ಶುದ್ಧ ಚೈತನ್ಯವು ಸರ್ವವ್ಯಾಪಿಯಾಗಿದೆ. ಅದು ಯಾವುದೇ ತರಹದ ಇಚ್ಛೆ ಅಥವಾ ಆಶೆಗಳಿಂದ ಹುದುಗಿಹೋಗಬೇಕಾಗಿಲ್ಲ, ಏಕೆಂದರೆ ಅದು ಎಲ್ಲವನ್ನೂ ವ್ಯಾಪಿಸಿದೆ. ಅದು ಅವ್ಯಕ್ತ, ಅದು ದೇಹದ ಎಲ್ಲ ಸೀಮಿತತೆಯಿಂದ, ಅಷ್ಟೇಕೆ, ವ್ಯಕ್ತಿತ್ವದ (ವ್ಯಷ್ಟಿತ್ವದ) ಪರಿಮಿತಿಗೆ ಮೀರಿದ್ದಿದೆ.
‘ಪೂರ್ಣ’ವಾಗಿರುವ ಅದರ ಒಂದು ಅಂಶಮಾತ್ರವಾಗಿ, ಯಾವ ಸುವ್ಯವಸ್ಥಿತ ವಸ್ತುದ್ರವ್ಯ(ಭೌತ ವಿಶ್ವ)ವಿದೆಯೋ ಅದನ್ನು ವೀಕ್ಷಿಸಿ, ಆ ಮಹಾಚೈತನ್ಯದ ಅಸ್ತಿತ್ವವನ್ನು ಊಹಿಸಬಹುದು. ಗುರು ಎಂದು ಕರೆಯಲಾದ, ಅತ್ಯುನ್ನತ ವಿಕಾಸ ಹೊಂದಿದ ವ್ಯಕ್ತಿಯನ್ನು ವೀಕ್ಷಿಸುವ ಮೂಲಕ ಆ ಚೈತನ್ಯದ ಒಂದು ಹೊಳಹು, ಕ್ಷಣಿಕ ನೋಟ ದೊರೆಯಬಲ್ಲುದು. ಅವನನ್ನು ಒಬ್ಬ ದೇಹಧಾರಿಯಾದ ವ್ಯಕ್ತಿಯಾಗಿ ಮತ್ತು ಆ ಮಹಾಚೈತನ್ಯವನ್ನು ಆಧಾರತಲವಾಗಿ ಹೊಂದಿದ ವಿಶೇಷ ಸಮಗ್ರತೆ, ಮತ್ತು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಆದರೆ ದೈವೀ ಧ್ಯೇಯ ಹಾಗೂ ಕಾರ್ಯೋದ್ದೇಶ ಹೊಂದಿದವ ಎಂದು ಕೂಡ ತಿಳಿಯಬಹುದು.

ನಾವು, ‘ಜೀವ’ದ (ಚೇತನದ), ಏಕತೆಯನ್ನು ಸಾಕ್ಷಾತ್ಕರಿಸಿಕೊಂಡಿರುವ ಗುರುಗಳೊಂದಿಗೆ ನಮ್ಮ ಏಕತೆಯನ್ನು ಸಾಕ್ಷಾತ್ಕರಿಸಿಕೊಂಡರೆ, ನಾವು ಮಾನವತೆಯ ಏಕತೆಯನ್ನೂ ಸಾಕ್ಷಾತ್ಕರಿಸಿಕೊಳ್ಳಬಲ್ಲೆವು; ಮತ್ತು ಅದು ‘ಜೀವ’ದ (ಚೇತನದ) ಏಕತೆಯ ಸಾಕ್ಷಾತ್ಕಾರಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.

ಯೋಗದ ಸುಲಭ ವಿಧಾನವು ಅರ್ಥಾತ್, ಆ ಮಹಾ ‘ಚೈತನ್ಯ’ದೊಂದಿಗೆ, ಅದಕ್ಕೆ ಸಮಾನ ಲಕ್ಷಣ ಹೊಂದಿದ ನಮ್ಮ ಚಿಂತನ ಶಕ್ತಿಯ ಪ್ರಕ್ರಿಯೆಯ ಮೂಲಕ ಏಕತ್ವವನ್ನು ಸಾಕ್ಷಾತ್ಕರಿಸಿಕೊಳ್ಳುವುದಾಗಿದೆ. ಈ ಜೋಡಿಸಿಕೊಳ್ಳುವ ಅಭ್ಯಾಸವು, ಈ ಕೆಳಗಿನ ಯಾವುದಾದರೊಂದು ಮಾರ್ಗದ ಮೂಲಕ ಶ್ರದ್ಧೆಯ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ.

1. ಗುರುವಿನಲ್ಲಿ ವಿಶ್ವಾಸವನ್ನು ಬೆಳೆಸಿಕೊಳ್ಳುವುದರಿಂದ, ಆತ್ಮವಿಶ್ವಾಸದ ಅಭಾವವನ್ನು ಕಿತ್ತೊಗೆಯುವುದು. ಇದು ಆತ್ಮವಿಶ್ವಾಸದ ವೃದ್ಧಿಗೆ ನಮ್ಮನ್ನು ಮುನ್ನಡೆಸುತ್ತದೆ. ಗುರುವಿನಲ್ಲಿ ಒಬ್ಬನ ಶ್ರದ್ಧೆಯು ವಿಕಾಸಗೊಳ್ಳುವುದು.
2. ಗುರುವಿನಲ್ಲಿ ಸರಳ ರೀತಿಯಲ್ಲಿ ತಳೆಯುವ ಭರವಸೆಯು ಒಬ್ಬನ ತಿಳುವಳಿಕೆಯನ್ನು ಬೆಳೆಸುತ್ತದೆ; ಅದು ವಿಶ್ವಾಸವಾಗಿ ವಿಕಾಸಗೊಂಡು ಶ್ರದ್ಧೆಯಲ್ಲಿ ಪರಿಣಮಿಸುತ್ತದೆ.
3. ಗುರುವಿನೊಂದಿಗಿನ ಪರಿಚಯವು ಆಪ್ತತೆಯಾಗಿ ಬೆಳೆಯುತ್ತದೆ; ಅದು ತಿಳಿವಳಿಕೆಯನ್ನು ತರುತ್ತದೆ ಮತ್ತು ಪ್ರೇಮವಾಗುತ್ತದೆ ಹಾಗೂ ಶ್ರದ್ಧೆಯಾಗಿ ವಿಕಾಸ ಹೊಂದುತ್ತದೆ.
4. ಗುರುವಿನ ಬಗ್ಗೆ ಹುಟ್ಟಿದ ಒಲವು, ಆಸಕ್ತಿಯಾಗಿ ಬೆಳೆದು (ಅವರ ಬಗೆಗಿನ) ತಿಳಿವಳಿಕೆಯಾಗಿ, ಅದು ಪ್ರೇಮ ಹಾಗೂ ಶ್ರದ್ಧೆಯಾಗಿ ಪರಿಣಮಿಸುತ್ತದೆ.
5. ಗುರುವಿಗೆ ವಿಧೇಯನಾಗಿರುವುದು ಶರಣಾಗತಿಯನ್ನು ಬೆಳೆಸುತ್ತದೆ. ಅದರಿಂದ ಶಕ್ತಿ ಮತ್ತು ಅರಿವನ್ನುಂಟುಮಾಡಿ, ಭಕ್ತಿಯಾಗಿ ಪರಿಣಮಿಸುತ್ತದೆ; ಅದು ಶ್ರದ್ಧೆಯಾಗಿ ವಿಕಾಸಹೊಂದುತ್ತದೆ.

ಶ್ರದ್ಧೆಯು ಗತಿಶೀಲವಾದಾಗ, ಆ ಮಹಾಚೈತನ್ಯವು ಒಬ್ಬನ ವ್ಯಕ್ತಿತ್ವವನ್ನು (ವ್ಯಷ್ಟಿತ್ವವನ್ನು) ತನ್ನ ಪ್ರಭಾವದಡಿಯಲ್ಲಿ ತೆಗೆದುಕೊಳ್ಳುತ್ತದೆ, ಮತ್ತು ಆ ವ್ಯಕ್ತಿಯ ದೇಹದ ಕಣಗಳೂ ಇತರ ವ್ಯಕ್ತಿಗಳು ಅದನ್ನು ಅರಿಯುವಂತೆ, ಸಾಕ್ಷಾತ್ಕರಿಸಿಕೊಳ್ಳುವಂತೆ ಮಾಡುತ್ತವೆ.

ಗುರುಗಳ ವ್ಯಕ್ತಿತ್ವದ ಅನನ್ಯತೆಯೆಂದರೆ, ಮಾನವರಲ್ಲಿ ಸದ್ಗುಣಗಳು ಉಂಟಾಗುವಂತೆ ಮಾಡುವ, ಮತ್ತು ತಮ್ಮನ್ನು ತಾವೇ ಬಹುವಾಗಿಸಿ, ಯಾರು ಅವರ ಸಂಪರ್ಕದಲ್ಲಿ ಬಯಸಿ ಬರುವರೋ ಅವರಲ್ಲಿ ಪ್ರವೇಶಿಸಿ, ಅವರ ವ್ಯಕ್ತಿತ್ವದಲ್ಲಿ ಸೇರಿಹೋಗಿ, ಅವರನ್ನು ಉದಾತ್ತೀಕರಿಸುವ ಅವರ ಅಪಾರ ಸಾಮರ್ಥ್ಯ. ಅಂತಹ ಪ್ರಕಾಶಿತರಾದ ಹಾಗೂ ಅವರಿಂದ ಆವಿಷ್ಟರಾದ ವ್ಯಕ್ತಿಗಳನ್ನು ಯೋಗದ ಜಿಜ್ಞಾಸುಗಳ ಹಾಗೂ ಅಭೀಪ್ಸುಗಳ ಹೃದಯಗಳಲ್ಲಿ ಗುರುಗಳ ಶಕ್ತಿಯನ್ನು ಪ್ರಾಣಾಹುತಿ ರೂಪದಲ್ಲಿ ಧಾರೆಯೆರೆಯುವುದಕ್ಕೆ ಸಮರ್ಥರನ್ನಾಗಿ ಮಾಡಲಾಗುತ್ತದೆ.

ಗುರುಗಳ ವಿಶೇಷ ವಿಭೂತಿ ವ್ಯಕ್ತಿತ್ವವು ಯಾವುದೇ ಪರಿಮಿತಿಯಿಲ್ಲದ ವಿಶೇಷ ಸಂಕಲ್ಪಶಕ್ತಿಯನ್ನುಪಯೋಗಿಸಿ, ವೈಶ್ವಿಕಮಟ್ಟದಲ್ಲಿ ಅಥವಾ ಜಾಗತಿಕ ಮಟ್ಟದಲ್ಲಿ ಪರಿವರ್ತನಗಳು ಉಂಟಾಗುವಂತೆ ಮಾಡುವುದು. ವಾಸ್ತವವಾಗಿ, ಅವರ ವಿಶೇಷ ಕಾರ್ಯವು ನಿಸರ್ಗದಲ್ಲಿ ಪರಿಣಾಮಗಳುಂಟಾಗುವಂತೆ ಮಾಡುವುದೇ ಆಗಿದೆ. ಪರಿಣಾಮಗಳಲ್ಲಿ ಕೆಲವು ಅವರ ಪಾರ್ಥಿವ ಜೀವನದ ಕಾಲಾವಧಿಯಲ್ಲಿ ಗೋಚರವಾಗದೆ ಮತ್ತು ಪ್ರಕಟವಾಗದೆ ಇರಬಹುದು. ಯಾವ ಮಹಾಚೈತನ್ಯವು ‘ಕಾಲ’ದಾಚೆಗೂ ವಿಸ್ತರಿಸಿರುವುದೋ ಮತ್ತು ನಿಯಂತ್ರಿಸುವುದೋ ಅದಕ್ಕೆ ‘ಕಾಲಾವಧಿ’ ಎಂಬುದು ಅರ್ಥಹೀನ ಶಬ್ದವಾಗಿದೆ.

ಮಾನವಕುಲವು ಅಭಿವೃದ್ಧಿಯ ಒಂದು ನಿರ್ಣಾಯಕ ಘಟ್ಟದ ಮೂಲಕ ಹಾದುಹೋಗುತ್ತಿದೆ, ಜನಾಂಗಗಳ ಸ್ವಾರ್ಥಪೂರ್ಣ ಹಿತಾಸಕ್ತಿಗಳನ್ನು ಸೈದ್ಧಾಂತಿಕ ಶೀತಲಯುದ್ದವು ಮರೆಮಾಡಿದೆ.ಜಗತ್ತಿನ ಆದ್ಯಂತದಲ್ಲಿರುವ ಪ್ರಾಜ್ಞರು, ಬಹುತೇಕ ಸಾರ್ವತ್ರಿಕವಾಗಿ ಇಡೀ ಜೀವಕೋಟಿಯನ್ನು ನಾಶಗೊಳಿಸಬಹುದಾದಂತಹ ರಕ್ತಸಿಕ್ತ ಯುದ್ಧಸ್ಥಿತಿಯು ಆಕಸ್ಮಿಕವಾಗಿ ಭುಗಿಲೇಳುವುದರ ಖಚಿತತೆಯ ಬಗ್ಗೆ ಚಿಂತಾಕುಲರಾಗಿದ್ದಾರೆ. ಅಸ್ಪಷ್ಟವಾಗಿ ಕಂಡುಬರುತ್ತಿರುವ ಮತ್ತು ಭಯಾವಹವಾಗಿ ತೋರುತ್ತಿರುವ ಈ ಅಂಧಕಾರ ಮತ್ತು ವಿಪತ್ತಿನಿಂದ ಪಾರಾಗಲು ಮಾನವನಿಗಿರುವ ಏಕೈಕ ಮಾರ್ಗವೆಂದರೆ, ಅವನು ತನ್ನದೇ ಚಿಂತನಸರಣಿಯ ಮಹಾವಿಕಾಸವನ್ನು ಮತ್ತು ಅದರ ಶಕ್ತಿಯ ಸಾಧ್ಯತೆಗಳನ್ನು ವಾಸ್ತವೀಕರಿಸಿಕೊಳ್ಳುವುದೇ ಆಗಿದೆ. ಅದು ಸಾಧ್ಯವಾಗುವುದು, ಪ್ರತಿಯೊಬ್ಬ ವ್ಯಕ್ತಿಯ, ಅಂತೆಯೇ ಸಮಸ್ತ ಜೀವಕೋಟಿಯ ಆಧಾರತಲವಾದ ಆ ಮಹಾಚೈತನ್ಯದಲ್ಲಿ ಶ್ರದ್ಧೆ ಇಡುವುದರಿಂದ ಮಾತ್ರವೇ.

ಗುರುಗಳು ನಮಗೆ ‘ಸಹಜಮಾರ್ಗ’ ಎಂಬ ಹೆಸರಿನಲ್ಲಿ ಅತ್ಯಂತ ಸುಲಭವಾದ ಹಾಗೂ ಸ್ವಾಭಾವಿಕವಾದ ಯೋಗಮಾರ್ಗವನ್ನು ಕೊಟ್ಟಿದ್ದಾರೆ. ಗುರುಗಳು ಸ್ಥಾಪಿಸಿದ ಶ್ರೀರಾಮಚಂದ್ರ ಮಿಷನ್ ಶಾಹಜಹಾನಪುರ (ಉ.ಪ್ರ ಭಾರತ) ಸಂಸ್ಥೆಯ ಮೂಲಕ, ವ್ಯವಸ್ಥಿತ, ಸುಸಂಘಟಿತ ರೀತಿಯಲ್ಲಿ ಅನ್ವಯಗೊಳಿಸಲಾಗಿದೆ ಹಾಗೂ ಬೋಧಿಸಿ ಪ್ರಚುರಪಡಿಸಲಾಗಿ ಯೋಗದ ಪ್ರಾಮಾಣಿಕ ಜಿಜ್ಞಾಸುಗಳು ಮತ್ತು “ಅಭೀಪ್ಸುಗಳು ‘ಸಹಜಮಾರ್ಗ’ವನ್ನು ಪ್ರಾಮಾಣಿಕವಾಗಿ ಒಮ್ಮೆ ಪರೀಕ್ಷಿಸಿ ಖಚಿತಪಡಿಸಿಕೊಳ್ಳಲಿ ಮತ್ತು ಮಾನವಜೀವನದ ವಿಕಾಸದ ಅತ್ಯುಚ್ಚ ಗುರಿಯನ್ನು ಸಾಕ್ಷಾತ್ಕರಿಸಿಕೊಳ್ಳಲಿ ಎಂದು ಈ ಮೂಲಕ ನಿಮಂತ್ರಿಸಲಾಗಿದೆ.

ಸಹಜಮಾರ್ಗದ ಬೋಧನೆಯು ಬಹಳ ಉದಾತ್ತವಾದುದು. ಅದರ ಔನ್ನತ್ಯವು ಎಂತಿದೆಯೆಂದರೆ ಅದು ಅದರ ಶಿಖರ ಬಿಂದುವನ್ನು ದೃಷ್ಟಿಹಾಯಿಸಿ ನೋಡಲು ಬಿಡುವುದಿಲ್ಲ. ನಿಸರ್ಗದ ಸರಳತೆಯೇ ಅದಕ್ಕೆ ಒಂದು ತೆರೆಯಾಗಿರುವಂತೆಯೇ, ಸಹಜಮಾರ್ಗದ ಮೌಲ್ಯವನ್ನು ಗ್ರಹಿಸಲು ಅದರ ಔನ್ನತ್ಯ ಅಥವಾ ಅತ್ಯುನ್ನತ ವಿಕಾಸವೇ ಒಂದು ತೆರೆಯಾಗುತ್ತದೆ. ನಾವು ಬೆಳೆಯುತ್ತ ಹೋದ ಹಾಗೆ, ನಾವು ಅದನ್ನು ಮಾಡುತ್ತ ಹೋದಂತೆ ಅದನ್ನು ಅರಿಯುವೆವು; ಮತ್ತು ಅದನ್ನು ಹೆಚ್ಚು ಹೆಚ್ಚು ಪಡೆಯುವೆವು.

[ಸಹಜಮಾರ್ಗ ಪತ್ರಿಕೆಯಲ್ಲಿ, 1983 ರಲ್ಲಿ ಪ್ರಕಟಿತ]