ಗುರುಗಳು ನನ್ನೆಡೆಗೆ ಬಹಳ ನಿಃಶಬ್ದವಾಗಿ ಬಂದರು. ಅವರು ನನ್ನೆಡೆಗೆ ಬಂದಾಗ ನಾನು ಅವರನ್ನು ‘ನನ್ನ ಗುರು’ ಎಂದು ಸ್ವೀಕರಿಸಿರಲಿಲ್ಲ. ಜನವರಿ/ಫೆಬ್ರುವರಿ 1955ರ ಹಿಂದೂ ಪತ್ರಿಕೆಯ ರವಿವಾರದ ಆವೃತ್ತಿಯಲ್ಲಿ ಡಾ. ಕೆ.ಸಿ. ವರದಾಚಾರಿಯವರು ಬರೆದ, ಗುರುಗಳ ‘ಸತ್ಯೋದಯ’ ಪುಸ್ತಕದ ಅವಲೋಕನವನ್ನು ನಾನು ಆಕಸ್ಮಿಕವಾಗಿ ಓದಿದ್ದೆ. ನನ್ನ ಹೃದಯದ ತುಕ್ಕು ಹಿಡಿದ ಬಾಗಿಲನ್ನು ಗುರುಗಳು ತಟ್ಟಿದ್ದರು. ಆ ವಯೋವೃದ್ಧರ ತಟ್ಟುವಿಕೆಯು ನನಗೆ ಕೇಳಿಸದಷ್ಟು ನಾನು ನನ್ನದೇ ವಿನೋದದಲ್ಲಿ ಮೈಮರೆತಿದ್ದೆ. ಯಾವುದೇ ವಿಷಯ ಭೇದವಿಲ್ಲದೆ, ಎಲ್ಲ ತರಹದ ಪುಸ್ತಕಗಳನ್ನೂ ಓದುವ ಹವ್ಯಾಸ ಬೆಳೆಸಿಕೊಂಡಿದ್ದೆ. ಧರ್ಮ, ತತ್ತ್ವಶಾಸ್ತ್ರ, ಅಥವಾ ಯೋಗವನ್ನು ಕುರಿತ ಪುಸ್ತಕಗಳು, ನನಗೆ ‘ಅರೇಬಿಯನ್ ನೈಟ್’ ಅಥವಾ ‘ಅಲಿಸ್ ಇನ್ ವಂಡರ್ ಲ್ಯಾಂಡ್’ ಗ್ರಂಥಗಳಷ್ಟೇ ಚಿತ್ತಾಕರ್ಷಕವಾಗಿದ್ದವು. ‘ಅನುಭಾವ’ (Mysticism) (ಅತೀಂದ್ರಿಯ ವಿದ್ಯೆ), ಕುರಿತ ಹಾಗೂ ಕಾಲ್ಪನಿಕ ವೈಜ್ಞಾನಿಕ ಗ್ರಂಥಗಳ ಬಗ್ಗೆ ನನಗೆ ವಿಶೇಷ ಆಕರ್ಷಣೆಯಿತ್ತು. ಆಗ ಬರಿಯ ಗ್ರಂಥಗಳಷ್ಟೇ  ನನ್ನ ಮನೋರಂಜನೆಯ ಸಾಧನಗಳಾಗಿರಲಿಲ್ಲ. ಸಂತೋಷದ ಬೇರೆ ಅನೇಕ ಮೂಲಗಳು ಕೂಡ ನನಗಿದ್ದವು. ಈ ಓದು ಹಾಗೂ ಮನೋರಂಜನೆಯ ಕಾಲದುದ್ದಕ್ಕೂ, ಎಲ್ಲ ಹೊತ್ತಿನಲ್ಲೂ ಗುರುಗಳು ನನ್ನ ಬಳಿ ಇದ್ದರು. ಆದರೆ ಅವರ ಒಂದು ಕ್ಷಣಿಕ ಮಿಣುಕು ಹೊಳಹನ್ನೂ ಗ್ರಹಿಸಲಾರದಷ್ಟು ನಾನು ಜಿಡ್ಡುಗಟ್ಟಿ ಹೋಗಿದ್ದೆ. 

ನಾನು ನನ್ನ ಸಂತೋಷಗಳ ಜೊತೆಗೆ ಕೆಲವು ಅಸಂತೋಷದ ಫಲಗಳ ರುಚಿಯನ್ನು ನೋಡಬೇಕಾಯಿತು. ನನ್ನ ಕಲ್ಪನೆಯ ಸಂತೋಷಕ್ಕೆ ಹೋಲಿಸಿದರೆ, ಪಡೆದುದಕ್ಕಿಂತ ಬಹಳ ಹೆಚ್ಚು ಬೆಲೆ ತೆರಬೇಕಾಯಿತು ಎಂಬುದನ್ನು ಕಂಡುಕೊಂಡೆ. ಅದು ಕ್ರಮೇಣ ಒಂದು ನಿರಂತರ ನೋವಿನ ಕಾರಣವಾಗಿ ಬದಲಾಗುತ್ತಿತ್ತು ಹಾಗೂ  ಬಹಳ ಕಷ್ಟಪಟ್ಟು ಪಡೆದ ಸಂತೋಷವನ್ನು ಕೆಡಿಸುತ್ತಿತ್ತು. ಅದರ ಬೆಲೆ ನಿಜವಾಗಿ ನನ್ನ ಜೀವನದ ಒಂದು ಭಾಗದಷ್ಟೇ ದುಬಾರಿಯಾಗಿತ್ತು. ಜೀವನವು ಒಂದು ಮಹಾ ಆಪತ್ತಿನ ರೂಪ ತಳೆಯುತ್ತಿತ್ತು. ಆದರೆ ಸುಖವನ್ನರಸುವ ನನ್ನ ಎಲ್ಲ ರೂಢಿ(ಚಟ)ಗಳೂ ಎಂದಿನಂತೆಯೇ ಮುಂದುವರಿದಿದ್ದವು. ಆಗ ಗುರುಗಳು ನನ್ನ ಜೀವನವನ್ನು ಪೋಷಿಸುತ್ತಿದ್ದರು ಮತ್ತು ನನ್ನ ಎಲ್ಲ ಸುಖ-ದುಃಖಗಳಲ್ಲಿಯೂ ಅವರು ನನ್ನನ್ನು ವ್ಯಾಪಿಸಿದ್ದರು ಎಂಬುದು ನನಗೆ ತಿಳಿದಿರಲಿಲ್ಲ. 

ಬೇರೆಯವರಂತೆ ಅವರು ಯೋಗದ ಬಗ್ಗೆ ಕೇವಲ ಮಾತನಾಡುವವರೋ ಅಥವಾ ಯೋಗದ ಕ್ಷೇತ್ರದಲ್ಲಿ ಪ್ರಾಯೋಗಿಕ (ಯಥಾರ್ಥ) ಸಿದ್ದಿಗಳನ್ನು ಹೊಂದಿದವರೋ, ಹಾಗೂ ನನ್ನಂತಹ ಒಬ್ಬ ಪ್ರಾಮಾಣಿಕ ಜಿಜ್ಞಾಸುವಿಗೆ ಮಾರ್ಗದರ್ಶನ ಮಾಡಲು ಸಿದ್ಧರಿರುವರೋ ಎಂಬುದನ್ನು ತಿಳಿದುಕೊಳ್ಳಲು ನಾನು ಗುರುಗಳಿಗೆ ಬರೆದೆ. ಗುರುಗಳ ಉತ್ತರವು ಅತ್ಯಂತ ಶಿಷ್ಟತೆ ಮತ್ತು ಸೂಕ್ಷ್ಮ ಸೌಂದರ್ಯಗಳುಳ್ಳದ್ದಾಗಿದ್ದಿತು. “ನನ್ನ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. ಏಕೆಂದರೆ ತನ್ನ ಬಗ್ಗೆ ತಾನು ಹೇಳಿದುದಕ್ಕೆ ‘ಮನ್ಸೂರ’ನನ್ನು ಗಲ್ಲಿಗೇರಿಸಲಾಯಿತು. (ಮನ್ಸೂರ’ ಕೆಲ ಶತಮಾನಗಳ ಹಿಂದೆ ಆಗಿ ಹೋದ ಪರ್ಷಿಯನ್ ಸಂತ). ಇದನ್ನು ದಯವಿಟ್ಟು ಲಕ್ಷ್ಯಪೂರ್ವಕ ಓದು ಮತ್ತು ನೀನೇ ನಿರ್ಣಯಿಸು ನಿನಗೂ ಅಥವಾ ಸಾಕ್ಷಾತ್ಕಾರಕ್ಕಾಗಿ ಪ್ರಾಮಾಣಿಕವಾಗಿ ಹಂಬಲಿಸುವ ಬೇರೆ ಯಾರಿಗೇ ಆದರೂ ಮಾರ್ಗದರ್ಶನ ನೀಡಲು ನಾನು ಸಿದ್ಧನಿದ್ದೇನೆ. ನನ್ನ ಗುರುಗಳು ನನ್ನಲ್ಲಿ ಒಂದು ನಿಕ್ಷೇಪದಂತೆ ಇಟ್ಟಿರುವ ಆಧ್ಯಾತ್ಮಿಕ ಸಂಪತ್ತು, ನಿಮ್ಮೆಲ್ಲರಿಗೆ ಹಂಚುವುದಕ್ಕೋಸ್ಕರವೇ ಉಂಟು. ದಯವಿಟ್ಟು ನನ್ನಿಂದ ಅದನ್ನು ನೀವು ಕಿತ್ತುಕೊಳ್ಳಿರಿ…”. ಗುರುಗಳು (ನನ್ನಲ್ಲಿಯ) ಸ್ಥೂಲತೆಯನ್ನು ತೆಗೆದು ಹಾಕಲು ಅದಾಗಲೇ ಪ್ರಯತ್ನಿಸುತ್ತಿದ್ದರು, ಮತ್ತು ತಮ್ಮನ್ನು ತಾವು ಪ್ರಕಾಶಪಡಿಸಿದ್ದರು. ಆದರೆ ನಾನು ಒಂದು ಬಾವಲಿಯಂತೆ ಕುರುಡನಾಗಿದ್ದೆ. 

ಯೋಗದ ಕುರಿತಾದ ಬೇರೆ ಗ್ರಂಥಗಳಿಗಿಂತ ವಿಭಿನ್ನನಾಗಿ, ಗುರುಗಳ ಗ್ರಂಥಗಳಲ್ಲಿ ಯೋಗದ ಅನುಭವಗಳ ಮೌಲಿಕ ನಿರೂಪಣೆಗಳನ್ನು ನಾನು ಕಂಡೆ. ತಮ್ಮ ಗ್ರಂಥಗಳಲ್ಲಿ, ತಾವು ಪ್ರತ್ಯಕ್ಷ ಅನುಭವದಲ್ಲಿ ಕಂಡದ್ದನ್ನು ವ್ಯಕ್ತಪಡಿಸಲು ಪ್ರಯತ್ನಿಸಿದ ಅವರೊಬ್ಬ ನೈಜ ಸಿದ್ದಪುರುಷರೆಂಬುದು ನನಗೆ ನಿಶ್ಚಯವಾಯಿತು. ‘ಪ್ರಾಣಾಹುತಿ’ಯ ಕುರಿತ ವಿಷಯ ವಿವರಣೆಯು ನನಗೆ ಗಾಢವಾದ ಆಸಕ್ತಿ ಉಂಟುಮಾಡಿತು. ಅದರ ಸ್ವಾದವನ್ನು ಪ್ರತ್ಯಕ್ಷ, ಪ್ರಾಯೋಗಿಕವಾಗಿ ಪಡೆಯಲು ಬಯಸಿದೆ. ಗುರುಗಳೊಡನೆ ಸಾಧ್ಯವಿದ್ದಷ್ಟು ಸಹಕರಿಸಲು ನಾನು ನಿರ್ಧರಿಸಿದೆ. ಅವರನ್ನು ಭೌತಿಕವಾಗಿ ಕಾಣಬೇಕೆಂಬ ಪ್ರಬಲ ಇಚ್ಛೆ ನನ್ನಲ್ಲಿ ಬೆಳೆಯತೊಡಗಿತು. ಆ ಇಚ್ಛೆಯೊಂದಿಗೆ, ನನಗೆ ತೊಂದರೆ ಆ ಕೊಡುತ್ತಿದ್ದ ವಿಚಾರವೆಂದರೆ, ಅವರ ಆದೇಶಗಳನ್ನು ಅನುಸರಿಸುವ ಮೂಲಕ ಎಲ್ಲಿಯವರೆಗೆ ನಾನು ಅವರೊಂದಿಗೆ ಸಹಕರಿಸುವುದಿಲ್ಲವೋ, ಅಲ್ಲಿಯವರೆಗೆ ಅವರನ್ನು ಭೇಟಿಯಾಗುವುದು ನಿರುಪಯುಕ್ತವಾಗುವುದು; ಹಾಗೂ, ಅವರ ಪ್ರಾಣಾಹುತಿಯನ್ನು ಸ್ವೀಕರಿಸಲು ನನ್ನನ್ನು ನಾನು ಯೋಗ್ಯನನ್ನಾಗಿ ಮಾಡಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಅಧ್ಯಾತ್ಮದ ಪ್ರಾಯೋಗಿಕ ಕ್ಷೇತ್ರದಲ್ಲಿ ನನಗೆ ಅವರಿಂದ ಯಾವ ಪ್ರಯೋಜನವೂ ಆಗದು. ವಾಸ್ತವಿಕವಾಗಿ, ಗುರುಗಳ ಊರಿಗೆ ಮೇ/ಜೂನ್ 1955 ರಲ್ಲಿ ಹೋಗಬೇಕೆಂಬ ನನ್ನ ಉದ್ದೇಶವನ್ನು ತಿಳಿಸಿದ್ದೆನಾದರೂ, ಈ ಮೇಲೆ ಹೇಳಿದ ಸಂದೇಹಗಳು ಹಾಗೂ ಕೆಲವು ಶಾರೀರಿಕ ಕಷ್ಟಗಳ ಕಾರಣಗಳು ನನ್ನನ್ನು ಪ್ರಯಾಣ ಮಾಡದಂತೆ ತಡೆಹಿಡಿದವು. ಅವರನ್ನು ಕಾಣುವುದರಲ್ಲಿ ನನಗಿರುವ ತೊಂದರೆಗಳನ್ನು ನನಗೆ ಅವರು ಅರಿವು ಮಾಡಿಕೊಡುತ್ತಿದ್ದರು. ಹಾಗೂ ಅವುಗಳನ್ನು ನಿವಾರಿಸುತ್ತಿದ್ದರು ಕೂಡ. 

ನಾನು ಮೌನವಾಗಿ ಹಾಗೂ ಮನಃಪೂರ್ವಕವಾಗಿ  ಪ್ರಾರ್ಥಿಸಲು ಪ್ರಾರಂಭಿಸಿದೆ ಹಗಲು, ರಾತ್ರಿ, ತಿಂಗಳುಗಟ್ಟಲೆ ನಾನು ಅವರನ್ನು ಕುರಿತು ಯೋಚಿಸುತ್ತಿದ್ದೆ. ಆಗ, ಒಮ್ಮೆಲೇ ಅವರ ಪ್ರಾಣಾಹುತಿ ನನ್ನಲ್ಲಿ ಪವಾಡ ಮಾಡತೊಡಗಿತು. ನಾನು ನನ್ನ ಆಧ್ಯಾತ್ಮಿಕ ಅನುಭವಗಳ ಬಗ್ಗೆ ಹಾಗೂ ಗುರುಗಳ ಆದೇಶದಂತೆ ಸಾಧನೆ ಕೈಗೊಳ್ಳಲು ಮಾಡಿದ ಉದ್ವಿಗ್ನ ಪ್ರಯತ್ನಗಳ ಬಗ್ಗೆ ಬರೆದರೆ, ಈ ಲೇಖನ ಬಹಳ ದೀರ್ಘವಾಗುವುದು ಹಾಗೂ ಅಪ್ರಸ್ತುತವಾಗುವುದೆಂಬ ಅಳಕು ನನಗುಂಟು. ಅಂತೂ ಕೊನೆಗೆ ಅಕ್ಟೋಬರ್ 1955ರ ಒಂದು ಶುಭದಿನದಂದು, ನಾನು ನಿಃಶಬ್ದವಾಗಿ ಹಾಗೂ ಯಾವ ಸೂಚನೆಯೂ ಇಲ್ಲದೆ, ಷಾಹಜಹಾನಪುರದಲ್ಲಿರುವ ಗುರುಗಳ ಮನೆಗೆ ತಲುಪಿದೆ. ಅವರು ನನ್ನ ಮೇಲೆ ಬಹಳ ಕನಿಕರಪಟ್ಟು ನನ್ನನ್ನು ಸಂಪೂರ್ಣವಾಗಿ ಪರಿವರ್ತಿಸುವ ಕಾರ್ಯ ಕೈಗೊಂಡರು. ನನ್ನೊಡನೆ ನನ್ನ ಗುರುಗಳು ಇರುವುದನ್ನು ನಾನು ಕಂಡೆ, ಆದರೆ ನನ್ನ ಇಚ್ಛೆಗಳ ನೆಲೆಗಟ್ಟಿನ ಮೇಲೆ ನಿರ್ಮಿತವಾದ ನನ್ನ ಪರಿಮಿತಿಗಳು ಅವರನ್ನೂ ನನ್ನ ಪ್ರಿಯ ಬಾಬೂಜಿ ಎಂಬ ಮಟ್ಟಿಗೆ, ಮಾನವ ರೂಪಕ್ಕೆ ಸೀಮಿತಗೊಳಿಸಿದವು. 

ನನ್ನ ಆಧ್ಯಾತ್ಮಿಕ ಅನುಭವಗಳ ತೀವ್ರತೆ ಮತ್ತು ಅವರ ಪ್ರಾಣಾಹುತಿಯಿಂದ ನನ್ನ ವ್ಯಕ್ತಿತ್ವದಲ್ಲಾದ ಶೀಘ್ರ ಪರಿವರ್ತನೆಗಳ ಹೊರತಾಗಿಯೂ, ಅವರನ್ನು ಬುದ್ಧಿಪೂರ್ವಕವಾಗಿ ಮನಸಾರೆ ನನ್ನ ಗುರುವೆಂದು ಅಂಗೀಕರಿಸಲು ನನಗೆ ಸುಮಾರು ಆರು ತಿಂಗಳ  ಕಾಲ ಬೇಕಾಯಿತು. ಗುರುಗಳು ನನ್ನಲ್ಲಿ ಬಂದಿದ್ದರು, ಆದರೂ ನನ್ನ ಪ್ರತಿಷ್ಠೆ ಹಾಗೂ ವೃಥಾಭಿಮಾನಗಳ ಆವರಣಗಳು ಅವರು ಇರುವಂತೆ ಅವರನ್ನು ದರ್ಶಿಸಲು ನನ್ನನ್ನು ತಡೆಹಿಡಿದಿದ್ದವು. ಗುರುಗಳು ಸದಾ ನನ್ನೊಂದಿಗಿದ್ದಾರೆ; ಆದರೆ ಅವರು ಅದೆಷ್ಟು ನಿರಾಡಂಬರ 

ಹಾಗೂ ಸರಳರಾಗಿದ್ದಾರೆಂದರೆ  ಯಾರೂ ಅವರನ್ನು ಕಾಣಲಾಗುವುದಿಲ್ಲ ! ವಾಸ್ತವವಾಗಿ ಅವರ ಎಲ್ಲೆಡೆಗಳಲ್ಲಿಯೂ ವ್ಯಾಪಿಸಿದ್ದಾರೆ. ನಿಜವಾಗಿ ಅವರು ಪ್ರತಿಯೊಬ್ಬರ ಅಳವಿನಲ್ಲಿಯೂ ಸಿಗಬಲ್ಲರು. ಆದರೆ, ಜನರು, ಅವರನ್ನು ನಿಜಕ್ಕೂ ಹೊಂದ ಬಯಸುವುದಿಲ್ಲ. ಅವರು ಅಗಮ್ಯರೆಂಬ ವಿಚಾರದಿಂದ, ತಮ್ಮನ್ನು ದೂರವಿರಿಸಿಕೊಳ್ಳುತ್ತಾರೆ. ಹಾಗೂ, ಅವರನ್ನು ಹೊಂದಲು ಯತ್ನಿಸುವ ಬದಲಿಗೆ, ತಮ್ಮದೇ ರಂಜನೆಗಳಲ್ಲಿ ಸಿಕ್ಕಿಬೀಳುತ್ತಾರೆ. ಒಬ್ಬ ಉರ್ದು 

ಕವಿ ಹೇಳುವಂತೆ 

ಥಕ್ ಥಕ್ ಕೆ ರಹಗಯೇ ಮಂಜಿಲ್ ಪೇ ದೋಚಾರ್ |

ತೇರಾ ಪತಾ ನ ಲಗಾ, ಕರೇ ಕ್ಯಾ ಲಾಚಾರ್ |

“ಪ್ರತಿಯೊಂದು ಹಂತದಲ್ಲಿಯೂ ಕೆಲವರು ದಣಿದು ಕೈಚೆಲ್ಲಿಬಿಟ್ಟು ಉಳಿದುಬಿಡುತ್ತಾರೆ; ನಿನ್ನ ಸುಳಿವು ಸಿಗದೆ ಹೋಯಿತು ಅವರಿಗೆ, ಆ ಬಡಪಾಯಿಗಳು ತಾನೆ ಏನು ಮಾಡಿಯಾರು?” 

ನಮ್ಮ ಆಧ್ಯಾತ್ಮಿಕ ಯಾತ್ರೆಯಲ್ಲಿ ನಾವು ಎಲ್ಲಿಯೂ ಸ್ಥಗಿತಗೊಳ್ಳದಂತಾಗುವ ನಿರಂತರ ಎಚ್ಚರವನ್ನು ಗುರುಗಳು ದಯಪಾಲಿಸಲಿ. ನಾವು ನಿರಂತರ ಮುಂದುವರಿಯುತ್ತಲೇ ಇರುವಂತೆ  ಮಾಡಲಿ. 

[ಫತೇಹಗಡದ ಶ್ರೀರಾಮಚಂದ್ರಜಿಯವರ ಜನ್ಮಶತಮಾನೋತ್ಸವದ ಸ್ಮರಣ ಸಂಚಿಕೆ, 1973]

ನೈಜ ಭಕ್ತಿಯು ಇಂದ್ರಿಯಗಳಿಗೆ ಸಂಬಂಧಿಸಿದ ಯಾವುದೇ ಶಾರೀರಿಕ ಇಚ್ಛೆಯಿಂದ ಮುಕ್ತವಾಗಿರುವುದು; ಅದು ನಿಜವಾದ ತಳಮಳದಿಂದ ಪ್ರೇರೇಪಿಸಲ್ಪಡುವುದು. ಈ ತಳಮಳವು ಶಾಂತವಾದಾಗ, ಅದರ ಸ್ಥಳದಲ್ಲಿ ಇನ್ನೊಂದು ತಳಮಳಕ್ಕೆ ಎಡೆ ನೀಡದು. ಬದಲಿಗೆ ಎಲ್ಲ ತಳಮಳಗಳನ್ನು ಕೊನೆಗೊಳಿಸುವುದು.