ಲಾಲೀ ಮೇರೆ ಲಾಲ ಕೀ, ಜಿತ ದೇಖೋಂ ತಿತ ಲಾಲ್/ ಲಾಲೀ ದೇಖನ ಮೈಚಲೀ, ಮೈಂ ಭೀ ಹೋಗಯಿ ಲಾಲ್ // – ಕಬೀರದಾಸ್
ನನ್ನ ಆ ಪ್ರಿಯತಮನ ಪ್ರೇಮ ಪ್ರಭಾವಳಿಯು !
ಎತ್ತ ನೋಡಿದರತ್ತ ಅರುಣವರ್ಣ |
ಪ್ರಿಯತಮನ ದರ್ಶನವ ಬಯಸಿ ನಡೆದೆನು ನಾನು,
ನಾನೆ ಆದೆನು ಅವನ ಅರುಣವರ್ಣ
(ಪ್ರಿಯತಮನ ವರ್ಣದರ್ಶನ ಪಡೆಯೆ ನಾ ನಡೆದೆ,
ನಾನೆ ಆದೆನು ಅವನ ತೆರದೆ ನಿರ್ವಣ್ರ )
ಈ ಸಂಸಾರದಲ್ಲಿ ಜನಿಸಿ ಬಂದಾಗಿನಿಂದಲೇ ಮನುಷ್ಯನು ಬೇರೆಯವರನ್ನು ಗಮನಿಸಲು ಆರಂಭಿಸುತ್ತಾನೆ. ಮತ್ತೆ ಮತ್ತೆ ನೋಡುತ್ತ ಹೋದಂತೆ ಇನ್ನೂ ನೋಡುವ ಇಚ್ಛೆ ಬೆಳೆಯುತ್ತಲೇ ಹೋಗುತ್ತದೆ. ಪ್ರಾಯಃ ನೋಡುವ ಇಚ್ಛೆಯ ಕಾರಣದಿಂದಾಗಿಯೇ ಅವನು ನೋಡತೊಡಗುತ್ತಾನೆ. ಸಂಭವತಃ ಈ ರೀತಿ ಅವನು ನೋಡುವುದರಲ್ಲಿ ತನ್ನ ಪ್ರತಿಚ್ಛಾಯೆಯನ್ನೇ ಕಾಣುತ್ತಾನೆ: ಪ್ರಾರಂಭದಲ್ಲಿಯಂತೂ ಅವನ ತಾಯಿಯೇ ಅವನ ಸರ್ವಸ್ವ. ಆದರೆ ಅವನು ಬೆಳೆದು ದೊಡ್ಡವನಾಗುತ್ತಾನೆ, ಆಗ ತಾಯಿಯಷ್ಟೇ ಅಲ್ಲದೆ, ಇತರರ ಮೇಲೆಯೂ ಅವನ ದೃಷ್ಟಿ ಬೀಳತೊಡಗುತ್ತದೆ. ಈ ದೃಷ್ಟಿಯ ಹಿನ್ನೆಲೆಯಲ್ಲಿ ಇಚ್ಛೆ (ಬಯಕೆ), ಲೋಭ, ಸ್ವಾರ್ಥ ಇತ್ಯಾದಿ ಶಕ್ತಿಗಳು ಕೆಲಸ ಮಾಡಲು ಪ್ರಾರಂಭಿಸಿದಾಗ ತೊಡಕು, ಗೊಂದಲಗಳು ಎದುರಾಗಲು ತೊಡಗುತ್ತವೆ. ಈ ರೀತಿಯಾಗಿ ಘರ್ಷಣೆ, ಉಷ್ಣತೆಗಳು ಹೆಚ್ಚಾಗಿ, ಸರಳತೆಯು ಕಣ್ಮರೆಯಾಗುವುದು. ಜೊತೆ ಜೊತೆಗೆ ತನ್ನ ತಾಯಿಯ ಭಾವನೆಯೂ ಮಸಕಾಗುತ್ತ ಹೋಗುವುದು.
ಈಗ, ಅವನಿಗೆ ತನ್ನದೇ ಪ್ರತಿಚ್ಛಾಯೆಯೊಂದಿಗೆ ಕೆಲವೊಮ್ಮೆ ಅನುರಾಗ, ಕ್ರೋಧ, ಕಾಮನೆಗಳು, ತಿರಸ್ಕಾರ ಇತ್ಯಾದಿಗಳು ಉತ್ಪನ್ನವಾಗತೊಡಗುತ್ತವೆ. ಈ ರೀತಿಯಾಗಿ, ಅವನು ತನ್ನಲ್ಲಿ ವಕ್ರತೆಗಳನ್ನು ಬೆಳೆಸಿಕೊಳ್ಳಲಾರಂಭಿಸುತ್ತಾನೆ. ಆಂತರ್ಯದಿಂದ ಸಂಸ್ಕಾರಗಳಿಂದ ಇವು ಉಗಮವಾದರೆ, ಬಾಹ್ಯದಿಂದ ಬರುವ ಪ್ರಲೋಭನೆಗಳು ಹಾಗೂ ಅವುಗಳ ಪರಿಣಾಮಗಳೂ ಕಡಿಮೆಯವೇನಲ್ಲ. ಈಗ ಅವನ ಒಳಗೂ ಮತ್ತು ಹೊರಗೂ ಸಂಕೋಭವೇ ಇದ್ದು ಶಾಂತಿಯು ಲುಪ್ತವಾಗಿ ಹೋಗುತ್ತದೆ. ಕೆಲವೊಮ್ಮೆ ಬಲವಾದ ಆಘಾತ ಅಥವಾ ಪೆಟ್ಟುಬಿದ್ದಾಗ, ವಿಚಾರವು ಸ್ವಲ್ಪಮಟ್ಟಿಗೆ ಪಲ್ಲಟ ಹೊಂದುವುದು, ಆದರೆ ಅದು ಅಲ್ಪಕಾಲದವರೆಗೆ ಮಾತ್ರ. ಏಕೆಂದರೆ, ಒಳಗಿನ ವಕ್ರತೆಯು ನಾಯಿಯ ಬಾಲದ ವಕ್ರತೆಗಿಂತಲೂ ಹೆಚ್ಚು ಬೆಳೆದು ಬಿಟ್ಟಿದೆ.
ಈ ಬಂಧನದಿಂದ ಬಿಡುಗಡೆಯಾಗಬೇಕೆಂಬ ವಿಚಾರವು ಯಾವಾಗಲಾದರೂ ಬಂದರೂ ಕೂಡ, ಮಾಯೆಯ ಪ್ರಭಾವವು ಹೇಗೆ ಮಸ್ತಿಷ್ಕದ ಮೇಲೆ ಬಿದ್ದಿದೆಯೆಂದರೆ, ಅದು ಕ್ಷಣಮಾತ್ರದಲ್ಲಿ ಆ ವಿಚಾರವು ಮರೆತು ಹೋಗುವಂತೆ ಮಾಡುತ್ತದೆ. ಇದರಲ್ಲಿ ಮಾನವನು ಎಷ್ಟರಮಟ್ಟಿಗೆ ಜಾರಿ ಸಿಲುಕಿಕೊಂಡಿರುವನೆಂದರೆ, ಅವನಿಗೆ ವಾಸ್ತವದಲ್ಲಿ ತಾನು ಯಾರು? ಈ ಈಶ್ವರೀಯ ಕಾರ್ಯಾಗಾರದಲ್ಲಿ ತನ್ನ ಮಹತ್ವಪೂರ್ಣ ಪಾತ್ರವೇನು? ನಿಜವಾಗಿ ಮಾಡಬೇಕಾದುದೇನು? ಇತ್ಯಾದಿಗಳ ಕುರಿತು ಚಿಂತನ ಮಾಡುವ ಅವಕಾಶವೇ ಇಲ್ಲವಾಗಿದೆ. ಸಿಹಿ-ಕಹಿ ಪದಾರ್ಥಗಳನ್ನು ತಿನ್ನುತ್ತಲೇ ಹೋಗುತ್ತಾನೆ ಮತ್ತು ಅವನು ಅಧೋಮುಖಿಯಾಗಿಯೇ ಇರುತ್ತಾನೆ. ಈ ಪ್ರಕಾರವಾಗಿ ಸಮಯ ಕಳೆದು ಹೋಗುತ್ತಿರುವುದು. ವೃದ್ಧಾಪ್ಯವು ಬಂದು, ಶಕ್ತಿಯು ಉಡುಗಿಹೋಗಿ, ರೋಗ ಮತ್ತು ಮೃತ್ಯುಭಯ ಉಂಟಾಗುತ್ತಿದೆ. ಆಗ ತಡಮಾಡದೆ, ದೇವರ ಮುಖಸ್ತುತಿ ಮಾಡಲು ಪ್ರಾರಂಭಿಸುತ್ತಾನೆ, ಮುಂದೇನಾಗುವುದೆಂಬ ಅರಿವು ಕೊಂಚವೂ ಇಲ್ಲ. ಈಶ್ವರನಿದ್ದಾನೆ ಎಂದು ಜನರು ಹೇಳುತ್ತಾರೆ, ಏನನ್ನು ಮಾಡುವುದು? ಏನನ್ನು ಬಿಡುವುದು? ಒಳಗಿನ ಸ್ಥಿತಿಯಂತೂ ಸ್ಕೂಲಗೊಂಡು, ಕಲ್ಲಿನಂತೆ ಗಟ್ಟಿಯಾಗಿ ಹೋಗಿದೆ. ಸರಳ ಸಾಮಾನ್ಯ ಸಂಗತಿಗಳೂ ಮನಸ್ಸಿಗೆ ಹೊಳೆಯುವುದಿಲ್ಲ. ಮನಸ್ಸಿಗೆ ಏನೇ ತೋಚಲಿ, ಅದು ತನ್ನದೇ ಇಚ್ಛೆ ಹಾಗೂ ತಿಳಿವಳಿಕೆಯ ಅನುಸಾರ ಬರುತ್ತದೆ.
ಒಂದುವೇಳೆ ಯಾರಿಗಾದರೂ ಈ ಸ್ಥಿತಿಗಳ ವಿಚಾರವು ಬಂದರೆ ಮತ್ತು ಆ ವಿಚಾರವು ಅದರ ಮೇಲೆ ಸ್ಥಿರವಾದರೆ, ಆಗ ಅವನು ಈ ಬಂಧನದಿಂದ ಮುಕ್ತಿಹೊಂದುವ ವಿಚಾರ ಮಾಡಿಯೇ ಮಾಡುತ್ತಾನೆ. ಆಗ ಅವನು ಈ ಬಂಧನದಿಂದ ಮುಕ್ತಿಹೊಂದುವ ಉಪಾಯವು ಸಂಭವವಾಗುವುದು, ವಾಸ್ತವವಾಗಿ ಇದರಿಂದ ಮುಕ್ತಿ ಪಡೆದ ವ್ಯಕ್ತಿಯೊಬ್ಬನು ನಮಗೆ ದೊರೆತಾಗ ಮಾತ್ರವೇ. ಅಂತಹ ವ್ಯಕ್ತಿಯೊಬ್ಬನೇ ನಮಗೆ ಈ ವಿಷಯದಲ್ಲಿ ಸಹಾಯಮಾಡಲು ಶಕ್ತನಾಗಿರುತ್ತಾನೆ.
ಯಾವ ರೀತಿಯಲ್ಲಿ ವ್ಯಕ್ತಿಯೊಬ್ಬನು ತನ್ನ ವಿಚಾರಧಾರೆಯನ್ನು ಹೆಚ್ಚಿಸುತ್ತಲೇ, ಹಾಗೂ ವಿವಿಧ ವಿಷಯಗಳಲ್ಲಿ ತೊಡಗಿಸಿಕೊಳ್ಳುತ್ತಲೇ ಈ ಅವಸ್ಥೆಗೆ ತಲುಪಿದ್ದಾನೋ, ಅದೇ ಪ್ರಕಾರ, ಇದೇ ವಿಚಾರಧಾರೆಯ ಶಕ್ತಿಯಿಂದಲೇ ಈ ಜಾಲದಿಂದ ಬಿಡಿಸಿಕೊಂಡು ಹೊರಬರಬಲ್ಲನು. ಇದಕ್ಕೊಂದು ಸರಳ ಉಪಾಯವುಂಟು. ಯಾವ ನಾಟಕವನ್ನು ನಾವು ಸತ್ಯವೆಂದು ಭಾವಿಸಿರುವೆವೋ ಅದನ್ನು ಸತ್ಯದ ಪ್ರತಿಬಿಂಬವೆಂದು ತಿಳಿದುಕೊಳ್ಳಬೇಕು. ಹಾಗೂ ಆ ಸತ್ಯವನ್ನು ನಮ್ಮ ವಿಚಾರದಲ್ಲಿ ಪುನಃಪುನಃ ತಂದುಕೊಳ್ಳಲು ಪ್ರಾರಂಭಿಸಬೇಕು. ಇದರಿಂದಾಗಿ ಕಿಂಚಿತ್ ವೈರಾಗ್ಯ, ಕಿಂಚಿತ್ ಜ್ಞಾನ ಹಾಗೂ ಕಿಂಚಿತ್ ಸತ್ಯದ ಮಿಣುಕು ನೋಟದ ಅನುಭವವಾದೀತು. ಸೌಭಾಗ್ಯವಶವಾಗಿ, ಉಚ್ಚತಮ ಸ್ಥಿತಿಯಲ್ಲಿ ನೆಲೆಗೊಂಡ ಹಾಗೂ ಪ್ರಾಣಾಹುತಿ ಶಕ್ತಿಹೊಂದಿದ ವ್ಯಕ್ತಿಯೊಬ್ಬನು ನಮಗೆ ದೊರೆತರೆ ನಮ್ಮ ಕಾರ್ಯವು ಸುಲಭ ಹಾಗೂ ಸರಳವಾಗಿ ನೆರವೇರಬಲ್ಲುದು.
ಇಂತಹ ಮಾರ್ಗದರ್ಶಕ ಹುಡುಕಿಕೊಳ್ಳುವುದೂ ಒಂದು ಪ್ರಮುಖ ಪ್ರಶ್ನೆಯಾಗಿದೆ. ಇದಕ್ಕೆ ಕಾರಣವೇನೆಂದರೆ ಒಬ್ಬಮನುಷ್ಯನು, ತಾನು ಇಷ್ಟಪಡುವಂತಹ ವಿಷಯಗಳು ಇನ್ನೊಬ್ಬನಲ್ಲಿ ಕಂಡುಬಂದಾಗ ಅವನೊಂದಿಗೆ ಸ್ನೇಹ ಬೆಳೆಸಿಕೊಳ್ಳಲು ಇಚ್ಛೆಪಡುತ್ತಾನೆ. ಅವನು ಗುರು- ಶಿಷ್ಯರ ಸಂಬಂಧದಲ್ಲಿ ವಿಶ್ವಾಸವಿಡುವವನಾದರೆ, ಆಗ ಅವರಿಬ್ಬರಲ್ಲಿ ಗುರು-ಶಿಷ್ಯ ಸಂಬಂಧ ಏರ್ಪಡುತ್ತದೆ. ಈ ಸಂಬಂಧವು ಬೆಸೆದುಕೊಳ್ಳುತ್ತ ಹೋದ ಹಾಗೆ, ಕ್ರಮೇಣ ಗುರುವಿನ ಗುಣಗಳು ಶಿಷ್ಯನಲ್ಲಿಯೂ ಬರುತ್ತವೆ. ಇವು ಸರಿಯಾದವುಗಳಾಗಿದ್ದರೆ, ಮತ್ತು ಗುರುವು ಆಧ್ಯಾತ್ಮಿಕ ಉನ್ನತಿಯನ್ನು ಪೂರ್ಣವಾಗಿ ಪಡೆದವನಾಗಿದ್ದರೆ, ಶಿಷ್ಯನಲ್ಲಿಯೂ ಅವೇ ಗುಣಗಳು ಬೆಳೆಯತೊಡಗಿ, ಸಾವಕಾಶವಾಗಿ ಗುರು- ಶಿಷ್ಯ ಇಬ್ಬರೂ ಆ ಪೂರ್ಣತೆಯ ಸ್ಥಿತಿಯಲ್ಲಿ ಸಂಪೂರ್ಣ ಒಂದಾಗಿಬಿಡುತ್ತಾರೆ.
ಇದರ ಒಳಗುಟ್ಟೇನು? ಇವೆಲ್ಲವೂ ಚಿಂತನದ (ವಿಚಾರದ) ಪ್ರಭಾವವೇ ಸರಿ. ವಿಚಾರವು ಯಾವುದಾದರೊಂದು ವಿಷಯಕ್ಕೆ ಅಂಟಿಕೊಂಡಿದ್ದರೆ, ಅದು ಆ ವಿಷಯದ (ವಸ್ತುವಿನ) ವರ್ಣವನ್ನು ಹೀರಿಕೊಳ್ಳಲಾರಂಭಿಸುತ್ತದೆ. ಸಂಬಂಧವು ಗಾಢವಾಗಿರುವ ಪ್ರಮಾಣದಲ್ಲಿಯೇ ವರ್ಣವನ್ನು ಹೀರಿಕೊಳ್ಳುವುದೂ ನಡೆಯುತ್ತದೆ. ಸುದೈವದಿಂದ, ಸಂಪೂರ್ಣ ವರ್ಣರಹಿತವಾದುದರೊಂದಿಗೆ ಆಸಕ್ತಿಯು ಬೆಳೆದರೆ, ಆಗ ಮನುಷ್ಯನು ತಾನೂ ವರ್ಣರಹಿತನಾಗುತ್ತಾನೆ. ಅವನು ತನ್ನ ಮೇಲೆ ಕಲಬೆರಕೆಯಾಗಿ ಏನೆಲ್ಲ ಸಂಗ್ರಹವಾದುದಿರುವುದೋ ಅದನ್ನು ಹೊರಗೆಸೆಯತೊಡಗುತ್ತಾನೆ. ಮತ್ತು ನೈಜ ವಸ್ತು ಏನಿದೆಯೋ ಅದರ ವಾಸ್ತವಿಕತೆಯೊಂದೇ ಪ್ರಕಟಗೊಳ್ಳಲಾರಂಭಿಸುವುದು. ಆದರೆ ಸಾಮಾನ್ಯವಾಗಿ ಮನುಷ್ಯನು ವರ್ಣರಾಹಿತ್ಯವನ್ನು ಇಷ್ಟಪಡುವುದಿಲ್ಲ. ಯಾವಾಗಲೂ ಅವನು ಹೊಸ ಹೊಸ ವರ್ಣಗಳ ಹುಡುಕಾಟದಲ್ಲಿರುತ್ತಾನೆ. ಅವನು ಯಾವಾಗಲೂ ‘ಹೋಲಿ’ ಆಡುವ ಬಯಕೆಯುಳ್ಳವನಾಗಿದ್ದಾನೆ. ವಿವಿಧ ವರ್ಣಗಳ ಕುರಿತಾದ ಈ ಬಯಕೆಯು ಕೇವಲ ಕಣ್ಣುಗಳಿಗಷ್ಟೇ ಸೀಮಿತವಾಗಿಲ್ಲ, ಅದು, ಶ್ರವಣೇಂದ್ರಿಯ, ಘ್ರಾಣೇಂದ್ರಿಯ, ಸ್ಪರ್ಶೇಂದ್ರಿಯ ಮತ್ತು ರಸನೇಂದ್ರಿಯಗಳಿಗೂ ವಿಸ್ತರಿಸಿಕೊಂಡಿದೆ; ಪ್ರತಿಯೊಂದಕ್ಕೂ ಅದರದೇ ಬೇರೆ ಬೇರೆ ವರ್ಣಗಳಿರುತ್ತವೆ. ಹಾಡುವುದು, ಕುಣಿಯುವುದು, ವಾದನ ಮಾಡುವುದು, ವಿವಿಧ ಸುಗಂಧಗಳು, ರುಚಿಕರ ತಿಂಡಿ- ತಿನಿಸುಗಳು, ಪಕ್ವಾನ್ನಗಳು, ಶೀತೋಷ್ಣ ಸುಖದಾಯಕ ವಸ್ತುಗಳು ಇತ್ಯಾದಿ ಅನೇಕ ವರ್ಣಗಳುಂಟು. ಎಲ್ಲೆಲ್ಲಿ ಈ ವಿಷಯ- ವಸ್ತುಗಳಿರುವವೋ, ಅಲ್ಲಿಗೆ ಹೋಗಿ ಅವುಗಳ ವರ್ಣದಿಂದ ತಾನು ವರ್ಣಪಡೆಯುವ ಇಚ್ಛೆಗಳು ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಈ ಪ್ರಕಾರವಾಗಿ, ಜನರು, ಅವರ ಮನಸ್ಸುಗಳು ಆ ವರ್ಣಗಳ ಲೇಪವನ್ನು ಪಡೆಯುತ್ತಿರುತ್ತವೆ. ಯಾವಾಗ ಈ ವರ್ಣಗಳು ಕೋಭೆ ಉಂಟುಮಾಡುವವೋ ಆಗ ಅವುಗಳಿಂದ ಬಿಡುಗಡೆ ಹೊಂದುವ ವಿಚಾರ ಮಾಡುತ್ತಾನೆ.
ಆದರೆ ನಮ್ಮಲ್ಲಿ ಮಾರ್ಗದರ್ಶಕರಿಗೇನೂ ಕೊರತೆಯಿಲ್ಲ. ಅವರು ನಮಗೆ ಒಂದು ಪ್ರಕಾರದ ವರ್ಣದಿಂದ ಮುಕ್ತಿಪಡೆಯುವ ಉಪಾಯವನ್ನು ಕಲಿಸುವ ಆಶ್ವಾಸನೆ ಕೊಡುತ್ತಾರೆ, ಆದರೆ ಇನ್ನೊಂದು ಪ್ರಕಾರದ ವರ್ಣದಲ್ಲಿ ಮುಳುಗಿಸಿಬಿಡುತ್ತಾರೆ. ಕೆಲವು ದಾರಿತಪ್ಪಿದ ಆಚಾರ್ಯರು (ಶಿಕ್ಷಕರು) ಭಕ್ತಿಯ ಹೆಸರಿನಲ್ಲಿ ಗಾನ-ವಾದನ ಹಾಗೂ ಕುಣಿದಾಡುವ ರೂಢಿಯನ್ನು ಹುಟ್ಟುಹಾಕುತ್ತಾರೆ. ಪೂಜೆ-ಪ್ರಸಾದಗಳ ಹೆಸರಿನಲ್ಲಿ ಸುಗಂಧದ್ರವ್ಯ, ಹಾಗೂ ಸ್ವಾದಿಷ್ಟ ಪಕ್ವಾನ್ನಗಳ ಚಟವನ್ನು ಅಂಟಿಸಿಬಿಡುತ್ತಾರೆ. ಸಮಾಧಿಯ ಹೆಸರಿನಲ್ಲಿ ಚರಸ್ ಮತ್ತು ಭಂಗಿ (ಭಾಂಗ್)ಗಳ ಸೇವನೆಯನ್ನು ಕಲಿಸುತ್ತಾರೆ. ಇಂತಹ ಮಾರ್ಗದರ್ಶಕರಿಂದ ನಮಗೆ ಮುಕ್ತಿಯು ಹೇ ಹೇಗೆ ದೊರೆಯಬಲ್ಲುದೆಂಬುದನ್ನು ನೀವೇ ನಿರ್ಣಯಿಸಿಕೊಳ್ಳಿರಿ.ಯೋಗದ ವಿವಿಧ ಪ್ರಕಾರಗಳಿಗೂ ನಮ್ಮಲ್ಲಿ ಏನೂ ಕೊರತೆ ಇಲ್ಲ. ಕುಂಡಲಿನಿಯನ್ನು ಜಾಗೃತಗೊಳಿಸುವ ಅನೇಕ ಸಾಧನಗಳನ್ನು ಉಪದೇಶಿಸಲಾಗುತ್ತದೆ. ಆದರೆ ಹೀಗೆ ಕಲಿಸುವವರಲ್ಲಿ ಯಾರಿಗೆ ಅದರ ಅನುಭವವು ವಾಸ್ತವವಾಗಿ ಆಗಿದೆಯೆಂಬುದು ತಿಳಿಯದು. ಇನ್ನೊಂದು ಕಡೆಯಲ್ಲಿ ಮಹಾತ್ಮರೆನಿಸಿಕೊಂಡವರು ಹೋಮ-ಹವನಗಳ ಹೆಸರಿನಲ್ಲಿ ಪೀಪಾಯಿಗಟ್ಟಲೆ ತುಪ್ಪ, ಮಣಗಟ್ಟಲೆ ಧಾನ್ಯಗಳನ್ನು ಸುಡುತ್ತಾರೆ. ಇದರಿಂದ ತಮ್ಮ ಮೂರ್ಖತನವನ್ನು ಸಿದ್ಧಮಾಡುವುದರ ಹೊರತಾಗಿ ಇನ್ನಾವುದಾಗಲು ಸಾಧ್ಯ? ಇದು ಯಾವುದೇ ವಿವೇಕಯುಕ್ತ ವ್ಯಕ್ತಿಯ ತಿಳಿವಳಿಕೆಯಲ್ಲಿ ಬರುವುದಿಲ್ಲ.ಯಾವನೋ ಒಬ್ಬನು ಸಿದ್ದಿಗಳ ಹೆಸರಿನಲ್ಲಿ ಇಂದ್ರಜಾಲ-ಕಣಟ್ಟುಗಳನ್ನು ಪ್ರದರ್ಶಿಸುತ್ತಾನಾದರೆ, ಇನ್ನೊಬ್ಬ ಜ್ಞಾನದ ನೆಪದಲ್ಲಿ ಪವಿತ್ರ ಗ್ರಂಥಗಳ ಪಾಠ ಮಾಡಿಸುತ್ತಾನೆ. ಆದರೆ ಈಯೆಲ್ಲ ಚಿತ್ರ-ವಿಚಿತ್ರ, ವರ್ಣಮಯ ತಮಾಷೆ ನಡೆಯುತ್ತಿರುವುದರ ಮಧ್ಯದಲ್ಲಿ, ಪ್ರಾಣಾಹುತಿಯನ್ನು ಕೊಟ್ಟು, ಜಿಜ್ಞಾಸುವು ತನ್ನ ಕಲ್ಯಾಣವನ್ನು ಸಾಧಿಸಿಕೊಳ್ಳುವಂತೆ ಮಾಡುವುದರ ಸೊಲ್ಲೂ ಕೇಳಿಬರುವುದಿಲ್ಲ.
ಭಗವಂತನು ಮನುಷ್ಯನಿಗೆ ಬುದ್ಧಿಶಕ್ತಿಯನ್ನು ಕೊಟ್ಟಿದ್ದಾನೆ. ಇದನ್ನು ಉಪಯೋಗಿಸಿ, ವರ್ಣ(ಬಣ್ಣ) ಎಂದರೇನು? ವರ್ಣಮಯತೆ ಎಂದರೇನು ಎಂಬುದನ್ನಾದರೂ ಜಿಜ್ಞಾಸುವು ಅರ್ಥಮಾಡಿಕೊಳ್ಳಲಿ. ಅನಂತರ ಎಲ್ಲ ವರ್ಣಮಯತೆಗಿಂತ ವಿಭಿನ್ನವಾದ ವಾಸ್ತವಿಕತೆಯ, ಸತ್ಯದ ಶೋಧನೆಯಲ್ಲಿ ಹೊರಡಲಿ ಮತ್ತು ಯಾವನು ಅಂತಹ ನಿರ್ವಣ್ರತೆಯಲ್ಲಿ ವಾಸ್ತವಿಕವಾಗಿ ಲಯ ಹೊಂದಿರುವನೋ, ಮತ್ತು ತನ್ನದೆಂಬ ಯಾವ ವರ್ಣವನ್ನು ಹೊಂದಿಲ್ಲವೋ ಅಂತಹ ವ್ಯಕ್ತಿಯ ಸಹಾಯ ಪಡೆಯಲಿ, ಅಂತಹ ನಿರ್ವಣ್ರತೆಯನ್ನು ಅವನ ಹೃದಯದಲ್ಲಿ ಗುರುತಿಸಿಕೊಂಡಾಗ, ಅನಂತರ ಅವನನ್ನು ಗುರು ಎಂದು ಸ್ವೀಕರಿಸಿ, ಸ್ವತಃ ತನ್ನನ್ನು ಅವನ (ನಿರ್ವಣ್ರ) ವರ್ಣದಲ್ಲಿ ಲೇಪಿಸಿಕೊಳ್ಳಲು ಪ್ರಯತ್ನಿಸಲಿ, ಅಂತಹ ವ್ಯಕ್ತಿಯೊಂದಿಗೆ ಅತ್ಯಧಿಕ ಪ್ರೇಮ ಬೆಳೆಸಿಕೊಳ್ಳಲಿ, ಹಾಗೂ ಅವನ ಸಹಾಯದಿಂದ ತನ್ನ ಎಲ್ಲ ವರ್ಣಗಳನ್ನೂ ಕಳೆದುಕೊಂಡು ಕೇವಲ ಸತ್ಯದಲ್ಲಿಯೇ ಲಯವಾಗಿ ಹೋಗಲಿ.
ಭಕ್ತಿಯನ್ನು ನಿಮ್ಮ ಬಣ್ಣದಲ್ಲಿ ಅದ್ದಬೇಡಿ. ಅದು ನೈಜವಾಗಿರಲಿ, ಮುಖಸ್ತುತಿಯು ಭಕ್ತಿಯಲ್ಲ.
– ಶ್ರೀ ಬಾಬೂಜಿ
( ಸತ್ಯೋದಯ ೩೯)