(ಹೈದರಾಬಾದಿನಲ್ಲಿ ಜರುಗಿದ ೭೫ ನೇ ವರ್ಧಂತ್ಯುತ್ಸವದ ಸಂದರ್ಭದಲ್ಲಿ,  ೨೪-೧೦-೧೯೭೪ ರಂದು ನೀಡಿದ ಸಂದೇಶ)

ನನ್ನ ೭೫ನೆಯ ಜನ್ಮದಿನೋತ್ಸವದ ರೂಪದಲ್ಲಿ, ನಿಮ್ಮೆಲ್ಲರಲ್ಲಿ ವ್ಯಕ್ತವಾದ ಸಂಭ್ರಮವನ್ನು ನಾನು ಪ್ರಶಂಸಿಸುತ್ತೇನೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು, ನನ್ನನ್ನೇ ನಾನು ಶೋಧಿಸಿಕೊಂಡರೆ ಈ ರೀತಿಯ ಸಂದರ್ಭಕ್ಕೆ ನಾನು ಪಾತ್ರನೇ ?” – ಎಂಬ ಪ್ರಶ್ನೆಯೇಳುತ್ತದೆ. ನನ್ನ ಅಂತರಂಗದ ಭಾವನೆಗಳೊಂದಿಗೆ ಸಮರಸಗೊಂಡು ಕೆಲಸಮಾಡುವ ಎಲ್ಲ ಅಭ್ಯಾಸಿಗಳ ಕ್ರತುಶಕ್ತಿಯೇ ಇದೆಂದು ಮಾರ್ನುಡಿ ಬರುತ್ತದೆ. ಆದ್ದರಿಂದ ಆ ಶ್ರೇಯಸ್ಸು ನಿಮಗೇ ಸಲ್ಲಬೇಕಾದದ್ದು. ನಾನಾದರೋ, ಆ ಗುರುವಿನ ಕೈಯಲ್ಲಿರುವ ಒಂದು ಗೊಂಬೆ ಮಾತ್ರ.

ನಾನು ಅಸ್ವಸ್ಥನಾಗಿದ್ದೆ, ಅದರ ಬಲಹೀನತೆ ಇನ್ನೂ ಇದೆ. ಆದರೆ, ನಾನು ಪೂಜ್ಯ ಗುರುಗಳ ನೆನಪು ಮಾಡುತ್ತಿದ್ದಂತೆಯೇ, ಸರ್ವಾಂತರ್ಗತವಾಗಿ ಹರಿಯುತ್ತಿರುವ ಆ ಮಹಾತ್ಮರ ಪ್ರಭಾವದಿಂದಾಗಿ ನಾನು ಹರೆಯದವನಾಗುತ್ತೇನೆ. ರೋಗದಿಂದ ಪಾಡು-ಪಡುವವರೆಲ್ಲ ಅದನ್ನು ದ್ವೇಷಿಸುತ್ತಾರೆ. ಆದರೆ ಮೂಲತಃ ಅದು ಬಹಳ ಶುದ್ಧಿಕಾರಕವಾಗಿದೆ. ಅಶುದ್ಧ ಸಂಸ್ಕಾರಗಳು ಭೋಗಕ್ಕೆ ಬಂದಾಗ, ಆ ಸೃಷ್ಟಿಕರ್ತನ ದೃಷ್ಟಿಯು ನಮ್ಮತ್ತ ಇರುತ್ತದೆ. ಅದು ಮಗುವನ್ನು ತೂಗುವ ತೊಟ್ಟಿಲಿನಂತೆ. ಮತ್ತು ಅದರಿಂದ ನಾವು ಪುಷ್ಟಿಯನ್ನು ಪಡೆಯುತ್ತೇವೆ. ಸಂಸ್ಕಾರಗಳ ಭೋಗ ಉಂಟಾಗುವಾಗಲೂ ಭಗವಂತನ ದೃಷ್ಟಿ ನಮ್ಮ ಕಡೆಗಿರುತ್ತದೆ. ಅಂದರೆ, ರೋಗವು ತನ್ನೊಂದಿಗೆ ದುಷ್ಟ ಸಂಸ್ಕಾರಗಳನ್ನು ಕೊಂಡೊಯ್ಯುವುದರಿಂದ, ನಾವು ಅದರಿಂದ ಉಪಕೃತರೇ ಆಗುತ್ತೇವೆ. ಎಲ್ಲವೂ ಆ ಭಗವಂತನ ಪ್ರೇಮದ ಲೀಲೆ, ‘ಪ್ರೇಮ’ ಮತ್ತು ‘ದ್ವೇಷ’ ಎರಡೂ ಒಂದೇ ಎಂದು ನಾನೆಂದರೆ, ನೀವೇನೂ ಆಶ್ಚರ್ಯಪಡಬೇಕಾಗಿಲ್ಲ. ಪ್ರೇಮವೆಂಬುದು ವಿಧಾಯಕ ಭಾವನೆಯಾದರೆ, ದ್ವೇಷವೆಂಬುದು ನಕಾರಾತ್ಮಕ ಭಾವನೆ. ಅತ್ಯಂತ ದಯಾಮಯನೂ, ಕ್ಷಮಾಶೀಲನೂ ಆದ ಭಗವಂತನನ್ನು ಸ್ಮರಿಸಲೂ ಸಹ ಜನರು ಮೆಚ್ಚುವುದಿಲ್ಲ ಎಂಬುದು ತುಂಬ ವಿಚಿತ್ರವೆನಿಸುತ್ತದೆ. ಆತನ ಸಕಲ ಕ್ರಿಯೆಗಳೂ ನಮಗೆ ಬಹಳೇ ಲಾಭಕರವಾಗಿವೆ. ದೇವರನ್ನು ಸ್ಮರಿಸುವುದೊಂದು ಲಾಭವಿಲ್ಲದ ಕೆಲಸವೆಂದು ಜನರು ತಿಳಿಯುತ್ತಾರೆ, ನಾನಾದರೋ, ಪ್ರಪಂಚದ ಅತ್ಯಂತ ದೊಡ್ಡ ಉದ್ದಿಮೆಗಿಂತ ಅದು ಹೆಚ್ಚು ಲಾಭಕರವೆಂದು ಹೇಳುತ್ತೇನೆ.

ಯಾರ ಬಾಯಿಯಿಂದಾದರೂ “ವಿಶ್ವ ಪ್ರೇಮ’ವೆಂಬ ಶಬ್ದ ಹೊರಹೊಮ್ಮಿದರೆ, ನನಗೆ ಬಹಳ ಆನಂದವಾಗುತ್ತದೆ. ಸಾಮಾನ್ಯವಾಗಿ ಈಗಿನ ಸಂತರೆಲ್ಲ ‘ವಿಶ್ವ ಪ್ರೇಮ’ವನ್ನು ಬೋಧಿಸುತ್ತಾರೆ. ಆದರೆ ಅದನ್ನು ಪಡೆಯುವುದೆಂಬುದನ್ನು ನಿಮಗೆ ತಿಳಿಹೇಳುವ ಯುಕ್ತಿಗಳು ಅವರಿಗೆ ಗೊತ್ತಿಲ್ಲ. ದ್ವೇಷವನ್ನು ತ್ಯಜಿಸಿಬಿಡಿರಿ, ಆಗ ವಿಶ್ವಪ್ರೇಮವು ತಾನೇ ಪ್ರಕಟವಾಗುವುದು ಎಂದು ನಾನು ಹೇಳುತ್ತೇನೆ. ಸುಳ್ಳುಗಾರನೊಬ್ಬ ಸುಳ್ಳು ಹೇಳುವ ಅಭ್ಯಾಸವನ್ನು ಬಿಡಲು ಬಯಸುತ್ತಾನೆನ್ನಿ, – ಆಗ ಅವನು ನಿಜವನ್ನು ಹೇಳಲು ಪ್ರಾರಂಭಿಸಬೇಕು. ಯಾಕೆಂದರೆ, ಸಹಜ ರೀತಿಯಲ್ಲಿ ತಳಪಾಯದಲ್ಲಿ ಕೇಂದ್ರಿತವಾದ, ಒಂದು ರೀತಿಯ ‘ಶೀಲ’ ರೂಪಗೊಳ್ಳುತ್ತದೆ. ಸುಳ್ಳಾಡುವುದನ್ನು ಬಿಡುವುದರತ್ತವೇ ಲಕ್ಷ್ಯವಿಡುವುದು ನಿಮ್ಮ ಪ್ರಯತ್ನವಾದರೆ, ಅದು ಅಪ್ರತ್ಯಕ್ಷವಾಗಿ ಸುಳ್ಳನ್ನು ಹೆಚ್ಚು ಹೆಚ್ಚು ಬಲಪಡಿಸುತ್ತದೆ ; ಏಕೆಂದರೆ, ಏಕಾಗ್ರತೆಯು ಅದರ ಮೇಲಿದ್ದು, ಅದಕ್ಕೆ ಶಕ್ತಿಯು ಸಿಗುತ್ತದೆ. ವಿಶ್ವಪ್ರೇಮದ ವಿಚಾರವೂ ಹೀಗೆಯೇ, ಅದು ರೇಷ್ಮೆ ಗೂಡಿನೊಳಗೆ ಇರುವ ರೇಷ್ಮೆ ಹುಳದಂತಿದೆ.

ಇತ್ತೀಚೆಗೆ ನಾನು ಅಸ್ವಸ್ಥನಿದ್ದಾಗ ಸಂಭವಿಸಿದ ಒಂದು ಘಟನೆಯನ್ನು ನಾನಿಲ್ಲಿ ಹೇಳಬಹುದು. ನಾನಾಗ ಸನ್ನಿಹಿಡಿದ ಸ್ಥಿತಿಯಲ್ಲಿದ್ದೆ. ಆಗ, ನಾನು ಅಭ್ಯಾಸಿಯೋರ್ವನಿಗೆ ಅಪೂರ್ವ ಶಕ್ತಿ ಮತ್ತು ನಿಖರತೆಯಿಂದ ಪ್ರಾಣಾಹುತಿ ನೀಡಿ, ಆತನ ಸ್ಥಿತಿಯನ್ನು ಪೂರ್ಣವಾಗಿ ಗಮನಿಸುತ್ತ, ಕೆಲವೇ ನಿಮಿಷಗಳಲ್ಲಿ ಅವನು ಐವತ್ತೆಂಟು ಬಿಂದುಗಳನ್ನು ದಾಟಲು ಸಹಾಯಮಾಡಿದೆ. ಅದೇ ವೇಳೆ, ನಾನು ನಮ್ಮ ಮಿಷನ್ನಿನ ಇತರ ಸೋದರರಿಗೂ ಪ್ರಾಣಾಹುತಿ ನೀಡುತ್ತಲಿದ್ದೆ, ಅಭ್ಯಾಸಿಗಳ ಕೆಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಲೂ ಇದ್ದೆ, ಆ ಉತ್ತರಗಳು ತುಂಬ ತೃಪ್ತಿಕರವಾಗಿದ್ದು ಎಂದು ನಾನು ಗುಣಮುಖನಾದಮೇಲೆ ನನಗವರು ತಿಳಿಸಿದರು. – ಇದೆಲ್ಲ ಅಂಥ ಕಷ್ಟದ ಕೆಲಸವೇನಲ್ಲ. ಶಿಸ್ತಿನ ಪ್ರಜ್ಞೆಯನ್ನು ಗ್ರಹಿಸಲು ನಿಮ್ಮ  ಸುಪ್ತಮನಸ್ಸನ್ನು ಪರಿಶುದ್ಧಗೊಳಿಸಿರಿ- ಅದನ್ನು ಅಲ್ಲೇ ಕಾಣುವಿರಿ. ಮತ್ತೆ ನೋಡಿ, ನನ್ನ ಕಾಯಿಲೆಯಿಂದಾಗಿ, ಮಿಷನ್ನಿನ ಕಾರ್ಯದಲ್ಲಿ ಯಾವ ರೀತಿಯ ಲೋಪವೂ ಬರಲಿಲ್ಲ, ಅದು ನಮ್ಮ ಪದ್ದತಿಯ ಸಾಮರ್ಥ್ಯ ಹಾಗೂ ನಿಶ್ಚಿತತೆಯನ್ನು ಎತ್ತಿ ತೋರಿಸುತ್ತದೆ.

ಮಿಷನ್ನಿನ ಕಾರ್ಯ-ಚಟುವಟಿಕೆಯು, ಪೂಜ್ಯ ಗುರುಗಳ ಬೋಧನೆಗಳನ್ನು ಪ್ರತಿಯೊಂದು ಹೃದಯಕ್ಕೂ ತಲುಪಿಸಿ, ಮಾನವತೆಯನ್ನು ಅಧಃಪತನದಿಂದ ರಕ್ಷಿಸುತ್ತದೆ. ಮಾನವಕುಲವು ಇಂದು ಭೌತಿಕತೆಯ ಅಂಧಕಾರದಲ್ಲಿ ಕಂಗಾಣದೆ ತಡಕಾಡುತ್ತಿದೆ. ಭಯ, ದುರಾಶೆ, ಮತ್ತು ಮಾತ್ಸರ್ಯಗಳು ಮನುಷ್ಯನನ್ನು ಇಂದು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಟ್ಟಿದ್ದು ಜೀವನ ಮೌಲ್ಯಗಳ ಪ್ರಜ್ಞೆಯು ನಷ್ಟವಾಗಿ ಹೋಗಿದೆ. ಕೇವಲ ಆಧ್ಯಾತ್ಮಿಕ ಜ್ಯೋತಿ ಮಾತ್ರವೇ ಈ ದುರ್ಭರ ಗ್ಲಾನಿಯನ್ನು ತೊಲಗಿಸಿ, ಅವನನ್ನು ನೈಜ ಮಾನವನನ್ನಾಗಿ ಎತ್ತಿಹಿಡಿಯಬಲ್ಲದು. ಸತ್ಯದ ಪ್ರಕಾಶವು ಪ್ರತಿಯೊಬ್ಬರ ಹೃದಯದಲ್ಲಿಯೂ ಬೆಳಗಿ, ನಾವೆಲ್ಲರೂ ಆ ಭಗವಂತನ ನಿರೀಕ್ಷೆಯ ಮಟ್ಟಕ್ಕೆ ಏರುವಂತಾಗಲಿ.

***