ಮಾನವ ಜೀವನದ ನಿಜವಾದ ಗುರಿಯ ಬಗ್ಗೆ ಮತ್ತು ಯಾವ ಸೂಕ್ಷ್ಮ ಶಕ್ತಿಯೊಂದಿಗೆ ಎಲ್ಲ ಬಾಂಧವರೂ ಸಂಬಂಧಿತರಾಗಿದ್ದಾರೋ ಅದರ ಬಗ್ಗೆ ನಮ್ಮ ಗುರು ಮಹಾರಾಜರು ನಮಗೆ ಸುಳುಹುಗಳನ್ನು ಕೊಟ್ಟಿದ್ದಾರೆ. ನಾವು ಗುರುಗಳ ಬಗ್ಗೆ ಪ್ರೇಮ ಮತ್ತು ಭಕ್ತಿಗಳನ್ನು ಹೊಂದಿರುವೆವೆಂದು ಹೇಳಿಕೊಳ್ಳುವುದಾದರೆ ಆ ಆದರ್ಶವನ್ನು ಸಾಕ್ಷಾತ್ಕರಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.

ಗುರುಮಹಾರಾಜರು ನಮ್ಮನ್ನು ಅಂಧಕಾರದಿಂದ ಬೆಳಕಿನೆಡೆಗೆ, ಭ್ರಮೆಗಳಿಂದ ಸತ್ಯದ ಕಡೆಗೆ ಸದಾ ಬದಲಾವಣೆಗೊಳ್ಳುತ್ತಿರುವ ರೂಪಗಳಿಂದ ಚಿರಂತನ ಚೈತನ್ಯದ ಕಡೆಗೆ ದಾರಿ ತೋರಿ ಮುನ್ನಡೆಸುತ್ತಿದ್ದಾರೆ. ನಾವು ಕತ್ತಲೆ ಮತ್ತು ಬೆಳಕಿನಿಂದಾಚೆಗೆ, ರೂಪ (ಆಕಾರ) ಮತ್ತು ಚೈತನ್ಯಗಳ ಆಚೆಗೆ, ಭ್ರಮೆ(ಮಿಥ್ಯೆ) ಮತ್ತು ಸತ್ಯಗಳಿಂದಾಚೆಗೆ ಇರುವ ಪರಮ ತತ್ತ್ವದ ಕಡೆಗೆ ನಮ್ಮ ಚಿತ್ತವನ್ನು ಹರಿಸಬೇಕೆಂದು, ಅದೇ ಕ್ಷಣದಲ್ಲಿ ನಮಗೆ ಎಚ್ಚರಿಸುತ್ತಿದ್ದಾರೆ. ಅವರು ಯಾವಾಗಲೂ ಅನಂತತೆಯತ್ತ ಬೆರಳಿಟ್ಟು ತೋರಿಸುತ್ತಿದ್ದರು, ಆದ್ದರಿಂದ ನಾವು ನಮ್ಮ ಕ್ಷುಲ್ಲಕ ಭ್ರಮೆ ಮತ್ತು ಇಚ್ಛೆಗಳಿಗಿಂತ ಮೇಲೇರಿ, ಎಲ್ಲಿಯೂ ಸ್ಥಗಿತಗೊಳ್ಳದೆ ಮುಂದುವರಿಯಬೇಕು ಮತ್ತು ಅವರೊಂದಿಗೆ ಸಂಪೂರ್ಣ ಐಕ್ಯವನ್ನು ಹೊಂದಲು ಪ್ರಯತ್ನಿಸಬೇಕು.

ನಮಗೆ ಆಧ್ಯಾತ್ಮಿಕವಾಗಿ ನಾವು ಸಹಾಯ ಮಾಡಿಕೊಳ್ಳಲು ಮತ್ತು ಒಂದು ವ್ಯವಸ್ಥಿತ ರೀತಿಯಲ್ಲಿ ಮಾನವ ಕುಲದ ಕಲ್ಯಾಣ ಮಾಡಲು ಹಾಗೂ ಅದರ ಸೇವೆ ಮಾಡಲು ಗುರುಮಹಾರಾಜರು ನಮಗೆ ಒಂದು ಸಂಸ್ಥೆಯ ರೂಪದಲ್ಲಿ ಶ್ರೀ ರಾಮಚಂದ್ರ ಮಿಷನ್ ಅನ್ನು ಕೊಟ್ಟಿದ್ದಾರೆ. ಆ ಮಹಾ ಬಳುವಳಿಯನ್ನು ನಾವು ಕಾಯ್ದುಕೊಳ್ಳಬೇಕಿದೆ ಹಾಗೂ ಅವರ ಕುರಿತಾದ ಪ್ರೇಮ ಮತ್ತು ಭಕ್ತಿಗಳನ್ನು ಆಧಾರವಾಗಿಟ್ಟುಕೊಂಡು, ಅದನ್ನು ಒಂದು ಸುವ್ಯವಸ್ಥಿತ ರೀತಿಯಲ್ಲಿ ಬೆಳೆಸಬೇಕಿದೆ.

ಗುರುಗಳು ಯೋಗದ ಸಿದ್ಧಾಂತ ಮತ್ತು ಅನುಷ್ಠಾನ ಕ್ರಮಗಳನ್ನುಳ್ಳ ಒಂದು ಅನನ್ಯ ವಿಧಾನವನ್ನು, ಅರ್ಥಾತ್, ಯಾವುದೇ ಜಟಿಲತೆ ಅಥವಾ ಭಾರ ಇಲ್ಲದೆ ಮನುಷ್ಯನಿಗೆ ಸಾಧ್ಯವಿರಬಹುದಾದ ಅತ್ಯುನ್ನತ ಸ್ಥಿತಿಯನ್ನು ಬಹಳ ಸರಳ ಮತ್ತು ಸುಲಭ ರೀತಿಯಲ್ಲಿ ಸಾಕ್ಷಾತ್ಕರಿಸಿಕೊಳ್ಳುವ ಆಧ್ಯಾತ್ಮಿಕ ಸಾಧನಾ ಪದ್ಧತಿಯನ್ನು ನಮಗೆ ಕೊಟ್ಟಿದ್ದಾರೆ. ಈ ಪದ್ಧತಿಯ ಶುದ್ಧತೆ, ಸೂಕ್ಷ್ಮತೆ, ಸರಳತೆ ಹಾಗೂ ಸಹಜತೆಗಳನ್ನು ಕಾಯ್ದುಕೊಂಡು ಹೋಗುವುದು, ಮತ್ತು ಯಾವುದೇ ಭೇದಭಾವವಿಲ್ಲದೆ, ಪೂರ್ವಗ್ರಹವಿಲ್ಲದೆ, ಅಧ್ಯಾತ್ಮ-ಜಿಜ್ಞಾಸುಗಳ ಮತ್ತು ಅಭೀಪ್ಸುಗಳ ಸಮುದಾಯದ ಗಮನಕ್ಕೆ ಮತ್ತು ಅರಿವಿಗೆ ತರುವುದು ನಮ್ಮ ಬದ್ಧ ಕರ್ತವ್ಯವಾಗಿದೆ.

ಗುರುಮಹಾರಾಜರು ಯೌಗಿಕ ಪ್ರಾಣಾಹುತಿಯ ಮೂಲಕ ಆಧ್ಯಾತ್ಮಿಕ ತರಬೇತಿಯನ್ನು ನೀಡುತ್ತಾರೆ. ಈ ಪದ್ಧತಿಯನ್ನು ಬೆಳಕಿಗೆ ತರುವುದರೊಂದಿಗೆ ಮತ್ತು ಯೋಗದ ಜಿಜ್ಞಾಸುಗಳಿಗೆ, ಸಾಧಕರಿಗೆ ಅದು ಸುಲಭವಾಗಿ ಲಭ್ಯವಾಗುವಂತೆ ಮಾಡುವುದರೊಂದಿಗೆ ಆಧ್ಯಾತ್ಮಿಕ ತರಬೇತಿಯ ಇತಿಹಾಸದಲ್ಲಿ ಒಂದು ಹೊಸ ಯುಗದ ಉದಯವಾಗಿದೆ. ಈ ಪ್ರಾಣಾಹುತಿ ಶಕ್ತಿಯ ಅಪಉಪಯೋಗ ಅಥವಾ ದುರುಪಯೋಗ ಆಗದಿರುವಂತಾಗಲು, ಯಾರಿಗೆ ಗುರುಮಹಾರಾಜರು ಪ್ರಾಣಾಹುತಿ ಕೊಡುವ ಶಕ್ತಿಯನ್ನು ದಯಪಾಲಿಸಿದ್ದಾರೋ ಅವರೆಲ್ಲರೂ ತಮ್ಮದೇ ಹೃದಯವನ್ನು ಆಮೂಲಾಗ್ರ ನಿರ್ಮಲಗೊಳಿಸಿಕೊಂಡು ಶುದ್ಧವಾಗಿರಿಸಿಕೊಳ್ಳುವುದು ಅವರ ಪವಿತ್ರ ಕರ್ತವ್ಯವಾಗಿದೆ. ಪ್ರಾಣಾಹುತಿ ಶಕ್ತಿಯು ಅದನ್ನು ನೀಡುವವನ ಅಹಂಕಾರಕ್ಕೆ (Ego) ಸಂಬಂಧ ಹೊಂದಿದ್ದಲ್ಲ, ಬದಲಿಗೆ, ಅದು ಗುರುಮಹಾರಾಜರಿಗೆ ಸೇರಿದ್ದೆಂಬುದನ್ನು ಅವರು ಮನಗಾಣಬೇಕು. ಬೇರೆ ಯಾವುದೇ ಶಕ್ತಿಯು ಭಾರ ಅಥವಾ ಒತ್ತಡವನ್ನು ಉಂಟುಮಾಡಬಹುದು; ಅಲ್ಲದೆ, ಅದು ಪ್ರಾಣಾಹುತಿ ಕೊಡುವವನಲ್ಲಿ ಅನಪೇಕ್ಷಿತ, ಅಷ್ಟೇಕೆ, ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು.

ದೈವೀ ಸತ್ತೆಯಲ್ಲಿ ಸದಾಕಾಲ ಮುಳುಗಿರುವುದು ಮನುಷ್ಯನಿಗೆ ಹೇಗೆ ಸಾಧ್ಯವಿದೆ ಎಂಬುದನ್ನು ತಮ್ಮದೇ ಉದಾಹರಣೆಯಿಂದ ಗುರುಗಳು ತೋರಿಸಿಕೊಟ್ಟಿದ್ದಾರೆ. ಅವರ ಅಸ್ತಿತ್ವದ ಪ್ರತಿಯೊಂದು ಕಣವೂ ದೈವೀ ಪ್ರೇಮ, ಅಥವಾ ದೈವೀ ಶಕ್ತಿ ಅಥವಾ ದೈವಿಕತೆಯಿಂದ ಅಥವಾ ಅದನ್ನು ಇನ್ನೇನೆಂದು ಬೇಕಾದರೂ ಕರೆಯಿರಿ ತುಂಬಿ ತುಳುಕುತ್ತಿತ್ತು. ತೀರಾ ನಿಗರ್ವಿಯಾಗಿದ್ದೂ, ಅಪಾರ ಆಕರ್ಷಣೆಯುಳ್ಳವರಾಗಿದ್ದರು. ತಾವು ಅತ್ಯಂತ ಸರಳರಾಗಿದ್ದರೂ ಅವರು ನಮಗೆ ಅತ್ಯುನ್ನತ ಜ್ಞಾನವನ್ನು ನೀಡುತ್ತಿದ್ದರು. ಮುಗ್ಧತೆಯೇ ಮೂರ್ತಿವೆತ್ತಂತಿದ್ದ ಅವರು ನಮ್ಮೆಲ್ಲ ಜಟಿಲತೆಗಳನ್ನು ಸಡಿಲಗೊಳಿಸುತ್ತಿದ್ದರು. ಒಬ್ಬ ದುರ್ಬಲ ವ್ಯಕ್ತಿ ಎಂಬಂತೆ ತೋರಿಬರುತ್ತಿದ್ದರೂ ಅವರು ನಮ್ಮ ಸಂಕಲ್ಪ ಶಕ್ತಿಗೆ ಅಪಾರ ಬಲವನ್ನೀಯುತ್ತಿದ್ದರು. ಅವರ ಅನನ್ಯ ವ್ಯಕ್ತಿತ್ವವನ್ನು ವರ್ಣಿಸಲು ಶಬ್ದಗಳು ಸೋತುಹೋಗುತ್ತವೆ. ಪ್ರತಿಯೊಂದು ಮುಖದಲ್ಲಿಯೂ ಅವರು ಪರಿಪೂರ್ಣ ‘ಗುರು’ ಆಗಿದ್ದರು. ಅವರ ಹಾಸ್ಯಮಯ ಕತೆಗಳೂ ಕೂಡ ಕೇಳುತ್ತಿರುವ ಸಹಬಾಂಧವರಲ್ಲಿ ಮಹತ್ತರ ಬದಲಾವಣೆಗಳನ್ನು ಉಂಟುಮಾಡುತ್ತಿದ್ದವು. ನಮ್ಮಲ್ಲಿ ಪ್ರತಿಯೊಬ್ಬರೂ ಗುರುಮಹಾರಾಜರೊಂದಿಗೆ ಏನೋ ಒಂದು ವಿಶೇಷ ಸಂಬಂಧವನ್ನು ಹೊಂದಿದ್ದೇವೆ. ಪ್ರತಿಯೊಬ್ಬರೂ ಸದಾಕಾಲ ನೆನಪಿನಲ್ಲಿ ಉಳಿಯುವಂತಹ ಅವರ ವಿಶೇಷ ದಯಾಪರತೆ ಮತ್ತು ವಾತ್ಸಲ್ಯದ ಅನುಭವವನ್ನು ಪಡೆದಿದ್ದೇವೆ. ಆ ಕಾರಣವೇ ಅವರನ್ನು ನಿರಂತರ ಸ್ಮರಿಸುವುದು ಮತ್ತು ಅವರಲ್ಲಿ ಲಯಾವಸ್ಥೆಯನ್ನು ಪಡೆಯುವುದು ನಮ್ಮ ಕರ್ತವ್ಯವಾಗಿದೆ.

ನಮ್ಮ ಅಸಂಖ್ಯ ಹುಚ್ಚುತನಗಳನ್ನು ಅವರು ಕಂಡೂ ಕಾಣದಂತಿರುತ್ತಿದ್ದರು. ಮತ್ತು ಅದೇ ಸಮಯದಲ್ಲಿ ನಮ್ಮಲ್ಲಿ ಆಂತರಿಕ ಶುದ್ದೀಕರಣವಾಗುವಂತೆ ಮಾಡುತ್ತಿದ್ದರು. ನಮ್ಮ ಆಂತರಿಕ ಸಂರಚನೆಯ ಶುದ್ದೀಕರಣ ಮಾಡುವಲ್ಲಿ ಅವರ ಪರಿಣತಿಯು ಅಸಾಮಾನ್ಯವಾದುದು. ಆ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಮತ್ತು ನಮ್ಮಲ್ಲಿ ಯಾವುದೇ ಮಲಿನತೆಯು ಉಂಟಾಗದಿರುವಂತೆ ಸದಾ ಜಾಗರೂಕತೆಯಿಂದ ಇರುವುದು ನಮ್ಮ ಬದ್ಧ ಕರ್ತವ್ಯವಾಗಿದೆ.
ಗುರುಮಹಾರಾಜರು ತಮ್ಮ ‘ಪ್ರಾಣ’ವನ್ನೇ ನಮಗೆ ಕೊಟ್ಟಿದ್ದಾರೆ. ಹಾಗಿರಲಾಗಿ, ನಮ್ಮ ಬದುಕು ಅವರಿಗೆ ಸಮರ್ಪಿತವಾಗಿರಬೇಕು.
ಕೊನೆಯದಾಗಿ, ನಾವು ಇನ್ನೂ ನಮ್ಮ ಇಚ್ಛೆಗಳಿಗೆ ಬದ್ಧರಾಗಿರುವ ಕಾರಣ, ಅವರು ತೋರಿಸಿದ ರೀತಿಯಲ್ಲಿ ಅವರನ್ನು ಸಾಕ್ಷಾತ್ಕರಿಸಿಕೊಳ್ಳುವಂತಾಗಲು ನಮಗೆ ಸಹಾಯ ಮಾಡಲು ಅವರನ್ನೇ ಮತ್ತು ಅವರನ್ನು ಮಾತ್ರವೇ ಪ್ರಾರ್ಥಿಸಿಕೊಳ್ಳಬೇಕಾದುದು ಅತ್ಯಗತ್ಯವಾಗಿದೆ. ಅವರು ಮಾತ್ರವೇ ಸದಾಕಾಲ ನಮ್ಮ ಗುರು, ಮಾರ್ಗದರ್ಶಿ ಹಾಗೂ ನಮ್ಮ ಪ್ರೇಮದ ಧ್ಯೇಯವಾಗಿರಲಿ.

ಶುಭಮಸ್ತು.

[ಸಹಜಮಾರ್ಗ ಪತ್ರಿಕೆ, ಮಾರ್ಚ್ ಮತ್ತು ಮೇ 1993]