ಪೂಜ್ಯ ಬಾಬೂಜಿ ಮಹಾರಾಜರ ಸ್ಮರಣೆಯಲ್ಲಿ ಇಂತಹ ಸಮಾರಂಭಗಳಲ್ಲಿ ನಾವು ಪ್ರಾಸಂಗಿಕವಾಗಿ ಒಟ್ಟು ಸೇರುತ್ತೇವೆ. ಸತ್ಸಂಗದ ಮೂಲಕ ಪೂಜ್ಯ ಬಾಬೂಜಿ ಮಹಾರಾಜರು ಯಾವ ದೈವೀ ಪರಿಸರದಲ್ಲಿ ನಾವು ಯಾವಾಗಲೂ ಇರಬೇಕೆಂದು ಬಯಸುತ್ತಾರೋ ಅಂತಹ ದೈವೀ ವಾತಾವರಣವನ್ನು ಸೃಷ್ಟಿಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಅವರ ಹೆಜ್ಜೆಯಲ್ಲಿ ಹೆಜ್ಜೆಯನ್ನಿಟ್ಟು ಅನುಸರಿಸಲು ನಾವು ನಮ್ಮ ಸಾಧ್ಯವಿದ್ದಷ್ಟು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದೇವೆ. ಇದರಂತಹ ಶುಭ ಸಂದರ್ಭಗಳು ನಮ್ಮ ಹೃದಯವನ್ನು ವಿಸ್ತಾರಗೊಳಿಸಿ ಭ್ರಾತೃತ್ವಕ್ಕೆ ಕರೆದೊಯ್ಯುತ್ತವೆ. ದೀರ್ಘಕಾಲದಲ್ಲಿ ಇದು ಅಧ್ಯಾತ್ಮದ ಹೆಸರಿನಲ್ಲಿ ವಿಶ್ವಭಾತೃತ್ವದಲ್ಲಿ ಫಲಿಸುತ್ತದೆ. ಏಕೆಂದರೆ ನಾವೆಲ್ಲರೂ ಗುರುಮಹಾರಾಜರ ವಿಚಾರದಿಂದ ಒಬ್ಬರಿಗೊಬ್ಬರು ಜೋಡಿಸಲ್ಪಟ್ಟಿದ್ದೇವೆ.

ಗುರುಮಹಾರಾಜರೇ ನಮ್ಮನ್ನು ಒಂದಾಗಿ ಜೋಡಿಸುವ ತತ್ವ ಅದು (ಆ ತತ್ತ್ವ) ಪ್ರತಿಯೊಂದು ಹೃದಯದಲ್ಲಿಯೂ ವ್ಯಾಪಿಸಿದೆ, ಮತ್ತು ನಾವು ಆ ಸೂತ್ರದಿಂದಲೇ ಜೋಡಿಸಲ್ಪಟ್ಟಿದ್ದೇವೆ. ನಾವೆಲ್ಲರೂ ಒಟ್ಟಾಗಿ, ಒಂದಾಗಿ ಜೋಡಣೆಗೊಂಡಿದ್ದೇವೆ. ಒಂದು ವೇಳೆ ಆ ಸೂತ್ರವು ಭಗ್ನವಾದರೆ ನಾವೆಲ್ಲರೂ ಚೆಲ್ಲಾಪಿಲ್ಲಿಯಾಗಿ ಚದುರಿಹೋಗುತ್ತೇವೆ. ಮಣಿಗಳ ಮೂಲಕ ಹಾದುಹೋಗುವ ಸೂತ್ರವು ಕಂಠಹಾರವನ್ನು ನಿರ್ಮಿಸಿದಂತೆಯೇ, ಗುರುಗಳು ನಮ್ಮ ಮಧ್ಯದ ಸಾಮಾನ್ಯ ಕೊಂಡಿಯಾಗಿದ್ದಾರೆ. ಮತ್ತು ಆ ಸೂತ್ರವು ತುಂಡಾಗಿಸಲ್ಪಟ್ಟರೆ, ಎಲ್ಲ ಮಣಿಗಳೂ ಕುಸಿದು ಚೂರುಚೂರಾಗಿ ಬೀಳುತ್ತವೆ. ಅದೇ ರೀತಿಯಾಗಿ, ನಮ್ಮೆಲ್ಲರನ್ನೂ ಜೋಡಿಸುವ ಗುರುಮಹಾರಾಜರ ವಿಚಾರವು ನಮಗೆ ಒಂದು ಸಂಬಂಧದ, ಮತ್ತು ವಿಶ್ವಬಂಧುತ್ವದ ಭಾವವನ್ನು ನೀಡುತ್ತದೆ.

ಒಂದು ಮಾತು, ಅನೇಕರಿಗೆ ಅದನ್ನು ಒಪ್ಪುವುದು ಕಷ್ಟವಾಗಿರುವುದಾದರೂ, ಪ್ರತ್ಯಕ್ಷ ವಾಸ್ತವದಲ್ಲಿ ಅದು ಅರಿವಿಗೆ ಬರುತ್ತದೆ. ಅದನ್ನು ಒಪ್ಪುವುದು ಬಹುಪಾಲು ಜನರಿಗೆ ಕಷ್ಟವೆನಿಸುವುದೇಕೆಂದರೆ, ಗುರುಮಹಾರಾಜರ ಭೌತಿಕ ರೂಪವು ಅಳಿದು ಹೋಗಿದೆ ಮತ್ತು ಆ ಕಾರಣದಿಂದ ಅವರ ಸ್ಥಾನದಲ್ಲಿ ಇನ್ನೊಂದು ಭೌತಿಕ ರೂಪವು ಅವರಿಗೆ ಬೇಕೆಂದೆನಿಸುತ್ತದೆ. ಅದಕ್ಕೆ ಕಾರಣವೇನೆಂದರೆ, ಸೂತ್ರವು ತುಂಡಾಗಿ ಹೋಗಿದೆ; ಆದುದರಿಂದ, ಹೊಸ ಕಂಠಹಾರವನ್ನು ನಿರ್ಮಿಸಿಕೊಳ್ಳಲು ಎಲ್ಲ ಮಣಿಗಳನ್ನು ಪೋಣಿಸಲು ಅವರಿಗೆ ಇನ್ನೊಂದು ಸೂತ್ರ ಬೇಕು ಎಂದು ಅವರು ಭಾವಿಸುತ್ತಾರೆ.

ಅಂದರೆ, ಹೊಸ ಹಾರವೊಂದನ್ನು ಮಾಡಿಕೊಳ್ಳುವ ವಿಚಾರ ಅಲ್ಲಿದೆ. ಎಲ್ಲ ಹೊಸ ಹಾರಗಳು ಕೇವಲ ಚಿಕ್ಕಚಿಕ್ಕ ಕುಣಿಕೆಗಳಾಗುತ್ತವೆ. ಗುರುಗಳ ವಿಚಾರ (ಸ್ಮರಣೆ) ಎಂಬ ಅವಿಚ್ಛೇದ್ಯ ತತ್ತ್ವದಿಂದ ಪೋಣಿಸಲ್ಪಟ್ಟ ಹಾರವಾಗಿ ಎಂದಿಗೂ ಆಗಲಿಕ್ಕಿಲ್ಲ. ನಾವು ಗುರುಮಹಾರಾಜರನ್ನು ಜೀವಂತ ಗುರು, ತೀರಿಹೋದ ಗುರು, ಹಿಂದಿನ ಗುರು, ಸದ್ಯದ ವರ್ತಮಾನದ ಗುರು, ಭವಿಷ್ಯತ್ತಿನ ಗುರು, ವಯೋವೃದ್ಧನಾಗುತ್ತಿರುವ ಗುರು, ಇಲ್ಲವಾಗಿ ಹೋದ ಗುರು ಇತ್ಯಾದಿ ವಿಶೇಷಣಗಳಿಂದ ಸೀಮಿತಗೊಳಿಸಿದರೆ, ಅದು ನಮ್ಮನ್ನು ಗೊಂದಲಕ್ಕೀಡುಮಾಡುತ್ತದೆ. ಆ ‘ತತ್ತ್ವಕ್ಕೆ ಉಪಾಧಿಗಳಿಲ್ಲ, (ವಿಶೇಷಣಗಳಿಲ್ಲ). ಅವನೇ ಆ ‘ತತ್ತ್ವವಾಗಿದ್ದಾನೆ.

ಗುರುವು ಈ ‘ವಿಚಾರ’ ಅಥವಾ ‘ತತ್ವ’ ವಾಗಿರುವುದನ್ನೇ ಆಧ್ಯಾತ್ಮಿಕ ಜಿಜ್ಞಾಸುಗಳು ವಾಸ್ತವೀಕರಿಸಿಕೊಳ್ಳಲು ಹವಣಿಸತಕ್ಕದ್ದಿದೆ. ಆ ಪರಮತತ್ತ್ವ, ಎಲ್ಲ ಉಪಾಧಿಗಳಿಂದ ಮುಕ್ತವಾದುದು, ʼಕೇವಲ’ವಾದುದು. ಮಾನವಜೀವನದ ನಿಜವಾದ ಗುರಿಯಾದುದು – ಅದೊಂದೇ, ಆಧ್ಯಾತ್ಮಿಕ ಸಾಧನೆಯ ಮೂಲಕ ಪಡೆಯುವ ಉದ್ದೇಶದಿಂದ, ದೃಷ್ಟಿಯಲ್ಲಿರಿಸಿಕೊಳ್ಳಬೇಕಾದದ್ದು. ಆ ಕೇವಲ ತತ್ತ್ವವೇ ನಮ್ಮಗುರು. ಅದನ್ನು ವಾಸ್ತವೀಕರಿಸಿಕೊಳ್ಳಲು, ಸಾಕ್ಷಾತ್ಕರಿಸಿಕೊಳ್ಳಲು ನಾವು ನಿರಂತರ ಸ್ಮರಣೆಯ ಅಭ್ಯಾಸ ಮಾಡುತ್ತೇವೆ. ಇದರ ಮೂಲಕ ನಾವು ಅವನ ಸಾಮೀಪ್ಯವನ್ನು ಪಡೆಯಲು ಆಶಿಸುತ್ತೇವೆ. ಅವನ ಸಾಮೀಪ್ಯವನ್ನು ಪಡೆಯುವ ಹಂತದವರೆಗೆ ನಾವು ಹೋಗಬಲ್ಲೆವಷ್ಟೇ ಅಲ್ಲ, ಅವನಲ್ಲಿ ಸಂಪೂರ್ಣ ಏಕಾತ್ಮತೆಯನ್ನು ಹೊಂದುವ ಮೂಲಕ ನಾವು ಗುರಿಯನ್ನು ಸಾಧಿಸಿಕೊಳ್ಳಬಲ್ಲೆವು ಕೂಡ.

ಆ ಕೊಂಡಿಯಿಂದ ಕಳಚಿಕೊಳ್ಳುವ ಪ್ರಶ್ನೆಯೇ ಇಲ್ಲ ಅಥವಾ ಒಂದು ಭಂಗುರವಾದ ಹೊಸ ಕಂಠಹಾರವನ್ನು ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಅದನ್ನೇ ದೃಷ್ಟಿಯಲ್ಲಿರಿಸಿಕೊಂಡು ನಾವು ಅವನ ಸ್ಮರಣೆಯಲ್ಲಿ ಆಗಾಗ, ಜನವರಿ ಅಥವಾ ಫೆಬ್ರುವರಿಯಲ್ಲಿ ಸತ್ಸಂಗಗಳನ್ನು ಮಾಡುತ್ತಿದ್ದೇವೆ. ಪರಮಗುರುಗಳ ಜನ್ಮದಿನಾಚರಣೆ, ಏಪ್ರಿಲ್-ಮೇ ತಿಂಗಳಲ್ಲಿ ಪೂಜ್ಯ ಬಾಬೂಜಿ ಮಹಾರಾಜರ ಜನ್ಮದಿನಾಚರಣೆ, ಎಲ್ಲ ಇತರ ಕೇಂದ್ರಗಳಲ್ಲಿ ಸಂಸ್ಥಾಪಕರ ದಿನಾಚರಣೆ-ಇವೆಲ್ಲವೂ ಅವನಲ್ಲಿ, ಅವನಲ್ಲಿ ಮಾತ್ರವೇ ನಾವು ಜೀವಿಸಿರಲು ಅವಕಾಶವನ್ನು ಒದಗಿಸಿಕೊಡುತ್ತವೆ.

ನಾವು ಕೇವಲ ಸಮಾರಂಭಗಳನ್ನಷ್ಟೇ ಅಲ್ಲ, ಬದಲಿಗೆ ನಮ್ಮ ಇಡೀ ಜೀವನವನ್ನು ಪವಿತ್ರೀಕರಿಸಿಕೊಳ್ಳಲಿದ್ದೇವೆ.ನಮ್ಮ ಪ್ರತಿಯೊಂದು ಕರ್ಮವೂ ಅವನಿಗೆ ಸಮರ್ಪಿತವಾಗಿರಬೇಕು. ತಿನ್ನುವುದು, ಕುಡಿಯುವುದು, ಚಲನ-ವಲನ, ನಿದ್ರೆಮಾಡುವುದು, ನಡೆಯುವುದು, ಮಾತನಾಡುವುದು …. ಪ್ರತಿಯೊಂದೂ ಪವಿತ್ರೀಕರಣಗೊಳ್ಳಬೇಕು. ಈ ಸಮಾರಂಭದಂತಹ ಸಂದರ್ಭಗಳನ್ನು ಸೋಪಾನಗಳನ್ನಾಗಿ ಮಾಡಿಕೊಂಡರೆ, ಅದಕ್ಕೆ ಯಾವ ಆಕ್ಷೇಪಣೆಯೂ ಇರಕೂಡದು.

ಏನೇ ಇರಲಿ, ಈ ಘಟನೆ ಸಂಭವಿಸಿದೆ, ಅದೇ ರೀತಿ ಇಂದು ಮಹಾಲಯ ಅಮಾವಾಸ್ಯೆಯ ಖಂಡಸೂರ್ಯಗ್ರಹಣವೂ ಉಂಟು. ನಮ್ಮ ದೇಶದ ಈ ಭಾಗದಲ್ಲಿ ಅದು ಗೋಚರವಿಲ್ಲದಿದ್ದರೂ ಸರಿಯೆ, ಬೇರೆಡೆ ಉಂಟು. ನಾವು ಅದನ್ನು ಆಚರಿಸುತ್ತಿಲ್ಲ. ನಮಗೆ ಅದರ ಗೊಡವೆಯೂ ಇಲ್ಲ. ನಾವು ಇಲ್ಲಿ ಕಲೆಯುತ್ತಿದ್ದೇವೆ, ಮತ್ತು ನಮ್ಮಗುರುಗಳ ಸ್ಮರಣೆಯಲ್ಲಿಯೇ ಇರುತ್ತೇವಾದರೆ, ಇದು ಅದನ್ನು ತುಂಬಿಕೊಳ್ಳಲು, ಮತ್ತು ಉದ್ದಕ್ಕೂ ಅವನ ಸ್ಮರಣೆಯಲ್ಲಿರಲು ಒಂದು ಸದವಕಾಶವಾಗಿದೆ. ಅದರಲ್ಲೇನೂ ದೋಷವಿಲ್ಲ. ಪ್ರತಿಯೊಂದು ವಿಷಯವೂ, ಪ್ರತಿಯೊಂದು ಚಟುವಟಿಕೆಯೂ ದೇವರಿಗೆ ಸಂಬಂಧಿಸಿದ್ದಾದರೆ ಮತ್ತು ಗುರುವಿನ ಕಡೆಗೆ ಉದ್ದೇಶಿತವಾಗಿದ್ದರೆ, ಅದನ್ನು ಸ್ವಾಗತಿಸಲೇಬೇಕು. ಅದರಲ್ಲೇನೂ ತಪ್ಪಿಲ್ಲ.

ಅವುಗಳ ಅಂತಃಸತ್ತ್ವವು ಹೊರಟುಹೋದರೆ ಎಲ್ಲವೂ ಯಾಂತ್ರಿಕವಾಗುತ್ತವೆ. ಅದೇ ಸಮಸ್ಯೆ. ಅಂತಶ್ಚೈನ್ಯವು ಹೊರಟುಹೋದರೆ ಸಜೀವ ಸತ್ತೆಗಳೂ ಮತ್ತು ಕ್ರಿಯೆ(ಚಟುವಟಿಕೆ)ಗಳೂ ನಿರ್ಜೀವವಾಗುತ್ತವೆ ಹಾಗೂ ಸತ್ತು ಹೋಗುತ್ತವೆ. ಚೈತನ್ಯ ನಿಮ್ಮೊಂದಿಗಿದ್ದರೆ, ಆಗ ಎಲ್ಲವೂ ಉಲ್ಲಾಸಭರಿತ ಮತ್ತು ಕ್ರಿಯಾಶೀಲವಾಗಿರುತ್ತವೆ, ಏಕೆಂದರೆ ನೀವು ಅವುಗಳಲ್ಲಿ ಪ್ರಾಣವನ್ನು ಪ್ರತಿಷ್ಠಾಪಿಸಿದ್ದೀರಿ. ಎಲ್ಲವುಗಳಲ್ಲಿಯೂ ದೈವೀಚೈತನ್ಯ (ಪ್ರಾಣ) ಇದ್ದಾಗ, ಪ್ರತಿಯೊಂದು ಚಟುವಟಿಕೆಯೂ ಸುಂದರವಾಗಿ (ಕಲಾತ್ಮಕವಾಗಿ) ಇರುತ್ತದೆ, ಕರ್ತವ್ಯವಾಗುತ್ತದೆ ಮತ್ತು ಪ್ರತಿಯೊಂದು ಕರ್ಮವೂ ಪವಿತ್ರವಾದುದಾಗುತ್ತದೆ.

ನಾವೆಲ್ಲರೂ ಒಂದೇ, ಅದೇ ಗುರುವಿನ ವಿಚಾರದೊಂದಿಗೆ ಜೋಡಿಸಲ್ಪಟ್ಟಿರುವೆವಾದ್ದರಿಂದ, ನಾವು ಆ ಆದರ್ಶವನ್ನು ಸಿದ್ಧಿಸಿಕೊಳ್ಳಬೇಕು. ಆಗ ನಮ್ಮ ಭ್ರಾತೃತ್ವವು ವೈಶ್ವಿಕ ಭ್ರಾತೃತ್ವವಾಗಿ ವಿಕಾಸಗೊಳ್ಳುತ್ತದೆ. ಅದು ಮಾನವತೆಯ ಏಕತೆಗೆ ಕರೆದೊಯ್ಯುವುದು.

ನಾವೆಲ್ಲರೂ ಮತ್ತೆ ‘ಬಸಂತ ಪಂಚಮಿ’ಯ ಸಂದರ್ಭದಲ್ಲಿ ಒಟ್ಟಾಗಿ ಸೇರಬಹುದು. ನಾವು ಮತ್ತೊಮ್ಮೆ ಸಂಧಿಸಿದಾಗ, ವಾತಾವರಣದ ಮೇಲೆ ಒಳ್ಳೆಯ ಪ್ರಭಾವವಿರುವುದು, ಹಾಗೂ ಅಲ್ಲಿ ನೆರೆದವರೆಲ್ಲರ ಮೇಲೆ ಕೂಡ ಸತ್ಪಭಾವವಿರುವುದು. ಅದೇ ಹೊತ್ತಿನಲ್ಲಿ ಅದು ಸಮಸ್ತ ಜಗತ್ತನ್ನೂ ಪ್ರಭಾವಿತಗೊಳಿಸುವುದು, ಏಕೆಂದರೆ, ಈ ಸಮಾರಂಭಗಳು ಗುರುಗಳ ವಿಚಾರದಲ್ಲಿ ಸೇರಿದ ಸಭೆಗಳಾಗಿದ್ದು, ಅವು ಪವಿತ್ರವಾದ ದೈವೀ ಸ್ಪಂದನಗಳನ್ನು ಉಂಟುಮಾಡಿ, ಸಮಗ್ರ ಜಗತ್ತಿನಲ್ಲಿ ಹರಡುವಂತೆ ಮಾಡುತ್ತವೆ.

ಇದನ್ನು ಗ್ರಹಿಸಲು ಸಂವೇದನಾಶೀಲ ಅನುಭವಶಕ್ತಿ ಆವಶ್ಯಕ. ಅದಿಲ್ಲವಾದರೆ, ಓರ್ವನು ನನ್ನ ಮಾತುಗಳು ನಿಜವೆಂದು ನಂಬಬಹುದು. ಒಂದೋ, ನಾವು ಅದನ್ನು ಗ್ರಹಣ ಮಾಡಬೇಕು ಅಥವಾ ವಾಸ್ತವೀಕರಿಸಿಕೊಳ್ಳಬೇಕು, ಇಲ್ಲವಾದರೆ ನಂಬಬೇಕು. ಇವೆರಡರ ಅರ್ಥವೂ ಒಂದೇ, ಏಕೆಂದರೆ, ಗುರುವಿನ ಸ್ಮರಣೆಯಲ್ಲಿರುವಾಗ ಬರುವ ಪ್ರತಿಯೊಂದು ವಿಚಾರವೂ, ನಿಸರ್ಗದ ಕಾರ್ಯಾಗಾರದಲ್ಲಿಯ, ಗುರುವಿನ ಕಾರ್ಯಯೋಜನೆಯಲ್ಲಿ ನಮ್ಮ ಹೊಣೆಗಾರಿಕೆಯೇನೆಂಬುದನ್ನು ನಮಗೆ ಅರಿವಾಗುವಂತೆ ಮಾಡುತ್ತದೆ. ನಮ್ಮ ಹೊಣೆಗಾರಿಕೆ ಮಹತ್ತಾದುದಿದೆ.

ನಮ್ಮ ಚಿಂತನ ಕ್ರಮವನ್ನು ನಾವು ಹೇಗೆ ರೂಪಿಸಿಕೊಳ್ಳಬೇಕೆಂದರೆ, ಅದು ಮಾನವಕುಲದ ಸುಧಾರಣೆಗೆ ಹಾಗೂ ಕಲ್ಯಾಣಕ್ಕೆಂದೇ ಇರಬೇಕು, ಹೊರತು ಇತರರಿಂದ ಬೇರ್ಪಟ್ಟದ್ದಾಗಿ, ಹಾಗೂ ಸ್ವಾರ್ಥಕ್ಕೋಸ್ಕರ ಅಲ್ಲ. ಸಾಮಾನ್ಯವಾಗಿ ನಮ್ಮ ಜೀವನ ರೀತಿಯು ಇರುವುದು ಹಾಗೆ – ಸ್ವಾರ್ಥೋದ್ದೇಶವುಳ್ಳದ್ದು ಹಾಗೂ ಇತರರಿಂದ ಪ್ರತ್ಯೇಕಿಸುವಂತಹದು; ಮತ್ತು ಅದು ಘರ್ಷಣೆ, ದುಃಖ, ಸಂಕೀರ್ಣತೆ ಮತ್ತಿತರ ಅಂತಹ ಅನೇಕ ಸಂಗತಿಗಳಿಗೆ ಕಾರಣವಾಗಿದೆ.

ಯಾರೋ ಒಬ್ಬರು, “ನಾವು ಒಬ್ಬ ಅಗಲಿಹೋದ ವ್ಯಕ್ತಿಗೆ ಹೇಗೆ ಸೇವೆ ಸಲ್ಲಿಸಬಲ್ಲೆವು?” – ಎಂದು ಪ್ರಶ್ನೆ ಮಾಡಿದುದು ಬೇರೆ ವಿಷಯ. ನಾನೊಬ್ಬ ಜೀವಂತ ವ್ಯಕ್ತಿಯಾಗಿದ್ದರೆ ಮಾತ್ರವೇ ನೀವು ನನಗೆ ಸೇವೆ ಮಾಡುತ್ತೀರಿ ಎಂದಾಯಿತು. ಬಡಪಾಯಿ! ಅವನಿಗೆ ಸೇವೆ ಎಂದರೇನೆಂಬುದೇ ತಿಳಿದಿಲ್ಲ. ಮಹಾವ್ಯಕ್ತಿಗಳ ಹೆಜ್ಜೆಗಳನ್ನು ಅನುಸರಿಸುವುದೇ ಅವರಿಗೆ ಸಲ್ಲಿಸಬಹುದಾದ ಅತಿದೊಡ್ಡ ಸೇವೆ; ಏಕೆಂದರೆ ಅವರು ನಿಮಗೆ ಮಾರ್ಗದರ್ಶನ ಮಾಡಿಸಿದ್ದಾರೆ, ವಿಧಾನವನ್ನು ಕೊಟ್ಟಿದ್ದಾರೆ, ಮತ್ತು ಅವರ ಮಾನದಂಡಗಳೇನೆಂಬುದನ್ನು ತೋರಿಸಿದ್ದಾರೆ. ನಾವು ಅವರ ಆದರ್ಶಗಳ ಮಟ್ಟಕ್ಕೆ ಬಂದರೆ, ನಾವು ನಿಜವಾದ ಅರ್ಥದಲ್ಲಿ ಅವರಿಗೆ ಸೇವೆ ಮಾಡಿದಂತಾಯಿತು. ಅವರು ಸಂತುಷ್ಟರಾಗುತ್ತಾರೆ, ಆನಂದಿತರಾಗುತ್ತಾರೆ. “ಇಲ್ಲ ಇಲ್ಲ, ಅವರು ತೀರಿಹೋಗಿದ್ದಾರೆ, ಹೊರಟುಹೋಗಿದ್ದಾರೆ, ಅವರಿಗೆ ಶಾಂತಿ ಅಥವಾ ಸಂತೋಷ ಎಂಬುದಿಲ್ಲ. ಸಂತೋಷಪಡುವವನು ನಾನು! ಹಾಗಾಗಿ ನನ್ನನ್ನು ಸಂತೋಷಪಡಿಸಲು ಎಲ್ಲ ಪ್ರಯತ್ನ ಮಾಡಿರಿ. ನಾನು ನಿಮ್ಮ ಜೀವಂತ ಗುರು. ತೀರಿಹೋದ ಗುರುವಿನ ಹಿಂದೆ ಬೀಳಬೇಡಿರಿ. ಇದು ಗುರುತ್ವ !” – ಈ ವಿಚಾರಗಳನ್ನು ಜನರನ್ನು ಶೋಷಿಸಲು ಮತ್ತು ಅವರ ಅಜ್ಞಾನದ ಶೋಷಣೆ ಮಾಡಲು ಮಾತ್ರವೇ ಹಬ್ಬಿಸಲಾಗುತ್ತದೆ.

ಮಾನವತೆಯ ಸೇವೆ ಮಾಡುವುದರಲ್ಲಿ ನಾವು ಆ ಶ್ರೇಷ್ಠ ಗುರುವನ್ನು ಅನುಸರಿಸುತ್ತೇವೆ. ಅವನು ಶಾಶ್ವತ, ಸಚೇತನನಾಗಿದ್ದಾನೆ, ಸದಾ ಉಪಸ್ಥಿತನಿದ್ದಾನೆ. ಗುರುವೇ ನಮಗೆ ನೀಡಿದ ಮಾರ್ಗ (ವಿಧಾನ) ಇದು, ‘ಸಹಜಮಾರ್ಗ’ ಎಂಬುದನ್ನು ನಾವು ಮನಸಾರೆ ಅರ್ಥ ಮಾಡಿಕೊಳ್ಳಬೇಕು.

[12, ಅಕ್ಟೋಬರ್, 1996 ರಂದು, ಸಂಸ್ಥಾಪಕ ದಿನಾಚರಣೆಯಲ್ಲಿ ಮಾಡಿದ ಭಾಷಣದ ಲಿಖಿತರೂಪದಿಂದ]