ನನ್ನ ಗುರುವನ್ನು ಯಾರಾದರೂ ಕಂಡಿರುವರೆ? ಹಾಗಿದ್ದರೆ ಅವರು ಬಂದು ತಮ್ಮ ಟಿಪ್ಪಣಿಗಳನ್ನು ನನ್ನದರೊಂದಿಗೆ ತುಲನೆ ಮಾಡಲಿ.

ಎಲ್ಲ ಸ್ತುತಿಗಳು ನನ್ನ ಗುರುವಿಗೆ ಸಲ್ಲಲಿ. ಆದರೆ ನಾನು ನನ್ನನ್ನು ಪ್ರಶಂಸಿಸದೆ ಇರಲಾರೆ. ಅದೊಂದು ವಿರೋಧಾಭಾಸವನ್ನು ಸೂಚಿಸುವುದೆ? ನನ್ನ ಗುರುವು ನನ್ನ ಆತ್ಮ

ನಾನು ನನ್ನ ಗುರುವಿನ ಬಳಿಗೆ ಭಾರವಾದ ಹೃದಯದಿಂದ ಹೋಗಿದ್ದೆ. ಅವರನ್ನು ಕಂಡ ತತ್‌ಕ್ಷಣ ನಾನು ದುಃಖದಿಂದ ಮುಕ್ತನಾದೆ. ಅಯ್ಯೋ! ಆಗ ಅದು ನನಗೆ ತಿಳಿಯಲಿಲ್ಲ. ವಾಸ್ತವಿಕ ಪ್ರಕ್ರಿಯೆಯನ್ನು ನಾನು ಅರಿಯಲಿಲ್ಲ. ಆದರೆ, ಅದರ ಪರಿಣಾಮಗಳು ವಿಧ್ವಂಸಕಾರಿಯಾಗಿದ್ದವು (ನನ್ನ ಭಾರವೆಲ್ಲ ಭಸ್ಮವಾಗಿ ಹೋಯಿತು).

ಅದು ಪ್ರೇಮವಾಗಿದ್ದಿತೆ? ಅವು ವಿರಹದ ವೇದನೆಗಳಾಗಿದ್ದುವೆ! ಆ ಕಣ್ಣೀರಿನ ಧಾರೆಗಳು, ಹೃದಯ ವಿದ್ರಾವಕ ಬಿಕ್ಕುವಿಕೆಗಳು! ಅದೆಷ್ಟು ಅದ್ಭುತವಾದುವು! ಅದೆಷ್ಟು ರೋಮಾಂಚನಕಾರಿ! ಅದೆಂತಹ ವಿಮೋಚನೆ!!

ವಿಮೋಚನೆಯನ್ನು ಕೊಡುವವನು ದೇವರೊಬ್ಬನೇ! ದೇವರೊಬ್ಬನೇ ಮುಕ್ತಿಯನ್ನು ದಯಪಾಲಿಸುವವನು. ದೇವರೊಬ್ಬನೇ ಸೃಷ್ಟಿಸುವವನು, ಹಾಗೂ ಅವನೊಬ್ಬನೇ ಪಾವನಗೊಳಿಸುವವನು. ಅವನು ಅತ್ಯಂತ ದೊಡ್ಡದಕ್ಕಿಂತ ದೊಡ್ಡವನು. ಅಣುವಿಗಿಂತಲೂ ಅಣು(ಚಿಕ್ಕ)ವಾಗಿರುವವನು. ಅವನು ಅನಂತವೂ ಹೌದು, ಅಣುವೂ ಹೌದು.

ದೇವರು ಅಸಾಧ್ಯನೆ? ಅವನೊಬ್ಬ ಕೇವಲ ಕಲ್ಪನೆಯೆ? ಹಾಗಾದರೆ ನೀವು ನನ್ನ ಗುರುವನ್ನು ಕಂಡಿಲ್ಲ. ನನ್ನೊಡನೆ ಬನ್ನಿ. ಮತ್ತೆ, ನಾನು ಅವನನ್ನು ನಿಮಗೆ ತೋರಿಸುವೆ.

ನನ್ನ ಗುರು ನನ್ನಲ್ಲಿಗೆ ಒಮ್ಮೆ ಬಂದಿದ್ದ. ನಾನು ಅದನ್ನು ಒಂದು ಕನಸೆಂದು ತಿಳಿದೆ. ಅದೆಂತಹ ಶಾಪಗ್ರಸ್ತ ಅಜ್ಞಾನವಾಗಿತ್ತು ! ಓ ಹಾಗಲ್ಲ, ನಾನು (ನನ್ನನ್ನು ಶಪಿಸಬೇಕಿಲ್ಲ. ಅವನು ನನ್ನೊಂದಿಗೆ ಕೇವಲ ಕಣ್ಣುಮುಚ್ಚಾಲೆ ಆಟ ಆಡುತ್ತಿದ್ದ. ಅವನು ಸದಾಕಾಲವೂ ಅಲ್ಲಿದ್ದ. ಆದರೆ ನನ್ನ ಹೃದಯ ಕಲ್ಮಷ ಹಾಗೂ ಕಸಗಳು ಅವನ ಪ್ರಕಾಶವನ್ನು ಮರೆ ಮಾಡಿದ್ದವು.

ನಾನು ನನ್ನನ್ನು ಪ್ರೀತಿಸುತ್ತಿರುವುದರಿಂದ, ನಾನು ಎಲ್ಲ ಕಡೆಗೂ ನನ್ನದೇ ಹೊಲಸು ಇಚ್ಛೆಗಳ ಪ್ರತಿಫಲನವನ್ನು ಎಲ್ಲೆಡೆಗೂ ಕಾಣುತ್ತಿದ್ದೆ. ಕೆಲವೊಮ್ಮೆ ಅವನು ಮುಗುಳ್ನಗುತ್ತಿದ್ದ, ಆದರೆ ನಾನು ಗಂಟುಮೋರೆ ಮಾಡುತ್ತಿದ್ದೆ. ಅವನು ಈಗ ಮಾಡುತ್ತಿರುವಂತೆಯೇ ನನಗೆ ಸಲುಗೆ ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿದ್ದ. ನಾನು ಸಂಕಟಪಡುತ್ತಿರುವಾಗ ಅವನು ನಲಿದಾಡುತ್ತಿದ್ದ. ಅವನ ನಲಿವು, ಲೀಲೆ ಅನಂತವಾಗಿದೆಯೆಂಬುದು ನನಗೆ ಒಂದಿಷ್ಟೂ ತಿಳಿದಿರಲಿಲ್ಲ. ನನ್ನ ಸಂಕಟ ಅಲ್ಪಮಾತ್ರ (ಪರಿಮಿತ)ವಾಗಿತ್ತೆಂಬುದನ್ನು ನಾನು ಅರ್ಥಮಾಡಿಕೊಂಡದ್ದು ಇನ್ನೂ ಕಡಿಮೆಯೇ.

ಕೊನೆಗೆ, ಅವನು ತನ್ನ ಅಪಾರ ದಯೆಯಿಂದ ಈ ಕ್ಷುದ್ರ ಕ್ರಿಮಿಯ ಮೇಲೆ ಕರುಣೆ ತೋರಿದ. ಅವನು ನನ್ನನ್ನು ರೋಗ ಹಾಗೂ ಮೃತ್ಯುವಿನ ಮಣ್ಣು-ಧೂಳಿನಿಂದ ಮೇಲಕ್ಕೆತ್ತಿದ. ಅವನ ಸ್ಪರ್ಶವು ನನ್ನನ್ನು ಮೃತ್ಯುವಿನಿಂದ ಮುಕ್ತಗೊಳಿಸಿತು. ಅವನ ಸಂಕಲ್ಪವು ನನ್ನನ್ನು ಅಮರನನ್ನಾಗಿಸಿತು.

ನೀನು ಈಗಲೂ ದುಃಖಿಯಾಗಿರುವೆಯಾ? ಹತಾಶಭಾವದ ಆಘಾತವು ನಿನ್ನನ್ನು ಸದಾಕಾಲಕ್ಕೂ ಹೆಳವನನ್ನಾಗಿ ಮಾಡಿತೆ? ಈ ದಿನದ, ಅಲ್ಲಲ್ಲ, ಸದಾಕಾಲಕ್ಕೂ ಮಹತ್ತಾದ ಸಂದೇಶವನ್ನು ನಿನಗೆ ಕೇಳಿಸಲಿಲ್ಲವೆ? ನನ್ನ ಗುರು ಆಗಮಿಸಿದ್ದಾನೆ! ಸೂರ್ಯನು ಪ್ರಕಾಶಿಸುತ್ತಿದ್ದಾನೆ. ಮುಂಜಾವದ ಹಾಡುವಕ್ಕಿ ಹಾಡುತ್ತಿದೆ. ಜೀವಚೈತನ್ಯ ಕೊಡುವ, ಆತ್ಮವನ್ನು ಕಲಕುವ ಅವನ (ಗುರುವಿನ) ಸಂಗೀತದ ತಾನಕ್ಕೆ ಪ್ರತಿಯೊಂದು ಕಣಕಣವೂ ಹುಚ್ಚೆದ್ದು ಕುಣಿಯುತ್ತಿದೆ. ಓ ನನ್ನ ಗೆಳೆಯ, ನಿನ್ನ ಕಣ್ಣುಗಳನ್ನು ತೆರೆ. ಅವನ ಪವಿತ್ರ (ಮಂಗಳಕರ) ರೂಪವನ್ನು ನೋಡು. ಅವನ ಹೃದಯವನ್ನು ಆಲಿಸು, ಇಂತಹ ಪ್ರೇಮಗಾನ ಹಿಂದೆಂದೂ ಹಾಡಲ್ಪಟ್ಟಿರಲಿಲ್ಲ.

ಏನು? ನೀನು ಅವನ ರೂಪವನ್ನು ಕಂಡೆ, ಆದರೆ ಅವನನ್ನು ಅರಿಯಲು ಅಸಮರ್ಥನಾಗಿರುವೆಯಾ? ಅರಿತುಕೊಳ್ಳುವುದಕ್ಕಾಗಿ ನೀನೇಕೆ ಹಪಹಪಿಸುತ್ತಿರುವೆ? ಅವನ ಅಡಿಯಲ್ಲಿ ನೀನು ಸುಮ್ಮನೆ ನಿಲ್ಲಬಲ್ಲೆಯಾದರೆ ಅಷ್ಟು ಸಾಕಾಗದೆ? ಯಾರಾದರೂ, ಎಂದಾದರೂ ಅವನನ್ನು ಅರಿತಿರುವರೆ? ಯಾವನಾದರೂ ಅವನನ್ನು ಅರಿಯಬಲ್ಲನೆ? ನಿನ್ನ ಒಣ ಅಭಿಮಾನವನ್ನು ದೂರ ಎಸೆದುಬಿಡು. ವಿನಮ್ರನಾಗು ಕೇವಲ ಹೂವು ತಂದು ಅರ್ಪಿಸಿದವರ ಮನೆಯ (ಕುದುರೆ) ಲಾಯಕ್ಕೆ ಹುಲ್ಲು ತಂದವನಂತೆ !

ಅವನು ಏನಿದ್ದಾನೆಂದು ನೀನು ತಿಳಿಯಲು ಬಯಸುತ್ತೀಯೇನು? ಅವನು ಮಿತ್ರನೂ ಅಲ್ಲ, ಶತ್ರುವೂ ಅಲ್ಲ; ಅವನು ಪಂಡಿತನೂ ಅಲ್ಲ, ಪಾಮರನೂ ಅಲ್ಲ. ಅವನು ದೇವ (God) ಅಲ್ಲ, ಶ್ವಾನ(Dog)ನೂ ಅಲ್ಲ. ನೀನು ಅವನ ವಯಸ್ಸು, ಲಿಂಗ, ಧರ್ಮ, ರಾಷ್ಟ್ರೀಯತೆ ಮತ್ತು ವೃತ್ತಿಗಳನ್ನು ತಿಳಿಯಬಯಸುವೆಯಾ? ಅವನು ಕಾಲಾತೀತ, ಲಿಂಗಾತೀತ ಧರ್ಮವನ್ನು ಮೀರಿರುವವನು, ಅವನು ದೇಶಾತೀತ, ಉದ್ಯೋಗ- ವೃತ್ತಿಗಳನ್ನೂ ಅತಿಕ್ರಮಿಸಿರುವವನು. ಆದರೂ ನಿನ್ನ ಕುತೂಹಲ ತಣಿಸುವುದಕ್ಕಾಗಿ ನಿನ್ನ ಕಲ್ಪನೆಗಳ, ಹೆಸರುಗಳನ್ನು ನಾನು ಕೊಡಬಲ್ಲೆ. ಆದರೆ ನೀನು ನಿನ್ನದೇ ಕಲ್ಪನೆಗಳಲ್ಲಿ ನೀನೇ ಕಳೆದು ಹೋಗಿ, ಅವನನ್ನು ಎಲ್ಲಿ ಕಳೆದುಕೊಂಡುಬಿಡುವೆಯೋ ಎಂಬ ಭಯ ನನಗಾಗುವುದು. ಅವನು ಹೇಗಿರುವನೋ ಹಾಗೇ ಅವನನ್ನು ಕಾಣು, ಹೊರತು, ಅವನು ಹೇಗಿರಬೇಕೆಂದು ನೀನು ಬಯಸುವೆಯೋ (ಕಲ್ಪಿಸುವೆಯೋ) ಹಾಗೆ ಕಾಣಬೇಡ.

ನನ್ನ ಗುರುವಿನಂತಹವರು ಯಾರೂ ಇಲ್ಲ; . ಆದರೆ ಪ್ರತಿಯೊಬ್ಬನೂ ಅವನ ಪ್ರತಿಬಿಂಬವಾಗಿದ್ದಾನೆ. ನನ್ನ ಗುರುವು ಒಬ್ಬನೇ ಒಬ್ಬ. (ಏಕಮೇವ), ಆದರೆ ಅವನು ಪ್ರತಿಯೊಬ್ಬರಲ್ಲಿಯೂ ಇದ್ದಾನೆ. ನನ್ನ ಗುರುವು ಸಾಮಾನ್ಯರಲ್ಲಿ ಒಬ್ಬ; ಎಲ್ಲರಲ್ಲಿ ‘ಸಾಮಾನ್ಯ’ ಆಗಿ ಇರುವ ಏಕಮೇವನೂ ಅವನೇ. ಹಾಗಿದ್ದರೂ ನೀನು ಅವನನ್ನು ‘ಸಮೀಪಿಸಲಾರೆ, ಆದರೆ ಅವನು ನಿನ್ನಲ್ಲಿ ಇದ್ದಾನೆ. ಅವನು ಯಾವನನ್ನು ಆಯ್ಕೆ ಮಾಡುವನೋ ಅವನನ್ನು ಸ್ವೀಕರಿಸುತ್ತಾನೆ.

ವಾಸ್ತವವಾಗಿ, ಅವನು ಪ್ರತಿಯೊಬ್ಬರ ಹೃದಯವನ್ನೂ ತನ್ನ ನಿವಾಸಸ್ಥಾನವಾಗಿ ಆಯ್ಕೆ ಮಾಡಿಕೊಂಡಿದ್ದಾನೆ. ಹಾಗೂ, ನಾನು ನನ್ನ ಹೃದಯದ ಒಡೆಯನನ್ನಾಗಿ ಅವನನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅಲ್ಲಿ ಅವನಿರುವಾಗ, ನಾನು ಇಲ್ಲ. ಇಬ್ಬರಿಗೆ ಅವಕಾಶವಿಲ್ಲದಂತೆ ಅವನು ನನ್ನ ಹೃದಯವನ್ನು ಇಕ್ಕಟ್ಟಾಗಿ ನೇರ್ಪಡಿಸಿದ್ದಾನೆ.

ಜಿಗಿಯುವುದಕ್ಕೆ ಮೊದಲು ನೀನು ಹಿಂದು-ಮುಂದು ನೋಡುತ್ತೀಯೆ. ಹಾಗೂ ನಿನ್ನನ್ನು ನೀನು ಜಾಣನೆಂದು ತಿಳಿದಿರುವೆ. ಆದರೆ ಒಬ್ಬ ಶುದ್ಧ ಹುಚ್ಚ ಮೂರ್ಖನಂತೆ ನಾನು ಆಳಕ್ಕೆ ಧುಮುಕಿಬಿಟ್ಟೆ. ಮತ್ತು ನಾನು ಅಮರತ್ವ ಸಾಗರದಲ್ಲಿರುವುದನ್ನು ಕಂಡು ಆಶ್ಚರ್ಯಪಟ್ಟೆ, ನನ್ನ ಮಾತು ಕೇಳು. ಎಲ್ಲ ಸಂದೇಹಗಳನ್ನು ಬಿಟ್ಟುಬಿಡು; ಕೇವಲ ಧುಮುಕಿಬಿಡು ಮತ್ತು ನನ್ನ ಗುರುವಿನಲ್ಲಿ ಮುಳುಗಿಹೋಗು. ಅವನನ್ನು ಕಾಣಲು ಬೇರೆ ಉಪಾಯವಿಲ್ಲ.

[ಸಹಜಮಾರ್ಗ ಪತ್ರಿಕೆ, ನಂ. 3, 1961]