ನಮ್ಮ ಧ್ಯಾನ ಮತ್ತು ಧ್ಯಾನದ ಉದ್ದೇಶವನ್ನು ಕುರಿತ ಕೆಲವು ಅಂಶಗಳನ್ನು ನಿಮ್ಮ ಪರ್ಯಾಲೋಚನೆಗಾಗಿ ನಿಮ್ಮ ಮುಂದೆ ಇಡಬಯಸುತ್ತೇನೆ. ನಾನು ಅನೇಕ ಅಭ್ಯಾಸಿಗಳನ್ನು ಭೆಟ್ಟಿಯಾಗಿದ್ದೇನೆ. “ನೀವು ಏತಕ್ಕಾಗಿ ಧ್ಯಾನ ಮಾಡುವಿರಿ ?’ ಎಂದು ಅವರನ್ನು ನಾನು ಕೇಳಿದಾಗ, ಉತ್ತರಕ್ಕಾಗಿ ಆಲೋಚನೆಗೆ ಬೀಳುವ ಹಾಗೂ ತಾವು ಉತ್ತರಿಸಲು ಅಸಮರ್ಥರು ಎಂದು ಭಾವಿಸುವವರನ್ನು ನಾನು ಅವರಲ್ಲಿ ಕಂಡಿದ್ದೇನೆ. ಇನ್ನು ಯಾವುದೋ ಒಂದು ಪ್ರಕಾರದ ಯೋಗವನ್ನು ಅನುಷ್ಠಾನ ಮಾಡುವ ಇತರರನ್ನು ನಾನು ಕಂಡಿದ್ದೇನೆ. ‘ನೀವೇಕೆ ಅದನ್ನು ಮಾಡುತ್ತಿರುವಿರಿ’ ಎಂದು ಅವರನ್ನು ಕೇಳಿದಾಗ ಅವರು ಏನೋ ಒಂದು ಅಸ್ಪಷ್ಟ ಉತ್ತರ ಕೊಡುತ್ತಾರೆ. ಧ್ಯಾನದ ಉದ್ದೇಶವೇನೆಂದು ತಿಳಿದುಕೊಳ್ಳುವುದು ನಿತಾಂತ ಆವಶ್ಯಕವಾಗಿದೆ. ಅತ್ಯುನ್ನತ ಸ್ಥಿತಿಯು ನಮ್ಮ ದೃಷ್ಟಿಯಲ್ಲಿರದಿದ್ದರೆ ಆಗ ನಮ್ಮೆಲ್ಲ ಪ್ರಯತ್ನಗಳೂ ವ್ಯರ್ಥವಾಗುವವು; ಅಥವಾ ಯತ್ನಗಳು ಸುಖಾನ್ವೇಷಣೆಯ ಚಟುವಟಿಕೆಗಳಾಗಿದ್ದರೆ ಅವು ಮತ್ತೂ ಹೆಚ್ಚು ಸ್ಥೂಲತೆಯನ್ನು ಉಂಟುಮಾಡುವವು. ಆದುದರಿಂದ, ಆಳವಾಗಿ ಆಲೋಚಿಸಿರಿ ಮತ್ತು ನಾವು ಏಕೆ ಧ್ಯಾನ ಮಾಡುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಿರಿ.
ಪ್ರಾರ್ಥನೆ ನಮ್ಮೆದುರಿಗಿದೆ. ಪ್ರಾರ್ಥನೆಯಲ್ಲಿ ಗುರಿಯ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ಅಡೆತಡೆಗಳ ಬಗ್ಗೆಯೂ, ಅಂತೆಯೇ, ಆತ್ಯಂತಿಕ ಮೂಲದ ಹಾಗೂ ಸಹಾಯಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಹಾಗಿರುವಾಗ ಧ್ಯಾನವನ್ನು ಪ್ರಾರ್ಥನೆಯೊಂದಿಗೆ ಆಗಲೇ ನಿಮಗೆ ಪ್ರಾರಂಭಿಸಬೇಕೆಂಬುದನ್ನು ನೆನಪಿಡಿ. ನಿಚ್ಚಳವಾಗುವುದು ಹಾಗೂ ನಿಮ್ಮ ಗ್ರಹಣ ಶಕ್ತಿಯು ವರ್ಧಿಸುವುದು. ಮತಧರ್ಮ ಮುಂತಾದವುಗಳಲ್ಲಿ ಅನೇಕ ಪ್ರಾರ್ಥನೆಗಳನ್ನು ನಾನು ಕಂಡಿದ್ದೇನೆ. ನೀವು ಲಕ್ಷ್ಯಪೂರ್ವಕ ಪರಿಶೀಲಿಸಿದರೆ, ಅವೆಲ್ಲವೂ ಪ್ರಾಪಂಚಿಕ ಲಾಭ ಅಥವಾ ದುಃಖ ನಿವಾರಣೆ ಮುಂತಾದ ಸೀಮಿತ ಉದ್ದೇಶಗಳಿಗೋಸ್ಕರ ಇವೆ. ಸಹಜಮಾರ್ಗದಲ್ಲಿ ನಮ್ಮ ಧ್ಯೇಯವು ಅತ್ಯಂತ ಸ್ಪಷ್ಟವಿದೆ. ಅಲ್ಲದೆ, ಅಂತಿಮ ಸತ್ಯದೊಂದಿಗೆ ಶಾಶ್ವತ ಸಂಬಂಧ ಹೊಂದಿರುವ ಮಹಾವ್ಯಕ್ತಿಯು ನಮ್ಮ ಸಮ್ಮುಖದಲ್ಲಿದ್ದಾಗ ಅವನನ್ನು ನಮ್ಮ ಗುರಿಯನ್ನಾಗಿ ಮಾಡಿಕೊಂಡು ಅವನೊಂದಿಗೆ ನಮ್ಮನ್ನು ನಾವು ಜೋಡಿಸಿಕೊಂಡರೆ ಆಧ್ಯಾತ್ಮಿಕ ಪ್ರಗತಿ ಹೊಂದುವೆವೆಂದು ಆಶಿಸಬಹುದು. ಇಲ್ಲವಾದರೆ ಈ ಧ್ಯಾನವೇ ಅದರ ಉದ್ದೇಶವನ್ನು ಕೆಡಿಸಿಬಿಡುವುದು ಮತ್ತು ಕೆಲವು ಅವಾ೦ಛಿತ ವಿಷಯಗಳನ್ನೊಳಗೊಂಡು ಜಟಿಲತೆಗಳನ್ನು (ನಿವಾರಿಸುವ ಬದಲಿಗೆ) ಸೃಷ್ಟಿಸಬಹುದು. ಪ್ರಾರ್ಥನೆಯು ನಿಮಗೆ ಒಂದು ಕಲ್ಪನೆಯನ್ನು ಕೊಡಬಹುದು. ಅದು ಗುರಿಯ ಕಲ್ಪನೆಯನ್ನು ಕೊಡುತ್ತದೆ. ಇದಕ್ಕಾಗಿ ನೀವು ಅವರ ಅರ್ಥದ ಮೇಲೆ ಗಾಢವಾಗಿ ಚಿಂತನೆ ಮಾಡಬೇಕು, ಮತ್ತು ಪ್ರಾರ್ಥನೆಯ ಸ್ಥಿತಿಯನ್ನು ಬೆಳೆಸಿಕೊಳ್ಳಲು ಅದರ ಶಾಬ್ದಿಕ ಅರ್ಥವನ್ನು (ಮೀರಿ) ಮರೆತು ಬಿಡಬೇಕು. ನಿದ್ದೆ ಹೋಗುವಾಗ ನಾವು ಅನುಸರಿಸಬೇಕೆಂದು ವಿಧಿಸಲಾದ ಪದ್ಧತಿ ಇದು. ದೈನ್ಯಭಾವ ಉಂಟಾಗುವ ಪ್ರಕ್ರಿಯೆ ನಡೆಯುವುದು, ನಿದ್ರೆಯ ಪಶುವೃತ್ತಿಗಳು ಪರಿವರ್ತನೆಗೊಳ್ಳುವವು, ಮತ್ತು ಪ್ರಾರ್ಥನೆಯ ಅವಸ್ಥೆಗೆ ಉದಾತ್ತೀಕರಿಸಲ್ಪಡುವವು. ನಿಮ್ಮ ಆ ಪ್ರಾರ್ಥನಾ ಸ್ಥಿತಿಯು ನಿಮ್ಮ ಗ್ರಹಣ ಶಕ್ತಿಯನ್ನು ವೃದ್ಧಿಗೊಳಿಸುವುದು. ಮತ್ತೆ, ನೀವು ಪ್ರಾರ್ಥನೆಯ ಸ್ಥಿತಿಯನ್ನು ಬೆಳೆಸಿಕೊಂಡರೆ ನೀವು ತೀವ್ರಗತಿಯಿಂದ ಪ್ರಗತಿ ಹೊಂದಲಿಕ್ಕಿದ್ದೀರಿ ಎಂದು ಅರ್ಥ.
ಹೀಗೆ ಪ್ರಾರ್ಥನೆಗೆ ಇಬ್ಬಗೆಯ ಉದ್ದೇಶಗಳುಂಟು; ಅದು ನಿಮ್ಮ ಧ್ಯೇಯದ, ನೀವು ಸಾಧಿಸಬೇಕಾದ ಗುರಿಯ ಸ್ಮರಣೆ ತಂದುಕೊಡುತ್ತದೆ ಮತ್ತು ನಿಮಗೆ ಯಾವಾಗಲೂ ಗುರುವನ್ನು ತೋರಿಸುವುದು ಅಥವಾ ನೆನಪು ಮಾಡಿಕೊಡುವುದು. ಅದೇ ಸಮಯದಲ್ಲಿ ಪ್ರಾರ್ಥನೆಯ ಸ್ಥಿತಿಯನ್ನು ನೀವು ಬೆಳೆಸಿಕೊಳ್ಳಬಹುದು ಮತ್ತು ಎಲ್ಲ ಸ್ಥೂಲತೆಯೂ ನಿವಾರಣೆಯಾಗುವುದು. ಧ್ಯಾನದಲ್ಲಿ ನಿಜವಾಗಿ ಏನಾಗುವುದು ಎಂಬುದನ್ನು ನಿಮ್ಮಲ್ಲಿ ಪ್ರತಿಯೊಬ್ಬನೂ ಅವಲೋಕಿಸಿರಬಹುದು. ಅದುಮಲ್ಪಟ್ಟ ಆಂತರಿಕ ವಿಚಾರಗಳು, ಇಚ್ಛೆಗಳು ಹಾಗೂ ಅನೇಕ ಜಟಿಲತೆಗಳು ಜಾಗ್ರತ ಪ್ರಜ್ಞೆಯ ಸ್ತರಕ್ಕೆ ಬರುತ್ತವೆ. ಧ್ಯಾನ ಸಮಯದಲ್ಲಿ ಅವು ನಿಮ್ಮ ಅರಿವಿಗೆ ಬಂದು ನಿವಾರಿಸಲ್ಪಡುವವು. ಇದು ನಿಜಕ್ಕೂ ಶುದ್ದೀಕರಣವಾಗಿದೆ. ಧ್ಯಾನದಲ್ಲಿ ಮೇಲೆದ್ದು ಬರುವ ವಿಚಾರಗಳೊಂದಿಗೆ ನೀವು ಹೋರಾಡಬೇಕಿಲ್ಲ, ಹಾಗೂ ವಿಚಾರಗಳಿದ್ದರೆ ನೀವು ನಿರುತ್ಸಾಹಗೊಳ್ಳಬೇಕಾಗಿಲ್ಲ. ಧ್ಯಾನದ ಅನಂತರ ನೀವು ಆ ಎಲ್ಲ ವಿಚಾರಗಳನ್ನು ನೆನಪಿಸಿಕೊಳ್ಳಲು ಯತ್ನಿಸಿದರೆ ನೀವು ಕ್ವಚಿತ್ತಾಗಿ ಒಂದೆರಡನ್ನು ಮಾತ್ರ ನೆನಪಿಸಿಕೊಳ್ಳಲು ಸಾಧ್ಯವಾಗಬಹುದು. ವಿಚಾರಗಳ ಮೇಲಕ್ಕೆ ಬರುವಿಕೆಯು (harvest) ಶುದ್ದೀಕರಣದ ಉದ್ದೇಶಕ್ಕಾಗಿಯೇ ಇತ್ತು ಎಂಬುದಕ್ಕೆ ಇದು ಪ್ರಮಾಣವಾಗಿದೆ.
ಹಾಗಿರುವುದರಿಂದ ಧ್ಯಾನದ ಅಭ್ಯಾಸವು ಬಹಳ ಮಹತ್ವದ್ದಾಗಿದೆ. ಸಹಜಮಾರ್ಗದಲ್ಲಿ ವಿಧಿಸಲ್ಪಟ್ಟಂತೆ ಅದು ತುಂಬ ಸರಳವಾಗಿದೆ. ಸಾಧನೆಯ ಬೇರೆ ವಿಧಾನಗಳ ಅಭ್ಯಾಸ ಮಾಡುವುದರಿಂದಾಗಿ ನಾವು ಅದನ್ನು ಕ್ಲಿಷ್ಟಗೊಳಿಸಿಕೊಳ್ಳುತ್ತೇವೆ. ಧ್ಯಾನದ ಬಗ್ಗೆ ನಾವು ಹಲವಾರು ಕಲ್ಪನೆಗಳನ್ನು ಹೊಂದಿದ್ದೇವೆ ಮತ್ತು ಅದರಿಂದಾಗಿ ಕ್ಲಿಷ್ಟತೆಗಳನ್ನು ಉಂಟುಮಾಡಿಕೊಳ್ಳುತ್ತೇವೆ. ಆ ರೂಪಗಳಿಗೆ ಅನುರೂಪವಾಗಿ ನಾವು ನಮ್ಮ ಧ್ಯಾನವನ್ನು ಮಾಡಬಯಸುತ್ತೇವೆ ಮತ್ತು ಸತ್ಯವನ್ನು ಮರೆಯುತ್ತೇವೆ. ಸತ್ಯವು ನಮ್ಮ ಪೂರ್ವಗ್ರಹ ಮತ್ತು ಜಟಿಲತೆಗಳಿಂದ ಆವರಿಸಲ್ಪಟ್ಟಿದೆ. ಆದ್ದರಿಂದ ಸತ್ಯವನ್ನು ತಲುಪಲು ಬಯಸಿದರೆ ನಾವು ಧೈರ್ಯವಂತರಾಗಿರಬೇಕು. ಆಗ ನೀವು ಅಭ್ಯಾಸದ ಸ್ವಲ್ಪ ಸಮಯದಲ್ಲಿಯೇ ಅದನ್ನು ಬಹುಬೇಗ ಅರಿತುಕೊಳ್ಳುವಿರಿ.
ನಾವು ನಮ್ಮ ವಿಚಾರಶಕ್ತಿಯನ್ನು ದುರುಪಯೋಗ ಮಾಡಿಕೊಂಡು, ಜಟಿಲತೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ ಮತ್ತು ಅದೇ ವಿಚಾರಶಕ್ತಿಯನ್ನು ಸರಿಯಾಗಿ ಉಪಯೋಗಿಸುವುದರ ಮೂಲಕ ಜಟಿಲತೆಗಳನ್ನು ನಿವಾರಿಸಿಕೊಳ್ಳಬಲ್ಲೆವು. ಪ್ರಾಣಾಹುತಿ ಶಕ್ತಿಯು ವಿಚಾರಶಕ್ತಿಯಿಂದ ಉಂಟಾಗುವುದು ಮತ್ತು ಅಧ್ಯಾತ್ಮದಲ್ಲಿ ನಮ್ಮ ಪ್ರಗತಿಯು ವಿಚಾರಶಕ್ತಿಯಿಂದಲೇ ನೆರವೇರುವುದು. ಅಭ್ಯಾಸದ ಸಂಪೂರ್ಣ ಪದ್ಧತಿಯು ಚಿಂತನೆಯನ್ನು ಮಾತ್ರ ಆಧರಿಸಿದೆ ಹಾಗೂ ಸುದೈವದಿಂದ ಆ ಶಕ್ತಿಯ ಮೇಲೆ ಪ್ರಭುತ್ವ ಹೊಂದಿರುವ ವ್ಯಕ್ತಿ ನಮ್ಮೊಂದಿಗೆ ಇದ್ದಾರೆ. ಅವರು ಅಂತಿಮ ಸತ್ಯದೊಂದಿಗೆ ಸಂಬಂಧ ಹೊಂದಿದ್ದು ಎಲ್ಲ ಬಗೆಯ ಸ್ಥೂಲತೆ ಹಾಗೂ ಜಡತ್ವಗಳಿಂದ ಮುಕ್ತರಿದ್ದಾರೆ. ನಾವು ನಮ್ಮ ಚಿಂತನವನ್ನು (ವಿಚಾರವನ್ನು/ಚಿತ್ತವನ್ನು) ಅವರೊಂದಿಗೆ, ಅವರ ವ್ಯಕ್ತಿತ್ವದೊಂದಿಗೆ ಜೋಡಿಸಿದರೆ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಳ್ಳುವುದು ಅತ್ಯಂತ ಸುಲಭವಾಗುವುದು ಮತ್ತು ಆಗ ನೀವು ಸೂಕ್ಷ್ಮತೆಯ ವಿವಿಧ ಮಜಲುಗಳ ಮೂಲಕ ಸಾಗುವಿರಿ. ಮತ್ತೆ, ಇನ್ನೂ ಸೂಕ್ಷ್ಮತರ ಸ್ಥಿತಿಗಳು ಉದಯಿಸುವುವು.
ನಮ್ಮ ಮೂಲ ಸ್ಥಿತಿಯು ಪರಮ ದೈವೀ ತತ್ತ್ವದೊಂದಿಗೆ ಒಂದಾಗಿತ್ತು. ನಾವು ನಮ್ಮ ಇಂದ್ರಿಯಗಳನ್ನು, ಇಚ್ಛೆಗಳನ್ನು, ಅಡ್ಡಾತಿಡ್ಡಿಯಾದ ರೀತಿಯಲ್ಲಿ ಹರಿಯಲು ಬಿಟ್ಟು ಈ ಎಲ್ಲ ಜಟಿಲತೆಗಳನ್ನು ನಿರ್ಮಿಸಿಕೊಂಡಿದ್ದೇವೆ. ಅದರಿಂದಾಗಿ ಎಲ್ಲ ಇಂದ್ರಿಯಗಳು ವಿವೇಕ ಕಳೆದುಕೊಂಡವು. ಮನುಷ್ಯ ಈಗ ಮನುಷ್ಯನಾಗಿ ಉಳಿಯಲಿಲ್ಲ, ಕೇವಲ ಪಶುವಾಗಿದ್ದಾನೆ. ನಾವು ಆಂತರಿಕ ಬಂಧನಗಳನ್ನು ನಿರ್ಮಿಸಿಕೊಂಡು ಅವುಗಳಿಂದ ಹೊರಗೆ ಬರಲಾರದವರಾಗಿದ್ದೇವೆ. ಈಗ ನಾವು ಮಾಡಿಕೊಂಡ ತಪ್ಪು ಕಲ್ಪನೆಗಳ ಅನುಸರಣೆಯಿಂದ ಹಾಗೂ ಇನ್ನಷ್ಟು ಜಟಿಲತೆಗಳನ್ನು ಸೃಷ್ಟಿಸಿಕೊಂಡಿದ್ದರಿಂದ ಉಂಟಾದ ಎಲ್ಲ ಬಂಧನಗಳಿಂದ ಮುಕ್ತರಾಗಬೇಕು. (ಅದಕ್ಕೆ ಅತ್ಯುತ್ತಮ ಉಪಾಯವೆಂದರೆ ಎಲ್ಲ ಬಂಧನಗಳಿಂದ ಮುಕ್ತನಾದವರೊಂದಿಗೆ ನಮ್ಮನ್ನು ನಾವು ಜೋಡಿಸಿಕೊಳ್ಳಬೇಕು. ಆಂತರಿಕ ಬಂಧನಗಳಿಂದ ಮುಕ್ತರಾದಾಗ ಮಾತ್ರವೇ ನೀವು ನಿಜವಾಗಿ ಮುಕ್ತ ವ್ಯಕ್ತಿಗಳಾಗುತ್ತೀರಿ. ಇದು ಅತ್ಯಂತ ಸುಲಭವಾಗಿದೆ. “ನೀವು ಸಂಕಲ್ಪ ಮಾಡಬಲ್ಲಿರಾದರೆ ಅದನ್ನು ಸುಲಭವಾಗಿ ಹೊಂದಬಲ್ಲಿರಿ.” ಎಂದು ನಮ್ಮ ಗುರುಗಳು ಹೇಳುತ್ತಾರೆ. ನೀವು ಆಂತರಿಕ ಸ್ಥೂಲತೆ ಮುಂತಾದವುಗಳಿಂದ ಮುಕ್ತರಾಗಬೇಕು ಮತ್ತು ಸುಖವನ್ನು ಅರಸುವ ಪ್ರವೃತ್ತಿಗಳ ಸೆಳವಿಗೆ ಸಿಕ್ಕಿಬೀಳದೆ ಇರುತ್ತೇವೆ ಎಂಬ ದೃಢ ಸಂಕಲ್ಪ ಮಾಡಬೇಕು ಮತ್ತು ಗುರುಗಳ ಬೋಧನೆಗಳನ್ನು ಸ್ವೀಕರಿಸಬೇಕು. ಅವು ಬಹಳ ಸರಳವಾಗಿವೆ; ಯಾವುದೇ ವ್ಯಕ್ತಿಯೂ ಅವುಗಳನ್ನು ಅನುಸರಿಸಬಹುದಾಗಿದೆ. ಆ ಆದರ್ಶವನ್ನು ದೃಢವಾಗಿ ನಿಶ್ಚಿತಗೊಳಿಸಿಕೊಂಡರೆ ಸುಲಭವಾಗಿ ಪ್ರಗತಿ ಸಾಧಿಸಬಹುದು.
‘ಗುರುಮಹಾರಾಜರು ಎಲ್ಲರಿಗೂ ಶೀಘ್ರ ಪ್ರಗತಿಯನ್ನು ಅನುಗ್ರಹಿಸಲಿ’
[ಫೆಬ್ರುವರಿ 1, 1979ರಂದು ಷಾಹಜಹಾನಪುರದಲ್ಲಿ ಬಸಂತ ಪಂಚಮಿಯ ಆಚರಣೆಯ ಸಂದರ್ಭದಲ್ಲಿ ಮಾಡಿದ ಭಾಷಣ]