ನನ್ನ ಪ್ರಿಯನೆ, ಈಗಾಗಲೇ ತುಂಬಾ ವಿಳಂಬವಾಗಿದೆ. ಭೂತ ವಸ್ತುಗಳು ತಮ್ಮ ಪುನರ್ಮಿಲನಕ್ಕೋಸ್ಕರ ಅಳುತ್ತ ಕರೆಯುವ ಮೊದಲೇ, ‘ಇದೆ’ ಎಂಬುದು ‘ಇತ್ತು’ ಎಂದಾಗುವ ಮೊದಲೇ ನಾನು ನಿನ್ನನ್ನು ಶಾಶ್ವತವಾಗಿ ಪಡೆಯಲಿ.

ರಾಶಿಗಟ್ಟಿ ನಿಂತ ನನ್ನ ವಿಚಾರ(ಚಿತ್ರ)ವನ್ನು ಚೂರು ಚೂರು ಮಾಡಬಹುದಾದ, ಇನ್ನು ಕೇಳಿರದ ಗುಡುಗಿನ ಗರ್ಜನೆಯ ಕಣ್ಣು ಕುಕ್ಕಿ ಕುರುಡಾಗಿಸುವ ಮಿಂಚಿನ ಸೆಳಕು ನನ್ನ ಹೃದಯದಲ್ಲಿ ಭೀತಿಯನ್ನು ಉಂಟುಮಾಡಿದೆ. ಓ! ಪ್ರಿಯ ! ನನ್ನನ್ನು ಸಂಪೂರ್ಣವಾಗಿ ಆಲಿಂಗಿಸು. ಏಕೆಂದರೆ, ನಾನು ಎಲ್ಲವನ್ನೂ ಮರೆತು, ಯಾವುದೇ ಇಚ್ಛೆ ಆಕಾಂಕ್ಷೆಗಳು ಇನ್ನುಳಿಯದಂತೆ ನಿನ್ನಲ್ಲಿ ಲಯ ಹೊಂದಬೇಕಿದೆ. ನನ್ನನ್ನು ಸಂಪೂರ್ಣವಾಗಿ ಸ್ವೀಕರಿಸು ಮತ್ತು ನಿನ್ನ ಉದ್ದೇಶವನ್ನಾಗಿಸು.

ನಿನ್ನ ಭಾವೋದ್ದೀಪ್ತ ಚಿರಂತನ ಚುಂಬನವು, ನನ್ನ ಕರುಳಿಗೆ ಬಿಟ್ಟುಬಿಡದೆ ಯಾತನೆಯನ್ನು ಕೊಡುತ್ತಿರುವ ಹೆಸರಿಲ್ಲದ ಭೀತಿಯನ್ನು ದೂರಮಾಡುತ್ತಿದೆ. ಮತ್ತು ನನ್ನ ಅಹಂಕಾರವು ತಾನೇ ಇಲ್ಲವಾಗುವುದಕ್ಕೆ ಮೆಲ್ಲನೆ ಧೈರ್ಯತಳೆಯುತ್ತಿದೆ.

ಪುಟ್ಟ ಮಿಣುಕು ಜ್ವಾಲೆಯು ಪ್ರತಿಯೊಂದು ವಾತಾಘಾತಕ್ಕೂ (ಗಾಳಿಯ ಹೊಡೆತಕ್ಕೂ) ಕಂಪಿಸುತ್ತಿದ್ದರೂ ತನ್ನ ಬಿಸುಪನ್ನು ಕಾಯ್ದುಕೊಳ್ಳುತ್ತ, ಪ್ರಾಣಕ್ಕೋಸ್ಕರ ನಡುಗುತ್ತಿದ್ದರೂ ಇನ್ನೂ ಜೀವಕಳೆಯುಳ್ಳದ್ದಾಗಿ, ಬಿರುಗಾಳಿಯಲ್ಲಿಯೂ ನಿಶ್ಚಲವಾಗಿ ಉಳಿದಿರಲು ಹೆಣಗಾಡುತ್ತಿದೆ. ಸಮಷ್ಟಿಯ (ಸಾಕಲ್ಯದ) ಶಾಶ್ವತ ಮಿಲನದ ಅಭೀಪ್ಸೆಯೊಂದೇ (ಹಾರೈಕೆಯೊಂದೇ) ಅದನ್ನು ಜೀವಂತವಾಗಿಟ್ಟಿದೆ.

ಕಾತರದಿಂದಿರುವ ಇಂದ್ರಿಯಗಳ ಮೂಲಕ (ಹಾದು) ಇಣುಕಿ ನೋಡಲಾರದೆ, ಪಂಜರದಿಂದ ಬಿಡುಗಡೆಯಾಗುವ ಬಯಕೆ ಬಲಪಡೆಯುತ್ತಿದೆ. ಪ್ರಕೃತಿಯು ಪಂಜರದ ಬಾಗಿಲು ತೆರೆಯಿತು. ಅಗತ್ಯವಿರುವವರಿಗೆ ಬೆಳಕನ್ನೀಯಲು ಶಕ್ತಿಪೂರಿತ ಕಣಗಳನ್ನು ಹಿಂದೆ ಬಿಡುತ್ತ (ಸೂಸುತ್ತಾ) ಪಕ್ಷಿಯು ಎತ್ತರಕ್ಕೇರಿ ಹಾರಿತು.

ಬದ್ಧ, ಮತ್ತು (ಆದರೂ) ಸಂಪೂರ್ಣ ಮುಕ್ತ, ಸಮಗ್ರವಾಗಿ ನಿಯಂತ್ರಿತ, ಆದರೂ ಪೂರ್ಣ ಸ್ವತಂತ್ರ, ಶುದ್ಧ, ಮತ್ತು ಎಲ್ಲವನ್ನೂ ಉದಾತ್ತೀಕರಿಸುವ, ಸರಳ-ಸಾಧಾರಣ ಮತ್ತು ಅದೃಶ್ಯ, ಆದರೂ ಎಲ್ಲವುಗಳಲ್ಲಿಯೂ ಬೆಳಗುತ್ತಿರುವ ಅವನು ಸದಾಕಾಲ ನನ್ನ ಆಶ್ರಯ, ಆಧಾರ ಆಗಿರಲಿ.

ಬಿಡುಗಡೆಗೆ ಮೃತ್ಯುವೊಂದೇ ದಾರಿಯೆ? ಮೃತ್ಯುವೂ ಮರಣ ಹೊಂದಿದಾಗ ಬಿಡುಗಡೆಯೂ ಬಾಡಿ ಅಳಿದುಹೋಗುತ್ತದೆ. ಯಾತ್ರೆಯು ತನ್ನ ಆದಿಬಿಂದುವಿನಲ್ಲಿಯೇ ಅಂತ್ಯ (ಗಮ್ಯ ಸ್ಥಾನ)ಕ್ಕೆ ಬಂದು ತಲುಪಿದೆ. ನನ್ನ ಪ್ರಿಯ! ನೀನು ಇನ್ನೂ ಏಕೆ ಚಡಪಡಿಸುತ್ತಿರುವೆ? ಅನಂತ ಪ್ರವಾಹವು (ಧಾರೆಯು) ಸ್ಥಗಿತತೆಯನ್ನು ಅರಿಯದು.

ನನ್ನ ಮೂರ್ಖತನದ ಕಾರ್ಯಗಳಿಂದ ನಾನು ಸತ್ತು ಹೋದೆ. ಆದರೆ ನಿನ್ನ ಸ್ಪರ್ಶವು ನನ್ನನ್ನು ಅಮರನನ್ನಾಗಿ ಮಾಡಿದೆ. ನಾನು ನನ್ನ ಹೃದಯವನ್ನು ಕಠಿಣ ಮತ್ತು ಬಂಡೆಯಂತೆ ಮಾಡಿಕೊಂಡಿದ್ದೆ. ನನ್ನ ಇರವಿನ (ಅಸ್ತಿತ್ವದ) ಒಳತಿರುಳನ್ನು (ಅಂತರಾಳವನ್ನು) ನೀನು ಪ್ರವೇಶಿಸಿದೆ ಮತ್ತು ಆ ಬಂಡೆಯನ್ನು ಸ್ಫೋಟಿಸಿಬಿಟ್ಟೆ. ಈಗ ಅಲ್ಲಿ ನೆಲೆಸಿರುವವನು ನೀನು ಮಾತ್ರ

ನಿನ್ನ ಅನುಗ್ರಹದ, ಕರುಣೆಯ ವರ್ಷಣೆಯು ಉನ್ನತೀಕರಣದ ಬೀಜವನ್ನು ಬಿತ್ತಿದೆ. ಹೃದಯದ ಗ್ರಂಥಿಯು ಛಿನ್ನಭಿನ್ನವಾಗಿದೆ, ಹಾಗೂ ಆಕರ್ಷಣೆಯ ಪ್ರಭಾವವು ಭಗ್ನಗೊಂಡಿದೆ. ಮಾಯಕದ ಜಾಲ, ಜಟಿಲತೆಗಳು ಬಿಚ್ಚಿಹೋಗಿವೆ, ಅದು ಮುಕ್ತತೆಯ ಮಂದಾನಿಲವನ್ನು ತರುತ್ತಿದೆ.

ಸದ್ಗುರುವು ಒಂದು ಸನ್ನೆ ಮಾಡಿದರೆ ಸಾಕು, ದೈವೀ ಆನಂದದ ಅನುಭೂತಿಯಾಗುತ್ತದೆ. ಅವರು ಪ್ರಾಣಾಹುತಿ ನೀಡಿದಾಗ ದೈವೀ ಪ್ರಜ್ಞೆಯು ಅನುಭವಕ್ಕೆ ಬರುತ್ತದೆ. ಸದ್ಗುರು ಮಾತ್ರವೇ ದೈವೀ ಸತ್ತೆ (ದೈವೀ ಅಸ್ತಿತ್ವ) ಆಗಿದ್ದಾನೆ.

[ಸಹಜಮಾರ್ಗ ಪತ್ರಿಕೆ, ಫೆಬ್ರುವರಿ 1989]