ಶ್ರೀ ಗುರುಮಹಾರಾಜರಿಗೂ (ಪೂಜ್ಯ ಶ್ರೀ ಬಾಬೂಜಿ) ಮತ್ತು ಅವರ ಯೌಗಿಕ ಪ್ರಾಣಾಹುತಿಯ ಪದ್ಧತಿಯ ಪ್ರಕಾರ ಆಧ್ಯಾತ್ಮಿಕ ತರಬೇತಿಯನ್ನು ನೀಡಲು ಗುರುಗಳಿಂದ ಅನುಗ್ರಹೀತರಾದ ಎಲ್ಲ ಪ್ರಶಿಕ್ಷಕರಿಗೂ ಅಭಿನಂದನೆಗಳು ಹಾಗೂ ನಮಸ್ಕಾರಗಳು.
ಕೆಲವು ಪ್ರಶಿಕ್ಷಕರಿಗೆ ವೈಯಕ್ತಿಕವಾಗಿ ಗುರುಗಳೊಂದಿಗೆ ಅನೇಕ ಸಲ ಇರುವ ಭಾಗ್ಯ ಲಭಿಸಿತ್ತು. ಗುರುಗಳು ಆದೇಶಗಳನ್ನು ಕೊಡುವಾಗಿನ ಅವರ ವಿಶಿಷ್ಟ ಶೈಲಿಯನ್ನು ಅವರು ಗಮನಿಸಿರಬಹುದು. ಪ್ರಶಿಕ್ಷಕರ ಕಾರ್ಯದ ಮೌಲ್ಯಾಂಕನ ಮಾಡುವಾಗ ಒಂದು ಪರೋಕ್ಷ ರೀತಿಯನ್ನು ಅವರು ಅನುಸರಿಸುತ್ತಿದ್ದರು ಮತ್ತು ಕೇಳುಗನು ತನ್ನನ್ನು ಗುರುಗಳಿಗೆ ಹತ್ತಿರದವನೆಂದು ಭಾವಿಸುವಂತಿರುತ್ತಿತ್ತು. ವಾಸ್ತವವಾಗಿಯೂ ಆ ಪ್ರಶಿಕ್ಷಕರು ತಮ್ಮನ್ನು ತಾವೇ ಗುರುಗಳೆಂದು ಕೂಡ ಭಾವಿಸಿಕೊಳ್ಳುತ್ತಿದ್ದರು ಹಾಗೂ ಬೇರೆ ಪ್ರಶಿಕ್ಷಕರನ್ನು ಟೀಕಿಸುವಲ್ಲಿ, ತಮ್ಮ ಕುಂದುಕೊರತೆಗಳನ್ನು ಸಮರ್ಥಿಸಿಕೊಳ್ಳುತ್ತಲೋ ಅಥವಾ ಮರೆಯುತ್ತಲೋ ಗುರುಗಳನ್ನು ಅನುಕರಿಸಲು ಪ್ರಾರಂಭಿಸುತ್ತಿದ್ದರು. ಗುರುಮಹಾರಾಜರು ಮಾಡುವ ಟೀಕೆ ಟಿಪ್ಪಣಿಗಳು ಯಾವಾಗಲೂ ಸ್ವಾಗತಾರ್ಹ ಮತ್ತು ಸತ್ಪರಿಣಾಮಕಾರಿಯಾಗಿರುತ್ತವೆ. ಆದರೆ ಅನನುಭವಿ ಹೊಸಬರು ಮಾಡುವ ಅಸಮರ್ಪಕವಾದ ಅಥವಾ ಅಸಮರ್ಪಕ ರೀತಿಯಲ್ಲಿ ಮಾಡುವ ಟೀಕೆಗಳು ಅಸಮಾಧಾನಕಾರಿ ಆಗಿರಲು ಸಾಧ್ಯ ಮತ್ತು ಅಭ್ಯಾಸಿಯ ಮನಸ್ಸಿನಲ್ಲಿ ಗೊಂದಲಕ್ಕೆ ಕಾರಣವಾಗಬಹುದು.
ಶ್ರೀ ಬಾಬೂಜಿಯವರಿಂದ ವಿಶೇಷ ತರಬೇತಿಯನ್ನು ಪಡೆದ ಮತ್ತು ಆಧ್ಯಾತ್ಮಿಕವಾಗಿ ಬಹಳ ಉನ್ನತಿಯನ್ನು ಅನುಗ್ರಹಿಸಲ್ಪಟ್ಟ ಪ್ರಶಿಕ್ಷಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ತಾವು ಶ್ರೀ ಬಾಬೂಜಿಯವರದೇ ವಿಶೇಷ ವ್ಯಕ್ತಿತ್ವವನ್ನು ಪಡೆದವರೆಂದು ಹೇಳಿಕೊಳ್ಳುವವರೂ ಇದ್ದಾರೆಂಬುದು ನಿಸ್ಸಂದೇಹ. . ಹಾಗಿದ್ದರೂ ಅಂತಹ ಪ್ರಶಿಕ್ಷಕರಿಂದಲೂ ಶ್ರೀ ಬಾಬೂಜಿಯವರು ಏನನ್ನೂ ಬಚ್ಚಿಟ್ಟಿಲ್ಲ ಮತ್ತು ಅವರ ಸಾಮರ್ಥ್ಯಕ್ಕೆ ಕಡಿಮೆಯೆನಿಸದಷ್ಟು, ಅಷ್ಟೇಕೆ, ತುಂಬಿ ಉಕ್ಕಿ ಹರಿಯುವಷ್ಟರ ಮಟ್ಟಿಗೂ ಅವರನ್ನು ತಮ್ಮ ಶಕ್ತಿಯಿಂದ ತುಂಬಿದ್ದಾರೆ. ಈ ಉಕ್ಕಿಹರಿಯುವಿಕೆಯು ಆಗಾಗ ಆ ಮೂರ್ಖರ ಹೃದಯದಲ್ಲಿ ಅವರಿಗೆ ಅರಿವಿಲ್ಲದೆಯೇ ಅಸೂಯೆಯ ಕಲೆಯನ್ನು ಉಂಟುಮಾಡುವ ಕಾರಣವಾಗಿದೆ. ಅದರ ಪ್ರಾಥಮಿಕ ಹಂತದಲ್ಲಿಯೇ ಅಂತಹ ಅಸೂಯೆಯನ್ನು ಗುರುತಿಸಿ ತೊಡೆದುಹಾಕದಿದ್ದರೆ ಅದು ಅಸಾಮಂಜಸ್ಯ ಗುಂಪುಗಾರಿಕೆ, ಸುಳ್ಳು ನಿಂದೆ ಮುಂತಾದವುಗಳನ್ನು ಉತ್ತೇಜಿಸಿ ಅನಾಹುತಕ್ಕೆ ಕಾರಣವಾಗುವುದು ಮತ್ತು ಶ್ರೀ ಬಾಬೂಜಿಯವರು ಅಷ್ಟು ಕಷ್ಟಪಟ್ಟು ಕಟ್ಟಿದ ಸೌಧವು ಕುಸಿದುಬೀಳಬಹುದು.
ಗುರುಗಳ ಕುರಿತಾದ ತಮ್ಮ ಕರ್ತವ್ಯವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದು ಮತ್ತು ತಮ್ಮ ಸಹಬಾಂಧವರ ಕುರಿತಾದ ತಮ್ಮ ಕರ್ತವ್ಯದ ಬಗ್ಗೆ ಎಚ್ಚರದಿಂದಿರುವುದು ಪ್ರಶಿಕ್ಷಕರ ಕರ್ತವ್ಯ ಎಂಬುದನ್ನು ಬೇರೆ ಹೇಳಬೇಕಿಲ್ಲ. ಪ್ರತಿಷ್ಠೆ ಮತ್ತು ಜಂಬಗಳ ಎಲ್ಲ ಕುರುಹುಗಳನ್ನು ಕೂಡಲೇ ಗುರುತು ಮಾಡಿ ಮೊಳಕೆಯಲ್ಲಿಯೇ ಚಿವುಟಿ ಹಾಕಬೇಕು. ಹಾಗೆ ಮಾಡುವುದರಿಂದ ಮಾತ್ರವೇ ಅವರು ಸಾಮಾನ್ಯತಃ ಮಾನವಕುಲದ ಮತ್ತು ವಿಶೇಷತಃ ಗುರುಗಳ ಮಿಷನ್ನಿನ ಸೇವೆಗೆ ಸಲ್ಲಬಹುದು. ನಮ್ಮ ಪ್ರಿಯ ಗುರುಗಳು ಕಲಿಸಿದ ಸರಳ ವಿಧಾನಗಳು ಅತೀವ ಪರಿಣಾಮಕಾರಿಯಾಗಿವೆ ಮತ್ತು ಅವರ ಕೆಲಸಕ್ಕೆ ಪರ್ಯಾಪ್ತವಾಗಿವೆ.
ಪ್ರಶಿಕ್ಷಕರಿಗೆ ಅವರ ಹಾಗೂ ಇತರ ಅಭ್ಯಾಸಿಗಳ ಆಧ್ಯಾತ್ಮಿಕ ಪ್ರಗತಿಯ ಬಗ್ಗೆ ಗುರುಮಹಾರಾಜರು ಆಗೀಗ ಸಾಂದರ್ಭಿಕವಾಗಿ ಗೌಪ್ಯ ಹಾಗೂ ಆಪ್ತ ಆದೇಶಗಳನ್ನು ಕೊಡುತ್ತ ಬಂದಿದ್ದಾರೆ. ಅಂತಹ ಆದೇಶಗಳು ಸಾಮಾನ್ಯವಾಗಿ ಎಲ್ಲರ ತಿಳಿವಳಿಕೆಗೂ ಬಂದ ವಿಷಯ. ಕೆಲವು ಬಾಂಧವರು ತಮ್ಮ ಆಧ್ಯಾತ್ಮಿಕ ಪ್ರಗತಿಯ ಬಗ್ಗೆ ಕಾಳಜಿಯಿರಿಸುವ ಬದಲಿಗೆ, ಬೇರೆ ವ್ಯಕ್ತಿಗಳನ್ನು, ಪ್ರಶಿಕ್ಷಕರನ್ನು ಟೀಕಿಸಲು ಮತ್ತು ಮೌಲ್ಯಾಂಕನ ಮಾಡಲು ಪ್ರಾರಂಭಿಸಿದರು ಮತ್ತು ಅವರಿಂದ ತಮ್ಮನ್ನು ತಾವೇ ಕೆಡಿಸಿಕೊಂಡಿದ್ದಾರೆ. ಸಹಬಾಂಧವರಿಗೆ ಸಹಾಯ ಮಾಡುವುದು, ಪ್ರಕಾಶಿತವಾಗಿರದ ಹೃದಯಗಳಲ್ಲಿಯ ಅನಪೇಕ್ಷಿತ ಬೆಳವಣಿಗೆಯ ಕಳೆಯನ್ನು ಕಿತ್ತು ಹಾಕುವುದು ಹಾಗೂ ಗುರುಗಳು ಉಪದೇಶಿಸಿದ ವಿಧಾನಗಳನ್ನು ಬಳಸಿ ಪ್ರಕಾಶವನ್ನು ಹರಡುವುದು ಹಿರಿಯ ಮತ್ತು ಸಮರ್ಥರಾದ ಪ್ರಶಿಕ್ಷಕರ ಜವಾಬುದಾರಿಗಳಾಗಿವೆ.
ಶ್ರೀರಾಮಚಂದ್ರ ಮಿಷನ್ನಿನ ಪ್ರಶಿಕ್ಷಕನು ಗುರು ಅಲ್ಲ ಎಂಬುದು ಚೆನ್ನಾಗಿ ತಿಳಿದಿರುವ ವಿಷಯವೇ. ಪ್ರಶಿಕ್ಷಕರಿಂದ ಆದೇಶ ಮತ್ತು ಮಾರ್ಗದರ್ಶನಗಳನ್ನು ಪಡೆಯಕೂಡದೆಂದು ಅಭ್ಯಾಸಿಗಳಿಗೆ ಸಲಹೆ ನೀಡುವುದೆಂದರೆ ಅಭ್ಯಾಸಿಗಳ ಬುದ್ಧಿಮತ್ತೆಯ ಬಗ್ಗೆ ತಮ್ಮದೇ ಕಳಪೆ ಅಭಿಪ್ರಾಯವನ್ನು ತೋರ್ಪಡಿಸಿಕೊಂಡಂತೆಯೇ ಸರಿ. ಅಭ್ಯಾಸಿಯು ಸತ್ಯದ ಅನ್ವೇಷಕನಾಗಿ, ಮತ್ತು ಅತ್ಯುನ್ನತವಾದುದನ್ನು ಅಭೀಪ್ಸೆಪಡುವ ಸಾಧಕನಾಗಿ, ಯಾವುದೇ ಪ್ರಶಿಕ್ಷಕರ ಬಳಿಗೆ ಅಥವಾ ಗುರುವಿನ ಬಳಿಗೆ ಹೋಗಲು ಸ್ವತಂತ್ರನಿದ್ದಾನೆ. ವಾಸ್ತವದಲ್ಲಿ, ಪ್ರಶಿಕ್ಷಕರ ಬಳಿಗೆ ಹೋಗುವಂತೆ ಅಭ್ಯಾಸಿಗಳಿಗೆ ಗುರುಗಳೇ ಸಲಹೆ ಮಾಡುತ್ತಾರೆ. ಅಭ್ಯಾಸಿಗಳನ್ನು ಕೇವಲ ಶುದ್ಧಿಕರಿಸಬೇಕೇ ಹೊರತು ಅವರಿಗೆ ಪ್ರಾಣಾಹುತಿ ನೀಡಬಾರದೆಂದು ಪ್ರಶಿಕ್ಷಕರಿಗೆ ಸಲಹೆ ಮಾಡುವುದೆಂದರೆ, ಗುರುಗಳ ಸ್ಥಾನವನ್ನು ಕಸಿದುಕೊಂಡಂತೆಯೇ ಆಗುತ್ತದೆ; ಅಲ್ಲದೆ, ಒಬ್ಬ ವ್ಯಕ್ತಿಯನ್ನು ಮಾಧ್ಯಮವಾಗಿಟ್ಟುಕೊಂಡು ಕೆಲಸಮಾಡಲು ಆಯ್ಕೆ ಮಾಡಿಕೊಂಡ ಗುರುಗಳ ಸ್ವಾತಂತ್ರ್ಯವನ್ನು ಕಡಿತಗೊಳಿಸುವ ಮತ್ತು ಸೀಮಿತಗೊಳಿಸುವ ಅಸಂಬದ್ಧ ಪ್ರಯತ್ನವೆಂದೇ ಆದೀತು. ‘ಶುದ್ದೀಕರಿಸು’, ‘ಪ್ರಾಣಾಹುತಿ ನೀಡು’ ಎಂಬ ಶಬ್ದಗಳನ್ನು ಗುರುಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬಳಸಿದಾಗ, ಬೇರೆ ಬೇರೆ ರೀತಿಗಳಲ್ಲಿ ಬಳಸಿದಾಗ ಅವುಗಳ ಪ್ರಾಯೋಗಿಕ ಅಂತರರ್ಥವನ್ನು ಕೆಲಮಟ್ಟಿಗಾದರೂ ಅರಿತವರು, ಗುರುಗಳಿಂದ ಚೆನ್ನಾಗಿ ತರಬೇತಿ ಪಡೆದ ಕೆಲವೇ ಮಂದಿ ಪರಿಣತರಿದ್ದಾರು.
[ಸಹಜ ಮಾರ್ಗ ಪತ್ರಿಕೆ, ನವಂಬರ್, 1983]