ನನ್ನ ಪ್ರಿಯ ಮಿತ್ರ, ಓ ನನ್ನ ಪ್ರೇಮ! ನೀನು ಗುರುವಿನತ್ತ ವೀಕ್ಷಿಸಿದಾಗ ಅಥವಾ ಅವನ ಸಾನ್ನಿಧ್ಯದಲ್ಲಿರುವಾಗ ಬೇರೆಲ್ಲದರಲ್ಲಿಯೂ ಆಸಕ್ತಿ ಕಳೆದುಕೊಳ್ಳುವೆಯೆಂಬುದನ್ನು ಗಮನಿಸಿರುವೆಯಾ? ಗುರುವಿನ ಸಾನ್ನಿಧ್ಯದಲ್ಲಿರುವಾಗ, ನಿನ್ನನ್ನು ಹಿಂಡಿ ಹಿಚುಕುವ ಸಮಸ್ಯೆಗಳನ್ನೂ ಮರೆತುಬಿಡುವ ಮಟ್ಟಿಗೆ ನಿನ್ನನ್ನು ನೀನು ಪೂರ್ಣವಾಗಿ ಮರೆತುಬಿಡುತ್ತೀಯೆ. ಆ ಸ್ಥಿತಿಯು ಸಂತೋಷದ್ದೆ? ಅದು ಆನಂದವೆ? ಅದು ಶಾಂತಿಯೆ? ಏನೇ ಆಗಿರಲಿ, ಆ ಸ್ಥಿತಿಯನ್ನು ಕುರಿತ ಯಾವುದೇ ಶಬ್ದವು ಅಥವಾ ಯಾವುದೇ ವರ್ಣನೆಯು ಅದರ ನಿಜವಾದ ಸ್ವಾದಕ್ಕೆ ಸಮನಾಗಲಾರದು.
ಗುರುಗಳು ಶಾಶ್ವತವಾಗಿ ನೆಲೆಸಿರುವ ಸಂಪೂರ್ಣ ನಿರಸನದ ಬಗ್ಗೆ ಮಾತನಾಡುವುದು ನಿಃಸಂದೇಹವಾಗಿ ಅಸಾಧ್ಯವೇ ಸರಿ. ಗುರುಗಳ ಆ ಸ್ಥಿತಿಯು ನಮ್ಮ ಹೃದಯಾಂತರಾಳದಲ್ಲಿ ಅವನು ನೆಲೆಸುವಂತೆ ಮಾಡುತ್ತದೆ. ನಾವು ಅವರ ಸಾನ್ನಿಧ್ಯದಲ್ಲಿರುವಾಗ ಅವನ ನೈಜ ಅಸ್ತಿತ್ವದ ಪ್ರತಿಫಲನದ ಅನುಭೂತಿ ಪಡೆಯುತ್ತೇವೆ. ಆದ್ದರಿಂದ ಎಲ್ಲ ಬಂಧನಗಳಿಂದ ಮುಕ್ತವಾದ ಅವರ್ಣನೀಯ ಸ್ಥಿತಿಯನ್ನು ಅನುಭವಿಸುತ್ತೇವೆ. ನಾವು ಅತ್ಯಂತ ಲಘು(ಭಾರರಹಿತ)ವಾದಂತೆ ಹಾಗೂ ನಮ್ಮ ಹೃದಯದಿಂದ ಎಲ್ಲ ಭಾರವೂ ಕಳೆದುಹೋಯಿತೆಂಬ ಅನುಭವ ಬರುವುದು.
ನಾವು ಗುರುವಿನ ಸನ್ನಿಧಿಯಿಂದ ಹೊರಗೆ ಹೋದಾಗ ನಮ್ಮ ಸ್ಥೂಲತೆ ಮತ್ತು ಹಳೆಯ ಆಲೋಚನಾ ರೂಢಿಗಳು, ನಮ್ಮ ಮೆಚ್ಚುಗೆ- ತಿರಸ್ಕಾರಗಳ (ರಾಗ-ದ್ವೇಷಗಳ) ಜೊತೆಗೂಡಿದ ನಮ್ಮ ಇಂದ್ರಿಯಗಳ ಚೆಲ್ಲಾಟ ನಮ್ಮನ್ನು ಮಾಯೆ ಅಥವಾ ಭ್ರಮೆಯ ನಿರಂತರ ಪ್ರವಾಹದಲ್ಲಿ ನೂಕುವವು. ಸರಿಯಾದ ದಾರಿ ಯಾವುದೆಂಬುದನ್ನು ತಿಳಿಯದೆ, ಕಳೆದು ಹೋದ ನಮ್ಮ ಸಂಪೂರ್ಣ ಸ್ವಾತಂತ್ರ್ಯದ ಸಾಮ್ರಾಜ್ಯವನ್ನು ಮರಳಿ ಪಡೆಯಲು ನಾವು ಹೆಣಗಾಡುತ್ತ ಹೋಗುವೆವು. ಹಾಗೂ ನಮ್ಮ ಅಂತರಂಗದ ಹಾಗೂ ಬಹಿರಿಂದ್ರಿಯಗಳ ಚೆಲ್ಲಾಟದ ತತ್‌ಕ್ಷಣದ ಆಕರ್ಷಣೆಗಳಿಗೆ ಬಲಿಯಾಗಿ ಮತ್ತು ಹೆಚ್ಚಿನ ಬಂಧನಗಳನ್ನು ಮಾಡಿಕೊಳ್ಳುತ್ತ ಹೋಗುವೆವು.
ಆದ್ದರಿಂದ ಗುರುವಿನ ಸಾನ್ನಿಧ್ಯದಲ್ಲಿ ನಿರಂತರವಾಗಿ ಇರುವುದೇ ಪರಿಹಾರವಾಗಿದೆಯೆಂಬುದು ಸುಸ್ಪಷ್ಟ. ಮತ್ತೆ ಇಲ್ಲಿ ಕೂಡ, ನಮ್ಮ ಇಂದ್ರಿಯಗಳ ಚೆಲ್ಲಾಟದಿಂದ ನಾವು ಸೃಷ್ಟಿಸಿಕೊಂಡ ಭ್ರಮೆಯ ಬಗ್ಗೆ ಜಾಗರೂಕವಾಗಿರಬೇಕು. ಗುರುವು ಕಾಲ, ದೇಶ ಹಾಗೂ (Time, Space and Causality) ಕಾರ್ಯ-ಕಾರಣ ತತ್ತ್ವಗಳ ಪರಿಮಿತಿಗಳಿಗೆ ಅತೀತನಾಗಿರುವುದನ್ನು ನಾವು ಮನಗಾಣಬೇಕು ಅಥವಾ, ಕನಿಷ್ಠಪಕ್ಷ ಹಾಗೆಂದು ಭಾವಿಸಿಕೊಳ್ಳಬೇಕು. ಹಾಗೆನ್ನುವುದಾದರೆ ಅವನು ಪರಮಪುರುಷ, ನಮ್ಮೊಡನಿರುವ ಇಂತಹ ಪರಮಪುರುಷನನ್ನು ಮಾನವರೂಪದಲ್ಲಿರುವ ಗುರುವೆಂದು ನಾವು ನಮ್ಮನ್ನು ಅವನೊಂದಿಗೆ ಜೋಡಿಸಿಕೊಂಡರೆ, ನಮ್ಮ ನಿಜವಾದ ಸ್ವಾತಂತ್ರ್ಯವನ್ನು ನಾವು ಮರಳಿ ಪಡೆಯಬಹುದು.
ನಮ್ಮನ್ನು ನಾವು ಅವನೊಡನೆ ಜೋಡಿಸಿಕೊಳ್ಳಲು, ನಮಗೆ ಸಹಾಯ ಮಾಡಲು ನಾವು ಗುರುವಿಗೆ ಅನುವು ಮಾಡಿಕೊಟ್ಟರೆ, ಅವನ ಪ್ರಾಣಾಹುತಿಯ ಮೂಲಕ ಸುಲಭವಾಗಿ ಸಂಬಂಧವುಂಟಾಗುವುದು, ಮತ್ತು ಮಾಯೆಯ ನಿರಂತರ ಪ್ರವಾಹದಲ್ಲಿ ನಾವು ಸಿಕ್ಕಿಹಾಕಿಕೊಳ್ಳುವ ಸಂಭವವೇ ಇಲ್ಲದಂತೆ ನಮ್ಮ ಸ್ಥೂಲತೆ ಹಾಗೂ ಜಟಿಲತೆ ಮುಂತಾದವುಗಳನ್ನು ಗುರುವು ಶಾಶ್ವತವಾಗಿ ನಿವಾರಿಸಬಲ್ಲನು. ಗುರುವು ಅದನ್ನು ಹೇಗೆ ಮಾಡುತ್ತಾನೆ? ಅವನು ಅದನ್ನು ತನ್ನ ಸಂಕಲ್ಪಶಕ್ತಿಯನ್ನು ಉಪಯೋಗಿಸಿ ಮಾಡುವನು. ನಮ್ಮ ಮನಃಪೂರ್ವಕ ಸಹಕಾರವಂತೂ ಇರಬೇಕಾದದ್ದೇ, ಅಥವಾ ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ, ನಾವು ಅವನ ಸಂಕಲ್ಪಶಕ್ತಿಯೊಂದಿಗೆ ನಮ್ಮನ್ನು ಜೋಡಿಸಿಕೊಳ್ಳಲು ನಮ್ಮ ಸಂಕಲ್ಪಶಕ್ತಿಯನ್ನು ಉಪಯೋಗಿಸಬೇಕು.
ಈ ರೀತಿಯಾಗಿ, ನಮ್ಮ ನಿಜವಾದ ಸ್ವಾತಂತ್ರ್ಯದ ದಾರಿಯು ನಮ್ಮ ವಿಚಾರಪ್ರಕ್ರಿಯೆಯ ಯೋಗ್ಯ ಬಳಕೆಯಲ್ಲಿದೆ. ನಮ್ಮ ಬಂಧನಗಳನ್ನು ನಾವು ಸೃಷ್ಟಿಸಿಕೊಳ್ಳುವುದು ನಮ್ಮ ಆಲೋಚನೆಗಳಿಂದಲೇ ಹಾಗೂ ಅದರಿಂದ ಮಾತ್ರವೇ ಆಗಿದೆ, ಮತ್ತು ಅದರ ಸಹಾಯದಿಂದಲೇ ನಾವು ನಮ್ಮ ನಿಜವಾದ ಸ್ವಾತಂತ್ರ್ಯವನ್ನು ಮರಳಿ ಪಡೆಯುವುದು. ನಮ್ಮದೇ ಚಿಂತನ ಪ್ರಕ್ರಿಯೆಯನ್ನು ಉಪಯೋಗಿಸುವುದರಿಂದಲೇ ನಮ್ಮ ಸಂಪರ್ಕ ಸಾಧಿಸಬಹುದು. ಬರೀ ಚಿಂತನದಿಂದಲೇ ನಾವು ಗುರುವಿನ ಸಾನ್ನಿಧ್ಯದಲ್ಲಿರಬಹುದು. ಚಿಂತನ ಶಕ್ತಿಯ ಮೂಲಕ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಗುರುವಿನೊಡನೆ ಪರಿಪೂರ್ಣ ಐಕ್ಯ ಹೊಂದುವ ಮಾರ್ಗವನ್ನೇ ರಾಜಯೋಗ ಅಥವಾ ಯೋಗಗಳ ರಾಜ ಎಂದು ಕರೆಯಲಾಗಿದೆ. ಸಹಜಮಾರ್ಗವು ರಾಜಯೋಗದ ಸುಧಾರಿತ ಪದ್ಧತಿಯಾಗಿದೆ. ಆದರೆ, ಹಿಂದಿನಂತೆ ಪರಿಮಿತ ಸಂಖ್ಯೆಯ ಆರಿಸಿದ ಕೆಲವರಿಗಾಗಿ ಮಾತ್ರವಲ್ಲದೆ, ಅದನ್ನು ಹೊಂದುವ ಇಚ್ಛೆಯುಳ್ಳ ಯಾರಿಗಾದರೂ ಲಭ್ಯವಾಗುವ ಗುರುವಿನ ಪ್ರಾಣಾಹುತಿಯ ಸಹಾಯವೇ ಅದರ ವಿಶೇಷತೆಯಾಗಿದೆ.
ತನ್ನ ಆಧ್ಯಾತ್ಮಿಕ ಪ್ರಗತಿಗಾಗಿ ಗುರುವಿನ ಪ್ರಾಣಾಹುತಿಯ ಸಹಾಯವನ್ನು ಬಯಸುವ ಯಾರೇ ಆಗಲಿ, ಅದನ್ನು ಸ್ವೀಕರಿಸಲು ತನ್ನಲ್ಲಿ ಸಾಕಷ್ಟು ಗ್ರಹಣಶಕ್ತಿಯನ್ನು ಬೆಳೆಸಿಕೊಳ್ಳಬಹುದು. ಈ ಗ್ರಹಣಶಕ್ತಿಯನ್ನು ನಿರಂತರ ಸ್ಮರಣೆಯಿಂದ ಬಹಳಮಟ್ಟಿಗೆ ಬೆಳೆಸಿಕೊಳ್ಳಲು ಸಾಧ್ಯ. ಗುರುವಿನ ಕುರಿತಾಗಿ ಪ್ರೇಮ ಬೆಳೆಸಿಕೊಳ್ಳುವ ಮೂಲಕ ಅವನನ್ನು ನಾವು ಸದಾಕಾಲವೂ ಸ್ಮರಿಸುವೆವು, ಹಾಗೂ ಅವನ ನಿರಂತರ ಸ್ಮರಣೆಯಿಂದಾಗಿ ಗುರುವು ನಮ್ಮೆಡೆಗೆ ಆಕರ್ಷಿತನಾಗುವನು ಹಾಗೂ ಅವನು ಪ್ರಾಣಾಹುತಿ ನೀಡಬಯಸಿದಾಗಲೆಲ್ಲ ನಾವು ಅದನ್ನು ಪಡೆಯಬಲ್ಲೆವು. ಈ ರೀತಿಯಲ್ಲಿ ನಾವು ಅವನ ಸಾನ್ನಿಧ್ಯದಲ್ಲಿ ನಿರಂತರವಾಗಿ ಇರಲಾರಂಭಿಸುವೆವು.
ಗುರುವಿನ ಸಾನ್ನಿಧ್ಯದಲ್ಲಿ ನಿರಂತರವಾಗಿ ಇರುವುದರಿಂದ ಅದು ನಮ್ಮನ್ನು ಅವನಿಗೆ ತೀರ ಸಮೀಪವಾಗುವ ಸ್ಥಿತಿಗೆ (ಸಾಮೀಪ್ಯ) ಅವನಂತೆಯೇ ಇರುವ (ಸಾರೂಪ್ಯ) ಮತ್ತು ಕೊನೆಗೆ ಅವನಲ್ಲಿ ಅವಿಚ್ಛೇದ್ಯವಾಗಿ ಅವನೊಂದಿಗೆ ಒಂದಾಗುವ (ಸಾಯುಜ್ಯ) ಸ್ಥಿತಿಗೆ ಕರೆದೊಯ್ಯುವುದು.
[ಪೂಜ್ಯ ಬಾಬೂಜಿಯವರ 80ನೆಯ ಜನ್ಮದಿನಾಚರಣೆ, ಅಹಮ್ಮದಾಬಾದ, ಸ್ಮರಣ ಸಂಚಿಕೆ, ಏಪ್ರಿಲ್ 30, 1979]
ಗುರುವನ್ನು ತಾಯಿಯೆಂದು ಭಾವಿಸುವದಂತೂ ಶಿಷ್ಯನಿಗೆ ಅತ್ಯಂತ ಯುಕ್ತವೂ ಲಾಭದಾಯಕವೂ ಆದುದೆಂಬುದು ನನ್ನ ಅಭಿಪ್ರಾಯ…. ಆತನು ಶಿಷ್ಯನ ಅಧ್ಯಾತ್ಮಿಕ ಮಾತೆ.
–
ಶ್ರೀ ಬಾಬೂಜಿ
(ಸತ್ಯೋದಯ 85)