ಸಾಮಾನ್ಯವಾಗಿ ಹೊಳೆಯುವ ಮತ್ತು. ಕೋರೈಸಿ ತೋರುವ ವಸ್ತುವಿನೆಡೆಗೆ ನಮ್ಮ ಕಣ್ಣು ಸೆಳಯಲ್ಪಡುತ್ತದೆ. ಅದನ್ನೇ ನಾವು ಸಾಮಾನ್ಯವಾಗಿ ‘ಸತ್’ ಎಂದು ಭ್ರಮಿಸುತ್ತೇವೆ. ಈ ಹೊಳೆಯುವ ವಸ್ತು ಮಾಯೆಯಲ್ಲದೇ ಬೇರೇನೂ ಅಲ್ಲ. ಅದನ್ನು ಬಹಳಷ್ಟು ಎತ್ತಿ ಹೊಗಳುವವರು ಆಧ್ಯಾತ್ಮದವಲಯದಿಂದ ಕೂಡ ಬಹುದೂರವಿದ್ದಾರೆ, ಇನ್ನು’ಸತ್ಯ’ದ ಮಾತು ಹೇಳುವದೇಬೇಡ. ಆದರೆ ಜನರು ಎಂಥ ಜಡತ್ವದ ಸ್ಥಿತಿಯನ್ನು ಬೆಳೆಸಿಕೊಂಡಿದ್ದಾರೆಂದರೆ, ಅವರು ಈ ವಿಷಯದಲ್ಲಿ ಏನನ್ನೂ ಗ್ರಹಿಸುವ ಅಥವಾ ಕೇಳಿಸಿಕೊಳ್ಳುವ ಒಲವೇ ಇಲ್ಲದವರಾಗಿದ್ದಾರೆ. ಬೆಳಕು, ಕತ್ತಲೆ ಇವೆರಡಕ್ಕೂ ಆಚೆಗೆ ಇರುವ ನೈಜ ಸತ್ಯತೆಯ ದರ್ಶನ ಅವರಿಗೆ ಮರೆಯಾಗಿ ಬಿಟ್ಟಿದೆ.ಇದನ್ನೇ ಮಿಷನ್ನಿನ ಬೋಧಚಿಹ್ನೆಯಲ್ಲಿ ತೋರಿಸಿರುವುದು. ನಿಜವಾದ ಅರ್ಥದಲ್ಲಿ ಮನುಷ್ಯನ ಪರಿಪೂರ್ಣತೆ ಸ್ಥಿತಿಯೆಂದರೆ ಅದೇ. ಆ ಸ್ಥಿತಿಯಿಂದ ಹಿಂದೆ ಸರಿಯುವದಾಗಲಿ, ಪತನವಾಗುವದಾಗಲಿ ಸಾಧ್ಯವಿಲ್ಲ.ಇದು ತಾತ್ವಿಕ ದರ್ಶನದ ಅತಿಸೂಕ್ಷ್ಮಸಂಗತಿ. ಈ ಬೆಳಕು ಅಲ್ಲದ, ಕತ್ತಲೆಯೂ ಅಲ್ಲದ ಸ್ಥಿತಿಯನ್ನು ಸಂತರು ‘ಸತ್ಪದ’ ಎಂದು ಕರೆದಿದ್ದಾರೆ. ಆದರೆ ಅದು ಸರಿ ಅಲ್ಲ, ಯಾಕೆಂದರೆ ಈ ಸ್ಥಿತಿ ಅದಕ್ಕಿಂತ ಬಹಳ ಆಚೆಗಿದೆ.ಇದು ನಿಜವಾಗಿಯೂ ಬಹಳ ಆಚೆಗಿರುವ ಸತ್ಯದ ಪ್ರತಿಫಲನ ಮಾತ್ರ.