1. ಸೂರ್ಯೋದಯಕ್ಕೆ ಪೂರ್ವದ ಉಷಃಕಾಲದ ಸಮಯವು ಕತ್ತಲು ಹಾಗೂ ಬೆಳಕಿನ ಸಂಧಿಕಾಲವಾಗಿದೆ. ಯೋಗಿಯು ಸಿದ್ದಿ ಹೊಂದಬೇಕಾದ ಅಂತಿಮ ಆಧ್ಯಾತ್ಮಿಕ ಸ್ಥಿತಿಯ ಒಂದು ಬಗೆಯ ಪ್ರತಿಬಿಂಬ ಅದಾಗಿದೆ. ವಾಸ್ತವವಾಗಿ ಆ ಸ್ಥಿತಿಯು ಕತ್ತಲೆ ಹಾಗೂ ಬೆಳಕುಗಳ ಆಚಿನದು. ತನ್ನ ಹೃದಯದಲ್ಲಿರುವ ದೈವೀಪ್ರಕಾಶದ ಮೇಲೆ ಇಂತಹ ಸಮಯದಲ್ಲಿ ಧ್ಯಾನ ಮಾಡುವುದು ಅಭ್ಯಾಸಿಯಲ್ಲಿ ಧ್ಯೇಯದ ಚಿಂತನ ಮತ್ತು ಸಮಯದ ಮಧ್ಯೆ ಬಲವಾದ ಸಹಯೋಗವನ್ನುಂಟು- ಮಾಡುವುದು. ಸೂರ್ಯಾಸ್ತದ ಸಂಧಿಕಾಲವು ಉಷ್ಣತೆಯು ತಗ್ಗುವ ಅಥವಾ ಹೊರಟುಹೋಗುವುದರ ಹಾಗೂ ತಂಪಿನ ಆಗಮನದ ಸೂಚನೆಯಾಗಿದೆ. ಇದು ಒಬ್ಬನ ಆಂತರಿಕ ಪರಿಶುದ್ಧತೆಯ ಹಾಗೂ ಶುಚಿತ್ವದ ಯುಕ್ತ ಪ್ರತಿಬಿಂಬವಾಗಿದೆ. ಸಹಜ ಮಾರ್ಗದಲ್ಲಿ ವಿಧಿಸಲಾದ ಸಾಯಂಕಾಲದ ಶುದ್ದೀಕರಣದ ಪದ್ಧತಿಯು ಅಪೇಕ್ಷಿತ ಪರಿಣಾಮಗಳನ್ನು ಶೀಘ್ರವಾಗಿ ಉಂಟು ಮಾಡುವುದು. ಉಷ್ಣತೆಯ ವಿವಿಧ ಪರಿಣಾಮಗಳಾದ ಸಿಟ್ಟು, ಹಸಿವು, ಕಾಮ, ಲೋಭ ಮುಂತಾದವುಗಳ ಬಗ್ಗೆ ಬಹಳಷ್ಟು ಹೇಳಬಹುದಾಗಿದೆ. ಆದರೆ ಒಬ್ಬನ ತನ್ನದೇ ವ್ಯಾವಹಾರಿಕ ಅನುಭವವೇ ಉಷ್ಣತೆಯ ಹಾಗೂ ತಂಪಿನ ಪರಿಣಾಮಗಳ ಸರಿಯಾದ ತಿಳುವಳಿಕೆ ನೀಡುವುದು. ಒಬ್ಬನು ನಿಶ್ಚಿತ ಸ್ಥಳದಲ್ಲಿ ನಿತ್ಯವೂ ಧ್ಯಾನಾಭ್ಯಾಸ ಮಾಡಿದರೆ, ಆ ಸ್ಥಳವು ಪವಿತ್ರತೆ ಹಾಗೂ ದೈವೀ ಕಂಪನಗಳಿಂದ ತುಂಬಿಕೊಳ್ಳುತ್ತದೆ. ನಿಜಕ್ಕೂ, ಯಾರಾದರೂ ಈ ಸ್ಥಳಕ್ಕೆ ಭೇಟಿ ನೀಡಿದರೆ ಪವಿತ್ರತೆಯ ಪರಿಣಾಮವನ್ನು ತನ್ನಲ್ಲಿ ಕಂಡುಕೊಳ್ಳಬಹುದು. ಶರೀರದ ಆಕುಂಚನಗೊಂಡ ಭಂಗಿಯು, ಯೋಗಿಯು ಪಡೆಯಬೇಕಾದ ಅಂತಿಮ ಸ್ಥಿತಿಯ ಬೇರೊಂದು ತರಹದ ಪ್ರತಿಬಿಂಬವಾಗಿದೆ. ಅದು ತನ್ನೊಳಗಿನ ಎಲ್ಲ ವಿಸ್ತರಣಗಳನ್ನು ಹಿಂತೆಗೆದುಕೊಳ್ಳುವ ಸ್ಥಿತಿಯಾಗಿದೆ ಮತ್ತು ದೈವೀ ಕೃಪೆಯನ್ನು ನೇರವಾಗಿ ಪಡೆಯಲಿಕ್ಕೆಂದು ಅಂತಿಮ ಸ್ಥಿತಿಯಲ್ಲಿ ನೆಲೆಗೊಂಡು ನಿಲ್ಲುವುದಾಗಿದೆ. ದೇವರು ಒಬ್ಬನೇ, ಏಕೈಕ, ಮತ್ತು ಅಮಿಶ್ರಿತ, ಶುದ್ಧ ಅಸ್ತಿತ್ವವಾಗಿರುವಂತೆಯೇ, ಯೋಗಿಯು ಧ್ಯಾನದ ಸಮಯದಲ್ಲಿ ತನ್ನ ಶರೀರ ಹಾಗೂ ಮನಸ್ಸುಗಳನ್ನು ಶುದ್ಧ ಹಾಗೂ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆ ಪೂರ್ಣ ಶುದ್ಧತೆಯ ಅನುಕರಣೆ ಮಾಡಲು ಪ್ರಯತ್ನಿಸುತ್ತಾನೆ. ಆದ್ದರಿಂದ, ಸಹಜಮಾರ್ಗದ ಹತ್ತು ನಿಯಮಗಳಲ್ಲಿ ಮೊದಲನೆಯ ನಿಯಮವು, ಕಾಲ, ದೇಶ (ಸ್ಥಳ) ಭಂಗಿ (ಆಸನ) ಮತ್ತು ಶುದ್ಧತೆಗಳ ಸೂಕ್ಷ್ಮ ಕಲ್ಪನೆಗಳೊಂದಿಗೆ ದೇವರ ಘನಿಷ್ಠ ಸಂಬಂಧವನ್ನು ಬೆಳೆಸುವ ಮೂಲಕ ಮಾನವನ ಚಿಂತನದ ಅಸ್ತವ್ಯಸ್ತ ಚಟುವಟಿಕೆಗಳನ್ನು ದೈವೀ ದಿಶೆಯಲ್ಲಿ ಅಭಿಮುಖಗೊಳಿಸಿ, ದೇವರ ಮತ್ತು ಮಾನವನ ನಡುವೆ ಪ್ರಾಥಮಿಕ ಸಂಬಂಧವನ್ನು ಅಭಿವೃದ್ಧಿಪಡಿಸುತ್ತದೆ.

  2. ದೇವರ ರಾಜ್ಯ (ವಲಯ)ದಲ್ಲಿ ಪ್ರವೇಶಿಸಲು ಪ್ರಾರ್ಥನಾಪೂರ್ಣ ಅಥವಾ ದೈನ್ಯತೆಯ ಮನೋಭಾವವು ಅತ್ಯಂತ ಆವಶ್ಯಕವಾಗಿದೆ. ಕ್ಷುದ್ರ ವಸ್ತುಗಳಿಗಾಗಿ ಅತ್ಯುನ್ನತವಾದುದನ್ನು (ದೇವರನ್ನು ಉದ್ದೇಶಿಸಿ ಪ್ರಾರ್ಥಿಸುವುದು ಬಾಲಿಶವಾಗಿದೆ, ಹಾಗೂ ಅತ್ಯುನ್ನತವಾದುದಕ್ಕೆ ಕೇವಲ ದಾಸರಾದ ನಿಮ್ಮಸ್ತರದ ದೇವತೆಗಳನ್ನು ಬೇಡುವುದು ಇನ್ನೂ ಹಾಸ್ಯಾಸ್ಪದವಾಗಿದೆ. ತನ್ನ ಇಚ್ಛೆಗಳಿಗೆ ದಾಸನಾಗಿರುವುದರ ಅರಿವಿನಿಂದುಂಟಾದ ನಮ್ರತೆ ಹಾಗೂ ಅತ್ಯುನ್ನತವಾದುದರ ಸಹಾಯಗಳಿಂದಲೇ ಪರಮತತ್ತ್ವದ ಸ್ಥಿತಿಯ ಪ್ರಾಪ್ತಿಗಾಗಿ, ಪರಮತತ್ತ್ವದ ಮೇಲಿನ ಧ್ಯಾನವನ್ನು ಪ್ರಾರ್ಥನೆಯಿಂದ ಪ್ರಾರಂಭಿಸಬೇಕು.

  3. ಧ್ಯಾನಾಭ್ಯಾಸದ ಗುರಿಯು ಮಾನವನಿಗೆ ಸಾಧ್ಯವಾದ ಅತುಚ್ಚ ದೈವೀ ಸ್ಥಿತಿಯೇ ಅಥವಾ ದೇವರಲ್ಲಿ ಸಂಪೂರ್ಣ ಸಮರಸ ಹೊಂದಲು ಮಾತ್ರವೇ ಇರಬೇಕು. ಗುರಿಯ ಪ್ರಾಪ್ತಿಗೋಸ್ಕರ ಇರುವ ತೀವ್ರ ತಳಮಳವೇ ಯೋಗದಲ್ಲಿ ತೀವ್ರಪ್ರಗತಿಗೆ ಬೇಕಾದ ಸರಿಯಾದ ಸ್ಥಿತಿಯಾಗಿದೆ.

  4. ಒಬ್ಬನು ತನ್ನ ಆಲೋಚನೆಯ ಹಾಗೂ ಅಸ್ತಿತ್ವದ ಎಲ್ಲ ಆಂತರಿಕ ಜಟಿಲತೆಗಳಿಂದ ಬಿಡುಗಡೆ ಪಡೆದಾಗ, ತತ್ಪರಿಣಾಮವಾದಸರಳತೆಯ ಮೂಲಕ ನಿಸರ್ಗದೊಂದಿಗೆ ಒಂದಾಗಬಹುದು. ನಿಸರ್ಗದ ಧಾರೆಗಳು ಸುಸೂತ್ರವೂ, ಶಾಂತಪ್ರವಾಹಿಯಾಗಿಯೂ ಇರುತ್ತವೆ; ಮತ್ತು ಅವುಗಳಲ್ಲಿ ಸ್ವಾಭಾವಿಕ ತಿರುವು ಸುಳಿಗಳು ಮತ್ತು ಗ್ರಂಥಿಗಳು ಕೂಡ, ಆವಶ್ಯಕವಾದ ಸ್ಥಳಗಳಲ್ಲಿ ಅಗತ್ಯವಿರುವ ಶಕ್ತಿಗಳನ್ನು ನೀಡುವ ಕ್ರಿಯಾತ್ಮಕ ಬಿಂದುಗಳಾಗಿವೆ. ವಾಸ್ತವವಾಗಿ ನಿಸರ್ಗದ ಧಾರೆಗಳ ಹರಿಯುವಿಕೆಯಲ್ಲಿ ಸ್ಥಗಿತತೆ ಇಲ್ಲ. ಆದರೆ, ಮಾನವನು ಸಾಮಾನ್ಯವಾಗಿ, ಪರಸ್ಪರ ವಿರೋಧಾತ್ಮಕ ಹಾಗೂ ಜಟಿಲವಾದ ಅಸಂಖ್ಯಾತ ಇಚ್ಛೆಗಳಿಗೆ ದಾಸನಾಗುವ ಮೂಲಕ ತನ್ನ ಎಲ್ಲ ಸಾಮರ್ಥ್ಯಗಳನ್ನು ಕೆಡಿಸಿಕೊಳ್ಳುತ್ತಾನೆ ಮತ್ತು ಅದರಿಂದಾಗಿ ತೊಡಕುಗಳನ್ನು, ಸ್ಥೂಲತೆಯನ್ನು, ಜಡತೆಯನ್ನು, ಮತ್ತು ಸ್ಥಗಿತತೆಯನ್ನು ಬೆಳೆಸಿಕೊಳ್ಳುತ್ತ ಹೋಗುವನು.

  5. ಮನುಷ್ಯನ ಇರುವಿಕೆಯಲ್ಲಿಯ ಸರಳತೆ ಮತ್ತು ನಿಷ್ಕಪಟತೆಗಳು ಅವನಲ್ಲಿ ಸತ್ಯವಂತಿಕೆಯನ್ನುಂಟುಮಾಡುವವು. ಯಾವುದೇ ಅಂಜಿಕೆ ಅನುಮಾನಗಳಿಲ್ಲದೆ ತಾನು ಇರುವ ಸ್ಥಿತಿಯಲ್ಲಿಯೇ ತನ್ನನ್ನು ವ್ಯಕ್ತಪಡಿಸುತ್ತಾನೆ. ಈ ತೆರನಾದ ಸತ್ಯವಂತಿಕೆ, ಹಾಗೂ ಅವನ ಗುಣಗಳಾದ ಸರಳತೆ ಮತ್ತು ನಿಷ್ಕಪಟತೆಗಳು ಮಾನವನಲ್ಲಿ ಆತ್ಮತೃಪ್ತಿಯನ್ನು ಹುಟ್ಟಿಸುವವು. ಅದರಿಂದಾಗಿ ಅವನು ತನ್ನ ಕಷ್ಟ, ದುಃಖಗಳನ್ನು ದೈವೀ ವರಗಳೆಂದು, ಹಾಗೂ ಆಶೀರ್ವಾದಗಳೆಂದು ಸ್ವೀಕರಿಸುವ ಮಟ್ಟಿಗೆ ಅವನು ಸ್ವಯಂ ತೃಪ್ತಿಯಲ್ಲಿರುತ್ತಾನೆ. ಅವನ ಮಟ್ಟಿಗೆ ಅವೆಲ್ಲ ತನ್ನ ಆಂತರಿಕ ಶುದ್ದೀಕರಣಕ್ಕಾಗಿ ಇರುವ ಸಾಧನಗಳೆಂದು ಅವನಿಗೆ ಕಾಣುತ್ತವೆ.

  6. ಇಂತಹ ಮನೋವೃತ್ತಿಗಳು ಅಭ್ಯಾಸಿಯಲ್ಲಿ ಪೂರ್ಣವಾಗಿ ನೆಲೆಗೊಂಡಾಗ ಅವನು ದೇವರ ಅಸ್ತಿತ್ವವನ್ನು ಎಲ್ಲೆಡೆಗಳಲ್ಲಿಯೂ, ಪ್ರತಿಯೊಬ್ಬರಲ್ಲಿಯೂ ಅನುಭವಿಸಲಾರಂಭಿಸುವನು. ಎಲ್ಲರೂ ಒಂದೇ ಮೂಲದಿಂದ ಬಂದಿರುವಂತೆ ಹಾಗೂ ಅದರೊಂದಿಗೆ ಜೋಡಿಸಲ್ಪಟ್ಟವರಂತೆ ಅವನಿಗೆ ಕಾಣುವುದು. ಎಲ್ಲ ಸ್ತ್ರೀ-ಪುರುಷರನ್ನು ಅವನು ಸೋದರಿ-ಸೋದರರಂತೆ ಭಾವಿಸುವನು, ಹಾಗೂ ಎಲ್ಲರೊಡನೆ ಅವನ ವರ್ತನೆಯು ಅತ್ಯಂತ ಸ್ವಾಭಾವಿಕ ರೀತಿಯಲ್ಲಿ ಹೊಂದಿಕೊಳ್ಳುವುದು.

  7. ತತ್ಪರಿಣಾಮವಾಗಿ, ಯಾರಾದರೊಬ್ಬರು ಅಂತಹ ಸದ್ಧರ್ಮನಿಷ್ಠ ವ್ಯಕ್ತಿಗೆ ಯಾವುದೇ ಹಾನಿ, ನೋವುಗಳನ್ನು ಉಂಟುಮಾಡಿದರೆ, ಅವನು ಒಂದು ರೀತಿಯ ಕೃತಜ್ಞತೆಯ ಭಾವ ತಳೆಯುತ್ತಾನೆ. ಅಲ್ಲದೆ, ಪ್ರತೀಕಾರದ ಅಥವಾ ಪ್ರತಿಹಿಂಸೆಯ ಭಾವನೆಗಳು ಅವನ ಮನಸ್ಸಿನಲ್ಲಿ ಎಂದಿಗೂ ಸುಳಿಯುವುದಿಲ್ಲ.

  8. ಅವನ ಪವಿತ್ರ ಗಳಿಕೆಯಿಂದ ಹಾಗೂ ದೇವರ ಸ್ಮರಣೆಯೊಂದಿಗೆ ಆಹಾರ ಸ್ವೀಕರಿಸುವುದರಿಂದ, ಈ ಮೇಲಿನ ಸ್ಥಿತಿಗಳು ಇನ್ನೂ ವೃದ್ಧಿಗೊಳ್ಳುವವು. ಹೀಗೆ ಸ್ವೀಕರಿಸಲಾದ ಆಹಾರವು ಅಂತಿಮವಾಗಿ ಅವನ ಶರೀರದ ಪ್ರತಿಯೊಂದು ಕಣವನ್ನೂ ದೈವೀಕರಣಗೊಳಿಸುವುದು.

  9. ಈ ಮೇಲೆ ಹೇಳಿದ ಸ್ಥಿತಿಗಳು ಅಭ್ಯಾಸಿಯಲ್ಲಿ ಅದೆಂತಹ ನಮ್ರತೆ ಹಾಗೂ ಪವಿತ್ರತೆಗಳನ್ನುಂಟು ಮಾಡುವವೆಂದರೆ, ಬೇರೆಯವರು ಸ್ವಾಭಾವಿಕವಾಗಿ ಅವನಿಂದ ಆಕರ್ಷಿಸಲ್ಪಡುತ್ತಾರೆ, ಹಾಗೂ ಅವನಿಂದ ಪ್ರಭಾವಿತರಾಗುತ್ತಾರೆ. ಈ ರೀತಿಯಾಗಿ ಅಭ್ಯಾಸಿಯು ತನ್ನ ಸಹಚರರನ್ನು ಒತ್ತಾಯಿಸಲು ಅಥವಾ ತನ್ನ ಪ್ರಭಾವದಡಿಯಲ್ಲಿ ತರಲು ಯಾವುದೇ ಬಾಹ್ಯ ಅಸ್ತ್ರಗಳನ್ನು ಪ್ರಯೋಗಿಸದೆಯೇ ಸಮಗ್ರ ಮಾನವ ಕುಲವು ವಿಕಾಸ ಹೊಂದಲು ಹಾಗೂ ಆಧ್ಯಾತ್ಮಿಕವಾಗಿ ಮುಂದುವರಿಯಲು ತನ್ನದೇ ದೃಷ್ಟಾಂತದ ಮೂಲಕ ಸಹಾಯ ಮಾಡುತ್ತಾನೆ.

  10. ಈ ಮೇಲೆ ಹೇಳಿದ ಎಲ್ಲ ಸ್ಥಿತಿಗಳಿದ್ದಾಗ್ಯೂ, ಅವನು ನಿಜವಾದ ಗುರುವನ್ನೇ ತನ್ನ ಗುರುವೆಂದೂ ಹಾಗೂ ತನ್ನನ್ನು ಅವನ ಕ್ಷುದ್ರ ಸೇವಕನೆಂದೂ ಭಾವಿಸುತ್ತಾನೆ. ‘ಮಾನವ ತಪ್ಪು ಮಾಡುವುದು ಸಹಜʼ ಲೋಕೋಕ್ತಿಯನ್ನು ಅವನು ಪೂರ್ಣವಾಗಿ ಅರಿತಿರುತ್ತಾನೆ. ಮಲಗುವ ಸಮಯದಲ್ಲಿ, ಪ್ರೇಮ ಹಾಗೂ ಪಶ್ಚಾತ್ತಾಪಗಳಿಂದ ತುಂಬಿದ ಹೃದಯದಿಂದ ತನ್ನ ಗುರುವಿನ ಸ್ಮರಣೆ ಮಾಡಿ, ತನ್ನಿಂದ ಸಂಭವಿಸಿದ ಯಾವುದೇ ಅಪರಾಧಗಳಿಗಾಗಿ ಕ್ಷಮೆಯಾಚಿಸುತ್ತಾನೆ ಹಾಗೂ ಭವಿಷ್ಯತ್ತಿನಲ್ಲಿ ಅಂತಹ ತಪ್ಪುಗಳನ್ನು ಮಾಡದಿರಲು ನಿರ್ಧರಿಸುವುದು ತನ್ನ ಪವಿತ್ರ ಕರ್ತವ್ಯವೆಂದು ಅವನು ಭಾವಿಸುತ್ತಾನೆ. ಮಲಗುವ ಸಮಯದಲ್ಲಿ ಮಾಡುವ ಪ್ರಾರ್ಥನೆಯು, ಅವನ ನಿದ್ರಾವಸ್ಥೆಯನ್ನುಪ್ರಾರ್ಥನೆಯ ಸ್ಥಿತಿಯನ್ನಾಗಿ ಪರಿವರ್ತಿಸುವುದು, ಅಥವಾ ಉದಾತ್ತಗೊಳಿಸುವುದು. ಹಾಗೂ ಅವನು ಯಾವಾಗಲೂ ತನ್ನ ಸರ್ವಶಕ್ತ ಗುರುವಿನೆದುರಿನಲ್ಲಿ ಪ್ರಾರ್ಥನೆಯ ಸ್ಥಿತಿಯಲ್ಲಿಯೇ ಉಳಿಯುವನು.

ಈ ರೀತಿಯಾಗಿ, ಸಹಜಮಾರ್ಗದ ಹತ್ತು ನಿಯಮಗಳು ಮಾನವ ಹಾಗೂ ದೇವರ ನಡುವೆ ಒಂದು ಕ್ರಿಯಾಶೀಲ ಸಂಬಂಧವನ್ನು ಸ್ಥಾಪಿಸುತ್ತದೆ. ಅವು ಒತ್ತಾಯಪೂರ್ವಕವಾಗಿ ಹೇರಲ್ಪಡಬೇಕಾದ ನೈತಿಕ ಕಟ್ಟಪ್ಪಣೆಗಳು ಮಾತ್ರವಾಗಿರದೆ, ಬದಲಿಗೆ, ದೇವರೆಡೆಗೆ ಸಾಗುವ ಅವನ ವಿಕಾಸಯಾತ್ರೆಯಲ್ಲಿ ಮಾನವನಲ್ಲಿ (ಅವನ ಸತ್ತೆಯಲ್ಲಿ) ಬರುವ ಸ್ವಾಭಾವಿಕ ಸ್ಥಿತಿಗಳಾಗಿವೆ.

[ಬೆಂಗಳೂರಿನಲ್ಲಿ ಪೂಜ್ಯ ಗುರುಗಳ 79ನೆಯ ಹುಟ್ಟುಹಬ್ಬದ ಸ್ಮರಣ ಸಂಚಿಕೆಯಿಂದ, ಏಪ್ರಿಲ್ 30, 1979]

ದೇವರು ನಮ್ಮೊಳಗೇ ಇರುವನೆಂದು ಸಾಮಾನ್ಯವಾಗಿ ಹೇಳುವರು, ಆದರೆ ದುಃಖದ ಸಂಗತಿಯೆಂದರೆ ನಾವು ದೇವರೊಳಗೆ ಇರುವದಿಲ್ಲ.

– ಶ್ರೀ ಬಾಬೂಜಿ

(ನು.ಮು. 253)