ಈ ಶತಮಾನದಲ್ಲಿ ನಾವು ಕಂಡ ಸಾಮಾಜಿಕ, ರಾಜಕೀಯ ಹಾಗೂ ಭೌಗೋಲಿಕ ಪರಿವರ್ತನೆಗಳೂ ಕೂಡ ಅದೆಷ್ಟು ತ್ವರಿತಗತಿಯವು ಹಾಗೂ ಬೃಹತ್ ಪ್ರಮಾಣದವುಗಳೆಂದರೆ, ಈ ಪರಿವರ್ತನೆಗಳ ಭೌತಿಕ ಕಾರಣಗಳನ್ನು ಕಂಡುಹಿಡಿಯಲು ಮನಸ್ಸು ಪ್ರಯತ್ನಪಟ್ಟರೆ, `ಅದು ದಿಗ್ಧಮೆಗೊಳ್ಳುವುದು. ಇಂದ್ರಿಯಗಳು ಯಾವಾಗಲೂ ಬಹಿರ್ಮುಖವಾಗಿರುವವರಿಗೆ, ಭೌತವಿಜ್ಞಾನಗಳ ಹಾಗೂ ತಂತ್ರಜ್ಞಾನದ ಅದ್ಭುತ ಪ್ರಗತಿಯ ಹೊರತಾಗಿಯೂ, ಈ ಎಲ್ಲ ಪರಿವರ್ತನೆಗಳನ್ನುಂಟು ಮಾಡುವ ಪ್ರಚಂಡ ಸಂಕಲ್ಪಶಕ್ತಿಯು ಇನ್ನೂ ರಹಸ್ಯವಾಗಿಯೇ ಉಳಿದಿರುವುದು.
ಕೆಲವು ಬದಲಾವಣೆಗಳನ್ನುಂಟು ಮಾಡಲು ಸಂಕಲ್ಪ ಮಾಡುವುದು ಸುಲಭವಾಗಿರಬಹುದು. ಆದರೆ ಆ ಸಂಕಲ್ಪವನ್ನು ಶಕ್ತಿಯುತವೂ ಪರಿಣಾಮಕಾರಿಯೂ ಹೇಗೆ ಮಾಡಬೇಕೆಂಬುದೇ ಪ್ರಶ್ನೆ, ಪ್ರತಿಯೊಬ್ಬನೂ ಅದಕ್ಕೆ ಉತ್ತರವನ್ನು ಬಯಸುತ್ತಾನೆ. ಪ್ರತಿಯೊಬ್ಬನೂ ಒಂದು ಉತ್ತರವನ್ನು ಕಂಡುಕೊಳ್ಳಬೇಕು. ಏಕೆಂದರೆ, ಅದು ವಾಸ್ತವ ಅನುಷ್ಠಾನದ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯವಾಗಿದೆ. ಹಾಗಿದ್ದಾಗ್ಯೂ, ಸಂಕಲ್ಪಶಕ್ತಿಯ ದುರ್ಬಲತೆಯನ್ನುಂಟು ಮಾಡುವ ಕಾರಣಗಳನ್ನು ಕಂಡುಹಿಡಿಯಲು ಕೆಲವು ಸೂಚಕಾಂಶಗಳನ್ನು ಸ್ಪಷ್ಟವಾಗಿ ನಿರೂಪಿಸಬಹುದು, ಅಂದರೆ, ಆ ಅಂಶಗಳನ್ನು ದೂರವಿಡುವ ಮೂಲಕ ಒಬ್ಬನು ತನ್ನ ವಿಚಾರಗಳನ್ನು ಯೋಗ್ಯ ದಿಶೆಯಲ್ಲಿ ಅಭಿಮುಖಗೊಳಿಸಬಹುದು. ಅದೇ ಸಮಯದಲ್ಲಿ ‘ಎಂದಿಗೂ ಚ್ಯುತಿಯಾಗದ’ ಸಂಕಲ್ಪದ ಅಸ್ತಿತ್ವದ ಬಗ್ಗೆ, ಒಂದು ಹಾನಿಕಾರಕವೆನಿಸದ, ಊಹೆಯನ್ನು ಕೂಡ ಮಾಡಬಹುದು, ಹಾಗೂ ಅದರೊಂದಿಗೆ ಜೋಡಿಸಿಕೊಂಡು (ಆ ಸಂಕಲ್ಪದೊಂದಿಗೆ) ಸಾಧಕನು ಆ ನಿಗೂಢ ಶಕ್ತಿಯನ್ನು ಅನುಭವಿಸಬಹುದು.
ಮನುಷ್ಯನು ತನ್ನ ಹೃದಯದಲ್ಲಿ ಅಸಂಖ್ಯ ಇಚ್ಛೆಗಳನ್ನು ಸೃಷ್ಟಿಸುವುದರಲ್ಲಿಯೇ ಮಗ್ನನಾಗಿರುತ್ತಾನೆ. ವಾಸ್ತವವಾಗಿ, ಅವನು ತನ್ನ ಇಚ್ಛೆ (ಬಯಕೆ)ಗಳ ಪರಿಶೀಲನೆ ತಾನೇ ಮಾಡಿಕೊಂಡರೆ, ಅವುಗಳಲ್ಲಿ ಅನೇಕ ವಿರೋಧಾಭಾಸಗಳನ್ನು ಹಾಗೂ ತಿಕ್ಕಾಟಗಳನ್ನು ಕಂಡು ಚಕಿತನಾಗುತ್ತಾನೆ. ತನ್ನ ಒಂದು ಇಚ್ಛೆಯನ್ನೂ ಪರೀಕ್ಷಿಸಲು ನಿಲ್ಲದೆ ಇಚ್ಛೆಗಳನ್ನು ಪೂರ್ತಿಗೊಳಿಸಲು ಯೋಜನೆಗಳನ್ನು ಮಾಡುತ್ತ ಪ್ರಯತ್ನಿಸುತ್ತ ಹೋಗುತ್ತಾನೆ. ಒಂದು ಇಚ್ಛೆ ಪೂರ್ತಿಯಾದರೆ ಅವನು ಅದಕ್ಕೆ ಸಂತೋಷಪಡುತ್ತಾನೆ, ಮತ್ತು ಮರುಕ್ಷಣದಲ್ಲಿ ಆ ಇಚ್ಛಾಪೂರ್ತಿಗಾಗಿಯೇ ಅವನು ವಿಷಾದಪಡುತ್ತಾನೆ ಮತ್ತು ದುಃಖ ಅನುಭವಿಸುತ್ತಾನೆ. ಇಚ್ಛಾಪೂರ್ತಿಯಾಗದಿದ್ದರೆ, ಕೋಪಗೊಳ್ಳುತ್ತಾನೆ. ಹಾಗೂ ತನ್ನ ಸಿಟ್ಟಿನ ಭರದಲ್ಲಿ ಅತ್ಯಂತ ಮೂರ್ಖತನದ ಹಾಗೂ ಸಮಾಜವಿರೋಧಿ ಚಟುವಟಿಕೆಯಲ್ಲಿ ತೊಡಗಬಹುದು. ಅದಕ್ಕೆ ಮತ್ತೆ ಅವನು ವಿಷಾದಪಡಬಹುದು, ಇಲ್ಲವಾದರೆ ಅವನ ಇಚ್ಛಾಪೂರ್ತಿಯ ಚಟುವಟಿಕೆಗಳು ಅವನಿಗೆ ಪರಿಣಾಮದಲ್ಲಿ ಶಾರೀರಿಕ ಹಾಗೂ ಮಾನಸಿಕ ನೋವು ಮತ್ತು ಕಷ್ಟಗಳನ್ನು ತರಬಹುದು. ಹೀಗೆ, ಮನುಷ್ಯನ ಸಂಕಲ್ಪಶಕ್ತಿಯನ್ನು ದುರ್ಬಲಗೊಳಿಸುವುದರ ಮೂಲ ಕಾರಣವು ಅವನ ಶಕ್ತಿಗಳನ್ನು ಹರಣ ಮಾಡುವಂತಹ ಅವನದೇ ಇಚ್ಛೆಗಳಿಗೆ ದಾಸನಾಗುವುದೇ ಆಗಿದೆಯೆಂದು ಕಂಡುಬರಬಹುದು.
ಈಗ ನಾವು ಮನುಷ್ಯನನ್ನು ತನ್ನದೇ ಇಚ್ಛೆಗಳ ದಾಸನನ್ನಾಗಿ ಮಾಡುವುದರ ಕಾರಣಗಳನ್ನು ಪರಿಶೀಲಿಸೋಣ. ಸುಖ, ದುಃಖಗಳ ಬಗೆಗಿನ ಅವನ ಸಾಮಾನ್ಯ ಜ್ಞಾನದಿಂದ ಇಚ್ಛೆಗಳು ಹುಟ್ಟುವಂತೆ ಕಾಣುವವು. ತನ್ನ ವೃಥಾಭಿಮಾನದಿಂದಾಗಿ ಮನುಷ್ಯನು ತನ್ನ ಮೆಚ್ಚಿನ ಭಾವನೆ ಹಾಗೂ ಕಲ್ಪನೆಗಳ ಬಗ್ಗೆ ಎಂದಿಗೂ ಗಂಭೀರವಾಗಿ ಪ್ರಶ್ನಿಸುವುದಿಲ್ಲ. ಕೆಲವು ವಸ್ತುಗಳ ಪ್ರಾಪ್ತಿ ಅಥವಾ ಕೆಲವನ್ನು ದೂರವಿಡುವುದರಿಂದ ಮನುಷ್ಯನು ತಾನು ಸುಖಿ ಅಥವಾ ದುಃಖಿಯಾಗುವೆನೆಂದು ತಿಳಿಯುತ್ತಾನೆ ಅಥವಾ ಹಾಗೆ ಭಾವಿಸುತ್ತಾನೆ. ಈ ಕಲ್ಪನೆಗಳನ್ನು ಬೆಳೆಸಿಕೊಳ್ಳುವುದರಲ್ಲಿ ಬಾಹ್ಯ ವಸ್ತುಗಳ ಅಥವಾ ಪ್ರಚೋದನೆಗಳ ಬಗ್ಗೆ ಅವನ ಇಂದ್ರಿಯಗಳು ತಂದ ವರದಿಗಳಿಂದ ಕೊಚ್ಚಿ ಹೋಗುತ್ತಾನೆ ಅಥವಾ ಅತೀವ ಪ್ರಭಾವಿತನಾಗುತ್ತಾನೆ. ಇಂದ್ರಿಯಗಳು ತಮ್ಮ ತಮ್ಮ ವಿಷಯ-ವಸ್ತುಗಳಲ್ಲಿ ಸುಖಾನುಭವ ಅಥವಾ ದುಃಖಾನುಭವದಲ್ಲಿ ಮನಃಪುನಃ (ಮತ್ತೆ ಮತ್ತೆ) ತೊಡಗಿಕೊಳ್ಳುವುದರಿಂದ ಆಳವಾದ ಸಂಸ್ಕಾರಗಳುಂಟಾಗುತ್ತವೆ. ರೂಪುಗೊಳ್ಳುತ್ತವೆ ಹಾಗೂ ಹೃದಯ ಮತ್ತು ಮನಸ್ಸಿನಲ್ಲಿ ಶೇಖರವಾಗುತ್ತವೆ. ಹೀಗೆ, ಅವನ ಅಂತಃಸತ್ತ್ವ(ಸತ್ತೆ)ವು ಸಂಪೂರ್ಣವಾಗಿ ಅವನದೇ ಇಚ್ಛೆಗಳ ಹಾಗೂ ಸಂಸ್ಕಾರಗಳ ಜಟಿಲ ಜಾಲದಲ್ಲಿ ಆವೃತವಾಗುತ್ತವೆ.
ಆದ್ದರಿಂದ ಮಾನವನು ತನ್ನದೇ ಇಚ್ಛೆಗಳ ಬಂಧನಗಳು ಮತ್ತು ಆಳವಾದ ಸಂಸ್ಕಾರಗಳಿಂದ ಹೇಗಾದರೂ ಮುಕ್ತನಾಗಬಲ್ಲನಾದರೆ ತಾನು ಕಳೆದುಕೊಂಡ ಸಂಕಲ್ಪಶಕ್ತಿಯನ್ನು ಬಹುಮಟ್ಟಿಗೆ ಮರಳಿ ಪಡೆಯಬಹುದು. ಆದರೆ ಅವನು ತನ್ನ ಮೊದಲಿನ ದಾಸ್ಯಕ್ಕೆ ಜಾರದಂತೆ ಇನ್ನೂ ಪ್ರಬಲ ಸಂಕಲ್ಪಶಕ್ತಿಯನ್ನು ಪಡೆಯಬೇಕಾಗುತ್ತದೆ. ಏಕೆಂದರೆ ಇಂದ್ರಿಯ-ವಿಷಯ(ವಸ್ತು)ಗಳೊಂದಿಗೆ ಇರುವ ಇಂದ್ರಿಯಾಸಕ್ತಿಯು ನಿರ್ಲಕ್ಷಿಸಲು ಬಾರದಷ್ಟು ಪ್ರಬಲವಾಗಿರುವುದರಿಂದ, ಯಾವ ಅಂತಿಮ ಶಕ್ತಿಯ ಅಸ್ತಿತ್ವವನ್ನು ಈಗಾಗಲೇ ಊಹಿಸಲಾಗಿದೆಯೋ, ಆ ಗೂಢ ಶಕ್ತಿ-ಮೂಲವನ್ನು ಬಳಸಿಕೊಳ್ಳುವುದು ಆವಶ್ಯಕವಾಗುವುದು.
ತನ್ನ ಜಾಲವನ್ನು ಧ್ವಂಸ ಮಾಡಿಕೊಂಡಿರುವ ಹಾಗೂ ಅಂತಿಮ(ಪರಮ)ಶಕ್ತಿಯೊಂದಿಗೆ ತನ್ನನ್ನು ಜೋಡಿಸಿಕೊಂಡವನ ಸಹಾಯವು ಅಪಾರವಾಗಿ ಅಪಾರವಾಗಿ ಉಪಯುಕ್ತವಾಗಬಲ್ಲುದು, ವಾಸ್ತವಿಕವಾಗಿ ಯೋಗ್ಯ ಮಾರ್ಗದರ್ಶನ ಮತ್ತು ಬೆಂಬಲಕ್ಕೆ ಅದು ಅನಿವಾರ್ಯವಾಗಿದೆ. ಆ ಸ್ಥಿತಿಯಲ್ಲಿ ಜಿಜ್ಞಾಸುವಿಗೆ ತನ್ನನ್ನು ತಾನು ಇಂತಹ ಪರಿಪೂರ್ಣ ಮಾರ್ಗದರ್ಶಕನೊಂದಿಗೆ ಜೋಡಿಸಿಕೊಳ್ಳಲು ಮತ್ತು ದೈವೀಕೃಪೆ ಅಥವಾ ಶಕ್ತಿಯ ಭಂಡಾರದಿಂದ ಲಾಭ ಪಡೆಯಲು ಬಹಳ ಸುಲಭವಾಗುವುದು. ಅಂತಹ ಮಾರ್ಗದರ್ಶಕನು ಜಿಜ್ಞಾಸುವನ್ನು ಮೇಲಕ್ಕೆತ್ತಲು ಹಾಗೂ ಅವನನ್ನು ಅಂತಿಮ ಮೂಲದೊಂದಿಗೆ ಜೋಡಿಸಲು ಗುರುವೂ ಹಾಗೂ ಶಕ್ತಿಯೂ ಏಕಕಾಲದಲ್ಲಿ ಆಗುತ್ತಾನೆ. ಗುರುವಿನ ಪ್ರಾಣಾಹುತಿ ಶಕ್ತಿಯಿಂದ ಜಿಜ್ಞಾಸುವಿನ ಆಂತರಿಕ ಜಾಲವು ಶಿಥಿಲಗೊಳಿಸಲ್ಪಡುವುದು ಮತ್ತು ಎಳ್ಳಷ್ಟೂ ನೋವಿಲ್ಲದೆ ಮತ್ತು ಪ್ರಯತ್ನ ಕೂಡ ಇಲ್ಲದೆ ಧ್ವಂಸಗೊಳಿಸಲ್ಪಡುವುದು.
ತನ್ನ ಸ್ವಂತದ ತೊಡಕಿನ ಜಾಲವನ್ನು ಧ್ವಂಸ ಮಾಡಿಕೊಂಡ ಅಂತಿಮ ಶಕ್ತಿಯೊಂದಿಗೆ ತನ್ನನ್ನು ಜೋಡಿಸಿಕೊಂಡವನ ಸಂಕಲ್ಪಶಕ್ತಿಯು ಎಂದಿಗೂ ಚ್ಯುತಿಯಾಗದಷ್ಟು ಬಲವುಳ್ಳದ್ದಾಗುತ್ತದೆ. ಅದೇ ಸಮಯದಲ್ಲಿ ಅವನ ವೈಯಕ್ತಿಕ ಜಾಲವು ಧ್ವಂಸಗೊಂಡಾಗ ಅವನು ವಿಶ್ವಾತ್ಮನೊಂದಿಗೆ ಒಂದಾಗುತ್ತಾನೆ. ಅಥವಾ ಲಯವಾಗುತ್ತಾನೆ. ಅವನ ಸಂಕಲ್ಪವು ಕೇವಲ ವೈಶ್ವಿಕ ಶಕ್ತಿಗೆ ವಿಧೇಯವಾಗಿ ಕಾರ್ಯಗೈಯುವುದು. ಆಗ ವಿಶ್ವದಲ್ಲಿ ಯಾವುದೇ ಬದಲಾವಣೆಯನ್ನು ತರಲು ನಿಸರ್ಗದ ಭಂಡಾರದಿಂದ ವಿಶೇಷ ಶಕ್ತಿಯನ್ನು ಬಳಸಲು ಅವನು ಸ್ವತಂತ್ರನಿರುತ್ತಾನೆ. ಇಂತಹ ವಿಭೂತಿ ಪುರುಷನು, ಇಂತಹ ವಿಶೇಷ ಸಂಕಲ್ಪಶಕ್ತಿಯ ಮೇಲೆ ಪ್ರಭುತ್ವ ಹೊಂದಿದ್ದು, ನಿಸರ್ಗಕ್ಕೆ ಅವನ ತೀವ್ರ ಆವಶ್ಯಕತೆಯಿರುವಾಗ ಮಾತ್ರವೇ, ಅತ್ಯಂತ ಕ್ವಚಿತ್ತಾಗಿ ಈ ಜಗತ್ತಿನಲ್ಲಿ ಬರುತ್ತಾನೆ.
ವಾಸ್ತವಿಕವಾಗಿ ವಿಭೂತಿ ಪುರುಷನು ಈಗಾಗಲೇ ಬಂದಿದ್ದಾನೆ ಹಾಗೂ ಅವನು ನಿಸರ್ಗದಲ್ಲಿ ಆವಶ್ಯಕ ಬದಲಾವಣೆಗಳನ್ನು ನೆರವೇರಿಸುತ್ತಿದ್ದಾನೆಂದು ಗುರುಗಳು ಬರೆದಿದ್ದಾರೆ. ಈಗ, ಅವನ ದೈವೀ ಲೀಲೆಯಲ್ಲಿ ಪೂರ್ಣರೂಪದಲ್ಲಿ ಪಾಲುಗೊಳ್ಳಲು, ನಿಸರ್ಗಕ್ಕೆ ಅನುಗುಣವಾಗಿ ನಮ್ಮ ಶಕ್ತಿಯನ್ನು ಬಳಸಿ ಅವನೊಂದಿಗೆ ಜೋಡಿಸಿಕೊಳ್ಳುವುದು ನಮಗೆ ಬಿಟ್ಟದ್ದಾಗಿದೆ.
[ಷಾಹಜಹಾನಪುರದ ಶ್ರೀರಾಮಚಂದ್ರಜಿ ಮಹಾರಾಜರ 75ನೆಯ ಜನ್ಮದಿನಾಚರಣೆಯ ಸ್ಮರಣ ಸಂಚಿಕೆಯಿಂದ, ಅಕ್ಟೋಬರ್ 24, 1974, ಹೈದರಾಬಾದ.]