ಎಲ್ಲರನ್ನೂ ನಿಮ್ಮ ಸಹೋದರರೆಂದು ತಿಳಿದು ಹಾಗೆ ವರ್ತಿಸಿರಿ. 

ಭಕ್ತನು ಯಾವಾಗಲೂ ಭಕ್ತಿಯ ವಲಯದಲ್ಲಿರುವುದೇ ಮಾನವೀಯ ವಿನಯದ ಪರಿಪೂರ್ಣ ಲಕ್ಷಣ. ಮೂಲದಿಂದ ಬಂದ ಎಲ್ಲ ವಸ್ತುಗಳೂ ಒಂದೇ ಉಗಮದಿಂದ ಬಂದುವೆಂದು ತಿಳಿಯಬೇಕು. ಒಂದೇ ತಾಯಿಯಿಂದ ಜನಿಸಿದ ಮಕ್ಕಳೆಲ್ಲರೂ ಹೇಗೆ ಒಂದೇ ರೀತಿಯಿಂದ ಸಂಬಂಧಪಟ್ಟಿರುವರೋ, ಹಾಗೆಯೇ ಪ್ರಪಂಚದ ಸಮಸ್ತ ಜನರೂ ಒಂದೇ ರೀತಿಯ ಬಾಂಧವ್ಯದಲ್ಲಿ ಬದ್ಧರಾಗಿದ್ದಾರೆ.

ಇದರ ಅಡಿಯಲ್ಲಿರುವ ಅರ್ಥ ಯಾರಿಗೂ ಹೊಳೆದಿಲ್ಲ. ಪ್ರತಿಯೊಂದಕ್ಕೂ ಕ್ರಿಯಾಶೀಲತೆಯನ್ನೊದಗಿಸಿದ ಕೇಂದ್ರ ಬಿ೦ದುವಾದ ಅದೇ ಸತ್ಯದೊಂದಿಗೆ ಎಲ್ಲರ ಸಂಬಂಧವಿದೆ. ನಿಜವಾಗಿ ಪರಕೀಯತೆಯೆಂಬುದಿಲ್ಲ. ನಮ್ಮ ಕಲ್ಪನೆಯಿಂದಲೇ ಎಲ್ಲ ಬಂಧುಭಗಿನಿಯರೂ ಪರಕೀಯರಾಗಿ ಕಾಣುತ್ತಿರುವರು. ನಮ್ಮ ಸ್ವಾರ್ಥ ಭಾವನೆಯಿಂದಾಗಿ ಅವರೆಲ್ಲರೂ ಬೇರೆಯೆಂಬಂತಾದರು. ಈ ಪರಕೀಯತೆಯನ್ನು ತೊಡೆದು ಹಾಕಿ ಮೊದಲಿನ ಬಂಧುತ್ವವನ್ನು ಸ್ಥಾಪಿಸಬೇಕಾಗಿದೆ. ಇದು ಕೂಡ ಭಕ್ತನನ್ನು ಆವರಿಸಿರುವ ಒಂದು ತೆರೆಯಾಗಿದೆ. ಒಂದು ಕುಟುಂಬವು ವಿಸ್ತಾರವಾದಂತೆ ಅದರ ವ್ಯಕ್ತಿಗಳ ನಡುವೆ ದೂರತೆಯ ಭಾವನೆ ಹೇಗೆ ತಾನಾಗಿಯೇ ಬರತೊಡಗುವುದೋ, ಹಾಗೆಯೆ ಕಾಲಕಳೆದಂತೆಲ್ಲ ನಮ್ಮ ಬಂಧುಗಳು ನಮ್ಮಿಂದ ದೂರವಾದಂತೆ ಭಾಸವಾಗತೊಡಗಿತು. ಎಲ್ಲರೂ ಒಂದೆಂಬ ಭಾವನೆ ಕಲ್ಪನಾವಲಯದಿಂದ ಕಣ್ಮರೆಯಾಯಿತು. ಕೇವಲ ಅದರ ಸ್ಥೂಲರೂಪವೇ ನಮಗೆ ಕಾಣಿಸಹತ್ತಿ ಅದನ್ನೇ ನಾವು ಪ್ರೀತಿಸತೊಡಗಿದೆವು. ಮೂಲ ಸತ್ಯತೆಯ ಕಡೆಗೆ ನಮ್ಮ ದೃಷ್ಟಿ ಹರಿಯಲೇ ಇಲ್ಲ. ಆದರೆ ಪ್ರೀತಿಯಿದ್ದಲ್ಲಿ ವೈರದ ಭಾವನೆಯೂ ಪ್ರಚ್ಛನ್ನವಾಗಿರುವುದು. ಈಗ ವಿಚಾರದ ಧಾರೆಗಳು ವಿರುದ್ಧವಾಗಿ ಹರಿದು ಅದು ದುಷ್ಟಪರಿಣಾಮವನ್ನುಂಟು ಮಾಡ ತೊಡಗಿತು. ಪ್ರತಿಯೊಂದು ವಸ್ತುವೂ ಬೇರೆಯೆಂಬಂತೆ ಕಾಣಿಸಿ ಒಬ್ಬರನ್ನು ಮತ್ತೊಬ್ಬರಿಂದ ಅಗಲಿಸಿತು. ಇವೆಲ್ಲ ನಮ್ಮ ವೈಯಕ್ತಿಕ ಜಾಲಕ್ಕೆ ಕಾರಣವಾದುವು. ಪ್ರತಿಯೊಂದು ಪ್ರಾಣಿಯಲ್ಲಿಯೂ ಹರಿದುಬಂದು ಮನುಷ್ಯನಲ್ಲಿ ಸಂವೇದನೆಗಳ ರೂಪತಾಳುವ ಆ ಧಾರೆಗಳ ಅರಿವು ನಮಗಿಲ್ಲದಾಯಿತು.

ವಿಶ್ವಬಾಂಧವ್ಯದ ಭಾವನೆಯನ್ನು ಬೆಳೆಸುವುದೆಂದರೆ, ಆ ವೈಯಕ್ತಿಕ ಜಾಲವನ್ನು ಛೇದಿಸಿದಂತೆಯೆ, ಈ ಅಭ್ಯಾಸದಿಂದಲೇ ಭ್ರಾತೃಭಾವ ಮೂಡಿ- ಬಂದು ನಾವೆಲ್ಲರೂ ಒಬ್ಬರಿಗೊಬ್ಬರು ಸಮೀಪ ಬರುವೆವು. ಇದರಿಂದ ಪರಸ್ಪರರಲ್ಲಿ ಸರಿಯಾದ ತಿಳಿವಳಿಕೆಯುಂಟಾಗಿ ಶಾಂತಿ – ಸಮಾಧಾನಗಳು ನೆಲೆಗೊಳ್ಳುವುವು. ಈ ರೀತಿ ನಮ್ಮ ವ್ಯವಹಾರವೆಲ್ಲ ಸರಳವಾದರೆ ಅದೆಷ್ಟು ಚೆನ್ನಾಗುವುದು! ಇದು ಸಾಧಿಸಿದ ನಂತರ ನಾವು ಮುಂದುವರಿದ ಇನ್ನೊಂದನ್ನು ಸಾಧಿಸಲು ಅನುಕೂಲವಾಗುವುದು. ಈ ಮರ್ತ್ಯಲೋಕವು ವಾಸ್ತವವಾಗಿ ಪರಲೋಕದ ಪ್ರತಿಬಿಂಬವಾಗಿದೆ. ನಾವು ಈ ಪ್ರತಿಬಿಂಬವನ್ನು ಸರಿಪಡಿಸಿಕೊಂಡರೆ ಪ್ರತಿಬಿಂಬದ ಮೂಲವಾದ ಪರಲೋಕವೂ ಸರಿಪಟ್ಟು ಶುದ್ದವಾಗುವುದು. ಅದರಿಂದ ನಮ್ಮ ಧೈಯ ಸಾಧನೆಯು ಅತ್ಯಂತ ಸುಗಮ ವಾಗುವುದು. ಇಲ್ಲಿಯ ನಮ್ಮ ಯಶಸ್ಸು ಅಲ್ಲಿಯೂ ಯಶಸ್ಸನ್ನು ತಂದು ಕೊಡುವುದು. ಪ್ರತಿಬಿಂಬವನ್ನೆಸೆಯುವ ಜಗತ್ತೆಂದರೆ ಇಲ್ಲಿ ಬ್ರಹ್ಮಾಂಡವೆಂದು ನನ್ನ ಅಭಿಪ್ರಾಯ. ಈ ಜಗತ್ತಿನಲ್ಲಿ ಪ್ರಕಟವಾಗುವ ಪ್ರತಿಯೊಂದು ವಸ್ತುವು ಮೊದಲು ಬ್ರಹ್ಮಾಂಡಮಂಡಲದಲ್ಲಿ ಸೂಕ್ಷ್ಮರೂಪದಿಂದ ಕಾಣಿಸಿಕೊಳ್ಳುವುದು. ಬ್ರಹ್ಮಾಂಡದಲ್ಲಿಯೂ ಅವು ಅದಕ್ಕಿಂತ ಮೇಲಿನ ಲೋಕದಿಂದ ಬರುವುವು. ಹೀಗೆಯೆ ಮೇಲೆ ಮೇಲಕ್ಕೆ ಹೋದಂತೆಲ್ಲ ಸೂಕ್ಷ್ಮತರ ರೂಪದಲ್ಲಿರುವುವು. ಈ ಪ್ರಕಾರ, ಅತ್ಯಂತ ಕೆಳಗಿನ ಸ್ತರವನ್ನು ಶುದ್ಧಪಡಿಸಿದರೆ ಅದರ ಪರಿಣಾಮವು ಮೇಲಿನ ಸ್ತರಗಳಿಗೆ ವ್ಯಾಪಿಸುತ್ತ ನಡೆದು ತೀರ ಮೇಲಿನ ಸ್ತರವೂ ಸಹಜವಾಗಿಯೇ ಶುದ್ಧವಾಗುವುದು.