ಕೆಲವು (ಧ್ಯಾನದ) ಬೈಠಕ್ಗಳನ್ನು ತೆಗೆದುಕೊಂಡ ಅಲ್ಪಸಮಯದಲ್ಲಿಯೇ ಅಭ್ಯಾಸಿಯು ತನ್ನ ಆಂತರಿಕ ಸ್ಥಿತಿಯ ಬಗ್ಗೆ ವಿಚಾರ ಮಾಡಲು ಪ್ರಾರಂಭಿಸುವನು. ಈ ಆಸಕ್ತಿಯುತ ವಿಚಾರವು ‘ಪ್ರಾಣಾಹುತಿಯ’ ಪ್ರಥಮ ಆರೋಗ್ಯಕಾರಿ ಪರಿಣಾಮವಾಗಿದೆ. ಅವನ ಆಂತರಿಕ ಜಡತೆಯು ಕೆಲಮಟ್ಟಿಗೆ ಯಾವಾಗ ತೆಗೆದುಹಾಕಲ್ಪಡುವುದೋ ಸೂಕ್ಷ್ಮ ಸ್ಥಿತಿಗಳ ಬಗ್ಗೆ ಹೆಚ್ಚು ಸುಲಭವಾಗಿ ಯೋಚಿಸಲು ಅವನು ಶಕ್ತನಾಗುತ್ತಾನೆ. ಅವನ ಆಂತರಿಕ ತೊಡಕುಗಳು ಕೆಲಮಟ್ಟಿಗೆ ನಿವಾರಿಸಲ್ಪಟ್ಟಾಗ ಅವನ ವಿಚಾರವು ಹೆಚ್ಚು ಸ್ಪಷ್ಟವಾಗಿಯೂ, ಧ್ಯೇಯಬದ್ಧನಾಗಿಯೂ ಆಗುವುದು.
ಕ್ರಮೇಣ, ಅಭ್ಯಾಸದಲ್ಲಿ ಅವನ ಆಸಕ್ತಿಯು ವೃದ್ಧಿಯಾಗುತ್ತ ಹೋಗುವುದು. ಗುರುವಿನಲ್ಲಿ ಅವನ ಪ್ರೇಮವು ಶೀಘ್ರವಾಗಿ ಬೆಳೆಯುವುದು. ಅವನು ಹೆಚ್ಚು ಹೆಚ್ಚು ಪ್ರಾಣಾಹುತಿಯನ್ನು ಪಡೆಯಲು ಬಯಸುವನು. ಅತ್ಯುನ್ನತ ಸ್ಥಿತಿಯನ್ನು ಪಡೆಯಬೇಕೆಂಬ ಅವನ ಉತ್ಕಾಟಾಕಾಂಕ್ಷೆಯು ಅವನಲ್ಲಿ ತಳಮಳವನ್ನು ಹುಟ್ಟಿಸುವುದು. ಹೃದಯದಲ್ಲಿ ಹೆಚ್ಚು ಜಡತೆ ಇದ್ದರೆ, ಅಭ್ಯಾಸಿಗೆ ಈ ತಳಮಳವು ರುಚಿಸದೆ ಹೋಗಿ ಅವನು ಅಭ್ಯಾಸವನ್ನು ಬಿಟ್ಟುಬಿಡಬಹುದು. ಹೃದಯದಲ್ಲಿ ಬಹಳ ಹೆಚ್ಚು ತೊಡಕುಗಳಿದ್ದರೆ, ಈ ತಳಮಳದಿಂದ ಪಾರಾಗಲು ಅವನು ಸ್ಥೂಲತರ ಪದ್ಧತಿಗಳ ಕಡೆಗೆ ಒಲಿಯಬಹುದು. ಇದರ ಬದಲಿಗೆ, ಅಭ್ಯಾಸಿಯು ಧೈರ್ಯಶಾಲಿಯಾಗಿದ್ದರೆ ಹಾಗೂ ಸಹಜಮಾರ್ಗ ಪದ್ಧತಿಯಲ್ಲಿ ಪೂರ್ಣ ವಿಶ್ವಾಸವುಳ್ಳವನಾದರೆ, ಅವನು ಗುರುಗಳ ಪ್ರಾಣಾಹುತಿಗೆ ಅಂಟಿಕೊಳ್ಳುವನು ಹಾಗೂ ಅಸ್ತಿತ್ವದ ಉಚ್ಚ ಸ್ತರಗಳಿಗೆ ಶೀಘ್ರವಾಗಿ ಜಿಗಿಯುವನು. ಇದಾಗುವುದೇಕೆಂದರೆ ಪ್ರಾಣಾಹುತಿಯು ಸ್ಥೂಲತೆ ಮತ್ತು ತೊಡಕುಗಳನ್ನು ನಿವಾರಿಸಿ ಅಭ್ಯಾಸಿಯನ್ನು ಉಚ್ಚತರ ಸ್ಥಿತಿಯೆಡೆಗೆ ನೂಕುವುದು.
ಸೂಕ್ಷ್ಮಸ್ವರೂಪದ ಆನಂದದ ಅನುಭವ, ಆಂತರಿಕ ಬಂಧನಗಳಿಂದ ಬಿಡುಗಡೆಗೊಂಡ ಭಾವನೆ, ಹೆಚ್ಚು ಸೂಕ್ಷ್ಮತರ, ಶುದ್ಧ ಕ್ಷೇತ್ರದಲ್ಲಿಯ ವಿಸ್ತಾರದ ದರ್ಶನ –ಇವು ಉಚ್ಚಸ್ಥಿತಿಯನ್ನೊಡಗೂಡಿ ಬರುತ್ತವೆ. ಅದೇ ಸ್ಥಿತಿಯಲ್ಲಿ ಸ್ಥಗಿತಗೊಳ್ಳುವಷ್ಟು ಅವುಗಳಿಂದ ಅಭ್ಯಾಸಿಯು ಪ್ರಲೋಭನೆಗೊಳ್ಳಬಹುದು. ಬದಲಿಗೆ, ಅಭ್ಯಾಸಿಯು ಗುರುವನ್ನು ಮಾತ್ರವೇ ಜೀವನದ ಗುರಿಯಾಗಿ ಇಟ್ಟುಕೊಂಡರೆ, ಅವನು ತನ್ನದೇ ಇಚ್ಛೆಗಳಿಂದ ಸೆಳೆದೊಯ್ಯಲ್ಪಡದೆ, ತನ್ನನ್ನು ಇನ್ನೂ ಉನ್ನತ ಸ್ಥಿತಿಗೆ ಕರೆದೊಯ್ಯಲು ಗುರುವಿಗೆ ಪ್ರಾರ್ಥಿಸುತ್ತಾನೆ. ಮತ್ತೆ, ಅವನು ತಳಮಳಪಡುತ್ತಾನೆ. ಹಾಗೂ, ಈ ಮೇಲೆ ಹೇಳಿದಂತೆ ಇಡೀ ಪ್ರಕ್ರಿಯೆಯು ಭಿನ್ನ ರೀತಿಯ ಸೂಕ್ಷ್ಮತೆ ಮತ್ತು ದಿವ್ಯ ಆನಂದದೊಂದಿಗೆ ಮರುಕಳಿಸುವುದು.
ಈ ರೀತಿಯಾಗಿ, ಸಹಜಮಾರ್ಗದ ಅಭ್ಯಾಸಿಯ ಆಂತರಿಕ ಸ್ಥಿತಿ ಹೆಚ್ಚು ಹೆಚ್ಚು ಸೂಕ್ಷ್ಮತರವಾಗುತ್ತ ಹೋಗುತ್ತದೆ. ಎಷ್ಟೆಂದರೆ, ಕೊನೆಗೆ ಅದರ ಕಲ್ಪನೆ ಮಾತ್ರ ಉಳಿದು, ಅದೂ ಕೂಡ ಅನಂತದಲ್ಲಿ ಲಯವಾಗುವತ್ತ ಒಲಿಯುತ್ತದೆ.
ನಮ್ಮ ಪ್ರೀತಿಯ ಬಾಬೂಜಿ ಮಹಾರಾಜರ ಜನ್ಮದಿನಾಚರಣೆಯ ಶುಭ ಸಂದರ್ಭದಲ್ಲಿ, ನಮ್ಮನ್ನು ಅಂತಿಮ ಸ್ಥಿತಿಯವರೆಗೆ ಕರೆದೊಯ್ಯಲು ಅವರು ಉತ್ಸುಕರಾಗುವಂತೆ, ಮತ್ತು ತಳಮಳಗೊಳ್ಳುವಂತೆ ಮಾಡುವ ಸ್ಥಿತಿಯಲ್ಲಿ ನಮ್ಮನ್ನು ನಾವು ಅವರ ಮುಂದೆ ಪ್ರಸ್ತುತಪಡಿಸೋಣ.
[ಪೂಜ್ಯ ಬಾಬೂಜಿಯವರ 78ನೆಯ ಹುಟ್ಟುಹಬ್ಬದ
ಸ್ಮರಣಸಂಚಿಕೆಯಿಂದ 1978]