ಅಧಿಕಾರಶಾಹಿ ಪ್ರವೃತ್ತಿಗಳ ವಿರೋಧವನ್ನು ತೋರ್ಪಡಿಸುವುದು ಇಂದಿನ ದಿನಗಳಲ್ಲಿ ಒಂದು ರೂಢಿಗತ ರೀತಿಯಾಗಿದೆ. ಕೆಲವು ಕೂಗುಗಳು ಅವರ ಗಾಢನಂಬಿಕೆಯ ನಿಜವಾದ ಉದ್ರಿಕ್ತ ಆಸ್ಫೋಟನವಾಗಿದ್ದರೆ, ಅವುಗಳಲ್ಲಿ ಬಹಳಷ್ಟು ಹತಾಶೆಯ ನೋವಿನದಾಗಿದೆ. ಮೊದಲನೆಯ ವರ್ಗದವರು ಸ್ವಯಂ ವಿರೋಧಾಭಾಸವುಳ್ಳವರಾದರೆ, ಎರಡನೆಯ ವರ್ಗದವರು ಆತ್ಮವಂಚಕರಾಗಿದ್ದಾರೆ. ನಿಷ್ಪಕ್ಷಪಾತದಿಂದಲ್ಲದಿದ್ದರೂ, ನಾವು ಈ ಎರಡೂ ದೃಷ್ಟಿಕೋನಗಳನ್ನು ಸಹಾನುಭೂತಿಯಿಂದ ಪರಿಶೀಲಿಸೋಣ.
ದೇವರಲ್ಲಿ, ಅಥವಾ ಸತ್ಯದಲ್ಲಿ, ಅಥವಾ ಆ ರೀತಿಯ ಏನಾದರೊಂದರಲ್ಲಿ, ಇಡುವ ನಂಬಿಕೆಯು, ಅಥವಾ ಹಾಗೆನ್ನುವುದಾದರೆ, ಯಾವುದೇ ತರಹದ ನಂಬಿಕೆಯು ಒಂದು ಭ್ರಮೆಯಾಗಿದೆ; ಅಥವಾ ಹೆಚ್ಚೆಂದರೆ, ಡಂಭಾಚಾರ ವೃತ್ತಿಗೆ ಒಂದು ಕವಚವಾಗಿದೆ. ಗುರುವಿನಲ್ಲಿ ಅಥವಾ ಮಾರ್ಗದರ್ಶಕನಲ್ಲಿ ಅಥವಾ ಒಬ್ಬ ಆಧ್ಯಾತ್ಮಿಕ ಇಲ್ಲವೆ ರಾಜಕೀಯ ಧುರೀಣನಲ್ಲಿಡುವ ನಂಬಿಕೆಯು ಸೋಮಾರಿತನ ಹಾಗೂ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳುವ ಪ್ರವೃತ್ತಿಯ ಕಾರಣದಿಂದ ಉಂಟಾಗಿರುತ್ತದೆ; ಇದರ ಪರಿಣಾಮವು ಆರ್ಥಿಕ, ಸಾಮಾಜಿಕ, ರಾಜಕೀಯ, ಮಾನಸಿಕ ಅಥವಾ ಅಂತಹದೊಂದು ಇರುವುದಾದರೆ, ಆಧ್ಯಾತ್ಮಿಕ ಶೋಷಣೆಗಾಗಿ, ಶೋಷಕರ ಮತ್ತು ಶೋಷಿತರ ವರ್ಗಗಳನ್ನು ಹುಟ್ಟುಹಾಕುತ್ತದೆ. ಆದರ್ಶವನ್ನು ಸಾಧಿಸುವುದಕ್ಕೆ ಇರುವ ಒಂದು ಮಾರ್ಗ ಅಥವಾ ಪದ್ಧತಿಯ ಕಲ್ಪನೆಯು ಯಾವಾಗಲೂ ದೋಷಯುಕ್ತವಾಗಿರುವುದು ಹಾಗೂ ಚಿಂತನೆ ಮಾಡುವವರ ವಿಚಾರಪ್ರಣಾಲಿಗಳು ಮತ್ತು ಪ್ರವೃತ್ತಿಗಳಿಂದ ಪರಿಮಿತಿಗೊಳಪಟ್ಟಿರುತ್ತದೆ ಹಾಗೂ ಯಾವಾಗಲೂ ಮಾನಸಿಕ ಆತ್ಮನಿಂದನೆಯ ಕಾರಣದಿಂದ ಅಥವಾ ವಾಸ್ತವವಾಂಶಗಳನ್ನು ಎದುರಿಸದೆ ಓಡಿಹೋಗುವ ಪ್ರವೃತ್ತಿಯ ಕಾರಣದಿಂದಾಗಿರುತ್ತದೆ.
ಈ ಎಲ್ಲ ಅಸ್ತವ್ಯಸ್ತತೆಯಿಂದ ಹೊರಬರುವ ದಾರಿ ಎಂದರೆ ತನ್ನ ಆತ್ಮದ ಮೇಲೆಯೇ ಧ್ಯಾನ ಮಾಡುವುದು; ಈ ಆತ್ಮವೇ ಚಿಂತಕನೂ ಆಗಿದೆ ಮತ್ತು ಚಿಂತನದ ವಸ್ತುವಿಗಿಂತ ಭಿನ್ನವಾಗಿಲ್ಲ. ಇದರ ಫಲಿತವು ಸಮಸ್ತ ಅಸ್ತಿತ್ವದೊಂದಿಗೆ ತನ್ನ ಏಕತೆಯ ಸಾಕ್ಷಾತ್ಕಾರ. ಅದರ ಪರಿಣಾಮವಾಗಿ ಕ್ಷಣಕ್ಷಣಕ್ಕೂ ಗತಿಶೀಲನಾಗಿ ಜೀವಿಸುತ್ತ, ಸಂಪೂರ್ಣ ಸ್ವಾತಂತ್ರ್ಯ ಅಥವಾ ಮುಕ್ತಿ ಹೊಂದುವುದಾಗಿದೆ. ಆಧುನಿಕ ಸಮಕಾಲೀನ ಮಹಾಚಿಂತಕರು ಇದನ್ನೇ ಸಂಪೂರ್ಣ ನಂಬಿಕೆ ಮತ್ತು ಪೂರ್ಣ ಅಧಿಕಾರದಿಂದ ನಮ್ಮೆದುರು ಪ್ರಸ್ತುತಪಡಿಸುತ್ತಿದ್ದಾರೆ. ಹಾಗೂ ತಮ್ಮ ವಿಚಾರಗಳನ್ನು ಒಪ್ಪಿಕೊಳ್ಳುವ ಸ್ವಾತಂತ್ರ್ಯವನ್ನು ನಮಗೇ ಬಿಟ್ಟಿದ್ದಾರೆ.
ದೇವರನ್ನು ತಾವು ಕಂಡಿದ್ದೇವೆ ಎಂದು ಹೇಳಿಕೊಳ್ಳುವ ಅನೇಕರನ್ನು ನಾವು ಕಂಡಿದ್ದೇವೆ; ಆದರೆ, ಅವರಾರೂ ಪೂರ್ಣತೃಪ್ತರೂ, ಸಂತುಷ್ಟರೂ ಆದಂತೆ ಕಂಡುಬರುವುದಿಲ್ಲ. ನಮಗೆ ಕಂಡುಬಂದ ಪ್ರತಿಯೊಬ್ಬನೂ ತನ್ನ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸುವ ಮತ್ತು ತತ್ಪಲವಾಗಿ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುವುದಕ್ಕಾಗಿ ತನ್ನ ಗುಂಪಿಗೆ ಮತಾಂತರಗೊಳಿಸಲು ಹೆಚ್ಚಿನ ಉತ್ಸಾಹ ತೋರಿದನು. ನಮ್ಮ ಜೇಬುಗಳು ಬರಿದಾದ ತತ್ಕ್ಷಣವೇ ಇಂಥವರು ನಮ್ಮಿಂದ ದೂರವಾದರು. ನಾವು ಅನೇಕ ಶಾಸ್ತ್ರಗ್ರಂಥಗಳನ್ನು ಮತ್ತು ಪ್ರಭುತ್ವಪೂರ್ಣ ವ್ಯಾಖ್ಯಾನಗಳನ್ನೂ ಓದಿದ್ದೇವೆ. ಆದರೆ ಅವೆಲ್ಲವನ್ನು ಓದಿದ ನಂತರವೂ ನಾವು ಎಲ್ಲಿಂದ ಪ್ರಾರಂಭ ಮಾಡಿದ್ದೇವೋ, ನಿಶ್ಚಿತವಾಗಿ ಅಲ್ಲಿಯೇ ಇರುವುದನ್ನು ಕಂಡುಕೊಂಡೆವು. ಕೆಲವು ಹೊಂದಾಣಿಕೆಯ ಮನೋಧರ್ಮವುಳ್ಳ ಸಂತರು, ಎಲ್ಲ ಮಾರ್ಗಗಳೂ ರೋಮ್ ನಗರಕ್ಕೆ ನಮ್ಮನ್ನು ಕರೆದೊಯ್ಯುವವು ಎಂದು ನಮಗೆ ಉಪದೇಶಿಸಿದ್ದರು. ಆದರೆ, ನಮ್ಮ ದುರದೃಷ್ಟಕ್ಕೆ, ರೋಮ್ ಎಂಬುದೇ ಒಂದು ಮಿಥೈಯಾಗಿತ್ತು; ಮತ್ತು ತಥಾಕಥಿತ ಮಾರ್ಗಗಳೆಲ್ಲವೂ ಕುರುಡುದಾರಿಗಳಾಗಿದ್ದು, ಪ್ರತಿಯೊಂದೂ ತನ್ನದೇ ಉಸಿರುಗಟ್ಟಿಸುವ, ದುರ್ಗಂಧಮಯ ಅಂಧಕಾರದ ವಲಯಕ್ಕೆ ಕರೆದೊಯ್ಯುತ್ತದೆ ಎಂಬುದು ನಮಗೆ ಕಂಡುಬಂದಿತು. ದೇವರನ್ನು ಕಾಣಲೆಂದು ನಾವು ಧರ್ಮವನ್ನು ಬದಲಾಯಿಸಿದೆವು, ಆದರೆ ಕಪಟಿ ಪುರೋಹಿತರಿಗೆ ಬಲಿಯಾದೆವು. ನಮ್ಮ ಅದೃಷ್ಟವನ್ನು ಬದಲಾಯಿಸಬೇಕೆಂದು ನಾವು ಒಂದು ಭರವಸೆಯನ್ನೀಯುವ ಪಂಥವನ್ನು ಆಯ್ಕೆ ಮಾಡಿಕೊಂಡು ಅದರ ಮುಂದಾಳುಗಳನ್ನು ಅನುಸರಿಸಿದೆವು; ಆದರೆ ನಾವು ಮೊದಲು ಪ್ರಾರಂಭದಲ್ಲಿ ಎಲ್ಲಿದ್ದೆವೋ ಅಲ್ಲಿಯೇ ಉಳಿದೆವು. ಪ್ರತಿಯೊಂದೂ, ಪ್ರತಿಯೊಬ್ಬನೂ ಮೋಸಗಾರ ಎಂಬುದನ್ನು ನಾವು ಈಗ ಅರಿತಿದ್ದೇವೆ. ಇದೇ ನಮ್ಮ ಅದೃಷ್ಟವಾಗಿದೆಯೆಂದು ಕಂಡುಬರುವುದಕ್ಕೆ ನಾವು ದುಃಖದಲ್ಲಿ ನರಳಬೇಕಷ್ಟೆ! ದೇವರೂ ಇಲ್ಲ, ಗುರುವೂ ಇಲ್ಲ, ಹತಾಶೆಗೊಂಡವರ ಮುಸುಕು (ಮುಖವಾಡ) ಇದು; ಅವರೆಲ್ಲ ಎಲ್ಲವನ್ನೂ ತಿರಸ್ಕರಿಸುವ ‘ಸಿನಿಕರಾಗುವ ಅಂಚಿನಲ್ಲಿದ್ದಾರೆ. ಅವರು ಹೆಚ್ಚು ಗಟ್ಟಿಗರೂ, ಸ್ವತಂತ್ರ ವಿಚಾರವುಳ್ಳವರೂ ಆಗಿದ್ದರೆ, ನಿರಾಶಾವಾದಿಗಳಾಗಿರದಿದ್ದರೆ, ಅವರನ್ನು (ಈ ಮೇಲೆ ಹೇಳಿದ) ಮೊದಲನೆಯ ವರ್ಗದವರನ್ನಾಗಿ ಪರಿವರ್ತಿಸಬಹುದು ಮತ್ತು ಅಲ್ಲಿಂದ ಮುಂದಕ್ಕೆ ಅವರು ತಮ್ಮ ವಿಚಾರಗಳನ್ನು ಹೆಚ್ಚು ಉಜ್ವಲವಾಗಿ ವ್ಯಕ್ತಪಡಿಸಲೂಬಹುದು.
ಲೌಕಿಕ ವಿಜ್ಞಾನಗಳ ಸಂದರ್ಭದಲ್ಲಿ ಅಧಿಕಾರಶಾಹಿಯ ವಿರೋಧವು ನಿಃಸಂದೇಹವಾಗಿಯೂ ಬಹಳಷ್ಟು ಒಳಿತನ್ನು ಮಾಡಿದೆ. ಆದರೆ ಅದು ಯಾವಾಗ ಭಗವತ್ಸಾಕ್ಷಾತ್ಕಾರಕ್ಕೆ ಅಥವಾ ಎಲ್ಲ ಬಂಧನಗಳಿಂದ ಮುಕ್ತಿಪಡೆಯುವುದಕ್ಕೆ ಅಡ್ಡಿಯನ್ನುಂಟುಮಾಡುವುದೋ ಆಗ ಆ ಮನೋಭಾವವೇ ಒಂದು ಅಡ್ಡಿಯಾಗುವುದು. ಭೌತಿಕ ವಿಜ್ಞಾನ (ಶಾಸ್ತ್ರ)ಗಳಲ್ಲಿ ಕೂಡ ಹೇಗೆ ನಾವು ಅನೇಕ ಪ್ರಮಾಣಗಳ ಮೇಲೆ ಭರವಸೆಯನ್ನು ಇಡಬೇಕಾಗುವುದೋ (ಈ ಪ್ರಮಾಣವನ್ನು ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ದೃಢೀಕರಿಸಿಕೊಳ್ಳಬಹುದು ಎಂಬುದೇನೋ ಸರಿಯೆ), – ಅದೇ ರೀತಿಯಲ್ಲಿ, ನಾವು ಸರಿಯಾದ ಮಾರ್ಗದಲ್ಲಿ ಮುಂದುವರಿಯಲು ಮಹರ್ಷಿಗಳ, ಮಹಾಸಂತರ ಅಧಿಕೃತ ಅನುಭವಗಳ ಮೇಲೆ ಭರವಸೆಯಿಡಬೇಕಾಗುತ್ತದೆ; (ಮತ್ತು ಇವುಗಳನ್ನು ಕೂಡ ದೃಢೀಕರಿಸಿಕೊಳ್ಳಬಹುದಾಗಿದೆ). ಇಲ್ಲವಾದರೆ, ನಮಗೆ ಎಲ್ಲಿಯೂ ನೆಲೆಯೇ ಇಲ್ಲದಂತಾಗುವ ಸಂಭವವುಂಟು. ಆದರೆ ಪ್ರಮಾಣೀಕರಿಸಿ ನೋಡುವ ನಿಖರ ಪರೀಕ್ಷೆಗಳು ಇವೆರಡೂ ಕ್ಷೇತ್ರಗಳಲ್ಲಿ ಬಹಳ ವಿಭಿನ್ನವಾಗಿರುತ್ತವೆ.
ಒಬ್ಬನಿಜವಾದ ಸಂತನ ಯೋಗ್ಯತೆಯನ್ನು ಪ್ರಮಾಣೀಕರಿಸಿ ನೋಡಲು ತಾನು ಮೊದಲು ಅರ್ಹನಾಗಬೇಕು ಮತ್ತು ಆಗ ಮಾತ್ರವೇ ಯೋಗ್ಯತಾವಂತನಾದ, ಸಂತನ ಅತ್ಯಂತ ಶುದ್ಧನಾದ ಹೃದಯದಲ್ಲಿ ತನ್ನದೇ ಪ್ರತಿಬಿಂಬವನ್ನು ಕಾಣಬಲ್ಲನು. ಇನ್ನಿತರ ಅಗ್ನಿಪರೀಕ್ಷೆಗಳೂ ಉಂಟು; ಆದರೆ ಒಬ್ಬನು ತನ್ನದೇ ಕೈಸುಟ್ಟುಕೊಳ್ಳದಿರಲು ಎಚ್ಚರವಹಿಸಬೇಕು. ಮುಕ್ತಿಯೇ ಗುರಿಯಾಗಿದ್ದರೆ, ಮುಕ್ತಿದಾತ ಕೂಡ ಅವಶ್ಯ ಇರಬೇಕು.ಮತ್ತು ಈ ಹೋರಾಟದಲ್ಲಿ ಮುಕ್ತಿಯ ಮಾರ್ಗವೂ ಯಾವಾಗಲೂ ಅಡಕವಾಗಿದೆ. ಗುರಿಯು ಒಂದೇ ಆಗಿದ್ದರೆ, ಅದಕ್ಕೆ ನೇರವಾದ ಮತ್ತು ಅತ್ಯಂತ ಸುಲಭಮಾರ್ಗ ಕೂಡ ಒಂದು ಮಾತ್ರವೇ ಇರಬಲ್ಲುದು. ಗುರಿಯು ಸಹಜವಾದುದಾದರೆ ಅದರ ಮಾರ್ಗವೂ ಸಹಜವಾಗಿರಬೇಕು.
ದೇವರ ಅಸ್ತಿತ್ವವನ್ನು ವೈಜ್ಞಾನಿಕವಾಗಿ ಸಿದ್ಧಮಾಡಲು ಇದುವರೆಗೆ ಸಾಧ್ಯವಾಗಿಲ್ಲ, ನಿಃಸಂದೇಹವಾಗಿ ಸಾಧ್ಯವಾಗಲಿಕ್ಕಿಲ್ಲ ಕೂಡ; ಆದರೆ, ಜೀವನದ ಸಮಸ್ಯೆಯನ್ನು ಪರಿಹರಿಸಲು, ಅವನ ಅಸ್ತಿತ್ವವನ್ನು ಸಮರ್ಥಿಸದಿರಲು ಅದೊಂದು ಕಾರಣ ಆಗಬೇಕಿಲ್ಲ. ಇದೊಂದು ಅತ್ಯಂತ ಸುಲಭವಾದ ಮತ್ತು ಸಹಜವಾದ ಕಲ್ಪನೆಯಾಗಿರುವುದರಿಂದ, ಇದರಿಂದಲೇ ನಾವು ಮುಂದುವರಿಯಬಹುದು. ಒಬ್ಬ ಗುರುವಿನ ಬಳಿಗೆ ಹೋದಾಗ ಆತನು ಅನನುಭವಿ ಮತ್ತು ಠಕ್ಕನೆಂದು ಕಂಡುಬಂದರೆ, ಮತ್ತೊಬ್ಬನ ಬಳಿಗೆ ನಾವು ಹೋಗುವುದನ್ನು ತಡೆಯುವುದಾದರೂ ಏನಿದೆ? ಎಲ್ಲ ಪದ್ಧತಿಗಳು ಮತ್ತು ಮಾರ್ಗಗಳು ಅತ್ಯಂತ ಸುಲಭ ಮತ್ತು ಸರಿಯಾದವುಗಳಲ್ಲವೆಂಬುದಂತೂ ತೀರ ಸತ್ಯದ ಮಾತು. ಹಾಗೆಂದಮಾತ್ರಕ್ಕೆ ಅತ್ಯಂತ ಸುಲಭ-ಸಹಜ ಮಾರ್ಗ ಇಲ್ಲವೆಂದಂತಾಗುವುದಿಲ್ಲ. ಇನ್ನೂ ಕೆಲವು ಮಾರ್ಗಗಳನ್ನು ಪರೀಕ್ಷಿಸಿ ನೋಡಲು ಪ್ರಯತ್ನಿಸುವುದರಲ್ಲಿ ಅಪಾಯ ಏನಿದೆ? ಯಾರು ತಮಗೆ ತಾವು ಸಹಾಯ ಮಾಡಿಕೊಳ್ಳುವರೋ ಅವರಿಗೆ ದೇವರು ಸಹಾಯ ಮಾಡುತ್ತಾನೆ. ಬೆಳಕು ಮತ್ತು ಮಾರ್ಗದರ್ಶನಕ್ಕಾಗಿ, ಪ್ರಾಮಾಣಿಕವಾದ ತಳಮಳ ಹಾಗೂ ವ್ಯಾಕುಲತೆಯಿಂದ ದೇವರಲ್ಲಿ ಏಕೆ ಪ್ರಾರ್ಥನೆ ಮಾಡಬಾರದು? ಹತಾಶನಾಗುವುದು, ಅಥವಾ ಎಲ್ಲದಕ್ಕೂ ತಿರಸ್ಕಾರ ತೋರುವವ(ಸಿನಿಕ)ನಾಗುವುದು ನಿಜಕ್ಕೂ ಒಂದು ಪಾಪ, ಅದು ಅಂತಿಮವಾಗಿ ಹೇಡಿತನವೆನಿಸಿಕೊಳ್ಳುವುದು.
ಯಾವುದೇ ಗುರು ಅಥವಾ ಮುನ್ನಡೆಸುವವ (ನೇತಾರ) ಇರಬೇಕಾಗಿಲ್ಲ ಎಂದು ಹೇಳುವುದೆಂದರೆ, ತಾನು ಪ್ರಾಜ್ಞ ಸರ್ವಜ್ಞ ಎಂದು ಒಬ್ಬನು ತಾನು ಹಾಗಿಲ್ಲದಿರುವಾಗಲೂ, ಭಾವಿಸಿಕೊಂಡಂತಾಗುತ್ತದೆ. ಒಂದು ವೇಳೆ ಅವರು (ಗುರುಗಳು) ಅಯೋಗ್ಯರೂ, ನಿರುಪಯುಕ್ತರೂ ಇದ್ದಾಗ ಅವರ ಅವಿವೇಕಿತನಕ್ಕೆ ಮಣಿಯುವುದಕ್ಕಿಂತಲೂ, ಗುರು ಇಲ್ಲದಿರುವುದೇ ಹೆಚ್ಚು ಒಳ್ಳೆಯದು. ಆದರೆ, ದೇವರ ದಯೆಯಿಂದ, ಒಂದು ವೇಳೆ ಭಗವಾನ್ ಶ್ರೀಕೃಷ್ಣ, ಬುದ್ಧ, ಚೈತನ್ಯ ಮಹಾಪ್ರಭು ಅಥವಾ ನಮ್ಮ ಗುರುಗಳಂತಹ ವ್ಯಕ್ತಿತ್ವ ಉಳ್ಳವರ ಸಂಪರ್ಕದಲ್ಲಿ ನಾವು ಬಂದರೆ, ಅವರಿಂದ ಮಾರ್ಗದರ್ಶನ ಪಡೆಯದೇ ಇರುವುದಕ್ಕಿಂತಲೂ ದೊಡ್ಡ ಮೂರ್ಖತನ ಬೇರೊಂದಿರಲಾರದು. ನಮ್ಮ ಗುರುಗಳು ಅದ್ದೂರಿ, ಆಡಂಬರ ಅಥವಾ ತೋರಿಕೆಯುಳ್ಳವರಲ್ಲವೆಂಬುದು ನಿಜ, ಹಾಗೂ ಒಬ್ಬನು ಅವರನ್ನು ಸುಲಭವಾಗಿ ಗುರುತಿಸಲಾರನೆಂಬುದೂ ನಿಜ. ಏಕೆಂದರೆ ಅವರು ಯಾವುದೇ ವ್ಯಾಪಾರೀ ಮುದ್ರೆಗಳನ್ನು ಹೊಂದಿರುವವರಲ್ಲ. ಹಾಗೆ ಏನೇ ಇದ್ದರೂ, ಯಾರಾದರೂ ನನ್ನ ಬಳಿಗೆ ಬಂದರೆ, ಅವರ (ಗುರುಗಳ) ಕೃಪೆಯಿಂದ, ಅವರನ್ನು ತೋರಿಸಲು ಸಿದ್ಧನಿದ್ದೇನೆ. ಆದರೆ ಇದು ಬೇರೆ ಮಾತು.
ಒಂದುವೇಳೆ ಎಲ್ಲ ಪದ್ಧತಿಗಳು ಹಾಗೂ ಸಾಮಾನ್ಯ ಯೋಗ್ಯತೆಯವುಗಳಾಗಿದ್ದರೆ, ಕನಿಷ್ಠಪಕ್ಷ ಒಂದಾದರೂ ಧ್ಯಾನದ ಪದ್ಧತಿ ಇದೆ, ಅದು ಸಹಾಯಕವಾಗಬಹುದು. ಆದರೆ, ಹಾಗೆ, ತನ್ನ ಆತ್ಮದ ಮೇಲೆ ಮಾಡುವ ಧ್ಯಾನವು ಸ್ವಾರ್ಥದ ನಿರಸನವನ್ನು ಹೆಚ್ಚಿಸುವ ಬದಲಿಗೆ, ಒಬ್ಬನ ಆತ್ಮಪ್ರಜ್ಞೆ ಮತ್ತು ಅಹಂಕಾರಗಳನ್ನು ಹೆಚ್ಚಿಸುವ ಸಾಧ್ಯತೆ ಉಂಟು ಎಂಬುದೇ ನನ್ನ ಆತಂಕ, ನಾವು ಚಿತ್ತಾಕರ್ಷಕ ಉಕ್ತಿಗಳು ಹಾಗೂ ಕೇವಲ ತೋರಿಕೆಯ (ಸಾಮಾನ್ಯ) ಮಾತುಗಳಿಂದ ಪ್ರಭಾವಿತರಾಗಕೂಡದು. ಗುರಿಯನ್ನು ಮುಟ್ಟಲು, ಸಮಗ್ರದಾರಿಯನ್ನು ಯಾರು ಕ್ರಮಿಸಿರುವರೋ ಅವರು ನಡೆದ ದಾರಿಯನ್ನು ನಾವು ಅನುಸರಿಸಬೇಕಾಗುವುದು. ಈ ಮಾರ್ಗದರ್ಶಕ ಪುರಾತನ ದೀಪಸ್ತಂಭಗಳಿಲ್ಲದಿದ್ದರೆ ನಾವು ಸದಾಕಾಲಕ್ಕೂ ದಾರಿತಪ್ಪಿ, ಕಳೆದು ಹೋಗುತ್ತಿದ್ದೆವು ಹಾಗೂ ಎಂದೆಂದಿಗೂ ಕಷ್ಟಕ್ಕೆ ಗುರಿಯಾಗುತ್ತಿದ್ದೆವು.
ಪ್ರಾಚೀನ ತತ್ತ್ವಶಾಸ್ತ್ರಗಳ ರೀತಿಯಲ್ಲಿ ಎಲ್ಲ ದೃಷ್ಟಿಕೋನಗಳನ್ನು ಅಲ್ಲಗಳೆಯುವ ಅಥವಾ ನಮ್ಮ ಗಣ್ಯ ಚಿಂತಕರ ಬಗ್ಗೆ ಅವಿನೀತರಾಗುವ ಉದ್ದೇಶ ಇಲ್ಲಿ ಇಲ್ಲ; ಆದಾಗ್ಯೂ ಸಾಮಾನ್ಯ ಓದುಗರಿಗೆ ಯೋಗ್ಯ ರೀತಿಯಲ್ಲಿ ಆಲೋಚಿಸಲು ಹಾಗೂ ಆ ರೀತಿಯಲ್ಲಿ ತಮ್ಮ ಗುರಿ ಹಾಗೂ ಆದರ್ಶವನ್ನು ಕಳೆದುಕೊಳ್ಳದಂತೆ ಈ ಮುಂಚೆ ಕೆಲವು ಸೂಚಕಗಳನ್ನು ಕೊಡಲಾಗಿದೆ. ಈ ವಿಷಯಗಳಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾದುದು ಆವಶ್ಯಕ, ಏಕೆಂದರೆ ಅದು ಅತ್ಯಂತ ಅಪಾಯಕಾರಿ ಖಡ್ಗದ ಅಲಗಿನ ಮೇಲೆ ನಡೆಯುವಂತಹದು ಎಂದೆನ್ನಲಾಗಿದೆ.ಅಭ್ಯಾಸಿಯು (ಸಾಧಕ) ತನ್ನ ಯಾತ್ರೆಯಲ್ಲಿ ಸ್ಥಿತಿಗಳ ಮೂಲಕ ಹಾದು ಹೋಗಬೇಕಾಗಬಹುದು; ಮತ್ತು ಅವನು ಅವುಗಳನ್ನು ತಪ್ಪಾಗಿ ಅರ್ಥಮಾಡಿಕೊಂಡರೆ ಅವನು ಭ್ರಾಂತಿ ಉಂಟುಮಾಡಬಹುದು ಹಾಗೂ (ಅವನ ಪಯಣದಲ್ಲಿ) ಸ್ಥಗಿತತೆ ಉಂಟುಮಾಡಬಹುದು. ಯೋಗ್ಯ ಗುರುವಿನ ನಿತಾಂತ ಆವಶ್ಯಕತೆ ಇದೆ ಎಂಬುದು ಈ ಕಾರಣಕ್ಕಾಗಿಯೇ.
ಕಷ್ಟ ಅನುಭವಿಸುತ್ತಿರುವ ಮಾನವ ಕುಲದ ಕುರಿತಾದ ಪ್ರೇಮ ಮತ್ತು ಸಹಾನುಭೂತಿಗಳಿಂದಾಗಿ, ಸಿದ್ದಾಂತಗಳ ಹಾಗೂ ಧಾರ್ಮಿಕ ನಂಬುಗೆಗಳ ಪ್ರಾಮಾಣ್ಯದ ಬಗ್ಗೆ ಅಷ್ಟು ವಿರೋಧವಿರುವುದು ಸಾಕಷ್ಟು ಸ್ಪಷ್ಟ. ಅದು ಪ್ರಾಮಾಣ್ಯ’ದ ಬಗೆಗಿನ ತಿರಸ್ಕಾರವಾಗಲಿ, ಉಪೇಕ್ಷೆಯಾಗಲೀ ಅಲ್ಲ; ಆದರೆ ಅದರ ನಿರುಪಯುಕ್ತತೆಯ ಅರಿವು ಹಾಗೂ ಉಪೇಕ್ಷೆಯಾಗಿದೆ. ಕ್ರಾಂತಿಕಾರಕ ಗುಂಪಿನ ಕೆಲವರು ಒಂದುವೇಳೆ ಗತಕಾಲದ ಋಷಿಗಳ ಅನುಭವಗಳನ್ನು ಎದುರಿಸಿ ನಿಲ್ಲಲು ಮತ್ತು ವಿವರಿಸಲು ತಮ್ಮನ್ನು ತಾವು ಅಸಮರ್ಥರೆಂದು ಕಂಡುಕೊಂಡರೆ ಅದು ಬೇರೆ ಮಾತು. ಆದರೆ ಒಟ್ಟಾರೆ, ಸಂಘಟಿತ ಮಠಗಳ ದೋಷಗಳು ಹಾಗೂ ದಬ್ಬಾಳಿಕೆಯ ಸ್ಥಿತಿಯು ನಿರ್ವಾಣ ಹಾಗೂ ‘ಬೌದ್ಧತನ’ದ ಆದರ್ಶ ಹೊಂದಿದ ಬೌದ್ಧಮತವಾಗಿ ಪರಿಣಮಿಸಿದೆ. ಹಾಗೂ, ರಾಜ್ಯವ್ಯವಸ್ಥೆಯ ಅಳಿವಿನ ಆದರ್ಶ ಹೊಂದಿದ ಕಮ್ಯೂನಿಸಂ ಅಥವಾ ಸಮಾಜವಾದ ಅಥವಾ ಶ್ರಮಿಕ ವರ್ಗದ ಸರ್ವಾಧಿಕಾರ ಹಾಗೂ ಆಧುನಿಕ ವಿಚಾರಧಾರೆಯ ಅಧಿಕಾರಶಾಹಿಯ ವಿರೋಧೀ-ಪ್ರವೃತ್ತಿ ಕೂಡ ಐತಿಹಾಸಿಕ ಪ್ರಕ್ರಿಯೆಗಳ ಒಂದು ಫಲಿತಾಂಶವೆಂದು ಹೇಳಬಹುದು. ಆದರೆ ಆ ವಿಧಾನಗಳು ಮತ್ತು ನಿರೀಕ್ಷಿತ ತೀರ್ಮಾನಗಳನ್ನು ನಾವು ಒಪ್ಪದಿದ್ದರೂ, ಅಂತಹ ಪ್ರತಿಯೊಂದು ಪ್ರತಿರೋಧದ ಹಿಂದಿರುವ ಭಾವನೆ ಅಥವಾ ಪ್ರೇರಕಶಕ್ತಿಯು ನಿಜಕ್ಕೂ ಪ್ರಶಂಸಾರ್ಹವಾಗಿದೆ.
ಸಂಪೂರ್ಣ ಈ ಆದರ್ಶವಾದವಾಗಲಿ, ಇಲ್ಲವೆ ಸೋಲೊಪ್ಪಿಕೊಳ್ಳುವ ವಿಧಿ-ವಾದವಾಗಲಿ ಸಾಮಾನ್ಯ ಮನುಷ್ಯನಿಗೆ ವ್ಯಾವಹಾರಿಕ ಪರಿಹಾರ ಆಗಲಾರವು. ಒಬ್ಬಾತನಿಗೆ, ಸತ್ಯವು ಕಂಡುಬರುವ ರೀತಿಯಲ್ಲಿಯೇ ಅದು ಇರುವಂತೆಯೇ ಅದರೊಟ್ಟಿಗೆ ಸಾಗಬೇಕಾಗುವುದು. ಇದರಲ್ಲಿ ನಿಷ್ಣಾತನಿರುವ ಒಬ್ಬನ ಸಹಾಯವು ಪಥವನ್ನು ಬಹುಮಟ್ಟಿಗೆ ಸುಗಮಗೊಳಿಸುವುದು. ಸುದೈವದಿಂದ, ಸತ್ಯದ ಮೂರ್ತಿಮಂತ ರೂಪವೇ ಆಗಿರುವವನೊಬ್ಬನನ್ನು ಸಂಧಿಸಿದರೆ, ‘ಗುರು’, ‘ಗುರಿ’ ಹಾಗೂ ‘ಮಾರ್ಗ’ದ ಇಡೀ ಸಮಸ್ಯೆಯು ತತ್ಕ್ಷಣವೇ ಪರಿಹಾರವಾಗುವುದು. ಎಲ್ಲ ನಿಜವಾದ ಜಿಜ್ಞಾಸುಗಳು ಅಂತಹವನೊಬ್ಬನನ್ನು ಪಡೆಯಲಿ, ತಥಾಸ್ತು !