ಬಹುತೇಕ ಎಲ್ಲ ಧರ್ಮಗಳೂ ತಮ್ಮ ತಮ್ಮ ವಿಶಿಷ್ಟವಾದ ದೇವರ ಕಲ್ಪನೆಗೆ ಅನುಸಾರವಾಗಿ ಭಕ್ತಿಯ ಅಭ್ಯಾಸವನ್ನು ವಿಧಿಸುತ್ತವೆ. ಈ ಎಲ್ಲ ಭಕ್ತಿಯುತ ಆಚರಣೆಗಳ ಸಾಮಾನ್ಯ ಲಕ್ಷಣವೆಂದರೆ, ದೇವರನ್ನು ಸ್ತುತಿಸುವುದು ಅಥವಾ ಮೌಖಿಕವಾಗಿ ದೇವರ ಮಹಾ ಶುಭಕರ ಅಥವಾ ಕಲ್ಯಾಣ ಗುಣಗಳನ್ನು ಪುನರುಚ್ಚರಿಸುವುದು ಹಾಗೂ ಭಕ್ತರ ಬಯಕೆಗಳನ್ನು ಪೂರ್ತಿ ಮಾಡುವಂತೆ ಬೇಡಿಕೊಳ್ಳುವುದು. ಈ ಪ್ರಕಾರದ ಭಕ್ತಿಯು ನಿಜಕ್ಕೂ ಬಾಲಿಶವೂ, ಪಲಾಯನವಾದದ್ದೂ, ಅವಿವೇಕದ್ದೂ ಆಗಿದೆ. ವಿಚಾರವಂತರ ದೊಡ್ಡ ಗುಂಪುಗಳು ಈ ತರಹದ ಮತಾಚಾರದ ಭಕ್ತಿಯಲ್ಲಿ ಶ್ರದ್ಧೆಯನ್ನು ಕಳೆದುಕೊಂಡಿದ್ದರಲ್ಲಿ, ಮತ್ತು ಕೆಲವರಂತೂ ದೇವರಲ್ಲಿಯೇ ಶ್ರದ್ಧೆ ಕಳೆದುಕೊಂಡಿದ್ದರಲ್ಲಿ ಆಶ್ಚರ್ಯವಿಲ್ಲ !
ಜನರ ಮೇಲೆ ಸಂಘಟಿತ ಮತಧರ್ಮದ ಕಬಂಧ ಹಿಡಿತ ಹಾಗೂ ಜನರ ನಂಬಿಕೆಯ ನಾಶ ಎರಡೂ ಸೇರಿ ಭಕ್ತಿಯ ಅನುಷ್ಠಾನಗಳನ್ನು ಯಾಂತ್ರಿಕ ಕರ್ಮಾಚರಣೆ ಹಾಗೂ ದೇವರ ಮುಖಸ್ತುತಿಯ ಮಟ್ಟಕ್ಕೆ ಇಳಿಸಿಬಿಟ್ಟಿವೆ. ನಿಜಕ್ಕೂ, ಮತಧರ್ಮಗಳ ಈ ರೀತಿಯ ಅವನತಿಯು ಸ್ವಾರ್ಥಿ ಪುರೋಹಿತ ವರ್ಗವನ್ನು, ನಿಷ್ಠಾಹೀನ ಗುರುಗಳನ್ನು, ಆಳವಾದ ಪಟ್ಟಭದ್ರ ಹಿತಾಸಕ್ತಿಗಳುಳ್ಳ ಧಾರ್ಮಿಕ ಮುಖಂಡರನ್ನು ಹುಟ್ಟುಹಾಕಿತು. ಮತ್ತು ಭಕ್ತಿಯ ವಿಧಾನಗಳೇ ಜಡಗೊಳಿಸಲ್ಪಟ್ಟು, ಸ್ಥೂಲಗೊಂಡವು ಮತ್ತು ಕರ್ಮದ ವ್ರತಾಚರಣೆಗಳಾಗಿ ತಮ್ಮ ಸತ್ತ್ವವನ್ನು ಕಳೆದುಕೊಂಡವು. ವಾಸ್ತವದಲ್ಲಿ ಭಕ್ತಿಯ ವಿಧಾನಗಳು ಕುರುಡು ನಂಬಿಕೆಗಳು, ಹೀನ ಭಯಗಳು ಹಾಗೂ ಅಂತಹ ಸ್ವಮತಾಭಿಮಾನಗಳಾಗಿ ವಿರೂಪಗೊಂಡವು.
ಸಾಮೂಹಿಕ ಪ್ರಾರ್ಥನೆಗಳು ಹಾಗೂ ಸಾರ್ವಜನಿಕ ಭಕ್ತಿ ಸಾಧನೆಗಳ ಆವಶ್ಯಕತೆಯಿಂದಾಗಿ ಅಸಂಖ್ಯಾತ ಚರ್ಚುಗಳು, ಮಂದಿರಗಳು, ಮಸೀದಿಗಳು ಇಂತಹ ಬೇರೆ ಬೇರೆ ಕಟ್ಟಡಗಳು ನಿರ್ಮಿಸಲ್ಪಟ್ಟವು. ಈ ಮೇಲೆ ಹೇಳಿದ ಅತ್ಯಾಶೆ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಬಲಗಳಿಂದಾಗಿ ಬಹುತೇಕ ಅಂತಹ ಎಲ್ಲ ಪೂಜಾಸ್ಥಾನಗಳು ಇಂದಿನ ಕಾಲದಲ್ಲಿ, ಮನುಷ್ಯನ ಆಧ್ಯಾತ್ಮಿಕ ಅಭಿವೃದ್ಧಿಗೆ ತಮ್ಮ ಉಪಯುಕ್ತತೆಯನ್ನು ಕಳೆದುಕೊಂಡಿವೆ. ಮತಾಧಾರಿತ ಮತ್ಸರ, ದ್ವೇಷ, ಹಾಗೂ ಹಿಂಸೆಗಳನ್ನು ತಮ್ಮ ಮತದ ಅನುಯಾಯಿಗಳಲ್ಲದವರ ವಿರುದ್ಧ ಭುಗಿಲೆಬ್ಬಿಸುವುದಕ್ಕಾಗಿ ಸಾರ್ವಜನಿಕರು ಸೇರುವ ಸ್ಥಳಗಳಾಗಿ ಮಾರ್ಪಟ್ಟವು.
ಸಹಜಮಾರ್ಗದಲ್ಲಿ ತಿಳಿಯಲಾದಂತೆ, ಹಾಗೂ ಅಭ್ಯಾಸ ಮಾಡಲಾಗುತ್ತಿರುವಂತೆ, ಭಕ್ತಿಯು ಈ ಕಾಲದ ಮತಧರ್ಮಗಳಲ್ಲಿ ಬೋಧಿಸಲಾಗುತ್ತಿರುವುದಕ್ಕಿಂತ ಭಿನ್ನವಾಗಿದೆ. ಸಹಜಮಾರ್ಗದಲ್ಲಿ ದೇವರ ಅಸ್ತಿತ್ವದ ಕಲ್ಪನೆಯನ್ನು ಒಪ್ಪಿ, ಅಂಗೀಕರಿಸಲಾಗಿದ್ದರೂ, ಅಭ್ಯಾಸಿಯ ಗುರಿಯು ಮನುಷ್ಯನ ವಿಕಾಸದ ಅತ್ಯುನ್ನತ (ಅಂತಿಮ) ಸ್ಥಿತಿಯನ್ನು ಅದು ಪರಮಾತ್ಮನ ಪರಮ ಸ್ಥಿತಿಯೆಂದು ತೆಗೆದುಕೊಳ್ಳಲಾಗಿದೆ. ಸಹಜಮಾರ್ಗದ ಅಭ್ಯಾಸಿಯ ಪ್ರಾರ್ಥನೆಯು ದೇವರ ಮುಖಸ್ತುತಿಯೂ ಅಲ್ಲ, ತನ್ನ ಇಚ್ಛೆಗಳ ಪೂರ್ತಿಗೋಸ್ಕರವೂ ಅಲ್ಲ.
ನಿಜಕ್ಕೂ, ಪ್ರಾರ್ಥನೆ ಸಲ್ಲಿಸುವಾಗ ಅಭ್ಯಾಸಿಯು ಈಗಲೂ ತನ್ನ ಪ್ರಗತಿಗೆ ಅಡ್ಡಿಯೊಡ್ಡುತ್ತಿರುವ ತನ್ನ ಇಚ್ಛೆಗಳ ಗುಲಾಮನಾಗಿರುವುದನ್ನು ಸ್ಮರಣೆಗೆ ತಂದುಕೊಳ್ಳುತ್ತಾನೆ. ದೇವರನ್ನು ಹೊಂದುವುದೇ ಅವನು ದೇವರಿಗೆ ಮಾಡುವ ಪ್ರಾರ್ಥನೆಯಾಗಿದೆ. ಮತ್ತು ಅದು ಸಾಧ್ಯವಾಗುವುದು ‘ಅವನ’ (ದೇವರ) ಸಹಾಯದಿಂದ ಮಾತ್ರವೇ. ಒಬ್ಬ ಗುರುವು ಇದನ್ನು ಸಾಧಿಸಿದ್ದರೆ, ಅಭ್ಯಾಸಿಯು ಪ್ರೇಮ, ಆದರ ಹಾಗೂ ಶರಣಾಗತಿಗಳೊಂದಿಗೆ ಅಂತಹ ಗುರುವಿನೊಂದಿಗೆ ಅಂಟಿಕೊಳ್ಳಲು (ಅವನನ್ನು ಒಲಿಸಿಕೊಳ್ಳಲು) ಪ್ರಾರಂಭಿಸುವನು. ಅಂತಹ ಮಹಾ ಸಮರ್ಥನಾದ ಗುರುವು ಅಭ್ಯಾಸಿಯನ್ನು ಅವನ ಬಂಧನಗಳು, ಸ್ಥೂಲತೆ, ಅಂಧಕಾರ ಮತ್ತು ಜಟಿಲತೆಗಳಿಂದ ಮುಕ್ತಗೊಳಿಸಲು ಪ್ರಾಣಾಹುತಿಯ ಮೂಲಕ ಸಹಾಯ ಮಾಡುತ್ತಾನೆ.
ಪ್ರಾರ್ಥನೆಯ ಭಾವನಾತ್ಮಕ ಆಸಕ್ತಿಯ ಉದಾತ್ತೀಕರಣವು (ಉನ್ನತೀಕರಣವು) ಅಭ್ಯಾಸಿಯ ಹೃದಯದಲ್ಲಿ ತುಂಬಿತುಳುಕುವ ದೈವೀ ಪ್ರಕಾಶದ ಮೇಲಿನ ಮೇಲಿನ ಧ್ಯಾನದಲ್ಲಿ ಪರಿಣಮಿಸುತ್ತದೆ; ಸಹಜಮಾರ್ಗದ ಅಂತಹ ಅಭ್ಯಾಸಿಗಳು ಭಕ್ತಿಯ ಸಾಧನೆಗಾಗಿ ಅಥವಾ ಧ್ಯಾನಾಭ್ಯಾಸಕ್ಕಾಗಿ ಒಂದೆಡೆ ಸೇರಿದಾಗ ಆ ಸಭೆಯನ್ನು ಸತ್ಸಂಗ ಎಂದು ಕರೆಯಲಾಗುವುದು. ಸತ್ಸಂಗದ ಸ್ಥಳವು ಆಶ್ರಮವಾಗುವುದು. ದೊಡ್ಡ ಪ್ರಮಾಣದ ಸಮಾರಂಭಗಳಿಗಾಗಿ ಜನರಿಗೆ ಅಗತ್ಯವೆನಿಸಿದ, ಕಟ್ಟಡ ಇತ್ಯಾದಿಗಳು ನಿರ್ಮಾಣಗೊಳ್ಳುವುದು ಅನಿವಾರ್ಯ. ನಮ್ಮ ಶ್ರೀರಾಮಚಂದ್ರ ಮಿಷನ್ನಿನಲ್ಲಿ ಇತ್ತೀಚಿನದು ನಮ್ಮ ಇಲ್ಲಿಯ ತಿನ್ಸುಕಿಯಾ ಕೇಂದ್ರವಾಗಿದೆ.
ಇದುವರೆಗೆ ನಮ್ಮ ಕೇಂದ್ರಗಳಾದ ಆಂಧ್ರದ ತಿರುಪತಿ, ಹಾಗೂ ಹೈದರಾಬಾದ್, ಕರ್ನಾಟಕದ ರಾಯಚೂರ್, ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ನಾವು ಆಶ್ರಮಗಳನ್ನು ಕಟ್ಟಿದ್ದೇವೆ. ಮಹಾ ಸ್ಮಾರಕವಾದ ಷಾಹಜಹಾನಪುರದಲ್ಲಿರುವ ಆಶ್ರಮಕ್ಕೆ ನಾವು ಸುಪರಿಚಿತರಿದ್ದೇವೆ. ಈ ಆಶ್ರಮಗಳು ಜಿಜ್ಞಾಸುಗಳ ಆಧ್ಯಾತ್ಮಿಕ ಪ್ರಗತಿಗಾಗಿ ಸೇವೆ ಸಲ್ಲಿಸುತ್ತಿವೆ. ಐತಿಹಾಸಿಕ ಧರ್ಮಸಂಸ್ಥೆಗಳ ಅಳಿವಿನ ಕಾರಣಗಳನ್ನು ಕಂಡು ಅರಿತಿರುವಾಗ, ಗುರುಗಳ ಆಧ್ಯಾತ್ಮಿಕ ಪ್ರಾಣಾಹುತಿಗೆ ಯಾವಾಗಲೂ ಜಾಗ್ರತರಾಗಿರುವುದು ಹಾಗೂ ನಮ್ಮ ಹೃದಯದ ಕಲ್ಮಷ ಹಾಗೂ ಸ್ಥೂಲತೆಗಳನ್ನು ದೂರಗೊಳಿಸಿ, ಶುದ್ಧವಾಗಿರುವುದು ನಮ್ಮ ಪವಿತ್ರ ಕರ್ತವ್ಯವಾಗುತ್ತದೆ.
ನಮ್ಮ ಆಶ್ರಮಗಳನ್ನು ಮಾನವಕುಲದ ಆಧ್ಯಾತ್ಮಿಕ ಉನ್ನತಿಗಾಗಿ ಹಾಗೂ ದೈವೀ ಸಾಮ್ರಾಜ್ಯವಾಗಿ ವಿಕಾಸಗೊಳ್ಳುವುದಕ್ಕಾಗಿ ಉಪಯೋಗಿಸಲು ಗುರುಗಳ ಯೋಗ್ಯ ಬುದ್ಧಿ ಮತ್ತು ಪ್ರಾಜ್ಞತೆಗಳನ್ನು ದಯಪಾಲಿಸಲಿ.
[ಆಸಾಮದ ತಿನ್ಸುಕಿಯಾ ಆಶ್ರಮದ ಕಟ್ಟಡದ ಉದ್ಘಾಟನಾ ಭಾಷಣ, ನವಂಬರ್ 25, 1977]