ಊಟ ಮಾಡುವಾಗ ದೇವರನ್ನು ನೆನೆಯುತ್ತ ದೊರೆತದ್ದನ್ನು ಪ್ರಸನ್ನತೆಯಿಂದ ಸ್ವೀಕರಿಸಿರಿ. ಶುದ್ಧ ಹಾಗು ಪವಿತ್ರ ಗಳಿಕೆಯ ಕಡೆಗೆ ಲಕ್ಷವಿರಲಿ.

ಈ ನಿಯಮದಲ್ಲಿ ಅಡಕವಾದ ತತ್ತ್ವಜ್ಞಾನವು ಭೌತಿಕತೆಯಿಂದ ಆರಂಭವಾಗಿ ನಾವು ಮುಟ್ಟಬೇಕಾದ ಅಂತಿಮ ಸ್ಥಿತಿಯಲ್ಲಿ ಕೊನೆಗಾಣುವುದು. ಪ್ರಸನ್ನತೆಯ ಸ್ಥಿತಿಯು ಕೆಳಗಿನ ಸ್ತರಗಳ ಮೇಲೆಯೂ ತನ್ನ ಪರಿಣಾಮ ಬೀರಿ ಅವನ್ನೆಲ್ಲ ಶುದ್ಧಗೊಳಿಸುವುದು. ಈ ಸ್ಥಿತಿಯು ದೈವೀಸ್ಥಿತಿಗೆ ಸಮೀಪದ್ದೆಂದು ಹೇಳಿದರೆ ತಪ್ಪಾಗದು. ಈ ಬಗ್ಗೆ ವಿಚಾರ ಮಾಡುವುದೆಂದರೆ ಗುರಿಯನ್ನು ಲಕ್ಷ್ಯದಲ್ಲಿರಿಸಿಕೊಂಡಂತೆಯೆ, ಅರ್ಥಾತ್ ನಮ್ಮ ಆರಂಭದ ಬಿಂದು ಯಾವುದೆಂದರೆ ಅದರ ನಂತರ ಇರುವುದೇ ತತ್ಪದ. ಇದು ನಿಸರ್ಗವೇ ನೆಯ್ದಂಥ ಹಾಸು-ಹೊಕ್ಕಾಗಿದೆ. ನಾವು ಇದನ್ನು ನಿಸರ್ಗದ ಭೌತಿಕ ಅಂಶವೆಂದು ಕರೆಯಬಹುದು. ಭೌತಿಕತೆಯೆಂಬುದು ಹೆಸರಿಗೆ ಮಾತ್ರ. ಅದು ನಮ್ಮ ಶುದ್ಧವಾದ ನಿಜಸ್ವರೂಪವನ್ನೇ ಪ್ರಕಟಗೊಳಿಸುತ್ತದೆ. ಭೌತಿಕತೆಯೆಂಬ ಪದವು ಆದರ ಸಂಕೇತವಾಗಿದೆ. ಏಕೆಂದರೆ, ಮಾನವನ ತರ್ಕಕ್ಕೆ ನಿಲುಕುವುದು ಅದೇ. ಪ್ರಾಯಃ ಜನರು ಅದನ್ನು ಮಾಯೆಯ ಆವರಣವೆಂದು ತಪ್ಪಾಗಿ ಭಾವಿಸಬಹುದು. ಆದರೆ ಅದು ಆ ಸ್ಥಿತಿಯನ್ನು ಸರಿಯಾಗಿ ಸೂಚಿಸಲಾರದು. ನಿಜವಾಗಿ ಈ ಸ್ಥಿತಿಯು ಇಡೀ ಮಾಯಾವರಣವನ್ನು ವ್ಯಾಪಿಸಿಕೊಂಡಿದೆ. ನಾವು ಊಟಮಾಡುವಾಗ ಈ ವಿಚಾರವನ್ನು ಲಕ್ಷಕ್ಕೆ ತಂದುಕೊಳ್ಳುವೆವಾದ್ದರಿಂದ ನಮ್ಮ ಮುಂದಿರುವ ಆಹಾರದ ಮೇಲೂ ಅದರ ಪರಿಣಾಮವಾಗುವುದು, ಮುಂದೆ ಅದು ನಮ್ಮ ಶರೀರವನ್ನು ಸೇರಿ ನರಗಳಲ್ಲಿ ವ್ಯಾಪಿಸತೊಡಗುವುದು. ಹೊರಗಿನಿಂದ ತೆಗೆದುಕೊಳ್ಳುವ ಪದಾರ್ಥದ ಉಪಯೋಗವನ್ನು ನಾವು ಅದೆಷ್ಟು ಚೆನ್ನಾಗಿ ಮಾಡಿಕೊಂಡೆವು! ಇದರಿಂದ ನಮ್ಮ ಶರೀರದ ಪರಮಾಣುಗಳು ಪವಿತ್ರವಾಗುವುವು. ಈ ರೀತಿ ನಮ್ಮ ವಿಚಾರದ ಪ್ರಭಾವವು ಆಹಾರದೊಡನೆ ಬೆರೆತು ನಮ್ಮ ಶಾರೀರಿಕ ಹಾಗು ಆಧ್ಯಾತ್ಮಿಕ ಸ್ವಾಸ್ಥ್ಯವರ್ಧನೆಗೆ ಸಹಾಯಮಾಡುವುದು. ಪ್ರಾಣಶಕ್ತಿಯು ಎಲ್ಲ ಕಡೆಗೂ ವ್ಯಾಪಿಸಿರುವುದರಿಂದ ಯಾವ ವಸ್ತುವೂ ಅದರಿಂದ ಹೊರತಾಗಿಲ್ಲ. ಅದು ಆಹಾರದ ಒಳಗೂ ಹೊರಗೂ ಇರುವುದು. ನಾವು ಅದರ ಮೇಲೆ ನಮ್ಮ ವಿಚಾರಶಕ್ತಿಯ ಆಘಾತವನ್ನುಂಟು ಮಾಡಿದಾಗ, ಎರಡು ಕಲ್ಲುಗಳನ್ನು ತಿಕ್ಕಿದಾಗ ಕಿಡಿಗಳು ಹುಟ್ಟುವಂತಹ ಸ್ಥಿತಿಯುಂಟಾಗುವುದಾದರೂ ಅದು ಬೇರೆಯಾಗಿದ್ದು ಶುದ್ಧವಾಗಿರುವುದು, ಸತ್ಯದೊಂದಿಗಿನ ನಮ್ಮ ಸಂಬಂಧದಿಂದ ಯಾವುದು ನಿಷ್ಪನ್ನವಾಗುವುದೋ ಅದೇ ನಮ್ಮನ್ನು ಪರಮಾತ್ಮನವರೆಗೆ ಒಯ್ಯಬಲ್ಲುದು. ಏಕೆಂದರೆ, ಅದಕ್ಕಿಂತ ಕೆಳಗಿನ ಸ್ತರಗಳಲ್ಲಿ ಈ ಸಾಮರ್ಥ್ಯವಿರುವುದಿಲ್ಲ. ಮಾನವ ಕಲ್ಪನೆಯು ಅಲ್ಲಿಯವರೆಗೆ ಮುಟ್ಟುವುದಿಲ್ಲ. ನಾವು ಅನಂತದವರೆಗೆ ಮುನ್ನಡೆಯಲು ಇದು ದಾರಿ ಮಾಡಿಕೊಡುವುದು. ಈಗ ನಾವು ಆಹಾರದ ಮೇಲೆ ಶುದ್ಧತೆಯ ವಿಚಾರದ ಆಘಾತಕೊಟ್ಟಾಗ, ಆ ಕಿಡಿ ನಮ್ಮನ್ನು ಅಂತಿಮ ಸ್ಥಿತಿಯ ಸಮೀಪದ ಸ್ತರಕ್ಕೆ ಒಯ್ಯುವುದು. ಈ ಪ್ರಕಾರ ನಾವು ಮಾರ್ಗದ ಬಹುಭಾಗವನ್ನು ಕ್ರಮಿಸುವೆವು.

ನಮ್ಮ ನಿಯಮದಲ್ಲಿ ಭಗವಂತನನ್ನು ಸ್ಮರಿಸುತ್ತ ಊಟ ಮಾಡಬೇಕೆಂದು ವಿಧಿಸಲಾಗಿದೆ. ಅದರಂತೆಯೆ ನಮ್ಮ ಎಲ್ಲ ಕೆಲಸಗಳೂ ನಮ್ಮ ಧೈಯ- ಪ್ರಾಪ್ತಿಯಲ್ಲಿ ಸಾಧಕವಾಗಬೇಕು. ಊಟ ಮಾಡುವಾಗ ನಾವು ಅಂತಿಮ ಗುರಿಯ ಕಡೆಗೆ ಲಕ್ಷ್ಯವನ್ನು ಕೇಂದ್ರೀಕರಿಸುವ ಉದ್ದೇಶವೇನೆಂದರೆ ಅದರ ಪ್ರಭಾವವೂ ನಮ್ಮ ಮೇಲೆ ಆಗಿ ನಮ್ಮಲ್ಲಿ ಹೆಚ್ಚು ಹೆಚ್ಚು ಶುದ್ಧತೆ ಬೆಳೆದು ಗುರಿಯನ್ನು ತೀವ್ರ ಮುಟ್ಟಬೇಕು ಎಂಬುದು. ಪವಿತ್ರತೆಯಿಂದ ನಮ್ಮ ಸೃಷ್ಟಿಯಾಯಿತು. ನಮ್ಮ ಸೃಷ್ಟಿಗೆ ಕಾರಣವಾದ ಶುದ್ಧ ಧಾರೆಗಳಾದರೂ ಪವಿತ್ರತಮ ಮೂಲದಿಂದ ಹುಟ್ಟಿರುವುವು. ಆದುದರಿಂದಲೇ ನಮ್ಮಲ್ಲಿ ಪಾವಿತ್ರ್ಯವನ್ನು ಕುರಿತ ವಿಚಾರಗಳು ಸುಳಿಯುತ್ತಿರುವುವು. ಆ ಧಾರೆಗಳು ಎಲ್ಲೆಡೆಯಲ್ಲಿಯೂ ಇದ್ದು ಶುದ್ಧ ಸ್ಥಿತಿಯಲ್ಲಿಯೇ ಇರುವುವು. ಅಶುದ್ಧತೆಯು ಅವುಗಳನ್ನೆಂದಿಗೂ ಸೋಂಕಿಲ್ಲ. ಇಷ್ಟೇ ಅಲ್ಲ, ಕಾಲದ ಪ್ರಭಾವದಿಂದಲೂ ಅವು ಮಾಸಿಹೋಗಿಲ್ಲ. ಈ ಧಾರೆಗಳು ಅತ್ಯಂತ ಸತ್ತ್ವಶಾಲಿಯಾದ ಉಗಮದಿಂದ ಪ್ರವಹಿಸಿದುವಾದ ಕಾರಣ ಅವುಗಳಲ್ಲಿ ಪವಿತ್ರತೆ ಸಂಪೂರ್ಣ ಓತಪ್ರೋತವಾಗಿದೆ. ಸೃಷ್ಟಿಗೆ ಕಾರಣವಾದ ಪ್ರಾಥಮಿಕ ಕ್ಷೋಭದ ಪರಿಣಾಮವಾಗಿದ್ದ ಈ ಧಾರೆಗಳು ತೀರ ಪವಿತ್ರವಾಗಿವೆ. ಅಂತೆಯೇ ಇವುಗಳಿಂದ ಹುಟ್ಟಿದ ಪ್ರತಿಯೊಂದು ವಸ್ತುವೂ ತನ್ನ ಮೂಲರೂಪದಲ್ಲಿ ಪವಿತ್ರವೇ ಆಗಿದೆ. ಆದರೆ ಕಾಲದ ಪರಿಣಾಮಗಳಿಂದ ಅವುಗಳ ಶುದ್ಧತೆಯು ಕಲುಷಿತವಾಯಿತು. ನಾಲ್ಕನೆಯ ನಿಯಮದಲ್ಲಿ ವಿವರಿಸಲಾದಂತೆ ಇದೆಲ್ಲ ನಮ್ಮ ಕರ್ಮಗಳ ಪರಿಣಾಮವೇ ಆಗಿದ್ದಿತು.

ನಿಸರ್ಗದಿಂದ ಬಂದ ಪ್ರತಿಯೊಂದು ವಸ್ತುವೂ ಪವಿತ್ರವಾಗಿರುವುದು. ಏಕೆಂದರೆ ಅವುಗಳ ಮೂಲವೇ ಶುದ್ಧತೆಯಿಂದ ತುಂಬಿತುಳುಕುತ್ತದೆ. ಮನುಷ್ಯನು ಶುದ್ಧ ಹಾಗು ಸಾತ್ವಿಕ ಸಾಧನಗಳಿಂದ ಮಾಡಿದ ಸಂಪಾದನೆ- ಯಾದರೂ ಅದೇ ರೀತಿ ಪವಿತ್ರವಾಗಿರುವುದು. ಅವುಗಳ ಪರಿಣಾಮವು ನಿಕಟವರ್ತಿ ಸ್ತರಗಳ ಮೇಲೆ ಆಗಿ ಮಾನವ ನಿರ್ಮಿತ ಜಾಲವನ್ನು ಶುದ್ಧಗೊಳಿಸುವುದರಲ್ಲಿ ಸಹಾಯಕವಾಗುವುದು. ಈ ಕಾರಣದಿಂದಲೇ ಮಹಾತ್ಮರು ಪವಿತ್ರ ಗಳಿಕೆಗೆ ಮಹತ್ವಕೊಟ್ಟಿದ್ದಾರೆ.