ಸುಮಾರು 2500 ವರ್ಷಗಳ ಹಿಂದೆ ಗೌತಮ ಬುದ್ದನೆಂಬ ಒಬ್ಬ ಮಹಾ ವ್ಯಕ್ತಿಯು. ಈ ಭೌತಿಕ ಜೀವನದ ಕಷ್ಟಗಳಿಂದ ಮಾನವರು ಮುಕ್ತರಾಗಿ ನಿರ್ವಾಣ ಹೊಂದಲು ಸಾಧನಗಳಾಗುವ ಅನುಷ್ಠಾನದ ಬಗ್ಗೆ ಬೋಧಿಸಿದನೆಂದು ಇತಿಹಾಸಕಾರರು ನಮಗೆ ಹೇಳುತ್ತಾರೆ. ಈಗಲೂ ಅವೇ ದುಃಖಗಳನ್ನು ಅನುಭವಿಸುತ್ತಿರುವ, ಆದರೂ ನಿರ್ಮಾಣಕ್ಕಾಗಿ ಇನ್ನೂ ಆಶಿಸುತ್ತಿರುವ ಅನೇಕ ಬಗೆಯ ಬೌದ್ಧ ಧರ್ಮಪಂಥಗಳಿಗೆ ಸೇರಿದ ಬಹು ಬಗೆಯ ಬೌದ್ಧರನ್ನು ನಾವು ಕಾಣುತ್ತೇವೆ.
ಸುಮಾರು 2000 ವರ್ಷಗಳ ಹಿಂದೆ ಜೀಸಸ್ ಕ್ರೈಸ್ತನೆಂಬ ಮತ್ತೊಬ್ಬ ಮಹಾವ್ಯಕ್ತಿಯು, ಮೋಕ್ಷವನ್ನು ಪಡೆಯುವ ಮತ್ತು ದೇವರ ಸಾಮ್ರಾಜ್ಯದಲ್ಲಿ ಪ್ರವೇಶ ಪಡೆಯಬಹುದಾದ ಜೀವನ ವಿಧಾನದ ಬಗ್ಗೆ ಬೋಧಿಸಿದನು. ನಾವಿಂದು ಕ್ರಿಶ್ಚಿಯಾನಿಟಿಯ ಅನೇಕ ರೂಪಗಳನ್ನು ಮತ್ತು ಅನೇಕ ಪ್ರಕಾರದ ಕ್ರಿಶ್ಚಿಯನ್ನರನ್ನು ಕಾಣುತ್ತೇವೆ; ಅವರಲ್ಲಿ ಬಹುತೇಕ ಎಲ್ಲರೂ ಅದೇ ಒಂದೇ ಬಗೆಯ ಪಾಶವೀ ಪಿಪಾಸೆಯ (ದೈಹಿಕ) ಬಂಧನಗಳಿಂದ ಬಾಧೆ ಪಡುತ್ತಿರುವುದನ್ನು ಮತ್ತು ಆಸುರೀ ಪ್ರಭಾವ(ಪ್ರಭುತ್ವ)ದಡಿಯಲ್ಲಿ ಹೆಣಗಾಡುತ್ತಿರುವುದನ್ನು ಕಾಣುತ್ತೇವೆ.
ಇಸ್ಲಾಮ್ ಮತ್ತು ಇತರ ಬಗೆಯ ಧರ್ಮಗಳು ಮತ್ತು ಅವುಗಳ ಅನುಯಾಯಿಗಳ ಅವಸ್ಥೆಯೂ ಅದೇ ಬಗೆಯದಾಗಿದೆ, ಮತ್ತು ಲೌಕಿಕ (ಚಾರ್ವಾಕ) ವಿಚಾರಧಾರೆಗಳು ಮತ್ತು ತತ್ತ್ವ ಪಂಥಗಳಾದ ಮಾರ್ಕ್ಸಿಸಂ ಮತ್ತು ಡಾರ್ವಿನಿಸಂಗಳೂ ಕೂಡ ಅದೇ ತರಹದ ಮತಾಂಧತೆಗೀಡಾದ, ಶೋಚನೀಯವಾಗಿ ನರಳುತ್ತಿರುವ ಅನುಯಾಯಿಗಳ ಅದೃಷ್ಟಕ್ಕೆ ತಳ್ಳಲ್ಪಟ್ಟಿವೆ. ಮಾರ್ಕ್ಸಿಸ್ಟರು ತಮ್ಮ ವಿಚಾರ ಪಂಥವನ್ನು ಮತಧರ್ಮವೆಂದು ಕರೆಯದಿದ್ದರೂ, ಮುಂದಾಳುಗಳ ಮತ್ತು ಅಧಿಕಾರ ಸ್ಥಾನದಲ್ಲಿರುವವರ ಸ್ವಾರ್ಥ, ಲಾಲಸೆಗಳ ಮೇಲೆ ಆಧರಿತವಾದ ಮತಾಂಧತೆ, ಅಸಹಿಷ್ಣು ಅಂಧಾನುಕರಣೆಗಳಂತಹ, ಅವರ ಮತಧರ್ಮೀಯ ಲಕ್ಷಣಗಳ ಗುಟ್ಟು ಬಯಲಾಗಿದೆ.
ಭಾರತವು ತನ್ನ ಸಹಿಷ್ಣುತೆಯ ಮಹೋನ್ನತ ಮನೋಧರ್ಮಕ್ಕಾಗಿ ಎಲ್ಲಾ ಮತಧರ್ಮಗಳ, ಅಂತೆಯೇ ಮತನಿರಪೇಕ್ಷ (Secular) ಲೌಕಿಕ ವಿಚಾರ ಪಂಥಗಳ ಬಗ್ಗೆ ತೋರುವ ಉದಾರ ಆದರಾತಿಥ್ಯಕ್ಕಾಗಿ ಪ್ರಸಿದ್ಧಿ ಪಡೆದ ಮಹಾನ್ ದೇಶವಾಗಿದೆ. ಈ ಉದಾತ್ತ ಸದ್ಗುಣಗಳು ಅದರ ಸಮಗ್ರತೆ ಹಾಗೂ ಕೆಲವೊಮ್ಮೆ ಅದರ ಸಾರ್ವಭೌಮತ್ವ ಮತ್ತು ಸ್ವಾತಂತ್ರದ ಬೆಲೆ ತೆರುವಂತೆ ಮಾಡಿದುವಾದರೂ ಈಯೆಲ್ಲ ಅನಾಹುತಗಳನ್ನು ಮರೆತು, ಅದು ಈ ಸದ್ಗುಣಗಳನ್ನು ಮುಂದುವರಿಸುತ್ತಲೂ, ಅಷ್ಟೇ ಅಲ್ಲ, ಅವುಗಳನ್ನು ವೃದ್ಧಿಗೊಳಿಸಿಕೊಳ್ಳುತ್ತಲೂ ಇದೆ. ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ವಿಚಾರ ಸ್ವಾತಂತ್ರ್ಯಗಳ ಭರವಸೆಯುಳ್ಳ ಎಲ್ಲ ವಿಚಾರಧಾರೆಗಳು ಹಾಗೂ ಧರ್ಮಗಳ ವಿವಿಧ ಛಾಯೆಗಳು ಮತ್ತು ವರ್ಣಗಳನ್ನು ನಾವಿಲ್ಲಿ ಕಾಣಬಹುದು.
ಈ ಸ್ವಾತಂತ್ರ್ಯದ ಭಾವನೆಯಿಂದಾಗಿಯೇ ಬಡತನ, ವೃದ್ಧಾಪ್ಯ, ರೋಗ, ಮರಣಗಳೊಂದಿಗಿರುವ ಸಾಮಾನ್ಯ ಸಂಕಷ್ಟಗಳಿರುವುದರ ಹೊರತಾಗಿಯೂ ಈ ಮಹಾನ್ ದೇಶದಲ್ಲಿ ಜನ್ಮವೆತ್ತುವುದು ಒಂದು ವರ ಎಂದು ಪರಿಗಣಿಸಲಾಗಿದೆ. ಒಂದು ವಿಶಿಷ್ಟ ಧರ್ಮದಲ್ಲಿ ನಂಬುಗೆಯುಳ್ಳವನಾಗಿದ್ದು, ತನ್ನ ದೇವರ ಕಲ್ಪನೆಯನ್ನು ಅನ್ಯರು ನಂಬುವುದಿಲ್ಲವೆಂದು ಭಾವಿಸಿದ ಮಾತ್ರಕ್ಕೆ ತನ್ನ ಸಹಜೀವಿಗಳ ಹತ್ಯೆ ಮಾಡಲಾರಂಭಿಸುವನೋ, ಹಾಗೂ ಒಂದು ವಿಶಿಷ್ಟ ಸಾಮಾಜಿಕ ಸಿದ್ಧಾಂತ ಅಥವಾ ವಿಚಾರಧಾರೆಯಲ್ಲಿ ನಂಬಿಕೆಯುಳ್ಳವನು ತನ್ನ ವಿಚಾರಧಾರೆಯನ್ನು ‘ಕಾಪಾಡಿಕೊಳ್ಳಲು’ ಬೇರೆ ವಿಚಾರಧಾರೆಯುಳ್ಳವರನ್ನು ಕೊಲ್ಲತೊಡಗುವನೋ, ಅಥವಾ ಒಂದೇ ಧಾರ್ಮಿಕ ಶ್ರದ್ಧೆ ಹಾಗೂ ಸಾಮಾಜಿಕ ವಿಚಾರ ಪ್ರಣಾಲಿಗೆ ಸೇರಿದ ಎರಡು ಗುಂಪುಗಳು ಪರಸ್ಪರ ಯುದ್ಧ ಮಾಡಲು ಪ್ರಾರಂಭಿಸುವರೋ ಆಗ ಭಾರತೀಯ ಮನಸ್ಸು ದಿಗ್ಧಮೆಗೊಳ್ಳುತ್ತದೆ ಹಾಗೂ ಅವರ ಮತಧರ್ಮ ಮತ್ತು ಸಾಮಾಜಿಕ ವಿಚಾರ ಪ್ರಣಾಲಿಗಳ ಪ್ರಕಟ ಪ್ರತಿಪಾದನೆಗಳಲ್ಲಿ ನಂಬಿಕೆ ಇಡಲಾರದ್ದಾಗುತ್ತದೆ.
ಈ ಯುದ್ಧಗಳು ಸ್ವಹಿತಾಸಕ್ತಿ ಮತ್ತು ಸ್ವಾರ್ಥಪೂರಿತ ಆಸಕ್ತಿಯುಳ್ಳ ತಮ್ಮ ಪಕ್ಷ-ಪಂಗಡಗಳ ಉಳಿವಿಗಾಗಿ ನಡೆಯುತ್ತವೆ. ಎಂಬ ಸಾಮಾನ್ಯ ವ್ಯಾವಹಾರಿಕ ವಿವೇಕದ ಧೋರಣೆಯನ್ನು ಭಾರತೀಯ ಮನಸ್ಸು ತಳೆಯುತ್ತದೆ. ವಿಕಾಸ ಸೋಪಾನದಲ್ಲಿ ತಾವು ಇರುವ ಕೆಳಗಿನ ಮೆಟ್ಟಿಲುಗಳನ್ನು ಮತ್ತು ತಮ್ಮ ಪಾಶವೀಯತೆಯನ್ನು ಒಪ್ಪಿಕೊಳ್ಳಲು ಈ ಪಕ್ಷಗಳು ಲಜ್ಜೆ ಪಡುತ್ತ, ತಮ್ಮೊಳಗಿನ ಅನಾಗರಿಕ ಕ್ರೂರ ಪಶುವಿಗೆ ತಮ್ಮ ಕುಟಿಲ, ಆದರೆ ತೋರಿಕೆಗೆ ಸಮಂಜಸವೆನಿಸುವ ವಿಚಾರಧಾರೆಗಳ ಬಟ್ಟೆ ತೊಡಿಸಿ ಮರೆಮಾಡತೊಡಗುತ್ತಾರೆ. ಈ ಸಾಮೂಹಿಕ ಕೊಲೆ, ಯುದ್ಧಗಳಿಗೆ ಯಾವಾಗ ಇವೆಲ್ಲ ತಮ್ಮದೇ ಒಳಿತಿಗಾಗಿ ಎಂಬ ಭರವಸೆ ಕೊಡಲಾಗುವುದೋ ಆಗ ಅವು ಮತ್ತೂ ಹೆಚ್ಚು ಕ್ರೂರ ರೂಪ ತಾಳುತ್ತವೆ. ಪ್ರಾಣಿಬಲಿಯು ಭಾರತದಲ್ಲಿ ಪ್ರಚಲಿತವಿದ್ದಾಗ, ಆ ಬಲಿಪಶುವು ನೇರವಾಗಿ ಸ್ವರ್ಗಕ್ಕೆ ಹೋಗಿ ಸೇರುತ್ತವೆ ಎಂದು ಪುರೋಹಿತರು ಬೋಧಿಸುತ್ತಿದ್ದರು. ಇದು ನಿಜವಾಗಿಯೂ ಹಾಗಿದ್ದುದಾದರೆ, ನಾಸ್ತಿಕನೊಬ್ಬನು ಪುರೋಹಿತನಿಗೆ ತನ್ನ ತಂದೆಯನ್ನು ಬಲಿಕೊಡಲು ಸಲಹೆ ಮಾಡಿದರೆ ಆಶ್ಚರ್ಯವೇನಿಲ್ಲ.
ತತ್ತ್ವಜ್ಞಾನಿಗಳು ಸಮಸ್ಯೆಗಳನ್ನು ವಿಂಗಡಿಸಿ ವರ್ಗೀಕರಿಸಿ ಹಾಗೂ ವಿಶ್ಲೇಷಿಸಿ ತಮ್ಮ ಸಿದ್ಧಾಂತಗಳನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಾರೆ, ಮತ್ತು ಕೆಲವೊಮ್ಮೆ ಅವುಗಳಿಗೆ ಪರಿಹಾರಗಳನ್ನು ಸಲಹೆ ಮಾಡುತ್ತಾರೆ. ಹಾಗಿದ್ದಾಗ್ಯೂ ವ್ಯಕ್ತಿಗತ ಸಮಸ್ಯೆಗಳು ಸಮಾಜದ ಸಮಸ್ಯೆಯಷ್ಟೇ ಜಟಿಲವಾಗಿ ಉಳಿಯುತ್ತವೆ. ಅನುಭಾವಿಗಳು ಕೂಡ ಅದನ್ನು ಪರಿಹರಿಸಲು ಪ್ರಯತ್ನಿಸುವರು. ಆದರೆ ಏನನ್ನಾದರೂ ಮಾಡುವುದಕ್ಕಿಂತ ಮೊದಲೇ ಅವರು ತಮ್ಮ ಆನಂದಾತಿರೇಕ ಅಥವಾ ಭಾವೋನ್ಮಾದಗಳಲ್ಲಿ ಅಥವಾ ಕಾಲ್ಪನಿಕ ಭ್ರಮೆಗಳಲ್ಲಿ ಸಿಲುಕಿಬೀಳುತ್ತಾರೆ.
ಆದುದರಿಂದ, ಏನಾದರೂ ಹೊಸ ಪ್ರಯತ್ನಗಳನ್ನು ಯಾರಾದರೂ ಮಾಡಬಯಸಿದರೆ ಈಗಾಗಲೇ ಮಾನವ ಕುಲವು ಎದುರಿಸಿದ ಅಪಾಯದ ಬೀಳು-ಗುಂಡಿಗಳನ್ನು ತಪ್ಪಿಸಲು ಮತ್ತು ಆತ್ಯಂತಿಕ ತತ್ತ್ವವನ್ನು (ಸತ್ಯವನ್ನು) ಕುರಿತ ಅಥವಾ ಅನಂತದ ಕಡೆಗಿನ ಆದರ್ಶದ ತಮ್ಮ ದೃಷ್ಟಿಯನ್ನು ವಿಸ್ತರಿಸಲು ಯಾವುದೇ ಒಂದು ಬಿಂದುವಿನಲ್ಲಿ (ನೆಲೆಯಲ್ಲಿ) ಸ್ಥಗಿತನಾಗದೆ ಕ್ರಿಯಾಶೀಲನಾಗಿ ಉಳಿಯಲು ದೃಢ ನಿರ್ಧಾರ ಮಾಡಬೇಕು. ಮನುಷ್ಯನ ಚಿಂತನ ಶಕ್ತಿಯಲ್ಲಿ ಎಂತಹ ಅಗಾಧ ಸಾಮರ್ಥ್ಯ ಅಡಗಿದೆ ಎಂಬುದನ್ನು ತಂತ್ರಜ್ಞಾನದ ವಿಶಾಲ ಬೆಳವಣಿಗೆ ಮತ್ತು ಶಿಕ್ಷಣದ ಪ್ರಸಾರವು ಈಗಾಗಲೇ ಬಹುತೇಕ ಪ್ರತಿಯೊಬ್ಬನಿಗೂ ಮನವರಿಕೆ ಮಾಡಿಕೊಡಬೇಕಾಗಿತ್ತು. ಎಲ್ಲ ವಿಜ್ಞಾನಿಗಳು, ತತ್ತ್ವಶಾಸ್ತ್ರಗಳು, ಧರ್ಮಗಳು, ಆವಿಷ್ಕಾರಗಳು ಮತ್ತು ನವೀನ ಕಲ್ಪನೆಗಳ ಸೃಷ್ಟಿಗಳು ಮನುಷ್ಯನ ಚಿಂತನದ ಫಲಗಳೇ ಆಗಿವೆ.
ಆದ್ದರಿಂದ ಎಲ್ಲ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಯ ಪರಿಹಾರವು ಈ ಚಿಂತನ ಶಕ್ತಿಯ ಪ್ರಯೋಜನ ಪಡೆಯುವುದರಲ್ಲಿಯೇ ಇದೆ ಹಾಗೂ ಅದು ವ್ಯಕ್ತಿಯ ಸಂಕಲ್ಪ ಮತ್ತು ಪ್ರಯತ್ನಗಳನ್ನು ಅವಲಂಬಿಸಿದೆ. ಬುದ್ದಿಯನ್ನು ಮಂಕುಗೊಳಿಸಿ ಅಭಿಪ್ರಾಯ ಬದಲಿಸುವ ತಂತ್ರಗಳು, ಧಾರ್ಮಿಕ ಪೀಡನೆಗಳು, ತನಿಖೆಗೊಳಪಡಿಸುವುದು ಅಥವಾ ಮನವೊಲಿಸುವಿಕೆ, ಅಥವಾ ಆಮಿಷಗಳು ಕೂಡ, ಎಷ್ಟೇ ಇರಲಿ, ಅವು ಒಬ್ಬ ಮನುಷ್ಯನು ತನ್ನ ಸಂಕಲ್ಪ ಶಕ್ತಿಯಿಂದ ಕೆಲಸ ತೆಗೆದುಕೊಳ್ಳಲಾಗುವಂತೆ ಅವನನ್ನು ಸಿದ್ಧಗೊಳಿಸಲಾರವು. ಒಬ್ಬ ವ್ಯಕ್ತಿಯು ಸ್ವತಃ ಮನಃಪೂರ್ವಕವಾಗಿ ತನ್ನ ಬಂಧನಗಳನ್ನು ಹರಿದೊಗೆಯಲು, ಮತ್ತು ಮುಕ್ತನಾಗಲು ಸಂಕಲ್ಪ ಮಾಡಬೇಕು. ಆಗ ಮಾತ್ರವೇ ತನ್ನ ವಿಕಾಸ ಮತ್ತು ಉಚ್ಚತರ ಮಾನವೀಯ ಮತ್ತು ದೈವೀ ಸ್ತರಗಳತ್ತ ಪ್ರಗತಿ ಹೊಂದುವುದನ್ನು ಆಶಿಸಬಹುದು.
ಒಂದು ಉನ್ನತ ಶಕ್ತಿಯ ಸಹಾಯವು ತೀರ ಅಗತ್ಯ ಮತ್ತು ಅನಿವಾರ್ಯ ಎಂಬುದಂತೂ ನಿಜ. ಆದರೆ, ತೋರಿಕೆಗೆ ತನ್ನ ಹೊರಗಿನದು ಎಂದು ಕಂಡುಬರುವ ಶಕ್ತಿಯನ್ನು ಅಂತಿಮವಾಗಿ ತನ್ನೊಳಗೆ ಕಂಡುಕೊಳ್ಳಬೇಕಿದೆ; ಅದಕ್ಕೆ ಕೂಡ ಅದೇ ಉಚ್ಚ ಶಕ್ತಿ ಸಹಾಯ ಮಾಡುವುದು. ಇದೊಂದು ಕೇವಲ ಗೂಢ ಅಧ್ಯಾತ್ಮದ ರಹಸ್ಯವೆಂದಾಗಿರದೆ, ಒಂದು ಪ್ರಾಯೋಗಿಕ ಅನುಭವವೇದ್ಯ ವಾಸ್ತವವಾಗಿದೆ. ರಾಜಯೋಗದ ಅಭ್ಯಾಸದಲ್ಲಿ, ಸಹಜ ಮಾರ್ಗ ಪದ್ಧತಿಯ ಅನುಸಾರವಾಗಿ ಈ ಸಹಾಯವನ್ನು ಪ್ರಾಣಾಹುತಿಯ ಮೂಲಕ ನೀಡಲಾಗುತ್ತದೆ. ಯಾರಾದರೂ ಇದರ ಅನುಭವ ಪಡೆಯಲು ಇಚ್ಛಿಸುವವನಿದ್ದರೆ, ಶ್ರೀರಾಮಚಂದ್ರಮಿಷನ್ನಿನ ಪ್ರಶಿಕ್ಷಕರ ಬಳಿಗೆ ಹೋಗಿ, ಪ್ರಾಯೋಗಿಕವಾಗಿ ಪರೀಕ್ಷಿಸಬಹುದು.
ಒಬ್ಬನು ಅಭ್ಯಾಸ ಮಾಡಿದ ನಂತರ, ತನ್ನದೇ ವಿಚಾರ ಶಕ್ತಿಯನ್ನು ಬಳಸಲು ಪ್ರಾರಂಭಿಸಿದಾಗ, ವಾಸ್ತವವಾದ-ಆದರ್ಶವಾದ, ಸಂಸ್ಥೆ – ವ್ಯಕ್ತಿ, ಶುದ್ಧ ಅಜ್ಞಾನ – ಪರಮಾತ್ಮನ ಸಾಕ್ಷಾತ್ಕಾರ
ಇಂಥವೇ ಇನ್ನೂ ಅನೇಕ ವಿಷಯಗಳ ಸಮಸ್ಯೆಗಳು ಅತ್ಯಂತ ಸಹಜ ರೀತಿಯಲ್ಲಿ ಬಗೆಹರಿಸಲ್ಪಡುತ್ತವೆ. ಈ ಮೇಲೆ ಹೇಳಿದ ಮಿಷನ್ನಿನ ಸಂಸ್ಥಾಪಕ ಅಧ್ಯಕ್ಷರು ಈ ನವೀನ ಮಾರ್ಗವನ್ನು ಕಂಡು ಹಿಡಿದವರು. ಸ್ವಾರ್ಥದ ಲವಲೇಶವೂ ಇಲ್ಲದೆ ನಮಗೆ ಸಹಾಯ ನೀಡಲು ಅವರು ನಮ್ಮ ಮಧ್ಯದಲ್ಲಿದ್ದಾರೆಂಬುದು ನಮ್ಮ ಸುದೈವ.
ಎಲ್ಲ ಮುಮುಕ್ಷುಗಳೂ ಬೆಳಕನ್ನು ಕಾಣಲಿ, ಸ್ವಸ್ತಿ.
[ಸಹಜಮಾರ್ಗ ಪತ್ರಿಕೆ, ನವೆಂಬರ್ -1970]