ನಮ್ಮ ಗುರುಗಳು ಯೋಗಮಾರ್ಗದಲ್ಲಿ ಸಂಶೋಧನೆಗಳನ್ನು ಮಾಡಿದ್ದಾರೆ. ಅವರ ಗ್ರಂಥಗಳಾದ ‘ಸಹಜಮಾರ್ಗ’ದ ಬೆಳಕಿನಲ್ಲಿ ರಾಜಯೋಗದ ಪ್ರಭಾವ ಹಾಗೂ ‘ಅನಂತದೆಡೆಗೆ’ ಮುಂತಾದವುಗಳಲ್ಲಿ ತಮ್ಮ ಸಂಶೋಧನೆಯ ಫಲಿತಾಂಶಗಳನ್ನು ಪ್ರಕಟಪಡಿಸಿದ್ದಾರೆ. ಸಮರ್ಥ `ಹಾಗೂ ಅರ್ಹ ವ್ಯಕ್ತಿಗಳು ಅವರ ಅನುಮತಿಯಿಂದ, ಅವರ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆಯಲ್ಲಿ ಅವರ ಸಂಶೋಧನೆಗಳ ಪ್ರಯೋಜನ ಪಡೆಯಬಹುದು.
ಅತ್ಯುತ್ಸಾಹಿಗಳಾದ, ಆದರೆ ತಪ್ಪು ಮಾರ್ಗದರ್ಶನಕ್ಕೀಡಾದ ಕೆಲವು ವ್ಯಕ್ತಿಗಳು ಗುರುಗಳ ಗಮನಕ್ಕೆ ತಾರದೆ ಅವರ ಕೆಲವು ಸಂಶೋಧನೆಗಳನ್ನು ಪ್ರಯೋಗಿಸಿ ನೋಡಲು ಪ್ರಯತ್ನಿಸಿದರು ಮತ್ತು ತಮ್ಮ ಹಾಗೂ ಇತರರ ಸಮಯ, ಶಕ್ತಿಗಳನ್ನು ಹಾಳು ಮಾಡಿದರು. ಅವರು ಎಸಗಿದ ಅಪರಾಧವೆಂದರೆ ಅವರು ಗುರುಗಳೊಂದಿಗೆ ಸಂಬಂಧ ಕಡಿದುಕೊಂಡರು ಮತ್ತು ಗುರುಗಳ ಸಂಶೋಧನೆಗಳು ಹೊಂದಿದ ವಿಶಿಷ್ಟ ಉದ್ದೇಶಗಳನ್ನು ಗ್ರಹಿಸಿ ಅರ್ಥಮಾಡಿಕೊಳ್ಳುವುದರಲ್ಲಿ
ವಿಫಲರಾದರು.
ಸಮರ್ಥ ಗುರುವಿನ ವೈಯಕ್ತಿಕ ಮಾರ್ಗದರ್ಶನವಿಲ್ಲದೆ ಕೇವಲ ಗ್ರಂಥಗಳನ್ನು ಓದುವ ಮೂಲಕ ಯೋಗಾನುಷ್ಠಾನಗಳನ್ನು ಕೈಗೊಳ್ಳುವುದು ಅಪಾಯದ್ದಾಗಿದೆ. ಸಾಮಾನ್ಯವಾಗಿ ಅಸಹಜ ಸ್ಥಿತಿಗಳನ್ನು ಆಧ್ಯಾತ್ಮಿಕ ಸ್ಥಿತಿಗಳೆಂದೂ, ವಿರಕ್ತ ಜೀವನವನ್ನು (ascetics ಸಂನ್ಯಾಸ) ಆಧ್ಯಾತ್ಮಿಕತೆಯೆಂದೂ ಹಾಗೂ ಧ್ಯಾನವನ್ನು ಏಕಾಗ್ರತೆಯ ಅಭ್ಯಾಸವೆಂದೂ ಭ್ರಮಿಸುವ ತಪ್ಪು ಮಾಡುತ್ತಾರೆ. ಇಂತಹ (ವೈಚಾರಿಕ) ಗೊಂದಲಗಳ ಪರಿಣಾಮವು ಅನೇಕ ಜನರನ್ನು ಸಹಜ ಹಾಗೂ ದೈವೀ ಮಾರ್ಗಕ್ಕಿಂತ ವಿಭಿನ್ನ ದಿಶೆಯಲ್ಲಿ ಒಯ್ದವು.
ಗುರುವಿನ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸದಿದ್ದರೆ (ಪಡೆಯದಿದ್ದರೆ ಇಂತಹ ಅಪಾರ್ಥಗಳು ಅದೆಂತು ತಪ್ಪುದಾರಿಗೆ ಎಳೆಯುವವು ಎಂಬುದನ್ನು ತಿಳಿಯಲು ಕೆಲವು ನಿದರ್ಶನಗಳು ಸಹಾಯಕವಾಗುವವು.
ಸಹಜಮಾರ್ಗ ಪದ್ಧತಿಯಲ್ಲಿ (ಅಭ್ಯಾಸದಲ್ಲಿ) ಅತ್ಯಂತ ಪ್ರಯೋಜನಕಾರಿಯೂ, ಅದರ ವಿಧಾನವು ಅತ್ಯಂತ ಸರಳವೂ ಆಗಿದೆ; ಅದರ ಉದ್ದೇಶ ಚಿಂತನ ಶಕ್ತಿಯನ್ನು ಪ್ರಕಾಶಿತಗೊಳಿಸುವುದು ಮತ್ತು ಸಂಕಲ್ಪಶಕ್ತಿಯ ಪ್ರಯೋಜನ ಪಡೆಯುವುದು. ಪ್ರಾರ್ಥನೆಯ ಅರ್ಥದ ಪೂರ್ಣ ತಿಳಿವಳಿಕೆಯೊಂದಿಗೆ, ಅದನ್ನು ಒಂದೆರಡು ಬಾರಿ ಪುನರುಚ್ಚರಿಸಬೇಕು, ಮತ್ತು ಮಲಗುವ ಸಮಯದಲ್ಲಿ ಪ್ರಾರ್ಥನೆಯ ಸ್ಥಿತಿಯನ್ನು ನಮ್ಮಲ್ಲಿ ಬೆಳೆಸಿಕೊಂಡು ನಿದ್ದೆ ಹೋಗಬೇಕು. ಆದರೆ ಅನೇಕ ಅಭ್ಯಾಸಿಗಳು ಅದರ ಅರ್ಥದ ಕಡೆಗೆ ಸ್ವಲ್ಪವೂ ಗಮನಕೊಡದೆ ಯಾಂತ್ರಿಕವಾಗಿ ಪುನರುಚ್ಚರಿಸುತ್ತಾರೆ; ಇಲ್ಲವೆ ತಮ್ಮ ಇಚ್ಛೆಗಳನ್ನು ಪೂರ್ತಿಗೊಳಿಸಲು ದೇವರನ್ನು ಯಾಚಿಸುವ ತಮಗಿಷ್ಟವಾದ ಧಾರ್ಮಿಕ ಪ್ರಾರ್ಥನೆಗಳನ್ನು ಪುನರುಚ್ಚರಿಸುತ್ತಾರೆ. ಹೀಗೆ ಅನೇಕ ವರ್ಷಗಳ ನಂತರವೂ ಅವರು ಪ್ರಾರ್ಥನೆಯ ನೈಜ ಸ್ಥಿತಿಯನ್ನು ಪಡೆಯದೆ ಅದರಿಂದ ಬಹುದೂರವೇ ಉಳಿಯುತ್ತಾರೆ.
ಹೃದಯ ಮಂಡಲದ ‘ಎ’ ಮತ್ತು ‘ಬಿ’ ಬಿಂದುಗಳು, ಸಾಮಾನ್ಯವಾಗಿ ಇಡೀ ಮಾನವಕುಲಕ್ಕೆ, ವಿಶೇಷವಾಗಿ ಸಹಜಮಾರ್ಗದ ಅಭ್ಯಾಸಿಗಳಿಗೆ ವರದಾನವಾಗಿವೆ. ಈ ಬಿಂದುಗಳ ಮೇಲೆ, ಗುರುವಿನಿಂದ ನಿರ್ದೇಶಿಸಲಾದ ವಿಶೇಷ ವಿಚಾರಗಳೊಂದಿಗಿನ ಕ್ರಮಬದ್ಧವಾದ, ಕೆಲವೇ ನಿಮಿಷಗಳ ಅಭ್ಯಾಸವು ಇಚ್ಛಿತ ಪರಿಣಾಮಗಳನ್ನು ಸ್ವಲ್ಪ ಸಮಯದಲ್ಲಿ ಕೊಡಬಲ್ಲುದು. ಒಂದುವೇಳೆ, ಕ್ರಮಬದ್ಧವಾಗಿ ಕೆಲವು ನಿಮಿಷಗಳ ಕಾಲ ಏಕಾಗ್ರರಾಗುವ ಬದಲು, ಕೆಲವು ದಾರಿ ತಪ್ಪಿದ ಅತ್ಯುತ್ಸಾಹಿ ಅಭ್ಯಾಸಿಗಳು ಮಾನವ ಸ್ವಭಾವಕ್ಕೆ ವ್ಯತಿರಿಕ್ತವಾದ ಸ್ಥಿತಿಗಳನ್ನು ಬೆಳೆಸುವ ಈ ಬಿಂದುಗಳ ಮೇಲೆ ಒಂದು ತಾಸಿನಷ್ಟು ಕಾಲ ಧ್ಯಾನ ಮಾಡಿದರೆ ಅಥವಾ ಇತರರಿಗೆ ಹಾಗೆ ಮಾಡಲು ಹೇಳಿದರೆ, ಅದು ಅವರಿಗೂ, ಇತರರಿಗೂ ಮಾಡುವ ಅಪಚಾರವಾಗುವುದು. ಮತ್ತು ಇಂತಹ ಪ್ರಕರಣಗಳನ್ನು ಬಹಳಷ್ಟು ಹಾನಿಗೊಳಗಾದ ನಂತರ ತಂದುದಾದರೆ ಗುರುಗಳು ಬಹಳ ಬೇಸರಕ್ಕೀಡಾಗುವರು.
ಗುರುವಿನ ಪ್ರಾಣಾಹುತಿಯ ನೆರವು ಹೊಂದಿದ ಧ್ಯಾನದ ಸರಿಯಾದ ಅಭ್ಯಾಸವು ನೀಡುವ, ಹಾಗೂ ನಿಜಕ್ಕೂ ದೈವೀ ಶಕ್ತಿಯೇ ಆದ, ದೈವೀ ಜ್ಞಾನದ ವಿಭಿನ್ನ ಹಂತಗಳ ಅಥವಾ ಬಿಂದುಗಳ ವರ್ಣನೆಯನ್ನು ಗುರುಗಳ ಅನಂತದೆಡೆಗೆ’ ಎಂಬ ಪುಸ್ತಕವು ಕೊಡುತ್ತದೆ. ಆದರೆ, ಕೆಲವೊಮ್ಮೆ ಕಂಡುಬಂದಿರುವುದೇನೆಂದರೆ, ಕೆಲವು ಅಭ್ಯಾಸಿಗಳು ಶರೀರದ ಬೇರೆ ಬೇರೆ ಭಾಗಗಳಲ್ಲಿ ಸ್ಪಂದನೆ (ಮಿಡಿತ) ಅಥವಾ ಅಂತಹ ಸಂವೇದನೆಗಳನ್ನು ಆಯಾ ಬಿಂದುಗಳು ಜಾಗೃತವಾಗುವುದರ ಸೂಚಕ ಎಂದು ತಪ್ಪಾಗಿ ಭಾವಿಸುತ್ತಾರೆ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿಯ ತಮ್ಮ ಪ್ರಗತಿಯನ್ನು ಕುರಿತು ಭ್ರಮೆಗೊಳಗಾಗತೊಡಗುವರು.
ನಮ್ರತೆಯ ಸ್ಥಿತಿ ಅಥವಾ ವಿನೀತಭಾವವು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರವೇಶಿಸುವ ವ್ಯಕ್ತಿಯ ಪ್ರಾಥಮಿಕ ಆವಶ್ಯಕತೆಯಾಗಿದೆ. ಒಬ್ಬನು ಅಧ್ಯಾತ್ಮದಲ್ಲಿ ಪ್ರಗತಿಹೊಂದುತ್ತ ಹೋದಂತೆ, ಅದೇ ಪ್ರಮಾಣದಲ್ಲಿ ಅವನ ಹೆಚ್ಚು ಹೆಚ್ಚು ವಿನಮ್ರನಾಗುತ್ತಾನೆ. ಎಷ್ಟರಮಟ್ಟಿಗೆ ಎಂದರೆ, ತನ್ನ ಪ್ರಗತಿಯ ಉನ್ನತ ಸ್ತರದಲ್ಲಿ ಅವನು ಸಂಪೂರ್ಣ ಆತ್ಮನಿರಸನದ ಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾನೆ ಮತ್ತು ಅವನು ‘ಅನಂತ’ವನ್ನು ಕಾಣುತ್ತಿರುವನಾದ್ದರಿಂದ, ತಾನು ಅತ್ಯಂತ ಅಲ್ಪನೆಂಬ ಭಾವದಲ್ಲಿರುತ್ತಾನೆ. ಇದರ ವಿಪರೀತವೂ ಸತ್ಯವೇ, ಅಂದರೆ, ಒಬ್ಬ ವ್ಯಕ್ತಿಯಲ್ಲಿ ವಿನಯಶೀಲತೆಯಿಲ್ಲದಿದ್ದರೆ, ಆಗ, ಗುರುಪದಕ್ಕಾಗಿ, ಸಂತಪದಕ್ಕಾಗಿ ಅಥವಾ ದೇವತ್ವದ ಹಕ್ಕಿಗಾಗಿ ಅವನು ಅಥವಾ ಅವನ ಅನುಯಾಯಿಗಳು ಎಷ್ಟೇ ಪ್ರಚಾರ ಮಾಡಬಹುದಾದರೂ ಅವನಲ್ಲಿ ಆಧ್ಯಾತ್ಮಿಕ ಪ್ರಕಾಶದ ಲವಲೇಶವೂ ಕೂಡ ಇಲ್ಲವೆಂಬುದೂ ಅಷ್ಟೇ ಸತ್ಯ.
ಧ್ಯಾನ ಮತ್ತು ಶುದ್ದೀಕರಣಗಳ ಅಭ್ಯಾಸ ಮತ್ತು ಪ್ರಾಣಾಹುತಿಯ ಕುರಿತಾದ, ನಮ್ಮ ಗುರುಗಳ ಸಂಶೋಧನೆಗಳು ಪ್ರಾಚೀನ ಶಿಷ್ಟ ಪರಂಪರೆಯ, ಆದರೆ, ದೈಹಿಕ, ಹಾಗೂ ಮಾನಸಿಕ ದಂಡನೆಯ ಅಭ್ಯಾಸಗಳ, ವಿಶಿಷ್ಟ ನೀತಿ-ನಿಯಮಗಳನ್ನು ಪ್ರಯಾಸ- ಪ್ರಯತ್ನಪೂರ್ವಕ ಬೆಳೆಸಿಕೊಳ್ಳುವ, ಹಾಗೂ ಸಹಜಪ್ರವೃತ್ತಿಗಳ ದಮನ ಮನಸ್ಸಿನ ಉಗ್ರ ನಿಗ್ರಹ ಇವುಗಳನ್ನು ತೆಗೆದುಹಾಕಿರುವುದು ನಿಃಸಂದೇಹ. ಆದರೆ, ಆ ಇಂದ್ರಿಯಗಳ ಸ್ಟೇಚ್ಚಾಚಾರ ಪ್ರತಿಪಾದಿಸಲಾಗುತ್ತಿದೆಯೆಂದಾಗಲಿ, ಅಥವಾ ಇಂದ್ರಿಯಾಸಕ್ತಿಯ ಸುಖ ಭೋಗದಲ್ಲಿ ಮುಳುಗುವುದನ್ನು ಸಲಹೆ ಮಾಡುತ್ತಿದೆಯೆಂದಾಗಲಿ ತಪ್ಪಾಗಿ ಭಾವಿಸಕೂಡದು. ಗುರುವಿನೊಂದಿಗೆ ಅಭ್ಯಾಸಿಯ ಮನಃಪೂರ್ವಕ ಸಹಕಾರದಿಂದ, ಹೃದಯದ ಬಯಕೆಗಳನ್ನು ನಿಯಮನಗೊಳಿಸುವ ವೈರಾಗ್ಯದ ಸ್ಥಿತಿಗಳು ಮತ್ತು ಸಂಯಮಗಳು ತಮ್ಮಿಂದ ತಾವೇ, ಅಪ್ರಯತ್ನವಾಗಿ ಬೆಳೆದು ಬರಬೇಕು. ಆಗ ಮಾತ್ರವೇ ಅಭ್ಯಾಸಿಯು ಗುರುಗಳ ಪ್ರಾಣಾಹುತಿಯಿಂದ ಲಾಭಹೊಂದಲು ಆಶಿಸಬಹುದು ಮತ್ತು ಮಾನವ ಜೀವನದ ನಿಜವಾದ ಗುರಿಯನ್ನು ಸಾಕ್ಷಾತ್ಕರಿಸಿಕೊಳ್ಳಬಹುದು.
ಗುರುಗಳು ನಮಗೆ ಯೋಗ್ಯ ಚಿಂತನ ಹಾಗೂ ಯೋಗ್ಯ ತಿಳುವಳಿಕೆಯನ್ನು ಅನುಗ್ರಹಿಸಲಿ ಮತ್ತು ದೈವೀ ಪ್ರೇರಣೆಯನ್ನು ಪ್ರಾಣಾಹುತಿಯ ಮೂಲಕ ನೀಡುತ್ತ ನಮ್ಮ ಮಧ್ಯದಲ್ಲಿ ಸುದೀರ್ಘ ಕಾಲ ಬಾಳಲಿ !
[81 ನೆಯ ಜನ್ಮದಿನಾಚರಣೆ, ಏಪ್ರಿಲ್ 30, 1980, ದಿಲ್ಲಿ]
ನಾವು ಗುಣದಿಂದ ಗುಣಿಯ ಕಡೆಗೂ ಅಲ್ಲಿಂದ ಮುಂದೆ ಅದರ ಮೂಲಕ್ಕೂ ಸಾಗುವೆವು. ಆದುದರಿಂದ ನಿರಂತರ ಸ್ಮರಣೆಗಾಗಿ ನಾವು ಗುಣವನ್ನು ತೆಗೆದುಕೊಂಡು ನಮ್ಮ ಚಿಂತನವನ್ನು ಅದಕ್ಕೆ ಜೋಡಿಸುವೆವು. ಅದರಿಂದ ಗುಣವುಳ್ಳವನ ಕಡೆಗೆ ಸಾಗಿ ಅದರಾಚೆಗೆ ಅನಂತದ ಕಡೆಗೆ ನಡೆಯುವೆವು. ಇದು ಸಹಜವಾದ ಹಾಗೂ ಅತ್ಯಂತ ಪರಿಣಾಮಕಾಲಯಾದ ಮಾರ್ಗ.
–
ಶ್ರೀ ಬಾಬೂಜಿ
(ಋತವಾಣಿ 207)