಡಿರುವುದೇ ಮನಸ್ಸಿನ ಸ್ವಭಾವ ಹಾಗೂ ಚಟುವಟಿಕೆಗಳನ್ನು ಪರಿಶೀಲಿಸಲು, ಮತ್ತು ಈಶ್ವರ (ಆತ್ಮ) ಸಾಕ್ಷಾತ್ಕಾರದ ಮೂಲಕ ಕೈವಲ್ಯವನ್ನು ಸಾಧಿಸುವ ವಿಧಾನಗಳನ್ನು ಶೋಧನೆ ಮಾಡುವುದು ಅಥವಾ “ಓಂ’ಕಾರದಿಂದ ಸೂಚಿತವಾದ, ಹಾಗೂ ಎಲ್ಲ ಬಂಧನಗಳಿಂದ ಮುಕ್ತನಾಗಿರುವ ‘ಪುರುಷ ವಿಶೇಷ’ನ ಸಾಕ್ಷಾತ್ಕಾರದ ಉದ್ದೇಶದಿಂದ ಅಥವಾ ಅವನಲ್ಲಿ ಶಾಶ್ವತವಾಗಿ ನೆಲೆಗೊಳ್ಳುವ (ಸಾರೂಪ್ಯ ಹೊಂದುವ) ಉದ್ದೇಶದಿಂದಾಗಿದೆ.ಸೂತ್ರದ ಅರ್ಥವನ್ನು ವಿವರಿಸುವಾಗ ಸೂತ್ರಕಾರನ ಈ ಉದ್ದೇಶವನ್ನು ದೃಷ್ಟಿಯಲ್ಲಿ ಇರಿಸಿಕೊಂಡರೆ, ಅದು ‘ಸ್ಥಿತಿ’ ಅಥವಾ “ಅವಸ್ಥೆ’ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಇದರ ಬೆಳಕಿನಲ್ಲಿ ಸೂತ್ರದ ಅರ್ಥವನ್ನು ಪುನಃಪರಿಶೀಲಿಸಿದರೆ ಆ ವಿಶಿಷ್ಟ ಮಾನಸಿಕ ಅವಸ್ಥೆಗಳನ್ನು ತಕ್ಷಣ ಅರಿಯಬಹುದು ಮತ್ತು ಅನುಭವಿಸಬಹುದು. ಈ ಸ್ಥಿತಿಗಳು ಒಬ್ಬನ ಶರೀರ ಸ್ವಭಾವದಂತೆ (ದೈಹಿಕ, ಮಾನಸಿಕ, ಹಾಗೂ ಪ್ರಾಣಿಕ) ಅವನಲ್ಲಿ ಜನ್ಮಜಾತವಾಗಿ ಬಂದಿರುವುವಾಗಿರಬಹುದು, ಇಲ್ಲವೆ ಕೆಲವು ಮಾದಕ ಪದಾರ್ಥಗಳ ಉಪಯೋಗದಿಂದ ಅವುಗಳನ್ನು ಅನುಭವಿಸಬಹುದು ಅಥವಾ ಗುರುವಿನ ಮೂಲಕ ಕಲಿತ ಪವಿತ್ರ ಮಂತ್ರಗಳ ಪುನರುಚ್ಚಾರದಿಂದ (ಜಪ) ಪಡೆಯಬಹುದು, ಅಥವಾ ಅಭ್ಯಾಸದಿಂದ ಅಥವಾ ತಪಸ್ಸಿನಿಂದ ಪಡೆಯಬಹುದು.
ಈ ಹಂತದಲ್ಲಿ ನಾವು ಕಾಳಜಿಯಿಂದ, ಸಂಭಾವ್ಯ ಅಪಾಯದ ಗರ್ತಗಳಿಂದ (pit-falls) ತಪ್ಪಿಸಿಕೊಳ್ಳಬೇಕು. ‘ಸಿದ್ಧಿ’ ಎಂಬುದು ಒಂದು ಆನಂದದಾಯಕ ಮಾನಸಿಕ ಸ್ಥಿತಿಯೆಂದು ನಮಗೆ ತಿಳಿದಿರುವಾಗ, ಬೇರೆ ಬೇರೆ ಕಾರಣಗಳಿಂದ ಉಂಟಾದ ಸ್ಥಿತಿಗಳ, ಹಾಗೂ ಬೇರೆ ಸಂಗತಿಗಳಿಂದುಂಟಾದ ಇಂತಹ ಸ್ಥಿತಿಗಳ ನಡುವೆ ಏನಾದರೂ ವ್ಯತ್ಯಾಸವಿದ್ದರೆ, ನಾವು ಅದನ್ನು ಕಾಳಜಿಪೂರ್ವಕವಾಗಿ ಪರೀಕ್ಷಿಸಬೇಕು. ಈ ಕ್ಷೇತ್ರವು ಒಬ್ಬನ ಸ್ವಂತದ ಅನುಭವಕ್ಕೆ ಸಂಬಂಧಿಸಿದ್ದಾದ್ದರಿಂದ ಮತ್ತು ಶಿಷ್ಟ ಶಿಕ್ಷಿತರ ಪರಿಭಾಷೆಯಲ್ಲಿ ‘ಆತ್ಮನಿಷ್ಠ’ ಅನುಭವ (ವ್ಯಕ್ತಿಯ ಸ್ವಂತದ ಅನುಭವ) ಎಂದು ಕರೆಯಲಾದ, ಬೇರೆಯವರ ಅನುಭವದ ವಿವರಣೆಗಳನ್ನು ಕೇಳುವ ಮೂಲಕ ಒಬ್ಬನು ಕಲ್ಪಿಸಿಕೊಂಡವುಗಳಿಗೆ ಸಂಬಂಧಿಸಿದುದಾದ ಕಾರಣ ನಾವು ಈ ಬಗ್ಗೆ ಇನ್ನೂ ಹೆಚ್ಚು ಕಾಳಜಿಯಿಂದಿರಬೇಕಾಗಿದೆ.
ಮೊಟ್ಟಮೊದಲು, ಅಫೀಮು ತಿಂದ, ಅಥವಾ ಮೆಸ್ಕಾಲಿನ್ ತಿಂದ ಅಥವಾ ‘ಆಧ್ಯಾತ್ಮಿಕ ಔಷಧಿಗಳೆಂದೆನ್ನಲಾದವುಗಳನ್ನು ಸೇವಿಸಿದವರು ಏನು ಹೇಳುತ್ತಾರೆಂಬುದನ್ನು ಕೇಳೋಣ. ಒಬ್ಬ ವ್ಯಕ್ತಿಯು ಹೆಚ್ಚು ಹೆಚ್ಚು ಭಾವಪ್ರದರ್ಶಕನಾಗಿದ್ದರೆ, (expressive) ಅದೇ ಪ್ರಮಾಣದಲ್ಲಿ ಅವನ ಪುಳಕಿತಗೊಳ್ಳುವಿಕೆ, ಹರ್ಷೋನ್ಮಾದ, ಅವರ್ಣನೀಯವಾದ ಅಥವಾ ಮಾತಿಗೆಟುಕದ ಆನಂದ, ಅಲೌಕಿಕ ಧ್ವನಿಗಳು, ಅಲೌಕಿಕ ದೃಶ್ಯಗಳು ಮುಂತಾದವುಗಳೆಲ್ಲದರ ಅವನ ವರ್ಣನೆಯು ಹೆಚ್ಚು ಸ್ಪುಟವೂ ಹಾಗೂ ನಾಟಕೀಯವೂ ಆಗಿರುತ್ತದೆ. ಇಂತಹ ವ್ಯಕ್ತಿಗಳನ್ನು ಮತ್ತು ಅವರ ಅನುಭವಗಳನ್ನು ಅವಲೋಕಿಸಿದ ಮತ್ತು ವಿಶ್ಲೇಷಿಸಿದರೆಂದು ಹೇಳಿಕೊಳ್ಳುವ ವಿಜ್ಞಾನಿಗಳು ಹೇಳುವುದೇನೆಂಬುದನ್ನು ಈಗ ಕೇಳೋಣ. ಇಲ್ಲಿ ಕೂಡ ಹೆಚ್ಚು ನಾಸ್ತಿಕ ಹಾಗೂ ಭೌತವಾದಿ (ಅಥವಾ ‘ಮಸ್ತಿಷ್ಕವನ್ನವಲಂಬಿಸಿದ ಎಂದು ಸಂಕೀರ್ಣ ಭಾಷೆಯಲ್ಲಿ ಹೇಳಬಹುದಾದ) ವಿಜ್ಞಾನಿಯಾಗಿದ್ದರೆ, “ಅಮಲಿನ ಮಿತ್ರರ’ ಅನುಭವಗಳನ್ನು ಒಬ್ಬ ಅನುಭಾವಿಯ ಅಥವಾ ಸಂತನ ಅನುಭಾವಗಳಿಗೆ ಸಮೀಕರಿಸುವುದರಲ್ಲಿ ಹೆಚ್ಚು ಆಗ್ರಹ ಮತ್ತು ಆವೇಶಗಳುಳ್ಳವನಾಗುತ್ತಾನೆ. ಆದರೆ ಸುರಕ್ಷಿತತೆಯ ಪಾರ್ಶ್ವದಲ್ಲಿ ನಾವಿರುವಂತಾಗಲು, ನೂರಾರು ವರ್ಷ ಹಳೆಯದಾದ ಸ್ಕಾಚ್ವಿಸ್ಕಿಯ ಒಂದು ಗುಟುಕಿಗಾಗಿ ಅಥವಾ ಅತ್ಯುತ್ತಮ ಜರ್ಮನ್ ಬೀರಿನ ಒಂದು ಗ್ಲಾಸಿಗಾಗಿ, ನಮ್ಮ ಮಿತ್ರರು ಎಷ್ಟೇ ಆಕರ್ಷಕ ರೀತಿಯಲ್ಲಿ ಪುಸಲಾಯಿಸಿದರೂ, ಅದು (ಅದರಿಂದಾಗುವ ಅನುಭವ) ಹೇಗಿರುತ್ತದೆಯೆಂದು ತಿಳಿಯಲೋಸುಗ, ನಮ್ಮ ಮೇಲೆ ಡ್ರಗ್ಸ್ಗಳ ಪರಿಣಾಮಗಳನ್ನು ಅನುಭವಿಸಿ ನೋಡುವುದು ಬೇಡ.
ತದನಂತರ ಮನೋರೋಗ ವಿಶ್ಲೇಷಣೆಯ ಸಾಹಿತ್ಯವು “ಅಸಹಜ ಮಗು’ ಅಥವಾ ‘ಯುವಜನರ ಮಾನಸಿಕತೆ’ಯ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ. ಅಂದಹಾಗೆ, ಮನೋ-ವಿಶ್ಲೇಷಣೆಯ ಸಾಹಿತ್ಯವು ಎಷ್ಟು ಶೀಘ್ರವಾಗಿ ಮತ್ತು ವಿಶಾಲವಾಗಿ ಹರಡಿಕೊಂಡಿದೆಯೆಂದರೆ, ಅತ್ಯಂತ ಶುದ್ಧ ಮಡಿವಂತನಿಗೆ ಕೂಡ, ಅತ್ಯಂತ ಬೆಚ್ಚಿ ಬೀಳಿಸುವ ಲೈಂಗಿಕ ವೈಪರೀತ್ಯಗಳ ಪ್ರಸ್ತಾಪ ಕೂಡ ಇಂದಿನ ದಿನಗಳಲ್ಲಿ, ಯಾವುದೇ ಪ್ರಭಾವ ಉಂಟುಮಾಡುವುದಿಲ್ಲ. ಈಗ ನಮ್ಮ ವಿಷಯಕ್ಕೆ ಮರಳೋಣ. ನಾವು, ಸುವಾಸನೆಯುಳ್ಳ ಧ್ವನಿಗಳನ್ನು ನೋಡುವ, ಕಣ್ಣುಕುಕ್ಕುವ ಸಂಗೀತವನ್ನು ಮೂಸಿ ನೋಡುವ, ಸವಿಯಾದ ಬಣ್ಣಗಳನ್ನು ಆಲಿಸುವ, ಮುಂತಾದ ಪ್ರಸಂಗಗಳ ಬಗ್ಗೆ ಕೇಳಿದ್ದೇವೆ. ಅನೇಕ ಸಲ (ಪದೇ ಪದೇ) ಭಾವಪರವಶತೆಯ ಉನ್ಮಾದದ ಆಘಾತವನ್ನು ಅನುಭವಿಸಿದ ಯುವ ವ್ಯಕ್ತಿಗಳ ಬಗ್ಗೆ, ಭವಿಷ್ಯತ್ತನ್ನು ಕಂಡ ಅಥವಾ ನಮ್ಮ ಗತಕಾಲದ ಅಥವಾ ವರ್ತಮಾನಕಾಲದ ವಿಚಾರಗಳನ್ನು ಓದುವ, ಮತ್ತು ಹಾಗಿದ್ದರೂ ಅನಂತರ ದಗಾಕೋರರಾದವರ ಬಗ್ಗೆ ಕೂಡ ಕೇಳಿದ್ದೇವೆ.
ನಮ್ಮ ದೇಶದಲ್ಲಿ ಒಂದು ಸಂಪ್ರದಾಯಸ್ಥ ಕುಟುಂಬದಲ್ಲಿ, ಇಬ್ಬರಲ್ಲಿ ಒಬ್ಬನು ಜನ್ಮಸಿದ್ದನಂತೆ ಕಾಣುತ್ತಾನೆ. ಅವನು ಒಂದಿಲ್ಲೊಂದು ದೇವರು ಅಥವಾ ದೇವತೆಯೊಡನೆ ಸಂಭಾಷಣೆ ಮಾಡುತ್ತಾನೆ, ಅಥವಾ ಕೆಲವು ಸಲ ಆ ದೇವತೆಯಿಂದ ಆವಿಷ್ಟನಾಗುತ್ತಾನೆ. ಇಂತಹ ಎಲ್ಲ ಮಾನಸಿಕ ಮೂಲವು ವ್ಯಕ್ತಿಯ ಸಂರಚನೆಯಿಂದಲೇ ಆಗಿದೆಯೆಂದು ಹೇಳಬಹುದು; ನೀವು ಒಬ್ಬ ಮಸ್ತಿಷ್ಕಾಧಾರಿತ ವಿಜ್ಞಾನಿಯೆಂದು ನಿಮ್ಮನ್ನು ಭಾವಿಸಿಕೊಳ್ಳುವಿರಾದರೆ, ಅದನ್ನು ಒಂದು ದೋಷವೆಂದು ಕರೆಯಿರಿ ಹಾಗಿದ್ದಾಗ್ಯೂ, ಕೆಳಮಟ್ಟದ ಮತ್ತು ಸಾಮಾನ್ಯ ಜನರು ಅಂತಹ ಸ್ಥಿತಿಗಳಿಂದ ಚಕಿತಗೊಳಿಸಲ್ಪಡುತ್ತಾರೆ.
ಕೆಲವು ಇಷ್ಟ (ಆಯ್ದ ಶಬ್ದಗಳನ್ನು ಸಾಕಷ್ಟು ದೀರ್ಘಕಾಲ ಪುನರುಚ್ಚರಿಸುತ್ತ (ಜಪಿಸುತ್ತ) ಹೋದರೆ, ಆ ಅಭ್ಯಾಸವು ಒಂದು ವಿಶಿಷ್ಟ ಮಾನಸಿಕ ಸ್ಥಿತಿಯನ್ನು ಉಂಟುಮಾಡುವುದು. ಕೆಲವು ಜನರಿಗೆ ಈ ಸ್ಥಿತಿಯು ಬಹಳ ಆನಂದದಾಯಕವೆನಿಸುವುದು. ಆ ಶಬ್ದಗಳು ಒಂದು ವಸ್ತುವಿನ (ಧ್ಯೇಯದ) ಬಗೆಗಿನ ಪ್ರೇಮದಿಂದ ಕೂಡಿರುವಾಗ, ಇಂತಹ ಸ್ಥಿತಿಗಳು ವಿಶೇಷವಾಗಿ ಬಹಳ ಸಮಾಧಾನಕರ ಹಾಗೂ ಸಂತೋಷದಾಯಕವಾಗಿರುವುದು. ವಿಶೇಷ ಸ್ವರಮೇಳಗಳುಳ್ಳ ಕೆಲವು ಶಬ್ದಗಳಿದ್ದು, ಅವು ಅತಿಶಯ ಭಯ, ಮೂರ್ಛೆ, ಪರವಶತೆ, ಸಮ್ಮೋಹನಸ್ಥಿತಿ ಅಥವಾ ಭಾವೋನ್ಮಾದ ಮುಂತಾದ ಸ್ಥಿತಿಗಳನ್ನು ಹುಟ್ಟಿಸುವುದಕ್ಕೆ ಕಾರಣಗಳಾಗುತ್ತವೆ. ಇಲ್ಲಿ ಕೂಡ, ಈ ಪರಿಣಾಮವು ಶಬ್ದಗಳ ಪುನರುಚ್ಚಾರದಿಂದ ನಿರ್ಮಿತವಾದ ಧ್ವನಿಯ ಲಯಬದ್ಧ ಕಂಪನಗಳಿಂದ ಉಂಟಾಗಿದ್ದು, ಸಂಕಲ್ಪ ಶಕ್ತಿಯನ್ನು ಪ್ರಯೋಗಿಸಿದ್ದಾದರೆ ಮೆದುಳು ಅಥವಾ ಮನಸ್ಸಿನ ಮೇಲೆ ಪ್ರಭಾವ ಬೀರುವುದು.
ಈಗ, ನಾವು ಸಾಧಿಸಿದ ಸಿದ್ಧಿಯನ್ನು ತಪಸ್ಸು ಅಥವಾ ಕಠಿಣ ಅಭ್ಯಾಸಗಳ ಮೂಲಕ ಪರೀಕ್ಷಿಸಬಹುದು. ದೇವರ ಬಗ್ಗೆ ಪ್ರೇಮ ಅಥವಾ ಭಕ್ತಿ ಇಲ್ಲದೆ, ಕೇವಲ ಕೆಲವು ಅಲೌಕಿಕ (ಅತಿಪ್ರಾಕೃತಿಕ) ಶಕ್ತಿಗಳನ್ನು ಪಡೆಯುವ ಉದ್ದೇಶದಿಂದ ತಪಸ್ಸು ಅಥವಾ ಉಗ್ರ ಸಾಧನೆ ಮಾಡಿದರೆ, ಅದು ನಿಃಸಂದೇಹವಾಗಿ, ಯಾವುದಾದರೊಂದು ಸಿದ್ಧಿಯನ್ನು ನಮ್ಮಲ್ಲಿ ಹುಟ್ಟಿಸಬಹುದು. ಹಠಯೋಗ, ಅಥವಾ ನಮ್ಮ ಸ್ವಾಮೀಜಿಗಳು ಹಾಡಿಹೊಗಳುವ ‘ಕುಂಡಲಿನಿ ಯೋಗಗಳು ಅದರ ದೃಷ್ಟಾಂತಗಳಾಗಿವೆ. ನಮ್ಮ ಮಹಾತ್ಮರು ಭಾಂಗ್ ಅಥವಾ ಗಾಂಜಾಗಳ ಬಗ್ಗೆ ಮಾತನಾಡದಿರುವ ಸಮಯದಲ್ಲಿ ಕುಂಡಲಿನಿಯ ಬಗ್ಗೆ ಪ್ರಸ್ತಾಪಿಸುವರು; ಅಥವಾ ಇನ್ನೂ ಮುಂದುವರಿದ ಸ್ವಾಮಿಗಳು, ‘ಹವನ’ದ ಹೆಸರಿನಲ್ಲಿ ಟನ್ಗಟ್ಟಲೆ ತುಪ್ಪ, ಹಾಗೂ ಧಾನ್ಯಗಳನ್ನು ದಹಿಸುವುದನ್ನು ಪೂರ್ತಿಗೊಳಿಸಿದಾಗ, ಕುಂಡಲಿನಿ ಜಾಗೃತಿಯನ್ನು ಶಿಫಾರಸು ಮಾಡುವರು. ಅವರು ಆರಿಸಿಕೊಳ್ಳುವ ವಿಧಾನಗಳು ಯಾವವು? ತೀವ್ರ ಕಾಲ್ಪನಿಕತೆಗಳು ಅಥವಾ ಭ್ರಮೆಗಳನ್ನುಂಟು ಮಾಡುವ ಭಯಾನಕ ಶಾರೀರಿಕ ಹಿಂಸೆ ಅಥವಾ ಮೆದುಳನ್ನು ಮರಗಟ್ಟಿಸುವುದು. ದೈವೀಜ್ಞಾನ ಪ್ರಾಪ್ತಿಗಾಗಿ ನಮಗೆ ಇವು ನಿಜವಾದ ತಪಸ್ಸಿದ್ಧಿಗಳೆಂದು ಶಿಫಾರಸು ಮಾಡಲಾಗುತ್ತದೆ.
ಸಹಜಮಾರ್ಗ ಪದ್ಧತಿಯಡಿಯಲ್ಲಿ ರಾಜಯೋಗದ ಅಭ್ಯಾಸದ ಕಾಲದಲ್ಲಿ ಬರುವ ಸಿದ್ಧಿಗಳು ಸಹಜವಾಗಿರುವವು. ಇಂತಹ ಅವಸ್ಥೆಗಳು ಅಥವಾ ಸ್ಥಿತಿಗಳು ಎಷ್ಟು ಸ್ವಾಭಾವಿಕ ಮತ್ತು ಲಘುವಾಗಿರುವುವೆಂದರೆ, ಅಭ್ಯಾಸಿಗೆ ಅದರ ಅರಿವೇ ಇರುವುದಿಲ್ಲ. ಆದರೂ ಒಬ್ಬನು ಉತ್ಸುಕನಿದ್ದು ಎಚ್ಚರದಿಂದ ಅವಲೋಕಿಸಿದರೆ, ವಿವಿಧ ಸ್ಥಿತಿಗಳು ಒಂದಾದ ನಂತರ ಮತ್ತೊಂದು ಅಷ್ಟು ಸ್ವಾಭಾವಿಕವಾಗಿ ಹಾಗೂ ಸಂಪೂರ್ಣವಾಗಿ ವಿಕಸಿತವಾಗುವುವೆಂಬುದನ್ನು ಕ೦ಡು ಅವನಿಗೆ ಆಶ್ಚರ್ಯಾಘಾತವಾಗುವುದು. ‘ಏಕ’ವು ಸರ್ವತ್ರವೂ ವ್ಯಾಪಿಸಿರುವುದು, ಏಕವು ಅನೇಕವಾಗಿರುವುದು, ಒಂದೇ ಮೂಲದ್ದಾಗಿರುವುದು, ಅಸ್ತಿತ್ವದಲ್ಲಿರುವ ಏಕಮೇವವಾಗಿರುವುದು, ಪ್ರಕಟಗೊಂಡಿರುವ “ಏಕ’ವಾಗಿರುವುದು ಈ ಎಲ್ಲವುಗಳ ಅರಿವೇ ದೈವೀಜ್ಞಾನ ಪ್ರಾಪ್ತಿಗಾಗಿ ಒಬ್ಬನು ಗುರಿಯಾಗಿಟ್ಟುಕೊಳ್ಳಬೇಕಾದ ಸಿದ್ಧಿಗಳಾಗಿವೆ. ಇವು ಸರ್ವೇಸಾಧಾರಣವಾಗಿ ಬಹುತೇಕ ಎಲ್ಲ ಸಂತರು ಮತ್ತು ಋಷಿಗಳು ಪ್ರಮಾಣೀಕರಿಸಿ ನೋಡಿದ ಹಾಗೂ ಅದನ್ನು ಬಯಸುವ ಪ್ರತಿಯೊಬ್ಬನೂ ಪ್ರಮಾಣೀಕರಿಸಿಕೊಳ್ಳಬಹುದಾದ ಸತ್ಯಗಳಾಗಿವೆ. ಯಾವುದರ ಬಗ್ಗೆ ಬಹಳಷ್ಟು ಮಾತನಾಡಲಾಗುತ್ತಿದೆಯೋ ಆ ಆನಂದ ಎಂದು ಕರೆಯಲಾದುದೂ ಕೂಡ ಹೆಚ್ಚು ಹೆಚ್ಚು ಸೂಕ್ಷ್ಮವಾಗುತ್ತ, ಅಥವಾ ಹೆಚ್ಚು ಹೆಚ್ಚು ಪರಿಷ್ಕೃತವಾಗುತ್ತ ಮತ್ತು ಸಾಂದ್ರತೆಯಿಂದ ಮುಕ್ತವಾಗುತ್ತ(ವಿರಲತರದ್ದಾಗಿ), ಅಂತಿಮವಾಗಿ ಶಾಶ್ವತವಾಗಿ ಹಿಂದಕ್ಕೆ ಉಳಿಯುತ್ತದೆ. ಇವು ಸಮಾಧಿ ಅಥವಾ ಸಮಚಿತ್ತತೆಯಿಂದ ಬರುವವು.
ಗಾಳಿಯಲ್ಲಿ ತೇಲಾಡುವುದು ಮುಂತಾದ ಸಾಂಪ್ರದಾಯಿಕ ಅಣಿಮಾದಿ ಅಷ್ಟಸಿದ್ಧಿಗಳು ಎಂದು ಕರೆಯಲ್ಪಡುವುದರ ಬಗ್ಗೆ ನಮ್ಮನ್ನು ಕೇಳುವಷ್ಟು ಮುಗ್ಧರಾಗಬೇಡಿರಿ. ಒಬ್ಬನ ಸ್ವಪ್ನಸ್ಥಿತಿಯ ಅನುಭವಗಳೇ * ಸೂಚನೆ ಕೊಡುವುವೆಂಬ ಮಟ್ಟಿಗೆ ಅವು ಸತ್ಯವಾಗಿವೆ. ಆದರೆ, ಸಿದ್ಧರು, ಮಹಾತ್ಮರು ಎಂದು ಕರೆಯಲ್ಪಡುವವರು ಪ್ರದರ್ಶಿಸುವ ಸಾಹಸಗಳು ಅವು ಎಂದು ನೀವು ಅರ್ಥ ಮಾಡಿದರೆ ಸರಿ. ಪ್ರಾಂಜಲವಾಗಿ ಹೇಳುವುದಾದರೆ ಅಂತಹ ಒಬ್ಬನನ್ನು ನಾವು ಇನ್ನೂ ಕಂಡಿಲ್ಲ, ಮತ್ತು ಅಂತಹ ಒಬ್ಬನನ್ನು ನಾವು ಕಾಣುವುದು ನಮಗೆ ಎಷ್ಟರಮಟ್ಟಿಗೂ ಸಾಧ್ಯವಿಲ್ಲದೆಯೂ ಇರಬಹುದು. ಮಹಾತ್ಮರ ಪ್ರಮಾಣಗ್ರಂಥಗಳ ಮೇಲಣ, ಅಧಿಕಾರಯುತ ಭಾಷ್ಯಗಳನ್ನು ದಯವಿಟ್ಟು ನಮ್ಮ ಮೇಲೆ ಹೇರಬೇಡಿರಿ. ಈ ಪಾರಂಗತರೆನ್ನುವವರು ಎಷ್ಟರಮಟ್ಟಿಗಾದರೂ ಏನಾದರೂ ಅನುಭವ ಹೊಂದಿದ್ದರೇ, ಎಂದು ನಮಗೆ ಆಶ್ಚರ್ಯವಾಗುತ್ತದೆ; ಅಥವಾ ಎಷ್ಟರಮಟ್ಟಿಗೆ ಅವರು ಅಧಿಕಾರಶಾಹಿ’ ಧೋರಣೆಯಿಂದ ಮುಕ್ತರಾಗಿದ್ದರೇ ಎಂಬುದೂ ಆಶ್ಚರ್ಯ ತರುತ್ತದೆ. ಈ ಎಲ್ಲವೂ ಕಾಲ್ಪನಿಕ ಕಥೆಗಳೆಂದು, ಅಸಾಧ್ಯವೆಂದು ನಾವು ಹೇಳುತ್ತಿರುವೆವೆಂದು ನೀವು ಯೋಚಿಸುತ್ತೀರಾ?ಸರಿ!ಯಾರ ಮೇಲೂ ನಮ್ಮ ಅಭಿಪ್ರಾಯವನ್ನು ನಾವು ಹೇರುವುದಿಲ್ಲ. ನಿಮಗೆ ಸರಿಕಂಡಂತೆ ನಂಬಲು ನೀವು ಸ್ವತಂತ್ರರು. ಆದರೆ, ನಿಮ್ಮ ಸ್ವಂತಕ್ಕೋಸ್ಕರವೇ, ನೀವು ಕುರುಡು ನಂಬಿಕೆಯವರಾಗಬೇಡಿರಿ.
ಪವಾಡಗಳೆಂದರೆ ಈಶ್ವರನ ಮಾರ್ಗದಲ್ಲಿ ದಾರಿ ತಪ್ಪುವುದು. ಪವಾಡ ಮಾಡುವವರು ಈಶ್ವರನನ್ನು ಮುಟ್ಟಲಾರರು. ಈಶ್ವರನನ್ನು ಪಡೆಯುವುದರಲ್ಲಿ ಎಲ್ಲ ಪವಾಡಗಳೂ ಇರುತ್ತವೆ. ಅವು ಪ್ರಸಂಗಾನುಸಾರ ತಾವಾಗಿಯೇ ಪ್ರಕಟವಾಗುವವು.
– ಶ್ರೀ ಬಾಬೂಜಿ