ವಿಚಾರಧಾರೆಗಳು, ಮತ್ತು ಸಾಹಿತ್ಯಗಳು, ವಿಜ್ಞಾನಗಳು ಹಾಗೂ ವೃತ್ತಿಗಳು (ಕಸಬುಗಳು) ಇನ್ನೂ ಏನೇನೋ! ಒಬ್ಬನು ಜಗತ್ತಿನ ಕಡೆಗೆ ನೋಡಿದಾಗ ಅವನು ನಿಜವಾಗಿಯೂ ದಿಗ್ಧಮೆಗೊಳ್ಳುತ್ತಾನೆ. ಇಷ್ಟೆಲ್ಲ ಪ್ರಗತಿ, ಅಭಿವೃದ್ಧಿಯ ಮಧ್ಯದಲ್ಲಿ ವಿಶ್ರಾಂತಿ, ಶಾಂತಿ, ಸೌಖ್ಯ-, ನೆಮ್ಮದಿಗಳು ಎಲ್ಲಿಯೂ ಕಂಡುಬರುವುದಿಲ್ಲ. ವೈರ, ದ್ವೇಷ, ಭಯಗಳು, ಮತ್ತು ಮತ್ಸರಗಳು ಎಲ್ಲೆಲ್ಲೂ ಅತ್ಯಂತ ಪ್ರಮುಖವಾಗಿವೆ. ಒಬ್ಬ ಆಧುನಿಕತೆಯ ದಿಶೆಯಲ್ಲಿ ವಿಚಾರ ಮಾಡುವ ಗಂಭೀರ ಚಿಂತಕನು, ಮಾನವಕುಲದ ಬಗೆಗಿನ ಆಶೆಗಳನ್ನು ಕಳೆದುಕೊಳ್ಳುವುದು ಖಂಡಿತ. ಈ ಗೊಂದಲದಿಂದ ಹೊರಕ್ಕೆ ಹೋಗುವ ಯಾವುದೇ ಮಾರ್ಗವೂ ಇರುವಂತೆ ತೋರುವುದಿಲ್ಲ.
ಆದರೂ, ಆಗೀಗಿನ ಕೆಲವು ಘಟನೆಗಳು, ಅಲ್ಲಲ್ಲಿಯ ಕೆಲವು ವರ್ತಮಾನ ಪತ್ರಿಕೆಗಳಲ್ಲಿಯ ಶೀರ್ಷಿಕೆಗಳು, ಒಬ್ಬ ಪ್ರಸಿದ್ಧ ವ್ಯಕ್ತಿಯು ಹೇಳಿದ ಒಂದು ಮಾತು, ಒಬ್ಬ ಪ್ರಮುಖ ವ್ಯಕ್ತಿಯ ಒಂದು ಕಾರ್ಯ, ಅಥವಾ ದೃಢ ಮನವರಿಕೆಯ ಅಂಚು ಮುಟ್ಟುವಂತಹ ಒಂದು ಭ್ರಾಂತಿಯುಕ್ತ ಕಲ್ಪನೆಯು ಪ್ರಕಾಶದ ಕಲ್ಪನೆಯು ಪ್ರಕಾಶದ ಒಂದು ಮಿಣುಕನ್ನು ಅಥವಾ ಒಂದು ಆಶಾಕಿರಣವನ್ನು ಈ ನಿರಾಶೆಯ ಮಧ್ಯದಲ್ಲಿ ಮಿಂಚಿಸಬಹುದು. ಇಷ್ಟಾದರೂ, ಇದು ಇರುವುದು ಒಂದು ಕ್ಷಣಮಾತ್ರವಷ್ಟೆ, ಹಾಗೂ, ಅನಂತರ ಮರುಕ್ಷಣದಲ್ಲಿಯೇ ಒಬ್ಬನು ಮತ್ತೆ ಘೋರ ಅಂಧಕಾರದಲ್ಲಿ ತಾನು ಇದ್ದಿರುವುದನ್ನು ಕಂಡುಕೊಳ್ಳುತ್ತಾನೆ.
ಈ ಮೇಲಿನ ಮಾತು ಒಬ್ಬ ವ್ಯಕ್ತಿಯ ಬಗ್ಗೆ ಮಾತ್ರ ಸತ್ಯವಲ್ಲ, ಬದಲಿಗೆ, ಪ್ರತಿಯೊಂದು ರಾಜ್ಯ, ದೇಶಗಳ ಕೂಟ, ಅಷ್ಟೇಕೆ, ಇಡೀ ವಿಶ್ವಕ್ಕೂ ಅನ್ವಯಿಸುತ್ತದೆ. ಮಾಡಬೇಕಾದುದೇನು ಎಂಬ ಪ್ರಶ್ನೆ ಏಳುವುದು. ಇದೊಂದು ಸರಳ ಪ್ರಶ್ನೆ ಎಂಬುದು ನಿಃಸಂದೇಹ. ಇದಕ್ಕೆ ಉತ್ತರವಾಗಿ ಅನೇಕ ಸುಲಭ ಮತ್ತು ಮನವರಿಕೆಯಾಗಬಹುದಾದ ಪರಿಹಾರಗಳನ್ನು ನೀಡಲಾಗಿದೆ. ಆದಾಗ್ಯೂ ಯಾವ ಉತ್ತರವೂ ಸ೦ಪೂರ್ಣವಾಗಿ ಸಮಾಧಾನಕರವಾಗಿರುವಂತೆ ಕಾಣುವುದಿಲ್ಲ. ಇದಕ್ಕೆ ಯಾವುದಾದರೂ ಉತ್ತರ ನಿಜವಾಗಿಯೂ ಇರಬಲ್ಲುದೆ? ಅದು ಸ್ವತಃ ತನಗೇ ಉದ್ದೇಶಿಸಿದ್ದರೆ ಅಹುದು, ಅದನ್ನು ಒಂದು ವೇಳೆ ಇತರರಿಗೋಸ್ಕರ ಪ್ರಸ್ತಾಪಿಸಿದ್ದಾದರೆ, ಇಲ್ಲ.
ಮಾನವ ಕುಲಕ್ಕೆ ಒಂದೇ ಮತಧರ್ಮ ಅಥವಾ ಒಂದೇ ವಿಶ್ವ ಆಡಳಿತದ ಕರೆ ಎಂಬುದು ಒಂದು ಅರಣ್ಯರೋದನವೇ ಸರಿ. ಅದು ಹಾಗೆ ಸಂಭವಿಸುವುದಾದರೆ ಅದೊಂದು ಅನೈಸರ್ಗಿಕ ಸಂಗತಿಯಾದೀತು. ಬಹುತೇಕ ಚಿಂತಕರ ಪ್ರಯತ್ನಗಳು ಸಮಾಜವನ್ನು ಪರಿವರ್ತಿಸುವ, ಇಡೀ ಸಮೂಹವನ್ನು ಒಟ್ಟಿಗೇ ಒಮ್ಮೆಲೇ ಪರಿವರ್ತಿಸುವ ಮತ್ತು ಇಡಿಯಾಗಿ ಪರಿವರ್ತಿಸುವತ್ತ ನಿರ್ದೇಶಿತವಾಗಿದೆ; ಆದರೆ, ಇಡೀ ಸಮಾಜವನ್ನು, ಸಮೂಹವನ್ನು ನಿರ್ಮಿಸುವ ಅವುಗಳ ಅಂಗಗಳಾದ ವ್ಯಕ್ತಿಗಳನ್ನು ನಿರ್ಲಕ್ಷಿಸುತ್ತಲೇ ಈ ಪ್ರಯತ್ನ ನಡೆದಿದೆ. ಇಂತಹ ವಿಚಾರ ಪ್ರಣಾಲಿಯ ಕಾರಣಗಳನ್ನು ನಾವು ವಿಶ್ಲೇಷಿಸಿದರೆ ಕೆಲವು ಸ್ಪಷ್ಟ ನಿಷ್ಕರ್ಷೆಗಳು ನಮ್ಮ ದೃಷ್ಟಿಗೆ ಬೀಳುತ್ತವೆ. ಮೊಟ್ಟಮೊದಲಿಗೆ, ಈ ಚಿಂತಕನು ತಾನೊಬ್ಬನೇ ಅತಿ ಮಹತ್ತ್ವದವನು, ಅಲ್ಲಲ್ಲ, ಅತ್ಯಂತ ಹೆಚ್ಚು ಮಹತ್ತ್ವವುಳ್ಳವನು ಎಂದೂ, ಹಾಗೂ ಅನ್ಯರು ಒಂದು ದೊಡ್ಡ ಅನಿಯಂತ್ರಿತ ಹಾಗೂ ಅಸ್ತವ್ಯಸ್ತ ಜನಜಂಗುಳಿಯ ಯಃಕಶ್ಚಿತ್ ಕಣಗಳು ಎಂದು ಪರಿಗಣಿಸುತ್ತಾನೆ. ಎರಡನೆಯದಾಗಿ, ಪ್ರತಿಯೊಬ್ಬನೂ ತನ್ನ ವಿಚಾರ, ದೃಷ್ಟಿಕೋನಕ್ಕೆ ಅನುಗುಣವಾಗಿ ಪರಿವರ್ತಿತರಾಗುವ ಮೊದಲೇ ತಾನು ಎಲ್ಲಿ ಅಳಿದುಹೋಗಿಬಿಡುವೆನೋ ಎಂಬ ಅಂಜಿಕೆ ಉಂಟು. ಅದಕ್ಕಾಗಿಯೇ ಅವನು ಅಷ್ಟು ಆತುರದಿಂದ ಮತ್ತು ಹುಚ್ಚು ಹುಚ್ಚಾಗಿ ಅರಚಾಡುವುದು. ಮೂರನೆಯದಾಗಿ, ತಾನು ಸೌಖ್ಯದಿಂದಿರಬೇಕು ಎಂಬ ಅವನ ಜನ್ಮಜಾತ ಕಳವಳವು. ತನ್ನ ನೆರೆಹೊರೆಯವರಿಗೆ ಬೇಕಾದ ಪ್ರಕಾರದ ಸುಖದ ಸ್ವರೂಪ ಇತ್ಯಾದಿಗಳನ್ನು ಮರೆಯುವಂತೆ ಅಥವಾ ನಿರ್ಲಕ್ಷಿಸುವಂತೆ ಮಾಡುವುದು.
ಅಧಿಕಾರದಾಹ ಹಾಗೂ ಲೈಂಗಿಕ ಪ್ರಚೋದನೆಗಳು ಮುಂತಾದವುಗಳೇ ಈ ಎಲ್ಲ ಅಶಾಂತಿ ಹಾಗೂ ಕೇಶಗಳಿಗೆ ಪ್ರಧಾನ ಪ್ರೇರಕ ಶಕ್ತಿಗಳೆಂದು ಹೇಳಲಾಗುತ್ತದೆ. ಇವು ಬಹಳ ಮಹತ್ತ್ವದ ಪಾತ್ರವಹಿಸುತ್ತವೆ ಎಂಬುದು ನಿಃಸಂದೇಹ; ಆದರೆ ಇಂಥವು ಇನ್ನೂ ಅನೇಕ ಇವೆ; ಅವುಗಳ ವಿಶ್ಲೇಷಣೆಯು ಊಹಾಪೋಹದ ಮತ್ತು ಕಾಲ್ಪನಿಕತೆಯ ಯಥೇಷ್ಟ ಸಾಹಿತ್ಯ ನಿರ್ಮಾಣಕ್ಕೆ ಕಾರಣವಾಗಬಹುದು. ಆದರೆ ಇದು ದಮನ ಅಥವಾ ಉದಾತ್ತೀಕರಣದ ಕೆಲವು ಸಣ್ಣಪುಟ್ಟ ಸೂಚನೆಗಳನ್ನು ಕೊಡಬಹುದು ಅಥವಾ ಹೆಚ್ಚೆಂದರೆ ಸ್ವತಃ ನಮ್ಮದೇ ತಿರುವುಮುರುವಾದ ಅಥವಾ ವಿರೂಪಗೊಂಡ ಬಿಂಬಗಳನ್ನು ತೋರಿಸುವ, ಹೊಲಸಾದ ಪ್ರತಿಫಲಕವಾಗಿ ಸಲ್ಲಬಹುದೇ ಹೊರತು, ಯಾವುದೇ ಪ್ರಾಯೋಗಿಕ ಪರಿಹಾರ ನೀಡದು.
ವಿರಾಮ ಸ್ಥಿತಿ ಮತ್ತು ಚಲನೆ – ಇವು ಎರಡು ಪರಸ್ಪರ ವಿರುದ್ಧ ಅವಸ್ಥೆಗಳು. ಆದರೆ ಕೇವಲ ವಿರಾಮ(ನಿಶ್ಚಲ) ಸ್ಥಿತಿ ಮತ್ತು ಕೇವಲ ಚಲನೆ ಎಲ್ಲಿಯೂ ಸಿಗಲಾರದೆಂದು ನಮಗೆ ಪ್ರಾಜ್ಞರು ನಮಗೆ ಹೇಳಿದ್ದಾರೆ. ಆದುದರಿಂದ, ಎಲ್ಲ ಕಾರ್ಯಗಳನ್ನೂ ಮಾಡುತ್ತ ವಿರಾಮದಿಂದ ಶಾಂತವಾಗಿರುವ ಹಾಗೂ ಸಂಪೂರ್ಣ ಶಾಂತಸ್ಥಿತಿಯಲ್ಲಿ ತೀವ್ರ ಕ್ರಿಯಾಶೀಲನಾಗಿರುವುದು ಎಂಬ ಪರಿಹಾರವನ್ನು ನಮಗೆ ತೋರಲಾಗಿದೆ. ಒಂದು ಹೊಂದಾಣಿಕೆ, ಒಂದು ಸಮತೋಲನ ― ಅಥವಾ ಸಾಮರಸ್ಯ – ಇದು ಸಾಧಿಸಬೇಕಾದ ಗುರಿ ಎಂಬುದು ನಮ್ಮ ಲಕ್ಷ್ಯವಾಗಿರಬೇಕು. ಆದರ್ಶವನ್ನು ಪ್ರಸ್ತುತಪಡಿಸುವ ಮಟ್ಟಿಗೆ ಇದು ಅತ್ಯಂತ ಸಮರ್ಪಕವಾಗಿದೆ; ಆದರೆ ಅದನ್ನು ಹೇಗೆ ಸಾಧಿಸುವುದೆಂಬುದೇ ಪ್ರಶ್ನೆಯಾಗಿದೆ. ಮೊದಲು ಒಬ್ಬ ವ್ಯಕ್ತಿಯು ಇದನ್ನು ಹೊಂದಬೇಕೋ ಅಥವಾ ಸಮಾಜ ಅಥವಾ ರಾಷ್ಟ್ರವು ಇದನ್ನು ತನ್ನ ಮೇಲೆ ಅಥವಾ ತನ್ನ ಸದಸ್ಯರ ಮೇಲೆ ಮೊದಲು ಅನ್ವಯಿಸಬೇಕೋ (ಹೇರಬೇಕೋ) ಎನ್ನುವುದೇ ಪ್ರಶ್ನೆ.
ಈಗ ನಾವು ಸ್ವಲ್ಪ ಸ್ಪಷ್ಟ ಆಲೋಚನೆ ಮಾಡೋಣ. ಸಮಾಜ ಅಥವಾ ರಾಷ್ಟ್ರದ ಅರ್ಥವೆಂದರೆ ಒಂದು ಸಾಮಾನ್ಯ ಉದ್ದೇಶವನ್ನು ಗುರಿಯಾಗಿಟ್ಟುಕೊಂಡ ಹಾಗೂ ತನ್ನ ಸದಸ್ಯರ ಚಟುವಟಿಕೆಗಳ ಮೇಲೆ ಕೆಲವು ನಿರ್ಬಂಧನೆಗಳನ್ನು ವಿಧಿಸುವ ಮೂಲಕ ಗುರಿಯನ್ನು ಸಾಧಿಸಲು ಪ್ರಯತ್ನಿಸುವ ವ್ಯಕ್ತಿಗಳ ಸಮೂಹ. ಆದರೆ, ಸದೃಶ ಉದ್ದೇಶಗಳನ್ನು, ಆದರೆ ವಿಭಿನ್ನ ವಿಧಾನಗಳನ್ನು ಹೊಂದಿ, ಹೋರಾಡುತ್ತಿರುವ ಇತರ ರಾಷ್ಟ್ರಗಳು ಅಸ್ತಿತ್ವದಲ್ಲಿರುವುದನ್ನು ನಾವು ನೆನಪಿಡಬೇಕು ಅಥವಾ ಪರಿಗಣಿಸಬೇಕು. ಇದೂ ಕೂಡ ಒಂದು ಆದರ್ಶ ಕಲ್ಪನೆಯಾದೀತು, ಏಕೆಂದರೆ, ಭಿನ್ನ ಭಿನ್ನ ಧೋರಣೆಗಳನ್ನುಳ್ಳ ಹಾಗೂ ಭಿನ್ನ ಭಿನ್ನ ಕಾರ್ಯವಿಧಾನಗಳನ್ನು ಹೊಂದಿದ ರಾಷ್ಟ್ರಗಳು ಮತ್ತು ಸಮಾಜಗಳು ಬಹುಸಂಖ್ಯೆಯಲ್ಲಿವೆ.ಮತ್ತೆ ರಾಷ್ಟ್ರ ಅಥವಾ ಸಮಾಜಗಳ ಸದಸ್ಯರುಗಳಲ್ಲಿ ಬಹಳಷ್ಟು ಭಿನ್ನಾಭಿಪ್ರಾಯಗಳಿದ್ದು ಕೆಲವು ವ್ಯತ್ಯಾಸಗಳಂತೂ ಮೂಲಭೂತವಾದವುಗಳಾಗಿವೆ. ಆದ್ದರಿಂದ ಪ್ರತಿಯೊಬ್ಬ ಸದಸ್ಯನೂ ಸಮಾಜದ ಒಳಿತಿಗಾಗಿ ಯಾವುದೇ ಆಲೋಚನೆ,ಯಾವುದೇ ಪ್ರಸ್ತಾಪ ಅಥವಾ ಯೋಜನೆಯ ಬಗ್ಗೆ ಸಾಮರಸ್ಯದಿಂದ ಕೆಲಸ ಮಾಡದಿದ್ದರೆ, ಅದು ಅಪೇಕ್ಷಿತ ಫಲಗಳನ್ನು ನೀಡಲಾರದು. ಹೀಗಿರುವುದರಿಂದ, ‘ವ್ಯಕ್ತಿ’ಯನ್ನು ಸಜ್ಜುಗೊಳಿಸುವುದೇ ಮೂಲಭೂತ ವಿಷಯವಾಗಿದೆ.
ಈ ವಿಷಯಕ್ಕೆ ಬಂದಾಗ, ಬಹಳಷ್ಟು ತಥಾಕಥಿತ ಮುಂದಾಳುಗಳು, ಸುಧಾರಕರು ಅಥವಾ ಚಿಂತಕರು ತಮ್ಮಮುಖಗಳನ್ನು ದೂರ ತಿರುಗಿಸುತ್ತಾರೆ. ಸಮಾಜಕ್ಕೆ ಸಹಾಯ ಮಾಡುವ ಆಟವನ್ನು ಪ್ರದರ್ಶಿಸುವುದಕ್ಕೆ ಮೊದಲು ಅವರು ತಮಗೆ ತಾವೇ ಸಹಾಯ ಮಾಡಿಕೊಳ್ಳಬೇಕಾಗುವ ಆವಶ್ಯಕತೆ ಉಂಟು ಎಂಬುದನ್ನು ಇದು ತೋರಿಸುತ್ತದೆ.ತನ್ನ ನೆರೆಹೊರೆಯವರಿಗೆ ಸಹಾಯ ಮಾಡಲಾಗದವನು ಅಥವಾ ಕನಿಷ್ಠಪಕ್ಷ ತನ್ನನ್ನು ತಾನೇ ಎದುರಿಸಲಾಗದವನು ಸಮಾಜಕ್ಕೆ ಸಹಾಯ ಮಾಡಲಾರನು. ತನ್ನನ್ನು ತಾನೇ (ತನ್ನ ಆತ್ಮವನ್ನೇ) ಎದುರಿಸುವುದು ಎಂಬುದನ್ನು ಅರ್ಥ ಮಾಡಿಕೊಳ್ಳವುದೇನೂ ಒಂದು ಮಹಾ ಗೂಢ (ಅನುಭಾವೀ) ವಿದ್ಯೆಯಲ್ಲ. ಒಬ್ಬನು ತನ್ನನ್ನು ತಾನು ಕನ್ನಡಿಯಲ್ಲಿ ಎದುರಿಸಬಹುದು. ಆದರೆ ಅವನು ಅಲ್ಲಿ ತನ್ನನ್ನು ಒಬ್ಬ ಎಡಚನನ್ನಾಗಿ ಕಾಣಬಹುದು. ಹಾಗಾದರೆ ತನ್ನನ್ನು ತಾನೇ ಎದುರಿಸುವುದು ಹೇಗೆ? ಸದ್ಯಕ್ಕೆ ಪ್ರಾರಂಭಿಸಿದ ವಿಷಯದ ಚರ್ಚೆಯನ್ನು ಸಮಾಧಾನಕರವಾಗಿ ಮುಕ್ತಾಯಗೊಳಿಸಿದ ನಂತರ ಈ ವಿಷಯಕ್ಕೆ ಬರೋಣ.
ಈ ಕಾರ್ಯವು ವ್ಯಕ್ತಿಯಿಂದಲೇ – “ನನ್ನಿಂದಲೇ? ಪ್ರಾರಂಭವಾಗಬೇಕು. ನನ್ನನ್ನು ನಾನು ಸಂಪೂರ್ಣ ಸಾಮರಸ್ಯದ ಸ್ಥಿತಿಗೆ ತಂದುಕೊಳ್ಳಲು ದೃಢ ನಿರ್ಧಾರದ ಪ್ರಯತ್ನ ಮಾಡಿದರೆ, ಆಗ ಇಡೀ ಸಮಸ್ಯೆಯ ಪರಿಹಾರ ಸುಲಭವಾಗುವುದು. ಇದಕ್ಕಾಗಿ ನಾನು ಸದ್ಯಕ್ಕೆ ಸಿಲುಕಿಕೊಂಡಿರುವ ಅಸಂಖ್ಯಾತ ಕ್ಷುದ್ರ ಸಂಗತಿಗಳಿಂದ ನನ್ನ ಲಕ್ಷ್ಯವನ್ನು ನಾನು ತಿರುಗಿಸಬೇಕಾಗಬಹುದು. ಆದರೆ, ಆ ಎಲ್ಲ ಆಮೋದ-ಪ್ರಮೋದಗಳಿಂದ ನಾನು ವಿಮುಖನಾಗುವುದು ಅದರ ಅರ್ಥ. ನಾನಿನ್ನೂ ಅದಕ್ಕೆ ಸಿದ್ದನಾಗಿಲ್ಲ. ಹಾಗಿರುವುದರಿಮದ ನಾನೇಕೆ ಅದನ್ನು ಇತರರಿಗೆ ಕಲಿಸುವುದು ಅಥವಾ ಉಪದೇಶಿಸುವುದು?
ಈಗ ಒಬ್ಬನು ಹೇಳಬಹುದು : ಸರಿ, ನಾನು ನನ್ನ ಮೇಲೆ ನಾನೇ ಕೆಲಸ ಮಾಡಲು ಸಿದ್ಧನಾಗಿದ್ದೇನೆ, ಮತ್ತು ಸಂಪೂರ್ಣ ಸಾಮರಸ್ಯ ಸಾಧಿಸಿದ ನಂತರ ಹೋರಾಡುವುದಕ್ಕೆ ನಿಶ್ಚಯಿಸಿದೆ. ಆದರೆ ಇತರರ ಬಗ್ಗೆ ಏನು ಮಾಡುವುದು? ಅವರೂ ಕೂಡ ಹಾಗೆ ಮಾಡುವರೆ? ಅಥವಾ, ಅವರು ಮೊದಲಿನಂತೆಯೇ ಉಳಿದು ನನ್ನ ಪ್ರಗತಿಗೆ ಅಡ್ಡಿಯಾಗುವರೆ? ನಾವು ಜಗತ್ತಿನ ಸಮಸ್ಯೆಗಳ ಬಗ್ಗೆ ನಾವು ಪ್ರಾರಂಭಿಸಿದ್ದುದು ಏನಾಯಿತು? ಅದು ಪರಿಹಾರವಾಗುವುದೋ ಅಥವಾ ಎಂದೆಂದಿಗೂ ಪರಿಹಾರವಾಗದೆ ಇರುವುದೆ? ಮತ್ತೆ, ಭರವಸೆಗಳು ಮತ್ತು ಆಶ್ವಾಸನೆಗಳ ಅಗತ್ಯವಿರುವ ಈ ಪ್ರಶ್ನೆಗಳು ಅವಸರ, ಅಪಕ್ವ ಚಿಂತನೆ, ಕೆಲಸ ಮಾಡುವ ಸಂಕಲ್ಪ, ಆಲಸ್ಯ, ಕಳಪೆತನ, ಬರಡುತನಗಳನ್ನು ಬಯಲು ಮಾಡುತ್ತವೆ. ಇದಕ್ಕೆ ಉತ್ತರಿಸುವುದು ಯಾವ ಉದ್ದೇಶಕ್ಕೂ ಸಲ್ಲುವುದಿಲ್ಲ. ಇವುಗಳಿಗೆ ಈಗಾಗಲೇ ಅನೇಕ ಚಿಂತಕರು, ಒಂದು ವೇಳೆ ಉತ್ತರಗಳನ್ನು ನೀಡಿದ್ದಿದ್ದರೂ ಕೂಡ, ಓರ್ವನು ತನ್ನ ಉತ್ತರವನ್ನು ತಾನೇ ಕಂಡುಕೊಳ್ಳಬೇಕಾಗುವುದು. ಇದಕ್ಕೆ ಸ್ವಲ್ಪ ಮೌಲಿಕ ಚಿಂತನೆ, ಅನ್ವೇಷಣೆ ಹಾಗೂ ಪ್ರಯೋಗಶೀಲತೆಗಳು ಬೇಕು.
ಪರಿಪೂರ್ಣ ಸಾಮರಸ್ಯದೆಡೆಗೆ ವೈಯಕ್ತಿಕವಾಗಿ ಮುಂದುವರಿಯಲು ನಿರ್ಧರಿಸಿದ ನಂತರ, ಅದನ್ನು ಪಡೆಯುವ ವಿಧಾನದ ಬಗ್ಗೆ ನಾವು ಆಲೋಚಿಸೋಣ. ವಿಧಾನವು ಕೂಡ ಪರಿಪೂರ್ಣವಾಗಿ ಸಾಮರಸ್ಯ ಹಾಗೂ ನಮ್ಮ ಸ್ವಾಭಾವಿಕ ಬೆಳವಣಿಗೆಗೆ ಹೊಂದಿಕೊಳ್ಳುವಂತಹುದು ಆಗಿರಬೇಕು. ನಮ್ಮ ದೇಹವು ಹೇಗೆ ಬಾಲ್ಯಾವಸ್ಥೆಯಿಂದ ಯೌವನಾವಸ್ಥೆಗೆ ಮತ್ತು ಪೂರ್ಣ ಮಾನವನಾಗಿ ಸ್ವಾಭಾವಿಕ ರೀತಿಯಲ್ಲಿ ಯಾವುದೇ ಹೋರಾಟವಿಲ್ಲದೆ ಹಾಗೂ ನಮ್ಮ ಪ್ರಜ್ಞಾಪೂರ್ವಕ ಪ್ರಯತ್ನವಿಲ್ಲದೆ ಅಭಿವೃದ್ಧಿಗೊಂಡಿತೋ, ಅಧ್ಯಾತ್ಮದಲ್ಲಿ ನಮ್ಮ ಬೆಳವಣಿಗೆಯೂ ಅದೇ ರೀತಿಯದ್ದಾಗಿರಬೇಕು. ನಮ್ಮ ಆಧ್ಯಾತ್ಮಿಕ ಅಭಿವೃದ್ಧಿಯಲ್ಲಿ ಯಾವುದೇ ಅಸ್ವಾಭಾವಿಕತೆ ಸೇರಕೂಡದು. ಈ ಮಾನದಂಡದ ಅನುಸಾರವಾಗಿ ಪ್ರಚಲಿತವಿರುವ ಅಥವಾ ಹಳೆಯ (ಪ್ರಚಲಿತವಿಲ್ಲದ), ನೀತಿಬೋಧೆ ಅಥವಾ ಶಾಸ್ತ್ರಗಳ ಮೂಲಕ ಕಲಿಸಲಾದ ಎಲ್ಲ ಪದ್ಧತಿಗಳನ್ನು ನಾವು ಒಂದುವೇಳೆ ಪರಿಶೀಲಿಸಿದರೆ, ನಮಗೆ ಹೊಂದಿಕೆಯಾಗುವ ಅತ್ಯುತ್ತಮವಾದುದನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಇಲ್ಲಿಯೂ ಒಂದು ಅಪಾಯ ಉಂಟು. ನಾವು ಹೊಳೆಯುವುದನ್ನು (ಎಲ್ಲ) ಬಂಗಾರ ಎಂದು ತಪ್ಪಾಗಿ ತಿಳಿಯುವ ಸಾಧ್ಯತೆಯುಂಟು. ಆದುದರಿಂದ, ನಮ್ಮದೇ ರೂಪದಲ್ಲಿರುವ ಒಬ್ಬ ಜೀವಂತ ಮಾರ್ಗದರ್ಶಕನನ್ನು ನೀಡಲು ನಾವು ದೇವರಲ್ಲಿ ಪ್ರಾರ್ಥಿಸುವುದೇ ಅತ್ಯಂತ ಸುರಕ್ಷಿತವಾಗಬಲ್ಲದು.
ಒಂದುವೇಳೆ, ಭಾಗ್ಯವಶಾತ್ ಅಂತಹ ಗುರುವು ಮನುಷ್ಯ ರೂಪದಲ್ಲಿ ನಮಗೆ ದೊರೆತರೆ ಇಡೀ ಸಮಸ್ಯೆ ಕೂಡಲೇ ಪರಿಹಾರ ಕಾಣುವುದು. ಅಥವಾ, ಕನಿಷ್ಠ ಪಕ್ಷ, ಸಮರ್ಪಕವಾಗಿ ಪರಿಹಾರಗೊಳ್ಳುವುದು. ಆತನಲ್ಲಿ (ಆ ಗುರುವಿನಲ್ಲಿ) ನಮ್ಮದೇ ಆತ್ಮವನ್ನು ನಾವು ಕಾಣಬಹುದು. ನಾವು ಅಂತಹ ಗುರುವಿನ ಹೃದಯದ ಮೇಲೆ ಧ್ಯಾನ ಮಾಡಿದರೆ, ನಮ್ಮನ್ನು ನಾವು ಪೂರ್ಣವಾಗಿ ಅರಿಯಬಲ್ಲೆವು. ನಮ್ಮ ಧ್ಯಾನಾಭ್ಯಾಸದಲ್ಲಿ ನಾವು ಸಾಕಷ್ಟು ಮುಂದುವರಿದಾಗ, ಗುರುವಿನ ಅನುಮತಿಯಿಂದ ಹಾಗೂ ಅವನ ಮಾರ್ಗದರ್ಶನದಲ್ಲಿ, ಇತರರಿಗೆ ಅವರೂ ಸಾಮರಸ್ಯ ಸಾಧಿಸುವುದಕ್ಕೆ ಸಹಾಯಮಾಡುವ ಕಾರ್ಯವನ್ನು ನಾವು ಕೈಗೊಳ್ಳಬಹುದು. ಹೀಗೆ, ಸಂಪೂರ್ಣ ಪರಿದೃಶ್ಯವೇ ಬದಲಾಗುವುದು ಅಥವಾ ರೂಪಾಂತರ ಹೊಂದುವುದು ಮತ್ತು ಒಂದು ಹೊಸ ಲೋಕವೇ ಉದಯಿಸುವುದು.
ಏನೇ ಆದರೂ, ಆ ಹೊಸಲೋಕದ ಸ್ವರೂಪವು ಪೂರ್ವಕಲ್ಪಿತ ಆದರ್ಶರಾಜ್ಯವಾಗಲಾರದೆಂಬುದನ್ನು ಮರೆಯಕೂಡದು. ಮೃತ್ಯು, ಅನಾರೋಗ್ಯ ಮತ್ತು ನಾಶಗಳ ಪೂರ್ಣ ಪಾತ್ರ ಇದ್ದೇ ಇರುವುದು. ನಿಸರ್ಗದ ಕಾರ್ಯ ನಿರ್ದಾಕ್ಷಿಣ್ಯವಾದುದು. ಯಾರು ಅದರೊಂದಿಗೆ ಹೊಂದಿಕೊಳ್ಳುವರೋ, ಸಹಕರಿಸುವರೋ ಅವರು ಬದುಕಿ ಉಳಿಯುವರು; ಹಾಗೂ ಯಾರು ಹಾಗೆ ಮಾಡುವುದಿಲ್ಲವೋ ಅವರು ನಾಶ ಹೊಂದುವುದು ನಿಶ್ಚಿತ. ನಿಸರ್ಗದ ಕಾರ್ಯವು ವ್ಯಕ್ತಿಯ, ಸಮಾಜದ, ರಾಷ್ಟ್ರದ ಅಥವಾ ರಾಷ್ಟ್ರಗಳ ಸಮೂಹದ ಗುತ್ತಿಗೆಯಾಗಲಾರದು. ಅದು ದೈವೀ ಕಾರ್ಯವಾಗಿದೆ, ಹಾಗೂ ದೈವೀಯೋಜನೆ ಮತ್ತು ದೈವೀ ಸಂಕಲ್ಪಕ್ಕೆ ಅನುಸಾರವಾಗಿ ನೆರವೇರಿಸಲ್ಪಡುವುದು.ಹಾಗೂ ಅದು ಮಾನವನ ಎಲ್ಲ ಸೀಮಿತವಾದ ಆಲೋಚನೆಗಳನ್ನು ಅತಿಕ್ರಮಿಸುತ್ತದೆ. ಸ್ವತಃ ದೇವರೇ ತನ್ನ ಕೆಲಸಗಳನ್ನು ನಿರ್ವಹಿಸಲು ತನ್ನ ಸಂಕಲ್ಪ ಹಾಗೂ ಶಕ್ತಿಗಳನ್ನು ಯಾವೊಬ್ಬ ಸಾಮಾನ್ಯ ಮನುಷ್ಯನಿಗೆ ಅನುಗ್ರಹಿಸಬಹುದು. ಯಾರು ಬಲ್ಲರು? ದೇವರೇ ಸ್ವತಃ ಮಾನವನಾಗಿ ಬರಬಹುದು, ಯಾರು ಬಲ್ಲರು? ಇಂತಹ ವಿಭೂತಿಪುರುಷನು ಈಗಾಗಲೇ ಬಂದಿರಬಹುದು, ಹಾಗೂ ತನ್ನ ಕಾರ್ಯವನ್ನು ಪ್ರಾರಂಭಿಸಿರಬಹುದು, ಯಾರು ಬಲ್ಲರು? ಏನೇ ಇರಲಿ, ನಿಸರ್ಗವು ಮೌನವಾಗಿ ನಮ್ಮಿಂದ ಅಪೇಕ್ಷಿಸುವ ಕಾರ್ಯಕ್ಕಾಗಿ ನಮ್ಮನ್ನು ನಾವು ಸಿದ್ಧಗೊಳಿಸಿಕೊಂಡರೆ ಸಾಕು.
[ಸಹಜ ಮಾರ್ಗ ಪತ್ರಿಕೆ, ಸಂ. 3, 1960]