ಪ್ರಿಯ ಸೋದರ ಸೋದರಿಯರೆ,
ಈ ಶುಭದಿನದಂದು ನಿಮ್ಮೊಡನೆ ಮಾತನಾಡಲು ನನಗೆ ಸಂತೋಷವೆನಿಸುತ್ತದೆ. ಫತೇಪ್ಗಡದ (ಉ.ಪ್ರ.) ಶ್ರೀ ರಾಮಚಂದ್ರಜಿಯವರ ಜನ್ಮದಿನವು ನಮ್ಮ ಮಿಷನ್ನಿನ ಮಹತ್ತ್ವದ ದಿನವಾಗಿದೆ. ಈ ಉತ್ಸವದಲ್ಲಿ ಪಾಲುಗೊಳ್ಳಲು ನಮ್ಮ ಗುರುಗಳು ಎಲ್ಲ ಸತ್ಸಂಗಿಗಳನ್ನು ಆಮಂತ್ರಿಸುತ್ತಾರೆ.
ಗುರುಗಳ ಸುತ್ತಲೂ ನಾವು ಇಲ್ಲಿ ನೆರೆದಾಗ ನಮ್ಮ ಹೃದಯದಲ್ಲಿ ಪ್ರಧಾನವಾಗಿ ನೆಲೆಸಿದ ಸ್ಥಿತಿಯನ್ನು ನಾವು ಪರಿಶೀಲಿಸಿ ನೋಡಬೇಕು. ಸಹಜಮಾರ್ಗದ ಅಭ್ಯಾಸಿಗಳಾದ ನಾವು ನಮ್ಮ ಪ್ರಗತಿ, ನಮ್ಮ ಆಧ್ಯಾತ್ಮಿಕ ಅಭಿವೃದ್ಧಿ ಇತ್ಯಾದಿಗಳೆಲ್ಲದರ ಬಗ್ಗೆ ತಿಳಿಯಲು ಬಯಸುತ್ತೇವೆ. ಅನೇಕ ಅಭ್ಯಾಸಿಗಳು ‘ನನಗೆ ಏನೂ ಅನಿಸುವುದಿಲ್ಲ’ ಎಂದು ಹೇಳುತ್ತಾರೆ. ಅವರಿಗೆ ತಿಳಿದಿಲ್ಲ, ಆದಕಾರಣ ಅವರಿಗೆ ಮಾರ್ಗದರ್ಶನ ಮಾಡಲು, ಸಹಾಯ ಮಾಡಲು, ಅವರಿಗೆ ಅನುಭವಕ್ಕೆ ಬರುವಂತೆ ಮಾಡಲು ಎಲ್ಲದಕ್ಕೂ ಪ್ರಶಿಕ್ಷಕ ಬೇಕು. ಹೃದಯದ ಸ್ಥಿತಿಯನ್ನು ಅರಿಯುವ ಪ್ರಯತ್ನಕ್ಕೆ ಒಂದು ಅಭ್ಯಾಸ ಉಂಟು. ಹೃದಯವು ಇಂತಹ ಸ್ಥಿತಿಯ ಸೂಚಕವಾಗಿದೆ. ಇಲ್ಲಿ ನಾವೆಲ್ಲರೂ ಸೇರಿದ್ದೇವೆ, ಮತ್ತು ನಮ್ಮ ಪ್ರಿಯ ಗುರುಗಳು ನಮ್ಮೆಲ್ಲರ ಹೃದಯಗಳಲ್ಲಿ ವ್ಯಾಪಿಸಿದ್ದಾರೆ. ಅಲ್ಲಿ ಸಾಕ್ಷಾತ್ಕಾರವಿದೆ, ಮತ್ತು ಸರ್ವತ್ರ ವ್ಯಾಪಿಸಿರುವ ಆ ‘ಏಕ’ವನ್ನು, ಸರ್ವವ್ಯಾಪಿಯಾದ ಗುರುಮಹಾರಾಜರನ್ನು ಕಾಣುವುದು ಉಂಟು. ನಿಮ್ಮ ಹೃದಯದಲ್ಲಿ ನೆಲೆಸಿದ ಆ ಸ್ಥಿತಿಯನ್ನು ಗಮನಿಸಿರಿ. ಅದು ನಿಮಗೆ ಆಧ್ಯಾತ್ಮಿಕ ಸ್ಥಿತಿಯ ಕಲ್ಪನೆಯನ್ನು ಕೊಡುವುದು. ಅದೇ ರೀತಿ, ಸಾಮಾನ್ಯವಾಗಿ ನಮಗೆ ಕಂಡುಬರುವ ಸಂಬಂಧಗಳಾದ ಪ್ರೇಮ, ಮಮತೆ, ಏಕತೆಯ ಭಾವನೆ, ಒಂದು ಮಹಾ ಸಂಸ್ಥೆಗೆ ಸೇರಿದವರು ನಾವು ಎಂಬ ಭಾವ, ಮಾನವಕುಲದ ಇತಿಹಾಸದಲ್ಲಿ ನಡೆಯುತ್ತಿರುವ ಈ ನಾಟಕದಲ್ಲಿ ನಾವೂ ಪಾತ್ರಧಾರಿಗಳೆಂಬ ಅನಿಸಿಕೆ – ಇವು ನಾವು ಮನಗಾಣಬೇಕಾದ ಕೆಲವು ಉಚ್ಚ ಸ್ಥಿತಿಗಳಾಗಿವೆ. ನೀವು ನಿಮ್ಮ ಹೃದಯದತ್ತನೋಡಿದರೆ, ಅದು ಆಧ್ಯಾತ್ಮಿಕ ಸ್ಥಿತಿಯನ್ನು ಸೂಚಿಸುವುದು.
ಸಾಮಾನ್ಯವಾಗಿ, ಅಭ್ಯಾಸಿಯು ಒಂದಿಷ್ಟು ಸಂವೇದನೆಯನ್ನು ಅನುಭವಿಸಬಯಸುತ್ತಾನೆ ಮತ್ತು ಯಾವ ಸಂವೇದನೆಯನ್ನೂ ಅವನು ಅನುಭವಿಸದಿದ್ದಾಗ, ಅದನ್ನು ತಿಳಿಯಲು ಅಸಮರ್ಥನಾಗುತ್ತಾನೆ. ಅವನು ಇಂದ್ರಿಯ ಲಭ್ಯವಾಗುವ ಒಂದು ಬಗೆಯ ಭೌತಿಕ ಇಂದ್ರಿಯಾನುಭವಗಳಿಗೆ ಒಗ್ಗಿರುತ್ತಾನೆ. ಇದು ಬೇರೆ ವಿಷಯವೇ ಆಗಿದೆ; ಹಾಗೂ ಆಧ್ಯಾತ್ಮಿಕ ಅನುಭವವು ಇಂದ್ರಿಯಾತೀತವಾದುದು. ಹಾಗಿರುವುದರಿಂದ, ನಾವು ಸೂಕ್ಷ್ಮತೆಯನ್ನು ಅಥವಾ ಸೂಕ್ಷ್ಮಸ್ಥಿತಿಯನ್ನು ಗ್ರಹಿಸುವ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಬೇಕು. ಹಾಗಾದರೆ, ಅದರ ವಿಧಾನ ಯಾವುದು, ಅದೊಂದು ಸರಳ ವಿಧಾನವಾಗಿದ್ದು, ಅದನ್ನು ನಾವು ಬೆಳೆಸಿಕೊಳ್ಳಬೇಕು-ಅದೆಂದರೆ, ಸಹಜಮಾರ್ಗದಲ್ಲಿ ವಿಧಿಸಲಾದ ಧ್ಯಾನ, ಹಾಗೂ ನಾವು ಪ್ರತಿದಿನವೂ ಅಭ್ಯಾಸ ಮಾಡುವ ಶುದ್ದೀಕರಣ, ಪ್ರಾರ್ಥನೆ ಮತ್ತು ಗುರುವಿನ ನಿರಂತರ ಸ್ಮರಣೆ. ಈ ಸರಳ ಅಭ್ಯಾಸವು ಈ ಮಾರ್ಗದಲ್ಲಿ ನಾವು ಹೊಂದುವ ಪ್ರಗತಿಯ ಬಗ್ಗೆ ತಿಳಿದುಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳಲು ನಮಗೆ ಸಹಾಯ ಮಾಡುವುದು.
ನಿಜಕ್ಕೂ ಸಹಜಮಾರ್ಗವು ಒ೦ದು ಹೊಸ ಸಂಶೋಧನೆಯಾಗಿದೆ; ಯೋಗದಲ್ಲಿಯ ತರಬೇತಿಯಲ್ಲಿ ಒಂದು ಹೊಸ ಮಾರ್ಗವಾಗಿದೆ. ಮೊದಲು ಅನುಸರಿಸಲಾಗುತ್ತಿದ್ದ ಪದ್ಧತಿಗಳ ಬಹಳ ದೀರ್ಘ ಮತ್ತು ಕಷ್ಟಕರವಾಗಿದ್ದವು. ಅವುಗಳ ಬಗ್ಗೆ ಕೇಳುತ್ತಲೇ ಒಬ್ಬನು ನಿರುತ್ಸಾಹಗೊಳ್ಳುತ್ತಿದ್ದನು, ಹಾಗೂ ತಾನು ಅಧ್ಯಾತ್ಮಮಾರ್ಗದಲ್ಲಿ ನಡೆಯಲಾರೆನೆಂದು ಯೋಚಿಸುತ್ತಿದ್ದನು. ಬೇರೆ ಕೆಲವು ಪದ್ಧತಿಗಳು ಅದೆಷ್ಟು ಜಟಿಲ ಮತ್ತು ಕೆಲವೊಮ್ಮೆ ಸ್ಥೂಲ ತರಹದವಾಗಿದ್ದುವೆಂದರೆ, ಯಾವನಾದರೂ ಅವುಗಳನ್ನು ಅನುಸರಿಸಿದರೆ, ಹುಚ್ಚ ಅಥವಾ ಮಂದಬುದ್ಧಿಯವನಾಗಬಹುದಿತ್ತು.ಹಾಗಿರಲಾಗಿ,ಯೋಗದ ಅಭ್ಯಾಸದ ಬಗ್ಗೆ ಜನರ ಹೃದಯದಲ್ಲಿ ಅಂಜಿಕೆ ಬೆಳೆಯಿತು. ಅಲ್ಲದೆ, ಇನ್ನು ಕೆಲವು ಡಾಂಭಿಕ ಗುರುಗಳು ಸಮಾಧಿಯೆಂದು ಕರೆಯಲಾಗುವ ಸ್ಥಿತಿಯನ್ನು ತರಲು ಮಾದಕ ಪದಾರ್ಥಗಳ ಮತ್ತು ಔಷಧಗಳನ್ನು (drugs) ಸೇವಿಸುವ ಸಲಹೆ ಮಾಡಿದರು. ಆ ಕಾರಣದಿಂದ, ಸೂಕ್ಷ್ಮವಾದ ಆಧ್ಯಾತ್ಮಿಕ ಸ್ಥಿತಿಗಳು ಮತ್ತು ಅವುಗಳ ಕುರಿತಾದ ಸರಿಯಾದ ಕಲ್ಪನೆಗಳು ನಷ್ಟವಾಗಿ ಹೋದವು; ಹಾಗೂ ಸ್ಥೂಲ ಭೌತಿಕ ಸ್ಥಿತಿಗಳನ್ನು ಆಧ್ಯಾತ್ಮಿಕ ಸ್ಥಿತಿಗಳೆಂದು ಸ್ವೀಕರಿಸಲಾಯಿತು.
ಈಗ, ಕಳೆದು ಹೋದ ಆ ಜ್ಞಾನವನ್ನು ಸಹಜಮಾರ್ಗವು ನಮಗೆ ಮರಳಿ ತಂದಿದೆ. ಈ ಜ್ಞಾನವು ಎಲ್ಲರಿಗೆ ಲಭ್ಯವಾಗುವಂತೆ ಮಾಡಿದ ಹಾಗೂ ಪ್ರಾಣಾಹುತಿಯೆಂಬ ನವೀನ, ಅಂಗವನ್ನು ಪರಿಚಯಿಸಿದ ಶ್ರೇಯಸ್ಸು ನಮ್ಮ ಗುರುಗಳಿಗೆ ಸಲ್ಲುತ್ತದೆ. ಈ ಪ್ರಾಣಾಹುತಿಯು ಅಭ್ಯಾಸಿಗೆ ಸಹಾಯಕವೂ, ಲಾಭದಾಯಕವೂ ಆಗಿದೆ. ಮತ್ತು ಅದರಿಂದಾಗಿ ಬಹಳಷ್ಟು ಶ್ರಮ ಮತ್ತು ಕಠಿಣ ಕಾರ್ಯಭಾರವನ್ನು ಕಡಿಮೆ ಮಾಡಲಾಗಿದೆ. ಅಲ್ಲದೆ ಪ್ರಾಣಾಹುತಿಯ ಸಹಾಯದಿಂದ ಅಭ್ಯಾಸಿಯು ಶೀಘ್ರವಾಗಿ ಪ್ರಗತಿ ಹೊಂದುವನು.
ಅಭ್ಯಾಸಿಯ ಹೃದಯದಲ್ಲಿ ದೈವಿಕತೆಯ ಶಕ್ತಿಧಾರೆಯನ್ನೆರೆಯುವ (ಪ್ರಾಣಾಹುತಿಯ) ಈ ಪದ್ಧತಿಯು ನಿಜಕ್ಕೂ ಅದ್ಭುತ ಸಂಗತಿಯಾಗಿದೆ. ಹಿಂದೂ ಶಾಸ್ತ್ರಗಳಿಗನುಸಾರವಾಗಿ, ಪ್ರಾಚೀನ ಸಾಧನಗಳಾದ ವಿವೇಕ, ವೈರಾಗ್ಯ, ಆಸನ, ಪ್ರಾಣಾಯಾಮ, ಮುಂತಾದ ಅಭ್ಯಾಸಗಳು ಎಷ್ಟು ದೀರ್ಘಕಾಲ ತೆಗೆದುಕೊಳ್ಳುವಂತಹವೂ, ಹಾಗೂ ಶ್ರಮದಾಯಕವೂ ಆಗಿದ್ದುವೆಂದರೆ, ಅವುಗಳ ಪೈಕಿ ಒಂದನ್ನು ಪೂರ್ಣಗೊಳಿಸಲಿಕ್ಕೂ ಅನೇಕ ವರ್ಷಗಳು ಬೇಕಾಗಬಹುದಿತ್ತು. ಇದರ ಅರ್ಥ, ಆ ಅಭ್ಯಾಸಗಳು ಅನಾವಶ್ಯಕವೆಂದಲ್ಲ. ಅವು ಅಗತ್ಯ ಬೇಕಾದವುಗಳೇ ಆಗಿವೆ.
ನೀವು ಸಹಜಮಾರ್ಗದ ಅನುಸಾರವಾಗಿ ಧ್ಯಾನಾಭ್ಯಾಸವನ್ನು ಮಾಡುತ್ತಿದ್ದರೆ, ವೈರಾಗ್ಯವು ಬೆಳೆಯಲೇಬೇಕು. ವೈರಾಗ್ಯವು ಬೆಳೆಯುತ್ತಿಲ್ಲವೆಂದಾದರೆ, ಇಂದ್ರಿಯ ವಿಷಯಗಳಲ್ಲಿ, ಸ್ವಚ್ಛಂದತೆ, ಲೋಭ, ಕಾಮ ಹಾಗೂ ಇಚ್ಛೆಗಳು ಇನ್ನೂ ಅಂಟಿಕೊಂಡಿರುವುವೆಂದಾದರೆ, ನಿಮ್ಮ ಧ್ಯಾನದ ಅಭ್ಯಾಸದಲ್ಲಿ ಏನೋ ದೋಷವುಂಟೆಂದು ಅರ್ಥ. ಆಗ ನಿಮಗೆ ಸಹಾಯ ಮಾಡಲು ನೀವು ಪ್ರಶಿಕ್ಷಕರೊಂದಿಗೆ ಸಮಾಲೋಚಿಸಬೇಕು. ವೈರಾಗ್ಯದ ಸ್ಥಿತಿಯು ಅತ್ಯವಶ್ಯವಾದುದು. (ಆದರೆ) ಹಾಗೆ, ವೈರಾಗ್ಯದ ಅಭ್ಯಾಸವನ್ನು ಅದಿರುವಂತೆಯೇ ಕೈಗೆತ್ತಿಕೊಳ್ಳಬಾರದು. ‘ವೈರಾಗ್ಯ’ವು ಅಭ್ಯಾಸ ಮಾಡತಕ್ಕ ವಿಧಾನವಲ್ಲ, ಬದಲಿಗೆ, ಅವಶ್ಯವಾಗಿ ಹೊಂದಬೇಕಾದ ಒಂದು ಸ್ಥಿತಿ. ಸೂಕ್ಷ್ಮತರ ಸ್ಥಿತಿಗಳಲ್ಲಿ ನೀವು ಮುಂದುವರಿಯಬೇಕಿದ್ದರೆ ಅದು ಅವಶ್ಯ ಬೇಕು. ಹಾಗಿರುವುದರಿಂದ, ನಿಮ್ಮಲ್ಲಿ ಬೆಳೆದ ವೈರಾಗ್ಯದ ಸ್ಥಿತಿಯನ್ನು ಅವಲೋಕಿಸಿ ನೀವು ಪರೀಕ್ಷಿಸಿಕೊಳ್ಳಬಹುದು. ಒಂದು ವೇಳೆ ವೈರಾಗ್ಯ ಬೆಳೆದಿಲ್ಲವಾದರೆ ನೀವು ನಿಮ್ಮ ಪ್ರಗತಿ ಹೊಂದಿಲ್ಲ, ಮತ್ತು ನಿಮಗೆ ಸಹಾಯದ ಆವಶ್ಯಕತೆಯಿದೆಯೆಂಬುದು ನಿಶ್ಚಿತ.
ನಿಮ್ಮ ಸಹಜೀವಿಗಳ ಬಗ್ಗೆ, ನಿಮ್ಮ ಸೋದರ ಸೋದರಿಯರ ಬಗ್ಗೆ ಇರುವ ಪ್ರೇಮದ ವಿಷಯವೂ ಅಂತೆಯೇ ಇದೆ. ನೀವು ನಿಮ್ಮ ಗುರುವನ್ನು ಪ್ರೀತಿಸಿರಿ, ಅವನನ್ನು ಪುನಃ ಪುನಃ ಸ್ಮರಿಸುತ್ತಿರಿ; ನೀವು ಅವನ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಿರಿ. ನೀವು ನಿಜವಾಗಿಯೂ ಪ್ರಗತಿ ಹೊಂದಿದರೆ ಹಾಗೂ ಅವನೊಂದಿಗೆ ಒಂದಾಗಿದ್ದರೆ, ಅದರ ಪರಿಣಾಮವೇನೆಂದರೆ, ನೀವು ಸಮಸ್ತ ಮಾನವಕುಲದೊಂದಿಗೆ ಒಂದಾಗಿರಬೇಕು, ಅಥವಾ ಒಂದಾಗುವಿರಿ; ಯಾರಲ್ಲಿ ಗುರುವು ಸದಾ ವ್ಯಾಪಿಸಿರುವನೋ ಆ ಇಡೀ ಮಾನವಕೋಟಿಯನ್ನು ನೀವು ಪ್ರೀತಿಸಬೇಕು. ನಿಮ್ಮ ಬಂಧುಗಳಲ್ಲಿ ಗುರುವಿನ ಬೆಳಕನ್ನು ಕಾಣಲು ಅಸಮರ್ಥರಿದ್ದರೆ, ಅದರ ಅರ್ಥ, ನಿಮ್ಮ ಅಭ್ಯಾಸದಲ್ಲಿ ಏನೋ ಒಂದು ದೋಷವಿದೆ. ಒಂದು ವೇಳೆ, ದ್ವೇಷ, ಮತ್ಸರ, ತಿರಸ್ಕಾರ ಮತ್ತಿತರ ಅಡ್ಡಿಗಳು ನಮ್ಮ ಹೃದಯದಲ್ಲಿ ಆ ಇನ್ನೂ ಉಳಿದುಕೊಂಡಿವೆಯೆಂದರೆ, ನಮ್ಮ ಪ್ರಗತಿಯಲ್ಲಿ ಏನೋ ಒಂದು ದೋಷವುಂಟು. ಆಗ ಯೋಗ್ಯ ಪ್ರಶಿಕ್ಷಕರಿಂದ ನಾವು ತಿದ್ದಿಸಿಕೊಳ್ಳಬೇಕು. ಏಕೆಂದರೆ, ಅವರು ಪ್ರಾಣಾಹುತಿ ಶಕ್ತಿಯನ್ನು ಹೊಂದಿರುವರಲ್ಲದೆ, ಅವರ ಮುಖಾಂತರ ಗುರುಗಳು ಕೆಲಸ ಮಾಡುತ್ತಾರೆ. ಹಾಗೂ ನಮ್ಮ ಹೃದಯದಲ್ಲಿರುವ ಸ್ಥೂಲತೆ, ಅಂಧಕಾರ ಮತ್ತು ಎಲ್ಲ ಅಡೆತಡೆಗಳನ್ನು ನಿವಾರಿಸುವರು.
ಪ್ರಾಣಾಹುತಿ ಪ್ರಕ್ರಿಯೆಯಿಂದ ಸಂಪೂರ್ಣ ಶರೀರ ರಚನೆಯು ಶುದ್ಧವಾಗುವುದು. ಇದೇ ಅಧ್ಯಾತ್ಮವಾಗಿದೆ. ಸಾಮಾನ್ಯವಾಗಿ ಅಭ್ಯಾಸಿಗೆ ತೊಂದರೆ ಕೊಡುವ ಜಟಿಲತೆಗಳ ಅರಿವು ಇರುವುದಿಲ್ಲ. ಆದುದರಿಂದ ಪ್ರಶಿಕ್ಷಕರು ಅವನಿಗೆ ಸಹಾಯ ಮಾಡುವರು, ಹಾಗೂ ಪೂರ್ಣ ಸಂರಚನೆಯನ್ನು ಶುದ್ಧಗೊಳಿಸುವರು. ನಾನು ವಿವರಿಸಿದಂತೆ ಅಧ್ಯಾತ್ಮದಲ್ಲಿ ತಾನು ಪ್ರಗತಿ ಹೊಂದುತ್ತಿರುವುದನ್ನು ಅಭ್ಯಾಸಿಯು ಕಂಡುಕೊಳ್ಳಬೇಕು. ಇದಕ್ಕೆ ಕೆಲವು ವಿಷಯಗಳು ಸಹಾಯಕವಾಗುತ್ತವೆ. ಅದೆಂದರೆ ನಿಮ್ಮ ಪ್ರೇಮವು ವಿಸ್ತಾರಗೊಳ್ಳುವುದು. ಗುರುವಿನೆಡೆ ನೀವು ಹೆಚ್ಚು ಹೆಚ್ಚು ಪ್ರಗತಿ ಹೊಂದಿದರೆ ನೀವು ‘ಸರ್ವಸಾಮಾನ್ಯ’ (Universal) ಆಗುತ್ತೀರಿ. ನೀವು ಗುರುವಿನೆಡೆಗೆ ಪ್ರಗತಿ ಹೊಂದಿದ ಪ್ರಮಾಣದಲ್ಲಿಯೇ ಹೆಚ್ಚು ಹೆಚ್ಚು ವೈರಾಗ್ಯದ, ತ್ಯಾಗದ ಭಾವನೆ ಹೊಂದುವಿರಿ, ನೀವು ಗುರುವಿನತ್ತ ಹೆಚ್ಚು ಹೆಚ್ಚು ಮುಂದುವರಿದಂತೆ ಪ್ರಜ್ಞೆ ಮತ್ತು ವಿವೇಕದ ಬೆಳವಣಿಗೆಯೂ ಹೆಚ್ಚಿಗೆ ಆಗುವುದು. ಸರಿ-ತಪ್ಪುಗಳ ವಿವೇಚನಾಶಕ್ತಿಯೂ ಬೆಳೆಯುವುದು. ಈ ಬೆಳವಣಿಗೆಗಳು ಜರುಗಲೇಬೇಕು. ಈ ಸಂಗತಿಗಳು ಉಂಟಾಗದಿದ್ದರೆ, ನಾವು ಹಳೆಯ ಅಭ್ಯಾಸ ಹಾಗೂ ಚಿಂತನೆಯ ರೂಢಿಗಳಲ್ಲಿ ತೊಡಗಿಕೊಂಡರೆ, ನಮ್ಮ ವರ್ತನೆ ಸರಳ ಹಾಗೂ ಸ್ವಾಭಾವಿಕವಾಗಿರದಿದ್ದರೆ ಹಾಗೂ ನಾವು ನಮ್ಮ ದಿನನಿತ್ಯ ಜೀವನದಲ್ಲಿ ಪ್ರೇಮ ಹಾಗೂ ಲಘುತ್ವಗಳನ್ನು ಬೆಳೆಸಿಕೊಳ್ಳದಿದ್ದರೆ, ಆಗ ಅಭ್ಯಾಸದಲ್ಲಿ ಏನೋ ಗಂಭೀರ ದೋಷವಿರುವುದೆಂದು ಅರ್ಥ.
ಆದ್ದರಿಂದ ಪ್ರಿಯ ಸೋದರರೆ, ಈ ಸಂದರ್ಭದಲ್ಲಿ ಈ ಕೆಲವು ವಿಷಯಗಳನ್ನು ನಿಮ್ಮೆದುರಿಗಿಡುವುದು ಸೂಕ್ತವೆಂದು ನನಗನಿಸುತ್ತದೆ. ಇವು ನಮ್ಮಲ್ಲಿ ಪ್ರತಿಯೊಬ್ಬನೂ ಆತ್ಮನಿರೀಕ್ಷಣೆ ಮಾಡಿಕೊಳ್ಳಲು ಮತ್ತು ಎಷ್ಟರಮಟ್ಟಿಗೆ ನಾವು ಪ್ರಗತಿ ಹೊಂದುತ್ತಿರುವೆವೆಂಬುದನ್ನು ಮತ್ತು ನಾವು ಸಾಧನೆಯನ್ನು ಸರಿಯಾಗಿ ಅನುಸರಿಸುತ್ತಿದ್ದೇವೆಂಬುದನ್ನು ಪರೀಕ್ಷಿಸಿ ತಿಳಿಯಲು ಅಗತ್ಯ ಎಂದು ನಾನು ಭಾವಿಸುತ್ತೇನೆ.
ಕೊನೆಯಲ್ಲಿ, ನಮ್ಮನ್ನು ನಾವು ಅವರ (ಗುರುಗಳ) ಸ್ವರೂಪದಲ್ಲಿ, ತತ್ಸದೃಶವಾಗಿ, ತದ್ರೂಪವಾಗಿ ಪರಿವರ್ತನ- ಗೊಳಿಸಿಕೊಳ್ಳಲು ಎಲ್ಲ ಆವಶ್ಯಕ ಶಕ್ತಿ-ಸಾಮರ್ಥ್ಯಗಳನ್ನು ದಯಪಾಲಿಸಲೆಂದು ಗುರುಗಳಲ್ಲಿ ಪ್ರಾರ್ಥಿಸುತ್ತೇನೆ.
[ಜನವರಿ 21, 1972 ರಂದು ಷಾಹಜಹಾನಪುರದಲ್ಲಿ ಮಾಡಿದ ಭಾಷಣ]