“ನೀವು ಹೇಗೆ ಪ್ರಾಣಾಹುತಿ ನೀಡುತ್ತೀರಿ?’ ಎಂಬ ವಿಶಿಷ್ಟ ಪ್ರಶ್ನೆಗೆ ಉತ್ತರಿಸಿ ಕೆಲವು ಅಭ್ಯಾಸಿಗಳ ಕುತೂಹಲವನ್ನು ಅನೇಕ ಸಲ ನಾನು ತಣಿಸಬೇಕಾಗುತ್ತಿತ್ತು. ‘ನನಗೆ ಗೊತ್ತಿಲ್ಲ’ ಎಂಬುದರಿಂದ, ನನ್ನ ಸಂಕಲ್ಪಶಕ್ತಿಯನ್ನು ಪ್ರಯೋಗಿಸುತ್ತೇನೆ’ ಎಂಬುದರವರೆಗಿನ ಯಾವುದೇ ಉತ್ತರವು ಬಹಳ ಪ್ರಾಮಾಣಿಕ ಹಾಗೂ ಉತ್ಸಾಹೀ ಅಭ್ಯಾಸಿಗಳಿಗೆ ಸಮಾಧಾನ ತಂದಿದೆಯೆನ್ನುವುದು ನನಗೆ ಆಶ್ಚರ್ಯ ಉಂಟುಮಾಡಿದೆ. ಈ ಪ್ರಶ್ನೆಗೆ ಉತ್ತರಿಸಿದ ಪ್ರತಿಸಲವೂ, ಅದು ಬಹಳ ಸರಿ ಇದೆ ಎಂಬ ಭರವಸೆ ನನಗಿತ್ತು ಹಾಗೂ ಸಂದೇಹದ ಲವಲೇಶವೂ ನನ್ನ ಹೃದಯದಲ್ಲಿದ್ದಿರಲಿಲ್ಲ.

ಈಗ, ಪ್ರಾಮಾಣಿಕ ಜಿಜ್ಞಾಸುಗಳಿಗೆ ಅದನ್ನು ನಾನು ವಿವರವಾಗಿ ಹಾಗೂ ಮುಚ್ಚುಮರೆಯಿಲ್ಲದೆ ತಿಳಿಸಬೇಕೆಂದು ನನಗನಿಸುತ್ತದೆ. ಈ ಸಂಬಂಧದಲ್ಲಿ, ನನ್ನ ಗುರುಗಳು ಒಂದು ಸಲ ನನಗೆ ಬರೆದುದು ನನಗೆ ನೆನಪಿಗೆ ಬರುತ್ತದೆ. “ಪ್ರಾಣಾಹುತಿ ನೀಡುವವನು ನಾನೂ ಅಲ್ಲ, ನೀನೂ ಅಲ್ಲ. ಪ್ರಾಣಾಹುತಿ ನೀಡುವವನು ನಿಜವಾಗಿ ಬೇರೊಬ್ಬನಿದ್ದಾನೆ.” ಆದ್ದರಿಂದ, ಪ್ರಾಣಾಹುತಿ ನಡೆಯುವುದು ಹೇಗೆ? ಎಂಬುದನ್ನು ವಿಶ್ಲೇಷಿಸುವ ಮೊದಲು ಪ್ರಾಣಾಹುತಿ ಎಂದರೇನು ಎಂಬುದನ್ನು ವಿವರಿಸಬೇಕಾಗಿದೆ.

‘ಪ್ರಾಣಾಹುತಿ’ ಎಂಬುದು ‘ಟ್ರಾನ್ಸ್ ಮಿಶನ್’ ಬದಲಿಗೆ ಸಮಾನವಾಗಿ ಬಳಸುವ ಶಬ್ದ. ‘ಒಬ್ಬ ಪ್ರಾಣಶಕ್ತಿಯನ್ನು ಆಹುತಿಯಾಗಿ ನೀಡುವುದು’ ಎಂಬುದು ಅದರ ಶಬ್ದಶಃ ಅರ್ಥ. ಅಧ್ಯಾತ್ಮ ಮಾರ್ಗದಲ್ಲಿ ಮುಂದುವರಿಯಲು ಅಭ್ಯಾಸಿಗೆ ಸಹಾಯ ಮಾಡುವ ಮಹಾ ‘ಗುರು’ವಿನ ಅತ್ಯಂತ ತೀವ್ರ ಪ್ರೇಮದ ಇಚ್ಛೆಯು ಅದರ ಒಂದು ಸೂಚನೆ ಕೊಡುತ್ತದೆ. ನಮ್ಮ ಗುರುಗಳು ದೈವೀ ತತ್ತ್ವದೊಂದಿಗೆ ಒಂದಾಗಿರುವರು. ಅವರು ಅಭ್ಯಾಸಿಯ ಕಡೆಗೆ ವಿಶೇಷ ಗಮನ ನೀಡಿದಾಗ ಅವರ ಅನಂತ ಪ್ರೇಮವು ಅಭ್ಯಾಸಿಯ ಹೃದಯದ ಮೇಲೆ ಕೇಂದ್ರೀಕೃತವಾಗುವುದು. ದೈವೀ ಕೃಪೆಯು ಅಭ್ಯಾಸಿಯಲ್ಲಿ ನೇರವಾಗಿ ಹರಿದುಬರಲು ಅದು ಕಾರಣವಾಗುವುದು. ಮತ್ತು, ಹೀಗೆ ಪ್ರಾಣಾಹುತಿಯು ನೆರವೇರುವುದು. ಅಭ್ಯಾಸಿಯ ಕಡೆಯಿಂದ ಅಂತಹುದೇ ಪ್ರಯತ್ನವಿದ್ದರೆ ಅವನು ದೈವೀ ಕೃಪೆಯನ್ನು ನೇರವಾಗಿ ಪಡೆಯುತ್ತಾನೆ. ಅದರ ಅರ್ಥವೇನೆಂದರೆ ಅಭ್ಯಾಸಿಯ ಲಕ್ಷ್ಯವೂ ಕೂಡ ಪ್ರೇಮ ಹಾಗೂ ತೀವ್ರ ಹಂಬಲದಿಂದ ಗುರುವಿನ ಹೃದಯದ ಮೇಲೆ ಕೇಂದ್ರೀಕೃತವಾಗಬೇಕು. ಆಗ ಮಾತ್ರ ಅದು ಶುದ್ಧವಾಗಿ ಹಾಗೂ ಪೂರ್ಣವಾಗಿ ಸ್ವೀಕರಿಸಲ್ಪಡುವುದು.

ಆದುದರಿಂದ, ದೈವೀ ಕೃಪೆಯನ್ನು ತುಂಬುವುದೇ ‘ಪ್ರಾಣಾಹುತಿ’. ಅದನ್ನು ಹೇಗೆ ಮಾಡಲಾಗುವುದು? ಪ್ರಾಣಶಕ್ತಿಯನ್ನು ತುಂಬುವುದು ಹೇಗೆ? ಅದು ಕೂಡ, ಗುರುವಿನ ಕಾರ್ಯವೇ ಆಗಿದೆ. ಮನುಷ್ಯನು ತನ್ನ ಮೂಲ ಸ್ವಭಾವವನ್ನು ಮರೆತು ತನ್ನದೇ ವಿಚಾರದ ದುರುಪಯೋಗ ಮಾಡುತ್ತಾನೆ. ಮತ್ತು ತನ್ನ ಸುತ್ತಲೂ ತನ್ನನ್ನು ಸೀಮಿತಗೊಳಿಸುವ ಗ್ರಂಥಿಗಳ ಜಾಲವನ್ನು ನಿರ್ಮಿಸಿಕೊಳ್ಳುತ್ತಾನೆ. ಹಾಗೂ ಈ ರೀತಿ ಮಾಡುವುದರಿಂದ ಮೂಲ ಧಾರೆಯ ನಿರಾತಂಕ ಪ್ರವಾಹಕ್ಕೆ ತಡೆಯೊಡ್ಡುತ್ತಾನೆ. ಅವನು ತನ್ನದೇ ಮೂಲಸ್ಥಿತಿಗೆ ಮರಳಬೇಕಾದರೆ, ಆ ಜಾಲವನ್ನು ಧ್ವಂಸಗೊಳಿಸುವುದು ಆವಶ್ಯಕ. ಒಬ್ಬ ಸಮರ್ಥ ಗುರುವು ತನ್ನ ಸಂಕಲ್ಪಶಕ್ತಿಯನ್ನು ಉಪಯೋಗಿಸಿ ಅದನ್ನು ಮಾಡಬಲ್ಲನು; ತೊಡಕುಗಳ ಹಾಗೂ ಆವರಣಗಳ ರೂಪದಲ್ಲಿರುವ ಅಡೆತಡೆಗಳನ್ನು ಅವನು ನಿವಾರಿಸುತ್ತಾನೆ; ಹಾಗೂ ಹೃದಯವನ್ನು ಶುದ್ಧಗೊಳಿಸುತ್ತಾನೆ. ಅಭ್ಯಾಸಿಯು ತಾನು ಕಳೆದುಕೊಂಡ ಸಾಮ್ರಾಜ್ಯವನ್ನು ಮರಳಿ ಪಡೆಯುವುದರಲ್ಲಿ ಅವನಿಗೆ (ಅಭ್ಯಾಸಿಗೆ) ಸಹಾಯ ಮಾಡಬೇಕೆಂಬ ಗುರುವಿನ ಪ್ರೇಮವು ಅವನನ್ನು ತನ್ನ ಪ್ರಾಣಶಕ್ತಿಯನ್ನೇ ಧಾರೆಯೆರೆಯಲು ವಿವಶಗೊಳಿಸುವುದು. ಹೀಗೆ ಗುರುವು ಆವಶ್ಯಕತೆಗೆ ತಕ್ಕಂತಹ ಸಂಕಲ್ಪಶಕ್ತಿಯನ್ನು ರೂಪಿಸಿಕೊಂಡು, ಪ್ರಯೋಗಿಸುವ ಮೂಲಕ ತಳಮಳಿಸುವ (ಅಭ್ಯಾಸಿಯ) ಹೃದಯದಲ್ಲಿ ಪರಮ ತತ್ತ್ವವನ್ನು ಅರ್ಥಾತ್ ಮೂಲದ ಶಕ್ತಿಯನ್ನು ತುಂಬುವನು. ಉಚಿತ ಫಲಿತಾಂಶಕ್ಕೆ ಬೇಕಾದುದೆಂದರೆ, ಅಭ್ಯಾಸಿಯ ಸಹಕಾರವೊಂದೇ. ದೈವೀ ಕೃಪೆಯ ಪ್ರವಾಹವನ್ನು ಅಭ್ಯಾಸಿಯು ಎಷ್ಟು ಪ್ರತಿರೋಧಿಸುವನೋ ಅಷ್ಟರಮಟ್ಟಿಗೆ ಅದರ ಪ್ರಯೋಜನದಿಂದ ಅವನು ವಂಚಿತನಾಗುತ್ತಾನೆ. ಹಾಗೂ ಈ ಪ್ರಕ್ರಿಯೆ ಮತ್ತಷ್ಟು ವಿಲಂಬವಾಗುತ್ತದೆ.

ಪ್ರಾಣಾಹುತಿಯ ಮೂಲಕ ಆ ಬಲೆಯನ್ನು ಒಂದು ಕ್ಷಣದಲ್ಲಿ ಹರಿದು ಹಾಕಲು ಹಾಗೂ ಅಭ್ಯಾಸಿಯಲ್ಲಿ ತತ್‌ಕ್ಷಣ ಅತ್ಯುಚ್ಚ ಸ್ಥಿತಿಯನ್ನು ತುಂಬಲು ಕೂಡ ಗುರುವಿಗೆ ಸಾಧ್ಯವಿದೆ. ಆದರೆ ಅಭ್ಯಾಸಿಯು ಸಾಮಾನ್ಯವಾಗಿ ಇಷ್ಟು ಸಿದ್ಧತೆ ಹೊಂದಿರುವುದಿಲ್ಲವಾದ್ದರಿಂದ ಸಮರ್ಥ ಗುರುವು ಇಂತಹ ಅಪಾಯಕಾರಿ ವಿಧಾನವನ್ನು ಕ್ವಚಿತ್ತಾಗಿ ಮಾತ್ರವೇ ಪ್ರಯೋಗಿಸುತ್ತಾನೆ.

ಕೊನೆಯದಾಗಿ, ಪ್ರಾಣಾಹುತಿಯು ಪ್ರಾಯೋಗಿಕ (ಅನುಭವಾಧಾರಿತ) ಮತ್ತು ವ್ಯಕ್ತಿಯ ಅನುಭವದ ವಿಷಯವಾಗಿದೆಯೆಂದು ನಾನು ಸ್ಪಷ್ಟಪಡಿಸಬಯಸುತ್ತೇನೆ ಮತ್ತು ಎಲ್ಲ ವರ್ಣನೆಗಳು ಹಾಗೂ ವಿವರಣೆಗಳು, ಸಾರವನ್ನು ಅಥವಾ ನಿಜತತ್ತ್ವವನ್ನು ಅರಿಯಲು, ಕೇವಲ ಬೌದ್ಧಿಕವಾಗಿ ಅಭಿಮುಖಗೊಳಿಸುವುದಕ್ಕೋಸ್ಕರ ಇವೆ. ಪ್ರತ್ಯಕ್ಷ ಯಥಾರ್ಥ ಜ್ಞಾನವನ್ನು ಪಡೆಯಲು ಬಯಸುವವರು ಪ್ರೇಮ, ಶ್ರದ್ಧೆ ಹಾಗೂ ಆತ್ಮವಿಶ್ವಾಸದಿಂದ ಸಮರ್ಥ ಗುರುವಿನ ಬಳಿಗೆ ಹೋಗಲಿ ಮತ್ತು ಅಮೃತದ ರುಚಿಯನ್ನು ಸವಿಯಲಿ.

‘ಪ್ರಾಣಾಹುತಿ’ ಎಂದರೆ ಕೇಂದ್ರಶಕ್ತಿಯನ್ನು ಅಥವಾ ದೈವೀಶಕ್ತಿಯನ್ನು ಬಳಸುವುದು. ಅದರಲ್ಲಿ ಕಂಪನಗಳೇನೋ ಇರುತ್ತವೆ; ಆದರೆ ಅನೇಕರಿಗೆ ಅವುಗಳ ಅನುಭವವೇ ಆಗುವುದಿಲ್ಲ. ಅದಕ್ಕೆ ಅಭ್ಯಾಸ ಬೇಕಾಗುತ್ತದೆ.