ನಮ್ಮ ಅಸ್ತಿತ್ವದ (ಸತ್ತೆಯ) ಉನ್ನತ ಹಂತಗಳಿಗೆ ಮೇಲೇರುವುದು ನಮ್ಮ ಸಹಜ ತೀವ್ರಾಪೇಕ್ಷೆಯಾಗಿದೆ. ನಮ್ಮ ಅಪೇಕ್ಷೆಯನ್ನು ಪೂರೈಸಿಕೊಳ್ಳಲು ನಾವು ಬಹಳ ಪ್ರಯತ್ನ ಮಾಡುತ್ತೇವೆ. ಆದರೆ ಒಂದಿಲ್ಲೊಂದು ಕಾರಣದಿಂದ ಅಸ್ತಿತ್ವದ ಉನ್ನತ ಹಂತಗಳನ್ನು ಕುರಿತ ನಮ್ಮ ದೃಷ್ಟಿಕೋನವು ಸ್ಥಾನಪಲ್ಲಟಗೊಳ್ಳುತ್ತಲೇ ಹೋಗುತ್ತದೆ. ಇದರ ಪರಿಣಾಮವಾಗಿ ನಾವು ಗೊತ್ತು ಗುರಿ ಇಲ್ಲದೆ ತೇಲಿಹೋಗುತ್ತಿದ್ದೇವೆ. ಕೊನೆಗೆ ದುರ್ಬಲತೆ, ಅಸಾಮರ್ಥ್ಯ, ಹತಾಶೆ ಅಥವಾ ಸಂದೇಹವಾದ ‘ಸಂದೇಹವಾದ’ (ಅಜೇಯತಾವಾದ)ಕ್ಕೆ ಕೂಡ ಬಲಿಬೀಳುತ್ತೇವೆ.
ಜಾಗರೂಕ ಚಿಂತನೆ ಮತ್ತು ನಿರ್ಣಾಯಕ ಪ್ರಾರಂಭ ಇವು ಉದಾತ್ತತೆಯ ವಲಯಕ್ಕೆ ನಮ್ಮನ್ನು ಕರೆದೊಯ್ಯುತ್ತವೆ. ಹಾಗೂ ನಮ್ಮ ಸಹಾಯಕ್ಕಾಗಿ ಯೋಗ್ಯ ಮತ್ತು ಸಮರ್ಥ ವ್ಯಕ್ತಿಯನ್ನು ಆರಿಸಿಕೊಳ್ಳುವುದರಲ್ಲಿ ನಾವು ಸಾಕಷ್ಟು ಭಾಗ್ಯಶಾಲಿಗಳಾಗಿದ್ದರೆ, ಮಾನವ ಜೀವನದ ಗುರಿಯನ್ನು ಅಲ್ಪ ಸಮಯದಲ್ಲಿಯೇ ಸಾಧಿಸುವುದು ಸುನಿಶ್ಚಿತವಾಗುತ್ತದೆ.
ಆಂತರಿಕ ಜಡತೆ ಹಾಗೂ ಸ್ಥೂಲತೆಗಳಿಂದಾಗಿ ಮತ್ತು ಸರಿಯಾದ ಮಾನಸಿಕ ತರಬೇತಿಯ ಅಭಾವದಿಂದಾಗಿ ಬಹಳಷ್ಟು ಸಲ ನಮ್ಮ ದೃಷ್ಟಿಯು ಜಡ ಹಾಗೂ ಸ್ಥೂಲವಸ್ತುಗಳ ಮೇಲೆ, ಜಗತ್ತಿನ ವಿಕೃತ ಆಕಾರದ ಮೇಲೆ ನೆಲೆಸುತ್ತದೆ. ಮೂಲ ಸಾರತತ್ತ್ವಗಳು ನಮಗೆ ಕಣ್ಮರೆಯಾಗುತ್ತವೆ, ಹಾಗೂ ನಾವು ಅನಾವಶ್ಯಕವಾದವುಗಳಿಗೆ ಲಕ್ಷ ಕೊಡುತ್ತೇವೆ. ತತ್ಪರಿಣಾಮವಾಗಿ, ಚಂಚಲತೆ ಮತ್ತು ಅನಿಶ್ಚಿತತೆಗಳು ನಮ್ಮ ಸಮಗ್ರ ಚಿಂತನೆಯ ತಳಹದಿಯಾಗುವವು. ಆಂತರಿಕ ಹೆಣಗಾಟ, ಘರ್ಷಣೆ, ಮತ್ತು ಶಕ್ತಿಹಾಸಗಳು ಅದರ ಫಲಿತಾಂಶಗಳು. ನಾವು ಸೂಕ್ಷ್ಮ ಹಾಗೂ ಉನ್ನತ ಸ್ಥಿತಿಗಳನ್ನು ಗ್ರಹಿಸುವ ಅಥವಾ ಅವಲೋಕಿಸುವ ಸಾಮರ್ಥ್ಯವನ್ನು ಕೂಡ ಕಳೆದುಕೊಳ್ಳುತ್ತೇವೆ. ಸುಖಕರವಾದ ಪ್ರಾಪಂಚಿಕ ಜೀವನವು ನಮ್ಮ ಪ್ರಥಮ ಆವಶ್ಯಕತೆಯಾಗಿದೆಯೆಂಬುದು ನಿಃಸಂದೇಹ. ಆದರೆ, ನಾವು ಸುಖಭೋಗವನ್ನು ಸೌಖ್ಯ(ನೆಮ್ಮದಿ) ಎಂದು ತಪ್ಪಾಗಿ ಗ್ರಹಿಸಿದರೆ, ನಾವು ಅಸ್ತಿತ್ವದ ಉನ್ನತ ಸ್ತರಗಳಿಗೆ ಮೇಲೇರುವ ಆಸೆಯೇ ಉಳಿಯುವುದಿಲ್ಲ. ಆಗ ನಮ್ಮೆಲ್ಲ ಪ್ರಯತ್ನಗಳೂ ನಮ್ಮ ಇಂದ್ರಿಯಗಳ ತೃಪ್ತಿ; ಮತ್ತು ಮಾನಸಿಕ ಹವ್ಯಾಸಗಳಿಗಾಗಿ ಭೋಗವಸ್ತುಗಳನ್ನು ಸಂಗ್ರಹಿಸುವ ಮತ್ತು ಹೆಚ್ಚಿಸಿಕೊಳ್ಳುವ ದಿಶೆಯಲ್ಲಿಯೇ ಇರುತ್ತವೆ. ಇಚ್ಛೆಗಳ ಅತೃಪ್ತಿಯು ಕ್ರೋಧವನ್ನು ಹುಟ್ಟಿಸುವುದು ಮತ್ತು ವಿವೇಕ ನಾಶ ಉಂಟುಮಾಡುವುದು. ಅಂತಿಮವಾಗಿ ನಮ್ಮನ್ನು ಹಾಳು ಮಾಡುವುದು.
ಏನೇ ಇರಲಿ, ನಮ್ಮ ಸದ್ಯದ ಜೀವನವು, ಒಟ್ಟಿನಲ್ಲಿ, ಉಚ್ಚಧ್ಯೇಯದ ಪ್ರಾಪ್ತಿಗೆ ಒಂದು ಸಾಧನವೆಂಬ ವಿಚಾರವು ನಮ್ಮಲ್ಲಿ ದೃಢವಾಗಿ ನೆಲೆಗೊಂಡರೆ, ನಾವು ಪಶುಗಳಿಗಿಂತಲೂ ಹೆಚ್ಚು ಉನ್ನತಮಟ್ಟದ ಅಸ್ತಿತ್ವ-ಸ್ತರದಲ್ಲಿ ಪ್ರವೇಶಿಸುವೆವು. ಸಮಸ್ತ ಅಸ್ತಿತ್ವದಲ್ಲಿರುವ, ಸರ್ವವ್ಯಾಪಿ ಸಾರತತ್ತ್ವವನ್ನು ಗ್ರಹಿಸಲಾಗುವ ಮಟ್ಟಿಗೆ ನಮ್ಮ ದೃಷ್ಟಿಯು ವಿಶಾಲವಾಗುವುದು. ಒಬ್ಬ ವಿಜ್ಞಾನಿಯು ಇದನ್ನು ‘ಶಕ್ತಿ’ ಎಂದೂ, ಮತ್ತೊಬ್ಬನು ‘ದೇಶ-ಕಾಲ-ನಿರಂತರತೆ’ (ಅಖಂಡತೆ), ಎಂದೂ ಕರೆಯಬಹುದು. ಒಬ್ಬ ತತ್ತ್ವಜ್ಞಾನಿಯು ಇದನ್ನು ‘ಶುದ್ಧ-ಅಸ್ತಿತ್ವ’ ಎಂದು ಕರೆದರೆ ಮಗದೊಬ್ಬನು ಅತೀಂದ್ರಿಯ ಆಧ್ಯಾತ್ಮಿಕ ತತ್ತ್ವ ಎಂದೆನ್ನಬಹುದು. ಒಬ್ಬ ಮತಧರ್ಮಾನುಯಾಯಿಯು ‘ದೇವರು’ ಅಥವಾ ‘ಅಲ್ಲಾ’ ಎಂದು ಕರೆಯಬಹುದು. ಈ ಸರ್ವವ್ಯಾಪಿ ಸಾರತತ್ತ್ವವನ್ನು ಅರಿತಿರುವ ಪ್ರತಿಯೊಬ್ಬನೂ ಅದರ ಧ್ಯಾನದಲ್ಲಿ ತನ್ನ ಎಲ್ಲ ಲೌಕಿಕ ಸುಖಭೋಗಗಳನ್ನು ತ್ಯಾಗ ಮಾಡಲು ಸಿದ್ಧನಿರುವನೆಂಬುದಂತೂ ಖಂಡಿತ.
ಈ ಹಂತದಲ್ಲಿ ಮನವೊಪ್ಪುವಂತಹ ಅನೇಕ ವೈಜ್ಞಾನಿಕ ಸಿದ್ಧಾಂತಗಳು ತಾತ್ವಿಕ ಊಹಾಧಾರಿತ ಪ್ರತಿಪಾದನೆಗಳು, ಅಥವಾ ಧಾರ್ಮಿಕ ತತ್ತ್ವಸಿದ್ಧಾಂತಗಳು ಹೊರಹೊಮ್ಮಿ ಬರುವುವು. ಮತ್ತು ಈ ಸಿದ್ಧಾಂತಗಳ ಪ್ರತಿಪಾದಕರನ್ನು ಬಹುವಾಗಿ ಗೌರವಿಸಲಾಗುತ್ತದೆ ಹಾಗೂ ಆರಾಧಿಸಲಾಗುತ್ತದೆ. ಆದರೆ ಅಸ್ತಿತ್ವದ ಉಚ್ಚಸ್ತರಗಳಿಗೆ ಹೋಲಿಸಿದರೆ ಇವು ಇನ್ನೂ ಕೆಳಮಟ್ಟದವಾಗಿರುವುದರಿಂದ ಕೆಲವು ಧೀರ ವ್ಯಕ್ತಿಗಳು ಇನ್ನೂ ಉಚ್ಚತರ ಹಂತಗಳಿಗೆ ಮೇಲೇರಲು ಈ ಹಂತಗಳನ್ನು ಕೂಡ ತ್ಯಜಿಸಿದರು.
ಈಗ, ಮುಂದಕ್ಕೆ ಕ್ರಮಿಸಲು ‘ರಾಜಯೋಗ’ ಮತ್ತು ಸಮರ್ಥ ಗುರು ಮಾತ್ರ ನಮಗೆ ಸಹಾಯ ಮಾಡಲು ಸಾಧ್ಯ. ಅದಿಲ್ಲವಾದರೆ ಆ ಅತ್ಯಂತ ಮನಮೋಕ ಸರ್ವವ್ಯಾಪೀ ಮಾಯೆಯ ಲೋಕದ ಒಂದು ಬೀದಿ ಅಥವಾ ಕಿರುಬೀದಿಯಲ್ಲಿ ನಾವು ಸಿಕ್ಕಿಹಾಕಿಕೊಳ್ಳುವ ಸಂಭವವುಂಟು. ದೃಢವಾಗಿ ಬೇರೂರಿದ ಬೌದ್ಧಿಕ ನಂಬಿಕೆಗಳು ಮತ್ತು ಗಾಢಭಕ್ತಿಯ ಭಾವಾವೇಗಗಳು ಸುಲಭವಾಗಿ ಕಳಚಿಕೊಳ್ಳಲಾರದಷ್ಟು ಪ್ರಬಲವಾಗಿರುತ್ತವೆ. ಅವು ಅತೀವ ಮನಸ್ಸಂತೋಷದಾಯಕವೂ ಆಗಿರುತ್ತವೆ. ಅವು ಅಂತಿಮ ಗುರಿಯಲ್ಲವೆಂಬುದು ಅಸ್ತಿತ್ವದ ಇನ್ನೂ ಉಚ್ಚಮಟ್ಟಗಳಿಗೆ ತಲುಪಿದವರ ಜೀವನವು ಸಿದ್ಧಮಾಡಿ ತೋರಿಸಿದೆ.
ಒಂದುವೇಳೆ ಸಮರ್ಥ ಗುರುವಿನ ಶಕ್ತಿಯುತ ಪ್ರಾಣಾಹುತಿಯನ್ನು ಪಡೆದರೆ, ಮತ್ತು ಮುಂದಿನ ಉನ್ನತ ಹಂತಗಳನ್ನು ಗ್ರಹಿಸಲು ಪ್ರಯತ್ನಿಸಿದರೆ, ಆರಂಭದಲ್ಲಿ ನಾವು ಏನನ್ನೂ ತಿಳಿದುಕೊಳ್ಳಲಾರದಿರಬಹುದು, ಆದರೆ ಸರಿಯಾದ ಅಭ್ಯಾಸದಿಂದ ನಾವು ಸೂಕ್ಷ್ಮ ಅನುಭವಶಕ್ತಿಯನ್ನು ಬೆಳೆಸಿಕೊಂಡರೆ, ಈ ಸಮಸ್ತ ಅಸ್ತಿತ್ವದ ನಿಜವಾದ ಮೂಲಕ್ಕೆ ಬರುವೆವು. ಆಗ ನಾವು ‘ವಿರಾಟ್’ “ಸಚ್ಚಿದಾನಂದ’ ‘ಈಶ್ವರ’ ಮುಂತಾದ ಶಬ್ದಗಳ ಅರ್ಥವನ್ನು ನಿಜವಾಗಿಯೂ ಅರಿಯಬಹುದು. ಕೇವಲವಾದ ಶಾಂತಿ, ಪ್ರಸನ್ನತೆಯ ಸ್ಥಿತಿಯ ಅನುಭವ ಪಡೆಯಬಹುದು. ‘ಸಾಕ್ಷಿ’ ಅಥವಾ ‘ಆತ್ಮ’ ಮತ್ತು ‘ಸಾರತತ್ತ್ವ’ವನ್ನು ಸ್ಪರ್ಶಿಸಬಹುದು. ಆದರೆ, ಇದು ಅಪಾರ ಶ್ರೇಷ್ಠವಾಗಿದ್ದರೂ ಅತ್ಯುನ್ನತ ಸ್ಥಿತಿಯಲ್ಲ ಎಂದು ಅತ್ಯುನ್ನತ (ಪರಮ) ತತ್ತ್ವವನ್ನು ತಲುಪಿದವರು ಘೋಷಿಸಿದ್ದಾರೆ.
ಸೂಕ್ಷ್ಮವಾದವುಗಳಿಂದ, ಇನ್ನೂ ಸೂಕ್ಷ್ಮತರ ಸ್ಥಿತಿಗಳತ್ತ ಬದಲಾಗುವ ಈ ಸ್ಥಿತಿಗಳನ್ನು ನಾವು ದಾಟಿ ಹೋದಾಗ ಎಲ್ಲ ಬಂಧನಗಳೂ ಶಿಥಿಲಗೊಳ್ಳುವ ಹಾಗೂ ನಾವು ಮಾಯೆಯ ಎಲ್ಲ ಬಂಧನಗಳಿಂದ ಮುಕ್ತರಾಗುವ ಸ್ಥಿತಿ ಬರುವುದು. ಆಗಲೂ ಕೂಡ ಅಹಂಕಾರದ ಇನ್ನೂ ಸೂಕ್ಷ್ಮ ಹಾಗೂ ವಿರಲವಾದ ಘಟ್ಟಗಳನ್ನು ದಾಟಲ್ಪಡಬೇಕಾದದ್ದು ಉಳಿದಿರುತ್ತದೆ. ತದನಂತರ, ವಿಶುದ್ಧ ದೈವೀ ಪ್ರಕಾಶದ ಕೇಂದ್ರಮಂಡಲವನ್ನು ಪ್ರವೇಶಿಸುವೆವು.
ಷಾಹಜಹಾನಪುರದ ಶ್ರೀ ರಾಮಚಂದ್ರಜಿ ಮಹಾರಾಜರು ಈ ಎಲ್ಲ ವಿಭಿನ್ನ ಸ್ಥಿತಿಗಳನ್ನು ಸುಂದರವಾಗಿ ಸೂಚಿಸಿದ್ದಾರೆ. ಹಾಗೂ ಅವುಗಳನ್ನು ತಮ್ಮ ಗ್ರಂಥಗಳಾದ ‘ಸಹಜಮಾರ್ಗ ದರ್ಶನದಲ್ಲಿ ರಾಜಯೋಗದ ಪ್ರಭಾವ’, ‘ಸತ್ಯೋದಯ, ಅನಂತದೆಡೆಗೆ ಮುಂತಾದವುಗಳಲ್ಲಿ ಸರಳ ಹಾಗೂ ಸುಲಭರೀತಿಯಲ್ಲಿ ವಿವರಿಸಿದ್ದಾರೆ. ಅಸ್ತಿತ್ವದ ಅತ್ಯುಚ್ಚ ಮಟ್ಟವನ್ನು ಹೊಂದುವ ಮತ್ತು ಅದರಲ್ಲಿಯೇ ನೆಲೆಸುವ, ಹಾಗೂ ಸರಿಯಾದ ಮಾರ್ಗದಲ್ಲಿ ಶ್ರದ್ಧೆ, ಧೈರ್ಯ ಮತ್ತು ಛಲದಿಂದ ಮುಂದುವರಿಯುವ ಗುರಿಯನ್ನು ನಾವೇ ನಿರ್ಧರಿಸಬೇಕಾಗಿದೆ.