ಜೀವಿಗೆ (ಜೀವಕ್ಕೆ) ತನ್ನ ಬಗ್ಗೆ ಅರಿವು ಮೂಡಿದಾಗ, ಅದು ತನ್ನದೇ ಸ್ವಭಾವವಾದ ಆನಂದವನ್ನು ಅರಸುತ್ತದೆ. ಈ ಅನ್ವೇಷಣೆಯ ಪ್ರಕ್ರಿಯೆಯಲ್ಲಿ ಅದು ‘ಆಗುವಿಕೆ’ (becoming)ಯ (ಪರಿವರ್ತಿತವಾಗುವ) ಅನೇಕ ಹಂತಗಳ ಮೂಲಕ ದಾಟಿ ಬರುತ್ತದೆ. ಆನಂದವೇ ತನ್ನ ಸ್ವಭಾವವೆಂಬುದನ್ನು ಮತ್ತು ತಾನು ತನ್ನದೇ ಪ್ರತಿಫಲನದ ಬೆನ್ನಹಿಂದೆ ಓಡುತ್ತಿರುವೆನೆಂಬುದನ್ನು ಕಂಡುಕೊಳ್ಳುವವರೆಗೂ ಇದು (ಈ ಅನ್ವೇಷಣೆ) ಮುಂದುವರಿಯುತ್ತದೆ.
ಈ ಹಂತದಿಂದ ಮುಂದಕ್ಕೆ, ‘ಪರಮತತ್ತ್ವ ವಿಜ್ಞಾನ’ ಎಂದು ಕರೆಯಲಾಗುವ ಹೊಸ ವಿಜ್ಞಾನದ ಆವಶ್ಯಕತೆ ಬೆಳೆಯಲಾರಂಭಿಸುತ್ತದೆ. ಈ ಅಂತಿಮ (ಪರಮ) ತತ್ತ್ವದ ವಿಜ್ಞಾನವನ್ನು ಬೆನ್ನು ಹತ್ತಿ ಮುಂದೆ ಸಾಗಲು ಒಬ್ಬನು ತನ್ನ ಸದ್ಯದ ಸ್ಥಿತಿಯಿಂದ ಮೇಲಕ್ಕೇರಬೇಕಾಗುವುದು ಹಾಗೂ ತನ್ನನ್ನು ತಾನು ಒಂದು ಬಿಂದುವಿಗೆ (ಮತ್ತು) ಒಂದೇ ಒಂದು ಬಿಂದುವಿಗೆ ತಂದುಕೊಳ್ಳಲು ತನ್ನ ಎಲ್ಲ ಮಾನಸಿಕ ಮತ್ತು ಅದರ ಆಂತರಿಕ ಶಕ್ತಿಗಳನ್ನು ಪ್ರಯೋಗಿಸಬೇಕಾಗುವುದು, (ಅರ್ಥಾತ್ ಅನ್ವಯಿಸಬೇಕಾಗುವುದು).
ಅಂತಿಮ ತತ್ತ್ವವು ಏಕೈಕವಾಗಿರಬೇಕೆಂಬುದು ತರ್ಕಶಾಸ್ತ್ರದ ಹಾಗೂ ಭಾಷಾಶಾಸ್ತ್ರದ ಬೇಡಿಕೆಯಾಗಿದೆ. ಅಂತಹ ಸನ್ನಿವೇಶದಲ್ಲಿ ಅಂತಿಮ ತತ್ತ್ವವನ್ನು ಬಾಹ್ಯಜಗತ್ತಿನಲ್ಲಿ ಹುಡುಕುವುದು, ಗಲಿಬಿಲಿ ಉಂಟುಮಾಡುವುದೂ, ಕೆಲವೊಮ್ಮೆ ಅಸಂಬದ್ಧವೂ ಆಗುತ್ತದೆ. ಆ ಹುಡುಕಾಟವು ಒಬ್ಬನ ಅಸ್ತಿತ್ವದ ಅಂತರಾಳದಲ್ಲಿ ಇರಬೇಕಾಗುತ್ತದೆ. ಈಗ, ಅದನ್ನು ಪರಿಶೀಲಿಸಲು ಹೇಗೆ ಮುಂದುವರಿಯಬೇಕೆಂಬುದೇ ಪ್ರಶ್ನೆಯಾಗಿದೆ.
ಅಂತಿಮ ತತ್ತ್ವವನ್ನು ಸಾಕ್ಷಾತ್ಕರಿಸಿಕೊಂಡವನೊಬ್ಬನ ಸಹಾಯವನ್ನು ಪಡೆದರೆ ಜಿಜ್ಞಾಸುವಿಗೆ ಸುಗಮವಾಗುತ್ತದೆ. ಜಿಜ್ಞಾಸುವು ಅಂತಹ ವ್ಯಕ್ತಿಯನ್ನು ತನ್ನದೇ ಅಂತರಾತ್ಮ ಎಂದು ತಿಳಿದು, ಚಿಂತನ ಪ್ರಕ್ರಿಯೆಯ ಮೂಲಕ, ಚಿಂತಕ ಹಾಗೂ ಅವನ ಗುರಿಯ ಮಧ್ಯೆ ಒಂದು ಶಾಶ್ವತ ಸಂಬಂಧವನ್ನು ಸ್ಥಾಪಿಸುವಂತಹ ಯೋಗ ಪದ್ಧತಿಯ ಅಭ್ಯಾಸ ಮಾಡಬೇಕು.
ವಿಚಾರಶಕ್ತಿಯು ಮಾನವನಲ್ಲಿರುವ ಪ್ರಧಾನ, ಅತಿಶ್ರೇಷ್ಠ ಶಕ್ತಿಯಾಗಿರುವುದರಿಂದ, ಇಂತಹ ಪದ್ಧತಿಯನ್ನು ‘ರಾಜಯೋಗ’ ಎಂದು ಕರೆಯಲಾಗಿದೆ. ನಮ್ಮ ಗುರುಗಳಾದ, ಷಾಹಜಹಾನಪುರದ ಮಹಾತ್ಮಾ ಶ್ರೀ ರಾಮಚಂದ್ರಜಿ ಮಹಾರಾಜರು ಪ್ರಾಚೀನ ರಾಜಯೋಗ ಪದ್ಧತಿಯನ್ನು ಇಂದಿನ ಕಾಲದ ಪರಿಸ್ಥಿತಿಗಳಿಗೆ ಹೊಂದುವಂತೆ ಸುಧಾರಿಸಿದರು ಹಾಗೂ ಅದನ್ನು ‘ಸಹಜಮಾರ್ಗ’ ಎಂಬ ಹೆಸರಿನಲ್ಲಿ ನಮಗೆ ನೀಡಿದರು.
ಭಾರತದೇಶದ ಋಷಿಗಳು ಪರಮತತ್ತ್ವ-ವಿಜ್ಞಾನದಲ್ಲಿ ಆಳವಾಗಿ ಪರಿಶೀಲನೆ ಮಾಡಿದ್ದರು. ಪ್ರಾಚೀನ ಷಡ್ಡರ್ಶನಗಳು ಅವರ ಚಿಂತನ ಸ್ವಾತಂತ್ರ್ಯದ ನಿದರ್ಶನಗಳಾಗಿವೆ. ಆ ಆರು ದರ್ಶನಶಾಸ್ತ್ರಗಳಿಗೆ ಮೀರಿದ ಪರಮತತ್ತ್ವ-ವಿಜ್ಞಾನದ ವಿಷಯದಲ್ಲಿ, ‘ಸಹಜಮಾರ್ಗ’ದ ಪ್ರವೇಶಕ್ಕೆ ಪೂರ್ವದಲ್ಲಿ ಅನೇಕ ಬೇರೆ ಶಾಸ್ತ್ರಗಳು ಪ್ರಚಲಿತವಿದ್ದುವಾದರೂ, ಅವುಗಳ ಬೆಳವಣಿಗೆ ಅತ್ಯಲ್ಪವಾಗಿತ್ತು.
ಪರಮತತ್ತ್ವ-ವಿಜ್ಞಾನವು ಮೂಲಭೂತವಾಗಿ ಪ್ರಾತ್ಯಕ್ಷಿಕ ಅನುಷ್ಠಾನಾಧಾರಿತವಾಗಿರಬೇಕು ಹಾಗೂ ಅದರಲ್ಲಿಯ ಒಬ್ಬನ ಪ್ರಗತಿಯ ಫಲಗಳು (ಪರಿಣಾಮಗಳು), ಅದಕ್ಕೆ ಸದೃಶವಾದ ಇತರ ಸಾಧನೆಗಳ ಪ್ರಾತ್ಯಕ್ಷಿಕ ಅನುಭವಕ್ಕೆ ಹೊಂದಿಕೆಯಾಗುವಂತಹವಿರಬೇಕು. ಅನುಭಾವಿಕ ಉಕ್ತಿಗಳಾದ ‘ಅನೇಕದಲ್ಲಿ ಏಕ’, ‘ಏಕದಲ್ಲಿ ಅನೇಕ’, ‘ಏಕದಿಂದ ಅನೇಕ’, ‘ತತ್ ತ್ವಮ್ ಅಸಿ’, ‘ಅಹಂ ಬ್ರಹ್ಮಾಸ್ಮಿ’ ಮುಂತಾದವುಗಳ ನೈಜ ಸ್ಥಿತಿಯನ್ನು ಈ ವಿಜ್ಞಾನದ ಅನುಯಾಯಿಯು, ಅವನು ಅಂತಿಮ (ಪರಮ) ತತ್ತ್ವವನ್ನು ಸಾಕ್ಷಾತ್ಕರಿಸುವುದಕ್ಕಿಂತ ಮೊದಲೇ ಪ್ರತ್ಯಕ್ಷವಾಗಿ ಅನುಭವಪಟ್ಟಿರಬೇಕು.
ವಾಸ್ತವವಾಗಿ, ಸಹಜಮಾರ್ಗ ಪದ್ಧತಿಯಲ್ಲಿ ಮೇಲಿನದೆಲ್ಲವುಗಳ ಬಗ್ಗೆ ವ್ಯವಸ್ಥಿತವಾಗಿ ವಿವರಿಸಲಾಗಿದೆ. ‘ಸತ್ -ಅಸತ್’, ‘ಆತ್ಮ-ಅನಾತ್ಮ’, ‘ಶಾಶ್ವತ ಕ್ಷಣಿಕ’ಗಳ ವಿವೇಕದ (ಭೇದಜ್ಞಾನದ) ಸ್ಥಿತಿಗಳು ಬೆಳೆಯಬೇಕು; ಅದು ‘ಅನಾಸಕ್ತಿಗೆ (ವೈರಾಗ್ಯ ಸ್ಥಿತಿಗೆ) ಕರೆದೊಯ್ಯುತ್ತದೆ. ಅದು ಪರಿಣಾಮತಃ ಎಲ್ಲ ಬಂಧನಗಳನ್ನು ಕಡಿದು ಹಾಕುತ್ತದೆ. ಏಕಮೇವವಾದುದರ ಮೇಲೆ ಚಿತ್ತವನ್ನು ನೆಲೆಗೊಳಿಸಲು ಆವಶ್ಯಕವಾದ ಮನೋಭಾವವನ್ನು ಬೆಳೆಸಿಕೊಳ್ಳಲು ಇಂತಹ ಸ್ಥಿತಿಯು ಅತ್ಯಾವಶ್ಯಕವಾಗಿದೆ. ಪ್ರಾಚೀನ ಪದ್ಧತಿಗೆ ಅನುಸಾರವಾದ ಕಷ್ಟದಾಯಕ ಹಾಗೂ ದೀರ್ಘಕಾಲ ತೆಗೆದುಕೊಳ್ಳುವ ಪದ್ಧತಿಗಳನ್ನು ಅನುಸರಿಸದೆಯೇ ಇಂತಹ ಸ್ಥಿತಿಯನ್ನು ಸುಲಭವಾಗಿ ಹಾಗೂ ಶೀಘ್ರವಾಗಿ ಪಡೆಯಲು ಅಥವಾ ಸಾಧಿಸಲು, ಈ ವಿಜ್ಞಾನದ ಒಬ್ಬ ಸಾಮಾನ್ಯ ಜಿಜ್ಞಾಸುವಿಗೆ ಅಥವಾ ಮುಮುಕ್ಷುವಿಗೆ ಆ ಮಟ್ಟದ ಸ್ವಾತಂತ್ರ್ಯವನ್ನು ಒಬ್ಬ ಸಂಗಾತಿಯ ಸಹಾಯವು ಅನಿವಾರ್ಯವಾಗುತ್ತದೆ.
ಪರಮತತ್ತ್ವ-ವಿಜ್ಞಾನದಲ್ಲಿ ಗೃಹೀತವಾಗಿ ಸ್ವೀಕರಿಸಬೇಕಾದ ಅತ್ಯಂತ ಸರಳ ಹಾಗೂ ಸ್ವಯಂಸಿದ್ದ ಕಲ್ಪನೆಯು, ಅಂತಿಮ (ಪರಮ) ತತ್ತ್ವದ ಅಸ್ತಿತ್ವದ ಕುರಿತಾಗಿಯೇ ಇರಬೇಕು. ಪ್ರಾಮಾಣಿಕ ಜಿಜ್ಞಾಸುವು ಪರಮತತ್ತ್ವ(ಸತ್ಯ)ವನ್ನೇ ಸಹಾಯಕ್ಕಾಗಿ ಪ್ರಾರ್ಥಿಸಬೇಕು. ಸಹಚರನೊಬ್ಬನ ಮೂಲಕ ಸಹಾಯ ಮಾಡುವ ಏಕಮೇವ ದೇವರು ಹಾಗೂ ಶಕ್ತಿಯು ಆ ಪರಮತತ್ತ್ವವೇ ಆಗಿದೆಯೆಂಬುದನ್ನು ಅವನು ಮನಸಾರೆ ಅರಿಯಬೇಕು.
ಪರಮತತ್ತ್ವದ ಈ ವಿಜ್ಞಾನವು, ಜೀವನದ ನಿಜವಾದ ಗುರಿಯನ್ನು ಸಾಕ್ಷಾತ್ಕರಿಸಿಕೊಳ್ಳಲು ಮಾನವಕುಲಕ್ಕೆ ಸಹಾಯಕವಾಗಿ ವರ್ಧಿಸಲಿ.
[ಷಹಜಹಾನಪುರದಲ್ಲಿ ಜನವರಿ 21, 1972 ರಂದು ಮಾಡಿದ ಭಾಷಣ]