“ಮಹಾಪುರುಷರ ಜೀವನಗಳು ನಮಗೆ ನೆನಪಿಸಿಕೊಡುತ್ತವೆ. ನಾವೂ ನಮ್ಮ ಜೀವನವನ್ನು ಉದಾತ್ತಗೊಳಿಸಿಕೊಳ್ಳಬಹುದೆಂದು.”

‘ಉದಾತ್ತತೆಯ’ ಅರ್ಥವೇನೆಂದು ತಿಳಿಯದೆಯೇ, ನಾನು ನನ್ನ ಜೀವನವನ್ನು ಉದಾತ್ತಗೊಳಿಸಿಕೊಳ್ಳ- ಬಯಸಿದೆ. ‘ಮಹಾಪುರುಷರು’ ಎಂಬುದರ ಅರ್ಥವನ್ನು ಖಚಿತವಾಗಿ ಅರಿಯದೆಯೇ ನಾನು ಮಹಾಪುರುಷರನ್ನು ಕಾಣಲು ಮತ್ತು ಅವರ ಜೀವನದ ಅಧ್ಯಯನ ಮಾಡಲು ಬಯಸಿದೆ. ನಿಜವಾಗಿ ಮಹಾಪುರುಷರಾಗಿದ್ದವರ ಭೇಟಿಗಾಗಿ ಮತ್ತು ತತ್ಪರಿಣಾಮವಾಗಿ ನನ್ನ ಜೀವನದ ಉದಾತ್ತೀಕರಣಕ್ಕಾಗಿ ನಾನು ಮೌನವಾಗಿಯೇ ಆದರೂ ನೋವಿನಿಂದ ಕೂಡಿ ನನ್ನ ಹೃದಯದಲ್ಲಿಯೇ ಶ್ರದ್ಧಾಪೂರ್ವಕ ಪ್ರಾರ್ಥಿಸುತ್ತಿದ್ದೆ.

ಆ ಮಹಾಪುರುಷನು ನನ್ನ ಹೃದಯದ ಸ್ಥಿತಿಯ ಬಗ್ಗೆ ಕನಿಕರಪಟ್ಟು ಒಂದು ದಿನ ಯಾವುದೇ ಸದ್ದಿಲ್ಲದೆ, ಸುಳಿವಿಲ್ಲದೆ ನನ್ನೆಡೆಗೆ ಬಂದ.

ಆಗ ಜಗತ್ತಿನ ಅತ್ಯಂತ ಶ್ರೇಷ್ಠತಮ ಮನುಷ್ಯನ ಸನ್ನಿಧಿಯಲ್ಲಿ ನಾನು ಬಂದಿರುವೆನೆಂದು ನನಗೆ ತಿಳಿಯಲಾಗಲಿಲ್ಲ. ನನ್ನ ಜೀವನದಲ್ಲಿ ಒಂದು ಕ್ರಾಂತಿಕಾರಿ ಪರಿವರ್ತನೆ ಪ್ರಾರಂಭವಾಯಿತೆಂಬುದು ನನಗೆ ಆಗ ತಿಳಿದದ್ದು ಇನ್ನೂ ಕಡಿಮೆ. ಅದೆಲ್ಲವೂ ಒಂದು ವಿನೋದ, ಒಂದು ಮನೋವಿಲಾಸವೆಂಬಂತೆ ಪ್ರಾರಂಭವಾಯಿತು. ಆ ‘ಪುರುಷ’ನನ್ನು ನಾನು ಕಂಡೆ. ಅವನು ಅದೆಷ್ಟು ಸರಳ ಮತ್ತು ನಿಗರ್ವಿಯಾಗಿದ್ದನೆಂದರೆ ನಾನು ಕಂಡೆನೆಂದು ಬೊಟ್ಟಿಟ್ಟು ಗುರುತಿಸುವುದರಲ್ಲಿ ನಾನು ಅನೇಕ ಬಾರಿ ಎಡವಿದೆ. ಅವನನ್ನು ಕಂಡೆನೆಂದು ನಾನು ತಿಳಿದುಕೊಂಡು ತಿಳಿದುಕೊಂಡ ತತ್‌ಕ್ಷಣವೇ ಅವನು ನನ್ನ ದೃಷ್ಟಿಯಿಂದ ಮರೆಯಾಗುತ್ತಿದ್ದನು. ನನ್ನ ಅರಿವಿಗೆ ಬಾರದೆಯೇ ನಾನು ನನ್ನ ಹೃದಯವನ್ನು ಅವನಿಗೆ ಮಾರಿಕೊಂಡುಬಿಟ್ಟಿದ್ದೆ.

ಮತ್ತೆ, ಅಗಲಿರುವಿಕೆಯ ನೋವು ಪ್ರಾರಂಭವಾಯಿತು. ಆ ನೋವು, ಅದು ಆತ್ಯಂತಿಕ ನೋವು; ತನ್ನನ್ನೂ ಒಳಗೊಂಡು ಎಲ್ಲ ನೋವುಗಳನ್ನೂ ಗುಣಪಡಿಸುವ ನೋವು ನನ್ನನ್ನು ವಶೀಕರಿಸಿಕೊಂಡಿತು. ಅನೇಕ ವರ್ಷಗಳು ಉರುಳಿದ ನಂತರವೂ, ಅದರ ನೆನಪೇ ಅಷ್ಟೊಂದು ಮಧುರವಾಗಿದೆ. ಗುರುಗಳು ನನ್ನ ಆಧ್ಯಾತ್ಮಿಕ ಯಾತ್ರೆಯನ್ನು ಪ್ರಾರಂಭಿಸಿದರು. ನಾನು ಅತ್ಯಂತ ತವಕಗೊಂಡಿದ್ದೆ. ನಾನು ನನ್ನ ಪಯಣದ ಆನಂದಾನುಭವ ಹೊಂದುವ ಮೊದಲೇ ಅದು ಮುಗಿದು ಹೋಯಿತು. ನನ್ನ ಅಸ್ತಿತ್ವವನ್ನು ನಿರಂತರವಾಗಿ, ಉತ್ತರೋತ್ತರ ಹೆಚ್ಚು ಉದಾತ್ತ ಸ್ತರಗಳಿಗೆ ಕರೆದೊಯ್ಯಲಾಗುತ್ತಿತ್ತು.

ಗುರುಗಳು ನನ್ನ ಜೀವನದಲ್ಲಿ ಪ್ರವೇಶಿಸಿದ ನಂತರ ಅಲ್ಪ ಸಮಯದಲ್ಲಿಯೇ ಅವರ ಲೋಕವು ನನ್ನೊಳಗೆ ಪ್ರವೇಶಿಸುತ್ತಿರುವುದನ್ನು ಕಂಡು ನಾನು ಬೆರಗಾಗಿ ಹೋಗಿದ್ದೆ. ಗುರುಗಳು ನನ್ನನ್ನು ಶ್ರೀರಾಮಚಂದ್ರ ಮಿಷನ್ನಿನ ಪ್ರಶಿಕ್ಷಕನನ್ನಾಗಿ ಮಾಡಿದರು. ಅಲ್ಪಸಮಯದಲ್ಲಿಯೇ, ಸಹಜಮಾರ್ಗವು ಕೆಲವು ಆಸಕ್ತ ಜಿಜ್ಞಾಸುಗಳ ಗಮನ ಸೆಳೆಯಿತು. ಅಭ್ಯಾಸಿಗಳ ಜೀವನವನ್ನು ನಾನು ಪರಿಶೀಲಿಸುತ್ತ ಹೋದಂತೆ ಆಶ್ಚರ್ಯದ ಮೇಲೆ ಆಶ್ಚರ್ಯಗಳು ನನಗೆ ತೆರೆದುಕೊಳ್ಳುತ್ತಿದ್ದವು.

ಅವರೆಲ್ಲರೂ (ಅಭ್ಯಾಸಿಗಳೂ) ನನ್ನ ಕಣ್ಣಿಗೆ ಮಹಾವ್ಯಕ್ತಿಗಳಾಗಿದ್ದರು. ಸಹಜಮಾರ್ಗ’ದಲ್ಲಿ ಚಿತ್ರಿಸಲಾದ ಗುರಿಯನ್ನು ಸಾಧಿಸಲು ಅವರ ಆಕಾಂಕ್ಷೆ ಮತ್ತು ಗುರುಗಳೊಂದಿಗೆ ಸಂಪೂರ್ಣ ಏಕಾತ್ಮಕತೆಯನ್ನು ಪಡೆಯಲು ಅವರಲ್ಲಿರುವ ತೀವ್ರ ಬಯಕೆಗಳು ಅವರ ಜೀವನವನ್ನು ನಿಜಕ್ಕೂ ಉದಾತ್ತಗೊಳಿಸಿವೆ.

ನಾನು ಕೆಲವು ಮಹಾಪುರುಷರ ಜೀವನ ಚರಿತ್ರೆಗಳನ್ನು ಓದಿದ್ದೆ. ಕೆಲವರು ಹಿಂದಿನ ಕಾಲದವರಾಗಿದ್ದರು, ಮತ್ತೆ ಕೆಲವರು, ನಾನು ಅವರನ್ನು ವೈಯಕ್ತಿಕವಾಗಿ ಸಂಪರ್ಕಿಸಲು ಸಾಧ್ಯವಾಗುವುದಕ್ಕಿಂತ ಮೊದಲೇ ಗತಿಸಿ ಹೋಗಿದ್ದರು. ಯಾವನಾದರೊಬ್ಬನು ನಿಜಕ್ಕೂ ಮಹಾವ್ಯಕ್ತಿಯಾಗಿದ್ದರೆ ಅವನು ಸುಲಭವಾಗಿ ದೊರಕುತ್ತಾನೆ ಹಾಗೂ ಅವನು ನಿಶ್ಚಿತವಾಗಿಯೂ ಉದಾತ್ತ ಜೀವನ ಸಾಗಿಸುತ್ತಿರುತ್ತಾನೆ. ಮತ್ತು ನಾನು ಅವನ ಸಂಪರ್ಕದಲ್ಲಿ ನನ್ನ ಜೀವನವನ್ನು ಉದಾತ್ತಗೊಳಿಸಿಕೊಳ್ಳಬಹುದು ಎಂಬ ಭರವಸೆಯನ್ನು ನಿಜವಾಗಿ ಹೊಂದಿದ್ದೆ. ಒಂದುವೇಳೆ ನನಗೆ ಅದನ್ನು ಮಾಡಲಾಗದಿದ್ದರೆ, ನಿಜವಾದ ಮಹಾನತೆ ಎಂಬುದೇ ಇಲ್ಲ. ಅಥವಾ, ಮೇಲೆ ಉಲ್ಲೇಖಿಸಲಾದ ನಿಯಮ (ನೀತಿವಾಕ್ಯ) ಅತ್ಯಂತ ಸತ್ಯವಾದುದಿದ್ದು, ನಿಜಕ್ಕೂ ಮಹಾವ್ಯಕ್ತಿಗಳು ಇದ್ದುದಾದರೆ, ಅವರನ್ನು ನಾನು ಇನ್ನೂ ಹುಡುಕಬೇಕಿದೆ ! ನಾವು ಹೆಚ್ಚು ಅದೃಷ್ಟವಂತರು. ಅತ್ಯುನ್ನತ ಸ್ಥಿತಿಗೆ ನಮ್ಮನ್ನು ಕರೆದೊಯ್ಯಬಲ್ಲ ಮಹಾಪುರುಷನು ನಮ್ಮನಡುವೆ ಇದ್ದಾನೆ.

ದೈವೀ ಕೃಪೆಯ ಪ್ರಾಣಾಹುತಿ ಶಕ್ತಿಯ ಮೇಲೆ ಪ್ರಭುತ್ವವನ್ನುಳ್ಳ ಗುರು ಇಲ್ಲಿದ್ದಾರೆ. ಬೇಡಿದ ಮಾತ್ರಕ್ಕೆ ಪ್ರಾಣಾಹುತಿ ನೀಡಲಾಗುತ್ತದೆ. ನಮ್ಮ ಪಾಲಿಗೆ ಯಾವ ಪರಿಶ್ರಮವೂ ಇಲ್ಲ, ಆದರೆ, ಅವರ ರೂಪದಂತೆಯೇ ಪರಿವರ್ತನೆಗೊಳ್ಳಬೇಕೆಂಬ ಮನಃಪೂರ್ವಕ ಬಯಕೆ ಅಗತ್ಯ ಬೇಕು. ಅದನ್ನು ಹೊಂದಲು ನಾನು ಬಹಳ ಇಚ್ಚುಕನಾಗಿದ್ದೆ, ಉತ್ಸುಕನೂ ಆಗಿದ್ದೆ; ಅದು ಫಲಕಾರಿಯಾಯಿತು. ಗುರುಗಳು ನನ್ನ ಅಸ್ತಿತ್ವದ ಪ್ರತಿಯೊಂದು ಕಣವನ್ನೂ ತಮ್ಮ ವಶಕ್ಕೆ ತೆಗೆದುಕೊಂಡರು. ಮತ್ತು ಉದಾತ್ತಗೊಳಿಸಿದರು. ಇದು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಾಡಲಾದ, ನಮ್ಮ ಒಳಿತಿಗಾಗಿಯೇ ಮಾಡಲಾದ ಸಂಶೋಧನೆ. ಪ್ರತಿಯೊಬ್ಬರಿಗೂ ಸಹಾಯ ಮಾಡಲೆಂದು ಗುರುಗಳು ಸಂಪೂರ್ಣ ನವೀನವಾದ ಪದ್ಧತಿಯನ್ನು ಕಂಡುಹಿಡಿದರು.

[ಷಹಜಹಾನಪುರದ ಶ್ರೀ ರಾಮಚಂದ್ರಜಿ ಮಹಾರಾಜರ 71ನೆಯ ಜನ್ಮದಿನದ ಸ್ಮರಣಸಂಚಿಕೆ]