ಇತ್ತೀಚೆಗೆ, ‘ವೈಜ್ಞಾನಿಕ’ ಎಂಬ ಮುದ್ರೆ ಹೊಂದಿದ ಪ್ರತಿಯೊಂದು ವಸ್ತುವಿನೊಂದಿಗೂ ಪರಿಚಿತರಾಗಲು ಬಯಸುವುದು, ವಿಜ್ಞಾನ ಎಂಬ ಶಬ್ದದ ಅರ್ಥವು ಅಸ್ಪಷ್ಟವಾಗಿಯೇ ತಿಳಿದಿರುವುದಾದರೂ, ಸಾಮಾನ್ಯ ಬಹುತೇಕ ಜನರಲ್ಲಿ ಒಂದು ಶಿಷ್ಟ ರೂಢಿಯಾಗಿಬಿಟ್ಟಿದೆ. ಶಬ್ದಕೋಶದ ಪ್ರಕಾರ ಅದರ ಅರ್ಥವು ಪರಿವೀಕ್ಷಣ, ಪ್ರಯೋಗಗಳಿಂದ ಖಚಿತಗೊಳಿಸಲ್ಪಟ್ಟು ವಿಮರ್ಶಾತ್ಮಕವಾಗಿ ಪರೀಕ್ಷಿಸಲ್ಪಟ್ಟ ಸುವ್ಯವಸ್ಥಿತ, ಹಾಗೂ ಸಮಾನ (ಏಕಪ್ರಕಾರದ) ತತ್ತ್ವಗಳ ರೂಪದಲ್ಲಿ ತರಲ್ಪಟ್ಟ ಜ್ಞಾನ ಎಂದಾಗುತ್ತದೆ. ಭೌತಿಕ ಪರಿಭಾಷೆಯಲ್ಲಿ ‘ಶುದ್ಧ ವಿಜ್ಞಾನ’ (Pure Science) ಎಂಬುದರ ಅರ್ಥವು, ವಾಸ್ತವ ಸಂಗತಿಗಳ ವಸ್ತುನಿಷ್ಠ ಪರಿವೀಕ್ಷಣ, ಹಾಗೂ ಅನುಭವಗಳು ಮತ್ತು ಆ ಅನುಭವಗಳನ್ನು ನಿಯಂತ್ರಿಸುವ ನಿಯಮಗಳನ್ನು ಕಂಡುಹಿಡಿಯುವುದು, ಎಂದಾಗುತ್ತದೆ. ಆದರೆ, ಈ ಪ್ರಕ್ರಿಯೆಯ ಹಿಂದೆ ಯಾವುದೇ ಪ್ರಯೋಜನ ದೃಷ್ಟಿಯ ಉದ್ದೇಶವಿರಕೂಡದು.

ನಿರ್ಭಾವುಕರಾಗಿರುವುದು, ನಿಷ್ಪಕ್ಷಪಾತದಿಂದಿರುವುದು, ಪ್ರಯೋಜಕ ಸ್ವಾರ್ಥದ ಉದ್ದೇಶ ಇಲ್ಲದಿರುವದು ಯಾವುದೇ ವಿಜ್ಞಾನಕ್ಕೆ ನಿತಾಂತ ಅಗತ್ಯ. ಆದರೆ, ದುರ್ದೈವದಿಂದ ಭೌತ ವಿಜ್ಞಾನದ ಅಧ್ಯಯನ, ಅನ್ವೇಷಣೆಗಳು ಅದೆಷ್ಟು ಬೇಗ ಅಸಂಖ್ಯ ಆಕರ್ಷಕ (ಮೋಹಕ) ವಸ್ತುಗಳನ್ನು ಹೊರತರುತ್ತವೆ ಎಂದರೆ ಅವು ತರುವ ಆವಿಷ್ಕಾರದ ಪ್ರಯೋಜನಗಳಲ್ಲಿ ನಾವು ಗಾಢವಾಗಿ ಮುಳುಗಿಬಿಟ್ಟಿದ್ದೇವೆ ಮತ್ತು ಆ ರೀತಿಯಾಗಿ ವಿಜ್ಞಾನದ ಸಾರಸತ್ತ್ವವನ್ನು ಕಳೆದುಕೊಂಡಿದ್ದೇವೆ. ನಮ್ಮ ಪೌರ್ವಾತ್ಯ ಆಧ್ಯಾತ್ಮಿಕ ವಿಜ್ಞಾನದ ಸ್ಥಿತಿಯೂ ಅದಕ್ಕೆ ಸದೃಶವಾಗಿಯೇ ಇದೆ; ಅದು ಕೂಡ, ಆಷಾಢಭೂತಿಗಳ, ಕ್ಷುಲ್ಲಕ ಸಾಧುಗಳ, ಕಪಟಿಗಳ ಕೈಯಲ್ಲಿ ಸೇರಿದಾಗ, ಅಥವಾ, ಊಹಾತ್ಮಕ ತತ್ತ್ವಶಾಸ್ತ್ರದ ವಿಭಿನ್ನ ಸೀಮಿತ ಪಂಥಗಳ ದೈತ್ಯ ಬೌದ್ಧಿಕ ಪ್ರಕೃತಿಗಳ ಸ್ವಂತದ ಅಸ್ತಿ ಎಂಬಂತಾದಾಗ, ಮಾಟ-ಮಂತ್ರ, ಮೋಸಗಾರಿಕೆ, ಯಕ್ಷಿಣಿಗಳೊಳಗೆ ಕೆಲಮಟ್ಟಿಗೆ ಪತನಗೊಂಡಿದೆ. ಆದುದರಿಂದ ಯಾವುದೊಂದು ಸಿದ್ದಾಂತ ಅಥವಾ ಪದ್ಧತಿ ನಿಜವಾಗಿಯೂ ವೈಜ್ಞಾನಿಕವೇ ಅಥವಾ ಅಲ್ಲವೇ ಎಂದು ಕಂಡುಕೊಳ್ಳಲು ಮೊದಲು, ಅದು ಯಾವುದೇ ಸ್ವಾರ್ಥಪೂರ್ಣ ಪ್ರಯೋಜಕ ಉದ್ದೇಶದಿಂದ ನಿರ್ವಿಕಾರ ದೃಷ್ಟಿಯಿಂದ ಮುಕ್ತವಾಗಿದ್ದು, ನಿರ್ಭಾವುಕ, ಅನ್ವೇಷಿಸಲಾಗಿದೆಯೇ ಎಂಬುದನ್ನು ನೋಡಬೇಕು.

ಇನ್ನೊಂದು ಮಾತು : ಒಂದು ವಿಚಾರಪದ್ಧತಿಯು ಯಾವುದೇ ತರಹದ ಪವಾಡ, ಆಕಸ್ಮಿಕ ಸಂಭಾವ್ಯತೆ, ಮತ್ತು ಅನಿಯಮಿತ ಸಂಕಲ್ಪ – ಇವುಗಳಿಂದ ಮುಕ್ತವಾಗಿದ್ದಾಗ ಮಾತ್ರವೇ ಅದು ವೈಜ್ಞಾನಿಕವಾದುದು ಎಂದು ಪರಿಗಣಿಸಲಾಗುತ್ತದೆ. ಪರಿವೀಕ್ಷಣೆ ಮಾಡಲ್ಪಟ್ಟ ಪ್ರತಿಯೊಂದು ಸಂಗತಿ ಅಥವಾ ಅನುಭವವು ಆ ಮೊದಲು (ಖಚಿತವಾಗಿ) ತಿಳಿವಳಿಕೆಗೆ ಬಂದ ಸಂಗತಿಗಳ ಬೆಳಕಿನಲ್ಲಿ ಅನ್ವಯಗೊಳಿಸಲು ಸಾಧ್ಯವಾಗುವದಿರಬೇಕು. ಭಾವಾನುಭೂತಿಯನ್ನು ಪುರಸ್ಕರಿಸಿ ವಾದಿಸುವ ಅನೇಕರು ಮತ್ತು ತಮ್ಮನ್ನು ತಾವೇ ಅಪರೋಕ್ಷ ಜ್ಞಾನಿಗಳೆಂದು ತೋರ್ಪಡಿಸಿಕೊಳ್ಳುವ ಗುರುಗಳೆಂಬವರು ಈ ವಿಚಾರವನ್ನು ಒಪ್ಪಲಿಕ್ಕಿಲ್ಲ. ಆದರೆ, ಶ್ರೀ ರಾಧಾಕುಮುದ ಮುಖರ್ಜಿಯವರ ಮಾತುಗಳಲ್ಲಿ ಹೇಳುವುದಾದರೆ –

“ಅನುಭಾವಿಯು ನಿಜಕ್ಕೂ ಒಬ್ಬ ವಿಜ್ಞಾನದ ವ್ಯಕ್ತಿಯಷ್ಟೇ ವಿಶ್ವಮಾನವನಾಗಿರುತ್ತಾನೆ. ವಿಜ್ಞಾನಿಯಂತೆಯೇ ಅವನು ಕೂಡ ಪವಾಡಗಳ, ಆಕಸ್ಮಿಕಗಳ, ಚಂಚಲ ಯಾದೃಚ್ಛಿಕ ಸಂಕಲ್ಪಗಳ ಜಗತ್ತನ್ನು ಅಳಿಸಿಹಾಕುವ ಹವಣಿಕೆಯವನಿರುತ್ತಾನೆ. ವಿಜ್ಞಾನಿಯು ತನ್ನ ನಿರ್ದಿಷ್ಟ ವ್ಯಾಖ್ಯೆಗೊಳಿಸುವ ವಿವೇಚನೆ ಮತ್ತು ಉಪಕರಣಗಳಿಂದ ತನ್ನ ಜಗತ್ತನ್ನು ವಿಸ್ತರಿಸಿಕೊಳ್ಳುವವನಾದರೆ, ಅನುಭಾವಿಯು ಹೊಸ ಸಾಮಂಜಸ್ಯ ಮತ್ತು ಸಮರೂಪತೆಗಳನ್ನು ಅನಾವರಣಗೊಳಿಸುವ ಮತ್ತು ಪ್ರಕಟಿಸುವ ಮೂಲಕ ಅದನ್ನೇ ಮಾಡುತ್ತಾನೆ”.

ವಿಜ್ಞಾನದ ಈ ಅಸ್ತಿಭಾರಗಳ ಬೆಳಕಿನಲ್ಲಿ ನಾವು ‘ಸಹಜ ಮಾರ್ಗ’ವೆಂದು ಪರಿಚಿತವಾದ ನಮ್ಮದೇ ಸಾಧನಾಪದ್ಧತಿಯ ತಳಹದಿಯನ್ನು ಪರ್ಯಾಲೋಚಿಸಲು ಮುಂದುವರಿಯಬಹುದು.

ಸಹಜಮಾರ್ಗ ಪದ್ಧತಿಯಲ್ಲಿ ತೆಗೆದುಕೊಂಡ ಮೂಲ ಗೃಹೀತ ಕಲ್ಪನೆಗಳು ಅತ್ಯಂತ ಸರಳವಾಗಿವೆ. ಮೊತ್ತಮೊದಲನೆಯದೆಂದರೆ, ಭಗವಂತನ ಅಸ್ತಿತ್ವ ಮತ್ತು ಏಕತೆಯಲ್ಲಿ ನಂಬಿಕೆ. ಕಟ್ಟಾ ನಾಸ್ತಿಕನನ್ನು ಬಿಟ್ಟರೆ ಮತ್ತಾರೂ ಈ ಗೃಹೀತ ಕಲ್ಪನೆಯನ್ನು ಸ್ವೀಕರಿಸಲು ಹಿಂದೆಗೆಯಲಾರ. ಆದರೆ ಒಬ್ಬ ಭೌತ ವಿಜ್ಞಾನಿಯು ತತ್‌ಕ್ಷಣವೇ “ನಿಮ್ಮ ಭಗವಂತನ ಗುಣಧರ್ಮಗಳನ್ನು CGS ಅಥವಾ FPS ಪದ್ಧತಿಯಲ್ಲಿ ನನಗೆ ಹೇಳಿರಿ” ಎಂದು ಕೇಳಬಹುದು. ಮತ್ತು ಆ ವಿಜ್ಞಾನಿಗೆ ನೀವೇ ಸ್ವತಃ ಕಂಡುಕೊಳ್ಳಿರಿ ಎಂದು ಮಾರುತ್ತರ ಕೊಡಬಹುದು. ಆದರೆ, ಭಗವಂತನ ಗುಣಧರ್ಮಗಳನ್ನು ಅರಿತುಕೊಳ್ಳಲು ಅವನಿಗೆ ಸಾಧ್ಯವಾಗುವುದು ಅವನು ನಿಜಾರ್ಥದಲ್ಲಿ ಭಗವಂತನನ್ನು ಕುರಿತ ಜ್ಞಾನವನ್ನು ಪಡೆದಾಗ ಮಾತ್ರವೇ. ಈ ಪ್ರತ್ಯಕ್ಷ ಜ್ಞಾನವನ್ನು ಗ್ರಂಥಗಳಿಂದ ಪಡೆಯಲಾಗದು, ಆದರೆ ಭಗವಂತನಿಗೆ ಸದೃಶವಾದ ನೈಜ ಸ್ವರೂಪಕ್ಕೆ ತನ್ನನ್ನು ಸ್ವತಃ ಮಾರ್ಪಡಿಸಿಕೊಂಡಾಗ ಮಾತ್ರವೇ ಅದು ಸಾಧ್ಯ.

ಎರಡನೆಯ ಗೃಹೀತ ಕಲ್ಪನೆಯೆಂದರೆ ಒಬ್ಬ ವ್ಯಕ್ತಿಯು ಒಬ್ಬ ಸಮರ್ಥ ಮಾರ್ಗದರ್ಶಿಯ (ಗುರುವಿನ) ಮೂಲಕ ಭಗವಂತನ ಪ್ರತ್ಯಕ್ಷ ಜ್ಞಾನವನ್ನು ಪಡೆಯಬಹುದು ಎಂಬುದು. ಯಾವ ಉನ್ನತ ಜ್ಞಾನವನ್ನೂ ಒಬ್ಬ ಆಚಾರ್ಯ ಅಥವಾ ಮಾರ್ಗದರ್ಶಿಯ ಸಹಾಯವಿಲ್ಲದೆ ಪಡೆಯಲು ಅಸಾಧ್ಯವೆಂಬುದು ಸಹಜವೇ ಇದೆ. ಹಾಗಿರುವುದರಿಂದ ಈ ಕಲ್ಪನೆಯು ಕೂಡ ತೀರಾ ಸರಳ ಮತ್ತು ಅನುಭವಸಿದ್ಧವಾದದ್ದಿದೆ.

ಮತ್ತೆ, ಈಗ ಈ ಪದ್ಧತಿಯ ಅನನ್ಯ ವಿಶೇಷತೆ ಏನೆಂಬುದನ್ನು ನೋಡೋಣ. ಅದು ತರಬೇತಿಯ ವಿಧಾನವನ್ನು ಕುರಿತದ್ದಾಗಿದೆ. ಆತ್ಮ ಸಾಕ್ಷಾತ್ಕಾರದ ಪಥವನ್ನು ಒಂದೇ ಜೀವಿತ ಕಾಲದಲ್ಲಿ ಯೌಗಿಕ ಪ್ರಾಣಾಹುತಿಯ ಮೂಲಕ ಸಂಪೂರ್ಣವಾಗಿ ಕ್ರಮಿಸಿ ದಾಟಬಹುದು. ಹಾಗಿರುವುದರಿಂದ, ಈ ಯೌಗಿಕ ಪ್ರಾಣಾಹುತಿಯ ಮೇಲೆ ಪೂರ್ಣ ಅಧಿಕಾರ ಹೊಂದಿದ ವ್ಯಕ್ತಿಯು ಮಾತ್ರವೇ ನಮ್ಮ ಈ ಉದ್ದೇಶಕ್ಕೆ ಮಾರ್ಗದರ್ಶಿಯಾಗಲು ಅತ್ಯಂತ ಯೋಗ್ಯನೆನಿಸುತ್ತಾನೆಂಬುದು ಸಹಜ ನಿರ್ಣಯವಾಗುತ್ತದೆ. ಯೌಗಿಕ ಪ್ರಾಣಾಹುತಿಯ ಮೂಲಕ ಪ್ರೇರಕ ಶಕ್ತಿಯನ್ನು ಪಡೆಯುವುದಾದ್ದರಿಂದ, ಈ ಪದ್ಧತಿಯು ತೀರಾ ಸರಳ ಹಾಗೂ ಸಹಜರೀತಿಯದಾಗಿದೆ. ಅಲ್ಪ ಅಭ್ಯಾಸದ ನಂತರ ಅಭ್ಯಾಸಿಯು (ಸಾಧಕನು) ಒಂದಾದ ನಂತರ ಒಂದು ಆಧ್ಯಾತ್ಮಿಕ ಸ್ಥಿತಿಯನ್ನು ಪಡೆಯಲು ಪ್ರಾರಂಭಿಸುತ್ತಾನೆ. ಅವನು ಅವುಗಳನ್ನು ಈ ಮೇಲೆ ಹೇಳಿದ ಗೃಹೀತ ಕಲ್ಪನೆಗಳ ಬೆಳಕಿನಲ್ಲಿ ವಿಶ್ಲೇಷಿಸಲು ಮತ್ತು ಸಂಶ್ಲೇಷಿಸಲು ತೊಡಗುತ್ತಾನೆ. ಅವನು ತನ್ನ ಮಾರ್ಗದರ್ಶಿಯ (ಗುರುವಿನ) ಬಗ್ಗೆ ಮತ್ತು ಅವನ ಕಾರ್ಯದ ಬಗ್ಗೆ ಚಿಂತನ ಮಾಡಲು ಪ್ರಾರಂಭಿಸುತ್ತಾನೆ. ಅದು ಅತ್ಯಂತ ಸಹಜ ರೀತಿಯಲ್ಲಿ ನಿರಂತರ ಸ್ಮರಣೆಯಾಗಿ ಬೆಳೆಯುತ್ತದೆ.

ಆಧ್ಯಾತ್ಮಿಕ ಪ್ರಗತಿಯು ಸ್ವಯಂ-ಶುದ್ದೀಕರಣದ ಜೊತೆಯಲ್ಲಿ ಮತ್ತು ಅದರ ತಳಹದಿಯ ಮೇಲೆ ನಡೆಸಲ್ಪಡುತ್ತದೆ ಎಂಬುದರಲ್ಲಿ ಈ ಪದ್ಧತಿಯ ಕಾರ್ಯಸಾಮರ್ಥ್ಯವು ಅಡಗಿದೆ. ಆರಂಭವನ್ನು ಮಾಡುವುದೇ ಹೃದಯವನ್ನು ಶುದ್ದೀಕರಿಸುವುದರಿಂದ; ಮತ್ತು, ಕ್ರಮೇಣ ಎಲ್ಲ ಚಕ್ರಗಳನ್ನು ಶುದ್ಧಗೊಳಿಸಿ ಪ್ರಕಾಶಿತಗೊಳಿಸಲಾಗುತ್ತದೆ. ಇದು ಒಂದು ಆಧ್ಯಾತ್ಮಿಕ ತರಬೇತಿಯಲ್ಲಿ ಬಹಳ ಮಹತ್ತ್ವದ ಹೆಜ್ಜೆಯಾಗಿದೆ ಹಾಗೂ ಮಾರ್ಗದರ್ಶಿಯ ಕಡೆಯಿಂದ ಇದಕ್ಕೆ ವಿಶೇಷ ಲಕ್ಷ್ಯ ಮತ್ತು ಕಾಳಜಿಯ ಆವಶ್ಯಕತೆ ಇದೆ. ಸಾರಭೂತ ಮಹತ್ತ್ವದ ಈ ಹೆಜ್ಜೆಯು ಯಾವುದೇ ರೀತಿಯಲ್ಲಿ ಅವಗಣಿಸಲ್ಪಟ್ಟರೆ ಅಥವಾ ಉಪೇಕ್ಷಿಸಲ್ಪಟ್ಟರೆ, ಚಕ್ರಗಳನ್ನು ಜಾಗೃತಗೊಳಿಸುವುದರಿಂದ ಸಾಧಿತವಾದ ಆಧ್ಯಾತ್ಮಿಕ ಸಿದ್ಧಿಗಳು ತಪ್ಪಾಗಿ ಉಪಯೋಗಿಸಲ್ಪಡುವ ಸಂಭಾವ್ಯತೆ ಉಂಟು. ಆ ಕಾರಣ, ಅಂತಹ ಎಲ್ಲ ಕೆಡುಕುಗಳು ಆಗದಂತೆ ರಕ್ಷಿಸಲು, ಶುದ್ಧಿಕರಣ ಕ್ರಿಯೆಗೆ ವಿಶೇಷ ಲಕ್ಷ್ಯ ಕೊಡಲಾಗುತ್ತದೆ.

ಮನುಷ್ಯನ ಸಾಧಾರಣ ಸಾಂಸಾರಿಕ ಜೀವನಕ್ಕೆ ಸುಲಭವಾಗಿ ಹೊಂದಿಕೊಳ್ಳಬಹುದಾದ ಸರಳ ಮತ್ತು ಸಹಜ ಸಾಧನಗಳನ್ನು ಒದಗಿಸುವ ಈ ಸಹಜ ಮಾರ್ಗಪದ್ಧತಿಯು ವಾಸ್ತವವಾಗಿ ರಾಜಯೋಗದ ಪರಿಷ್ಕೃತ ರೂಪವಾಗಿದೆ. ಅದು ಚಿತ್ ಶಕ್ತಿಯ (thought) ಮೇಲೆ ಆಧರಿತವಾದದ್ದು. ಈ ಚಿತ್ ಶಕ್ತಿಯನ್ನು ಭಾರತದ ಪ್ರಾಚೀನ ಮಹರ್ಷಿಗಳು ಆಳವಾಗಿ ಮತ್ತು ವೈಜ್ಞಾನಿಕವಾಗಿ ಪರಿಶೀಲಿಸಿದ್ದಾರೆ; ಮಹರ್ಷಿ ಪತಂಜಲಿಯ ಯೋಗ ದರ್ಶನವು ಅದರ ಒಂದು ಉದಾಹರಣೆ.

ಸಹಜಮಾರ್ಗದ ವೈಜ್ಞಾನಿಕ ತಳಹದಿಯನ್ನು ಓದುಗರ ಮುಂದೆ ಪ್ರಸ್ತುತಪಡಿಸುವ ಉದ್ದೇಶದಿಂದ ನಾನು ಈ ಪದ್ಧತಿಯ ಮುಖ್ಯ ಅಂಶಗಳನ್ನು ಮಾತ್ರವೇ ಕುರಿತು ಹೇಳಿದ್ದೇನೆ. ನಮ್ಮ ಅಂತಿಮ ಗುರಿಯನ್ನು ಸಾಧಿಸಲು ಆವಶ್ಯಕವಾದ ಸೂಕ್ಷ್ಮತೆ ಮತ್ತು ಪರಿಷ್ಕರಣದ ಪರಾಕಾಷ್ಠೆಯ ಸ್ಥಿತಿಗೆ ನಮ್ಮನ್ನು ಕರೆದೊಯ್ಯುವ ಪದ್ಧತಿ ಇದಾಗಿದೆ.

[ ಸಹಜಮಾರ್ಗ ಪತ್ರಿಕೆ, ಸಂ. 4, 1957]